‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

‘ಅರೇ… ಹೋದ… ಹೋದ… ಹೋಗೇಬಿಟ್ಟ…’

ಅಂದು ನಾನಿದ್ದ ಕ್ಯಾಬ್ ಚಲಾಯಿಸುತ್ತಿದ್ದ ಸರ್ದಾರ್ಜಿ ಸ್ಟೇರಿಂಗ್ ತಿರುಗಿಸುತ್ತಲೇ ಹೀಗೆ ಉದ್ಗರಿಸುತ್ತಿದ್ದರು. ಆಗಿದ್ದಿಷ್ಟೇ. ಅದು ದಿಲ್ಲಿಯ ಒಂದು ಭಾಗ. ಮಹಾನಗರಿಯ ಜನನಿಬಿಡ ರಾಷ್ಟ್ರೀಯ ಹೆದ್ದಾರಿಯು ಎಂದಿನಂತೆ ಲವಲವಿಕೆಯಿಂದಿತ್ತು. ಇಂತಿಪ್ಪ ಸಾಮಾನ್ಯ ದಿನವೊಂದರಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರನ್ನು ತಡೆಯಲು ಟ್ರಾಫಿಕ್ ಪೋಲೀಸಪ್ಪನೊಬ್ಬ ರಸ್ತೆಗೆ ಅಡ್ಡಲಾಗಿ ನಿಂತಿದ್ದ. ಆದರೆ ಇತ್ತ ಕಾರು ನಿಲ್ಲಿಸುವ ಯಾವ ಉದ್ದೇಶವನ್ನೂ ಹೊಂದಿಲ್ಲದ ಬೇಜವಾಬ್ದಾರ ಚಾಲಕ, ರಸ್ತೆಗೆ ಅಡ್ಡಲಾಗಿ ನಿಂತಿದ್ದ ಟ್ರಾಫಿಕ್ ಪೋಲೀಸಪ್ಪನನ್ನೂ ಲೆಕ್ಕಿಸದೆ ಭಂಡಧೈರ್ಯದಿಂದ ಮುಂದಕ್ಕೆ ಸಾಗಿದ್ದ. ತನ್ನೆಡೆಗೆ ಯಮನಂತೆ ಬರುತ್ತಿರುವ ವಾಹನವು ನಿಲ್ಲುವ ಸಾಧ್ಯತೆಯನ್ನು ಕಾಣದ ಪೋಲೀಸ್ ಸಿಬ್ಬಂದಿ ಕೊನೆಯ ಕ್ಷಣದಲ್ಲಿ ಹಿಂದಡಿಯಿಟ್ಟಿದ್ದರು. ಈ ಗೊಂದಲದಲ್ಲಿ ಕಣ್ಣೆದುರಿಗಿದ್ದ ವಾಹನವು ಕ್ಷಣಾರ್ಧದಲ್ಲಿ ಮರೆಯಾಗಿದ್ದರೆ, ಪೋಲೀಸ್ ಸಿಬ್ಬಂದಿ ಪವಾಡಸದೃಶ ರೀತಿಯಲ್ಲಿ ಸಾವಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದರು.

ಈ ಘಟನೆಯಿಂದಾಗಿ ನನಗೆ ಥಟ್ಟನೆ ಫ್ಲಫೀ ನೆನಪಾಗಿದ್ದ. ಅಮೆರಿಕನ್ ನಟನೂ, ಬಹುಬೇಡಿಕೆಯ ಹಾಸ್ಯ ಕಲಾವಿದನೂ ಆಗಿರುವ ಗೇಬ್ರಿಯಲ್ ಇಗ್ಲೇಷಿಯಾಸ್ ‘ಫ್ಲಫೀ’ ಎಂಬ ಹೆಸರಿನಲ್ಲಿ ಖ್ಯಾತರಾಗಿರುವವರು. ಫ್ಲಫೀ ದಿಲ್ಲಿಗೆ ಬಂದಿದ್ದಾಗ ಘಟನೆಯೊಂದು ನಡೀತಂತೆ.

ಫ್ಲಫೀಗೆ ಅಂದು ತುರ್ತಾಗಿ ದಿಲ್ಲಿಯ ವಿಮಾನ ನಿಲ್ದಾಣವನ್ನು ತಲುಪಬೇಕಿತ್ತು. ಹೊರಟಿದ್ದೇ ತಡವಾಗಿದ್ದರಿಂದ ತಳಮಳದಲ್ಲಿದ್ದ ಆತ ಲೋಕಲ್ ಟ್ಯಾಕ್ಸಿಯೊಂದನ್ನು ಹಿಡಿದು ”ಆದಷ್ಟು ಬೇಗ ನನ್ನನ್ನು ಏರ್ ಪೋರ್ಟ್ ತಲುಪಿಸಪ್ಪಾ” ಎಂದು ಚಾಲಕನಲ್ಲಿ ಕೇಳಿಕೊಂಡಿದ್ದರು. ಆಯಿತೆಂದು ಒಪ್ಪಿಕೊಂಡ ಕ್ಯಾಬ್ ಚಾಲಕ ”ನೀವು ಆರಾಮಾಗಿರಿ ಸಾಬ್… ನಿಮ್ಮನ್ನು ಸಮಯಕ್ಕೆ ಸರಿಯಾಗಿ ಏರ್ ಪೋರ್ಟ್ ತಲುಪಿಸುವ ಜವಾಬ್ದಾರಿ ನನ್ನದು”, ಎಂದು ಅಭಯದಾನವನ್ನಿತ್ತಿದ್ದ.

ಹೀಗೆ ಗಡಿಬಿಡಿಯಿಂದ ವಿಮಾನನಿಲ್ದಾಣದತ್ತ ಸಾಗುತ್ತಿರುವಾಗಲೇ ಫ್ಲಫೀ ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದರು. ಅದೇನೆಂದರೆ ಶಹರದ ಒಂದು ಭಾಗದಲ್ಲಿ ಟ್ರಾಫಿಕ್ ಸಿಗ್ನಲ್ಲಿನ ಕೆಂಪು ದೀಪಕ್ಕೆ ಕ್ಯಾರೇ ಎನ್ನದೆ ಕಾರುಚಾಲಕ ವೇಗವಾಗಿ ಸಾಗಿದ್ದ. ಇದನ್ನು ನೋಡಿದ ಫ್ಲಫೀಗೆ ಜೀವವೇ ಬಾಯಿಗೆ ಬಂದಂತಾಗಿತ್ತು. ಯಾಕಪ್ಪಾ ಹೀಗೆ ಮಾಡಿದೆ ಎಂದು ಕೇಳಿದರೆ ”ನಿಮಗೆ ಅರ್ಜೆಂಟಿತ್ತಲ್ವಾ ಸಾರ್… ಅಲ್ಲಿ ಟ್ರಾಫಿಕ್ ಪೋಲೀಸರು ಬೇರೆ ಇರಲಿಲ್ಲ. ಅದಕ್ಕೆ ಹೀಗೆ ಮಾಡಿದೆ. ಇವೆಲ್ಲಾ ಇಲ್ಲಿ ಮಾಮೂಲು ಬಿಡಿ”, ಎಂದು ಹಾಯಾಗಿ ಉತ್ತರಿಸಿದ್ದನಂತೆ.

ತನ್ನ ಶೋ ಒಂದರಲ್ಲಿ ಫ್ಲಫೀ ಈ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಭಾರತದ ರಾಜಧಾನಿಯಾದ ದಿಲ್ಲಿಯಲ್ಲಿ ಹೀಗೂ ಆಗುತ್ತದೆ ಎನ್ನುತ್ತಾರೆ. ಡ್ರೈವರ್ ಮಿತಿಮೀರಿದ ವೇಗದಲ್ಲಿ ಕಾರು ಚಲಾಯಿಸಿದಾಗಲೆಲ್ಲಾ ನನ್ನ ಹಿರಿಯ ಸಹೋದ್ಯೋಗಿಯೊಬ್ಬರು ”ನನ್ನನ್ನು ಸದ್ಯ ಮನೆ ತಲುಪಿಸು ಮಾರಾಯ. ಕೈಲಾಸಕ್ಕಲ್ಲ. ಅದಕ್ಕಿನ್ನೂ ಟೈಮಿದೆ”, ಎನ್ನುತ್ತಿದ್ದರು. ಕ್ರಮೇಣ ಈ ಡೈಲಾಗು ಅವರ ದಿನಚರಿಯ ಭಾಗವಾಯಿತು ಕೂಡ. ದಿಲ್ಲಿಯವರಿಗೆ ಇದು ಏನೇ ಆಗಿರಲಿ. ಫ್ಲಫೀಗೆ ಮಾತ್ರ ಇದೊಂದು ಶತಮಾನದ ಅಚ್ಚರಿ ಮತ್ತು ತನ್ನ ಸ್ಟಾಂಡಪ್ ಕಾಮಿಡಿ ಶೋಗೊಂದು ಒಳ್ಳೆಯ ಹಾಸ್ಯ ಚಟಾಕಿ.

ಫ್ಲಫೀಗೆ ದಿಲ್ಲಿಯ ಬಹಳಷ್ಟು ಬೇರೆ ಸಂಗತಿಗಳು ಮರೆತುಹೋಗಿರಬಹುದು. ಆದರೆ ನಿಸ್ಸಂದೇಹವಾಗಿ ಈ ಘಟನೆಯೊಂದು ಸದಾ ಅವರ ನೆನಪಿನಲ್ಲಿ ಉಳಿಯಲಿದೆ. ಹಾಗೆ ನೋಡಿದರೆ ನಮಗೂ ಕೆಲ ಪ್ರದೇಶಗಳಲ್ಲಿ ಇಂತಹ ಅನುಭವಗಳಾಗುತ್ತವೆ. ನಮ್ಮ ವೈಯಕ್ತಿಕ ಅನುಭವಕ್ಕೆ ವಿಚಿತ್ರ ಎನಿಸುವ ಸಂಗತಿಗಳು ಬೇರೆ ಸಂಗತಿಗಳಿಗೆ ಹೋಲಿಸಿದರೆ ದೀರ್ಘಕಾಲದವರೆಗೆ ನೆನಪಿನಲ್ಲುಳಿಯುತ್ತವೆ. ಅದರಲ್ಲೂ ವಿಶೇಷವಾಗಿ ಈ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ನಾವು ಆ ಶಹರವನ್ನೋ, ದೇಶವನ್ನೋ ನಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಳ್ಳುತ್ತೇವೆ. ಇದಮಿತ್ಥಂ ಎಂದು ಷರಾ ಬರೆಯುತ್ತೇವೆ.

ದಿಲ್ಲಿಗೆ ಬಂದು ಹೋಗಿದ್ದ ನನ್ನ ಪೋರ್ಚುಗೀಸ್ ಸಹೋದ್ಯೋಗಿಯೊಬ್ಬ ಇಲ್ಲಿಯ ಜನಸಂದಣಿಯನ್ನು ಕಂಡು ಹೌಹಾರಿದ್ದ. ಇಷ್ಟು ಜನಸಂಖ್ಯೆಯನ್ನು ಹೊಂದಿರುವ, ಸಂಕೀರ್ಣ ಮತ್ತು ಬೃಹತ್ ದೇಶವೊಂದು ಹೇಗೆ ಕಾರ್ಯನಿರ್ವಹಿಸುತ್ತಪ್ಪಾ ಎಂಬುದು ಆತನ ಪಾಲಿಗೆ ದೊಡ್ಡ ಅಚ್ಚರಿಯಾಗಿತ್ತು. ನಾನು ಗಮನಿಸಿದಂತೆ ಭಾರತದ ಬಗ್ಗೆ ವಿದೇಶೀಯರಿಗಿರುವ ಮತ್ತೊಂದು ದೊಡ್ಡ ಅಚ್ಚರಿಯೆಂದರೆ ಈ ಅರೇಂಜ್ಡ್ ಮ್ಯಾರೇಜ್ ಗಳದ್ದು. ನನ್ನ ಆಫ್ರಿಕನ್ ಸಹೋದ್ಯೋಗಿಗಳು ಕೊನೆಯವರೆಗೂ ಅರೇಂಜ್ಡ್ ಮ್ಯಾರೇಜ್ ಪ್ರಕ್ರಿಯೆಯ ಕಥನಗಳನ್ನು ಸೈ-ಫೈ ಸಿನೆಮಾಗಳಲ್ಲಿ ಬರುವ ಅತಿರಂಜಿತ ಕತೆಗಳಂತೆಯೇ ಕೇಳುತ್ತಿದ್ದರು. ಇಂಥದ್ದೊಂದು ಮದುವೆಯ ವ್ಯವಸ್ಥೆಯನ್ನು ತಮ್ಮ ಸಂಸ್ಕೃತಿಯಲ್ಲಿ ಕಲ್ಪಿಸಿಕೊಳ್ಳುವುದೂ ಕೂಡ ಅವರಿಗೆ ಅಸಾಧ್ಯವಾಗಿತ್ತು.

ಕೆಲವೊಮ್ಮೆ ದಿಲ್ಲಿಯ ಬಗೆಗಿನ ಅನ್ಯದೇಶದವರ ಕುತೂಹಲಭರಿತ ಅಚ್ಚರಿಗಳು ಸೃಜನಶೀಲ ರೂಪದಲ್ಲೂ ಪ್ರಸ್ತುತವಾಗುವುದುಂಟು. ಕೆಲ ವರ್ಷಗಳ ಹಿಂದೆ ದಿಲ್ಲಿಗೆ ಬಂದಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಕಾಮಿಕ್ ಚಿತ್ರಕಲಾವಿದೆ ಬಾರ್ಬರಾ ಎಲಿನ್ ದಿಲ್ಲಿಯ ಹಲವು ಝಲಕ್ ಗಳನ್ನು ತನ್ನ ರೇಖಾಚಿತ್ರಗಳಲ್ಲಿ ಮೂಡಿಸಿದ್ದರು. ದಿಲ್ಲಿಯ ರಸ್ತೆಗಳು, ಜನಜೀವನ, ಸ್ಮಾರಕಗಳು… ಹೀಗೆ ಸುಂದರ ಮಹಾನಗರಿಯ ಹಲವು ಸಂಗತಿಗಳನ್ನು ತನ್ನದೇ ಆದ ವಿಶಿಷ್ಟ ಶೈಲಿಯ ರೇಖೆಗಳಲ್ಲಿ ಪ್ರಸ್ತುತಪಡಿಸುತ್ತಿದ್ದರು ಬಾರ್ಬರಾ. 2012 ರಲ್ಲಿ ದಿಲ್ಲಿಯ ಇಂದ್ರಪ್ರಸ್ಥ ಉದ್ಯಾನದಲ್ಲಿ ಆಯೋಜಿಸಲಾಗಿದ್ದ ಇಂಡೋ-ಜರ್ಮನ್ ಮೇಳದಲ್ಲಿ ಚಿತ್ರಕಲಾ ವಿಭಾಗದ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ಬಾರ್ಬರಾ ಎಲಿನ್ ದಿಲ್ಲಿಯನ್ನು ಕಂಡಿದ್ದು ಹೀಗೆ. 

ದಿಲ್ಲಿಯ ನಿತ್ಯದ ಜನಜೀವನದ ಹೊರತಾಗಿ ಬಾರ್ಬರಾ ಹಲವು ದಿನಗಳ ಸಾಂಸ್ಕೃತಿಕ ಮೇಳದ ನೋಟಗಳನ್ನೂ ತನ್ನ ರೇಖೆಗಳಲ್ಲಿ ಮೂಡಿಸಿ, ಆ ಸುಂದರ ನೆನಪುಗಳನ್ನು ಶಾಶ್ವತವಾಗಿ ದಾಖಲಿಸಿದ್ದರು. ಮರದಡಿಯಲ್ಲಿ ಸ್ವತಃ ಲೇಖಕರಿಂದ ಕತೆ ಕೇಳುತ್ತಿರುವ ಸಾಹಿತ್ಯಾಸಕ್ತರು, ಹಿಪ್-ಹಾಪ್ ಎಂದು ಸೊಂಟ ಕುಣಿಸುತ್ತಿದ್ದ ವರ್ಗ, ಇಂದ್ರಪ್ರಸ್ಥದ ಸುಂದರ ಪಾರ್ಕಿನಲ್ಲಿ ಸುಮ್ಮನೆ ಅಡ್ಡಾಡಲು ಬಂದಿದ್ದ ಆಸಕ್ತ ಸ್ಥಳೀಯರು… ಹೀಗೆ ಎಲ್ಲವೂ ಬಾರ್ಬರಾರ ರೇಖೆಗಳಲ್ಲಿ ಸೆರೆಯಾಗಿದ್ದವು. ತಾನು ಕತೆ ಹೇಳುವ ಮಾಧ್ಯಮವೇ ಚಿತ್ರಗಳು ಎಂದು ನನ್ನಲ್ಲಿ ತನ್ನ ದಿಲ್ಲಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದ ಬಾರ್ಬರಾ, ತಾವು ಕಂಡ ದಿಲ್ಲಿಯ ಕತೆಯನ್ನು ಮುಂದೆ ಎಂಟು ಅಧ್ಯಾಯಗಳ ಚಿತ್ರಸಂಗ್ರಹದಲ್ಲಿ ಪ್ರಸ್ತುತಪಡಿಸಿದ್ದರು. 

ಹಾಗಂತ ಇಂಥಾ ಅಚ್ಚರಿಗಳು ದಿಲ್ಲಿಗೆ ಬರುವ ವಿದೇಶೀಯರಿಗಷ್ಟೇ ಸೀಮಿತವಾಗಿಲ್ಲ. ಇಲ್ಲಿಗೆ ಬರುವ ವಿದೇಶೀಯರ ಬಗ್ಗೆ ಸ್ಥಳೀಯರಿಗೂ ವಿಚಿತ್ರ ಕುತೂಹಲಗಳಿರುತ್ತವೆ. ದಿಲ್ಲಿಯ ಹೈ ಎಂಡ್ ಪ್ರದೇಶಗಳಾದ ಲೋಧಿ, ರಾಯಭಾರ ಕಚೇರಿಗಳನ್ನು ದಂಡಿಯಾಗಿ ಹೊಂದಿರುವ ಚಾಣಕ್ಯಪುರಿ… ಇತ್ಯಾದಿ ಹೆಚ್ಚು ವಿದೇಶೀಯರಿರುವ ಭಾಗಗಳಲ್ಲಿ ಇಂತಹ ಕೆಲಸಕ್ಕೆ ಬಾರದ ಕ್ರೇಜ್ ಕಾಣಸಿಗದಿದ್ದರೂ, ಹಳೇ ದಿಲ್ಲಿಯಂತಹ ಭಾಗಗಳಲ್ಲಿ ವಿದೇಶೀಯರ ಬಗ್ಗೆ ಸ್ಥಳೀಯರಿಗೆ ಇರುವ ಕುತೂಹಲವು ಕಮ್ಮಿಯೇನಿಲ್ಲ. ಜಾಮಾ ಮಸೀದಿಯಂತಹ ಭಾಗಗಳಲ್ಲಿ ”ನನಗೆ ನಿಮ್ಮ ಜೊತೆ ಒಂದು ಫೋಟೋ ಬೇಕು” ಎಂದು ವಿದೇಶೀಯರ ಬೆನ್ನುಬೀಳುವ ಹಲವು ಕಿಲಾಡಿಗಳನ್ನು ನಾನು ಕಂಡಿದ್ದೇನೆ. ಇದು ಅವರಿಗೊಂದು ಅಗ್ಗದ ಮೋಜು.

ಹೀಗೆ ಬಿಳಿಯ ವಿದೇಶೀಯರನ್ನು ‘ಗೋರಾ’, ‘ಫಿರಂಗೀ’ ಇತ್ಯಾದಿ ಹೆಸರುಗಳಿಂದ ಕರೆಯುವ ಸ್ಥಳೀಯರು ಅವರ ಬಗ್ಗೆ ತಕ್ಕಮಟ್ಟಿನ ಕುತೂಹಲವನ್ನಾದರೂ ಇಟ್ಟುಕೊಂಡಿರುತ್ತಾರೆ. ಪಹಾಡ್ ಗಂಜಿನ ಅಗ್ಗದ ಹೋಟೇಲುಗಳಿಗೆ ಬರುವ ವಿದೇಶೀ ಪ್ರವಾಸಿಗರು ದಿಲ್ಲಿಯ ಗಲ್ಲಿಗಳನ್ನು ಎಗ್ಗಿಲ್ಲದೆ ಸುತ್ತಾಡುತ್ತಾ, ಜನರೊಂದಿಗೆ ಬೆರೆಯುವ ಕಾರಣ ಇಲ್ಲಿಯವರಿಗೆ ಅದು ಸುಲಭವೂ ಹೌದು. ಹೊರಗಿನವರೆಂದು ವಿದೇಶೀಯರನ್ನು ದೋಚುವುದು ಜಗತ್ತಿನ ಬಹುತೇಕ ಶಹರಗಳಲ್ಲಿ ಸಾಮಾನ್ಯವಾದ್ದರಿಂದ, ವಿದೇಶಿ ಪ್ರವಾಸಿಗನೊಬ್ಬ ತಕ್ಕಮಟ್ಟಿನ ಹೋಂವರ್ಕ್ ಮಾಡಿಕೊಂಡೇ ದಿಲ್ಲಿಗೆ ಬಂದಿರುತ್ತಾನೆ. ಉದಾಹರಣೆಗೆ ದಿಲ್ಲಿಯ ಕೆಲ ಮಾರುಕಟ್ಟೆಗಳಲ್ಲಿ ಚೌಕಾಶಿಯು ನಡೆಯುತ್ತದೆಂಬುದನ್ನು ಅರಿತ ಕೆಲ ವಿದೇಶಿ ಮಂದಿ, ಪಕ್ಕಾ ಭಾರತೀಯರು ನಾಚುವಷ್ಟರ ಮಟ್ಟಿಗೆ ಚೌಕಾಶಿಗಿಳಿಯುವುದೂ ಉಂಟು. ಖರೀದಿಯು ರಂಗೇರಲು ಇನ್ನೇನು ಬೇಕು!

ಕೆಂಪುಕೋಟೆ, ಜಾಮಾ ಮಸೀದಿಯಂತಹ ದಿಲ್ಲಿಯ ಭಾಗಗಳಲ್ಲಿ ಅದೆಷ್ಟೋ ಟೂರಿಸ್ಟ್ ಗೈಡ್ ಗಳು ಹಲವಾರು ವರ್ಷಗಳಿಂದ ವಿದೇಶೀಯರ ಜೊತೆ ಬೆರೆತೇ ಹಲವು ಭಾಷೆಗಳನ್ನು ಕಲಿತಿದ್ದಾರೆ. ಅಕಾಡೆಮಿಕ್ ಮಂದಿಯನ್ನೂ ಮೀರಿಸುವಂತೆ ಫ್ರೆಂಚ್, ಇಟಾಲಿಯನ್, ಸ್ಪ್ಯಾನಿಷ್ ಭಾಷೆಗಳನ್ನು ಈ ಮಂದಿ ಸೊಗಸಾಗಿ ಮಾತನಾಡುತ್ತಾರೆ. ಇನ್ನು ದಿಲ್ಲಿಯ ಪ್ರವಾಸಿ ತಾಣಗಳಲ್ಲಿ, ಅದರಲ್ಲೂ ಹೆಚ್ಚಿನ ವಿದೇಶೀ ಪ್ರವಾಸಿಗರು ಭೇಟಿ ಕೊಡುವ ತಾಣಗಳಲ್ಲಿ ಚುರುಕಿನಿಂದ ಓಡಾಡುವ ಕೆಲ ಚಾಣಾಕ್ಷ ವ್ಯಾಪಾರಿಗಳ ದಂಡೇ ಇರುತ್ತದೆ. ಕಾಸು ಬಿಚ್ಚಿದರೆ ತೀರಾ ಜೀರಿಗೆ ಪುಡಿಯಿಂದ ಹಿಡಿದು, ಲಕ್ಷಗಟ್ಟಲೆ ಬೆಲೆಬಾಳುವ ಅಪರೂಪದ ಸಂಗ್ರಹಯೋಗ್ಯ ವಸ್ತುಗಳನ್ನೂ ಕೂಡ ಇಂಥವರು ಆಸಕ್ತ ಗ್ರಾಹಕರಿಗೆ ದೊರಕಿಸಬಲ್ಲರು.

ಒಮ್ಮೆ ಹೀಗಾಯಿತು. ಕೆಲ ಆಫ್ರಿಕನ್ ಅತಿಥಿಗಳೊಂದಿಗೆ ದಿಲ್ಲಿ-ಆಗ್ರಾ-ಜೈಪುರ ಪ್ರವಾಸದಲ್ಲಿದ್ದ ನಾನು ಭಾರತದ ಕರಕುಶಲ ವಸ್ತುಗಳನ್ನು, ಅದರ ಸಾಂಸ್ಕೃತಿಕ ವೈವಿಧ್ಯಗಳನ್ನು ಅವರಿಗೆ ವಿವರಿಸುತ್ತಲಿದ್ದೆ. ಆಯಾ ದೇಶಗಳ ಸರಕಾರಿ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದ ಈ ಅತಿಥಿಗಳು ಒಂದು ರೀತಿಯಲ್ಲಿ ವಿವಿಐಪಿ ಅತಿಥಿಗಳೂ ಆಗಿದ್ದರು. ಇಂತಿಪ್ಪ ವಿದೇಶೀ ಅತಿಥಿಗಳ ದಂಡೊಂದು ನನ್ನೊಂದಿಗೆ ವಿವಿಧ ವರ್ಣಗಳ ಕಲ್ಲು-ಹರಳುಗಳಿಂದ ಮಾಡಲಾಗುವ ಆಭರಣಗಳ ಮತ್ತು ಆಲಂಕಾರಿಕ ವಸ್ತುಗಳ ಮಳಿಗೆಯನ್ನು ತಲುಪಿತ್ತು. ವಸ್ತುಗಳನ್ನು ನೋಡಿಕೊಂಡು ಬರುವುದಷ್ಟೇ ಹೊರತು, ಖರೀದಿ ಮಾಡುವುದೇನೂ ಬೇಡ ಎಂದು ತಮ್ಮತಮ್ಮಲ್ಲೇ ಮಾತಾಡಿಕೊಂಡು ಇವರು ಮಳಿಗೆಯ ಒಳಹೊಕ್ಕಿದ್ದೂ ಆಯಿತು.

ಈ ಮಳಿಗೆಯ ಮಾರುವಿಕೆಯ ಕೌಶಲವೇ ವಿಭಿನ್ನ ಎಂದು ತಿಳಿಯಲು ನಮಗೆ ಹೆಚ್ಚು ಹೊತ್ತೇನೂ ಹಿಡಿಯಲಿಲ್ಲ. ಅಷ್ಟಕ್ಕೂ ಅಲ್ಲೇನಿತ್ತೆಂದರೆ ಮಳಿಗೆಯ ಕೊನೆಯಲ್ಲಿ, ಗಾಜಿನ ಗೂಡಿನಂತಿದ್ದ ಕ್ಯಾಬಿನ್ ಒಂದರಲ್ಲಿ ಜ್ಯೋತಿಷಿಯೊಬ್ಬನನ್ನು ಕೂರಿಸಲಾಗಿತ್ತು. ಗ್ರಾಹಕರನ್ನು ಸೆಳೆಯಲು ‘ಉಚಿತ ಭವಿಷ್ಯ ಹೇಳುವ ಪರಿಣತರು’ ಎಂಬ ಫಲಕವೂ ಬೇರೆ. ವಿವಿಧ ವರ್ಣದ ಕಲ್ಲುಗಳನ್ನು ಗ್ರಾಹಕರಿಗೆ ಮೊದಲು ಸಂಕ್ಷಿಪ್ತವಾಗಿ ಪರಿಚಯಿಸುವ ಮಳಿಗೆಯ ಸಿಬ್ಬಂದಿಯು ಮಾತುಮಾತಲ್ಲೇ ಈ ಉಚಿತ ಸೇವೆಯ ಜ್ಯೋತಿಷಿಯ ಬಳಿ ಹೋಗಿಬನ್ನಿ ಎಂದು ಹೇಳುತ್ತಿದ್ದ. ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯುಳ್ಳವರು ಸುಮ್ಮನೆ ಕುತೂಹಲಕ್ಕಾದರೂ ಈ ಜ್ಯೋತಿಷ್ಯವಿದ್ಯಾ ಪರಿಣತನ ಬಳಿ ಹೋಗುವುದು ಸಹಜವಾಗಿತ್ತು. ಈ ಹಂತದಲ್ಲಿ ಮಳಿಗೆಗೆ ಬಂದ ಗ್ರಾಹಕನೊಬ್ಬ ತನಗರಿವಿಲ್ಲದಂತೆಯೇ ದೊಡ್ಡದೊಂದು ಕಾಣದ ಖೆಡ್ಡಾಗೆ ಬೀಳುತ್ತಿದ್ದ.

ಹೀಗೆ ತನ್ನೆಡೆಗೆ ಬಂದ ಗ್ರಾಹಕನನ್ನು ಮುಚ್ಚಿದ ಬಾಗಿಲುಗಳ ಹಿಂದೆ ತನ್ನೊಂದಿಗೆ ಕುಳ್ಳಿರಿಸುವ ಜ್ಯೋತಿಷಿ ಮಹಾಶಯನು, ರೋಗ-ಗ್ರಹಚಾರ-ಅದೃಷ್ಟ ಇತ್ಯಾದಿ ಸಂದರ್ಭ-ಕಾರಣಗಳೊಂದಿಗೆ ಸಾವಧಾನವಾಗಿ ಆಟವಾಡುತ್ತಾ ಗ್ರಾಹಕನಿಗೆ ಉಪಯುಕ್ತವಾಗಬಲ್ಲ ಮುತ್ತು-ಹರಳುಗಳನ್ನು ಸೂಚಿಸುತ್ತಿದ್ದ. ನಿಮಿಷಗಳು ಕಳೆದಂತೆ ಇಲ್ಲಿ ಗ್ರಾಹಕ ಮತ್ತು ಜ್ಯೋತಿಷಿಯ ನಡುವಿನ ಮಾತುಕತೆಯ ಶೈಲಿಯು ‘ಮಾರುವವನು ಮತ್ತು ಕೊಳ್ಳುವವನು’ ಮಾದರಿಯಲ್ಲಿರದೆ ‘ಓರ್ವ ಆಸಕ್ತ ಮತ್ತು ಮಾರ್ಗದರ್ಶಕ’ನ ನಡುವಿನ ಮಾತುಕತೆಯಂತೆ ಬದಲಾಗುತ್ತಿತ್ತು.

ಜ್ಯೋತಿಷಿಯ ಸಲಹೆಗೆ ತಕ್ಕಂತೆ ಹೊರಗಿನ ಶೋಕೇಸುಗಳಿಂದ ಹರಳುಗಳ ಸೆಟ್ ಹಿಡಿದ ಸಿಬ್ಬಂದಿಗಳು ಕ್ಯಾಬಿನ್ನಿನೊಳಗೆ ಬಂದು, ಆರಾಮಕುರ್ಚಿಯಲ್ಲಿದ್ದ ಗ್ರಾಹಕನನ್ನು ಕಂಫರ್ಟಿನ ಸೋಗಿನಲ್ಲಿ ಖರೀದಿಗೆ ಅಣಿಯಾಗಿಸುತ್ತಿದ್ದರು. ಕೊನೆಗೂ ನಮ್ಮ ಅತಿಥಿಗಳ ಹಲವು ಡಾಲರುಗಳು ಇಲ್ಲಿ ಅನಾಯಾಸವಾಗಿ, ವಿನಾಕಾರಣ ವ್ಯಯವಾದವು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಂದುಕೊಂಡಿದ್ದೇನೆ. 

ಇಷ್ಟಿದ್ದರೂ ದಿಲ್ಲಿಯ ಸೊಬಗು ಹೊರಗಿನವರನ್ನು ನಿರಂತರವಾಗಿ ತನ್ನತ್ತ ಕೈಬೀಸಿ ಕರೆಯುತ್ತದೆ. ದಿಲ್ಲಿಗೆ ಈಗಾಗಲೇ ಹಲವು ಬಾರಿ ಬಂದು ಹೋಗಿರುವ ವಿದೇಶೀಯರು ಈ ಮಹಾನಗರಿಯೊಂದಿಗೆ ಒಂದು ಬಗೆಯ ಕಂಫರ್ಟ್ ಅನುಭವ ಕಂಡುಕೊಳ್ಳುವ ಪರಿಯನ್ನೂ ನಾನು ನೋಡಿದ್ದೇನೆ. ಇಂಥವರು ಪ್ರತೀ ಪ್ರವಾಸದಲ್ಲೂ ಮತ್ತಷ್ಟು ಪರಿಪೂರ್ಣರಾಗುತ್ತಾ ಶಹರಕ್ಕೆ ಮತ್ತಷ್ಟು ಆಪ್ತವಾಗುತ್ತಾರೆ. ದಿಲ್ಲಿಯ ಸ್ಥಳೀಯನೊಬ್ಬ ಸಾಮಾನ್ಯ ವಿದೇಶೀಯನೊಬ್ಬನನ್ನು ಯಾಮಾರಿಸಿದಷ್ಟು ಸುಲಭವಾಗಿ ಇಂಥವರನ್ನು ಮಣಿಸುವುದು ಸಾಧ್ಯವಿಲ್ಲ. ಶಹರವೊಂದರ ನಾಡಿಮಿಡಿತವನ್ನು ತಕ್ಕಮಟ್ಟಿಗೆ ಅರಿತ ನಂತರ, ಅಲ್ಲಿ ಈಸುವುದು-ಇದ್ದು ಜೈಸುವುದು ಕಷ್ಟವೇನಲ್ಲ. ಈ ಮಾತು ದಿಲ್ಲಿಯಂಥಾ ದಿಲ್ಲಿಗೂ ಸತ್ಯ.

ರಸ್ತೆಯ ಬದಿಗಳಲ್ಲಿ ಬಣ್ಣಬಣ್ಣದ ಪೆನ್ನು ಮಾರುವ ಬಾಲಕಿಯ ಕಣ್ಣುಗಳು ಕಾರಿನೊಳಗಿರುವ ವಿದೇಶಿ ಗ್ರಾಹಕನನ್ನು ಕಂಡಾಗ ಥಟ್ಟನೆ ಮಿಂಚುತ್ತವೆ. ಕೆಂಪುಗುಲಾಬಿ ಮಾರುವ ಹರೆಯದ ಬಾಲಕನೋರ್ವನನ್ನು ಹೊಂಬಣ್ಣದ ಕೇಶದ ತರುಣಿಯೊಬ್ಬಳು ”ಹೇ… ಯೂ…” ಎಂದು ಕರೆದಾಗ ಅವನ ಕೆನ್ನೆಯಲ್ಲೂ ಚೂರು ಗುಲಾಬಿ ರಂಗು. ದಿಲ್ಲಿಯ ಇಕ್ಕಟ್ಟು ಗಲ್ಲಿಗಳನ್ನು ತಿರುಗುವ ವಿದೇಶಿ ಪ್ರವಾಸಿಗನೊಬ್ಬ ನಗುಮುಖದೊಂದಿಗೆ ಕೈಮುಗಿದು ನಮಸ್ತೆ ಎಂದರೆ ಸುತ್ತಮುತ್ತಲಿನವರಲ್ಲಿ ಆತ ನಮ್ಮವನೇ ಎಂಬ ಭಾವ. ಆತ ಹಿಂದಿಯಲ್ಲೇನೋ ಅರ್ಧಂಬರ್ಧ ಬಡಬಡಿಸಿದರಂತೂ ಕೆನ್ನೆ ಹಿಂಡಿ ‘ಹೌ ಕ್ಯೂಟ್’ ಎನ್ನುವಷ್ಟಿನ ಆತ್ಮೀಯತೆ. 

ಮೇರಾ ಜೂತಾ ಹೈ ಜಪಾನಿ,

ಯೇ ಪತ್ಲೂನ್ ಇಂಗ್ಲಿಸ್ತಾನಿ…

ಸರ್ ಪೇ ಲಾಲ್ ಟೋಪಿ ರೂಸಿ,

ಫಿರ್ ಭೀ ದಿಲ್ ಹೈ ಹಿಂದುಸ್ತಾನಿ…

ಜಪಾನಿ ಪಾದರಕ್ಷೆ, ಇಂಗ್ಲಿಷ್ ಪೈಜಾಮಾ, ರಷ್ಯಾದ ಟೋಪಿ… ಹೀಗೆ ಹೊರದೇಶದ ಎಲ್ಲದರ ಬಗ್ಗೆಯೂ ನಮಗೆ ಮೋಹವಿದೆ. ಏಕೆಂದರೆ ಹೃದಯದಿಂದ ನಾವು ಅಪ್ಪಟ ಭಾರತೀಯರು!

February 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

೧ ಪ್ರತಿಕ್ರಿಯೆ

  1. Prashantha Naik

    ಲೇಖನ ಓದಿ ದಿಲ್ಲಿಗೆ ಹೋಗಿ ಬಂದ ಅನುಭವವಾಯಿತು. ಸಂಗತಿಗಳು ತುಂಬಾ ಮಾರ್ಮಿಕವಾಗಿ ಮೂಡಿಬಂದಿದೆ. ಲೇಖಕರಿಗೆ ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: