ಬಂದಿದೆ ಹೊಸ ಅಪರಂಜಿ…

ಶ್ರೀ ಶ್ರೀ ಶ್ರೀ ಪೌಲಾನಂದ ಸ್ವಾಮೀಜಿ ……. ಶ್ರೀ ಮಣಿ ಶುಕ ಶಾಸ್ತ್ರಿಗಳ್ – ನಂದಿನಿ ಕಾಪಡಿ ವಿಶ್ವಕಪ್ ಪುಟ್‌ಬಾಲ್ ಸ್ಪರ್ಧೆ ನಿನ್ನೆಯಷ್ಟೇ ಮುಕ್ತಾಯಗೊಂಡಿತು. ಕಾಲುಚೆಂಡಿನ ಆಟದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಎರಡೂ ಕಡೆಯಿಂದ ಹನ್ನೊಂದು ಆಟಗಾರರು ಆಡುತ್ತಾರೆ. ಗೋಲನ್ನು ರಕ್ಷಿಸಲು ಗೋಲ್‌ಕೀಪರ್ ಇರುತ್ತಾನೆ. ಚೆಂಡನ್ನು ಕಾಲಿಂದಲಾದರೂ ಒದೆಯಬಹುದು ಅಥವಾ ತಲೆಯಿಂದಾದರೂ ತಳ್ಳಬಹುದು. ಒಟ್ಟಿನಲ್ಲಿ ಗೋಲಿನೊಳಗೆ ಸೇರಿಸಬೇಕು. ಚೆಂಡನ್ನು ಕೈನಲ್ಲಿ ಮುಟ್ಟಬಾರದು. ಆಟಗಾರರು ಒಬ್ಬರಿಗೊಬ್ಬರು ಢಿಕ್ಕಿ ಹೊಡೆಯಬಹುದು. ಕಾಲಿಗೆ ಕಾಲು ಸಿಕ್ಕಿಸಿ ಎದುರಾಳಿಯನ್ನು ಬೀಳಿಸಬಹುದು. ಓಡುತ್ತಾ ಓಡುತ್ತಾ ಬೈಗುಳ ಬೈಯಬಹುದು. ಆದರೆ ಕೆಟ್ಟ ನಡತೆಗೆ ಅವಕಾಶವಿಲ್ಲ. ಕೆಂಪು, ಹಳದಿ ಕಾರ್ಡುಗಳು ಸಿಕ್ಕಿಬಿಡುತ್ತವೆ. ಇಷ್ಟು ಈ ಆಟದ ಬಗ್ಗೆ ನನಗಿದ್ದ ಸಾಮಾನ್ಯ ಜ್ಞಾನ. ಕ್ರಿಕೆಟ್ ಬಿಟ್ಟು ಜನ ಕಾಲ್ಚೆಂಡಿನಾಟ ನೋಡುತ್ತಾರೆ. ಎಂದು ನನಗೇನೋ ವಿಲಕ್ಷಣ ಸಮಾಧಾನ. ಕ್ರಿಕೆಟ್ಟಿನ ಬಗ್ಗೆ ನನಗಿದ್ದ ಅಸಡ್ಡೆ ನೋಡಿ ಮನೆಯವರಿಗೆಲ್ಲಾ ತುಂಬಾ ಬೇಸರ. ಹೋಗಲಿ ಫುಟ್‌ಬಾಲಿನಾಟವನ್ನಾದರೂ ನೋಡುತ್ತಾಳಲ್ಲಾ( ಅರ್ಥವಾಗಲಿ ಬಿಡಲಿ) ಎಂದು ಯಜಮಾನರಿಗೆ ಸಮಾಧಾನ. ಆದರೆ ಇತ್ತೀಚೆಗೆ ಇದೆಲ್ಲಾ ಬಯಲಾಯಿತು. ಸಮಾಚಾರ ಬಿತ್ತರಿಸುತ್ತಿರುವ ಟಿ.ವಿ.ಚಾನಲ್ ಜರ್ಮನಿಯಲ್ಲಿರುವ ಒಂದು ಅಷ್ಟಪದಿ ಹೇಗೆ ಬೇರೆ ಬೇರೆ ಆಟಗಳ ಫಲಿತಾಂಶವನ್ನು ಚೂರೂ ತಪ್ಪಿಲ್ಲದೆ ಮೊದಲೇ ಸೂಚಿಸಿಬಿಡುತ್ತದೆ ಎಂದು ಕೌತುಕದಿಂದ ತೋರಿಸುತ್ತಿತ್ತು. ಆ ಅಷ್ಟಪದಿಯ ಹೆಸರು ಪೌಲ್ ಎಂದು. ಅದು ಭವಿಷ್ಯಗಾರನಾಗಿಬಿಟ್ಟಿತು. ಜರ್ಮನಿಯ ಪ್ರತಿ ಫಲಿತಾಂಶವನ್ನು ಚಾಚೂ ತಪ್ಪದೆ ಮೊದಲೇ ಸೂಚಿಸಿಬಿಟ್ಟಿತು! ಅಷ್ಟಪದಿಗಳ ಬಗ್ಗೆ ನನಗೆ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ಓದುತ್ತಿದ್ದಾಗಿನಿಂದ ಮಾಹಿತಿಯಿತ್ತು. ಆದರೆ ಅದನ್ನು ನೋಡಿದರೆ ಒಂದು ತರಹಾ ಅಸಹ್ಯವಾಗಿಬಿಡುತ್ತಿತ್ತು. ಆ ನಂತರ ನಾವು ಅಮೇರಿಕಾದಲ್ಲಿದ್ದಾಗ ಚೀನೀ ಮೀನಿನ ಅಂಗಡಿಗಳಲ್ಲಿ ಜೀವಂತ ಆಕ್ಟೊಪಸ್ ನೋಡಿ ಎದೆ ಡವ ಡವ ಹೊಡೆದುಕೊಳ್ಳುತ್ತಿತ್ತು. ಆ ಚೀನೀಯರು ಅದನ್ನು ಹುರಿದು ತಿನ್ನುತ್ತಾರೆಂದು ಕೇಳಿದ ಮೇಲಂತೂ “ಶಾಂತಂ ಪಾಪಂ” ಎಂದುಕೊಳ್ಳುತ್ತಲೇ ಹೊರಗೆ ಬಂದಿದ್ದೆ. ಆದರೆ ಈ ಪೌಲ್ ಆಕ್ಟೋಪಸ್‌ನ ತರಹವೇ ಬೇರೆ, ನಿಧಾನವಾಗಿ ನೀರಿನ ಆಳಕ್ಕಿಳಿದು ಅಲ್ಲಿರುವ ಎರಡು ಗಾಜಿನ ಪೆಟ್ಟಿಗೆಗಳ ಹತ್ತಿರ ಬಂದು, ಯಾವ ದೇಶದ ಧ್ವಜ ಒಳಗಿದೆ ಎಂದು ನೋಡಿ ಖಚಿತ ಮಾಡಿಕೊಂಡು ಯಾವ ದೇಶ ಗೆಲ್ಲುವುದೋ ಆ ದೇಶದ ಧ್ವಜವಿರುವ ಗಾಜಿನ ಪೆಟ್ಟಿಗೆಯ ಮುಚ್ಚಳ ತೆಗೆದುಬಿಡುತ್ತಿತ್ತು! ಫುಟ್‌ಬಾಲ್ ಪ್ರೇಮಿಗಳ ಸ್ನೇಹಿತ ಹಾಗೂ ವೈರಿ ಎರಡೂ ಆಗಿಬಿಟ್ಟಿದ್ದ ಈ ಅಷ್ಟಪದಿ ನೋಡು ನೋಡುತ್ತಾ ಶ್ರೀ ಶ್ರೀ ಶ್ರೀ ಪೌಲಾನಂದ ಸ್ವಾಮೀಜಿ ಎಂದು ಕರೆಸಿಕೊಳ್ಳತೊಡಗಿತು. ಸಿಂಗಪುರದ ಗಿಣಿಶಾಸ್ತ್ರದ ಗಿಣಿ ಅದರ ಹೆಸರು ಮಣಿ, ಫೈನಲ್ ಆಟ ಹತ್ತಿರ ಬರುತ್ತಿದ್ದಂತೆ. ಅದೂ ಭವಿಷ್ಯ ಹೇಳಲು ಹಿಂದಿಲ್ಲವೆಂದು ಟಿ.ವಿ ಚಾನಲ್‌ಗಳು ಬಿತ್ತರಿಸತೊಡಗಿದವು. ಫೈನಲ್‌ನಲ್ಲಿ ಸ್ಪೇನ್ ದೇಶ ಗೆಲ್ಲುವುದು ಎಂದು ಪೌಲಾನಂದ ಸ್ವಾಮೀಜಿ ಹೇಳಿದರೆ, ಇಲ್ಲ ಹಾಲೆಂಡ್ ದೇಶವೇ ಗೆಲ್ಲುವುದು ಎಂದು ಮಣಿ ಗಿಣಿ ಮಣಿ ಮಣಿಯಾಗಿ ತಿಳಿಸಿಬಿಟ್ಟಿತು. ಈಗ ನಮ್ಮ ಮನೆಯಲ್ಲಿ ಸಂದಿಗ್ಧ ಪ್ರಾರಂಭವಾಯಿತು. ನನ್ನ ಪತಿ ಸ್ಪೇನ್ ದೇಶದ ಕಡೆ ಪಣಕಟ್ಟಿದರೆ, ನಾನು ನಮ್ಮದೇ ದೇಶದಲ್ಲಿ ಪ್ರಸಿದ್ಧವಾದ ಗಿಳಿ ಶಾಸ್ತ್ರಕ್ಕೆ ಮಾರು ಹೋಗಿ ಹಾಲೆಂಡಿನ ಮೇಲೆ ಪಣ ಕಟ್ಟಿದೆ. ನಾನು ಹಾಲೆಂಡಿನಲ್ಲಿ ಕೆಲಸದ ಮೇಲೆ ಹೋಗಿದ್ದಾಗ ಯಾರೂ ನನ್ನ ಸೀರೆಯನ್ನು ಹಣೆಯ ಕುಂಕುಮವನ್ನು ಮೂದಲಿಸಿರಲಿಲ್ಲ ಎಂದು ಒಂದು ಹೆಮ್ಮೆಯೂ ಇತ್ತು. ಇನ್ನೂ ಹೇಳಬೇಕೆಂದರೆ ಗಿಳಿ ನಮ್ಮ ಮಧುರೆ ಮೀನಾಕ್ಷಿಯ ಭುಜದ ಮೇಲಿರುವ ಪಕ್ಷಿ. ಚೆನ್ನಾಗಿ ಮಾತನಾಡುವ ಪಕ್ಷಿ. ನಮ್ಮಂತೆಯೇ ಮೆಣಸಿನಕಾಯಿ ತಿನ್ನುವ ಪಕ್ಷಿ ಮತ್ತು ಇದರ ಹೆಸರಂತೂ ನಮ್ಮ ದಕ್ಷಿಣ ಭಾರತದ ಮುದ್ದಿನ ಹೆಸರು “ಮಣಿ” ಬೇರೆ. ಕಡೆಯ ದಿನದ ಆಟ. ಮೊದಲು ಜರ್ಮನಿ ಮತ್ತು ಉರುಗ್ವೇ ದೇಶದ ನಡುವೆ ತೃತೀಯ ಸ್ಥಾನಕ್ಕೆ ಕಾದಾಟ. ಪೌಲಾನಂದ ಜರ್ಮನಿಯನ್ನು ಬಿಟ್ಟುಕೊಟ್ಟನೆಂದು ಜರ್ಮನಿ ದೇಶದ ಜನ ಅವನ ಬಗ್ಗೆ “ಫತ್ವಾ” ಹೊರಡಿಸಿಬಿಟ್ಟರು. ಅಕ್ಟೋಪಸ್‌ನಲ್ಲಿ ಏನೇನು ವ್ಯಂಜನಗಳನ್ನು ಮಾಡಬಹುದೆಂದು ಪಾಕಶಾಸ್ತ್ರ ಕಲಾವಿದರು ತೋರಿಸಿಬಿಟ್ಟರು. ನನ್ನ ಗೆಳತಿ ಲಿನ್, ಮೂಲತಃ ಕೀನೀ, ಆಕ್ಟೊಪಸ್ ಸೂಪ್ ಎಷ್ಟೊಂದು ರುಚಿಕರ ಎಂದು ನನಗೆ ಇ-ಮೈಲ್‌ನಲ್ಲಿ ತಿಳಿಸಿದಳು. ಜರ್ಮನಿಯ ತೃತೀಯ ಸ್ಥಾನಗಳಿಸಿತು. ಸ್ಪೇನ್ ದೇಶ ಫುಟ್‌ಬಾಲ್ ವಿಶ್ವಕಪ್ ಮೇಲೆ ತನ್ನ ಹಕ್ಕು ಸಾಧಿಸಿತು. ಹಾಲೆಂಡಿನವರು ದ್ವಿತೀಯ ಸ್ಥಾನಕ್ಕಿಳಿದರು! ಶ್ರೀ ಶ್ರೀ ಶ್ರೀ ಪೌಲಾನಂದ ಸ್ವಾಮೀಜಿ ಈಗ ತುಂಬಾ ಪ್ರಾಮುಖ್ಯ ಸ್ಥಾನ ಪಡೆದುಬಿಟ್ಟರು. ಮೂಲತಃ ಅವರು ಬ್ರಿಟೀಷ್‌ನವರಂತೆ. ಆದರೆ ಈಗ ಜರ್ಮನಿಯ ಪ್ರಜೆಯಂತೆ. ಹೀಗೆ ಜರ್ಮನಿ-ಬ್ರಿಟನ್‌ಗಳ ವೈರತ್ವ ಮುಂದುವರೆಯಲು ಪೌಲಾನಂದರು ಕಾರಣರಾಗಿಬಿಟ್ಟರು. ನಮ್ಮ ಮಣಿಯನ್ನು ಈಗ ಅದರ ಮಾಲೀಕ ತುಂಬಾ ಜೋಪಾನವಾಗಿ ಕಾಯುತ್ತಿದ್ದಾನಂತೆ. ಲಕ್ಷಾಂತರ ಜೂಜುಕೋರರು ಮಣಿಯ ಭವಿಷ್ಯ ನಂಬಿ ಕೆಟ್ಟರಂತೆ. ಅದನ್ನು ಈಗ ಯಾವುದಾದರೂ ಫುಟ್‌ಬಾಲ್ ಆಡದ ದೇಶಕ್ಕೆ ಕಳಿಸಿಬಿಡಬೇಕು ಎಂದುಕೊಂಡಿದ್ದಾನಂತೆ ಮಾಲೀಕ. ಯಜಮಾನರು ಪಣ ಸೋತ ಬಗ್ಗೆ ನನ್ನನ್ನು ಬೇಕಾದಷ್ಟು ಅಣಕಿಸಿ ಹಂಗಿಸಿದರು. ನಿನಗೆ ಆಟದ ಸ್ವಾರಸ್ಯ ಗೊತ್ತಿಲ್ಲ. ಯಾವುದೋ ಗಿಳಿಶಾಸ್ತ್ರ ನಂಬಿಕೆಯಲ್ಲ ಎಂದು ತರ ತರಹವಾಗಿ ಛೇಡಿಸಿದರು. ಬೆಳಗ್ಗೆ ಇ-ಮೇಲ್ ತೆಗೆದು ನೋಡಿದೆ. ಲಿನ್ ಹೀಗೆ ಬರೆದಿದ್ದಳು.” ಸಮುದ್ರದೊಳಗಿನ ಜೀವಿಗಳು ತುಂಬಾ ಬುದ್ದಿವಂತ ಜೀವಿಗಳು. ಡಾಲ್ಫಿನ್‌ಗಳೇ ಆಗಲಿ, ಆಕ್ಟೋಪಸ್‌ಗಳೇ ಆಗಲಿ, ತುಂಬಾ ಬುದ್ಧಿವಂv ಪ್ರಾಣಿಗಳು. ಇನ್ನು ಮೇಲೆ ನಾನು ಆಕ್ಟೋಪಸ್ ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ. ನನ್ನ ಮಗ ಅಕ್ವೇರಿಯಂನಲ್ಲಿರುವ ಆಕ್ಟೋಪಸ್ ಒಂದನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದ್ದಾನೆ. ಆದರೆ ನಂದಿನಿ, ನಿಮ್ಮ ದೇಶದ ಗಿಳಿಶಾಸ್ತ್ರ ಇಷ್ಟೊಂದು ಅಪಮಾನಕ್ಕೆ ಕಾರಣವಾಯಿತಲ್ಲ ತುಂಬಾ ಖೇದವಾಯಿತು” ಎಂದು ನವಿರಾಗಿ ಹಂಗಿಸಿಬಿಟ್ಟಿದ್ದಳು. ಶುಕಪಂಡಿತರನ್ನು ನಂಬಿದ್ದಕ್ಕಾಗಿ ಕೊಂಚ ನಾಚಿಕೆಯೂ ಆಯಿತು. ಲಿನ್ ಮೇಲೆ ಕೋಪ ಬಂದು ಇನ್ನು ಮುಂದೆ ಚೀನೀಯರು ನಡೆಸುವ ಬ್ಯೂಟಿಪಾರ್ಲರ್‌ಗೆ ಹೋಗಬಾರದು ಎಂದುಕೊಂಡೆ. ಅಷ್ಟರಲ್ಲಿ ನನ್ನ ಬೀಗಿತ್ತಿಯಿಂದ ದೂರವಾಣಿ ಕರೆ ಬಂದಿತು. ನಮ್ಮ ಮನೆಯಲ್ಲಿ ಅಷ್ಟಪದಿ ಕ್ಲಾಸು ನಡೆಸುತ್ತೇವೆ. ಖಂಡಿತಾ ಬನ್ನಿ ಎಂದರು. ಒಂದು ನಿಮಿಷ ತಬ್ಬಿಬ್ಬಾದೆ. ಆಮೇಲೆ ಹೊಳೆಯಿತು. ಬೀಗತ್ತಿ ಹೇಳುತ್ತಿರುವ ಅಷ್ಟಪದಿ. ಖ್ಯಾತ ಸಂಸ್ಕೃತ ಕವಿ ಜಯದೇವನ ಕವಿತೆಗಳೆಂದು. ನನ್ನ ಅಷ್ಟಪದಿ ಆಕ್ಟೋಪಸ್ ಶ್ರೀ ಶ್ರೀ ಶ್ರೀ ಪೌಲಾನಂದರನ್ನು ತಲೆಯೊಳಗಿಂದ ಹೊರಚೆಲ್ಲಿ ಶ್ರೀ ಕೃಷ್ಣನ ನಾಮಾಮೃತ ಸೇವಿಸಿ ಪುಣ್ಯ ಗಳಿಸಬೇಕೆಂದುಕೊಂಡು ನಿರ್ಧರಿಸಿಬಿಟ್ಟೆ]]>

‍ಲೇಖಕರು avadhi

August 24, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ranganna kCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: