ಪ್ರೀತಿಯನ್ನು ಕುರಿತು…

ಡಾ. ಕೆ. ಪುಟ್ಟಸ್ವಾಮಿ

ಇದು ಖುಷ್ವಂತ್ ಸಿಂಗ್ ಅವರು SUNDAY ಪತ್ರಿಕೆಯಲ್ಲಿ ೧೯೮೪ರ ಮಾರ್ಚ್ ೧೮-೨೪ರ ಸಂಚಿಕೆಯಲ್ಲಿ ಪ್ರೀತಿಯನ್ನು ಕುರಿತು ಬರೆದ LOVE ಲೇಖನದ ಅನುವಾದ. ಸಂಚಾರ ಭಾವಗಳನ್ನು ಹಿಡಿದಿಟ್ಟಂತೆ ಈ ಲೇಖನದ ರಚನೆಯಿದೆ. ಪ್ರೀತಿಯೆಂದರೆ ಅದು ಬಾವಪ್ರವಾಹ ತಾನೆ? ಹರಿವ ನದಿಯಲ್ಲಿ ಬೊಗಸೆ ನೀರು ಹಿಡಿದಂತೆ ಪುಟ್ಟ ಕೈಗಳಿಗೆ ದಕ್ಕಿದಷ್ಟೇ ಭಾಗ್ಯ….ಅನೇಕ ಮಂದಿ ಪ್ರೇಮಿಗಳ ದಿನಾಚರಣೆಗೆ ಮೊದಲೇ ಪ್ರೀತಿ, ಪ್ರೇಮ ಕುರಿತು ಕವನ, ಲೇಖನ, ಟಿಪ್ಪಣಿ ಬರೆಯಲಾರಂಭಿಸಿದ್ದಾರೆ.

ಸುಮಾರು ಮೂವತ್ತೇಳು ವರ್ಷಗಳ ಹಿಂದೆ ಅನುವಾದಿಸಿದ ಪ್ರೀತಿಯನ್ನು ಕುರಿತ ಲೇಖನವೊಂದು ಅಚಾನಕವಾಗಿ ಸಿಕ್ಕಿದ್ದರಿಂದ ಸಂದರ್ಭದ ಮಹತ್ವವನ್ನು ಪರಿಗಣಿಸಿ ಹಂಚಿಕೊಳ್ಳುತ್ತಿದ್ದೇನೆ. ಈ ಲೇಖನವನ್ನು ಓದಿದ ದಿನವೇ ಅನುವಾದ ಮಾಡಿ ನನ್ನ ಡೈರಿಯಲ್ಲಿ ಬರೆದುಕೊಂಡಿದ್ದೆ. ಅದನ್ನು ತಿದ್ದದೆಯೇ ಹಾಗೇ ಟೈಪ್ ಮಾಡಿ ಹಾಕಿದ್ದೇನೆ. ಅನೇಕ ಕಡೆ ಅದು ಸಮರ್ಪಕವಾಗಿಲ್ಲ. ಆದರೂ… ಮೊದಲು ಬರೆದದ್ದೇ ಇರಲಿ ಪ್ರೀತಿಯನ್ನು ಕುರಿತು

ಮರಣವನ್ನಪ್ಪುವ ಮುನ್ನ ಪ್ರತಿಯೊಬ್ಬ ಮನುಷ್ಯನ ಜೀವಿತದಾವಧಿಯ ಒಂದಲ್ಲ ಒಂದು ಹಂತದಲ್ಲಿ ತನ್ನ ಪ್ರಭಾವವನ್ನು ಮತ್ತು ಮಾಂತ್ರಿಕ ಶಕ್ತಿಯನ್ನು ಬೀರುವ ಪ್ರೇಮ ಅಥವಾ ಪ್ರೀತಿಯೆಂಬುದು ನಿಜವಾಗಿಯೂ ಒಂದು ವೈವಿಧ್ಯಮಯ ಭಾವನೆ. ’ಪ್ರೇಮ’ ಎಂಬುದನ್ನು ಕಷ್ಟಪಟ್ಟು ಹೀಗೆ ಅರ್ಥೈಸಬಹುದು.

ಪ್ರೇಮ ಎನ್ನುವುದು ಈ ಹಿಂದೆ ನೀವು ಅನುಭವಿಸದಂಥ ಒಂದು ಸುಂದರ ಭಾವನೆ. ಇದರ ಮೊದಲ ಕುರುಹು-ಒಬ್ಬ ವ್ಯಕ್ತಿಯ ಜತೆಯಲ್ಲೇ ನೀವು ಇರಬೇಕು ಎಂದು ಉಂಟಾಗುವ ಹಂಬಲ: ಮುಂದೆ ಜತೆಯಲ್ಲೇ ಇರಬೇಕೆಂಬ ವ್ಯಕ್ತಿಯ ಮೇಲೆ ಅವಲಂಬಿತವಾಗುವುದು. ಆ ವ್ಯಕ್ತಿಯ ಜತೆಯಲ್ಲಿ ನಿಮಗೆ ಸುಖ ಸಿಗುತ್ತದೆ. ಸಂತೋಷ ದೊರೆಯುತ್ತದೆ. ಆ ವ್ಯಕ್ತಿಯಿಲ್ಲದಿದ್ದರೆ ಜೀವನವೇ ಶೂನ್ಯ ಎನಿಸುತ್ತದೆ. ಪರಸ್ಪರ ಪ್ರೀತಿಸುವ ವ್ಯಕ್ತಿಗಳು ಪರಸ್ಪರ ಸಹಾಯ ಸೇವೆ ಮಾಡುವ ಅವಿನಾವ ನಿಸ್ವಾರ್ಥ ಭಾವನೆಯುಳ್ಳವರಾಗಿರುತ್ತಾರೆ.

ಈ ಪ್ರೇಮ ಶಾಶ್ವತವಾಗಿ ಉಳಿಯುವುದಾದರೆ ಆ ಪ್ರೇಮಿಗಳಷ್ಟು ಸುಖಿ ಯಾರೂ ಇರಲಾರರು. ಈ ಪ್ರೀತಿ ಅಥವಾ ಪ್ರೇಮದ ಭಾವನೆ ಬಗ್ಗೆ ಬರ್ನಾರ್ಡ್ಷಾ ಹೀಗೆ ಹೇಳಿದ್ದಾನೆ. ಪ್ರೇಮ ಎನ್ನುವುದು ಒಂದು ವ್ಯಕ್ತಿಯ ಬಗ್ಗೆ ನಮಗೆ ಬೇರೆ ವ್ಯಕ್ತಿಗಳ ಬಗ್ಗೆ ಇರಬಹುದಾದ ಭಾವನೆಯ ಉತ್ಪ್ರೇಕ್ಷೆಗೊಂಡ ರೂಪ. ಪ್ರೀತಿಸುತ್ತಿರುವ ವ್ಯಕ್ತಿಗಳು ತಮ್ಮ ಗೌರವ, ಘನತೆ ಮುಂತಾದ ವಿಷಯಗಳ ಬಗ್ಗೆ ಸ್ವಲ್ಪವೂ ಯೋಚಿಸುವುದಿಲ್ಲ.

ಪವಿತ್ರ ಪ್ರೇಮಕ್ಕೆ ಯಾವ ಬಂಧನಗಳೂ ಇಲ್ಲ. ಈ ಪ್ರೇಮದಿಂದ ಮುಂದೆ ಒದಗಬಹುದಾದ ಕಷ್ಟ ಕಾರ್ಪಣ್ಯಗಳ ಬಗ್ಗೆ ಯಾವ ಯೋಚನೆಯೂ ಇರುವುದಿಲ್ಲ. ‘ಎಲ್ಲಾ ಬಗೆಯ ಎಚ್ಚರಗಳಿಗಿಂತ ಪ್ರೇಮದಲ್ಲಿ ತೆಗೆದುಕೊಳ್ಳುವ ಎಚ್ಚರಿಕೆ ನಿಜವಾದ ಸುಖ ಸಂತೋಷಕ್ಕೆ ಮಾರಕವಾಗಬಹುದು’- ಬರ್ಟ್ರಂಡ್ ರಸೆಲ್ ಹೀಗೆ ಹೇಳಿದ್ದು ಮೇಲಿನ ಕಾರಣಕ್ಕಾಗಿ ಎಂದು ಕಾಣುತ್ತದೆ. ಒಬ್ಬ ವ್ಯಕ್ತಿಯಲ್ಲಿ ಪ್ರೀತಿಯ ಭಾವನೆ ಅನಿರೀಕ್ಷಿತವಾಗಿ ಸುಳಿಯಬಹುದು.

ಅನಗತ್ಯವಾಗಿ ಮುತ್ತಿಗೆ ಹಾಕಬಹುದು. ಅದು ವಯಸ್ಸು, ಧರ್ಮ, ಜಾತಿ, ಸಂಪತ್ತು ಇವುಗಳಲ್ಲಿನ ವ್ಯತ್ಯಾಸವನ್ನು ಧಿಕ್ಕರಿಸಿ ಎರಡು ವ್ಯಕ್ತಿಗಳನ್ನು ಬಂಧಿಸಬಹುದು. ಮಾರ್ಲೊಲ್ ತನ್ನ ಸಾನೆಟ್ (ಸುನೀತ)ದಲ್ಲಿ ಹೇಳಿರುವ ಪ್ರೀತಿಸಿದವರೆಲ್ಲರೂ ಮೊದಲ ನೋಟದಲ್ಲೇ ಪ್ರೀತಿಸಿರಲಾರರು ಎಂಬ ಸಾಲುಗಳನ್ನು ನಂಬಲು ಕಷ್ಟವಾಗುತ್ತದೆ. ಆದರೆ ಅದೇ ಸಾನೆಟ್‌ನಲ್ಲಿ ಒಬ್ಬರನ್ನು ಪ್ರೀತಿಸುವುದು ಅಥವಾ ದ್ವೇಷಿಸುವ ಶಕ್ತಿ ನಮಗಿಲ್ಲ. ಏಕೆಂದರೆ ಅದು ನಮ್ಮ ಸಂಕಲ್ಪ ಶಕ್ತಿಯನ್ನು ಮೀರಿದ ವಿಧಿ ಅಥವಾ ಹಣೆ ಬರಹ- ಬಹುಶ: ಈ ಸಾಲುಗಳು ಸತ್ಯಕ್ಕೆ ಹೆಚ್ಚು ಹತ್ತಿರವಾಗಿವೆ.

ಇಬ್ಬರು ವ್ಯಕ್ತಿಗಳು ಪ್ರೇಮಪಾಶದಲ್ಲಿ ಏಕೆ ಸಿಕ್ಕಿಕೊಳ್ಳುತ್ತಾರೆಂಬ ಪ್ರಶ್ನೆ ಮಾತ್ರ ನಿಗೂಢ. ಒಬ್ಬ ಸುಂದರ ತರಣಿ ತನ್ನ ತಂದೆಯಷ್ಟೇ ವಯಸ್ಸಾದ ಬೆಳ್ಳಗಿನ ಗಡ್ಡದ ವ್ಯಕ್ತಿಯನ್ನು ಪ್ರೀತಿಸಿದಳು ಎಂಬ ವಿಷಯ ತಿಳಿದಾಗ ಮೊದಲು ಏಳುವ ಪ್ರಶ್ನೆ – ಆತನಲ್ಲಿ ಅವಳೇನು ಕಂಡಳು? ಬಹುಶಃ ಈ ಪ್ರಶ್ನೆಗೆ ಅವಳಲ್ಲೂ ಉತ್ತರ ಇರಲಾರದು. ತನ್ನ ಭಾವನಾತ್ಮಕ ಸಮಸ್ಯೆಗಳನ್ನು ಅವನಲ್ಲಿ ಹೇಗೆ ಹಂಚಿಕೊಂಡೆ ಎಂಬುದನ್ನು ಸಹ ಆಕೆ ಹೇಳಲಾರಳು. ಆದರೆ ಒಮ್ಮೆ ಪ್ರೀತಿಯ ಸದ್ಭಾವನೆ ಅವರಲ್ಲಿ ಸುಳಿದರೆ ಉಳಿದೆಲ್ಲ ಸಮಸ್ಯೆಗಳು ಅವರ ಮುಂದೆ ಗೌಣವಾಗುತ್ತವೆ.

ಒಮ್ಮೆ ಈ ಪ್ರೀತಿ ಪ್ರೇಮಗಳು ಅವರ ಹೃದಯ ತುಂಬಿಕೊಂಡರೆ ಅವರಿಗೆ ಅವರಿಬ್ಬರನ್ನು ಬಿಟ್ಟರೆ ಉಳಿದವು ಯೋಚನಾ ವಲಯಕ್ಕೆ ಬರಲಾರವು. ಅಭಿವ್ಯಕ್ತಿಗೊಳ್ಳದ ಪ್ರೀತಿ ಭೌತಿಕ ನೋವಿನಂತಿರುತ್ತದೆ. ಯುವ ಜನಾಂಗದಲ್ಲೇ ಇದು ಹೆಚ್ಚು. ಆದರೆ ಅಭಿವ್ಯಕ್ತಿಗೊಳಿಸದ ಪ್ರೀತಿ ಒಂದು ಹಿಂಸೆ. ಅಭಿವ್ಯಕ್ತಿಗೊಂಡ ಪ್ರೇಮ ಒಂದು ಸುಂದರ ಉದ್ರೇಕಕಾರಿ ಅನುಭವ.

ಕವಿಗಳು ಪ್ರೇಮಿಗಳು ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಗೊಳಿಸಲು ಅನೇಕ ರಮ್ಯ ಕವನಗಳನ್ನು, ಸುಂದರ ಸಾಲುಗಳನ್ನು ರಚಿಸಿದ್ದಾರೆ. ಷೇಕ್ಸ್‌ಪಿಯರ್‌ನ ಒಥೆಲೋ ನಾಟಕದ ಸಾಲುಗಳಂತೂ ಸರಿಗಟ್ಟಲಾರದ ಅನುಭಾವ ಸಾಲುಗಳು. ಓ ನನ್ನ ಹರುಷದ ಆತ್ಮವೇ! ಪ್ರತಿ ಬಿರುಗಾಳಿಯ ನಂತರ ಇಷ್ಟೊಂದು ತಣ್ಣನೆಯ ಗಾಳಿ ಬರುವುದಾದರೆ, ಗಾಳಿ ಬೀಸುತ್ತಿರಲಿ. (ಒಥೆಲೋ ಡೆಸ್ಟಿಮೋನಾಳಿಗೆ ಹೇಳುವ ಸಾಲುಗಳು) ಮ್ಯಾಥ್ಯೂ ಆರ್ನಾಲ್ಡ್ ಅವರ ಡೋವರ್ ಬೀಚ್ ಸಾಲುಗಳೂ ಇಷ್ಟೇ ಗಟ್ಟಿ ದನಿಯವು. ಓ, ಪ್ರಿಯೆ. ನಾವಿಬ್ಬರೂ ಪರಸ್ಪರ ನಿಜವಾಗಿರೋಣ. ಏಕೆಂದರೆ ಇಷ್ಟು ಹೊಸದಾದ, ಸುಂದರವಾದ ವೈವಿಧ್ಯಮಯವಾದ ಭೂಮಿ ನಮ್ಮ ಕಣ್ಣೆದುರು ಅನಂತ ಸಾಧ್ಯತೆಗಳ ಕನಸುಗಳ ನಗರ ಎನಿಸಿದರೂ ಇಲ್ಲಿ, ನಿಜವಾಗಲೂ ಸಂತೋಷವಿಲ್ಲ, ಪ್ರೀತಿಯಿಲ್ಲ ಸಹಾಯ ಅಥವಾ ನೋವಾಗಲೀ ಇಲ್ಲ.

ಬೆಳಕು ಶಾಂತಿಗಳಿಲ್ಲದ ಬರಡು ಭೂಮಿ ಇಲ್ಲಿ ಸದಾ ನಾವು ಭಯ, ಹೋರಾಟಗಳೊಡನೆ ಬದುಕಬೇಕಾಗಿದೆ ನಾವು ಅದಕ್ಕಾಗಿ ಪರಸ್ಪರ ನಿಜವಾಗಿರೋಣ. ಪರಸ್ಪರ ಪ್ರೀತಿಯ ಪ್ರಭಾವಕ್ಕೊಳಗಾದ ಪ್ರೇಮಿಗಳು ಭಾವಶೂನ್ಯವಾಗಿರುತ್ತಾರೆ. ಅಥವಾ ಹುಚ್ಚರಾಗಿರುತ್ತಾರೆ. ತಮ್ಮ ಸುತ್ತಲನ್ನು ಮರೆಯುತ್ತಾರೆ. ಅವರಿಗೆ ಕಾಣುವುದು ಅವರವರು ಮಾತ್ರವೇ. ಇಂಥ ಪರಿಸ್ಥಿತಿಯನ್ನು ಹಿಲೇಲ್ ಬೆಲ್ಲಾಕ್ ಅವರ ‘ಜೂಲಿಯಟ್’ ಕವನ ಚೆನ್ನಾಗಿ ವಿಷದಪಡಿಸುತ್ತದೆ.

ಪೊರ್ಟ್‌ಮನ್ ಚೌಕದಲ್ಲಿಸಮಾರಂಭ ಹೇಗೆ ನಡೆಯಿತೋ ಕಾಣೆ? (ಯಾಕೆಂದರೆ)ಜೂಲಿಯೆಟ್ ಅಲ್ಲಿರಲಿಲ್ಲ ಲೇಡಿ ಗ್ಯಾಸ್ಟರ್ ಅವರ ಸಮಾರಂಭ ಹೇಗೆ ನಡೆಯಿತೋ ಕಾಣೆ. ಜೂಲಿಯೆಟ್ ನನ್ನ ಪಕ್ಕದಲ್ಲಿದ್ದಳುನನಗೇನು ಸಮಾರಂಭದ ಅರಿವಾಗಲಿಲ್ಲ. ತಮ್ಮ ಜೀವನದಲ್ಲಿ ಬಯಸಿದ್ದು ತನ್ನ ಪ್ರೇಮಿಯನ್ನೇ ಎಂದು ಪ್ರೇಮಿಗಳ ಮನಸ್ಸಿನಲ್ಲಿ ಸುಳಿದರೆ ಅವರಿಗೆ ಬೇಕಾಗಿರುವುದು ಇನ್ನೇನೂ ಇರದು. ಆಘಾ ಹಷರ್ ಕಾಶ್ಮೀರಿ ಈ ಭಾವನೆಯನ್ನು ಕೆಳಗಿನ ಸಾಲುಗಳಲ್ಲಿ ಎಷ್ಟು ಸುಂದರವಾಗಿ ಸೆರೆಹಿಡಿದಿದ್ದಾರೆ ನೋಡಿ. ಆ ದೇವರೇ ನನ್ನಕೋರಿಕೆಯನ್ನೆಲ್ಲಾ ಈಡೇರಿಸಿದ.

ದೇವರು ನನಗೆನಿನ್ನನ್ನು ಕೊಟ್ಟನಂತರನಾನು ದೇವರಲ್ಲಿ ಮತ್ತೇನನ್ನೂ ಬೇಡಲಿಲ್ಲ. ಪ್ರೇಮಿಯ ಕೋರಿಕೆಯನ್ನು ದೇವರು ಈಡೇರಿಸಿದ ಮೇಲೆ ಅವರಿಬ್ಬರೂ ಎಲ್ಲಾ ಆತಂಕಗಳನ್ನು ದಾಟಿ ಮುನ್ನಡೆವ ಭಾವನೆಯನ್ನು ಹೊಂದಿರುತ್ತಾರೆ. ನಿನ್ನ ಅಂಗೈಯನ್ನುಹಿಡಿದಾಗನನ್ನ ದಾರಿಯಲ್ಲಿದ್ದ ದೀಪ ಹೆಚ್ಚು ಪ್ರಕಾಶಗೊಂಡಿತು. ನನಗಾಗಿ ಗಾಳಿತನ್ನ ದಿಕ್ಕನ್ನೇ ಬದಲಿಸಿತು. ನನ್ನ ಗುರಿ ಮತ್ತೂನಿಚ್ಚಳಗೊಂಡಿತು. ಪ್ರೇಮದ ಒಂದು ಉದಾತ್ತ ನಿಯಮವೆಂದರೆ ಪ್ರೇಮಿಗಳು ತಮ್ಮ ಮಾತುಗಳಲ್ಲಿ ಪರಸ್ಪರ ಇಟ್ಟಿರುವ ವಿಶ್ವಾಸ. ಸಂದೇಹ ಸುಳಿದರೂ ಅದು ಗೌಣವೆನಿಸುತ್ತದೆ. ಆಕೆ ಸತ್ಯದ ಪುತ್ಥಳಿ ಎಂದು ನನ್ನ ಪ್ರೀತಿಕೂಗಿದರೆ ಆಕೆ ಸುಳ್ಳು ಹೇಳಿದರೂ ಅದನ್ನು ನಂಬುತ್ತೇನೆ.

ಪ್ರೇಮಿಗಳ ಸಂಬಂಧ ನಿರಂತರವಾಗಿ ಗಟ್ಟಿಯಾಗೇ ಉಳಿದರೆ ಪ್ರಪಂಚವೆಲ್ಲಾ ಸುಂದರ. ಸ್ವರ್ಗವೆಲ್ಲ ಅವರ ಮುಂದೆ ಗೌಣ. ತನ್ನ ಪ್ರಿಯೆಯ ಮಾತು, ಧ್ವನಿ ನೀರಿನಲೆಯ ಮೇಲೆ ಸಂಗೀತ ನರ್ತಿಸಿದಂತೆ ಷೇಕ್ಸ್‌ಪಿಯರ್‌ನ Twelfth Night ನಾಟಕದ ನಾಯಕನಂತೆ ಈ ಪ್ರೇಮಿಯ ಭಾವನೆಗಳು. ಪೂರ್ಣ ತೃಪ್ತಿಯ ಪ್ರೇಮದ ಬಗ್ಗೆಉತ್ಕೃಷ್ಟವಾದ ಮಾತುಗಳಲ್ಲಿ ಬರೆ. ಆಹೋ ರಾತ್ರಿಯಲ್ಲೂಅವುಗಳನ್ನು ಗಟ್ಟಿಯಾಗಿ ಹಾಡು. ಬೆಟ್ಟದ ಕಣಿವೆಗಳಲ್ಲಿ ನಿನ್ನ ಧ್ವನಿಮಾರ್ದನಿಸಲಿ ಗಾಳಿಯ ಜತೆ ನಿನ್ನ ಪ್ರೇಮಿದುಸಿರನ್ನು ಬೆರಸು ‘ಒಲಿವಿಯಾ…’ ಎಂದು ಕೂಗು (ನಾಯಕ) ಎಡ್ಮಂಡ್ ಸ್ಪೆನ್ಸರ್ ತನ್ನ ಸಾನೆಟ್ ಒಂದರಲ್ಲಿ ಪ್ರೇಮಿಯೊಬ್ಬನ ಮನಸ್ಥಿತಿಯನ್ನು ಹೀಗೆ ಚಿತ್ರಿಸುತ್ತಾನೆ.

ಒಮ್ಮೆಅವಳ ಹೆಸರನ್ನುದಂಡೆಯ ಮೇಲೆ ಬರೆದೆ. ಆದರೆ ತರಂಗಗಳು ಬಂದು ಅವುಗಳನ್ನು ತೊಳೆದವು. ಮತ್ತೆ ಎರಡನೆಯ ಬಾರಿ ಬರೆದೆ. ಈಗ ಭಾರಿ ಅಲೆಗಳು ನನ್ನ ಭಾವನೆಗಳನ್ನು ನುಂಗಿ ಹಾಕಿದವು. ಅಯ್ಯೋ ಹುಡುಗನೇ ಇದು ನಿಷ್ಫಲ. ಮಾಯವಾಗುವುದನ್ನುಅಜರಾಮರವಾಗಿಸುವ ನಿನ್ನ ಯತ್ನ ಬರೀ ಹುಚ್ಚುಎಂದಳವಳು. ನಾನೂ ಒಂದು ದಿನ ಇಲ್ಲವಾಗುತ್ತೇನೆ ಇಲ್ಲಿಂದ. ಹಾಗೇ ನನ್ನ ಹೆಸರೂ ಮರೆಯಾಗುತ್ತದೆ.

ನನ್ನ ಮಾತು ನಿನ್ನ ಕೃತಿಅಮರವಾಗುವುದುಅಪರೂಪ. ಸ್ವರ್ಗದಲ್ಲಿ ನಿನ್ನಹೆಸರು ಬರೆ. ಸಾವು ಬಂದು ಇಡೀ ವಿಶ್ವವನ್ನೇ ಕಬಳಿಸಿದರೂ ಅಲ್ಲಿ ನಮ್ಮ ಪ್ರೀತಿ ಅರಳುತ್ತದೆ ಜೀವನ ಮುಂದುವರೆಯುತ್ತದೆ. ಎಲ್ಲಾ ಭಾವನೆಗಳಿಗಿಂತಲೂ ಪ್ರೇಮ ಭಾವನೆ ತುಂಬಾ ಸುಂದರವಾದದ್ದು. ಸ್ವರ್ಗೀಯ ಅನುಭವವನ್ನು ಕೊಡುವಂಥದ್ದು. ಏಕೆಂದರೆ, ಏಕಕಾಲಕ್ಕೇ ಅದು ಮನಸ್ಸು, ಹೃದಯ ಮತ್ತು ಪ್ರಜ್ಞೆಯನ್ನು ಆವರಿಸಿಕೊಳ್ಳುತ್ತದೆ. ಪ್ರೀತಿಸುವುದಕ್ಕಿಂತಲೂ ಬೇರೊಬ್ಬರಿಂದ ಪ್ರೀತಿಸಲ್ಪಡುವುದೇ ಅತಿ ಮಧುರವಾದದ್ದು. ಇದು ಸ್ವರ್ಗ ಸೀಮೆಗೆ ಕೊಂಡೊಯ್ಯುತ್ತದೆ.

‍ಲೇಖಕರು Avadhi

February 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

ಅಮ್ಮ…

ಅಮ್ಮ…

ಸಹನಾ ಹೆಗಡೆ ವೃತ್ತಿಯಿಂದ ಉಪನ್ಯಾಸಕರೂ ಪ್ರವೃತ್ತಿಯಿಂದ ಲೇಖಕರೂ ಸಾಹಿತ್ಯಾಸಕ್ತರೂ ಆದ ಶ್ರೀಯುತ ಪ್ರವೀಣ ನಾಯಕ ಹಿಚ್ಕಡ ಅವರು ತಮ್ಮ ತಾಯಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This