ಪ್ರೀತಿ ಇದ್ದರೆ ಅದು ಉತ್ಕಟವಾಗಿ ಮಾತ್ರ ಇರಲು ಸಾಧ್ಯ ಅನ್ನಿಸಿತು…ಪ್ರತಿಭಾ ಅ೦ತರ೦ಗ

ಅಪ್ಪಟ ಮನುಷ್ಯನಿಂದ ಮಾತ್ರ ಬರೆಸಿಕೊಳ್ಳಬಹುದಾದ ಅಂತರಗಂಗೆ ಈ ಜ್ವರ ಇಳಿಯುವ ಮೊದಲು ಚೆನ್ನಾಗಿ ಬೆವರಬೇಕು. ಒಳಗಿನದ್ದೆಲ್ಲ ಹೊರಗೆ ಬರಬೇಕು – ಪ್ರತಿಭಾ ನಂದಕುಮಾರ್ ಸತ್ಯ ಹೇಳಬೇಕೆಂದರೆ ನನಗೆ ಆತ್ಮಕತೆಗಳನ್ನು ಓದುವಾಗ ಒಂದು ಬಗೆಯ ಪಾಪಪ್ರಜ್ಞೆ ಕಾಡುತ್ತದೆ. ಕೆಲದಿನಗಳ ಹಿಂದೆ ‘ಆಡಾಡತ ಆಯುಷ್ಯ’ ಕೈಯಲ್ಲಿ ಹಿಡಿದಾಗಲೂ ಹಾಗೆಯೇ ಆಗಿತ್ತು. ಅದಕ್ಕೂ ಮೊದಲು ರಶೀದಿ ಟಿಕೇಟು ಮತ್ತು ಗಾಂಧಿ ಕ್ಲಾಸು ಓದುವಾಗಲೂ ತೀಕ್ಷ್ಣವಾಗಿ ಕಂಪಿಸಿದ್ದೆ. ಅದೇನೋ, ಕಥೆ ಕವಿತೆ ಕಾದಂಬರಿ ನಾಟಕಗಳನ್ನು ಓದಬೇಕಿರುವಾಗ ಇರುವ ನಿರಮ್ಮಳ ಉತ್ಸಾಹ ಆತ್ಮಕತೆಯೊಂದನ್ನು ಕೈಯಲ್ಲಿ ಹಿಡಿದಾಗ ಇರುವುದಿಲ್ಲ. ಅಥವಾ ಉತ್ಸಾಹದ ಜೊತೆಯಲ್ಲಿ ಇನ್ನೊಬ್ಬರ ಬದುಕಿನ ಕುರಿತಾಗಿ ಕುತೂಹಲವೂ ಎಲ್ಲಿ ನನ್ನ ಓದಿನ ಆಸಕ್ತಿಯ ಜೊತೆ ಸೇರಿಕೊಂಡುಬಿಡುತ್ತದೋ ಅಂತ ದುಗುಡ ನನಗೆ. ಬಚ್ಚಲ ಕಿಂಡಿಯಿಂದ ಇಣುಕಿ ನೋಡಿದ ಹಾಗೆ, ತಂಗಿಯ ನೋಟ್ಬುಕ್ಕಿನ ಕೊನೆಯ ಪೇಜನ್ನು ಕದ್ದು ನೋಡಿದ ಹಾಗೆ, ಪಪ್ಪನ ಹಳೆಯ ಡೈರಿಯನ್ನು ಪಟಪಟನೆ ತಿರುವಿ ಹಾಕಿದ ಹಾಗೆ… ಕೊನೆಗೊಂದು ದಿನ ಅಮ್ಮನ ಮಡಿಲಲ್ಲಿ ತಲೆಯಿಟ್ಟು ಅತ್ತಿದ್ದೆ… ಅಮ್ಮಾ, ಪ್ಲೀಸ್ ನೀನು ಆತ್ಮಕತೆ ಬರೆಯುವುದಿಲ್ಲ ತಾನೆ? ಅಂತ. ಆದರೆ ಪ್ರತಿಭಾರ ‘ಅನುದಿನದ ಅಂತರಗಂಗೆ’ ಓದಿಯಾದ ಮೇಲೆ ಆತ್ಮಕತೆಗಳ ಬಗ್ಗೆ ನನಗಿದ್ದ ಆತಂಕ ದೂರವಾಯಿತು. ಅವರು ಮಾತನಾಡುವ ಕಪ್ಪೂ ಅಲ್ಲದ, ಸ್ವಚ್ಚ ಬಿಳುಪೂ ಅಲ್ಲದ ಬೂದು ಬಣ್ಣದ ಜಗತ್ತಿನ ಬಗ್ಗೆ ಆದರ ಮೂಡುತ್ತದೆ. ಕೃತಿ ಓದುತ್ತ ನನಗೆ ಪ್ರತೀ ಸಂವೇದನಾಶೀಲ ಹೆಣ್ಣಿನಲ್ಲೂ ಪ್ರತಿಭಾ ಇದ್ದಾರೆ ಅಂತನ್ನಿಸಿತು. ಪ್ರೀತಿ ಇದ್ದರೆ ಅದು ಉತ್ಕಟವಾಗಿ ಮಾತ್ರ ಇರಲು ಸಾಧ್ಯ ಅನ್ನಿಸಿತು. ಇಲ್ಲದಿದ್ದವರು ತಮ್ಮ ಪಾಡಿಗೆ ತಾವು ಧಾರಾವಾಹಿಗಳನ್ನೋ, ಬಗೆಬಗೆಯ ಭಕ್ಷ್ಯಗಳನ್ನೋ, ಚಿನ್ನದ ಆಭರಣಗಳನ್ನೋ ಮೋಹಿಸಿಕೊಂಡು ಇದ್ದುಬಿಡಬಲ್ಲರು. ಓಯಾಸಿಸ್ನಂತಿರುವ ಪ್ರೀತಿಯ ಹಂಬಲವನ್ನು ಪ್ರತೀ ಸಂವೇದನಾಶೀಲ ಹೆಣ್ಣೂ ಹಿಂಬಾಲಿಸಿಕೊಂಡೇ ಇರುತ್ತಾಳೆ. ಪ್ರತಿಭಾ ಹೇಳುವ ಯಾರಾದರೂ ನನ್ನನ್ನು ನನಗಾಗಿ ಪ್ರೀತಿಸಲಿ, ನನ್ನನ್ನು ಬಯಸಲಿ ಎಂಬ ಹುಚ್ಚು ಹಾರೈಕೆ ಎಂಬುದು (ಹೆಣ್ಣಿನದಷ್ಟೇ ಎಂದರೆ ಅಪೂರ್ಣವಾಗಬಹುದು) ಪ್ರತೀ ಮನುಷ್ಯನ ಮನದಾಳದ ಸತ್ಯವಲ್ಲದೇ ಮತ್ತೇನು. ಆದರದನ್ನು ಹೇಳಿಕೊಳ್ಳಲು ಒಬ್ಬ ಪ್ರತಿಭಾಗೆ ಮಾತ್ರ ಸಾಧ್ಯ ಎನ್ನುವುದೂ ಕೂಡ ಅಷ್ಟೇ ಸತ್ಯ. ಮೊನ್ನೆ ಉಪೇಂದ್ರ ನಿದರ್ೇಶನದ ‘ಎ’ ಸಿನಿಮಾವನ್ನು ಟೀವಿಯಲ್ಲಿ ಹಾಕಿದ್ದರು. ಅಲ್ಲಿ ನಾಯಕ ನಾಯಕಿಯ ಮೇಲೆ ಕೈ ಮಾಡಿ ಹಿರೋಯಿಸಂ ಮೆರೆಯಬೇಕಾದರೆ ಒಬ್ಬ ಬಂದು ನಾಯಕನ ಕೈಕುಲುಕಿ ಹೇಳುತ್ತಾನೆ ಈ ಬೇವಸರ್ಿ ರಂಡೆಯರನ್ನು ಎಲ್ಲಿಡಬೇಕೋ ಅಲ್ಲೇ ಇಡಬೇಕು ಸಾರ್ ಎಂದು. ಈ ಚಿತ್ರವನ್ನು ಚಿಕ್ಕಂದಿನಲ್ಲೊಮ್ಮೆ ನೋಡಿದ್ದರೂ ಈಗ ಇದೇ ಮೊದಲು ನೋಡಿದವಳಂತೆ ಆ ಒಂದೇ ಡೈಲಾಗಿನ ಮರ್ಮಕ್ಕೆ ಬೆಚ್ಚಿಬಿದ್ದಿದ್ದೆ. ಆ ಒಂದೇ ಡೈಲಾಗಿಗೆ ಇಡೀದಿನ ವಿಚಲಿತಳಾಗಿಬಿಟ್ಟಿದ್ದೆ. ಇಂಥ ಸಂದರ್ಭಗಳು ಪ್ರತಿಭಾ ಅಂತರಗಂಗೆಯಲ್ಲೂ ಸಾಕಷ್ಟಿವೆ. ತುಂಬಾ ಗಟ್ಟಿ ಹೆಂಗಸು ಅನ್ನಿಸಿಕೊಳ್ಳುವ ಅಪಾಯವೆಂದರೆ ತೀರಾ ಬೇಕಾದ ಸಂದರ್ಭದಲ್ಲೂ ಸಾಂತ್ವಾನ ಸಿಗದೇ ಹೋಗುವುದು ಎಂಬುದೂ ಅವುಗಳಲ್ಲಿ ಒಂದು. ಸ್ತ್ರೀವಾದದ ಗದ್ದಲ, ಕ್ಲೀಷೆ ಮೀರಿ ಆ ಸಂದರ್ಭಗಳ ನಿರೂಪಣೆಯನ್ನು ನಿಶ್ಚಲವಾಗಿ ನಿಭಾಯಿಸಿರುವುದೇ ಅವರ ಹಿರಿಮೆ. ಪ್ರತಿಭಾ ಅವರು ‘ಆಸೆಯೇ ದುಃಖಕ್ಕೆ ಮೂಲ’ ನುಡಿಯನ್ನು ಮುಂದುವರೆಸುತ್ತ ಹೇಳುತ್ತಾರೆ ಆಸೆಯಿದ್ದರೆ ದುಃಖವಾದರೂ ಇರುತ್ತದೆ. ಆಸೆಯೇ ಇಲ್ಲದಿದ್ದರೆ! ಆಸೆಯೂ ಇಲ್ಲ, ದುಃಖವೂ ಇಲ್ಲ. ಏನೂ ಇಲ್ಲ. ಇಂಥ ಮಾತುಗಳನ್ನು ಅಪ್ಪಟ ಮನುಷ್ಯ ಮಾತ್ರ ಹೇಳಲು ಸಾಧ್ಯ. ದೇವರಾಗುವ ಹಂಬಲ ಇಲ್ಲದ, ದೆವ್ವವೂ ಅಲ್ಲದ ಅಪ್ಪಟ ಮನುಷ್ಯ ಮಾತ್ರ. ಮತ್ತೆ ನನ್ನ ಬದುಕನ್ನು ಬಾಳುವ ಅವಕಾಶ ಸಿಕ್ಕಿದರೆ ನಾನು ಹೀಗೆಯೇ ಬದುಕಲು ಇಚ್ಚಿಸುತ್ತೇನೆಯೇ ಹೊರತು ಯಾವ ರೀತಿಯಲ್ಲೂ ಅದನ್ನು ಬದಲಿಸಲು ಬಯಸುವುದಿಲ್ಲ ಎಂದು ದಿಟ್ಟವಾಗಿ ವ್ಯಕ್ತಪಡಿಸಲು ಮುನ್ನುಡಿಯಲ್ಲಿ ಅನಂತಮೂತರ್ಿಯವರು ಹೇಳಿದಂತೆ ಆತ್ಮದ ಪಾವಿತ್ರ್ಯತೆ ಕಾದುಕೊಂಡ ಜೀವವೊಂದಕ್ಕೆ ಮಾತ್ರ ಸಾಧ್ಯ. ಈ ಮಾತು ಪ್ರತಿಭಾರ ಅಂತರಂಗದ ಬದುಕಿನ ಬಗ್ಗೆ ತೀವ್ರ ಗೌರವವನ್ನು ಮೂಡಿಸುತ್ತದೆ. ಅಲ್ಲದೇ ಪ್ರತಿಭಾರ ಕವನಗಳಂತೆಯೇ ಆತ್ಮಕತೆಯಲ್ಲಿ ಕೂಡ ಅವರ ಮೊನಚು ಹಾಸ್ಯಪ್ರಜ್ಞೆ ಕೆಲಸಮಾಡಿ ಈ ಕೃತಿಗೊಂದು ಮೆರಗು ತಂದಿದೆ. ಈ ಬರಹವನ್ನು ಅವರದೇ ಪದ್ಯದ ಒಂದು ಸಾಲಿನ ಮೂಲಕ ಮುಗಿಸುತ್ತೇನೆ. ಹಾಡಿದರೆ ತಾಯಿ, ಹರಸಿದರೆ ದೇವಿ ಒಲಿದರೆ ರತಿ, ಕೆರಳಿದರೆ ಕಾಳಿ ಅಷ್ಟೇ. ಪ್ರತಿಭಾಗೆ ಪ್ರತಿಭಾನೇ ಸಾಟಿ. ಅವರ ಕವಿತೆಗಳ ಹಾಗೆ. ಇಂಥ ಅಪರಿಮಿತ ಜೀವನೋತ್ಸಾಹ ಸೂಸುವ ಉತ್ಕಟ ಆತ್ಮಕತೆಯನ್ನು ಅವರಲ್ಲದೇ ಇನ್ಯಾರೂ ಬರೆಯಲು ಸಾಧ್ಯವಿಲ್ಲ ಎಂಬುದನ್ನು ಮಾತ್ರ ಪ್ರಾಮಾಣಿಕಗಾಗಿ ಹೇಳಬಲ್ಲೆ.   ಕಾವ್ಯಾ ಕಡಮೆ  ]]>

‍ಲೇಖಕರು G

June 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

4 ಪ್ರತಿಕ್ರಿಯೆಗಳು

 1. Padmanabh bhat, shevkar

  ‘ಈ ಬದುಕನ್ನು ಮತ್ತೆ ಬಾಳಲು ಸಿಕ್ಕರೆ ಹೀಗೆ ಬದುಕುತ್ತೇನೆಯೇಹೊರತು ಯಾವ ಬದಲಾವಣೆಯನ್ನೂ ಮಾಡುವುದಿಲ್ಲ’
  ಬಹುಶಃ ಬದುಕಿನ ನಿಜದ ಸಾರ್ಥಕತೆ ಮತ್ತು ಯಶಸ್ಸಿನ ಮಾಪನ ಇದೇ ಇರಬೇಕು.

  ಪ್ರತಿಕ್ರಿಯೆ
 2. ರವಿ ಮುರ್ನಾಡು, ಕ್ಯಾಮರೂನ್

  ಇಲ್ಲಿ ಕೆಲವಷ್ಟು ಆಲೋಚಿಸಬೇಕು ಅನ್ನಿಸಿತು. ಅದು ಹೆಣ್ಣು ಮತ್ತು ಗಂಡು ಎರಡಕ್ಕೂ ಅನ್ವಯಿಸುವ೦ತಹದ್ದು.
  “ನಾನು ಪ್ರೀತಿಸಬೇಕು” ಅನ್ನುವ ಭಾವದ ಧಾರಾಳತನ
  ಇನ್ನೊಂದು ” ನನ್ನನ್ನು ಪ್ರೀತಿಸಬೇಕು” ಅನ್ನುವ ಅಪ್ಪಟ ಸ್ವಾಭಿಮಾನ.
  ಬಿಡಿಸಿದಂತೇ ಮತ್ತೆ ಮತ್ತೆ ಸಿಕ್ಕುಗಳಾಗುವ ಬಿಡಿಸಲಾಗದ ಗಂಟುಗಳು…ಹುಡುಕಲು ಹೋದ ಅದೇಷ್ಟೋ ಮನಸ್ಸುಗಳು ಮತ್ತೆ ಸಿಕ್ಕುಗಳಾದವು.
  ಕೇರಳ ಮಲಯಾಳಂ ಕಥೆಗಾರ್ತಿ ಮಾದವಿ ಕುಟ್ಟಿ ಇಂತಹ ಗಂಡು- ಹೆಣ್ಣುಗಳ ನಡುವಿನ ಕಂದಕ ಹಂದರದಲ್ಲಿ ನೇರವಾಗಿ ಮಾತಾಡುತ್ತಾರೆ. ಅದರ ಒಂದಂಶ ಪ್ರತಿಭಾ ಅವರ “ಅಂತರಗಂಗೆ”ಯಲ್ಲಿ ತೇಲಿ ಹೋದಂತೆ ಅನ್ನಿಸಿತು. ಪುಸ್ತಕ ಪೂರ್ಣ ಓದಿದಾಗ ಇನ್ನೊಂದಷ್ಟು ಬಿಡಿಸಬಹುದು ಅನ್ನಿಸಿತು. ಅದು ಅಪ್ಪಟ ಮನುಷ್ಯರು ಅನ್ನುವುದಕ್ಕಿಂತ ಅನುಭವಕ್ಕೆ ಸಿಕ್ಕಿಸಿಕೊಂಡವರ ತೆರೆದ ಮನಸ್ಸಿನ ಸ್ಫೋಟ ಅಂದರೆ ಸರಿಯೆನಿಸುತ್ತದೆ. ನಾವು ಓದಿದ ಎಲ್ಲಾ ಹೊಸತನದ ಬರಹಗಳನ್ನು ಅದಕ್ಕಾಗಿ ಮತ್ತೆ ಮತ್ತೆ ಓದುತ್ತೇವೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: