ಫೇಸ್ ಬುಕ್ಕಿನಲ್ಲೊಂದು ಅಂತಃಪುರ!

ಅಂತಃಪುರ; ಇಲ್ಲಿ ನಾವು ನಾವೇ..! 

ಉಷಾ ಕಟ್ಟೆಮನೆ

ಮೌನ ಕಣಿವೆ

ಕೃಪೆ : ವಿಜಯವಾಣಿ

  ಒಬ್ಬ ಮನುಷ್ಯನೊಳಗೆ ಬಯಲಾಗುವ ಮತ್ತು ಆಲಯವಾಗುವ ಎರಡೂ ಬಯಕೆಗಳು ಅಂತರ್ಗತವಾಗಿರುತ್ತದೆ. ಆದರೆ ಎಲ್ಲಿ ಬಯಲಾಗಬೇಕು ಎಲ್ಲಿ ಆಲಯವನ್ನು ಕಟ್ಟಿಕೊಳ್ಳಬೇಕು ಎಂಬುದು ಅವನ ವಿವೇಚನೆಗೆ ಸಂಬಂಧಿಸಿದ್ದು. ಅದು ಹೇಗಿರಬೇಕೆಂಬುದನ್ನು ಡಿ.ವಿ.ಜಿಯವರು ತಮ್ಮ”ಮಂಕುತಿಮ್ಮನ ಕಗ್ಗ’ದಲ್ಲಿ ಬಹಳ ಸೊಗಸಾಗಿ ಹೀಗೆ ಹೇಳಿದ್ದಾರೆ… ’ಎರಡು ಕೋಣೆಗಳ ನೀಂ ಮಾಡು ಮನದಾಲಯದಿ ಹೊರಕೋಣೆಯಲಿ ಲೋಗರಾಟಗಳನಾಡು ವಿರಮಿಸೊಬ್ಬನೇ ಮೌನದೊಳಮನೆಯ ಶಾಂತಿಯಲಿ ವರಯೋಗ ಸೂತ್ರವಿದು-ಮಂಕುತಿಮ್ಮ” ಜಾಗತೀಕರಣಕ್ಕೆ ತೆರೆದುಕೊಂಡವರು ನಾವು..ತಂತ್ರಜ್ನಾನ ಇಡೀ ಜಗತ್ತನ್ನು ಒಂದು ಪುಟ್ಟ ಹಳ್ಳಿಯನ್ನಾಗಿಸಿದೆ. ಟೀವಿ..ತೆರೆದಿಟ್ಟರೆ.ನಮ್ಮ ಕಲ್ಪನೆಯ ಜಗತ್ತು ಕಣ್ಣೆದುರು ಸಾಕಾರಗೊಳ್ಳುತ್ತದೆ.ಇಂಟರ್ ನೆಟ್ ಮಾಹಿತಿ ಕಣಜವನ್ನೇ ನಮ್ಮೆದುರು ತಂದು ಸುರಿಯುತ್ತದೆ. ನಮಗೀಗ ಆಯ್ಕೆಯ ಗೊಂದಲ.. ಕ್ಷಣಾರ್ಧದಲ್ಲಿ ನಾವೀಗ ಹೊರಜಗತ್ತಿನೊಡನೆ ಸಂಪರ್ಕ ಸಾಧಿಸಬಹುದು. ಅಂತಹ ಸಾಧ್ಯತೆಗಳಲ್ಲಿ”ಪೇಸ್ ಬುಕ್’ ಕೂಡಾ ಒಂದು. ಇದೊಂದು ಸಂಪರ್ಕ ಜಾಲ ತಾಣ. ಇಲ್ಲಿ ನಿಮ್ಮ ಸ್ವವಿವರವನ್ನು ಕೊಟ್ಟು ಅದಕ್ಕೊಂದು ಭಾವಚಿತ್ರವನ್ನು ಅಂಟಿಸಿ ಒಂದು ಅಕೌಂಟ್ ಪ್ರಾರಂಭ ಮಾಡಿದರೆ ಮುಗಿಯಿತು. ನಿಮ್ಮನ್ನು ಗೆಳೆತನದ ಕೊಂಡಿ ಜಗತ್ತಿನಾದ್ಯಂತ ಬೆಸೆದು ಬಿಡುತ್ತದೆ. ನಿಮ್ಮ ಅಕೌಂಟಿನ ವಾಲ್ ನಲ್ಲಿ ನಿಮ್ಮ ಬಗ್ಗೆ, ನಿಮ್ಮ ಕನಸು- ಕನವರಿಕೆಗಳ ಬಗ್ಗೆ, ದುಃಖ-ದುಮ್ಮಾನಗಳ ಬಗ್ಗೆ ಬರೆದುಕೊಂಡರೆ ಕ್ಷಣಾರ್ಧದಲ್ಲಿ ಅದಕ್ಕೆ ಜಗತ್ತಿನಾದ್ಯಂತ ಹರಡಿಕೊಂಡಿರುವ ನಿಮ್ಮ ಗೆಳೆಯರ ಬಳಗ ಪ್ರತಿಕ್ರಿಯಿಸುತ್ತದೆ. ನಿಮ್ಮ ನೋವು-ನಲಿವುಗಳಲ್ಲಿ ಅವರು ಭಾಗಿಯಾಗುತ್ತಾರೆ. ನಿಮ್ಮ ಪಂಚೇಂದ್ರಿಯಗಳಿಗೆ ಸಿಗದ ಆ ಗೆಳೆಯ-ಗೆಳತಿಯರು ಮತ್ತು ನಿಮ್ಮ ನಡುವೆ ನಿಮಗರಿವಿಲ್ಲದಂತೆ ಅನೂಹ್ಯವಾದ ಬಂಧುತ್ವವೊಂದು ಬೆಳೆದುಬಿಡುತ್ತದೆ. ನಮಗೆ ಕ್ರಮೇಣ ಅರಿವಿಗೆ ಬರುತ್ತದೆ ಇದೊಂದು ಮುಖವಾಡದ ಜಗತ್ತು; ಹೊರಕೋಣೆ..ಆಗ ಒಳ ಕೋಣೆಗಾಗಿ ಹುಡುಕಾಟ ಆರಂಬವಾಗುತ್ತದೆ.. ಹಾಗೆ ಹೊರಟವರು ತಮ್ಮ ಅಭಿರುಚಿಗನುಗುಣವಾಗಿ ಸಮಾನ ಮನಸ್ಕರ ಗ್ರೂಫ್ ಗಳನ್ನು ರಚಿಸಿಕೊಳ್ಳುತ್ತಾರೆ, ಇಲ್ಲವೇ ಈಗಾಗಲೇ ಇರುವ ಗ್ರೂಪ್ ಗಳನ್ನು ಸೇರಿಕೊಳ್ಳುತ್ತಾರೆ.. ಅದಕ್ಕೆ ಮುಕ್ತ ಪ್ರವೇಶವಿರುವುದಿಲ್ಲ. ಅಂತಹ ಸಾವಿರಾರು ಗ್ರೂಪ್ ಗಳು ಕನ್ನಡ ಭಾಷೆ ಒಂದರಲ್ಲೇ ಇದೆ ಅಂದರೆ ಪೇಸ್ ಬುಕ್ ನ ಜನಪ್ರಿಯತೆಯನ್ನು ನಾವು ಊಹಿಸಿಕೊಳ್ಳಬಹುದು. ಆದರೂ ಪೇಸ್ ಬುಕ್ ಎನ್ನುವುದು ಬಯಲು. ವಾಚ್ಯವಾಗಿ ಹೇಳಬೇಕೆಂದರೆ ಅದು ಲೌಡ್ ಸ್ಪೀಕರ್ ಇದ್ದಂತೆ ಅಲ್ಲಿ ಪಿಸುಮಾತುಗಳಿಗೆ ಮಾನ್ಯತೆ ಕಡಿಮೆ. ಇಲ್ಲಿರುವ ಮಹಿಳೆಯರಿಗೆ ಅದರ ಅನುಭವ ಹೆಚ್ಚು. ಅವರು ತಮ್ಮ ವಾಲ್ ಗಳಲ್ಲಿ ಬರೆದುಕೊಳ್ಳುವ ಅಂತರಂಗದ ಮಾತುಗಳಿಗೆ ಗೆಳೆಯರಿಂದ ಕೊಂಕು-ಕೊಳಕಿನ ಕಾಮೆಂಟ್ಗಳು ಬಂದಾಗ ಅವರು ಸಹಜವಾಗಿ ಮುದುಡಿ ಹೋಗುತ್ತಾರೆ.

[ಈ ಚಿತ್ರ ಅಂತಃಪುರದ ಸಖಿ ಸೌಮ್ಯಾ ಕಲ್ಯಾಣ್ಕರ್ ಅವರದ್ದು]

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ರಂಗಭೂಮಿ ಮತ್ತು ಕಿರುತೆರೆಯ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಯೋಚಿಸಿದ್ದು ’ನಾವು ನಾವಾಗಿ ಇರುವಂತ ಒಂದು ನಿರಮ್ಮಳ ಜಾಗ ಬೇಕು’ ಹಾಗೆ ಹುಟ್ಟಿಕೊಂಡದ್ದೇ ’ಅಂತಃಪುರ’ ವೆಂಬ ಸಿಕ್ರೇಟ್ ಗುಂಪು. ಜಯಲಕ್ಮಿಯವರು ಇದರ ಅಡ್ಮಿನ್ ಆದರೂ.ಇಲ್ಲಿ ಎಲ್ಲರೂ ಸರ್ವತಂತ್ರ ಸ್ವತಂತ್ರರು.ಹಾಗೆಂದು ಅವರೇ ಅನೌನ್ಸ್ ಮಾಡಿದ್ದಾರೆ! ಅಷ್ಟು ನಂಬಿಕೆ ಅವರಿಗೆ ಈ ಗ್ರೂಪ್ ಬಗ್ಗೆ. ಆದರೂ ಇಲ್ಲಿಯ ಚಟುವಟಿಕೆಗಳ ಬಗ್ಗೆ ಇನ್ಯಾರಿಗೋ ಮುಖ್ಯವಾಗಿ ಹೆಣ್ಮಕ್ಕಳ ಬಗ್ಗೆ ಅಸಡ್ಡೆಯಾಗಿ ಮಾತಾಡುವವರಿಗೆ ಸತತವಾಗಿ ಸುದ್ದಿಗಳನ್ನು ರವಾನಿಸುತ್ತಿದ್ದರೆ ಅಂತವರನ್ನು ಈ ಗ್ರೂಪಿಗೆ ನಿರ್ಭಂದಿಸುವ ಅಧಿಕಾರವನ್ನು ಅಡ್ಮಿನ್ ಹೊಂದಿದ್ದಾರೆ. ಹೇಳಿ ಕೇಳಿ ಇದು ಅಂತಃಪುರ. ಹಾಗಾಗಿ ಮಹಾರಾಣಿಯವರು ಹಲವಾರು. ಅಂದಮೇಲೆ ರಾಜಕುಮಾರಿಯವರಿರುವುದು ಸಹಜ. ಇವರನ್ನೆಲ್ಲಾ ಪ್ರೀತಿ, ಕಾಳಜಿಗಳಿಂದ ನೋಡಿಕೊಳ್ಳಲು ಒಬ್ಬ ರಾಜಮಾತೆ ಇರಲೇಬೇಕಲ್ಲಾ..ಹೂಂ.. ಇಲ್ಲೊಬ್ಬ ರಾಜಮಾತೆಯಿದ್ದಾರೆ ಅವರೇ ಅನುರಾಧ ಬಿ.ರಾವ್. ಇವರು ಯಾರು ಗೊತ್ತಾ? ಕನ್ನಡದ ಪ್ರಸಿದ್ಧ ಕಾದಂಬರಿಕಾರರಾದ ದೊಡ್ಡೇರಿ ವೆಂಕಟಗಿರಿರಾವ್ ಅವರ ಮಗಳು. ಇನ್ನು ತಾನು ಪಾಯಿಝನ್ ವರ್ಜಿನ್ ಅಂದರೆ ವಿಷಕನ್ಯೆ ಎಂದು ಪರಿಚಯಿಸಿಕೊಂಡು ಇಲ್ಲಿಯ ಪಹರೆಗಾರಳಾಗಿ ಇಲ್ಲಿನ ಚಟುವಟಿಗಳ ಬಗ್ಗೆ ಒಂದು ಕಣ್ಣಿಟ್ಟಿರುವ ಲಾಯರ್ ಅಂಜಲಿ ರಾಮಣ್ಣ ಇದ್ದಾರೆ….ಹೀಗೆ ಪಟ್ಟಿ ಮಾಡುತ್ತಾ ಹೋದರೆ ಈ ಲೇಖನವನ್ನು ಮುಗಿಸುವುದಕ್ಕಾಗುವುದಿಲ್ಲ..ಯಾಕೆಂದರೆ….. ಅಂತಃಪುರದಲ್ಲಿ ಎಂತೆಂತ ಘಟಾನುಘಟಿ ಹೆಣ್ಣುಮಕ್ಕಳಿದ್ದಾರೆ ಎಂದರೆ ಅವರನ್ನೆಲ್ಲಾ ನಾನು ಪರಿಚಯಿಸುತ್ತಾ ಹೋದರೆ ನೀವು ನೀವು ಮೂಗಿನ ಮೇಲೆ ಬೆರಳಿಟ್ಟು ’ಹೆಣ್ಮಕ್ಕಳೇ ಸ್ತ್ರಾಂಗ್ ಗುರು’ ಎಂದು ಹಾಡುವುದರಲ್ಲಿ ಅನುಮಾನವೇ ಇಲ್ಲ. ನಾನ್ನೂರಕ್ಕಿಂತಲೂ ಜಾಸ್ತಿ ಸಂಖೆಯಲ್ಲಿರುವ ನಾವೆಲ್ಲಾ ಪರಸ್ಪರ ಸಖೀಭಾವದಲ್ಲಿ ಬಂದಿತರಾಗಿದ್ದೇವೆ. ಇಲ್ಲಿರುವ ಹೆಣ್ಮಕ್ಕಳು ಎಷ್ಟು ಸೂಕ್ಮಜ್ನರೂ, ದೂರದರ್ಶಿತ್ವವುಳ್ಳವರೂ, ಸಮಾಜಮುಖಿಯರೂ, ವರ್ತಮಾನಕ್ಕೆ ಸ್ಪಂದಿಸುವವರೂ ಆಗಿದ್ದಾರೆ ಎಂಬುದು ಅವರು ತಮ್ಮೊಳಗೆ ಮಾತಾಡಿಕೊಂಡಂತೆ ಬರೆಯುತ್ತಿರುವ ಬ್ಲಾಗ್ ಗಳಲ್ಲಿ ವ್ಯಕ್ತವಾಗುತ್ತದೆ. ಕೆಲವು ಬ್ಲಾಗ್ ಹೆಸರುಗಳು ಹೀಗಿವೆ ನೋಡಿ ; ಹೀಗೆ ಸುಮ್ಮನೆ, ತುಳಸಿವನ, ದೀವಿಗೆ, ತಂಬೂರಿ, ಭೂರಮೆ, ಭಾವನಾಲೋಕ, ಭಾವದರ್ಪಣ, ತೆರೆದ ಮನ, ಮಾನಸ, ಮೃದುಮನಸು, ಓ ಮನಸೇ ನೀನೇಕೆ ಹೀಗೆ?, ಓ ನನ್ನ ಚೇತನಾ, ಆಡದ ಮಾತುಗಳು, ನೆನಪು ನೇವರಿಕೆ, ಹೇಳಬೇಕೆನಿಸುತ್ತದೆ, ಹೇಳದೆ..ಕೇಳದೆ, ಚುಕ್ಕಿ ಚಿತ್ತಾರ, ಮಾಲಾಲಹರಿ, ತೇಲಿ ಬಂದ ಪುಟಗಳು, ಮಿಂಚುಳ್ಳಿ, ಮುಗಿಲ ಹಕ್ಕಿ, ಮ ಹ ತಿ, ತದ್ಭವ, ಬೆಂದಕಾಳೂರು…ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಅಂತಹ ನಲ್ವತ್ತು ಬ್ಲಾಗ್ ಒಡತಿಯರ ಪಟ್ಟಿ ನನ್ನಲ್ಲಿದೆ ಇವರೆಲ್ಲಾ ತಮ್ಮ ಬ್ಲಾಗ್ ಗಳಿಗೆ ಕೊಟ್ಟ ಟ್ಯಾಗ್ ಲೈನ್ ಗಳ ಸೊಗಸಿನ ಬಗ್ಗೆ ಬರೆಯಲು ಹೊರಟರೆ ಇನ್ನೊಂದು ಲೇಖನವನ್ನೇ ಬರೆಯಬೇಕಾದೀತು..! ನಮ್ಮ ಈ ಗ್ರೂಪ್ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾದವು. ಆಗ ಪೇಸ್ ಬುಕ್ ನಲ್ಲಿರುವ ನಮ್ಮ ಹಲವು ಗೆಳೆಯರು ’ನೀವೆಲ್ಲಾ ಅಲ್ಲಿ ಸೇರಿ ಏನ್ ಮಾತಾಡ್ತೀರಿ?’ ಎಂದು ಕುತೂಹಲ ವ್ಯಕ್ತ ಪಡಿಸಿದ್ದರು. ಅದನ್ನೆಲ್ಲಾ ನಾನು ನಿಮಗೆ ಹೇಗೆ ವಿವರಿಸಲಿ? ಅಣುವಿನಿಂದ ಅಂತರಿಕ್ಷದ ತನಕ..ಹೆಣ್ಮಕ್ಕಳ ಮುಟ್ಟಿನ ತೊಂದರೆಯಿಂದ ಗಂಡನ ಲೈಂಗಿಕ ಲಾಲಸೆಯ ತನಕ ಅಂತಃಪುರದ ಪಡಸಾಲೆಯ ಗೋಡೆಗೊರಗಿ ನಾವು ಮಾತಾಡುತ್ತೇವೆ. ಸುಖ-ದುಃಖಗಳನ್ನು ಹಂಚಿಕೊಳ್ಳುತ್ತೇವೆ. ಅಗತ್ಯ ಬಿದ್ದಾಗ ಪರಸ್ಪರ ಹೆಗಲಾಗುತ್ತೇವೆ. ವರ್ತಮಾನದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ಮಾಡುತ್ತೇವೆ. ಸಾಧ್ಯವಾದರೆ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ.. ಮಾತ್ರವಲ್ಲಾ ಕ್ರಿಯಾಮುಖಿಯಾಗುತ್ತೇವೆ. ಯಾಕೆಂದರೆ ಸಮಾಜದ ಎಲ್ಲಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಪ್ರಭಾವಿ ಮಹಿಳೆಯರು ಅಂತಃಪುರದಲ್ಲಿದ್ದಾರೆ. ಅಂತಃಪುರದಲ್ಲಿ ನಾವು ಏನು ಮಾತಾಡಿಕೊಳ್ತೀವಿ ಎಂಬುದನ್ನು ಉದಾಹರಣೆ ಸಮೇತವಾಗಿ ಹೇಳದಿದ್ದರೆ ನಿಮಗೆ ಸಮಾಧಾನವಾಗದು ನನಗೆ ಗೊತ್ತಿದೆ ಅದಕ್ಕಾಗಿ ಇಲ್ಲೊಮ್ಮೆ ಇಣುಕಿ ನೋಡಿ; ಇಲ್ಲಿ ಪಡಸಾಲೆಯ ಗೋಡೆಗೊರಗಿ ಕೂತು ಸಂಯಮದಿಂದ ಮಾತಾಡುವವರಿದ್ದಾರೆ..ಹಾಗೆಯ ಬಂಡಾಯದ ಬಾವುಟ ಹಾರಿಸುವವರಿದ್ದಾರೆ..ಮಹಿಳಾ ಮಣಿಗಳನ್ನು ಒಟ್ಟು ಸೇರಿಸಿ ಸುಧಾರಣೆಯ ಮಾತಾಡುವವರಿದ್ದಾರೆ. ಯಾವುದೋ ಒಂದು ಒಳ್ಳೆಯ ಕೆಲಸಕ್ಕಾಗಿ ಅವರನ್ನೆಲ್ಲಾ ಹುರಿದುಂಬಿಸುವ ನಾಯಕಿಯರಿದ್ದಾರ್. ಹಾಗೆಯೇ ತಮ್ಮೊಳಗೆ ಮಾತಾಡಿದಂತೆ ಅಂತರಂಗ ಪಿಸುನುಡಿಗಳನ್ನು ಮೆಲ್ಲಗೆ ಉಲಿಯುವವರಿದ್ದಾರೆ. ವಿಷಯ ಯಾವುದೇ ಇರಲಿ, ತಮ್ಮ ಮಾತುಗಳನ್ನು ಪೂರ್ವಾಗ್ರಹಗಳಿಲ್ಲದೆ ಆಲಿಸುವ, ಸಂತೈಸುವ ಒಂದಷ್ಟು ಜನ ಇಲ್ಲಿದ್ದಾರೆ ಎಂಬ ನಂಬಿಕೆ ಇಲ್ಲಿಯ ಸಖಿಯರಲ್ಲಿದೆ. ಹಾಗಾಗಿ ದಿನಕ್ಕೆ ಕನಿಷ್ಟ ಹತ್ತಾದರೂ ಪೋಸ್ಟ್ ಗಳು ಅಂತಃಪುರದ ಗೋಡೆಯನ್ನು ಅಲಂಕರಿಸುತ್ತವೆ. ಪತ್ರಕರ್ತೆಯೊಬ್ಬಳು.. ಇಲ್ಲಿನ ಗೋಡೆಗಂಟಿಸಿದ ಬರಹ ಹೀಗಿತ್ತು. ’ಇಂದೇಕೋ ತುಸು ಬೇಸರ… ತಿದಿಯೊತ್ತಿದ ನೋವು.. ಧುಮುಕಲು ತಯಾರಾಗಿದ್ದ ಕಣ್ಣೀರು… ಆದರೂ ಅರ್ಧಕ್ಕೆ ನಿಂತ ಕೆಲಸ… ಅಳಲು ಪುರಸೊತ್ತಿರಲಿಲ್ಲ… ಹಾಗಾಗಿ ನೋವಿಗೆ ಒಂದರೆಗಳಿಗೆ ನಿಲ್ಲಲು ಹೇಳಿದೆ… ಆಗ ನೆನಪಾದದ್ದು ನನ್ನೆದೆಗೆ ಹತ್ತಿರವಾದ ಎಮಿಲಿ ಡಿಕಿನ್ಸನ್‌ಳ ಕವನ… “Because I Could Not Stop for Death” ಆಕೆಗೂ ಹೀಗೆ ಅನ್ನಿಸಿರಬೇಕೇನೋ… ಅದನ್ನು ಕನ್ನಡಕ್ಕಿಳಿಸಿದ್ದೇನೆ… ಅದೇಕೋ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.”. ”ಸಾವಿಗಾಗಿ ನಾ… ನಿಲ್ಲುವವಳಲ್ಲ…’ ಎಂಬ ಶೀರ್ಷಿಕೆಯನ್ನು ಕೊಟ್ಟು ಅನುವಾದಿಸಿದ ಈ ಕವಿತೆಯನ್ನು ಅಂತಃಪುರದ ಸೂಕ್ಷ್ಮ ಮನಸ್ಸುಗಳು ಕೊಂಡಾದಿದವು ಜೊತೆಗೆ ಆಕೆಯ ನೋವಿಗೆ ಸ್ಪಂದಿಸಿದವು. ರೂಪಾ ರಾವ್ ಕೇಳುತ್ತಾರೆ; ’ಕಾನ್ಫಿಡೆನ್ಸ್ ನಿಂದ ಸೌಂದರ್ಯನಾ..ಸೌಂದರ್ಯದಿಂದ ಕಾನ್ಫಿಡೆನ್ಸಾ.?’ ಸುದೀರ್ಘ ಚರ್ಚೆ ನಡೆದು ಹೆಚ್ಚಿನವರು ಒಪ್ಪಿಕೊಂಡದ್ದು ಆತ್ಮ ವಿಶ್ವಾಸಕ್ಕೂ ಸೌಂದರ್ಯಕ್ಕೂ ಸಂಬಂಧವಿಲ್ಲ.ಆತ್ಮ ವಿಶ್ವಾಸ ಇದ್ದವರಿಗೆ ಸೌಂದರ್ಯ ಬೇಕು ಅಂತ ಕೂಡಾ ಇಲ್ಲ. ತಮ್ಮೊಳಗಿನ ಸೌಂದರ್ಯ ಅವರಿಗೆ ತಿಳಿದಿರುತ್ತದೆ. ತೇಜಸ್ವೀನಿ ಹೆಗ್ಡೆ ಎಂಬ ತಾಯಿಯ ಕಾಳಜಿಯಿದು; ಮಕ್ಕಳಿಗೆ ಕೆಮ್ಮು, ನೆಗಡಿ, ಕಫ ಇದ್ದಾಗ ಹಣ್ಣುಗಳನ್ನು ಕೊಡಬಹುದೇ? ಯಾವ್ಯಾವ ಹಣ್ಣುಗಳನ್ನು ಕೊಡಬಹುದು? ಆಕೆಗೆ ಎಷ್ಟೊಂದು ಸಲಹೆಗಳು ಬಂದುವೆಂದರೆ ನಮ್ಮ ಅಂತಃಪುರದಲ್ಲಿರುವ ಎಲ್ಲಾ ತಾಯಂದಿರು, ಮೊಮ್ಮಕ್ಕಳಿರುವ ಅಜ್ಜಿಯಂದಿರು ಈ ಸಲಹೆಗಳನ್ನು ಆಸಕ್ತಿಯಿಂದ ಹಿಂಬಾಲಿಸುತ್ತಿದ್ದರು. ನಿವೇದಿತಾ ಒಂದು ಬೆಳಿಗ್ಗೆ ಬಂದವರೇ ಸಖಿಯರನ್ನೆಲ್ಲಾ ತರಾಟೆಗೆ ತಗೊಂಡಿದ್ದು ಹೀಗೆ; ’ಇಂದು ಬೆಳಗು ಪೇಪರ್ ಓದಲು ಕೈಗೆತ್ತಿ ಕೊಂಡ್ರೆ ಒಂದು ಪೂರ್ತಿ ಹಾಳೆ “ಫಾರೆವರ್ ೧೮” ಜಾಹೀರಾತು ಕಾಣುವುದೇ?!, ಹಾಗಾದ್ರೆ ಇದನ್ನ ಯಾರು ಅಂಗಡಿಯಲ್ಲಿ ಕೊಳ್ಳುವುದು, ಹೆಂಗಸರಂತು ಬರಿ ಸ್ಯಾನಿಟರೀ ಪ್ಯಾಡ್ ಕೇಳುವುದಕ್ಕೆ ಹಿಂದೇಟು ಹಾಕ್ತಾರೆ, ನಮಗೆ ಇದರಲ್ಲೂ ಕೂಡ “ಒಪ್ಪಿಗೆ” ಅಥವಾ “ಚಾಯ್ಸ್” ಇಲ್ಲ, ಇದನ್ನೂ ಗಂಡಸೆ ಕೊಂಡು ಹುಡುಗಿಯರಿಗೆ “ತಗೋ ಬಿಗಿ ಮಾಡು” ಅಂತ ತಂದು ಕೊಡುತ್ತಾನೇನು? ಎಷ್ಟು ಅವಮಾನತರುವ ವಿಷಯ, ನೀವೆಲ್ಲ ಸುಮ್ಮನೇಕೆ ಇದೀರಾವ್ವಾ’ ತಡವಾಗಲಿಲ್ಲ. ಅಲ್ಲಿ ಸಿಡಿಮದ್ದುಗಳು ಸಿಡಿದವು.ನೀರು ಹಾಕುವವರು ಜತೆಯಲ್ಲಿ ಬಂದರು ಎನ್ನಿ. ಲೈಂಗಿಕ ದೃಷ್ಟಿಕೋನಕ್ಕೆ ಸಂಬಂಧಪಟ್ಟ ಈ ಪೋಸ್ಟ್ ಅನ್ನು ಗೀತಾ ಬಿ.ಯು ಎಷ್ಟು ಚೆನ್ನಾಗಿ ನಿಭಾಯಿಸಿದರೆಂದರೆ ಸಖಿಯರೆಲ್ಲಾ ಮುಕ್ತವಾಗಿ ಈ ಚರ್ಚೆಯಲ್ಲಿ ಭಾಗವಹಿಸಿದರು. ವಿದೇಶದಲ್ಲಿರುವ ಇನ್ನೊಬ್ಬ ಸಖಿ ತಾನಲ್ಲಿ ಕಂಡ ಲೆಸ್ಬಿಯನ್ನರ ಬಗ್ಗೆ ಬರೆದರೆ ಹಲವಾರು ಸಖಿಯರು ಅಕೆಯ ಪಜೀತಿಯನ್ನು ಛೇಡಿಸುತ್ತಾ ಆ ಬಗ್ಗೆ ಮೌಲಿಕವಾದ, ಸುದೀರ್ಘವಾದ ಚರ್ಚೆಯೊಂದನ್ನು ನಡೆಸಿದರು. ಹೀಗೆ… ಒಬ್ಬ ಸಖಿ ಒಂದು ರುಚಿಯಾದ ಅಡುಗೆಯನ್ನು ಹೇಳಿಕೊಟ್ಟರೆ, ಇನ್ನೊಬ್ಬಾಕೆ ಕುಂಡದಲ್ಲಿ ಗಿಡ ಬೆಳೆಸುವುದರ ಬಗ್ಗೆ ಆಸಕ್ತ ಸಖಿಯರಿಗೆ ಕಲಿಸಿಕೊಡುತ್ತಾರೆ. ಇನ್ನೊಬ್ಬಾಕೆ ತಾನು ತುಂಬು ಸಂಸಾರದ ನಡುವೆ ನಲುಗಿ ಹೋಗುತ್ತಿರುವುದರ ಬಗ್ಗೆ ಹೇಳಿಕೊಂಡರೆ ’ನಿನ್ನದೇ ಆದ ಸ್ಪೇಸ್ ಅನ್ನು ಕಂಡುಕೊಳ್ಳುವುದು ಹೇಗೆ?’ ಎಂಬುದರ ಬಗ್ಗೆ ಹಲವಾರು ಟಿಪ್ಸ್ ಗಳು ಹರಿದು ಬರುತ್ತವೆ. ’ಗೆಳತಿಯರೇ, ಅಂತಃಪುರ ಸ್ವಚ್ಛಗೊಳ್ಳಬೇಕಿದೆಯಲ್ಲ… ಇನ್ನು ಮೂರು ಜನ ಸೇರಿದರೆ ಇಲ್ಲಿ ನಾವು ಒಟ್ಟು ನಾನ್ನೂರು ಜನ! ಇಷ್ಟೊಂದು ಜನ ಅಂತಃಪುರದಲ್ಲಿ ಓಡಾಡ್ತೀವಿ, ಕಸ ಹುಟ್ಟೋದು ಸೂರ್ಯ ಹುಟ್ಟುವಷ್ಟೇ ಸತ್ಯ ಹಾಗೂ ಸಹಜ. ಅದು ತಪ್ಪಲ್ಲವೇ ಅಲ್ಲ ಹಾಗಂತ ಒಪ್ಪಂತೂ ಅಲ್ಲವೇ ಅಲ್ಲ!!! ನಮ್ಮವರಿಂದಲೇ, ನಮ್ಮಿಂದಲೇ ಅಂತಃಪುರ ತಿಪ್ಪೆಗುಂಡಿ ಅನ್ನಿಸಿಕೊಳ್ಳುವ ಮುಂಚೆ ಇದನ್ನು ಸ್ವಚ್ಛವಾಗಿಸೋಣ. ನಾನಂತೂ ಈಗಲೇ ನಾನು ಹಾಕಿದ ಕಸವನ್ನು (ಆಪ್ತವಲ್ಲದ ಮತ್ತು ಮೌಲಿಕವಲ್ಲದ), ಎತ್ತಿ ಡಸ್ಟ್ ಬಿನ್ನಿಗೆ ಹಾಕೊ ಕೆಲಸ ಶುರು ಮಾಡಿದೀನಿ. ನೀವು….?” ಮೊನ್ನೆ ಮೊನ್ನೆ ನಮ್ಮ ಅಡ್ಮಿನ್ ಹೀಗೊಂದು ಪೋಸ್ಟ್ ಹಾಕಿದ್ದೆ ತಡ, ಎಲ್ಲಾ ಸಖಿಯರು ಸೊಂಟಕ್ಕೆ ಸೆರಗು ಸಿಕ್ಕಿಸಿ..ಅಲ್ಲಲ್ಲಾ ಚೂಡಿದಾರದ ವೇಲ್ ಸಿಕ್ಕಿಸಿ…ಅದೂ ಅಲ್ಲಾ.. ಜೀನ್ಸ್ ಮೇಲೆ ಮಡಿಚಿ ಕಸ ಗುಡಿಸಲು ಹೊರಟೇ ಬಿಡೊದೇ..! ಹಾಗಾಗಿ ನನಗೆ ಎಲ್ಲಾ ಪೋಸ್ಟ್ ಗಳನ್ನು ನೋಡಲಾಗಲೇ ಇಲ್ಲಾ..ಇದ್ದುದರಲ್ಲಿ ಒಂದಷ್ಟನ್ನು ಆಯ್ದು ಕೊಟ್ಟಿದ್ದೇನೆ.. ಆಂತಃಪುರದೊಳಗೇ ಕಳೆದ ತಿಂಗಳು ಇನ್ನೊಂದು ಕಿರುಕೋಣೆ ಸೃಷ್ಟಿಯಾಯ್ತು. ಅದಕ್ಕೊಂದು ಹಿನ್ನೆಲೆಯಿದೆ.ನಮ್ಮ ಸಖಿಯೊಬ್ಬರು ತಮ್ಮ ಕವನವೊಂದನ್ನು ದೂರದ ನಾರ್ವೆಯಲ್ಲಿರುವ ಅಮಿತಾ ರವಿಕಿರಣ್ ಗೆ ಮೇಲ್ ಮಾಡಿದರು.ಜಾನಪದದಲ್ಲಿ ವಿಶೇಷ ಆಸಕ್ತಿಯಿರುವ ಸಂಗೀತಗಾರ್ತಿ ಅಮಿತಾ. ಅವರು ಅಲ್ಲಿಂದಲೇ ಅದಕ್ಕೆ ರಾಗ ಸಂಯೋಜಿಸಿ ಹಾಡಿ ಅಂತಃಪುರಕ್ಕೆ ಅಪ್ಲೋಡ್ ಮಾದಿದರು. ಆ ಹಾಡಿನಲ್ಲಿದ್ದ ರಂಗಲಯವನ್ನು ಗುರುತಿಸಿದ ನಮ್ಮ ಸಖಿಯರ ಮಾತುಕತೆಗಳು ರಂಗಭೂಮಿಯ ಸುತ್ತಲೇ ಗಿರಕಿ ಹೊಡೆಯುತ್ತಾ ’ಅಂತಃಪುರ ನಾಟಕ ಮಂಡಳಿ’ ಎಂಬ ಒಳಕೋಣೆಯೊಂದರ ಜನ್ಮಕ್ಕೆ ಕಾರಣವಾಯ್ತು. ಎಂಟು ತಿಂಗಳ ಹಿಂದೆ ಆರಂಭವಾದ ಈ ಗ್ರೂಪಿನ ಹಲವು ಸದಸ್ಯರಿಗೆ ಪರಸ್ಪರ ಮುಖಾಮುಖಿಯಾಗುವ ಹುಕ್ಕಿ ಬಂದ್ಬಿಡ್ತು..ತಡವೇಕೆ ಎಂದುಕೊಂಡ ನಮ್ಮ ಸಖಿಯರು ಅಂತರಾಷ್ಟ್ರೀಯ ಗೆಳೆತನದ ದಿನವಾದ ಅಗಸ್ಟ್ ೫ರ ಮುನ್ನಾದಿನದಂದು ಬೆಂಗಳೂರಿನಲ್ಲಿ ಒಂದು ಗೆಟ್-ಟುಗೆದರ್ ಪಾರ್ಟಿಯನ್ನು ಏರ್ಪಡಿಸಿದರು. ಅದರ ಎಲ್ಲಾ ಜವಾಬ್ದಾರಿಯನ್ನು ಹೊತ್ತುಕೊಂಡವರು ಪೂರ್ಣಿಮಾ ಗಿರೀಶ್. ಆದರೆ ಗೃಹಕೃತ್ಯದ ಜವಾಬ್ದಾರಿಯಿಂದಾಗಿ ಆಕ್ಗೇ ಆ ಪಾರ್ಟಿಗೆ ಬರಲಾಗಲಿಲ್ಲ! ಮಂಗಳೂರಿನ ಹೋಂ ಸ್ಟೇ ದಾಳಿಯ ಕಾವಿನ ದಿನಗಳವು. ಆದರಲ್ಲಿ ಪಾಲೊಳ್ಳಲಾಗದಿದ್ದ ವಿದೇಶಗಳಲ್ಲಿರುವ ಮತ್ತು ದೂರದೂರುಗಳಲ್ಲಿದ್ದ ನಮ್ಮ ಸಖಿಯರು’ ಜಾಗೃತೆ ಕಣ್ರವ್ವಾ..ಸಂಸ್ಕೃತಿ ರಕ್ಷಕರು ಅಲ್ಲಿಗೂ ಧಾಳಿಯಿಟ್ಟಾರು” ಎಂದು ನಮ್ಮನ್ನು ಎಚ್ಚರಿಸಿದ್ದರು. ನಿಜ, ಹೊರಜಗತ್ತು ನಮ್ಮನ್ನು ಆತಂಕಕ್ಕೀಡು ಮಾಡಿದಾಗ ನಾವು ಒಳಜಗತ್ತಿಗೆ ಸರಿಯುತ್ತೇವೆ.ಪೇಸ್ ಬುಕ್ ನಲ್ಲಿ ಅದಕ್ಕಾಗಿ ನಾವು ಆರಿಸಿಕೊಂಡಿರುವ ಜಾಗವೇ ’ಅಂತಃಪುರ.’ ಅಂತಃಪುರವೆಂಬುದು ಅನಾದಿಯಿಂದಲೂ ಹೊರಜಗತ್ತಿಗೆ ಕುತೂಹಲದ ಕೇಂದ್ರವಾಗಿಯೇ ಇತ್ತು…ಈ ನಮ್ಮ ಅಂತಃಪುರವೂ ಅಷ್ಟೆ..ತೆರೆದಿಡಬೇಕಾದ್ದನ್ನು ಸೂಚ್ಯವಾಗಿ ತೆರೆದಿಟ್ಟಿದೆ. ಹಾಗೆಯೇ ಬಚ್ಚಿಡಬೇಕಾದ್ದನ್ನು ಬಚ್ಚಿಟ್ಟಿದೆ. ಒಟ್ಟಾಗಿ ನಾನು ಹೇಳಬೇಕೆಂದದ್ದು ಇಷ್ಟೇ. ಇಲ್ಲಿನ ಸಖಿಯರು ಹೊರಜಗತ್ತಿನಲ್ಲಿ ”ಏನೋ’ ಆಗಿರಬಹುದು. ಆದರೆ ಇಲ್ಲಿ ಎಲ್ಲರೂ ಸಮಾನರು…ಹೆಣ್ಣಿನ ಅಂತಃಕರಣವೊಂದೇ ಇಲ್ಲಿ ಸಕ್ರೀಯವಾಗಿರುತ್ತದೆ.. ಅಂದರೆ ಮನುಷ್ಯ ಸಹಜವಾದ ’ಅಹಂ’ ಇಲ್ಲಿ ಎಂದೂ ಮುನ್ನೆಲೆಗೆ ಬಂದಿಲ್ಲ; ಬರುವುದೂ ಇಲ್ಲ. ಅದು ಈ ಗ್ರೂಪಿನ ಹೆಗ್ಗಳಿಕೆ.  ]]>

‍ಲೇಖಕರು G

September 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

 1. malathi S

  ha!! the only space i miss in FB…got so addicted that i had to step back..Good one Usha Kattemane! Miss u all guys!!
  (was mentioning about antahpura to a friend. He was curious and he said he would get himself a female identity and join Antahpura..so pls careful dearest Sakhis)
  🙂
  malathi s

  ಪ್ರತಿಕ್ರಿಯೆ
 2. sandhya

  Namskara,
  Can you please give me the group name, couldn’t find “anthapura” on FB 🙁
  Thanks,
  Sandhya

  ಪ್ರತಿಕ್ರಿಯೆ
 3. Bhuvanasuresh

  I liked antapura.can you pls tell me how to become member of this organization.Iam all so a novelist in kannada.my first story collection nanu,nanna ganda mattu freud and elli jaritho manavu are published….

  ಪ್ರತಿಕ್ರಿಯೆ
 4. BHAGYALAKSHMI B V

  obba gelati sikkalu heege
  nambalu bhaya
  nambadiralu bhaya
  bayalu bayasuva mana
  oppadu bandhanada
  antahpura
  rani raja rajakumari
  ishtu haleya veshagala olle
  aadare bandhanadalliruva
  nanna gelatiyara
  mounada melu danigala
  kiviyaaguvaase
  hattikkade
  inukuttiddene…
  innu kelisuttilla ?!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: