ಪ್ರಾಯದ ಪೆಂಪೆ ಪೆಂಪು…

gali5.gif 

ಗಾಳಿ ಬೆಳಕು

ನಟರಾಜ್ ಹುಳಿಯಾರ್

“ಏನ್ರೀ, ಯೂತ್ ಅನ್ನೋದು ಎಷ್ಟು ಲವ್ಲಿಯಾಗಿತ್ತು. ಯಾವಾಗೆಂದರೆ ಆವಾಗ, ಎಲ್ಲೆಂದರೆ ಅಲ್ಲಿ ಠಣ್ಣನೆ ಏಳುತ್ತಿತ್ತು” ಎಂದು ಅದೇ ಆಗ ನಲವತ್ತಮೂರು ತಲುಪುತ್ತಿದ್ದ ಡಿ.ಆರ್.ನಾಗರಾಜ್ ಸುಮ್ಮನೆ ಅಂದಿದ್ದರು. ಈ ಸಲದ ಕನ್ನಡ ಟೈಮ್ಸ್ ನ ಹುಟ್ಟುಹಬ್ಬಕ್ಕೆಂದು ಕನ್ನಡದ ಹೊಸ ತಲೆಮಾರಿನ ಬಗ್ಗೆ ಬರಹಗಾರರು, ಚಿಂತಕರು, ರಾಜಕಾರಣಿಗಳ ಬಗ್ಗೆ ಸಂಚಿಕೆ ರೂಪಿಸುತ್ತಿರುವಾಗ ಯಾಕೋ ಆ ಮಾತು ನೆನಪಾಯಿತು. ಅದು ಹೇಗೋ ಪಂಪನ ವಿಕ್ರಮಾರ್ಜುನ ವಿಜಯದ “ಪ್ರಾಯದ ಪೆಂಪೆ ಪೆಂಪು” ಎಂಬ ಎಂದೋ ಓದಿದ ಸಾಲು ತಲೆಯಲ್ಲಿ ಸುಳಿಯತೊಡಗಿತು. ಕಿ.ರಂ.ನಾಗರಾಜರಿಂದ ಆ ಪದ್ಯದ ಪೂರ್ತಿಭಾಗ ಓದಿಸಿಕೊಂಡ ನಂತರ, ನಾನು ಆ ಸಾಲಿನಿಂದ ಪಡೆಯಬಯಸಿದ ಅರ್ಥ ಉಕ್ಕಲಿಲ್ಲ. ಆದರೂ ಪ್ರಾಯದ ಖದರ್ರೇ ಖದರ್ ಎಂಬರ್ಥದಲ್ಲಿ “ಪ್ರಾಯದ ಪೆಂಪೆ ಪೆಂಪು” ಎಂದು ಪಂಪನ ಸಾಲನ್ನು ನನಗೆ ಬೇಕಾದಂತೆ ಓದಿಕೊಳ್ಳಬೇಕೆಂಬ ತವಕ ಹೆಚ್ಚತೊಡಗಿತು.

ಈ ಪೆಂಪು ನಮ್ಮೆಲ್ಲರೊಳಗೂ ಇದೆ ಎಂದು ನಂಬಿಕೊಂಡೇ ಇದೀಗ ಚೆನ್ನಾಗಿ ಬರೆಯುವ, ಯೋಚಿಸುವ, ಸಂಘಟನೆ ಕಟ್ಟುವ ಉತ್ಸಾಹದಲ್ಲಿರುವ ಮುಖಗಳತ್ತ ನೋಡತೊಡಗಿದೆ. ವಿಕ್ರಮ ವಿಸಾಜಿ, ಎನ್.ಕೆ.ಹನುಮಂತಯ್ಯ, ಬಿ.ಎಂ.ಬಶೀರ್, ಅರುಣ್ ಜೋಳದ ಕೂಡ್ಲಿಗಿ, ಗಣಿಗಾರಿಕೆಯ ಬಗ್ಗೆ ಪುಸ್ತಕ ಬರೆದ ವಿದ್ಯಾರ್ಥಿನಿ ಸಂಗೀತ, ವಾರ್ತಾಭಾರತಿಯ ಬಿ.ಎಂ.ಬಶೀರ್, ಕವಿ ರವಿ ದ್ರಾವಿಡ, ತುಮಕೂರಿನ ಬೀಡಿ ಕಾರ್ಮಿಕರ ನಾಯಕ ಮುಜೀಬ್, ಮತಿಘಟ್ಟದ ಡಾಕ್ಟರ್ ರಘುಪತಿ… ಈ ಥರದ ಕೊಂಚ ಪರಿಚಿತ ಮುಖಗಳು ತೇಲಿಬರತೊಡಗಿದವು. ಮಳವಳ್ಳಿಯ ಬಿಎಸ್ ಪಿಯ ತರುಣ ನಾಯಕ ಡಾ.ಶಿವಕುಮಾರ್ ಅವರ ಬಗ್ಗೆ ಮೈಸೂರಿನ ಮಿತ್ರರು ಅಪಾರ ನಿರೀಕ್ಷೆಯ ಮಾತುಗಳನ್ನಾಡಿದ್ದರು… ಈ ಬಗೆಯ ಹೊಸ ತಲೆಮಾರಿನ ಶಕ್ತಿಯ ಬಗ್ಗೆ ಮಾತಾಡುತ್ತಿರುವಂತೆ ಹಲವು ದಿಕ್ಕಿನಿಂದ ಹೆಸರುಗಳು ಬರತೊಡಗಿದವು. ಎಸ್ ಎಫ್ ಐನ ಲಕ್ಷ್ಮಿ, ಕಲಾವಿದ ಅಪಾರ ರಘು, ಜನತಾದಳದ ಅರವಿಂದ ದಳವಾಯಿ, ಕಾಂಗ್ರೆಸ್ ನ ಕೃಷ್ಣ ಭೈರೇಗೌಡ, ಬಿಜೆಪಿಯ ಕಳ್ಳಂಬೆಳ್ಳದ ಶಾಸಕ ಕಿರಣ್ ಕುಮಾರ್, ಶಿವರಾಮ್ ಅಸುಂಡಿ, ಮಂಡ್ಯದ ದ್ಯಾಮಪ್ಪ…

…ಹೀಗೆ ಹೊಸ ಕಾಲದ ಪಡೆಯ ಬಗ್ಗೆ ಆಶಾವಾದದ ಮಾತುಗಳು ಕೇಳಿಬರತೊಡಗಿದವು. ಐ.ಟಿ. ಜಗತ್ತಿನಲ್ಲಿರುವ ಸುಹಾಸ್ ರಂಥ ತರುಣ ಪಡೆಯನ್ನೂ ಮರೆಯುವಂತಿರಲಿಲ್ಲ. ಸೂರ್ಯ ಮುಕುಂದರಾಜ್ ಥರದ ಪುಟ್ಟ ಯುವಕರಲ್ಲಿ ರೂಪುಗೊಳ್ಳುತ್ತಿರುವ ರಾಜಕೀಯ ಪ್ರಜ್ಞೆ ಹಾಗೆಯೇ ಮತೀಯವಾದದ ವಿರುದ್ಧ ಪ್ರಖರವಾಗಿ ಚಿಂತಿಸುವ ಹುಲಿಕುಂಟೆ ಮೂರ್ತಿ, ರಂಗನಾಥ್, ಮೀಡಿಯಾಗಳಲ್ಲಿರುವ ಸೂಕ್ಷಜ್ಞ ಕವಿಗಳಾದ ಉಗಮ ಶ್ರೀನಿವಾಸ್, ಶಶಿ ಸಂಪಳ್ಳಿ, ಕರಿಸ್ವಾಮಿ, ಪಿ.ಮಂಜುನಾಥ್ ಇವರೆಲ್ಲರೂ ತಾವಿರುವಲ್ಲೇ ಆರೋಗ್ಯಕರವಾದುದನ್ನು ಯೋಚಿಸುತ್ತಾ ಬೆಳೆಸುತ್ತಾ ಇರುವುದು ನೆನಪಾಗತೊಡಗಿತು.

ಅದೆಲ್ಲವನ್ನು ನೋಡುತ್ತ “ಹಿಂದೆ ಹುಡುಗರು ಹಾಗಿದ್ದರು, ಈಗ ಹಾಗಿಲ್ಲ” ಎಂದು ಸುಮ್ಮನೆ ಗೊಣಗುವವರು ನೆನಪಾದರು. ಈ ಹಿರಿಯರು ಈ ಹೊಸ ಕಾಲದ ಹುಡುಗ, ಹುಡುಗಿಯರನ್ನು ಕೇಳಿಸಿಕೊಂಡಿದ್ದಾರೆಯೆ ಎಂದು ಅನುಮಾನವಾಯಿತು. ಯಾಕೆಂದರೆ ಈ ಹೊಸ ತಲೆಮಾರಿನಲ್ಲಿ ಲಂಕೇಶ್, ತೇಜಸ್ವಿ, ಅನಂತಮೂರ್ತಿ, ದೇವನೂರ್, ಕಿ.ರಂ., ಸಿ.ಜಿ.ಕೆ, ರಾಮದಾಸ್… ಈ ಎಲ್ಲರ ಸ್ಪಿರಿಟ್ ಒಂದಲ್ಲ ಒಂದು ರೀತಿಯಲ್ಲಿ ಮುಂದುವರಿದಿದೆ. ಇವರಲ್ಲಿ ಹಲವರು ತಮಗೆ ತಾವೇ ಖಚಿತ ವ್ಯಕ್ತಿಗಳಾಗಿ ಸ್ವತಂತ್ರ ಆಲೋಚನೆಯ ಚಿಂತಕರಾಗಿ ವಿಕಾಸಗೊಳ್ಳುವ ಹಾದಿಯಲ್ಲೂ ಇದ್ದಾರೆ ಎಂಬ ಬಗ್ಗೆ ನನಗೆ ಅನುಮಾನವಿರಲಿಲ್ಲ.

ಅದೆಲ್ಲ ಸರಿ, ಯಾಕೋ ಏನೋ ಒಂದು ಥರದಲ್ಲಿ ತಂತಾವೇ ಓದುತ್ತಾ, ಬರೆಯುತ್ತಾ, ಚಿಂತಿಸುತ್ತಾ, ಪಾಠ ಹೇಳುತ್ತಾ ಇರುವ ಇಲ್ಲಿನ ಹಲವರಿಗೆ ಸಂಘಟನೆಯ ಅರ್ಥಪೂರ್ಣತೆಯಲ್ಲಿ ಅಷ್ಟು ನಂಬಿಕೆ ಇದ್ದಂತೆ ಕಾಣುತ್ತಿಲ್ಲ. ತಾವು ಕಣ್ಣು ಬಿಟ್ಟ ಕಾಲದಲ್ಲಾಗಲೇ ಪತನಗೊಂಡಂತೆ ಕಂಡ ಸಂಘಟನೆಗಳು ಈ ತಲೆಮಾರಿನಲ್ಲಿ ಸಿನಿಕತನ ಹುಟ್ಟಿಸಿರಬಹುದು. ಆದರೆ, ತಾವಾಗಿ ತಾವು ಏನೂ ಮಾಡದೆ, ಇತರರ ಪ್ರಯತ್ನಗಳು ಸೋತದ್ದರ ಬಗ್ಗೆ ಹಳಿಯುತ್ತಾ ಸಿನಿಕರಾಗಿರುವವರೆಲ್ಲ ತಮ್ಮ ಸಿನಿಕತನವನ್ನು ಆನಂದಿಸುತ್ತಾ ಅಡ್ಡಾಡುತ್ತಿರುತ್ತಾರೆಂದು ಕಾಣುತ್ತದೆ. ಒಂದು ಪತ್ರಿಕೆಯಲ್ಲೋ, ಕಾಲೇಜಿನಲ್ಲೋ, ಒಂದು ರಾಜಕೀಯ ಪಕ್ಷದಲ್ಲೋ ತೊಡಗಿರುವ, ಸಮಾನ ಆಲೋಚನೆಯ ಹೊಸ ಕಾಲದ ಮನಸ್ಸುಗಳು ಒಂದು ನೆಟ್ ವರ್ಕ್ ರೂಪಿಸಿಕೊಳ್ಳುವ ಅಗತ್ಯವಿದೆಯಲ್ಲವೆ ಎನಿಸತೊಡಗಿತು. ಅದರಲ್ಲೂ ಲಂಕೇಶರ ಒಂದು ಹೊಸ ನೀಲು ಪದ್ಯ ಸಿಕ್ಕರೆ ಅದನ್ನು ಹತ್ತಾರು ಮಿತ್ರರಿಗೆ ರವಾನಿಸಿ ಖುಷಿಪಡುವ ಹೊಸ ಕವಿಗಳ ಲೋಕ ಈ ಉತ್ಸಾಹವನ್ನು ವಿವಿಧ ಸಾಮಾಜಿಕ ಜವಾಬ್ದಾರಿಗಳ ವಲಯಕ್ಕೂ ಹಬ್ಬಿಸುವ ಅಗತ್ಯವಿದೆ. ಇದು ಕೇವಲ ಹೊರಗಿನಿಂದ ಹೇರಿಕೊಳ್ಳುವ ಸಂಗತಿಯಲ್ಲ; ಬದಲಿಗೆ ಪ್ರತಿಯೊಬ್ಬ ಬರೆಯುವ, ಚಿಂತಿಸುವ ವ್ಯಕ್ತಿಗೂ ಅತ್ಯಗತ್ಯವಾದ ಟಾನಿಕ್ ಕೂಡ ಎಂಬುದನ್ನು ಸ್ವಂತ ಅನುಭವದಿಂದ ಕಂಡುಕೊಂಡಿರುವೆ. ಖ್ಯಾತ ಸಮಾಜವಾದಿ ಚಿಂತಕರೂ, ನಾಯಕರೂ ಆದ ಡಾ.ರಾಮಮನೋಹರ ಲೋಹಿಯಾ ಅವರಿಗೆ ತಮ್ಮ ನಲವತ್ತೈದನೆಯ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಸಂಘಟನೆಯ ಮಹತ್ವ ಅರಿವಾಯಿತಂತೆ. ಆ ಬಗ್ಗೆ ಲೋಹಿಯಾ ಬರೆಯುತ್ತಾರೆ:

“ನಾನಿಲ್ಲಿ ಒಂದು ದುರಂತವನ್ನು ನಿವೇದಿಸಿಕೊಳ್ಳಬಹುದೆಂದು ತೋರುತ್ತದೆ. ನನ್ನ ನಲವತ್ತೈದನೆಯ ವರ್ಷದವರೆಗೆ ನಾನು ಸ್ವಾತಂತ್ರ್ಯದಲ್ಲಿ ನಂಬಿಕೆಯಿಟ್ಟಿದ್ದೆನೇ ಹೊರತು ಸಂಘಟನೆಯಲ್ಲಿ ಅಲ್ಲ. ಮಾನವನು ಅವನು ಇರುವುದಕ್ಕಿಂತಲೂ ಹೆಚ್ಚು ಎಂದು ಭಾವಿಸಿದ್ದೆ. ಆಂತರಿಕ ಒತ್ತಡದಿಂದ ಮಾನವನು ಧೈರ್ಯ, ವಿವೇಕ ಹಾಗೂ ಪ್ರಾಮಾಣಿಕತೆಯನ್ನು ಸಂಧಿಸಬಲ್ಲನೆಂದು ನಂಬಿದ್ದೆ. ಆದರೆ ಈಗ ಮತ್ತು ಹತ್ತು ವರ್ಷಗಳಿಂದೀಚೆಗೆ, ಸಂಘಟನೆಯಿಲ್ಲದಿದ್ದರೆ ಹೆಚ್ಚು ಕಡಿಮೆ ಪ್ರತಿಯೊಬ್ಬರೂ ಒಣಗಿದ ಜೊಂಡಿನಂತಾಗುತ್ತಾರೆ ಎಂದು ನನಗೆ ಗೊತ್ತಾಗಿದೆ. ಸಂಘಟನೆಯೊಂದೇ ಜನರಿಗೆ ಧೈರ್ಯ ಕೊಡುವುದು ಹಾಗೂ ಒಳ್ಳೆಯತನ ಮತ್ತು ಪ್ರಾಮಾಣಿಕ ನಡವಳಿಕೆಗಳಲ್ಲಿ ಅವರನ್ನು ಹಿಡಿದಿಡಬಲ್ಲಂತಹುದು. ನನ್ನ ದುರಂತವೆಂದರೆ, ಇದನ್ನು ಅರಿತುಕೊಳ್ಳುವ ಹೊತ್ತಿಗಾಗಲೇ ನನಗೆ ವಯಸ್ಸಾಗಿಬಿಟ್ಟಿದೆ. ಜೊತೆಗೆ ನಾವು ಜೀವಿಸಿರುವ ಕಾಲ ನನಗೆ ಅನುಕೂಲವಾಗಿಲ್ಲ.”

ಸಾಂಸ್ಕೃತಿಕ, ಸಾಮಾಜಿಕ ವಿಚಾರಗಳಲ್ಲಿ ಬಹುತೇಕ ಒಂದೇ ರೀತಿ ಯೋಚಿಸುವ ಹೊಸ ಕಾಲದ ಸೂಕ್ಷ್ಮಜೀವಿಗಳು ಒಂದು ಸಡಿಲವಾದ ಸಂಘಟನೆಯ ಬಗೆಗಾದರೂ ಯೋಚಿಸಬೇಕಲ್ಲವೆ? ಹೀಗೆ ಪ್ರಾಯದ ಪೆಂಪು ಎಲ್ಲೆಡೆ ಚಿಮ್ಮಿದಾಗ, ಈಗಾಗಲೇ ಕೊಂಚ ಉಡುಗಿದಂತೆ ಕಾಣುವ ಹಿರಿಯರು ಕೂಡ ಉತ್ಸಾಹದಿಂದ ಈ ಪಡೆಯ ಜೊತೆ ಸೇರಿ ಪ್ರಾಯದ ಪೆಂಪು ಪಡೆಯುವುದರ ಬಗ್ಗೆ ನಾನು ಆಶಾವಾದಿ. ಈ ಸಂಚಿಕೆಯ ನಂತರ ಕೂಡ ಕನ್ನಡ ಹೊಸ ತಲೆಮಾರು ಅಂಕಣ ಮುಂದುವರೆಯಲಿದೆ.

‍ಲೇಖಕರು avadhi

March 5, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

೧ ಪ್ರತಿಕ್ರಿಯೆ

 1. ravikrishnareddy

  ನಟರಾಜ್ ಹುಳಿಯಾರ್‌ರವರೆ,

  ಈ ಸಂಘಟನೆ ವಿಚಾರವಾಗಿ ಮತ್ತು ಸಮಾನಮನಸ್ಕರನ್ನೆಲ್ಲ (ಕನಿಷ್ಠ issue-based ಆದರೂ) ಒಂದೆಡೆಗೆ ಸೇರಿಸಲು ತಾವು ಪ್ರಯತ್ನಿಸುತ್ತಿರುವುದನ್ನು ಕಂಡು ಬಹಳ ಖುಷಿಯಾಯಿತು. ಇದೇ ಸಮಯದಲ್ಲಿ ತಮ್ಮಂತಹವರು ಕನ್ನಡದ ಒಂದಷ್ಟು ಶ್ರೇಷ್ಠ ಯುವ ಮನಸ್ಸುಗಳಿಗೆ ಮಾರ್ಗದರ್ಶನ ನೀಡುವ ಅವಶ್ಯಕತೆ ಹಿಂದೆಂದೆಗಿಂತಲೂ ಈಗ ಹೆಚ್ಚಾಗಿದೆ. ಇದೇ ಕೋರಿಕೆಯನ್ನು ನಾನು ಸಿ.ಜಿ.ಕೆ. ಮತ್ತು ರಾಮದಾಸರವರಿಗೂ ಸಲ್ಲಿಸಿದ್ದೆ. ವಿಶ್ವವಿದ್ಯಾಲಯಗಳು ಮತ್ತು ಅಲ್ಲಿಂದ ಬರಬೇಕಾದ ಬೌದ್ಧಿಕ ಚಿಂತನೆ ತೀರ ನಗಣ್ಯವಾಗಿಬಿಟ್ಟಿರುವ ಈ ಸಮಯದಲ್ಲಿ ನಿಮ್ಮ ಈ ತರಹದ ಕಾರ್ಯಾಗಾರಗಳು ಮತ್ತು ಚಿಂತನೆಗಳು ಆ ಶೂನ್ಯವನ್ನು ಖಂಡಿತ ತುಂಬಬಲ್ಲವಾಗಿವೆ. ದಯವಿಟ್ಟು ಈ ಕಾರ್ಯ ಮುಂದುವರೆಸಿ.

  ಈಗ ನಮಗೆ ತೀರಾ ಅಗತ್ಯವಾಗಿರುವುದು ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸುವ ಕೆಲಸ. ಇತರ ಎಲ್ಲಾ ತರಹದ ಚಳವಳಿಗಳ ಮಧ್ಯೆಯೂ ರ್‍ಯಾಲ್ಫ್ ನೇಡರ್‌ ತರಹದ ಆಕ್ಟಿವಿಸ್ಟ್ ನಮಗೆ ಬೇಕಿದ್ದಾನೆ. (http://amerikadimdaravi.blogspot.com/2008/03/blog-post_06.html) ಸಿನಿಕ ಜನರ ನಡುವೆ ಈ ಮಾದರಿ ಮಾತ್ರ ನಮ್ಮ ಭವಿಷ್ಯವನ್ನು ಸಹನೀಯಗೊಳಿಸಬಲ್ಲದು. ಅಂತಹವರನ್ನು ಹುಡುಕುವ ಮತ್ತು ಪ್ರೋತ್ಸಾಹಿಸುವ ಚಾರಿತ್ರಿಕ ಜವಾಬ್ದಾರಿ ಈಗ ತಮ್ಮಂತಹ ನೆಲದ ಚಿಂತಕರ ಮೇಲಿದೆ.

  ನಮಸ್ಕಾರ,
  ರವಿ…
  http://amerikadimdaravi.blogspot.com/

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: