ಪ್ರಾಕ್ಟಿಕಲ್ ಆಗಿ ಯೋಚಿಸಬೇಕಾದ ಕಾಲ…

gali.gif“ಗಾಳಿ ಬೆಳಕು”

ನಟರಾಜ್ ಹುಳಿಯಾರ್

ಪ್ರತಿ ಚುನಾವಣೆಯ ಸಂದರ್ಭದಲ್ಲೂ ಇಂಥದೊಂದು ಪ್ರಯತ್ನ ನಡೆಯುತ್ತಿರುತ್ತದೆ: ಹಾಲಿ ಇರುವ ಪಕ್ಷಗಳು ಕೊಳೆತು ಹೋಗಿವೆ; ಆದ್ದರಿಂದ ವಿವಿಧ ಬಗೆಯ ಸಾಮಾಜಿಕ ಚಳುವಳಿಗಳನ್ನು ಮುನ್ನಡೆಸುತ್ತಿದ್ದವರೆಲ್ಲ ಒಂದಾಗಿ ಈ ಪಕ್ಷಗಳಿಗೆ ಪರ್ಯಾಯ ಹುಡುಕಬೇಕು ಎಂಬ ಚಿಂತನೆ ಶುರುವಾಗುತ್ತದೆ.

ಮೊನ್ನೆ ದಲಿತ ಸಂಘರ್ಷ ಸಮಿತಿಗಳ ಇಬ್ಬರು ನಾಯಕರಾದ ಮಾವಳ್ಳಿ ಶಂಕರ್ ಹಾಗೂ ಲಕ್ಷ್ಮೀನಾರಾಯಣ ನಾಗವಾರ; ಕರ್ನಾಟಕ ರಾಜ್ಯ ರೈತ ಸಂಘದ ಒಂದು ಬಣದ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ಸಮತಾ ಸೈನಿಕದಳದ ವೆಂಕಟಸ್ವಾಮಿ ಮೊದಲಾದವರು ಇಂಥದೊಂದು ಪ್ರಯತ್ನ ಮಾಡುವ ಹೇಳಿಕೆ ನೀಡಿದ್ದಾರೆ. ಪ್ರತಿಸಲ ಈ ಥರದ ಪ್ರಯತ್ನ ನಡೆಯುತ್ತದೆ, ಇದರಿಂದ ಏನೂ ಆಗುವುದಿಲ್ಲ ಎಂದು ನಾವು ಸಿನಿಕತನ ತೋರುವ ಅಗತ್ಯವಿಲ್ಲ. ಬದಲಿಗೆ, ಈ ಥರದ ಪ್ರಯತ್ನಗಳು ಚುನಾವಣೆ ಬಂದಾಗ ಮಾತ್ರ ಮೇಲೆದ್ದು, ಆ ನಂತರ ಮಲಗುವುದೇಕೆ ಎಂಬ ಬಗ್ಗೆ ಗಂಭೀರವಾಗಿ ಯೋಚಿಸಬೇಕು.

ಆಧುನಿಕ ಇಂಡಿಯಾದ ಇತಿಹಾಸದಲ್ಲಿ ಅನೇಕ ಹೊಸ ಸರ್ಕಾರಗಳು ರಚನೆಯಾಗಿರುವುದರ ಹಿನ್ನೆಲೆಯಲ್ಲಿ ಬಗೆಬಗೆಯ ಚಳುವಳಿಗಳು ಕೆಲಸ ಮಾಡಿವೆ. ಸ್ವಾತಂತ್ರ್ಯ ಚಳುವಳಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತಂದುಕೊಟ್ಟಿದೆ. ಹಾಗೆಯೇ ೬೦-೭೦ರ ದಶಕದಲ್ಲಿ ದಿನದಿನದ ಅಗತ್ಯಗಳ ಬಗ್ಗೆ ಸಮಾಜವಾದಿ ಪಕ್ಷ ಚಳುವಳಿ ರೂಪಿಸುತ್ತಲೇ ಅಧಿಕಾರ ಹಿಡಿದಿದೆ. ದಲಿತ ಚಳುವಳಿ ರೂಪಿಸಿದ್ದ ದಲಿತ ಪ್ರಜ್ಞೆಯನ್ನು ಬೆಳೆಸುತ್ತಾ ಅದನ್ನು ಬಹುಜನ ಪ್ರಜ್ಞೆಯಾಗಿ ವಿಸ್ತರಿಸಿದ ಬಿಎಸ್ ಪಿಯೂ ಅಧಿಕಾರ ಹಿಡಿದಿದೆ. ಬಿಜೆಪಿ ಕೋಮುವಾದದ ವಿಭಜಕ ಶಕ್ತಿಯನ್ನೇ ವಿಕೃತ ಚಳುವಳಿಯನ್ನಾಗಿ ಮಾಡಿ ಅಲ್ಲಲ್ಲಿ ಅಧಿಕಾರ ಹಿಡಿದಿದೆ. ಕರ್ನಾಟಕದಲ್ಲಿ ಅಹಿಂದ ಚಳುವಳಿ ಎಲ್ಲೆಡೆ ಹರಡಿ, ಅಧಿಕಾರ ಹಿಡಿಯುವ ಸಣ್ಣ ಪ್ರಯತ್ನಗಳನ್ನು ಮಾಡಿ ನಂತರ ಥಣ್ಣಗಾಯಿತು…

ಈ ಎಲ್ಲದರ ಸೋಲು, ಗೆಲುವುಗಳ ವಿಶ್ಲೇಷಣೆ ಸಾಕಷ್ಟು ನಡೆದಿದೆ. ಆದರೆ ಕರ್ನಾಟಕದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಕಾಲದಿಂದ ಚಳುವಳಿಗಳನ್ನು ಒಗ್ಗೂಡಿಸಿ ರಾಜಕೀಯ ಅಧಿಕಾರ ಹಿಡಿಯುವ ಕೆಲಸ ವಿವಿಧ ಕಾರಣಗಳಿಂದ ಯಶಸ್ವಿಯಾಗಿಲ್ಲ. ಈ ಹಿನ್ನಡೆಗೆ ಈ ಥರದ ಪ್ರಯತ್ನಗಳು ಚುನಾವಣೆಯ ಹೊಸ್ತಿಲಲ್ಲೇ ಹೆಚ್ಚು ನಡೆಯುವುದೂ ಒಂದು ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ.

ಈ ಚಳುವಳಿಗಳ ನಾಯಕರ ಕಷ್ಟಗಳು ಕೂಡ ಎಲ್ಲರಿಗೂ ಗೊತ್ತಿದೆ. ಈ ನಾಯಕರು ರಾಜಕಿಯಾಧಿಕಾರದ ಬಗ್ಗೆ ಸ್ಪಷ್ಟವಾಗಿರದಿದ್ದರೆ ಈ ಚಳುವಳಿಗಳಲ್ಲಿ ಭಾಗವಹಿಸಿದ ತರುಣರು ಚುನಾವಣೆಯ ಸಂದರ್ಭದಲ್ಲಿ ವಿವಿಧ ಪಕ್ಷಗಳಿಗೆ ಹಾರತೊಡಗುತ್ತಾರೆ. ಹಾಗೆ ಹೋದವರು ಮರಳಿ ಈ ಸಾಮಾಜಿಕ ಸಂಘಟನೆಗಳಿಗೆ ಬರುವುದು ಕಷ್ಟ. ಹೀಗಾಗಿ ಈ ಚಳುವಳಿಗಳು ತಾವು ತಯಾರು ಮಾಡಿದ ಚುರುಕಾದ, ಸೂಕ್ಷ್ಮವಾದ ನಾಯಕರನ್ನು ಹಾಗೂ ಅನುಯಾಯಿ ತರುಣರನ್ನು ಚುನಾವಣೆಗಳ ಸಂದರ್ಭದಲ್ಲಿ ಕಳೆದುಕೊಳ್ಳುತ್ತಿರುತ್ತದೆ.

ಇದನ್ನು ತಪ್ಪಿಸಲು ಈ ಸಂಘಟನೆಗಳ ನಾಯಕರು ಅಥವಾ ವಿವಿಧ ಸಂಘಟನೆಗಳ ಒಕ್ಕೂಟಗಳು ಪ್ರತಿಸಲ ಚುನಾವಣೆಯ ಸಂದರ್ಭದಲ್ಲಿ ಯಾವುದಾದರೂ ಒಂದು ಪಕ್ಷವನ್ನು ಬೆಂಬಲಿಸಲು ಪ್ರಯತ್ನಿಸುತ್ತವೆ. ಅದಕ್ಕಾಗಿ ಚುನಾವಣೆಯ ಸಂದರ್ಭದಲ್ಲಿ ಇದ್ದುದರಲ್ಲೇ ಒಬ್ಬ ಸಮಾನಮಿತ್ರ ಅಥವಾ ಒಬ್ಬ ಸಮಾನ ಶತ್ರುವನ್ನು ಗುರುತಿಸಿಕೊಳ್ಳಲು ಯತ್ನಿಸುತ್ತವೆ.

ಹೀಗೆ ಚುನಾವಣೆಯಲ್ಲಿ ಸಮಾನ ಶತ್ರುವಿನ ವಿರುದ್ಧ ಎಲ್ಲ ಸಾಮಾಜಿಕ ಚಳುವಳಿಗಳೂ ಒಗ್ಗೂಡುವುದು ಒಂದು ಮುಖ್ಯ ಪ್ರಾಕ್ಟಿಕಲ್ ಮಾರ್ಗ: ಅದರ ಜೊತೆಗೇ ಈ ಚಳುವಳಿಗಳು ತಾವು ಪ್ರತಿನಿಧಿಸುತ್ತಿರುವ ಕಾರ್ಯಕ್ರಮಗಳನ್ನೆಲ್ಲ ಒಗ್ಗೂಡಿಸಿ, ಅದರ ಆಧಾರದ ಮೇಲೆ ಹಾಗೂ ಅವನ್ನು ಜಾರಿಗೊಳಿಸುವಂತೆ ಒತ್ತಡ ತರಲು ಯಾವುದಾದರೂ ಒಂದು ನಿರ್ದಿಷ್ಟ ಪಕ್ಷವನ್ನು ಬೆಂಬಲಿಸುವುದು ಸಾಧ್ಯವೇ ಎಂಬ ಬಗ್ಗೆ ಕೂಡ ಯೋಚಿಸಬಹುದೇನೋ. ಅಂಥ ಸಾಮಾನ್ಯ ಕಾರ್ಯಕ್ರಮಗಳನ್ನು ವಿವಿಧ ಸಂಘಟನೆಗಳ ನಾಯಕರು ಕೂತು ಚರ್ಚಿಸಿ ಪಟ್ಟಿ ಮಾಡಬೇಕಾಗುತ್ತದೆ ಹಾಗೂ ಅವನ್ನು ಜಾರಿಗೆ ತರಲು ನಿರಂತರ ಒತ್ತಡದ ಗುಂಪುಗಳಾಗಿ ಈ ಸಂಘಟನೆಗಳು ಕೆಲಸ ಮಾಡುತ್ತಿರಬೇಕಾಗುತ್ತದೆ.

ಹಾಗೆಯೇ ಈ ಸಂಘಟನೆಗಳೆಲ್ಲಾ ಒಟ್ಟಿಗೆ ಕೂತು ಚರ್ಚಿಸಿ, ಇಡೀ ಕರ್ನಾಟಕದಾದ್ಯಂತ ಕೆಲವು ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಚುನಾವಣೆಯಲ್ಲಿ ಬೆಂಬಲಿಸಲು ಸಾಧ್ಯವೆ ಎಂಬ ಬಗ್ಗೆ ಕೂಡ ಯೋಚಿಸಬಹುದು. ಉದಾಹರಣೆಗೆ, ಸ್ತ್ರೀಶಕ್ತಿ ಯೋಜನೆಯನ್ನು ರೂಪಿಸಿದ ಮೋಟಮ್ಮನವರಂಥ ನಾಯಕಿ ಯಾವುದೇ ಪಕ್ಷದಲ್ಲಿದ್ದರೂ ಅವರು ಗೆದ್ದು ವಿಧಾನಸಭೆಯಲ್ಲಿರಬೇಕಲ್ಲವೆ? ಹಾಗೆಯೇ ರೈತಸಂಘದ ಪುಟ್ಟಣ್ಣಯ್ಯ, ಕಮ್ಯೂನಿಸ್ಟ್ ನಾಯಕ ಜಿ.ವಿ.ಶ್ರೀರಾಮರೆಡ್ಡಿ; ಅಥವಾ ದಕ್ಷಿಣ ಕನ್ನಡದ ಪಕ್ಷೇತರ ಸದಸ್ಯ ಜಯಪ್ರಕಾಶ್ ಹೆಗಡೆ; ಬಿ.ಎಸ್.ಪಿ.ಯಿಂದ ಸ್ಪರ್ಧಿಸಿದ್ದ ಶ್ರೀಧರ ಕಲಿವೀರ, ಮಹೇಶ್ ಥರದ ನಾಯಕರು, ಗಂಡಸಿಯ ಶಿವರಾಂ, ಕೆ.ಆರ್ ಪೇಟೆಯ ಕೃಷ್ಣ, ಶ್ರೀರಂಗಪಟ್ಟಣದ ರೈತನಾಯಕ ನಂಜುಂಡೇಗೌಡ, ದಾವಣಗೆರೆಯ ಆಂಜನೇಯ…

-ಹೀಗೆ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ, ಈಗ ಸ್ಪರ್ಧಿಸಲಿರುವ ಕೆಲವು ಮುಖ್ಯ ಹೆಸರುಗಳು ಇಲ್ಲಿ ನೆನಪಾಗುತ್ತಿವೆ. ಲಂಕೇಶರು ಪ್ರತಿ ಚುನಾವಣೆಯ ಸಂದರ್ಭದಲ್ಲಿ ಗೆಲ್ಲಬೇಕಾದ ಒಳ್ಳೆಯ ಅಭ್ಯರ್ಥಿಗಳ ಆಯ್ದ ಪಟ್ಟಿಯೊಂದನ್ನು ಮಾಡುತ್ತಿದ್ದರು. ಅದಕ್ಕಿಂತ ಈ ಮಾದರಿ ಕೊಂಚ ಭಿನ್ನ ಹಾಗೂ ಹೆಚ್ಚು ವ್ಯಾಪಕವಾಗಿರಬಲ್ಲದು. ಯಾಕೆಂದರೆ, ಚುನಾವಣೆಯ ಸಂದರ್ಭದಲ್ಲಿ ಒಗ್ಗೂಡಬಯಸುವ ದಲಿತ, ರೈತ ಚಳುವಳಿಗಳು ಹಾಗೂ ಈ ಥರದ ಕೆಲವು ಸಂಘಟನೆಗಳು ತಮ್ಮ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಲಾಗದಿದ್ದರೆ, ಪಕ್ಷಗಳ ಎಲ್ಲೆ ಮೀರಿ ಕೆಲವಾದರೂ ಅಭ್ಯರ್ಥಿಗಳನ್ನು ಬಹಿರಂಗವಾಗಿ ಬೆಂಬಲಿಸುವ ಬಗ್ಗೆ ಹಾಗೂ ಅಂಥವರನ್ನು ತಮ್ಮ ಕಾರ್ಯಕ್ರಮಗಳ ಬೆಂಬಲಕ್ಕಾಗಿ ನಿರಂತರ ಮಿತ್ರರನ್ನಾಗಿ ಉಳಿಸಿಕೊಳ್ಳುವ ಬಗ್ಗೆ ಯೋಚಿಸಬೇಕು ಎಂದು ಈ ಮಾದರಿ ಒತ್ತಾಯಿಸುತ್ತದೆ.

ಪ್ರಗತಿಪರ ಚಳುವಳಿಗಳ ಬೆಂಬಲಿಗರ ಮತಗಳು ಛಿದ್ರವಾಗಿ, ಮತೀಯ ಶಕ್ತಿಗಳು ಅಧಿಕಾರ ಹಿಡಿಯುವುದನ್ನು ತಡೆಯಲು ನಾವು ನಿಖರವಾಗಿ ಹಾಗೂ ಪ್ರಾಕ್ಟಿಕಲ್ ಆಗಿ ಯೋಚಿಸಬೇಕಾದ ಕಾಲ ಇದು. ಆ ನಿಟ್ಟಿನಲ್ಲಿ, ಸಮಾನ ಶತ್ರುವನ್ನು ಗುರುತಿಸುವುದು ಹಾಗೂ ಪ್ರಗತಿಪರ ಶಕ್ತಿಗಳ ಪರವಾಗಿ ನಿಲ್ಲಬಲ್ಲ ವ್ಯಕ್ತಿಗಳನ್ನು ಗುರುತಿಸಿ, ಬೆಂಬಲಿಸುವುದು- ಈ ಎರಡೂ ಕೂಡ ಅತಿಮುಖ್ಯ ಕೆಲಸಗಳು ಎಂಬ ಬಗ್ಗೆ ಸಂಬಂಧಪಟ್ಟ ಎಲ್ಲರ ಗಮನ ಸೆಳೆಯಲು ಈ ಟಿಪ್ಪಣಿಯನ್ನು ತಮಗೆ ಒಪ್ಪಿಸಿರುವೆ.

‍ಲೇಖಕರು avadhi

December 23, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This