ಫ್ರೀಡ್ಮನ್ ಫ್ರೀ ಟಾಕ್

ಕೆ ಕರಿಸ್ವಾಮಿ ವಿಜಯ ಕರ್ನಾಟಕದ ಹಿರಿಯ ಪತ್ರಕರ್ತರು. ಈ ಹಿಂದೆ ಇದೆ ಪತ್ರಿಕೆಯ ಗಂಗಾವತಿ ಆವೃತ್ತಿಯ ಮುಖ್ಯಸ್ಥರಾಗಿದ್ದವರು.

ಇನ್ನಷ್ಟು ಫೋಟೋಗಳಿಗಾಗಿ ಭೇಟಿ ಕೊಡಿಓದುಬಜಾರ್

baraka-6

-ಕರಿಸ್ವಾಮಿ.ಕೆ

ಬೆಂಗಳೂರಿನ ತಾಜ್ ರೆಸಿಡೆನ್ಸಿ ಹೋಟೆಲ್ ನಲ್ಲಿ ಹೆಸರಾಂತ ಪತ್ರಕರ್ತ ಹಾಗೂ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ `ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಪುಸ್ತಕದ ಕರ್ತೃ ಥಾಮಸ್ ಲಾರೆನ್ ಫ್ರೀಡ್ಮನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಸುಮಾರು ಮೂರು ನೂರು ಆಹ್ವಾನಿತರ ಸಮ್ಮುಖದಲ್ಲಿ ಜಗತ್ತಿನ ಐಟಿ ಐಕಾನ್ ಗಳಲ್ಲಿ ಒಬ್ಬರಾದ ನಂದನ್ ನಿಲೇಕಣಿ ಮತ್ತು ಫ್ರೀಡ್ಮನ್ ಮುಖಾಮುಖಿಯಾಗಿದ್ದರು.

`ಇಮ್ಯಾಜಿನಿಂಗ್ ಇಂಡಿಯಾ ಇನ್ ಎ ಹಾಟ್, ಫ್ಲ್ಯಾಟ್, ಅರೌಂಡ್ ಕ್ರೌಡೆಡ್ ವರ್ಲ್ಡ್’ ಎಂಬ ವೇದಿಕೆ ಮೇಲೆ ಇವರನ್ನು ಮುಖಾಮುಖಿ ಮಾಡಿಸಿದ್ದು ಪೆಂಗ್ವಿನ್ ಮತ್ತು ಎನ್ ಡಿ ಟಿ ವಿ . ಇದು ಪೆಂಗ್ವಿನ್ ಇತ್ತೀಚೆಗೆ ಪ್ರಕಟಿಸಿರುವ ನಿಲೇಕಣಿ ಅವರ ಇಮ್ಯಾಜಿನಿಂಗ್ ಇಂಡಿಯಾ’ ಫ್ರೀಡ್ಮನ್ ಅವರ ಇತ್ತೀಚಿನ ಕೃತಿ. `ಹಾಟ್, ಫ್ಲ್ಯಾಟ್, ಅರೌಂಡ್ ಕ್ರೌಡೆಡ್ ವರ್ಲ್ಡ್’ ಪುಸ್ತಕಗಳನ್ನು ಪ್ರಮೋಟ್ ಮಾಡಲು ಏರ್ಪಡಿಸಿದ್ದ ಕಾರ್ಯಕ್ರಮವಾದರೂ ಅಲ್ಲಿ ಅನೇಕ ಗಂಭೀರ ಸಮಸ್ಯೆಗಳ ಬಗ್ಗೆ ಇಬ್ಬರೂ ಒಂದೂವರೆ ಗಂಟೆ ನಿರರ್ಗಳವಾಗಿ ಅಭಿಪ್ರಾಯ ಹಂಚಿಕೊಂಡರು. ಪ್ರೇಕ್ಷಕರ ಪ್ರಶ್ನೆಗಳಿಗೂ ಉತ್ತರಿಸಿದರು. ಎಂದಿನಂತೆ ಎನ್ ಡಿ ಟಿ ವಿ ಯ ದೊಡ್ಡ ಗಂಟಲಿನ ಬರ್ಖಾ ದತ್ ಈ ಇಬ್ಬರು ಐಕಾನ್ ಗಳನ್ನೂ ಮತ್ತು ಪ್ರೇಕ್ಷಕರನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅದೊಂದು ಅಪರೂಪದ ಸಂಜೆ.

ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪತ್ರಕರ್ತನಾಗಿ ಮಾಡಿದ ಕೆಲಸಕ್ಕೆ ಮೂರು ಬಾರಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಪಡೆದಿರುವ, ಥಾಮಸ್ ಫ್ರೀಡ್ಮನ್ ಮತ್ತು ನಂದನ್ ನಿಲೇಕಣಿ ಅವರ ಜತೆಗಿನ ಸಂವಾದದಲ್ಲಿ ಜಾಗತಿಕ ತಾಪಮಾನ ಏರಿಕೆ, ಹಣಕಾಸು ಹಿಂಜರಿತ, ಜಾಗತೀಕರಣ, ಎನರ್ಜಿ ಟೆಕ್ನಾಲಜಿ, ಪ್ರಜಾಪ್ರಭುತ್ವ, ಕಾನೂನು, ಸ್ಲಂ ಡಾಗ್ ಮಿಲೆನಿಯರ್, ಭಯೋತ್ಪಾದನೆ ಮತ್ತು ಯುದ್ಧ ಮುಂತಾದ ಅನೇಕ ವಿಷಯಗಳು ಬಂದವು. ಇಬ್ಬರೂ ಒಟ್ಟಾಗಿ ಒತ್ತಿ ಒತ್ತಿ ಜಪಿಸಿದ ಮಂತ್ರ `ಆಶಾವಾದ’. ಇದೊಂದೇ ಆರ್ಥಿಕ ಹಿಂಜರಿತದಿಂದ ಪ್ರಪಂಚವೇ ತತ್ತರಿಸಿರುವಾಗ ಎಲ್ಲರೂ ಗುರಿಮುಟ್ಟಲು ಇರುವ ಏಕೈಕ ಮಾರ್ಗ ಎಂದು ಹೇಳಿದ್ದು ಆ ಅರ್ಥಪೂರ್ಣ ಮಾತುಕತೆಯ ಒಟ್ಟು ಸಾರಾಂಶದಂತಿತ್ತು.

ಲಘುಹಾಸ್ಯದ ಧಾಟಿಯಲ್ಲೇ ಬರ್ಖಾ ಮತ್ತು ಪ್ರೇಕ್ಷಕರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಫ್ರೀಡ್ಮನ್ಎಲ್ಲರ ಮನ ಗೆದ್ದರು. ನಮ್ಮೆಲ್ಲಾ ತಂತ್ರಜ್ಞಾನ ಪರಿಸರದ ಜೀವವೈವಿಧ್ಯ(Ecosystem)  ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಬಳಕೆಯಾಗಬೇಕು. ಆರ್ಥಿಕ ಸ್ಥಿರತೆಗೆ ಇಂಧನ ತಂತ್ರಜ್ಞಾನ(energy technology) ಹೊಸ ಮಂತ್ರವಾಗಬೇಕು. ಆರ್ಥಿಕ ಪಾರುಗಾಣಿಕೆಯಷ್ಟೇ ಮುಖ್ಯವಾಗಿ ತಕ್ಷಣ ಗಮನಹರಿಸಬೇಕಿರುವುದು ಇಂಧನ ತಂತ್ರಜ್ಞಾನ. ಅದು ಬೆಳೆಯದೇ ಹೋದರೆ ಇನ್ನೊಂದು ಕೈಗಾರಿಕಾ ಕ್ರಾಂತಿ ಸಾಧ್ಯವಿಲ್ಲ. ಅರಬ್ ರಾಷ್ಟ್ರಗಳು ಆಂತರಿಕ ಸ್ವಾತಂತ್ರ್ಯದ ಕೊರತೆ, ಮಹಿಳೆಯರ ಬಲವರ್ಧನೆ ಆಧುನಿಕ ಶಿಕ್ಷಣಗಳ ಬಗ್ಗೆ ತಕ್ಷಣ ಗಮನ ನೀಡಬೇಕು. ಎಲ್ಲರೂ ಸ್ವತಂತ್ರವಾಗಿ ನಡೆದಾಡಲು, ಮಾತನಾಡಲು ಅಲ್ಲಿರುವ ಉಸಿರುಗಟ್ಟುವ ವಾತಾವರಣವನ್ನು ತಿಳಿಗೊಳಿಸದೆ ಜಗತ್ತಿನೊಟ್ಟಿಗೆ ಶಾಂತಿಯುತ ಸಂಬಂಧ ಏರ್ಪಡಿಸಿಕೊಳ್ಳಲು ಸಾಧ್ಯವಿಲ್ಲ. ತನ್ನ ಸ್ಥಳೀಯ ಶಕ್ತಿಯನ್ನು ಜಾಗತೀಕರಣಗೊಳಿಸುವ ಮೂಲಕ ನಾಯಕತ್ವ ವಹಿಸಿಕೊಳ್ಳುವ ಶಕ್ತಿ ಬೆಂಗಳೂರಿಗಿದೆ. ಅಮೆರಿಕ ಇಂಥದೇ ಅವಕಾಶವನ್ನು ಉಪಯೋಗಿಸಿಕೊಂಡು ಬೆಳೆದಿದೆ. ಇಂತಹ ಅವಕಾಶ ಬಂದರೆ ಬೆಂಗಳೂರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಮೆರಿಕ ಕೂಡ ತಲೆತಲಾಂತರದಿಂದ ನಿರ್ಲಕ್ಷಿಸಿರುವ ಪರಿಸರ, ಇಂಧನ, ವಲಸೆ, ವೃದ್ಧಾಪ್ಯ ಪಿಂಚಣಿ ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿರುವುದು ತುರ್ತು. ಸ್ಲಂ ಡಾಗ್ ಮಿಲೆನಿಯರ್ ಚಿತ್ರವನ್ನು ಕೇವಲ ಕಲೆಯಾಗಿ ಮಾತ್ರ ನೋಡಬೇಕು. ಭಾರತದ ಸ್ವಾತಂತ್ರ್ಯ, ಆತ್ಮವಿಶ್ವಾಸಗಳನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು ಫ್ರೀಡ್ಮನ್.

ತಮ್ಮ ಹೆಸರಾಂತ ಪುಸ್ತಕ `ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಗೆ ಆ ಹೆಸರು ಇಡಲು ನಿಲೇಕಣಿ ಕಾರಣ ಎಂದ ಫ್ರೀಡ್ಮನ್, ನಂದನ್ ಅವರನ್ನು ಸಂದರ್ಶಿಸಿದಾಗ ಅವರು ಹೇಳಿದ `ದಿ ಪ್ಲೇಯಿಂಗ್ ಫೀಲ್ಡ್ ಈಸ್ ಬೀಯಿಂಗ್ ಲೆವೆಲ್ಡ್’ ಎಂಬ ಉಕ್ತಿಯೇ ಅಂತಿಮವಾಗಿ `ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಎಂಬ ಹೆಸರಿನ ಉಗಮಕ್ಕೆ ಕಾರಣವಾಯಿತು ಎಂದು ವಿವರಿಸಿದರು. ಪ್ರಶ್ನೆಗಳಿಗೆ ಚುಟುಕಾಗಿ ಮತ್ತು ಲಘು ಧಾಟಿಯಲ್ಲಿ ಉತ್ತರಿಸಲು ನಂದನ್ ಕೂಡಾ ಹಿಂದೆ ಬೀಳಲಿಲ್ಲ. ಸತ್ಯಂನ ಹಗರಣದ ಮೂಲ `ರಿಯಲ್ ಎಸ್ಟೇಟ್’ ಎಂಬ ಚಟಾಕಿ ಹಾರಿಸಿದ ನಿಲೇಕಣಿ, ಇಂಥ ಹಗರಣಗಳು ಭಾರತದ ಐಟಿ ಉದ್ಯಮ ತನ್ನ ಬದ್ಧತೆ ಮತ್ತು ಪಾರದರ್ಶಕತೆಯನ್ನು ಪುನಾ ನಿರೂಪಿಸಬೇಕಾದ ಸ್ಥಿತಿಗೆ ದೂಡಿದೆ. ಹಗರಣ ಭಾರತಕ್ಕೆ ಕಪ್ಪು ಚುಕ್ಕೆಯಾದರೂ ಅದು ವಿಶ್ವಾಸಾರ್ಹತೆಗೆ ದೊಡ್ಡ ಹಾನಿ ಮಾಡಲಾರದು. ಆದರೆ ಇನ್ನು 30 ವರ್ಷಗಳನಂತರ ಭಾರತಕ್ಕೆ ಸಿಗುವ ಮಾನವಶಕ್ತಿಯ (Human capital) ಲಾಭ ಬೇರೆ ಯಾವುದೇ ದೇಶಕ್ಕೆ ಸಿಗಲು ಸಾಧ್ಯವಿಲ್ಲ. ಆಗ ದೇಶದ ಯುವಜನರೇ ಬಹುಸಂಖ್ಯಾತರಾಗಿರುತ್ತಾರೆ. ಇದನ್ನೇ demographic dividend ಎಂದು ಕರೆದರು ನಿಲೇಕಣಿ. ಒಂದು ದೇಶದ ಚರಿತ್ರೆಯಲ್ಲಿ ಒಮ್ಮೆ ಮಾತ್ರ ಬರುವ ಸುವರ್ಣ ಅವಕಾಶ ಇದು. ಭಾರತದಲ್ಲಿ ಹುಟ್ಟುವ ಮಕ್ಕಳ ಅನುಪಾತ ಕ್ರಮೇಣ ಕಡಿಮೆಯಾಗುತ್ತಿದ್ದು ಹಿರಿಯರ ಸಂಖ್ಯೆಯೂ ಕುಗ್ಗಲಿದೆ ಆಗ ದೇಶದ ಸಮಗ್ರ ಬೆಳವಣಿಗೆ ಭರದಿಂದ ಸಾಗುತ್ತದೆ. ಹಗರಣಗಳಲ್ಲಿ ಭಾರತವೇನೂ ಏಕಸ್ವಾಮ್ಯತೆ ಸಾಧಿಸಿಲ್ಲ ಏಕೆಂದರೆ ಅಮೆರಿಕದಲ್ಲೂ ಹಗರಣಗಳಿವೆ. ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಒಂದು ಹಗರಣದ ಆರೋಪಿಯನ್ನು ತಿಂಗಳುಗಳೇ ಕಳೆದರೂ ಬಂಧಿಸಿಲ್ಲ. ಆದರೆ ಭಾರತದಲ್ಲಿ ಒಂದು ದೊಡ್ಡ ಸಂಸ್ಥೆಯ ಮುಖ್ಯಸ್ಥನನ್ನು ಹಗರಣ ಹೊರಬಿದ್ದ ಮೂರು ದಿನಗಳಲ್ಲಿ ಬಂಧಿಸಲಾಯಿತು. ಇದು ಭಾರತ ಹೊಂದಿರುವ ನ್ಯಾಯ ವ್ಯವಸ್ಥೆಯ ಸಂಕೇತ. ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿ ಎಂದರು.

ಭಾರತದ ಪ್ರತಿ ಮನುಷ್ಯ ಎರಡು ಟನ್ ಕಾರ್ಬನ್ ಅನ್ನು ವಾತಾವರಣಕ್ಕೆ ಸೇರಿಸುತ್ತಿದ್ದರೆ, ಅದೇ ಅಮೆರಿಕದಲ್ಲಿ ಪ್ರತಿಯೊಬ್ಬನೂ 20 ಟನ್ ಸೇರಿಸುತ್ತಿದ್ದಾನೆ. ಆದರೂ ಭಾರತ ಕಾರ್ಬನ್ ನಿಯಂತ್ರಣದ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು. ಭಾರತ ಅವಕಾಶಗಳ ಬಾಂಬ್ ಮೇಲೆ ಕುಳಿತಿದೆ ಆದರೆ ಅದಕ್ಕೆ ಇಚ್ಛಾಶಕ್ತಿ ಇರುವ ನಾಯಕತ್ವದ ಕೊರತೆ ಮತ್ತು ರಾಜಕೀಯ ಕ್ಷೋಭೆ ದೊಡ್ಡ ತೊಡಕುಗಳಾಗಿವೆ. ಭಾರತ ಇತರ ಆರ್ಥಿಕ ಮೂಲಗಳ ಕಡೆಯೂ ಗಮನಹರಿಸಬೇಕೆಂಬ ಪಾಠವನ್ನು ಈ ಹಿಂಜರಿತದಿಂದ ಕಲಿಯಬೇಕು ಹಾಗೆಯೇ ಇತರ ಮೂಲಸೌಕರ್ಯಗಳ ಸುಧಾರಣೆಗೆ ತುರ್ತಾಗಿ ಗಮನ ಕೊಡಬೇಕು.

ಸ್ಲಂ ಡಾಗ್ ಮಿಲೆನಿಯರ್ ನಲ್ಲಿ ಭಾರತವನ್ನು ಚಿತ್ರಿಸಿರುವ ಕ್ರಮ ಸರಿಯೇ ಎಂಬ ಪ್ರಶ್ನೆಗೆ ಅದರಿಂದ ನಮ್ಮ ಆತ್ಮವಿಶ್ವಾಸವನ್ನು ಕುಂದಿಸಿಕೊಳ್ಳಬೇಕಾಗಿಲ್ಲ. ಅದನ್ನು ಚಿತ್ರವಾಗಿಯಷ್ಟೇ ನೋಡಬೇಕು ಏಕೆಂದರೆ ಆ ಸಿನಿಮಾ ಇಡೀ ಭಾರತದ ಚಿತ್ರಣ ನೀಡುವುದಿಲ್ಲ. ಆ ಚಿತ್ರದಲ್ಲಿ ಚಿತ್ರಿಸಿರುವುದಕ್ಕಿಂತ ಭಾರತ ಹೆಚ್ಚು ವೈವಿಧ್ಯಮಯ ಮತ್ತು ಸಂಕೀರ್ಣವಾಗಿಯೂ ಇದೆ ಎಂದರು ನಿಲೇಕಣಿ.

ಕಾರ್ಯಕ್ರಮದ ನಂತರ, ತಾವು ಕೊಂಡ ಪುಸ್ತಕದಲ್ಲಿ ಅವರಿಬ್ಬರ ಹಸ್ತಾಕ್ಷರ ಪಡೆಯಲು ಪುಸ್ತಕ ಪ್ರೇಮಿಗಳು ಎರಡು ಉದ್ದದ ಸಾಲುಗಳಲ್ಲಿ ನಿಂತಿದ್ದರು. ನನ್ನ ಸರದಿಯಲ್ಲಿ ಫ್ರೀಡ್ಮನ್ ಅವರಿಗೆ ವಿಜಿಟಿಂಗ್ ನೀಡಿ ಪರಿಚಯಿಸಿಕೊಂಡೆ. ಮುಗುಳ್ನಕ್ಕು, ಹಾಯ್ ನೈಸ್ ಮೀಟಿಂಗ್ ಯೂ ಅಂದರು. ದೊಡ್ಡ ಅಂಕಣಕಾರ,ಲೇಖಕ, ಪತ್ರಕರ್ತನ ಜತೆ ಏನು ಮಾತನಾಡಬೇಕೆಂದು ತಕ್ಷಣಕ್ಕೆ ಹೊಳೆಯಲಿಲ್ಲ. ಪುಸ್ತಕದಲ್ಲಿ ಸುಮ್ಮನೆ ಸಹಿ ಹಾಕಿಕೊಡುತ್ತಾರೆ ಎಂದು ಎಣಿಸಿದ್ದೆ. ಎಲ್ಲರೊಂದಿಗೂ ಮಾತನಾಡುತ್ತಿದ್ದುದಷ್ಟೇ ಅಲ್ಲದೆ ಅವರು ಹೇಳಿದ ವಿಷಯಗಳನ್ನು ಅವರವರ ವಿಜಿಟಿಂಗ್ ಕಾರ್ಡ್ ನಲ್ಲಿ ದಾಖಲಿಸಿಕೊಳ್ಳುತ್ತಿದ್ದುದು ಕುತೂಹಲಕಾರಿಯಾಗಿತ್ತು. ಜಾಗವಿಲ್ಲದ ವಿಜಿಟಿಂಗ್ ಕಾರ್ಡ್ ಗಳ ಮೂಲೆಮೂಲೆಗಳಲ್ಲೂ ಬರೆದುಕೊಳ್ಳುತ್ತಿದ್ದರು.

ನ್ಯೂಯಾರ್ಕ್ ಟೈಮ್ಸ್ ನ ನಿಮ್ಮ ಅಂಕಣವನ್ನು ತಪ್ಪದೆ ಓದುತ್ತೇನೆ ಅಂದೆ. ವೆರಿಮಚ್ ಅಪ್ರಿಷಿಯೇಟೆಡ್ ಅಂದರು. ಸೋ.., ಎಂದು ಮಾತು ಮುಂದುವರಿಸುವಂತೆ ಸೂಚಿಸಿದರು. ಹಣಕಾಸು ಹಿಂಜರಿತದ ಸಮಯದಲ್ಲಿ ಬೇಲೌಟ್(ಪಾರುಗಾಣಿಕೆ) ಬಗ್ಗೆ ನೀವು ತಳೆದಿದ್ದ ನಿಲುವು ನನಗೆ ತುಂಬ ಇಷ್ಟವಾಯಿತು ಎಂದೆ. ಹೇಗೆ ಎಂಬಂತೆ ನೋಡಿದರು. ಉತ್ತಮ ಶಕ್ತಿಯುತ ಸೋಲಾರ್ ಕಾರುಗಳನ್ನು ಸಂಶೋಧಿಸಲು ಹಣ ವಿನಿಯೋಗಿಸುವ ಬದಲು ಔಟ್ಡೇಟೆಡ್ ಆಗುತ್ತಿರುವ ಕಾರುಗಳನ್ನು ತಯಾರಿಸುವ ಕಂಪನಿಗಳಿಗೆ ಹಣದ ನೆರವು (ಪಾರುಗಾಣಿಕೆ)ನೀಡುವುದು ಡಿವಿಡಿಗಳು ಔಟ್ಡೇಟೆಡ್ ಆಗುವಾಗ ಕ್ಯಾಸೆಟ್ ತಯಾರಿಕೆಗೆ ಹಣ ಕೊಟ್ಟಂತೆ ಎಂಬ ನಿಮ್ಮ ಅಭಿಪ್ರಾಯದ ಹಿಂದಿನ ಲಾಜಿಕ್ ತುಂಬಾ ಚನ್ನಾಗಿದೆ ಎಂದು ಹೇಳಿದೆ.

ಥ್ಯಾಂಕ್ಯು, ಥ್ಯಾಂಕ್ಯು ವೆರಿಮಚ್ ಅಂದು ನನ್ನ ವಿಜಿಟಿಂಗ್ ಕಾರ್ಡ್ ಮೇಲೆ ಏನನ್ನೋ ಗೀಚಿಕೊಂಡರು. ಗಂಭೀರವಾಗಿ ಮಾತನಾಡುತ್ತಲೇ ಆಟೋಗ್ರಾಫ್ ಹಾಕಿಕೊಟ್ಟು ಇನ್ನೊಬ್ಬರನ್ನು ಸ್ವಾಗತಿಸುವಂತೆ ಆ ಕಡೆ ನಗೆ ಬೀರಿದರು. 

 

[email protected]

‍ಲೇಖಕರು avadhi

February 26, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This