ಬೆಂಗಳೂರಿನಲ್ಲಿ ಕ್ರಾಸ್ ವರ್ಡ್ ಪುಸ್ತಕ ಮಳಿಗೆ ಬಾಗಿಲು ತೆರೆದು ಕೂತಾಗ ಎಲ್ಲೆಡೆ ಒಂದೇ ಸುದ್ದಿ. ಅಲ್ಲಿ ಎಷ್ಟು ಹೊತ್ತು ಬೇಕಾದರೂ ಓದುತ್ತಾ ಕೂರಬಹುದಂತೆ. ಕೊಂಡು ಕೊಳ್ಳಲೇಬೇಕು ಎನ್ನುವ ರೂಲ್ಸ್ ಏನೂ ಇಲ್ಲವಂತೆ. ಬೆಳಗ್ಗೆಯಿಂದ ಸಂಜೆವರೆಗೂ ಓದಿದರೂ ಯಾರೂ ಕೇಳುವುದಿಲ್ಲವಂತೆ. ಅದಕ್ಕಾಗಿ ಸೋಫಾ ಬೇರೆ ಹಾಕಿದ್ದಾರಂತೆ….
….ಹೌದಾ ಎಂದು ಕಣ್ಣು ಬಾಯಿ ಬಿಟ್ಟು ಕೇಳುವ ಹಾಗಾಗಿತ್ತು. ಕ್ರಮೇಣ ಬೆಂಗಳೂರು ಮಳಿಗೆಗಳು ಹೀಗೆ ಎಷ್ಟು ಬೇಕಾದರೂ ಓದಿಕೊಂಡು ಹೋಗಲಿ ಎಂಬುದಕ್ಕೆ ಹೊಂದುಕೊಂಡುಬಿಟ್ಟಿತು. ಸದಾ ಇಕ್ಕಟ್ಟಾದ, ದೂಳು ತುಂಬಿದ, ಸ್ವಲ್ಪ ಹೊತ್ತಿಗೆ ಸುಸ್ತು ಮಾಡುತ್ತಿದ ಮಳಿಗೆಗಳೇ ತಲೆಯಲ್ಲಿದ್ದಾಗ ಈ ಹೊಸ ಗಾಳಿ ನಿಜಕ್ಕೂ ಸಂತೋಷ ಕೊಟ್ಟಿತ್ತು.
ಒಂದು ಕಾಲ ಬರುತ್ತೇನೋ ಮಳಿಗೆಯಲ್ಲೇ ಆರಾಮವಾಗಿ ಮಲಗಿಕೊಂಡು ಓದುವ ಕಾಲ ಎಂದು ಕೊಳ್ಳುತ್ತಿದೆ. ಇತ್ತೀಚೆಗೆ ನ್ಯೂಯಾರ್ಕ್ ಗೆ ಹೋಗಬೇಕಾಗಿ ಬಂತು. ಅಲ್ಲಿನ ಪುಸ್ತಕ ಮಳಿಗೆ ಹುಡುಕಿ ಕೊಂಡು ಹೋದೆ. ಅರ್ಥರ್ ಸಿ ಕ್ಲಾರ್ಕ್ ಬರೆದ ಊಹೆಯ ವೈಜ್ನಾನಿಕ ಕಥೆಗಳು ಮುಂದೆ ಒಂದು ದಿನ ಹೇಗೆ ನಿಜವಾಗಿಬಿಟ್ಟವೋ ಹಾಗೆ ನಾನು ಅಂದು ಕೊಂಡದ್ದೂ ನನ್ನ ಕಣ್ಣೆದುರೇ ನಿಜವಾಗಿ ಹೋಗಿತ್ತು.
ಎಲ್ಲೆಲ್ಲಾ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟೆ ಅಲ್ಲೆಲ್ಲಾ ಇದು ಸಾಮಾನ್ಯ ದೃಶ್ಯ. ನಿಮಗೆ ಬೇಕಾದರೆ, ಬೇಕೆಂದೆಡೆ ಆರಾಮವಾಗಿ ಮಲಗಿ ಓದುವುದು. ಸದಾ ಮಲಗಿ ಪುಸ್ತಕ ಓದುವ ನನಗೆ ಇದಕ್ಕಿಂತ ಸ್ವರ್ಗ ಸುಖ ಯಾವುದು?
ಬೆಂಗಳೂರಲ್ಲಿ ಈ ಕನಸು ಯಾವಾಗ ನನಸಾಗುತ್ತದೋ ಕಾದು ನೋಡುತ್ತಿದ್ದೇನೆ. ಅದಕ್ಕೂ ಮುಂಚೆ ಕ್ರಾಸ್ ವರ್ಡ್, ರಿಲಯನ್ಸ್ ನಂತಹ ಹೆಚ್ಚು ಇಂಗ್ಲಿಷ್ ಪುಸ್ತಕ, ಕೊಸರಿಗೆರಡು ಕನ್ನಡ ಪುಸ್ತಕ ಮಾರುವ ಮಳಿಗೆಗಳನ್ನು ಬಿಟ್ಟು ಕನ್ನಡ ಪುಸ್ತಕ ಮಾರುವ ಅಂಕಿತಾ, ನವಕರ್ನಾಟಕ, ಸಪ್ನಾ, ಐ ಬಿ ಎಚ್ ಗಳಲ್ಲೂ ಆರಾಮವಾಗಿ ಕುಳಿತು ಓದುವ ಕಾಲ ಬರುವಂತಾದರೆ? ಅದು ಬರುವಂತಾಗುವಷ್ಟು ಪುಸ್ತಕಗಳನ್ನು ಎಲ್ಲರೂ ಕೊಳ್ಳುವಂತಾದರೆ…? ಆದರೆ….?
-ಬೆಂಗಳೂರ್ಕರ್
Paravagillari, nanobbane malagi odonu andukondidde. neevu iddira.