ಪ್ರೀತಿ ಅರ್ಥ ಪ್ರೀತಿಸುವುದೇ…

ಪ್ರೀತಿಯನ್ನು ಪ್ರೀತಿಸುತ್ತಾ…
– ಪರಶುರಾಮ ಕಲಾಲ್

valentine04_lg

ಪ್ರೀತಿಸುವುದು ತಪ್ಪೇ? ಪ್ರೀತಿ ಎಂದರೆ ಏನು? ಒಂದು ಹುಡುಗ-ಹುಡುಗಿಯ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿದರೆ ಇದರಲ್ಲಿ ತಪ್ಪೇನು? ಇವರ ಮದುವೆಗೆ ಜಾತಿ-ಮತ, ಅಂತಸ್ತುಗಳು ಅಡ್ಡಬಂದರೆ ಅದನ್ನು ಮೀರುವಂತೆ ನೋಡಿಕೊಳ್ಳುವುದು ನಾಗರಿಕ ಸಮಾಜದ ಕರ್ತವ್ಯವಲ್ಲವೇ? ಅದನ್ನು ವಿರೋಧಿಸಿದರೆ ಅದೆಂತಹ ನಾಗರಿಕ ಸಮಾಜ?

’ಪ್ರೀತಿ ಅಂದರೆ ಅದೊಂದು ಉತ್ಪಾದನಾ ವಸ್ತುವಿನ ಅಭಿವ್ಯಕ್ತಿ ಇದ್ದಂತೆ
ಅದಕ್ಕೆ ಹೊಣೆಗಾರಿಕೆ, ಜವಾಬ್ದಾರಿ ಎಂಬೆಲ್ಲಾ ಅಮೂಲ್ಯ ಅರ್ಥಗಳಿವೆ’ ಎನ್ನುತ್ತಾನೆ ಮಾನವ ಶಾಸ್ತ್ರಜ್ಞ ಎರಿಕ್ ಫ್ರಾಮ್.

ಜಾಗತೀಕರಣದಲ್ಲಿ ಸಿಲುಕಿರುವ ನಾವುಗಳ ಎಲ್ಲವನ್ನೂ ವಾಣಿಜ್ಯಭಾಷೆಯಲ್ಲಿ ಅರ್ಥೈಸಿಕೊಳ್ಳುತ್ತಿರುವಾಗ ಮಾನವೀಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಮನುಷ್ಯ, ಮನುಷ್ಯರ ನಡುವೆ ದೊಡ್ಡ ಕಂದಕ ಉಂಟಾಗುತ್ತದೆ. ಸುಖ ಎನ್ನುವುದು ಹಣದಿಂದ ಕೊಂಡು ಕೊಳ್ಳುವ ’ಸರಕಾಗಿ’ ಮಾರ್ಪಾಡುತ್ತದೆ. ಇಂತಹ ಸಂದರ್ಭದಲ್ಲಿ ಪಾಪ ಒಂದು ಎಳೆಯ ಪ್ರೀತಿ ಬದುಕುವುದುಂಟೆ? ಪ್ರೀತಿ ಉಸಿರುಗಟ್ಟಿ ಅತ್ತ ಸಾಯದೆ, ಇತ್ತ ಬದುಕದೆ ಏದುಸಿರು ಬಿಡುತ್ತಾ ’ಪಂಜರದ ಗಿಳಿ’ಯಾಗಿ ಅರ್ತನಾದ ಮಾಡುತ್ತದೆ. ಶಬ್ದಮಾಲಿನ್ಯದಲ್ಲಿ ಸಿಲುಕಿದವರಿಗೆ ಈ ಧ್ವನಿ ಕೇಳುಸುತ್ತಲೇ ಇಲ್ಲ. 

ಇಂತಹ ಸಮಾಜದಲ್ಲಿ ಒಂದು ಹುಡುಗ-ಹುಡುಗಿ ಪ್ರೀತಿಸುವುದು ದೊಡ್ಡ ಅಪರಾಧವಾಗಿ ಕಂಡು, ಅದನ್ನು ’ಸ್ವೆಚ್ಛಾಚಾರ’ ಎಂದೇ ಬಣ್ಣಿಸುವ ವಾತಾವರಣ ಸೃಷ್ಠಿಯಾಗಿ ಬಿಡುತ್ತದೆ.
ಇದರ ತಾರಕರೂಪವೇ ಅನ್ಯ ಧರ್ಮಿಯರ ಒಂದು ಹುಡುಗ-ಹುಡುಗಿ ಪರಸ್ಪರ ಸ್ನೇಹ ಬೆಳೆಸುವುದು ’ಅಸಭ್ಯ’ ಎನ್ನುವ ಮನಸ್ಥಿತಿಗೆ ಕಾರಣವಾಗುತ್ತದೆ. 
ಕರಾವಳಿಯಲ್ಲಿ ಇವತ್ತು ನಡೆಯುತ್ತಿರುವುದು ಇದೇ. 

ಪ್ರೀತಿಯನ್ನು ಸ್ವೇಚ್ಛಾಚಾರ, ಸ್ನೇಹವನ್ನು ಅಸಭ್ಯ ಎಂದು ಬಗೆಯುವ ಮಂದಿ ಅದರ ರಕ್ಷಣೆಗಾಗಿ ಸೇನೆ ಕಟ್ಟಿಕೊಂಡು ಅಂತವರನ್ನು ಹಿಡಿದು ’ಬುದ್ಧಿ ಕಲಿಸುತ್ತಾರೆ, ’ ’ಸಂಸ್ಕೃತಿಯ ಪಾಠ’ ಹೇಳಿಕೊಡುತ್ತಾರೆ, ಪ್ರೀತಿಸುವುದು ಗೊತ್ತಿಲ್ಲದ ಜನ.

ಜಗತ್ತಿನ ಬೇರೆ ಯಾವುದೇ ಭಾಷೆಗಳಲ್ಲಿ ಬರದಷ್ಟು ಪ್ರೀತಿ-ಪ್ರೇಮದ ಕಥಾವಸ್ತು ಹೊಂದಿದ ಚಲನಚಿತ್ರಗಳು ಭಾರತದಲ್ಲಿ ಬಂದಿವೆ. ಈಗಲೂ ಬರುತ್ತಿವೆ. ’ಪರಸ್ಪರ ಪ್ರೇಮಿಸುವ ಹೃದಯಗಳು, ಇವರಿಬ್ಬರೂ ನಾಯಕ-ನಾಯಕಿಯರು, ಅವರನ್ನು ಬೇರ್ಪಡಿಸಲು ಯತ್ನಿಸುವವರು ಅವರೆಲ್ಲಾ ಖಳನಾಯಕರು’ ಇದೇರೀತಿಯ ಅಸಂಖ್ಯಾತ ಚರ್ವಿತಚರ್ವಿಣ ಕಥೆಗಳು.

ಪ್ರೀತಿಸಲಾಗದ ಸಮಾಜವೊಂದರಲ್ಲಿ ಪ್ರೀತಿಸುವ ಕನಸು ಯಾವತ್ತೂ ಆಶಯವಾಗಿಯೇ ಉಳಿದಿರುವುದರಿಂದ ಇಂತಹ ಕಥಾ ಚಿತ್ರಗಳು ಯಾವತ್ತಿಗೂ ಇಲ್ಲಿ ಜೀವಂತ ಇರುತ್ತವೆ. ಇದನ್ನೇ ನಮ್ಮ ಸಿನಿಮಾಗಳು ಬಂಡವಾಳ ಮಾಡಿಕೊಂಡಿವೆ.

ಪ್ರೀತಿಸಲು ಸಾಧ್ಯವಾಗದ ಸಮಾಜದಲ್ಲಿ ಕಾಮ ಮಾತ್ರ ಹುಚ್ಚೆದ್ದು ಕುಣಿಯುತ್ತದೆ. ಇಂತಹ ಹುಚ್ಚೆ ದೇವದಾಸಿ ಪದ್ಧತಿಯನ್ನು ಇನ್ನೂ ಜೀವಂತವಾಗಿಟ್ಟಿದೆ. ಏಷ್ಯಾ ಖಂಡದಲ್ಲಿಯೇ ಭಾರತದಲ್ಲಿರುವಷ್ಟು ಕೆಂಪು ದೀಪಗಳ ಏರಿಯಾಗಳು ಬೇರೆಲ್ಲೂ ಇಲ್ಲ. ಪ್ರತಿನಿಮಿಷಕ್ಕೊಮ್ಮೆ ಆಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ನಡೆಯುತ್ತಲೆ ಇದೆ. ಇವೆಲ್ಲಾ ಬಂಧಿಸಿರುವ ಸಂಕೋಲೆಗಳನ್ನು ಮುರಿಯಲು ಕಂಡು ಕೊಂಡ ಅಡ್ಡಮಾರ್ಗಗಳು ಅಥವಾ ಅಡ್ಡ ಪರಿಣಾಮಗಳು. 

ನಮ್ಮ ಪುರಾಣದ ಅನೇಕ ಕಥಾನಾಯಕರು ಅಂತರ್ಜಾತಿಯ ವಿವಾಹವಾಗಿದ್ದಾರೆ. ವಿವಾಹದಲ್ಲೂ ಗಂಧರ್ವ ವಿವಾಹ ಸೇರಿದಂತೆ ಅನೇಕ ಬಗೆಯ ವಿವಾಹಗಳು ಇವೆ. ಋಷಿಪುಂಗವರಂತೂ ತಮ್ಮ ತಪಸ್ಸನ್ನು ರಂಭಾ, ಊರ್ವಶಿ, ಮೇನಕೆಯರು ಬಂದು ಕೆಡಸಬೇಕೆಂದೆ ತಪಸ್ಸಿಗೆ ಕುಳಿತಿದ್ದಾರೆ ಎಂದು ಭಾವಿಸುವಷ್ಟು ರಂಜಕ ಕಥೆಗಳಿವೆ. 
ವ್ಯಾಲೆಂಟೈನ್ ಡೇ ನಮ್ಮ ಸಂಸ್ಕೃತಿ ಅಲ್ಲ, ವಾದಕ್ಕಾದರೂ ಒಪ್ಪಿಕೊಳ್ಳೋಣ. ನಮ್ಮ ಸಂಸ್ಕೃತಿ ಯಾವುದು? ಭಾರತೀಯ ಸಂಸ್ಕೃತಿ ಎನ್ನುವಂತಾದ್ದು ಏನಾದರೂ ಇದೆಯೇ? ಬರ್ತಡೇ ಆಚರಿಸುವುದು ಯಾವ ಸಂಸ್ಕೃತಿ? ಪ್ಯಾಂಟ್, ಷರ್ಟು ಹಾಕಿಕೊಳ್ಳುವುದು ಯಾವ ಸಂಸ್ಕೃತಿ? ಸಂಸ್ಕೃತಿ ಎನ್ನುವುದು ಹರಿಯುವ ನೀರಿನಂತೆ ಹೊಸದನ್ನು ಸ್ವೀಕರಿಸುತ್ತಲೇ ಹೋಗುವ ಪರಿಯದು. ಒಂದು ಸಂಸ್ಕೃತಿ ಹೊರಗಿನದನ್ನು ಸ್ವೀಕರಿಸಿದರೆ ಅದು ಸಾಯುತ್ತದೆ ಎನ್ನುವುದಾದರೆ ನಾನು ಅದು ಸತ್ತು ಹೋಗಲಿ ಎಂದೇ ಹೇಳುತ್ತೇನೆ. ಅಷ್ಟೊಂದು ಪೊಳ್ಳಾದ, ಶಕ್ತಿಹೀನ ಸಂಸ್ಕೃತಿ ನಮಗೆ ಬೇಕಿಲ್ಲ. 

ಐದುಸಾವಿರ ವರ್ಷದ ಇತಿಹಾಸವಿರುವ ದೇಶ ಭಾರತ. ಇಲ್ಲಿ ಸಂಸ್ಕೃತಿ, ಪರಂಪರೆ ಬೆಳೆದಿರುವುದು ಕೊಡುಕೊಳ್ಳುವಿಕೆಯ ಮೂಲಕವೇ. ಇದನ್ನು ಅರ್ಥ ಮಾಡಿಕೊಂಡರೆ ಮಾತ್ರ ನಾವು ಸಂಸ್ಕೃತಿಯನ್ನು ನಿಜವಾದ ಅರ್ಥದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ. ಅಂತಹ ಜನಪರ ಸಂಸ್ಕೃತಿಯೊಂದರ ವಾರುಸುದಾರರಾದ ನಾವುಗಳು ಒಂದು ವ್ಯಾಲೆಂಟೈನ್ ಡೇಗೆ ಹೆದರುವ ಅಗತ್ಯವಿಲ್ಲ. 

’ಪ್ರೀತಿಯೇ ನಿನ್ನನ್ನು ನಾನು ಪ್ರೀತಿಸುತ್ತೇನೆ. ಪ್ರೀತಿಸುತ್ತಲೇ ಹೋಗುತ್ತೇನೆ. ಪ್ರೀತಿಯೇ ನನಗೆ ಗಾಢ ನಂಬಿಕೆ ನೀಡು, ಜವಾಬ್ದಾರಿ, ಹೊಣೆಗಾರಿಕೆ ಹೆಚ್ಚು ಮಾಡು, ಪ್ರೀತಿಸುವ ಸುಖ ಉಣಿಸು’ ಎಂದು ಪ್ರೀತಿಯನ್ನು ಪ್ರೀತಿಸುತ್ತಾ..

(‘ನಾವು-ನಮ್ಮಲ್ಲಿ’ ಬ್ಲಾಗಿನಲ್ಲಿ ’ಕಲಾಲ್ ಕಾಲಂ’ನಲ್ಲಿ ಇದು ಪ್ರಕಟವಾಗಿದೆ)

‍ಲೇಖಕರು avadhi

February 9, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. Ajay

  ಒಂದು ಸಂಸ್ಕೃತಿ ಹೊರಗಿನದನ್ನು ಸ್ವೀಕರಿಸಿದರೆ ಅದು ಸಾಯುತ್ತದೆ ಎನ್ನುವುದಾದರೆ ನಾನು ಅದು ಸತ್ತು ಹೋಗಲಿ ಎಂದೇ ಹೇಳುತ್ತೇನೆ. ಅಷ್ಟೊಂದು ಪೊಳ್ಳಾದ, ಶಕ್ತಿಹೀನ ಸಂಸ್ಕೃತಿ ನಮಗೆ ಬೇಕಿಲ್ಲ.

  idu haLE dialogue Parashuraam, hosatenadru hELi.

  ಪ್ರತಿಕ್ರಿಯೆ
 2. kaviswara shikaripura

  lekhana thumba samoyochithavagide… manushyathvada matthondu mukhave preethi adakke samsruthi adda barabaaradu.. prema-kathegalige koneyunte Radha-madhavaroro thanaka..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: