ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ

ಈಗ ಅದೆಲ್ಲ ಮಜಾ ಅನಿಸತ್ತೆ.
ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ ಬರೆದಿರಲಿಲ್ಲ! ( ಆಮೇಲೆ ಬರ್ದೆ ಅಂದ್ಕೊಳ್ಬೇಡಿ… ನಾನು ಓದು ನಿಲ್ಲಿಸಿದ್ದು ಆಗಲೇ. ಮದ್ವೆ ಆಯ್ತಲ್ಲ, ಅದ್ಕೆ…) ಆದ್ರೂ ನಾನು ಮೊದಲ ಮೂರು ಪ್ಲೇಸಲ್ಲಿ ಇರ್ತಿದ್ದೆ ಅನ್ನೋದು ನಾನು ಕೊಟ್ಕೊಳೋ ಸಮಜಾಯಿಶಿ! (ನೀವು ನನ್ನ ಶತದಡ್ಡಿ ಅಂದ್ಕೋಬಾರದಲ್ಲ, ಅದ್ಕೆ!!)
ಹಾಗಾದ್ರೆ, ದಪ್ಪ ದಪ್ಪ ರಟ್ಟಿನ ನೂರು- ಇನ್ನೂರು ಪುಟಗಳ ‘ಲೇಖಕ್’ ನೋಟ್ ಬುಕ್ ಗಳನ್ನ ನಾನೇನು ಮಾಡ್ತಿದ್ದೆ?
ಕೊನೆ ಪುಟದಿಂದ ಹಿಡಿದು ಉಲ್ಟಾ ಮಾಡ್ಕೊಂಡು ಚಿತ್ರ, ಕವನ ಬರೀತಿದ್ದೆ! ರಾಮಾಯಣ, ಮಹಾಭಾರತದ ಕಥೆಗಳ್ನ ಗೀಚಿಟ್ಕೊಳ್ತಿದ್ದೆ!!
ಹೀಗೊಮ್ಮೆ ಕಂಬಳಿ ಹುಳದ ಕವನ ಬರೆದಾಗಲೆ ನಾನು ಸಿಕ್ಕಿಬಿದ್ದಿದ್ದು. ಐದನೇ ಕ್ಲಾಸಲ್ಲಿ ಟೀಚರ್ರು ‘ಚಿಟ್ಟೆಯ ಜೀವನ ಚರಿತ್ರೆ’ ಪಾಠದ ನೋಟ್ಸು ಕೊಡ್ತಿದ್ದರೆ, ನಾನು ತಲೆ ತಗ್ಗಿಸ್ಕೊಂಡು ನೆಲ್ಲಿಕಾಯಿ ತಿನ್ನುತ್ತ ಕವಿತೆ ಬರೆಯುತ್ತಿದ್ದೆ!
ಆವರೆಗೂ ನೋಟ್ಸು ನೋಡುವ ದಿನ ಊರುಕೇರಿಯದೆಲ್ಲಾ ಬುದ್ಧಿ ಉಪಯೋಗಿಸಿ ಪಾರಾಗಿಬರ್ತಿದ್ದ ನಾನು ಅವತ್ತು ಸಿಕ್ಕಿಬಿದ್ದಿದ್ದೆ. ಕ್ಲಾಸ್ ಮೇಟುಗಳೆಲ್ಲ ಶೇಮ್ ಶೇಮ್ ಅಂದುಬಿಟ್ಟರು! ಇನ್ನೊಂದು ತಿಂಗಳಲ್ಲಿ ಆವರೆಗಿನ ಎಲ್ಲ ನೋಟ್ಸು ಬರೆದು ತೋರಿಸುವವರೆಗೂ ಯಾರೂ ನನ್ನ ಹತ್ರ ಮಾತಾಡಬಾರದು ಅಂತ ಟೀಚರ್ ತಾಕೀತು ಮಾಡಿದರು. ಅಮ್ಮನಿಗೆ ಬುಲಾವು ಹೋಯಿತು.
ನನಗೆ ಅದ್ಯಾವುದೂ ದೊಡ್ಡ ಶಿಕ್ಷೆ ಅನಿಸಲೇ ಇಲ್ಲ! ಯಾಕೆಂದರೆ, ನಾನಂತೂ ನೋಟ್ಸು ಬರೆಯುವುದೇ ಇಲ್ಲ ಅಂತ ನಿರ್ಧಾರ ಮಾಡಿಬಿಟ್ಟಿದ್ದೆ!!
ಈಗಲೂ ನನ್ನದದೊಂದು ಮೊಂಡು ವಾದವಿದೆ. ಫಲಿತಾಂಶ ಮುಖ್ಯವೇ ಹೊರತು ಪ್ರೊಸೀಜರ್ ಅಲ್ಲ ಅನ್ನೋದು!
ಆದ್ರೆ ಗಣಿತದಲ್ಲಿ ಪ್ರತಿ ಪ್ರಕ್ರಿಯೆಗೂ ಮಾರ್ಕ್ಸ್ ಇದೆ, ಫಲಿತಾಂಶ ತಪ್ಪಿದ್ರೂ ಒಂದಷ್ಟು ಮಾರ್ಕ್ಸು ಸಿಗತ್ತೆ… ಬಹುಶಃ ಫಲಿತಾಂಶಕ್ಕೆ ಮೊರೆ ಹೋಗುವ ನಾನು ಲೆಕ್ಕಾಚಾರ ತಪ್ಪೋದು ಅಲ್ಲಿಯೇ ಅನಿಸುತ್ತೆ…
ಸರಿ… ನನಗೆ ಹೀಗಾಯ್ತಲ್ಲ ಅಂತ ಬೇಜಾರಿರಲಿಲ್ಲ. ನಾಳೆ ನನ್ನಮ್ಮ ಬರ್ತಾಳಲ್ಲ, ಈ ಟೀಚರ್ ಅದೇನೇನು ಹೇಳ್ತಾರೋ ನನ್ ಬಗ್ಗೆ ಅಂತೆಲ್ಲ ಚಿಂತೆ ಕಾಡತೊಡಗಿತು. ಅಮ್ಮನೂ ಬಂದೇಬಂದಳು. ಟೀಚರ್ ಹೇಳಿದ್ದನ್ನೆಲ್ಲ ಕೇಳಿಕೊಂಡು ನನ್ನ ಕಡೆಗೊಮ್ಮೆ ತಿರುಗಿ,  ‘ಮನೆಗ್ ಬಾ, ಮಾಡ್ತೀನಿ’ ಅನ್ನೋ ಥರ ನೋಡ್ಕೊಂಡು ಹೋದಳು.
ಕೆಂಪು ಕೆಂಪು ಅಮ್ಮನನ್ನ ಊಹಿಸ್ಕೊಂಡು ಹೋಗಿದ್ದ ನಂಗೆ ಒಂದು ಥರ ನಿರಾಶೆಯೇ ಆಯ್ತು! ಅವಳು ನನ್ನ ದೊಡ್ಡಮ್ಮನಿಗೆಲ್ಲ ಕಥೆ ಹೇಳಿ ನಗ್ತಿದ್ದಳು!! ಕೊನೆಗೆ, ಅಪ್ಪ ಬರಲಿ ತಾಳು, ಅಂದು ಸುಮ್ಮಗಾದಳು.
ಅಪ್ಪನೂ ಬಂದಿದ್ದಾಯ್ತು. ನನ್ನ ನೋಟ್ಸುಗಳನ್ನ ನೋಡಿ ಅದರೊಳಗಿದ್ದ ಚಿತ್ರಗಳನ್ನ ನೋಡಿ ಅವರು ತಲೆ ಮೇಲೊಂದು ಕುಟ್ಟಿದ್ದು, ನಾನು ನೋವಿಗಿಂತ ಹೆಚ್ಚಾಗಿ ಸಿಟ್ಟು- ಅಸಹಾಯಕತೆಗಳಿಂದ ಅತ್ತಿದ್ದು, ಎಲ್ಲಾ ಮುಗೀತು. ಆದರೂ ಅವರು ಹೆಚ್ಚು ದಂಡಿಸುವ ಹಾಗಿರಲಿಲ್ಲ. ಯಾಕಂದರೆ ನನ್ನ ಮಾರ್ಕುಗಳು ನನಗೆ ಬೆಂಬಲವಾಗಿದ್ದವಲ್ಲ!?.
ಹಾಳೆ ತಿರುಗಿಸ್ತ, ತಿರುಗಿಸ್ತ ಅಪ್ಪ ‘ಚಿಂತೆ’ ಅನ್ನುವ ಕವಿತೆ ಓದಿದರು. ಏಕ್ ದಂ ಇಡಿಯ ಮನೆ ತಣ್ಣಗಾಗಿ ಹೋಯ್ತು. ಅಪ್ಪನ ಮುಖ ಪೂರ್ತಿ ಬದಲಾಯ್ತು. “ಇದನ್ಯಾವಾಗ ಬರೆದೆ ಮಗಳೇ?’ ಅಂದರು.
ಅದನ್ನ ನಾನು, ಅಪ್ಪ ಮನೆ ರಿಪೇರಿಗೆ ದುಡ್ಡು ಹೊಂಚುವುದು ಹೇಗೆ ಅಂತ ಚಿಂತಿಸ್ತಿದ್ದನ್ನ ನೋಡಿ ಬರೆದಿದ್ದೆ!
ಮುಗಿಯಿತು. ಅಪ್ಪ ಮತ್ತೆಂದೂ ಕವಿತೆ ಬರೆದಿದ್ದಕ್ಕೆ ನನಗೆ ಹೊಡಿಯಲಿಲ್ಲ! ಶಿಸ್ತು ಕಲಿ ಅಂತ ಆಗಾಗ ರೇಗಿದರೂ ಒತ್ತಡ ಹೇರಲಿಲ್ಲ. ನಾನು ಏನೊಂದೇ ಬರೆದರೂ ಅದನ್ನ ತಾವೇ ಟೈಪ್ ಮಾಡಿಕೊಂಡು ಬಂದು ಅವರಿವರಿಗೆ ಹಂಚತೊಡಗಿದರು. ಮೊದಲೇ ಸಂಕೋಚದ ಮುದ್ದೆಯಾಗಿದ್ದ, ಒಂಟಿಬಡಕಿಯಾಗಿದ್ದ ನಾನಂತೂ ನಾಚಿಕೆಯಿಂದ ಮುದ್ದೆಯಾಗಿಹೋಗ್ತಿದ್ದೆ. ಹೀಗೆಲ್ಲ ತಮ್ಮ ಮಗಳ ಬಗ್ಗೆ ತಾವೇ ಹೇಳ್ಕೊಂಡ್ರೆ ಜನ ಏನಂದ್ಕೊಳ್ತಾರೆ? ಅಂತ ಮುಜುಗರಪಡ್ತಿದ್ದೆ. ಅಡುಗೆ ಮನೇಲಿ ಅಮ್ಮನ ಜತೆ ಪಿಸುಗುಟ್ಟುತ್ತ ಬಯ್ಕೊಳ್ತಿದ್ದೆ…
ಈಗ ನನ್ನ ಬಗ್ಗೆ ನಾನೇ ಹೇಳ್ಕೊಳ್ತಿದೀನಲ್ಲ? ನೀವು ಕೇಳಬಹುದು… ಇದನ್ನೆಲ್ಲ ಹೇಳಿಕೊಳ್ಳಲೇಬೇಕೆಂಬ ಬಯಕೆಯಲ್ಲಿ, ನೀವೇನೆಂದುಕೊಳ್ತೀರೋ ಅನ್ನೋ ಮುಜುಗರದಲ್ಲೇ ಈಗ ಇದನ್ನ ಬರೀತಿದೇನೆ. ( ಮತ್ತೆ ಸಮಜಾಯಿಷಿ!) ಮತ್ತಿದು, ಬಹುತೇಕರ ಬಾಲ್ಯದಲ್ಲಿ ನಡೆದಿರಬಹುದಾದ ಘಟನೆಯೇ ಅಲ್ಲವೇ?
ಬಹುಶಃ ನನ್ನ ವಿಧಿಗೆ ಗೊತ್ತಿತ್ತು, ನನಗೆ ಶಾಲೆಯ ಓದು, ನೋಟ್ಸಿಗಿಂತ ಈ ರೀತಿಯ ಬರೆಯುವ ತೆವಲೇ ಬದುಕು ನೀಡೋದು ಅಂತ.  ಬೆಂಗಳೂರಿಗೆ ಕಾಲಿಟ್ಟ ಮೂರು ವರ್ಷದಿಂದ ನಾಲ್ಕು ಕೆಲಸ ಬದಲಿಸಿದ್ದೇನೆ. ಪ್ರತಿ ಸಾರ್ತಿಯೂ ವಿದ್ಯಾರ್ಹತೆ ಎದುರಿಗೆ ‘ಸೆಕೆಂಡ್ ಪಿಯುಸಿ’ ಅಂತ ಬರೆಯುವಾಗೆಲ್ಲ ಮುಖ ಸಣ್ಣ ಮಾಡ್ಕೊಂಡಿದ್ದೇನೆ. ಆದರೂ ಅದಕ್ಕಿಂತ ಹೆಚ್ಚಾಗಿ ಅಕ್ಷರಗಳ ಕರುಣೆಯಲ್ಲೇ ಇವತ್ತು ನೆಮ್ಮದಿಯಾಗಿ ಉಳಿದಿದ್ದೇನೆ. ತಲೆಯಲ್ಲಿ ಇಂಥದೊಂದು ಮೆದುಳಿಟ್ಟು ಕಳಿಸಿದ ದೇವಿಗೆ ಥ್ಯಾಂಕ್ಸ್ ಹೇಳುವುದಷ್ಟೆ ನಾನು ಮಾಡಬಹುದಾದ ಕೆಲಸ ಅನಿಸುತ್ತೆ…
ಇವತ್ತಿದನ್ನೆಲ್ಲ ನಾನ್ಯಾಕೆ ಹೇಳ್ಕೊಳ್ತಿದೇನೆ? ಕಾರಣವಿದೆ…
ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ, ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ. ಅದಕ್ಕೇ, ಇದೊಂದು ಪುಟ್ಟ ಫ್ಲ್ಯಾಶ್ ಬ್ಯಾಕು!
ನಾನೇ ಪ್ರಕಾಶನದ ಹೊಣೆ ಹೊತ್ತುಕೊಂಡಿದ್ದರೆ ಖಂಡಿತ ಇಷ್ಟು ಒಳ್ಳೆಯ ಪುಸ್ತಕ ಹೊರಬರ್ತಿರಲಿಲ್ಲ.ಅಪಾರ ಸೊಗಸಾದ ಮುಖ ಪುಟ- ಪುಟ ವಿನ್ಯಾಸಗಳನ್ನು ಮಾಡಿಕೊಟ್ಟಿದ್ದಾರೆ. ಪ.ಸ ಕುಮಾರ್ ರೇಖೆಗಳು ಅರ್ಥಪೂರ್ಣವೂ ಆಪ್ತವೂ ಆಗಿವೆ.
ಜೋಗಿಯವರು ಮುನ್ನುಡಿ ಬರೆದು ಪ್ರೋತ್ಸಾಹಿಸಿದರೆ, ನಟರಾಜ್ ಹುಳಿಯಾರ್ ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ.
‘ಭಾಮಿನಿ ಷಟ್ಪದಿ’ಗೆ ಮೂಲ  ಕಾರಣರಾದ ವೆಂಕಟ್ರಮಣ ಗೌಡರು ‘ಉಫೀಟ್’ ಕವನ ಸಂಕಲನಕ್ಕೆ ಬರೆದುಕೊಟ್ಟ ನಲ್ನುಡಿಗಳು ಇಲ್ಲಿಯೂ ಇವೆ.
ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.
ನಿಮ್ಮಲ್ಲಿ ಶೇ.೯೦ ಮಂದಿಯನ್ನು ನಾನು ನೋಡಿಲ್ಲ. ಆದರೆ ನಿಮ್ಮೆಲ್ಲರ ಸ್ನೇಹ- ಪ್ರೀತಿಗಳ ಸವಿಯನ್ನು ಈ ಒಂದು ವರ್ಷದಿಂದ ಉಣ್ಣುತ್ತಲೇ ಬಂದಿದ್ದೇನೆ. ನಿಮಗೆಲ್ಲರಿಗೂ ನಾನು ಋಣಿ.
ನೀವು ‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ. ನೀವೆಲ್ಲರೂ ಖಂಡಿತ ಬರಲೇಬೇಕು.
ನಿಮಗಾಗಿ ಕಾದಿರುತ್ತೇನೆ.
ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ

‍ಲೇಖಕರು avadhi

August 14, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

 1. chetana chaitanya

  ಕೊನೆಯಿಂದ ಮೂರನೆ ಚರಣ ಶುರುವಾಗೋದು ಹೀಗೆ…
  “ಜಿ.ಎನ್.ಮೋಹನ್ ಬಹಳ ಮುದ್ದಾಗಿ, ನೀಟಾಗಿ ಪುಸ್ತಕವನ್ನ ಹೊರತಂದಿದ್ದಾರೆ. ಅವರ ಕೈವಾಡವಿಲ್ಲದಿದ್ದರೆ, ನಾನೇ ಪ್ರಕಾಶನದ ಹೊಣೆ ಹೊತ್ತುಕೊಂಡಿದ್ದರೆ ಖಂಡಿತ ಇಷ್ಟು ಒಳ್ಳೆಯ ಪುಸ್ತಕ ಹೊರಬರ್ತಿರಲಿಲ್ಲ” ಎಂದು.
  ಹೀಗಾಗಿ ಓದುಗರೆಲ್ಲ ಅದನ್ನು ಹಾಗೇ ಓದಿಕೊಳ್ಳಬೇಕಾಗಿ ವಿನಂತಿ

  ಪ್ರತಿಕ್ರಿಯೆ
 2. ಅಶ್ರ ಫ್

  ಗೌರವನ್ವಿತ ಲೇಖಕಿಯವರಿಗೆ ವಂದನೆಗಳು
  ಮೊದಲ ಬಾರಿಗೆ ಕಣ್ಣಾಯಿಸಿದೆ ನಿಮ್ಮ “ಅವದಿ” ಮೇಲೆ
  ಪದಗಳಿಲ್ಲ
  ….ಬರೆಯೋಕೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: