ಪ್ರೀತಿಸುವವರು ನೋಡಿ ಕಲಿಯಬೇಕಾದದ್ದು ರೋಮಿಯೋ ಜುಲಿಯಟ್ಟರನ್ನಲ್ಲ..

prasad shenoy r kಪ್ರಸಾದ್ ಶೆಣೈ ಆರ್ ಕೆ

ನಾವು ಎಲ್ಲರಂತೆ ಬದುಕದೇ ನಮ್ಮದೇ ಹೊಸತೊಂದು ದಾರಿಯನ್ನು ಕಂಡುಕೊಳ್ಳಬೇಕು ಅಂತ ಹೊರಟವರು. ಪ್ರೀತಿ ಮಾಡಿದರೂ ಯಾವ ಮಿಸ್ ಯು ಕಿಸ್ಯುಗಳಿಲ್ಲದೇ ಒಲವಿನ ದಿನಗಳು ಸಾಗುತ್ತಲೇ ಇರಬೇಕು ಮತ್ತು ಜೀವನದ ಪ್ರತೀ ಕ್ಷಣಗಳಲ್ಲೂ ವಿಭಿನ್ನವಾಗಿ ಬದು ಕಬೇಕು ಅಂತ ಆಸೆ ಪಟ್ಟವರು. ಇರುವ ಒಂದಷ್ಟು ದುಡ್ಡನ್ನು ಗಂಟುಕಟ್ಟಿಕೊಳ್ಳುತ್ತಾ, ಅನಿವಾರ್ಯವಾದಾಗಲೆಲ್ಲಾ ಅದನ್ನು ಬಳಸುತ್ತಾ ಬಾಳ ಹಾಯಿದೋಣಿ ಹಾಯಾಗಿ ತೇಲಿ ಹೋಗಲಿ ಅನ್ನೋದು ನಮ್ಮ ಪುಟ್ಟ ಕನಸು.

tundu-hykluದೂರದ ಊರೊಂದರಲ್ಲಿ ತೋಟ ಮಾಡಬೇಕು, ಯಾರ ಹಂಗೂ ಇಲ್ಲದೇ ನಮ್ಮನ್ನು ನಾವು ಪ್ರೀತಿಸುವಂತೆ ಹಸಿರನ್ನು ಪ್ರೀತಿಸುತ್ತಾ, ಕಷ್ಟಪಟ್ಟಾದರೂ ಸರಿ ವಿಭಿನ್ನವಾಗಿ ಬದುಕಬೇಕು ಅಂತ ಪ್ರತೀ ಕ್ಷಣವೂ ಮಾತಾಡಿಕೊಳ್ಳುತ್ತೇವೆ. ಆದರೆ ಹಾಗೇ ಬದುಕೋದಕ್ಕೆ ಸಾಧ್ಯಾವಾ? ಅಪ್ಪ ಅಮ್ಮನನ್ನೇ ನೋಡು ಅವರೂ ಕಷ್ಟ ಪಟ್ಟು ಬದುಕಿದವರು, ಆದರೆ ಅವರು ಬದುಕಿದಂತೆ ಅವರ ಅಪ್ಪ ಅಮ್ಮ ಬದುಕುತ್ತಿರಲಿಲ್ಲ.ನಮ್ಮ ಅಪ್ಪ ಅಮ್ಮ ಬದುಕಿದಂತೆ ನಾವು ಬದುಕುತ್ತಿಲ್ಲ.

ನಾವು ಬದುಕಿದಂತೆ ನಮ್ಮ ಮಕ್ಕಳು ಬದುಕೋದೂ ಇಲ್ಲ. ಅಪ್ಪ-ಅಮ್ಮ ಆವತ್ತು ಕಷ್ಟ ಪಟ್ಟು ಮಾಡಿದ್ದ ಈ ತೋಟ ಇವತ್ತು ಇಷ್ಟೆಲ್ಲಾ ಫಸಲು ಕೊಟ್ಟು ತುಂಬಿಕೊಂಡಿದೆ ಅಂದರೆ ಅವರು ಪರಸ್ಪರ ಅರ್ಥಮಾಡಿಕೊಳ್ಳುತ್ತಾ, ಬಾಳು ಹೇಗೂ ಬರಲಿ, ನಮ್ಮನ್ನು ಎಲ್ಲಿಗೂ ಕೊಂಡ್ಯೊಯ್ಯಲಿ ಈ ಕ್ಷಣದಲ್ಲಿ ಬದುಕುತ್ತಾ ಕರಗೋದಷ್ಟೇ ಮುಖ್ಯ ಎಂದು ಗಾಢವಾಗಿ ಜೀವನ ಪ್ರೀತಿಯಿಂದ ಬದುಕಿದ್ದರ ಪರಿಣಾಮ ಈ ಚೆಂದದ ಘಲವತ್ತಾದ ಹೊಲ. ನೋಡು, ಆ ದೊಡ್ಡ ಮನೆ ಕಾಣ್ತಾ ಇದೆಯಾ..? ಸುಮಾರು 100 ಕ್ಕಿಂತಲೂ ಜಾಸ್ತಿ ವರ್ಷ ಆಗಿರಬಹುದು ಅದಕ್ಕೆ, ಸುತ್ತಲೂ ಅಡಕೆ ತೋಟ ತುಂಬಿದೆ….ಅಲ್ಲಿ ನೋಡು!! ಆ ಮಣ್ಣಿನ ಚಂದದ ಕೊಟ್ಟಿಗೆ ಕಾಣ್ತಾ ಇದೆಯಲ್ಲ..ಅದು ಅಪ್ಪ ಅಮ್ಮ ಅಜ್ಜಿ ಎಲ್ಲಾ ಸೇರಿ ಕಷ್ಟ ಪಟ್ಟೇ ಮಾಡಿದ್ದು, ಕೆಲಸದವರನ್ನು ಕರೆದು ಕೆಲಸ ಮಾಡಿಸಿಕೊಳ್ಳುವಷ್ಟು ಹಣ ಎಲ್ಲಿತ್ತು ಆಗ? ಅದಕ್ಕೆ ಇವರೇ ಮೇಸ್ತ್ರಿಗಳಾಗಿ ಹಗಲು ರಾತ್ರಿ ಎಲ್ಲಾ ಕೂತು ಆ ಚಂದದ ಕೊಟ್ಟಿಗೆ ಕಟ್ಟಿದರು. ನೋಡು ಎಷ್ಟು ಗಟ್ಟಿ ಇದೆ? ಇನ್ನೂ 50 ವರ್ಷ ಬಾಳಬಹುದು.

ಹಾಗೇ ಮನೆ ಮಂದಿಯೆಲ್ಲಾ ಪರಸ್ಪರ ಸಣ್ಣ ಪುಟ್ಟ ಕೆಲಸಗಳನ್ನೂ ಹಂಚಿಕೊಂಡು ಶ್ರಮದಿಂದ ಮಾಡಿದ ಪ್ರತಿಯೊಂದು ಕೆಲಸವೂ ಇವತ್ತಿಗೂ ಗಟ್ಟಿಯಾಗಿಯೇ ಇದೆ. ಈ ತೋಟ, ಗದ್ದೆ, ಕೊಟ್ಟಿಗೆ, ಮನೆ, ಎಲ್ಲಕ್ಕಿಂತಲೂ ಹೆಚ್ಚಾಗಿ ಅವರು ನಮಗೆ ಕೊಟ್ಟ ಸಂಸ್ಕಾರ, ಅವರು ಈ ಮನೆಯ ತುಂಬೆಲ್ಲಾ ಬಿಟ್ಟು ಹೋದ ಶ್ರಮದ ಕತೆಗಳು, ಹೀಗೂ ಬದುಕಬಹುದು ಅಂತ ಇವತ್ತಿಗೂ ನಮ್ಮೊಳಗೆ ಅಚ್ಚರಿ ಮೂಡಿಸುತ್ತಾ, ನಾವೂ ಹೀಗೇ ಬದುಕಬಹುದಾ? ಅಂತ ಪ್ರಶ್ನೆಗಳ ಕಾರಂಜಿಯೊಂದನ್ನು ಹೊಮ್ಮಿಸುತ್ತಾ ಈ ಅಜ್ಜ, ಅಜ್ಜಿ, ಅಪ್ಪ ಅಮ್ಮ ಎಲ್ಲರೂ ನಮ್ಮೊಳಗೆ ಬೆರಗಾಗಿಯೇ ಇದ್ದಾರೆ.

handಹೇಳು ಇವರಂತೆ ನಮಗೆ ಬದುಕೋಕೆ ಸಾಧ್ಯವಾ? ಆಗೆಲ್ಲಾ ಎಷ್ಟು ಬಡತನವಿದ್ದರೂ ಮನೆಗೆ ದೂರದ ಊರುಗಳಿಂದ ಮಟ ಮಟ ಮದ್ಯಾಹ್ನದಲ್ಲಿ ಹಸಿದ ಹೊಟ್ಟೆಯಿಂದ ಬರುತ್ತಿದ್ದವರಿಗೆ ಊಟಕ್ಕೆ ಮೋಸ ಆಗಿದ್ದಿಲ್ಲ ಈ ಮನೆಯಲ್ಲಿ, ಇದೇ ಅಂಗಳದಲ್ಲಿ ಕೂತು ಅದಷ್ಟೋ ಊರಿನ ಆಗಂತುಕರು ಹೊಟ್ಟೆ ತುಂಬಾ ಉಂಡು ಹೋಗಿದ್ದಾರೆ.

ಆ ದಿನಗಳೇ ಹಾಗಿತ್ತು ನೋಡು. ಆಗ ಈಗಿನವರಂತೆ ಹೆಂಡತಿ ಮತ್ತು ಗಂಡನಿಗೆ ಸಮ ವಯಸ್ಸು ಆಗಿರಲಲ್ಲಿಲ್ಲ. ಗಂಡ, ಹೆಂಡತಿಗಿಂತ 10 ವರುಷಾನೋ 12 ವರುಷಾನೋ ದೊಡ್ಡವನಿರುತ್ತಿದ್ದ. ಹಾಗಾಗಿ ಗಂಡನನ್ನು ಅರ್ಥ ಮಾಡಿಕೊಳ್ಳುತ್ತಾ ಹೆಂಡತಿ, ಹೆಂಡತಿಯ ವಯಸ್ಸಿನ ಮುಗ್ದತನವನ್ನು ಅರ್ಥಮಾಡಿಕೊಳ್ಳುತ್ತಾ ಗಂಡ, ಒಬ್ಬರೊಳಗೊಬ್ಬರಿದ್ದರು ಗಂಡ ಒಂದು ಬೈದ ಕೂಡಲೇ ನಿನ್ನನ್ನು ನಾನು ಬಿಟ್ಟು ಹೋಗ್ತೇನೆ ಡಿವೋರ್ಸ್ ಕೊಡ್ತೇನೆ ಅಂತ ಆಗ ಯಾವ ಹೆಂಡತಿಗೂ ಗಂಡನನ್ನು ಬಿಟ್ಟುಹೋಗಬೇಕು ಅನ್ನಿಸುತ್ತಿರಲಿಲ್ಲ.

ಯಾಕೆಂದರೆ ಗಂಡ ಪ್ರೀತಿಯಿಂದ ಒಂದಷ್ಟು ಬೈಯೋದು, ರೇಗೋದು ಇದೆಲ್ಲಾ ಸಾಂಸಾರಿಕ ಬದುಕಿನ ಸಹಜ ಚಿತ್ರಗಳೇ ಆಗಿದ್ದವು. ಆದ್ರೆ ಈಗ ನೋಡು ಗಂಡನಿಗೂ ಹೆಂಡತಿಗೂ ಒಂದೇ ವಯಸ್ಸು, ಒಮ್ಮೆಲೇ ಹತ್ತಿರಾಗ್ತಾರೆ. ಅಷ್ಟೇ ವೇಗದಲ್ಲಿ ದೂರವಾಗಿಯೇ ಬಿಡ್ತಾರೆ. ನಾವಿಬ್ಬರೂ ಪರಸ್ಪರ ಅರ್ಥವಾಗ್ಬೇಕು. ಬದುಕು ಹೇಗೆ ಬಂದರೂ ಬರಲಿ. ಗಾಢವಾಗಿ ಅದನ್ನೆಲ್ಲಾ ಸ್ವೀಕರಿಸಿ ಬದುಕಬೇಕು ಅನ್ನೋ ಪರಿಕಲ್ಪನೆಗಳೇ ಇವರಲ್ಲಿಲ್ಲ. ಚ್ಯೂಯಿಂಗ್ ಗಮ್ನಂತೆ ಮೊದಮೊದಲು ರುಚಿಯಾಗಿದ್ದ ಇವರ ಬದುಕು ಚೂರು ಜಗಿಯುವಾಗಲೇ ಸಪ್ಪೆಯಾಗಿ ಹೋಗುತ್ತದೆ ಕೊನೆಗೂ ಉಗಿಯಬೇಕು ಅಂತ ಉಗಿಯುತ್ತಾರೆ. ಸಂಬಂಧಗಳು ಇಲ್ಲಿಗೇ ಮುಗಿಯುತ್ತವೆ.

ಗೆಳೆಯ ದೂರದಲ್ಲಿ ಬಿಮ್ಮಗೇ ನಿಂತಿದ್ದ ಮನೆಯನ್ನು ನೋಡುತ್ತಲೇ ಮಾತು ಮುಂದುವರೆಸಿದ್ದ..

ಆಗಿನವರಂತೆ ಈಗ ಕಷ್ಟ ಪಡಬೇಕಾಗಿಯೂ ಇಲ್ಲ ಎಲ್ಲ ಕೈ ಕೆಳಗೇ ಇದೆ. ಮೊಬೈಲ್ ಕುಟ್ಟಿ ಆನ್ ಲೈನ್ನಲ್ಲಿ ಊರಿಗೆ ಟಿಕೇಟ್ ಬುಕ್ ಮಾಡುತ್ತಾರೆ. ಕ್ಯೂನಲ್ಲಿ ನಿಂತು ಟಿಕೇಟ್ ತೆಗೆದುಕೊಳ್ಳೋದು ನಮಗೆಲ್ಲಾ ಕಷ್ಟ, ಕೈಗೆ ಚೂರು ಮಣ್ಣು ಮೆತ್ತದಂತೆ ಕಷ್ಟ ಪಟ್ಟು ಗಿಡವೊಂದನ್ನು ನೆಡುತ್ತೇವೆ. ಆ ನಂತರ ಅದು ಸತ್ತು ಹೋದರೂ ನೋಡುವಷ್ಟು ವ್ಯವಧಾನ ನಮ್ಮಲ್ಲಿಲ್ಲ. ಮನೆ ಹಳತಾಯಿತು ಅಂತ ನಿನ್ನೆ ಮೊನ್ನೆ ಕಟ್ಟಿದ ಮನೆಯನ್ನು ಜೆಸಿಬಿ ತಂದು ಬೀಳಿಸಿ ಬಿಡುತೇವೆ.

whatsapp-image-2016-10-19-at-07-27-50ನಮ್ಮ ಹಿರಿಯರೂ ಇದೇ ತರ ಮಾಡುತ್ತಾ ಕೂತಿದ್ದರೆ ನಾವಿಂದು ಇಷ್ಟೆಲ್ಲಾ ಕಲಿತು ಸ್ಥಿತಿವಂತಾಗುತ್ತಿದ್ದೇವಾ? ದೇವರಿಗೇ ಗೊತ್ತು.ಆಗ ನಾವೇ ಸ್ಕೂಲಿಗೆ ಹೋಗುತ್ತಿದ್ದೆವು. ನಮ್ಮ ಊರಿನ ಎಲ್ಲಾ ದಾರಿಗಳೂ ನಮಗೆ ಗೊತ್ತಿತ್ತು. ಕಷ್ಟ ಪಡೋದನ್ನು ಚಿಕ್ಕಂದಿನಿಂದಲೇ ಕಲಿಸುತ್ತಿದ್ದರು. ಆದರೆ ಈಗಿನ ಮಕ್ಕಳಿಗೆ ಸಣ್ಣ ಸಣ್ಣ ವಿಷಯಗಳೂ ಅಸಹನೀಯ ಅನ್ನಿಸುತ್ತಿದೆ. ನಡೆಯೋದು, ಕಾಯೋದು, ತಮ್ಮ ದಾರಿ ತಾವೇ ಕಂಡುಕೊಳ್ಳೋದು ಎಲ್ಲಾನೂ.

ಈಗ ಹೇಳು ನಾವು ನಮ್ಮ ಹಿರಿಯರು ಬದುಕಿದಂತೆ ಬದುಕೋದು ಕಷ್ಟ ಅಲ್ಲವಾ?

ಇಷ್ಟು ಹೇಳಿ ಗೆಳೆಯ ಮಾತು ನಿಲ್ಲಿಸಿದ. ಆ ಕಾಲ ಮತ್ತು ಈ ಕಾಲಕ್ಕೆ ವ್ಯತ್ಯಾಸ ಇದೆಯೇನೋ ಹೌದು.ಆದರೆ ಯಾತನಾಮಯ ಬದುಕಿನಲ್ಲೂ ನಮ್ಮ ಹಿರಿಯರಿಗಿದ್ದ ತಾಳ್ಮೆ, ತುಂಬಿದ ದುಃಖದಲ್ಲೂ ಅವರು ಕಂಡುಕೊಳ್ಳುತ್ತಿದ್ದ ಖುಷಿ ಇವೆಲ್ಲದರಿಂದಲೂ ನಾವು ಕಲಿಯೋದು ಸಾಕಷ್ಟಿದೆ. ಪ್ರೀತಿಸುವವರು ನಿಜವಾಗಿಯೂ ನೋಡಿ ಕಲಿಯಬೇಕಾದದ್ದು ರೋಮಿಯೋ ಜುಲಿಯಟ್ಟರನ್ನಲ್ಲ…ಕ್ಷಣ ಕ್ಷಣವೂ ಜೊತೆಯಾಗುತ್ತಾ,ಅಷ್ಟು ವರ್ಷ ಗಾಢವಾಗಿ ಬಾಳಿದ ಅಜ್ಜ ಅಜ್ಜಿಯರನ್ನು..ಜೀವನ ಪ್ರೀತಿಯನ್ನು ಹೇಳಿಕೊಡುವ ಮುಪ್ಪಿನಲ್ಲೂ ಹರೆಯದಂತೆ ತುಂಬಿಕೊಳ್ಳುವ ಅವರ ಹೊಳೆವ ಕಣ್ಣುಗಳನ್ನು.

‍ಲೇಖಕರು Admin

October 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನನ್ನ ಮಾತು ನಿಂತು ಹೋಗಿತ್ತು..

ಅವನು ಹೇಳುತ್ತಲೇ ಇದ್ದ.. ಸುಚಿತ್ ಕೋಟ್ಯಾನ್ ಕುರ್ಕಾಲು  'ನೀನು ಹಾಗಾದ್ರೆ ನನ್ನ ಮದುವೆಯಾಗುದಿಲ್ಲ ಅಲ್ಲಾ... ಆಗುದಿಲ್ಲ ಅಲ್ಲ.........'...

ಇಂದು ನನ್ನ ಅಮ್ಮ ರಿಟೈರ್ ಆಗ್ತಾರೆ..

ಸುಚಿತ್ ಕೋಟ್ಯಾನ್  ಇಂದು ನನ್ನ ಅಮ್ಮ ರಿಟೈರ್ ಆಗ್ತಾರೆ.. ನನ್ನಮ್ಮನ 39 ವರ್ಷದ ಸುಧೀರ್ಘ ವೃತ್ತಿ ಜೀವನಕ್ಕೆ ಅಂಕದ ಪರದೆ ಇಂದು ಸಂಜೆ...

4 ಪ್ರತಿಕ್ರಿಯೆಗಳು

  1. S.p.vijaya Lakshmi

    ನೂರಕ್ಕೆ ನೂರು ಸತ್ಯ….ನಿಮ್ಮ ಲೇಖನ ತುಂಬಾ ಚೆನ್ನಾಗಿದೆ…

    ಪ್ರತಿಕ್ರಿಯೆ
  2. kusuma patel

    Very nice article. Life style has changed & the pace has changed. It is progressive or retrogressive is the question ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: