
ಉಷಾ ನರಸಿಂಹನ್
ಎಲ್ಲೋ ಏನೋ ಕಳೆದು ಹೋದ ಹಾಗೆ… ಬದುಕಿನ ಮುಖ್ಯ ತಂತುವೊಂದು ಕಳಚಿಕೊಂಡ ಹಾಗೆ. ನ್ಯಾಯವೆ; ಎಲ್ಲಾ ಸಾವುಗಳು ಹತ್ತಿರದವರನ್ನು ಕಂಗೆಡಿಸುತ್ತದೆ. ಆಪ್ತರ ಸಾವು ತಂದುಕೊಡುವ ನಿರ್ವಾತವನ್ನು ಯಾವುದರಿಂದಲೂ ತುಂಬಲಾರದು. ಮನುಷ್ಯರ ಭಾವಬಂಧಗಳ ಪ್ರಪಂಚಕ್ಕೆ ಇದೇನು ಹೊಸದಲ್ಲ. ಸಂಬಂಧಗಳು ಮನುಷ್ಯರ ನಡುವಿನದ್ದೇ ಆಗಿರಬೇಕೆಂಬ ಕರಾರೇನಿಲ್ಲ. ಹದಿನೈದು ವರ್ಷ ಜೊತೆಗಿದ್ದ ಚತುಷ್ಪಾದಿಯೊಂದು, ಯಾವ ಮಾತನ್ನು ಆಡದೇ ನೂರುಭಾವ ಸಂವಹನ ಮಾಡಿದ ನಾಯಿಯೊಂದು ಅದರ ಸಾವಿನಲ್ಲಿ ಇಂಥ ದಟ್ಟವಿಷಾದ, ನೋವನ್ನು ತಂದುಕೊಡಬಹುದೆಂದು ನಾನು ಕನಸುಮನಸಿನಲ್ಲೂ ಅಂದುಕೊಂಡಿರಲಿಲ್ಲ.
ಬಂಟಿ ನಮ್ಮ ಮನೆಯ ನಾಯಿ. ಬೆಳ್ಳಗಿನ ಲ್ಯಾಬ್ರಾಡಾರ್ ರಿಟ್ರೈವರ್ ಎಂಬ ತಳಿ. ಆಕಳ ಹಾಲಿನ ಕೆನೆಗೆ ಒಂದಿಷ್ಟು ಹೊಂಬಿಸಿಲು ಬೆರೆಸಿದಂಥ ಮೋಹಕ ಮೈಬಣ್ಣ. ಅಂದವಾದ ಪುಷ್ಠವಾದ ಪ್ರಮಾಣಬದ್ಧ ಮೈಮಾಟ, ಕಾಡಿಗೆ ಇಟ್ಟಂತ ಕರಿಪಸೆಯ ಕೆಳಗಣ್ಣಿನ ಮೇಲ್ಮೈಯಲ್ಲಿ ಹೊಳೆಯುವ ಕಂದು ಬಣ್ಣದ ಕಣ್ಣಾಲಿಗಳು… ಯಾರೇ ನೋಡಿದರು ಮತ್ತೆ ನೋಡಬೇಕೆನಿಸುವ ಮುದ್ದಿನ ನಾಯದು. ‘ಬಂಟಿ’ ಅಂತ ಕರೆದರೆ ಛಂಗನೆ ಕುಪ್ಪಳಿಸುತ್ತಾ, ಬಾಲವಾಡಿಸುತ್ತಾ ಬಳಿಬಂದು ನಿಲ್ಲುವ ಚೆಂದುಳ್ಳಿನಾಯಿ. ನಮ್ಮ ಮುಖವನ್ನೇ ನೋಡುತ್ತಾ ಕತ್ತನ್ನು ಆಚೀಚೆ ಒನೆಯುತ್ತಾ ನಿಂತುಕೊಂಡಿತೆಂದರೆ… ಅದರೊಳಗಿನ ಪ್ರೇಮಭಾವ ಸಜಲವಾಗಿ ಗೋಚರವಾಗಿ ಹರಿದಾಡಿದಂತಾಗುತ್ತಿತ್ತು.
ಒಲೆಯ ಮೇಲೆ ಕಾವಲಿ ಇಟ್ಟರೆ ಮೂಗರಳಿಸುತ್ತಾ ನೇರ ಅಡಿಗೆ ಮನೆಗೆ ನುಗ್ಗಿ ಕಾಲಬಳಿ ತಾಗುವಂತೆ ನಿಂತು ಕತ್ತೆತ್ತಿ ನನ್ನ ಕಣ್ಣನ್ನೇ ನೋಡುವಾಗ, ಒಂದೆರೆಡು ಚಪಾತಿ ದೋಸೆಗಳನ್ನು ಕೈಯಲ್ಲಿ ಹಿಡಿದು ಅವನ ಬಟ್ಟಲಿಗೆ ಹಾಕುವವರೆಗೆ ಬಿಡುತ್ತಿರಲಿಲ್ಲ. ಊಟದ ಸಮಯವಾದರೆ ಸಮಯ ನಿಗದಿಸಿದ ಅಲಾರಂ ಹೊಡೆದಂತೆ ಬೊಗಳುತ್ತಾ ಬಾಲ ತಿರುಚುತ್ತಾ ಅದರ ಬಟ್ಟಲು ತುಂಬುವವರೆಗೆ ಪೀಡಿಸುತ್ತಾ, ಹಿಂದೆ ಮುಂದೆ ಸುತ್ತುತ್ತಾ ತನ್ನದೇ ಪ್ರಭಾವಳಿಯನ್ನು ನಿರ್ಮಿಸಿ ನಮ್ಮನ್ನು ಸೆಳೆಯುತ್ತಿತ್ತು.
ಮನೆಗೆ ಯಾರೇ ಬಂದರೂ ಹೋದರೂ ಮೆಲ್ಲಗೆ ಬೊಗಳಿ ನಮಗೆ ಆಗಂತುಕರ ಮಾಹಿತಿ ಕೊಡುತ್ತಿತ್ತು. ಬಂಟಿ ನೋಡಲು ಆಕರ್ಷಕ ಮಾತ್ರವಲ್ಲ, ಅದರ ಊಟೋಪಚಾರಗಳು ತೀರಾ ಶಿಷ್ಟವೇ. ಸಣ್ಣಕ್ಕಿ ಅನ್ನವನ್ನು ಮೆತ್ತಗೆ ಬೇಯಿಸಿ, ಧಾರಾಳ ಗಟ್ಟಿಹಾಲಿನಲ್ಲಿ ದಳಸರವಾಗಿ ಕಲೆಸಿ ಹಾಕಿದರೆ ಮಾತ್ರವೇ ಅದಕ್ಕೆ ಊಟ ರುಚಿಸುತ್ತಿತ್ತು. ದಪ್ಪಕ್ಕಿ ಅನ್ನವೋ, ನೆನ್ನೆಯ ಅನ್ನವೋ, ರಾಗಿ ಅಂಬಲಿಯೋ ಹಾಕಿದರೆ ತಿನ್ನದೆ ನಮ್ಮ ಮುಖ ನೋಡುತ್ತಾ ನಿಲ್ಲುತ್ತಿತ್ತು. ಊಟದ ವಿಚಾರಕ್ಕೆ ತನ್ನದೇ ಒಂದು ಶಿಸ್ತಿದ್ದ ಜೀವವದು. ಬಂಟಿ ಆರೋಗ್ಯವಂತ ಪ್ರಾಣಿ. ಸಾಧಾರಣ ಮೈ ಆರೋಗ್ಯ ಕೆಡುತ್ತಿರಲಿಲ್ಲ. ತೀರಾ ಅಪರೂಪವಾಗಿ ಒಮ್ಮೊಮ್ಮೆ ಹೊರತುಪಡಿಸಿ.
ಒಂದು ಸಾರಿ ಅದನ್ನು ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದೆವು, ನಾದಿನಿ ಮನೆಗೆ. ನಾವೆಲ್ಲ ಮಲಗಿದ ಹಾಲಿನಲ್ಲಿ ಒಂದು ಮೂಲೆಯಲ್ಲೇ ಅದಕ್ಕೆ ಹಾಸಿಕೊಟ್ಟಿದ್ದೆವು. ಪ್ರಯಾಣದ ಆಯಾಸಕ್ಕೆ ಅದರ ಆರೋಗ್ಯ ಕೈಕೊಟ್ಟಿತ್ತು. ಅದಕ್ಕೆ ವಾಂತಿ ಮಾಡಬೇಕಿತ್ತು. ರಾತ್ರಿ ಮಲಗಲು ದೀಪವಾರಿಸಿದ್ದೆವು. ಇದ್ದಕ್ಕಿದ್ದಂತೆ ಎದ್ದು ಒಂದು ಮೂಲೆಗೆ ಹೋಗಿ ಕಾರಿಕೊಂಡಿತು. ತಪ್ಪಿತಸ್ಥ ಭಾವದಿಂದ ತಲೆಕೆಳಹಾಕಿ ನಿಲ್ಲುತ್ತಾ… ಸಾಧ್ಯವಾದಷ್ಟೂ ಮೂಲೆ ಹುಡುಕಿ ಹಾಸಿಗೆಗೆ ಸಿಡಿಯದಂತೆ…
ಒಂದೊಂದು ಸಾರಿ ಅದರ ಬೆಳಗಿನ ಊಟೋಪಚಾರ ಮುಗಿಸಿ ನಾವೆಲ್ಲಾದರು ಹೋಗುವ ಸಂಧರ್ಭದಲ್ಲಿ ಅದನ್ನು ಒಳಗೇ ಬಿಟ್ಟು ಬೀಗಹಾಕಿಕೊಂಡು ಹೋಗುತ್ತಿದ್ದೆವು. ನಾವು ಬರುವುದು ತಡವಾದಾಗ ಬಾಗಿಲು ತೆರೆದೊಡನೆ ಹೊರಗೋಡಿ ಆವರೆಗೆ ತಡೆಹಿಡಿದಿದ್ದ ಜಲಬಾಧೆಯನ್ನು ನಿವಾರಿಕೊಳ್ಳುತ್ತಿತ್ತೇ ವಿನಾ ಎಂದೂ ಒಳಗೇ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿರಲಿಲ್ಲ. ಅನಾರೋಗ್ಯದ ಸಂಧರ್ಭ ಹೊರತುಪಡಿಸಿ ಎಂದೂ ಮನೆಯೊಳಗೆ ಗಲೀಜು ಮಾಡಿದ ನಾಯಿಯೇ ಅಲ್ಲವದು.

ಬಂಟಿಯನ್ನು ನಾವೆಂದೂ ಕಟ್ಟಿಹಾಕಿ ಬೆಳೆಸಲಿಲ್ಲ. ಸ್ವಚ್ಚಂದವಾಗಿ ಮನೆಯ ಎಲ್ಲೆಂದರಲ್ಲಿ ಓಡಾಡುತ್ತಾ, ಇಡೀ ಮನೆಯೇ ತನ್ನದೆನ್ನುವಂತೆ ಇತ್ತದು. ರಾತ್ರಿ ನಾವು ಮಲಗಿದಾಗ ನಮ್ಮ ಹಾಸಿಗೆ ಬಳಿಯೇ ಹಾಸಿಕೊಡಬೇಕು. ಅಲ್ಲೇ ಬಂದು ನಾವು ಕಾಣುವಂತೆ ಮಲಗಬೇಕದು. ಹಗಲು ನಾನು ವಿಶ್ರಾಂತಿಗಾಗಿ ಕೆಳಗಿನ ಕೋಣೆಯಲ್ಲಿ ಮೈಯ್ಯಾನಿಸಿಕೊಂಡರೆ ತಾನೂ ನನ್ನ ಮುಖದ ಸರೀ ಎದುರು ನೆಲದ ಮೇಲೆ ಮೈಚಾಚಿ ಮಲಗುತ್ತಿತ್ತು. ನಾನೇನಾದರೂ ಸೀರೆ ತೋರಿಸಲು ಅಂಗಡಿಗೆ ಹೋದರೆ ನನ್ನನ್ನು ಹಿಂಬಾಲಿಸಿಕೊಂಡು ಬಂದು ಅಂಗಡಿಯ ಬಾಗಿಲಿನಲ್ಲಿ ಮಲಗುತ್ತಿತ್ತು. ನಾನು ಬರವಣಿಗೆಗೆ ಕೂತರೂ ಅಷ್ಟೇ… ಎಲ್ಲೇ ಹೋಗಲಿ, ಬರಲಿ… ನನ್ನ ಮುಖ ಕಾಣುವಂತೆ ಮಾತುಗಳು ಕೇಳುವಂತಹ ಅಂತರದಲ್ಲಿ ಠಿಕಾಣಿ ಹಾಕುತ್ತಿತ್ತದು. ಆಗ್ಗಾಗ್ಗೆ ಮೆಲ್ಲಗೆ ‘ಬಂಟಿ’ ಅಂತ ಕರೆದರೆ ಮಾತ್ರ ಎದೆಯೊಳಗಿನ ಮಹಾಪೂರ ಉಕ್ಕಿಹರಿಯುವಂತೆ ಅಕ್ಕರೆಯಿಂದ ದಿಟ್ಟಿಸಿ ನೋಡುತ್ತಿತ್ತು. ಆಚೀಚೆ ಬಾಲ ಒನೆದಾಡಿಸಿ ತನ್ನ ಪ್ರೀತಿ, ನಿಷ್ಠೆ ತೋರುತ್ತಿತ್ತು.
ನಾವೆಲ್ಲಾದರು ಊರಿಗೆ ಹೊರಟರೆ ಮಾತ್ರ ತೀವ್ರ ನಿರಾಶೆಯಿಂದ ನಮ್ಮ ಮುಖವನ್ನೇ ನೋಡದಂತೆ ಬೇರೆಡೆಗೆ ಮುಖ ತಿರುಗಿಸುತ್ತಿತ್ತು. ನಮ್ಮ ಸೂಟ್ಕೇಸು, ಏರ್ ಬ್ಯಾಗುಗಳು ಹಾಲಿಗೆ ಬಂದೊಡನೆ ನೆಲ ನೋಡುತ್ತಾ ದುರ್ದಾನ ತೆಗೆದುಕೊಂಡಂತೆ ಮಂಚದಡಿ ಮಲಗಿಬಿಡುತ್ತಿತ್ತು. ಆಗ ಅದೆಷ್ಟು ಕರೆದರೂ ಕಿವಿಗೊಡದೆ ಬಿಮ್ಮನೆ ಬಿಗಿದುಕೊಂಡಿರುತ್ತಿತ್ತು.
ನನ್ನ ದೊಡ್ಡ ಮಗಳ ನಾಯಿ ಪ್ರೇಮ ತುಸು ಜಾಸ್ತಿಯೇ! ಅವಳು ಬಂದಾಗಲೆಲ್ಲ ಅದಕ್ಕೆ ಚಾಕಲೇಟ್, ಐಸ್ಕ್ರೀಮುಗಳ ಸಮಾರಾಧನೆ! ಹಾಗೇ ಅವಳನ್ನು ಕಂಡರೆ ಅದಕ್ಕೆ ಜಾಸ್ತಿಯೇ ಸಲಿಗೆ. ಅವಳದನ್ನು ರಾತ್ರಿ ತನ್ನ ಹಾಸಿಗೆಯಲ್ಲೇ ಮಲಗಿಸಿಕೊಳ್ಳುತ್ತಿದ್ದಳು. ನಾನು ಹೋಗಿ ಗದರಿಸಿ ಬಂಟಿಯನ್ನು ಕೆಳಗಿಳಿಸುತ್ತಿದ್ದೆ. ಆಮೇಲಾಮೇಲೆ… ನಾನು ಮಹಡಿ ಹತ್ತಿ ಲೈಟ್ ಹಾಕಲು ಹೋಗುವಾಗ ನನ್ನ ಕಾಲ ಸಪ್ಪಳ ತಿಳಿದಂತೆ ಚಂಗನೆ ಅವಳ ಮಂಚ ಇಳಿದು ಕೆಳಗೆ ಕಾಲಬಳಿ ಮಲಗುವುದೂ, ನಾನು ವಾಪಸ್ ಲೈಟಾರಿಸಿ ಕೆಳಗಿಳಿದ ಕೂಡಲೇ ತಟಕ್ಕೆಂದು ಮಂಚಕ್ಕೆ ಎಗರಿ ಅವಳನ್ನು ಒತ್ತಿ ಮಲಗುವುದು ಮಾಡುತ್ತಿತ್ತು. ಮಗಳು ಮುಸಿಮುಸಿ ನಗುತ್ತಾ ಇದನ್ನು ವರದಿ ಮಾಡಿದ್ದಳು! ಆದರೂ ಬಂಟಿ ತನ್ನ ಕಳ್ಳಾಟ ನಡೆಸಿಯೇ ಇತ್ತು.
ಯಾವ ಮನುಷ್ಯರನ್ನೂ ಎಂದೂ ಕಚ್ಚದ, ಜೋರಾಗಿ ಬೊಗಳದ ಬಂಟಿಗೆ ಸ್ವಜಾತಿ ದ್ವೇಷ ಮಾತ್ರ ವಿಪರೀತ. ಯಾವುದೇ ನಾಯಿಯೂ ನಮ್ಮ ಮನೆಗೆ ಬರಬಾರದು. ಎಲ್ಲಿ ತನ್ನ ಹಕ್ಕಿನ ಪ್ರೀತಿಗೆ, ಮೀಸಲು ಮುದ್ದಿಗೆ ಕಡಿಮೆಯಾಗುವುದೋ ಎಂಬ ಆತಂಕದಲ್ಲೇ ಇರುತ್ತಿತ್ತು. ಬೇರೆ ಯಾವುದೇ ನಾಯಿ ನಮ್ಮ ಮನೆಯೊಳಗಿರಲಿ, ಮನೆಯ ಬಳಿಯೂ ಬರುವಂತಿರಲಿಲ್ಲ. ಥೇಟ್ ರೌಡಿ ಶೀಟರಿನಂತೆ ಅದರ ಮೈಮೇಲರಗಿ ಕುತ್ತಿಗೆಗೇ ಬಾಯಿಹಾಕಿ ಅಮರಿಕೊಳ್ಳುತ್ತಿತ್ತು.
ಬಂಟಿಯ ಕೈಗೆ ಸಿಕ್ಕು ಹಾಕಿಕೊಂಡ ನಾಯಿಯ ಪ್ರಾಣ ಉಳಿಸುವುದೇ ದುಸ್ಸಾಹಸವಾಗುತ್ತಿತ್ತು. ಮಗಳ ಗೆಳತಿಯ ಮನೆಗೆ ಬಂದ ಪುಟ್ಟ ನಾಯಿಮರಿಯನ್ನು ಮಗಳು ಆಸೆಯಿಂದ ನಮ್ಮ ಮನೆಗೆ ಕರೆತಂದಾಗ, ಬಂಟಿ ಅಬ್ಬರಿಸಿ ಭೋರ್ಗರೆದು ಅದರ ಮೇಲೆ ಮುಗಿಬಿದ್ದಿತ್ತು. ಹರಸಾಹಸ ಮಾಡಿ ಬಂಟಿಯಿಂದ ಬಿಡಿಸಿ ಅವಳ ಮನೆಗೆ ಬಿಟ್ಟು ಬಂದೆವು. ಮಾರನೆ ದಿನ ಬಂದ ಮಗಳ ಗೆಳತಿ ‘ನಿಮ್ಮ ನಾಯಿ ನಮ್ಮ ಮಿನಿಗೆ ಏನು ಮಾಡಿತು ಪಿಂಕ್ಸ್? ನಮ್ಮ ನಾಯಿ ನೆನ್ನೆಯಿಂದ ಮೂಲೆಹಿಡಿದು ಕುಳಿತಿದೆ. ಮೇಲೇಳುತ್ತಲೇ ಇಲ್ಲ’ ಅಂತ ಕೇಳಿದಳು. ಆವಾಗಿಂದ ಸಾಧ್ಯವಾದಷ್ಟು ನಾಯಿಗಳನ್ನು ಮನೆಯೊಳಗೆ ಬರದಂತೆ ನೋಡಿಕೊಂಡೆವು. ಆದರೂ ಕೆಲಬಾರಿ ನಮ್ಮ ಕೈ ಮೀರಿ ಅಪಘಾತ ಆಗಿಬಿಟ್ಟಿತ್ತು.
ಒಮ್ಮೆ ವಾಕಿಂಗ್ ಕರೆದುಕೊಂಡು ಹೋದಾಗ ನಮ್ಮ ಬೀದಿಯ ದಷ್ಟಪುಷ್ಟ ಜರ್ಮನ್ ಶೆಪರ್ಡ್ ನಾಯಿಯನ್ನು ಕಂಡು, ಬಂಟಿ ಚೈನ್ ತುಂಡಾಗುವಂತೆ ಜಗ್ಗಿ ಅದರೆಡೆಗೆ ಓಡಿಹೋಗಿ ಮುಗಿ ಬಿದ್ದತ್ತು. ಬಹಳ ಪ್ರಯಾಸಪಟ್ಟು ಬಿಡಿಸಿ ಕರೆತಂದೆವು. ಆಮೇಲಿಂದ ಆ ನಾಯಿ ನಮ್ಮ ಮನೆಯ ಮುಂದೆ ವಾಕಿಂಗ್ ಬರಲು ನಿರಾಕರಿಸಿತು. ಒಮ್ಮೆ ಯಾರದ್ದೋ ಮನೆಯ ಪೊಮೇರಿಯನ್ ನಾಯಿಗೂ ಬಂಟಿ ಆಕ್ರಮಣ ಮಾಡಿತು. ಆ ಮನೆಯ ಕೆಲಸದಾಕೆ ಆ ನಾಯಿಯನ್ನು ವಾಕಿಂಗ್ ಮಾಡಿಸಲು ಕರೆತಂದಿದ್ದಳು. ಅವಳು ‘ಸಾವ್ಕರ್ರು ಬೈತಾರೆ’ ಎಂದು ಅಳುತ್ತಾ ನಿಂತಳು. ಆಸ್ಪತ್ರೆ ಇಲಾಜಿಗೆ, ಆಟೋ ಖರ್ಚಿಗೆಂದು ಸಾವಿರ ರೂಪಾಯಿಗಳನ್ನು ಕೊಟ್ಟು ಕಳಿಸಿದೆವು.

ಬಂಟಿ ವಯಸ್ಸಿನಲ್ಲಿ ಅಬ್ಬರಿಸಿ ಆರ್ಭಟಿಸುತ್ತಿದ್ದ ಆರೋಗ್ಯಶಾಲಿ ನಾಯಿ. ಬೆದೆಗೆ ಬಂದ ನಾಯಿಗಳಿಗೆ ಅದರಿಂದ ಕ್ರಾಸ್ ಮಾಡಿಸಲು ನಮ್ಮ ಮನೆ ಬಳಿಯ ಕೆನಲ್ನ ಮಾಲಕಿ ಆಗ್ಗಾಗ್ಗೆ ನಮ್ಮ ಮನೆಗೆ ಬಂದು ಬಂಟಿಯನ್ನು ಕರೆದೊಯ್ಯುತ್ತಿದ್ದಳು. ಆ ಹೆಣ್ಣು ಮಗಳು ಬಂದೊಡನೆ ಗೇಟಿನ ಬಳಿ ನಿಂತು ‘ಬಂಟಿ’ ಎಂದು ಕೂಗಿದೊಡನೆ ಎಲ್ಲಿದ್ದರೂ ಬಂಟಿ ಲಗುಬಗೆಯಿಂದ ಹೊರಗೋಡಿ ಅವಳ ಬಳಿ ಬಾಲವಲ್ಲಾಡಿಸುತ್ತಾ ನಿಲ್ಲುತ್ತಿತ್ತು. ಒಮ್ಮೆ ನಾನು ‘ಈ ಬಾರಿ ಬೇಡ ಬಂಟಿಗೆ ಅಷ್ಟು ಹುಷಾರಿಲ್ಲ’ ಅಂದು ಒಳಗೆಳೆದುಕೊಂಡು ಬರಲು ಮಾಡಿದ ಪ್ರಯತ್ನ ವ್ಯರ್ಥವಾಗಿತ್ತು. ಸೂರೇ ಕಿತ್ತುಹೋಗುವಂತೆ ಬೊಗಳಿದ ಬಂಟಿ ಬಾಗಿಲು ತೆರೆಸಿ ಅವಳ ಬಳಿ ಓಡಿತ್ತು.
ಒಮ್ಮೆ ನನ್ನ ತಂದೆ ಸತ್ತ ಸಂಧರ್ಭ. ದಹನ ಮುಗಿಸಿ ಮನೆಗೆ ಬಂದು ಒಬ್ಬಳೇ ಮಲಗಿದ್ದೆ. ಒತ್ತರಿಸಿ ಬಂದ ದುಃಖಕ್ಕೆ ಬಿಕ್ಕಿಬಿಕ್ಕಿ ಅಳತೊಡಗಿದ್ದೆ. ಮಂಚದ ಪಕ್ಕದ ನೆಲದಲ್ಲಿ ಮಲಗಿದ್ದ ಬಂಟಿ ಮೆಲ್ಲನೆ ಎದ್ದು ಬಂದು ನನ್ನ ಮೈ ಕೈತಾಗುವಷ್ಟು ಸನಿಹ ನಿಂತಿತು. ಸುಮ್ಮನೆ… ನನ್ನ ಭುಜದ ಮೇಲೆ ತಲೆಯಿಟ್ಟು… ಯಾವ ಮಾತುಗಳಿಲ್ಲದೆ ನಿನ್ನ ದುಃಖದಲ್ಲಿ ನಾನು ಜೊತೆಗಿದ್ದೇನೆ ಎಂದು ಹೇಳಿತು. ನನಗೆ ಜ್ವರ ಬಂದು ಮಲಗಿದಾಗಲೂ ಅದು ಹತ್ತಾರು ಬಾರಿ ನನ್ನ ಮಂಚದ ಪಕ್ಕ ಠಳಾಯಿಸಿದ್ದಿದೆ. ನನ್ನ ಪತಿ ಊರಿಗೇನಾದರು ಹೋಗಿದ್ದರೆ, ಬೆಳಿಗ್ಗೆ ಎದ್ದು ಎರಡನೇ ಮಹಡಿಯವರೆಗೂ ಹತ್ತಿ ಕೋಣೆಕೋಣೆಗಳನ್ನು ಹುಡುಕಿ, ಬಚ್ಚಲು ಮನೆಯ ಬಾಗಿಲಲ್ಲಿ ನಿಂತು ಕಾದು, ಹಿತ್ತಲು, ಅಂಗಳ ಎಲ್ಲಕಡೆ ತಪಶೀಲು ಮಾಡಿ ಕಡಗೆ ಮ್ಲಾನ ವದನದಿಂದ ತನ್ನ ಮಂಚದ ಮೇಲೆ ಹತ್ತಿ ಕುಳಿತುಕೊಳ್ಳುತ್ತಿತ್ತು.
ಬಂಟಿ ಮಹಾನ್ ಶಾಂತಿಪ್ರಿಯ ನಾಯಿ. ಅದರೆದುರು ಯಾರೂ ಧ್ವನಿ ಎತ್ತರಿಸಿ ಜಗಳವಾಡುವಂತಿರಲಿಲ್ಲ. ನಾವು ಗಂಡಹೆಂಡಿರು ಕೂಡ ಧ್ವನಿ ಎತ್ತರಿಸಿ ಮಾತಾಡುವಂತಿರಲಿಲ್ಲ. ಧ್ವನಿ ಏರಿಸಿದರೆ ನಮ್ಮಿಬ್ಬರ ನಡುವೆ ನುಸುಳಿ, ತಲೆ ಮೇಲೆತ್ತಿ ಜೋರಾಗಿ ಬೊಗಳುತ್ತಿತ್ತು. ‘ಶಟ್ ಅಪ್’ ಅನ್ನುವಂತೆ! ಥತ್ ಇದರೆಡೆಯಲ್ಲಿ ನಾವು ನಮ್ಮ ಪಾಡಿಗೆ ಜಗಳವು ಆಡುವಂತಿಲ್ಲವಲ್ಲ ಅನ್ನಿಸುತ್ತಿತ್ತು.
ಒಂದಿಷ್ಟು ತರಲೆ, ತಂಟೆಗಳ ನಡುವೆ ಯೌವನ ಕಳೆದು ವಯಸ್ಸಾಗುತ್ತಾ ಬಂಟಿ ಮಾಗತೊಡಗಿತು. ಶಾಂತ ಸೌಮ್ಯ ಮೂರ್ತಿಯಾಗಿ ಇರತೊಡಗಿತು. ಕಡೆಯ ದಿನಗಳಲ್ಲಿ ಆರೋಗ್ಯ ಸಮಸ್ಯೆಯಾಗಿ ನಾವು ಒಂದೆರೆಡು ಬಾರಿ ಆಸ್ಪತ್ರೆಗೆ ಕರೆದೊಯ್ದಿದ್ದೆವು. ಮೂರನೇ ಬಾರಿ ಡ್ರಿಪ್ಸ್ ಹಾಕಿಸಿದ ಮೇಲೆ ತೀರಾ ಮೌನವಾಗಿಬಿಟ್ಟಿತು. ಹದಿನೈದು ದಿನ ಸಲ್ಲೇಖನ ವ್ರತ ಹಿಡಿದಂತೆ ನಿರಾಹಾರ, ನಿರ್ಜಲದಲ್ಲಿ ಕಾಲ ಹಾಕತೊಡಗಿತು. ಬಹಳ ಪ್ರಯಾಸಪಟ್ಟು ಕೆಲಹನಿ ನೀರು ಕುಡಿಸುತ್ತಿದ್ದೆವು. ಶಾಂತಿಯಿಂದ, ಮೌನದಿಂದ ಹದಿನೈದನೇ ದಿನ ಬೆಳಗಿನ ಜಾವ ಪ್ರಾಣಬಿಟ್ಟಿತು. ನಮ್ಮೆಲ್ಲರ ಮನಸ್ಸು ಹೃದಯಗಳಲ್ಲಿ ನೆನಪುಳಿಸಿ, ನೋವಿನ ಮೋಡಗಳನ್ನು ಸೃಷ್ಠಿಸಿ.
0 ಪ್ರತಿಕ್ರಿಯೆಗಳು