ಚೇತನಾ ತೀರ್ಥಹಳ್ಳಿ
ಇಲ್ಲೇ… ಹೀಗೆ… ಮನೆಯ ಕಿರು ಓಣಿ ದಾಟಿ ಗೇಟು ತೆಗೆದರೆ, ಮುಖ್ಯ ರಸ್ತೆ ಸೇರುವ ಕಿರು ದಾರಿ. ಅದರ ಆಚೀಚೆ ಎರಡೂ ಬದಿಯಲ್ಲಿ ಒಂದಷ್ಟು ಮನೆಗಳು. ಅವುಗಳಿಗೊಂದು ಜಗಲಿ.
ನಾನು ಇನ್ನೇನು ಗೇಟು ದಾಟಿ ರಸ್ತೆಗೆ ಕಾಲುಹಾಕಬೇಕು,
ಫೋನು! ಅಣ್ಣ ಕಳೆದ ಹುಟ್ಟುಹಬ್ಬಕ್ಕೆ ಕೊಡಿಸಿದ ನಾಜೂಕಿನ ಕ್ಯಾಮೆರಾ ಸೆಟ್ಟು… ಅದನ್ನ ಮುದ್ದಾಗಿ ಎತ್ತಿಕೊಂಡು ಕಿವಿಗಿಡುತ್ತೇನೆ.
“ಹಲೋ!”
ಫೋನಲ್ಲಿ ಮಾತಾಡುವಾಗ ಕೊರಳು ಕೊಂಕದೆ, ತುಟಿ ಡೊಂಕಿಸದೆ, ಹಿಹ್ಹಿಹ್ಹೀ… ನಗದೆ, ಮಾತು ಮುಗಿಯುತ್ತದೆಯೇ? ಗೇಟಿನೆದುರಿಂದ ಗಲ್ಲಿಯ ತುದಿಯ ಪ್ರಕಾಶನಂಗಡಿಯವರೆಗೂ ಸಾಗುತ್ತ ಸಾಗುತ್ತ, ಮಾತು ಮುಗಿದುಹೋಗಿರುತ್ತದೆ.
ಮತ್ತೆ ಮುದ್ದಾದ ಆ ನನ್ನ ಸಂಗಾತಿ ಕಾಲೇಜು ಬ್ಯಾಗಿನೊಳಗೆ ಬಂಧಿ. ಅಲ್ಲಿ, ಕಾಲೇಜಿನಲ್ಲಿ ಸೀನಿಯರ್ ಹುಡುಗರು ” ಹಾಯ್ ಬೇಬ್ ಗೀವ್ ಮಿ ಯುವರ್ ನಂಬರ್” ಅನ್ನಬಾರದಲ್ಲ, ಅದಕ್ಕೆ…
ಈ ದಿನವೂ ಹಾಗೇ…
ಬಹುಷಃ ಅಣ್ಣ ಫೋನ್ ತಂದುಕೊಟ್ಟ ಒಂದುವಾರದಿಂದ ಅದು ಹಾಗೇ…
ಕರೆಕ್ಟಾಗಿ ಗೇಟಿನೆದುರು ನಾನು ಬರುವುದಕ್ಕೂ, ಫೋನು ಕಿವಿ ಸೇರುವುದಕ್ಕೂ ಸರಿಹೋಗುತ್ತೆ.
ಅದೇನು ಕೋ ಇನ್ಸಿಡೆನ್ಸೋ, ಒಟ್ಟಿನಲ್ಲಿ ಎದುರು ಮನೆ ಜಗಲಿಯಲ್ಲಿ ಆಚೀಚೆ ಮನೆ ಆಂಟಿಯರೆಲ್ಲ ಹರಟೆಗೆ ಕುಂತಿರುವಾಗಲೇ ಹಾಗೆ ಫೋನು ಕಿವಿಗೇರುತ್ತದೆ. ಕೊರಳು ಕೊಂಕುತ್ತದೆ.
* * *
ಆ ಫೋನ್ ತೆಗ್ದು ಎಸೀತೀನಿ ನೋಡು ಭೊಸುಡಿ! ಯಾರ ಹತ್ತಿರವೇ ನೀನು ಅಷ್ಟೊಂದು ಮಾತಾಡೋದು?
ಅಣ್ಣ ಮತ್ತು ದೊಡ್ಡಮ್ಮನ ಮಗಳ ವಿನಾ ನನ್ನ ಸೆಲ್ಲಿಗೆ ಕಾಲ್ ಮಾಡುವವರೇ ಇರಲಿಲ್ಲ. ಗೆಳಾತಿಯರೂ ಕಾಲ್ ಮಾಡುವವರಿಲ್ಲ… ಅಸಲಿಗೆ ಗೆಳತಿಯರೇ ನನಗಿಲ್ಲ!
ಮತ್ಯಾಕೆ ಅಮ್ಮ ಹಾರಾಡ್ತಿದಾಳೆ?
ನಾನು ಬುಕ್ಕಲ್ಲಿ ತಲೆ ಹುದುಗಿಸಿ ಕುಂತಿದ್ದೆ. ಅಮ್ಮ ಹಲ್ಲು ಕಚ್ಚುತ್ತ ಬಂದಳು.
“ಯಾಕೇ ಹೀಗೆ ಹೊಟ್ಟೆ ಉರಿಸ್ತೀಯಾ? ಆ ನನ್ನ ಮಗ ಅದ್ಯಾವ ಗಳಿಗೇಲಿ ತಂದುಕೊಟ್ನೋ ಈ ಪೀಡೆಯನ್ನ, ಮನೆ ನೆಮ್ಮದಿಯೆಲ್ಲ ಹಾಳಾಗ್ ಹೋಯ್ತು…” ಅಮ್ಮ ಕೊಂಚ ರಮಾ ಬಾಯಿಯಂತೆ ರೇಗುತ್ತ, ಲೀಲವತಿಯಂತೆ ಕಂಪಿಸುತ್ತ ಪ್ರದರ್ಶನ ಕೊಟ್ಟು ಹೋದಳು.
ಆದರೂ ನನಗೆ ನಾನು ’ಅಷ್ಟೊಂದು ಮಾತಾಡಿದ್ದು’ ಯಾವಾಗ ಅಂತ ಗೊತ್ತಾಗಲಿಲ್ಲ,
ಮತ್ತೆರಡು ದಿನ ಅಮ್ಮನ ಸದ್ದಿಲ್ಲ. ಅಣ್ಣ ಬೇರೆ ಅವಳಿಗೇ ಬಯ್ದು ಬಾಯಿ ಮುಚ್ಚಿಸಿದ್ದ.
ಆದರೆ ಮೊನ್ನೆ ಅಪ್ಪ ಹಾಗೆ ಕೇಳಿಬಿಟ್ಟರಲ್ಲ, ಯಾಕೆ?
“ಮಗಳೇ, ಹಾದಿ ಬೀದೀಲಿ ಹೋಗೋರ್ನ ಪ್ರೀತಿ ಗೀತಿ ಅಂತೆಲ್ಲ ಹಚ್ಕೊಂಡು ನಮ್ ಮರ್ಯಾದೆ ತೆಗೀಬೇಡಮ್ಮಾ…” ಅಂತ ಭಾರ ದನಿಯಲ್ಲಿ ಅಂಗಲಾಚಿದರಲ್ಲ ಯಾಕೆ?
“ಯಾವನೇ ಅವ್ನು? ನಿಜ ಬೊಗಳೇ..” ಅಂತ ಅಮ್ಮ ಕೂಗಾಡಿದ್ದು ಯಾಕೆ?
ಯಾಕೆ ಅಂತ ಮೊದಲು ನನಗೆ ಹೊಳೆಯಲೇ ಇಲ್ಲ.
“ಅಂಥದ್ದೇನೂ ಇಲ್ಲಮ್ಮಾ… ನಿಮ್ಮ ಮರ್ಯಾದೆ ತೆಗೆಯೋ ಅಂಥದ್ದೇನೂ ನಾನು ಮಾಡೋಲ್ಲ…”
ಸಮಜಾಯಿಷಿ ಕೊಡುತ್ತಲೇ ಉಳಿದೆ.
” ಮತ್ಯಾವನ ಹತ್ತಿರವೇ ನೀನು ದಿನವೂ ಹಗೆ ಹರಟೋದು? ಸಂಜೆ ನೀನು ಬರುವಾಗ ನಾನೇ ಕಿಟಕಿಯಲ್ಲಿ ನೋಡಿದೆ. ಸರಿಯಾಗಿ ಓಣಿಯೊಳಗೆ ಬರುವಾಗ ಕಟ್ ಮಾಡ್ತೀಯ ನೀನು…
ನೀನು ದಿನಾ ಹೀಗೆ ಮಾತಾಡ್ತಾ ಬರೋದನ್ನ, ಮನೆಯಿಂದ ಹೊರಟ ಕೂಡಲೆ ಫೋನು ಗಲ್ಲಕ್ಕೆ ಹಚ್ಚೋದನ್ನ ಎಲ್ರೂ ನೋಡಿದಾರೆ. ಹಾಗೆ ನಮ್ಮಿಂದ ಕದ್ದು ಮಾತಾಡೋದು… ಅವರೆಲ್ಲ ಹೇಳಿ ನಮಗೆ ಗೊತ್ತಾಗಬೇಕಾಯ್ತು ವಿಷಯ….” ಅಮ್ಮ ಸೆರಗಿಗೆ ಬಾಯೊತ್ತಿದಳು.
ಹೌದಲ್ಲ!? ಒಂದೆರಡು ದಿನದಿಂದಲ್ಲ, ಸುಮಾರು ಎಂಟು ತಿಂಗಳಿಂದ ಅದು ಹಾಗೇ ಆಗುತ್ತಿದೆ…
ಓಣಿಯಿಂದ ಹೊರಬೀಳುವಾಗ, ಓಣಿಯ ಒಳಹೊಕ್ಕುವಾಗಲೆಲ್ಲ ಫೋನು ಹಚ್ಚುವ, ಮುಚ್ಚುವ ಅಟ ನಡೆಯುತ್ತಲೇ ಇದೆ.
ಅಮ್ಮನಿಗೆ ಅದನ್ನ ಹೇಳಿದ್ದು ಯಾರು?
ಎದುರು ಸಾಲಿನ ಆಂಟಿಯರು!!
ಊಹೂಂ… ನಾನೆಷ್ಟೇ ಹೇಳಿದರೂ ಅಪ್ಪ ಅಮ್ಮನಿಗೆ ಸಮಾಧಾನವಾಗಲಿಲ್ಲ. ಫೋನು ಕಸಿದು ಕೈಬಿಟ್ಟರು. ಅಣ್ಣ ಬಿಲ್ ಡೀಟೇಲ್ ತೆಗೆಸಿ ನೋಡಿದ. ಅದರಲ್ಲಿ ಎಂತ ಮಣ್ಣಾಂಗಟ್ಟಿಯೂ ಸಿಗಲಿಲ್ಲ!
ಅಂವ ಏನೇ ಇದು? ಅಂತ ತಲೆ ನೇವರಿಸಿ ಸುಮ್ಮಗಾದ.
ಈಗ ಅಪ್ಪ ಅಮ್ಮ ಮತ್ತೆ ಮತ್ತೆ ಕೇಳುತ್ತಲೇ ಇದ್ದಾರೆ. ಸಾಬರವನೋ, ಸುಂಟರವನೋ? ಅಂತ ತಮ್ಮತಮ್ಮಲ್ಲೆ ಪಿಸುಗುಟ್ಟೋದು ನನಗೂ ಕೇಳಿದೆ
ಇವತ್ತು ಬೆಳಿಗ್ಗೆ ಅಮ್ಮನ ಕೊನೆಯ ಎಚ್ಚರಿಕೆ. ಅದು ಯಾರು, ಏನು ಕಥೆ ಅಂತ ಹೇಳದಿದ್ದರೆ ನಿನ್ನ ಕಾಲೇಜು ಗೀಲೇಜೆಲ್ಲ ಬಂದ್ ಅಂದಿದ್ದಾಳೆ. ಜಾತಕ ಹೊರಡಿಸುವ ಮಾತಾಡಿದ್ದಾಳೆ…
* * *
ಎದುರು ಸಾಲಿನ ಆಂಟಿಯರು…. ಕೊಕ್ಕರೆ ಮೂತಿಯ, ಬೆದಕು ಕಣ್ಣುಗಳ, ಸದಾ ಏನಾದರೂ ಹುಡುಕುತ್ತಲೇ ಇರುವ ಮಾಟಾಗಾತಿಯರು…
” ಏನೇ ಇದು? ಮುಂದೆ ಕೊಳದಪ್ಪಲೆ, ಹಿಂದೆ ಹುಣಸೆ ಮೂಟೆ!?” ಅನ್ನುತ್ತಿದ್ದರಲ್ಲವೇ ದಿನಾ ಕಾಲೇಜಿಗೆ ಹೋಗುವಾಗ?
“ಓ? ಏನದು ಆ ಥರ ಮೊಡವೆ? ಯಾರಿಗಾದ್ರೂ ಲೈನಾ!?” ಮತ್ತೂ ಪೋಲಿ ಪೋಲಿ ಪ್ರಶ್ನೆಗಳು… ಇಶ್ಶೀ! ನನಗವೆಲ್ಲ ಒಂಚೂರೂ ಸೇರವು.
ಆ ದಿನ… ಅಣ್ಣ ಸೆಲ್ ಉಡುಗೊರೆ ಕೊಟ್ಟ ಏಳನೇ ದಿನ, ಅದೇನು ತೋಚಿತೋ ನನಗೆ, ಹಾಗೆ ಅವರೆಲ್ಲರ ಕೆಟ್ಟ ಬಾಯಿಂದ ಕಿವಿ ಮುಚ್ಚಿಕೊಳ್ಳಲು ಫೋನು ಒತ್ತಿಕೊಂಡೆ.
“ಹಲೋ…” ಕೊರಳು ಕೊಂಕಿಸಿದೆ. ಆ ದಾರಿ ಮುಗಿಯುವವರೆಗೂ ಸುಮ್ಮಸುಮ್ಮನೆ ನಕ್ಕೆ.
ಕೊನೆ ಕೊನೆಗೆ ಅವರಿಂದ ನನ್ನ ಕಿವಿ ಕಾಪಾಡಿಕೊಳ್ಳುವ ಉಪಾಯವಾಗಿಹೋಯ್ತು ಅದು.
ಈಗ ಅಪ್ಪ-ಅಮ್ಮ ಕೇಳ್ತಿದಾರೆ, “ಹೇಳು, ಫೋನಲ್ಲಿ ಯಾರ ಹತ್ತಿರ ಅಷ್ಟು ಮಾತಾಡ್ತೀ?”
ಹೇಗೆ ಹೇಳಲಿ ಈ ನನ್ನ ಹುಚ್ಚನ್ನು?
ಕೊಳಕು ಬಾಯಿಯ ಆಂಟಿಯರನೆದುರಿಸಲಾಗದೆ ಮಾಡಿದ ಈ ತಿಕ್ಕಲುತನವನ್ನು?
ಅಮ್ಮ ನನಗೆ ಹುಚ್ಚು ಹಿಡಿಯಿತೆಂದೇ ಎದೆ ಬಡಿದುಕೊಂಡಾಳು ಮತ್ತೆ.
ಅಪ್ಪನ ಕಣ್ಣಲ್ಲಿ ಮತ್ತೆ ಅಸಹಾಯಕತೆ ಒಡೆದೀತು…
ಹೇಗೆ ಹೇಳುವುದು ನಾನು ಅವರಿಗೆ ಅದನ್ನೆಲ್ಲ?
ಅಣ್ಣ ಕೂಡ, “ನಿನಗೆ ತಲೆ ಕೆಟ್ಟಿದೆ” ಅಂದುಬಿಟ್ಟರೆ?
ಯಾರಾದರೂ ಸಹಾಯಕ್ಕೆ ಬನ್ನಿ ಪ್ಲೀಸ್…
chetana
good small story with lot of esence .keep it up
you can narate the situation very well
take care
ಚೇತನಾವರೆ! ಹೆಣ್ಣಿನ ಮನಸ್ಸಿನ ನಾನಾ ಮುಖಗಳನ್ನ ಸಮರ್ಥವಾಗಿ
ತೆರೆದಿದುತ್ತಿದ್ದೀರಿ. ನಿಮ್ಮ ಭಾಷೆ ಸೊಗಸಾಗಿದೆ. ಕೆಲವೇ ವಾಕ್ಯಗಳಲ್ಲಿ
ಹೇಳಬೇಕಾದುದನ್ನು ಪರಿಣಾಮಕಾರಿಯಾಗ್ಗಿ ಹೇಳುವ ಕಲೆ ತಮಗೆ ಸಿದ್ಧಿಸಿದೆ.
ಖಂಡಿತ ಇದನ್ನು ಪುಸ್ತಕ ರೂಪದಲ್ಲಿ ತನ್ನಿ. ಮುಂಗಡ ಅಭಿನಂದನೆಗಳು.
.