ಬದರ್: ‘ಅಬಾಬಿಗಳು’ ಎಂಬ ಹೊಸ ರೀತಿಯ ಕಾವ್ಯ

ಧನಪಾಲ ನಾಗರಾಜಪ್ಪ

ಮೂಲ ಲೇಖಕರ ಪರಿಚಯ

ಇವರ ಪೂರ್ಣ ಹೆಸರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ ಇಸವಿಯಲ್ಲಿ ಮುಸ್ಲಿಂ ಬರಹಗಾರರ ಸಂಘವನ್ನು ಸ್ಥಾಪಿಸಿ ವ್ಯವಸ್ಥಾಪಕರಾಗಿ ಮುಸ್ಲಿಂ ಸಾಹಿತಿಗಳನ್ನು ಒಂದೇ ವೇದಿಕೆಗೆ ಕರೆದುತರುವ ಮಹತ್ವವಾದ ಕಾರ್ಯಕ್ಕೆ ನಾಂದಿ ಹಾಡಿದರು. ಪ್ರಗತಿಪರ ಮುಸ್ಲಿಂ ಬರಹಗಾರರಾಗಿ ಇವರು ಜನಮಾನಸವನ್ನು ಸೂರೆಗೊಂಡಿದ್ದಾರೆ. ಕೆಳ ಮತ್ತು ಮಧ್ಯಮ ವರ್ಗದ ಮುಸ್ಲಮಾನರ ಬದುಕಿನ ಬವಣೆಗಳೇ ಇವರ ಬರಹಗಳಲ್ಲಿರುವ ಜೀವಸೆಲೆ.

ಅನುವಾದಕರ ಪರಿಚಯ

ಪೂರ್ಣ ಹೆಸರು ಧನಪಾಲ ನಾಗರಾಜಪ್ಪ. ಜೂನ್ 20, 1987ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಹುಟ್ಟಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನೆಲವಾಗಿಲು ಗ್ರಾಮದ ನಿವಾಸಿಗಳು. ಸೆಪ್ಟೆಂಬರ್ 27, 2006ರಂದು ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗಿ, ವೈದ್ಯಕೀಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ.

ಅಬಾಬಿಗಳನ್ನು ಯಾಕೆ ಅವಿಷ್ಕರಿಸಿದೇನೆಂದರೆ

ವರ್ತಮಾನ ತೆಲುಗು ಸಾಹಿತ್ಯ ವಿಸ್ತೃತವಾದುದ್ದಾಗಿದೆ. ಅಸ್ತಿತ್ವದಲ್ಲಿರುವ ಅನೇಕಾನೇಕ ಹೋರಾಟಗಳ ನಿಲಯವಿದು. ಈ ಕ್ರಮದಲ್ಲಿ ಭಾಷೆಯಲ್ಲಿನ ಸಂಕ್ಲಿಷ್ಟತೆಯನ್ನು ದೂರ ಮಾಡುತ್ತ ಜನ ಸಾಮಾನ್ಯರಿಗೆ ಹತ್ತಿರವಾಗುವಂತೆ ಕಾವ್ಯ ಸಂಕ್ಷಿಪ್ತ ರೂಪವನ್ನು ಪಡೆದುಕೊಳ್ಳುತ್ತಿರುವ ದೆಶೆಯಿದು. ಇಂತಹ ಸಂದರ್ಭದಲ್ಲಿ ಮುಸ್ಲಿಂ ಕವಿಗಳಿಗೆ ತಮ್ಮ ಸಾಮಾಜಿಕ, ಸಾಂಸ್ಕೃತಿಕ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತ ಚೈತನ್ಯವನ್ನು ತುಂಬುವ ಒಂದು ಹೊಸ ರೀತಿಯ ವಚನಾ ಪ್ರಕ್ರಿಯೆಯ ಅಗತ್ಯವಿದೆ ಎಂದು ನನಗನಿಸಿತು. ಈ ಆಲೋಚನೆ ಬಂದಿದ್ದೇ ತಡ ʼಅಬಾಬಿಗಳು’ ಎಂಬ ಹೊಸ ರೀತಿಯ ವಚನಾ ಪ್ರಕ್ರಿಯೆಯನ್ನು ಅವಿಷ್ಕರಿಸುವ ಉದ್ದೇಶದಿಂದ ಈ ʼಬದರ್‌ʼ ಅನ್ನು ನಿಮ್ಮ ಮುಂದೆ ತರುತ್ತಿದ್ದೇನೆ.

“ಅಬಾಬಿಗಳು’’ ಎಂಬ ಈ ಹೊಸ ರೀತಿಯ ಕಾವ್ಯ ಪ್ರಕಾರಕ್ಕೆ ನಾನು ಪಂಚಪದಿಗಳನ್ನು ಆರಿಸಿಕೊಂಡಿದ್ದೇನೆ. ಮುಸಲ್ಮಾನರ ನಡವಳಿಕೆಗೆ ಪಂಚಸೂತ್ರಗಳು ಇರುವಂತೆಯೇ ಪ್ರತಿ ಅಬಾಬಿಯೂ ಐದು ಸಾಲುಗಳಿಂದ ಮುಗಿಯುತ್ತದೆ. ಸಮಸ್ಯೆ, ವಿಷಯ ವಿಶ್ಲೇಷಣೆ, ವಿವರಣೆ, ಆತ್ಮಾವಲೋಕನ, ಸಂದೇಶ ಇಲ್ಲವೆ ವ್ಯಂಗ್ಯವಾದ ವಿಡಂಬನೆಯಿಂದ ಅಬಾಬಿಗಳು ಮುಗಿಯುತ್ತವೆ.

ಅಬಾಬಿಗಳು ಎಂಬ ಈ ಹೊಸ ಕಾವ್ಯ ಪ್ರಕಾರವನ್ನು ಕೇವಲ ಮುಸ್ಲಿಂ ಕವಿಗಳೇ ಮಾತ್ರವಲ್ಲದೆ ಶೋಷಿತ ವರ್ಗಕ್ಕೆ ಸೇರಿದ ಕವಿಗಳೆಲ್ಲರೂ ಅನುಸರಿಸಬೇಕು ಎಂಬುದು ನನ್ನ ಆಕಾಂಕ್ಷೆ. ಇಂದಿನ ಕವಿಗಳಷ್ಟೇ ಅಲ್ಲದೆ ಮುಂಬರುವ ಕವಿಗಳೂ ಸಹ ಈ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ವಿನಮ್ರತೆಯಿಂದ ಆಶಿಸುತ್ತೇನೆ

-ಷೇಕ್ ಕರೀಮುಲ್ಲಾ

1.
ಈ ಭೂಮಿಯ ಸುತ್ತಲೂ
ಕಗ್ಗತಲು ಕವಿದಿದೆ
ಸೂರ್ಯೋದಯ ಆಗುವುದೋ? ಇಲ್ಲವೋ?
ಕರೀಮ್!
ಇನ್ನು ಬೆಳದಿಂಗಳ ರಾತ್ರಿಗಳಿಲ್ಲ.

2.
ದುಃಖದ ಮಳೆಯಲ್ಲಿ
ತೋಯ್ದು ಮುದ್ದೆ ಆಗುತ್ತಿದ್ದೇನೆ.
ಕುರುಡು ಬಸ್ತಿಗೆ ಕನಿಕರವಿಲ್ಲ.
ಕರೀಮ್!
ಈ ನೆಲವಿಡೀ ನನ್ನ ಸಮಾಧಿಯಂತೆ ಭಾಸವಾಗುತ್ತಿದೆ.

3.
ಕುರ್ತಾದ ಮೇಲೆ ಅತ್ತರು ವಾಸನೆ
ಕುಕ್ಷಿಯಲ್ಲಿ ಕರಕಲು ಕಮಟು ವಾಸನೆ
ಹಸಿವಿಗೂ ಮಿಗಿಲಾದ ಗೆಳೆಯನಿಲ್ಲ.
ಕರೀಮ್!
ರಾತ್ರಿ ಯಾಕೋ ಗಹಗಹಿಸಿ ನಗುತ್ತಿದೆ.

4.
ರಿಕ್ಟರ್ ಮಾಪಕದ ಮೇಲೆ ದೇಶಭಕ್ತಿ
ಬೀಳುತ್ತ ಏಳುತ್ತ ಪರದಾಡುತ್ತಿದೆ.
ಗುಂಡಿಗೆಯನ್ನು ಸೀಳಿ ತೋರಿಸಂತಾನೆ.
ಕರೀಮ್!
ಕಾಷಾಯದ ಮೊಸಳೆ ಕಚ್ಚಿಹಿಡಿದಿದೆ ಅಂತ ಹೇಳು!

5.
ಅವನ ಅಂಬು
ಮಹಾಟವಿಯನ್ನು ಸುಡುತ್ತಲೇ ಇದೆ.
ಮೊಹಲ್ಲಾಗಳೆಲ್ಲಾ ಖಾಂಡವ ವನಗಳೇ!
ಕರೀಮ್!
ನಾಗಾಸ್ತ್ರದಂತೆ ಗುರಿ ತಪ್ಪದಿರಲಿ.

6.
ಎದೆಯಲ್ಲಿ ಧಮನಿಗಳು
ಮುದುಡಿಕೊಳ್ಳುತ್ತಿವೆ
ಭಯದಿಂದಲೋ, ಉದ್ವೇಗದಿಂದಲೋ
ಕರೀಮ್!
ಈ ರಾಜ್ಯ ಎಷ್ಟು ಮಂದಿಯ ಉಸಿರು ಕಸಿದಿದೆಯೋ!

7.
ಹಕ್ಕಿಗಳೇ ಅಲ್ಲವೆ ಅಂತ
ಬಾಣಗಳ ಬಿಡಬೇಡ
ಅಬಾಬಿಲ್ ಪಕ್ಷಿಗಳಾಗಿ ದಂಡು ಕಟ್ಟುತ್ತವೆ
ಕರೀಮ್!
ಅಬ್ರಹಾ ಸೇನೆಯ ಗತಿ ಹೇಳು.

8.
ಅವನ ಕಾರಿನ ಅಡಿಯಲ್ಲಿ
ನಾವು ನಾಯಿಯ ಮರಿಗಳಂತೆ
ಅವಕ್ಕೂ ಕೋರೆಗಳಿರುತ್ತವೆ ಅಂತ ಹೇಳು.
ಕರೀಮ್!
ಕರ್ಬಲಾ ವಿಸ್ತರಿಸುತ್ತಿದೆ ನೋಡು.

9.
ಅವನು ನಮ್ಮನ್ನು
ಎದುರುಮತದವರು ಅಂತಾನೆ
ತಲೆಗೆ ಮೆಟ್ಟುಕೊಂಡಿರುವ ಜೋಡುಗಳನ್ನು ನೋಡಿಕೊಳ್ಳುವುದಿಲ್ಲ
ಕರೀಮ್!
ನೀನು ಕಾಲುಗಳಿಂದಲೇ ನಡೆ.

10.
ನನ್ನ ವರ್ಣಮಾಲೆಯ ಮೇಲೆ
ಅವರು ಸಂಕೋಲೆಗಳ ಬಲೆ ಬೀಸಿದ್ದಾರೆ.
ಅವು ಪರಿವಾಳಗಳಾಗಿ ಅಂಬರಕ್ಕೆ ಹಾರಿದವು.
ಕರೀಮ್!
ಹುರಿಯನ್ನು ಕತ್ತರಿಸುವ ಇಲಿ ಎಲ್ಲಿ?!

12.
ಎದೆಯ ವೇದನೆ
ಹಳೆಯ ಕಬ್ಬಿಣದ ಪೆಟ್ಟಿಗೆಯಂತಲ್ಲದೆ
ಹೊಸ ಅಂಗಿಯಂತೆ ಹೊಳೆಯುತ್ತಿದೆ
ಕರೀಮ್!
ಹೊಲಿದ ಚಿಂದಿಗಳನ್ನು ಉಡುವುದರಲ್ಲಿ ನೀನು ದಿಟ್ಟನೇ!


‍ಲೇಖಕರು Avadhi

September 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲೋಕದ ಕಣ್ಣು ಮರುಗಲೂಬಹುದು!

ಲೋಕದ ಕಣ್ಣು ಮರುಗಲೂಬಹುದು!

ಕೆ.ಜೆ.ಕೊಟ್ರಗೌಡ ತೂಲಹಳ್ಳಿ ಊರ ಬಯಲಿನ ದಿಬ್ಬದ ಮೇಲೆಈ ಮಳೆಗಾಲಕ್ಕೆಚಿಗುರೊಡೆದ ಹುಲ್ಲು ಗಂಬಳಿಯಹಾಸಿನಲಿನಾವಿಬ್ಬರೇ ಸಾನಿಧ್ಯವಹಿಸೋಣಅದೆಷ್ಟು...

ಸ್ಯಾನಿಟೈಜ್ ಆಗಬೇಕಾಗಿದೆ ಹೃದಯ

ಸ್ಯಾನಿಟೈಜ್ ಆಗಬೇಕಾಗಿದೆ ಹೃದಯ

ರಾಘವೇಂದ್ರ ದೇಶಪಾಂಡೆ ವಯಸ್ಸೊಂದಿತ್ತು ಆ ದಿನಗಳಲ್ಲಿಜಾದೂವಿನಲ್ಲು ನಂಬಿಕೆಯಿತ್ತು...ವಯಸ್ಸೊಂದಿದೆ ಇವಾಗವಾಸ್ತವತೆಯಲ್ಲು ಸಂಶಯವಿದೆ......

ಲಂಗರು ಕಚ್ಚಿದ ದೋಣಿ

ಲಂಗರು ಕಚ್ಚಿದ ದೋಣಿ

ಶ್ರೀಕಾಂತ್ ಪ್ರಭು ಲಂಗರು ಕಚ್ಚಿದ ದೋಣಿ ಮರಳ ಮೇಲೆಲ್ಲ ಹಾಯ್ದು ತೋಯಿಸಿ ಮೆತ್ತಗಾಗಿಸಿ ಮತ್ತೆ ಮತ್ತೆ ಮರಳುವ ಅಲೆ ಬೆಚ್ಚನೆಯ ಪಿಸು ಮಾತು...

3 ಪ್ರತಿಕ್ರಿಯೆಗಳು

 1. ಧನಪಾಲ‌ ನಾಗರಾಜಪ್ಪ

  ಬದರ್ ಕೃತಿಯನ್ನು ಮತ್ತು ಅದರಲ್ಲಿ ಅಬಾಬಿಗಳು ಎಂಬ ಹೊಸ ಕಾವ್ಯ ಪ್ರಕಾರವನ್ನು ಪ್ರಕಟಿಸಿದ್ದಕ್ಕೆ ಅವಧಿ ಪತ್ರಿಕಾ ಬಳಗಕ್ಕೆ ಅನಂತಾನಂತ ಧನ್ಯವಾದಗಳು.
  ಇಂತಿ ನಿಮ್ಮಯ,
  ಧನಪಾಲ‌ ನಾಗರಾಜಪ್ಪ

  ಪ್ರತಿಕ್ರಿಯೆ
 2. HANCHI (YALLAPPA HANCHINAL)

  ಅಬಾಬಿಗಳ ಬಗ್ಗೆ ಪ್ರಕಟಿಸಿದ್ದಕ್ಕೆ ಅವಧಿ ಬಳಗಕ್ಕೆ ಧನ್ಯವಾದಗಳು. ಅನುವಾದಕ ಧನಪಾಲ ನಾಗರಾಜಪ್ಪ ಇದೇ ರೀತಿ ನವನವೀನ ಮಾದರಿಯ ಕಾವ್ಯ ಪ್ರಕಾರವನ್ನು ಕನ್ನಡಕ್ಕೆ ಸದಾ ಪರಿಚಯಿಸಿ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಲಿ ಎಂದು ಆಶೀಸುತ್ತೇನೆ. ಅನುವಾದಕರಾದ ಸಾಹಿತ್ಯ ಮಿತ್ರ ಧನಪಾಲರವರಿಗೆ ಅಭಿನಂದನೆಗಳು. ಶುಭವಾಗಲಿ.

  ಪ್ರತಿಕ್ರಿಯೆ
 3. ತಮ್ಮಣ್ಣ ಬೀಗಾರ

  ಹೊಸರೀತಿಯ ಕಾವ್ಯವೊಂದನ್ನು ಪರಿಚಯಿಸಿದ ಧನಪಾಲ ಅವರಿಗೆ ವಂದನೆಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: