ಬದುಕಿದು ಜಟಕಾಬಂಡಿ..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಅತ್ತಿತ್ತ ಒಂದು ದಶಕದ ಹಿಂದೆ ನಾನು ಮೊದಲ ಬಾರಿ ದಿಲ್ಲಿಗೆ ಬಂದಿಳಿದಾಗ ನನ್ನನ್ನು ಸ್ವಾಗತಿಸಿದ್ದು ಸೈಕಲ್ ರಿಕ್ಷಾಗಳು.

ಇಂದಿಗೂ ದಿಲ್ಲಿಯ ಗಲ್ಲಿಗಳ ಕೋರ್ ಅನುಭವಗಳನ್ನು ಪಡೆಯಲು ನಾನು ಅವಲಂಬಿಸುವುದು ಈ ಸೈಕಲ್ ರಿಕ್ಷಾಗಳನ್ನು. ಟಾಂಗಾಗಳು ಆಟೋ ಅಥವಾ ಕ್ಯಾಬ್ ಗಳಷ್ಟು ಆರಾಮದಾಯಕವಲ್ಲದಿರಬಹುದು. ಆದರೆ ಇಕ್ಕಟ್ಟಾದ, ಕೊರಕಲು ಗಲ್ಲಿಗಳಿಗೆ ಟಾಂಗಾಗಳೇ ಸರಿ.

ತಕ್ಕಮಟ್ಟಿಗೆ ನಿಧಾನವಾಗಿ ಸಾಗಿದರೂ, ಹವೆಯನ್ನು ಸಂಪೂರ್ಣವಾಗಿ ಆಸ್ವಾದಿಸುತ್ತಾ ಅಕ್ಕಪಕ್ಕದ ಪ್ರದೇಶಗಳ ಅನುಭೂತಿಯನ್ನು ಆಸ್ವಾದಿಸಲು ಇವುಗಳೇ ಸೂಕ್ತ. ಹಾಗೆ ನೋಡಿದರೆ ಅಂದಿನಿಂದ ಇಂದಿನವರೆಗೂ ಇವುಗಳ ಬಗ್ಗೆ ನನಗಿರುವ ಆಕರ್ಷಣೆಯು ಮಾತ್ರ ಕಮ್ಮಿಯಾಗಿಲ್ಲ.

ಹಳೇ ದಿಲ್ಲಿಗಂತೂ ಟಾಂಗಾಗಳು ಹೇಳಿ ಮಾಡಿಸಿದಂತಿರುವ ಸೌಲಭ್ಯಗಳು. ಜಗತ್ತಿನ ಗೊಂದಲಗಳೆಲ್ಲವೂ ಹಳೇದಿಲ್ಲಿಯ ರಸ್ತೆಗಳಲ್ಲಿ ಬೋರಲು ಬಿದ್ದಿವೆಯೇನೋ ಎಂದನಿಸತೊಡಗಿದಾಗ, ಸಿಕ್ಕ ಒಂದಿಂಚು ಜಾಗದ ಮೂಲೆಯಲ್ಲಿ ಮೂತಿ ತೂರಿಸಿ ಹೇಗೋ ಮುನ್ನಡೆಯುವ ತಾಕತ್ತಿರುವುದು ಇವುಗಳಿಗೆ ಮಾತ್ರ.

ಎಲ್ಲರೂ ಏಕಕಾಲದಲ್ಲಿ ಮಾತನಾಡುತ್ತಾ, ಕೊನೆಗೆ ಯಾರು ಏನು ಹೇಳಿದರೆಂದೇ ತಿಳಿಯದ ಕೆಲ ಖಾಸಗಿ ಸುದ್ದಿವಾಹಿನಿಗಳ ಡಿಸ್ಕಷನ್ ಪ್ಯಾನಲ್ಲುಗಳಂತೆ, ಯಾವುದೇ ಟ್ರಾಫಿಕ್ ನಿಯಮಗಳ ಹಂಗಿಲ್ಲದೆ, ಎಲ್ಲಾ ದಿಕ್ಕುಗಳಲ್ಲಿ ಏಕಕಾಲದಲ್ಲಿ ಸಾಗಲು ಪ್ರಯತ್ನಿಸುವ ಹತ್ತಾರು ಬಗೆಯ ವಾಹನಗಳ ಸಂಕೀರ್ಣ ಗೋಜಲಿನಲ್ಲಿ ಟಾಂಗಾಗಳಷ್ಟೇ ನಮ್ಮನ್ನು ಉಳಿಸಬಲ್ಲವು. ಈ ನಿಟ್ಟಿನಲ್ಲಿ ಸೈಕಲ್ ರಿಕ್ಷಾಗಳು ಅಷ್ಟು ಯೂಸರ್ ಫ್ರೆಂಡ್ಲಿ ಆಯ್ಕೆಗಳು.

ಈ ಹಿಂದೆ ದಿಲ್ಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿ ನಾನು ಕೆಲಕಾಲ ನೆಲೆಸಿದ್ದೆ. ಸಾಕಷ್ಟು ದೊಡ್ಡದಾಗಿರುವ ಮಯೂರ್ ವಿಹಾರ್ ಫೇಸ್-2 ಮೆಟ್ರೋ ಸ್ಟೇಷನ್ನಿನ ಹೊರಭಾಗದಲ್ಲಿ ಏನಿಲ್ಲವೆಂದರೂ ಐವತ್ತರಿಂದ ಎಪ್ಪತ್ತು ಸೈಕಲ್ ರಿಕ್ಷಾಗಳು ಸದಾ ನಿಂತಿರುತ್ತಿದ್ದವು. ಅವುಗಳು ಅದ್ಯಾವ ಮಟ್ಟಿಗೆ ಒತ್ತೊತ್ತಾಗಿ ನಿಂತುಕೊಂಡು ಗ್ರಾಹಕರಿಗಾಗಿ ಕಾಯುತ್ತಿದ್ದವೆಂದರೆ, ಎಲ್ಲದರ ಗಾಲಿಗಳು ಒಂದಕ್ಕೊಂದು ಅಂಟಿಕೊಂಡು, ಹೊರಬರಲಾಗದಷ್ಟು ಸಿಲುಕಿಕೊಂಡಿವೆಯೇನೋ ಎಂಬಷ್ಟು.

ಜೇಬಿನಲ್ಲಿ ಮರೆತು ಸುರುಳಿ ಸುತ್ತಿಟ್ಟುಬಿಟ್ಟರೆ, ನಂತರ ಚಿತ್ರವಿಚಿತ್ರ ಬ್ರಹ್ಮಗಂಟಾಗಿಬಿಡುವ ಇಯರ್ ಫೋನ್ ಬಿಡಿಸಲಾಗದೆ ಗೋಜಲೆನಿಸುತ್ತೆ ನೋಡಿ. ಥೇಟು ಹಾಗೇನೇ!

ದಿಲ್ಲಿಗೆ ಬಂದ ಹೊಸದರಲ್ಲಿ ನನಗೆ ಹೊಸ ಆಕರ್ಷಣೆಯಾಗಿ ಕಂಡ ಸೈಕಲ್ ರಿಕ್ಷಾಗಳು ನಂತರ ಬದಲಾಗಿದ್ದು ವಿಚಿತ್ರ ಅಚ್ಚರಿಗಳಲ್ಲಿ. ಆರಂಭದ ದಿನಗಳಲ್ಲಿ ಟಾಂಗಾದ ಸೀಟಿನಲ್ಲಿ ಆರಾಮಾಗಿ ಕೂತು, ಮಹಾನಗರಿಯನ್ನು ನನ್ನೊಳಗೆ ತುಂಬಿಕೊಳ್ಳುತ್ತಿದ್ದ ಕ್ಷಣಗಳಲ್ಲಿ, ಈ ಸೈಕಲ್ ರಿಕ್ಷಾ ಸಾರಥಿಗಳನ್ನು ನಾನೆಂದೂ ಸೂಕ್ಷ್ಮವಾಗಿ ಗಮನಿಸಿರಲಿಲ್ಲ.

ಹಾಗೆ ನೋಡಿದರೆ ಸೈಕಲ್ ರಿಕ್ಷಾ ಹತ್ತಿದ ಕ್ಷಣದಿಂದ ಹಿಂಭಾಗದ ಆಸನದಲ್ಲಿ ಜುಮ್ಮನೆ ಕುಳಿತು, ಇಳಿಯಬೇಕಾದ ಸ್ಥಳದಲ್ಲಿ ಇಳಿದು, ಟಾಂಗಾದವನ ಕೈಗೆ ಒಂದಿಪ್ಪತ್ತು ರೂಪಾಯಿಗಳನ್ನು ತುರುಕಿಬಿಟ್ಟರೆ ಅಲ್ಲಿಗೆ ಕೆಲಸ ಮುಗಿದುಹೋಗುತ್ತದೆ. ಇನ್ನು ಸುಖಾಸುಮ್ಮನೆ ರೊಳ್ಳೆ ತೆಗೆಯುವ ಭಂಡಗ್ರಾಹಕನಾಗಿದ್ದರೆ ಆ ಜುಜುಬಿ ಹತ್ತಿಪ್ಪತ್ತು ರೂಪಾಯಿಗಳಲ್ಲೂ ಚೌಕಾಶಿ. ಭಾರ ಎಳೆಯುವವನ ಕಷ್ಟ ಆರಾಮಾಗಿ ಕೂತವನಿಗೇನು ಗೊತ್ತು? 

ಅಸಲಿಗೆ ಬಹಳಷ್ಟು ಬಾರಿ, ಬದುಕಿನ ಅದೆಷ್ಟೋ ಸಂಗತಿಗಳನ್ನು ನಾವು ಗಮನಿಸಿಯೇ ಇರುವುದಿಲ್ಲ. ಸದಾ ವ್ಯಸ್ತರೆಂದು ಹೇಳಿಕೊಳ್ಳುತ್ತಾ, ಜಗತ್ತಿನ ಜವಾಬ್ದಾರಿಗಳೆಲ್ಲಾ ನಮ್ಮ ಹೆಗಲ ಮೇಲೆಯೇ ಬಿದ್ದಿವೆಯೆಂಬಂತೆ ತೋರಿಸಿಕೊಳ್ಳುತ್ತಾ ದಿನಗಳನ್ನು ಕಳೆಯುವ ನಾವುಗಳು ಅದ್ಯಾವುದೋ ಬಗೆಯ ಆಟೋ-ಪೈಲಟ್ ಮೋಡ್ ನಲ್ಲಿ ಬದುಕುತ್ತಿರುತ್ತೇವೆ.

ಮೇಲ್ನೋಟಕ್ಕೆ ಭಾರೀ ಚಟುವಟಿಕೆಯಿಂದಿರುವಂತೆ ಕಂಡರೂ ಸ್ವಂತ ಪ್ರಜ್ಞೆಯಿಲ್ಲದೆ ಸಾಗುತ್ತಾ, ಎಲ್ಲೋ ಢಮ್ಮನೆ ಢಿಕ್ಕಿ ಹಿಡಿದು ನಿಂತುಬಿಡುವ ಕೀಲಿ ಚಾಲಿತ ಆಟಿಕೆಯ ಕಾರುಗಳಂತೆ. ಇಲ್ಲಿರುವುದು ಬದುಕಿನ ಸೂಕ್ಷ್ಮ ಸಂಗತಿಗಳ ಬಗ್ಗೆ ನಮಗಿರುವ ಅಸಡ್ಡೆಯೋ, ಸ್ಮಾರ್ಟ್‍ಫೋನುಗಳ ಆರಿಂಚು ಪರದೆಗೆ ಸೀಮಿತವಾಗಿರುವ ನಮ್ಮ ಕೂಪಮಂಡೂಕ ನೋಟವೋ ಅಥವಾ ಇಲ್ಲಿ ನಾವಷ್ಟೇ ಮುಖ್ಯ ಎಂಬ ಆತ್ಮರತಿಯೋ! ನನಗಂತೂ ಗೊತ್ತಿಲ್ಲ. 

ದಿಲ್ಲಿಯ ಭಯಾನಕ ಬೇಸಿಗೆಯಲ್ಲಿ ನಾಲ್ಕು ಹೆಜ್ಜೆ ನಡೆಯುವುದೇ ಕಷ್ಟ. ಮೈಯಲ್ಲಿ ರಾಕ್ಷಸಸುಸ್ತು ಹುಟ್ಟಲು ನಲವತ್ತೈದರಿಂದ ಐವತ್ತು ಸೆಲ್ಸಿಯಸ್ ಉಷ್ಣಾಂಶದ ಈ ಹವೆಯಲ್ಲಿ ಇನ್ನೇನೂ ಮಾಡಬೇಕಿಲ್ಲ. ಮೈಚುಚ್ಚುವ ಬೇಸಿಗೆಯ ಧಗೆಗೆ ಸುಮ್ಮನೆ ಬೆವರಿದರೆ ಸಾಕು. ಹೀಗಾಗಿಯೇ ಇಲ್ಲಿಯ ಸ್ಥಳೀಯರು ಬೇಸಿಗೆಯ ದಿನಗಳಲ್ಲಿ ಪ್ರವಾಸಕ್ಕೆಂದು ಹೊರಡುವುದಿಲ್ಲ.

ಹೋದರೂ ಬೆಂಕಿಯ ಮೇಲಿಟ್ಟಿರುವ ಕಾವಲಿಯಂತೆ ಸುಡುವ ದಿಲ್ಲಿಯ ಸುತ್ತಮುತ್ತಲಿನ ರಾಜ್ಯಗಳತ್ತ ಕುತೂಹಲಕ್ಕೂ ನೋಡುವುದಿಲ್ಲ. ಅದೇನಿದ್ದರೂ ಬಝ್‍ಝ್‍ಝ್… ಎಂದು ತನ್ನಷ್ಟಕ್ಕೆ ಸದಾಕಾಲ ಗೊಣಗುತ್ತಿರುವ ಏರ್ ಕಂಡಿಷನರ್, ಏರ್ ಕೂಲರ್ ಗಳ ಸುಗ್ಗಿಕಾಲ.

ಅಂಥದ್ದರಲ್ಲಿ ಸುಮಾರು ಐವತ್ತೈದರಿಂದ ಅರವತ್ತೈದರ ವಯಸ್ಸಿನ ಅದೆಷ್ಟೋ ಹಿರಿಯರು ದಿಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ, ಸುಸ್ತಿಗೂ ತಮಗೂ ಸಂಬಂಧವಿಲ್ಲವೆಂಬಂತೆ ಸೈಕಲ್ ರಿಕ್ಷಾ ತುಳಿಯುತ್ತಿರುತ್ತಾರೆ. ಅದು ಅವರಿಗೆ ಹೊಟ್ಟೆಪಾಡು. ಅರವತ್ತು ಕಿಲೋ ತೂಕದ ವೃದ್ಧನೊಬ್ಬ ತನ್ನ ತೂಕದ ಎರಡರಿಂದ ಮೂರು ಪಟ್ಟು ತೂಕವನ್ನು ಎಳೆಯುತ್ತಾ ದಿಲ್ಲಿಯ ಕೊಲ್ಲುವ ಬಿಸಿಲಿನಲ್ಲಿ ದಿನವಿಡೀ ಸಾಗುತ್ತಿರುತ್ತಾನೆ.

ಆತ ಎಳೆಯುವ ಭಾರವು ಹಿಂಭಾಗದ ಸೀಟಿನಲ್ಲಿ ಕೂತಿರುವ ಒಂದಿಬ್ಬರು ಗ್ರಾಹಕರದ್ದೇ ಆಗಬೇಕಿಲ್ಲ. ಅದು ಎಲ್ಲಿಗೋ ಸಾಗಿಸಲಾಗುತ್ತಿರುವ ಮತ್ಯಾವುದೋ ಭಾರದ ವಸ್ತುವೂ ಆಗಿರಬಹುದು. ಅದು ಅವರ ಬದುಕಿನ ಜಟಕಾಬಂಡಿ.

ಹೀಗೆ ದಿಲ್ಲಿಯ ರಣಬಿಸಿಲಿನಲ್ಲಿ ಸೈಕಲ್ ರಿಕ್ಷಾ ತುಳಿಯುವ ಶ್ರಮಜೀವಿಗಳ ಬೆವರಿನ ಹನಿಗಳು ನಾವು ಸಾಗುವ ಮಾರ್ಗಗಳನ್ನು ಸತತವಾಗಿ ತೋಯಿಸುತ್ತಿರುತ್ತವೆ. ಆದರೆ ಸುಡುವ ಹಂಚಿನ ಮೇಲೆ ಬೀಳುವ ನೀರಿನ ಹನಿಗೆಷ್ಟು ಬದುಕು! ಸಾಗುತ್ತಿರುವ ರಸ್ತೆಯಲ್ಲಿ ಗುಂಡಿಗಳಿದ್ದರೆ ಕೇವಲ ಪೆಡಲ್ ತುಳಿದರೆ ಆಗುವುದಿಲ್ಲ.

ಕುರುಕ್ಷೇತ್ರ ರಣರಂಗದ ಕೆಸರಿನಲ್ಲಿ ಹೂತುಹೋಗಿದ್ದ ತನ್ನ ರಥದ ಗಾಲಿಯನ್ನು ಕರ್ಣ ಕಷ್ಟಪಟ್ಟು ಎಳೆದಂತೆ, ತಾನು ಸ್ವತಃ ಇಳಿದು ಕೈಯಾರೆ ತನ್ನ ಪುಟ್ಟ ವಾಹನವನ್ನು ಎಳೆಯಬೇಕು. ಇಲ್ಲವಾದರೆ ನಮ್ಮ ಟಾಂಗಾ ಯಾವುದಾದರೊಂದು ಗುಂಡಿಯಲ್ಲಿ ಕುಳಿತಿರುವ ಗ್ರಾಹಕನ ಸಮೇತ ಮಗುಚಿ ಬೀಳುವುದು ಖಚಿತ. ಇನ್ನು ರಸ್ತೆಯು ಏರುಮುಖವಾಗಿದ್ದರೆ ಪಡೆಲ್ ತುಳಿದಷ್ಟೂ ಕಮ್ಮಿ. ಆಗ ಸೈಕಲ್ ತುಳಿಯುವವನಿಗೆ ಹೂವಿನ ದಳವೂ ಟನ್ನಿನಷ್ಟು ಭಾರ.

ಇಷ್ಟಿದ್ದರೂ ಸಾಮಾನ್ಯವಾಗಿ ಆಟೋಗಳಲ್ಲಿ ಕೇಳುವಂತೆ ಇವರುಗಳು ಬೇಕಾಬಿಟ್ಟಿ ರೇಟುಗಳನ್ನು ಗ್ರಾಹಕರಲ್ಲಿ ಕೇಳುವುದಿಲ್ಲ. ಮೀಟರುಗಳ ಲೆಕ್ಕಾಚಾರವಂತೂ ಮೊದಲೇ ಇಲ್ಲ. ಈಚಿನ ವರ್ಷಗಳಲ್ಲಿ ಕೈಯಲ್ಲಿ ಕೊಂಚ ಕಾಸಿದ್ದ, ಬೈಕು-ಆಟೋ-ಕಾರುಗಳನ್ನು ಹೊಂದಿದ್ದ ಸಾವಿರಾರು ಮಂದಿ ಖಾಸಗಿ ಕ್ಯಾಬ್ ಕಂಪೆನಿಗಳ ಜೊತೆ ಕೈಜೋಡಿಸಿದರು.

ಸೈಕಲ್ ರಿಕ್ಷಾ ಸಾರಥಿಗಳಿಗೆ ಆ ಭಾಗ್ಯವೂ ಇಲ್ಲ. ಹಾಗೆ ನೋಡಿದರೆ ಹಣದುಬ್ಬರದ ಹೆಸರು ಹೇಳುತ್ತಾ ದೇಶದಾದ್ಯಂತ ನೂರಾರು ಸೇವೆಗಳು ತಮ್ಮ ಸೇವಾದರಗಳನ್ನು ಹೆಚ್ಚಿಸುತ್ತಾ ಬಂದಿವೆ. ಆದರೆ ಸೈಕಲ್ ರಿಕ್ಷಾಗಳಿಗೆ ಮಾತ್ರ ಇದು ಅನ್ವಯವಾದಂತೆ ಕಾಣುತ್ತಿಲ್ಲ. 

ಮೊದಲೇ ಹೇಳಿದಂತೆ ಸೈಕಲ್ ರಿಕ್ಷಾ ಎಂಬುದು ಸಂಪೂರ್ಣವಾಗಿ ದೈಹಿಕ ಶ್ರಮದ ಮೇಲೆ ಅವಲಂಬಿತವಾಗಿರುವಂಥದ್ದು. ಹೀಗಾಗಿ ಗಟ್ಟಿಮುಟ್ಟಾಗಿರುವ ಯುವಕನೊಬ್ಬ ಸೈಕಲ್ ತುಳಿಯುವುದಕ್ಕೂ, ಅರವತ್ತರ ಬೆಳ್ಳಿಗಡ್ಡದ ವೃದ್ಧನೊಬ್ಬ ಸೈಕಲ್ ತುಳಿಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಹೊಟ್ಟೆಪಾಡಿಗಾಗಿ ಸೈಕಲ್ ತುಳಿಯುವ ವೃದ್ಧನೊಬ್ಬ ತನಗಿಂದು ಬೆನ್ನುನೋವೆಂದು ಮನೆಯಲ್ಲಿ ಮಲಗಿಬಿಟ್ಟರೆ ಅಂದಿನ ಸಂಪಾದನೆಗೆ ಕಲ್ಲು. ಐವತ್ತು ರೂಪಾಯಿ ಸಿಗಬೇಕಾದ ಪಯಣದಲ್ಲಿ ಹಟಮಾರಿ ಗ್ರಾಹಕನೊಬ್ಬ ಮೂವತ್ತೈದು ಮಾತ್ರ ಕೊಟ್ಟು ನಡೆದರೆ ಅಲ್ಲೂ ನಷ್ಟ. ಇಷ್ಟಿದ್ದರೂ ಆತ ದಿಲ್ಲಿಯ ರಣಬಿಸಿಲಿಗೂ ಸೈ. ಇಲ್ಲಿಯ ರಾಕ್ಷಸಚಳಿಗೂ ಸೈ!

ಒಮ್ಮೆ ದಿಲ್ಲಿಯ `ರೋಹಿಣಿ’ ಪ್ರದೇಶದಲ್ಲಿ ಜಲನಿಗಮದ ಸರಕಾರಿ ಕಾರ್ಯಾಲಯವೊಂದನ್ನು ಹುಡುಕುತ್ತಾ ಏಕಾಂಗಿಯಾಗಿ ಹೊರಟಿದ್ದೆ. ನಿರ್ದಯಿ ಬಿಸಿಲಿನಲ್ಲಿ ಸಾಗಿದಷ್ಟೂ ದೂರ ಅನ್ನಿಸುತ್ತಿತ್ತು. ನೆತ್ತಿಯ ಮೇಲೆ ಸೂರ್ಯ ಇನ್ನಿಲ್ಲದಂತೆ ಸುಡುತ್ತಿದ್ದ.

ಇಲಾಖೆಯ ಅಧಿಕಾರಿಗಳು ನನ್ನನ್ನು ಕಾಲ್ಚೆಂಡಿನಂತೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಒದೆಯುತ್ತಲೇ ಇದ್ದರು. ವೈಯಕ್ತಿಕ ನೆಲೆಯಲ್ಲಿ ಪ್ರಯಾಣ-ಹುಡುಕಾಟಗಳು ಹೊಸತಲ್ಲದಿದ್ದರೂ ಅಂದು ಪ್ರಯಾಸವೆನಿಸಿದ್ದು ಸತ್ಯ. ಅದು ದಿಲ್ಲಿಯ ಧಗೆಯ ಮಹಿಮೆ.

ಇತ್ತ ಆಸ್ಪತ್ರೆಯ ವಾರ್ಡಿನಿಂದ ಸೀದಾ ರಸ್ತೆಗಿಳಿದವನಂತೆ ಕಾಣುತ್ತಿದ್ದ ಸಣಕಲ ವೃದ್ಧನೊಬ್ಬ ನನ್ನನ್ನು ತನ್ನ ಟಾಂಗಾದಲ್ಲಿ ಮುನ್ನಡೆಸುತ್ತಿದ್ದ. ಈತ ಸೈಕಲ್ ತುಳಿದ ಮಟ್ಟಿಗೆ ಏನಿಲ್ಲವೆಂದರೂ ನನ್ನಿಂದ ಇನ್ನೂರು ಕೀಳಬೇಕಿತ್ತು. ಆದರೆ ಕೇವಲ ಅರವತ್ತು ರೂಪಾಯಿ ಕೇಳಿದ್ದ ಈತ ಒಂದೋ ಮೂರ್ಖ ಅಥವಾ ಈ ಊರಿಗೆ ಹೊಸಬ ಎಂದೆಲ್ಲಾ ನಾನು ಕೂತಲ್ಲೇ ಯೋಚಿಸುತ್ತಾ ಚಡಪಡಿಸಿದೆ.

ನಿಮಿಷಗಳು ಆತನ ಬೆವರಿನಂತೆ ಕರಗುತ್ತಿದ್ದರೂ ದಾರಿ ಮುಗಿಯುವಂತೆ ಕಾಣಲಿಲ್ಲ. ಇನ್ನೆಷ್ಟು ದೂರವಿದೆಯಪ್ಪಾ ಎಂದು ಕೂತಲ್ಲಿಂದಲೇ ಕೇಳಿದೆ. ಆಗಯಾ ಸಾಬ್… ಆಪ್ ಟೆನ್ಷನ್ ಮತ್ ಲೇನಾ ಎಂದ ಆತ.   

ಕೊನೆಗೂ ಬರಬೇಕಾದ ಸ್ಥಳಕ್ಕೆ ನಾವು ಬಂದು ತಲುಪಿದ್ದೆವು. ಮೊದಲೇ ಒಪ್ಪಿಕೊಂಡ ಪ್ರಕಾರ ಅರವತ್ತಕ್ಕಿಂತ ಒಂದೇ ಒಂದು ರೂಪಾಯಿಯನ್ನೂ ಆತ ಹೆಚ್ಚು ತೆಗೆದುಕೊಳ್ಳಲಿಲ್ಲ. ಇರಲಪ್ಪಾ ಎಂದು ಸ್ವಇಚ್ಛೆಯಿಂದ ಕೊಂಚ ಹೆಚ್ಚು ಕೊಟ್ಟಿದ್ದನ್ನು ಸೌಜನ್ಯಪೂರ್ವಕವಾಗಿ ಮರಳಿಸಲಾಯಿತು. ಗ್ರಾಹಕನಾಗಿ ನಾನು ಕೊಟ್ಟ ಇನ್ನೂರು ರೂಪಾಯಿಯ ನೋಟನ್ನು ಚಿಲ್ಲರೆ ಮಾಡಲೆಂದು ಅಂಗಡಿಯೊಂದಕ್ಕೆ ತೆರಳಿ, ಕರಾರುವಾಕ್ಕಾಗಿ ಚಿಲ್ಲರೆಯೊಂದಿಗೆ ಮರಳಿದ್ದು ಕೂಡ ಆತನೇ.

ಮುಂದೆ ವ್ಯಾವಹಾರಿಕ ಕೊಡುಕೊಳ್ಳುವಿಕೆಗಳು ಮುಗಿದ ನಂತರ ತನ್ನೆರಡೂ ಕೈಗಳನ್ನು ಜೋಡಿಸಿ ಆತ ”ಧನ್ಯವಾದ್ ಸಾಬ್” ಎಂದ. ನನಗಂತೂ ಆ ಕ್ಷಣಕ್ಕೆ ‘Incredible India’ದ ಅಸಲಿ ರಾಯಭಾರಿ ಈತನೇ ಅನ್ನಿಸಿತ್ತು.

ಆ ಸಣಕಲು ದೇಹದ ವೃದ್ಧನ ಹೆಸರಾಗಲಿ, ಊರಾಗಲಿ ನನಗೆ ಗೊತ್ತಿಲ್ಲ. ಆದರೆ ಕಪಟವಿಲ್ಲದ ಆತನ ಮುಗುಳ್ನಗೆಯ ನೆನಪು ಮಾತ್ರ ಎಂದೆಂದಿಗೂ ನನ್ನ ಜೊತೆಗಿರಲಿದೆ!

October 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಂಘರ್ಷ-ಸಂಭ್ರಮ

ಸಂಘರ್ಷ-ಸಂಭ್ರಮ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಎದೆಬಿಲ್ಲೆಯೂ ಮಾತುಕತೆಯೂ…

ಎದೆಬಿಲ್ಲೆಯೂ ಮಾತುಕತೆಯೂ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್...

‘ಲೇಖ’ಕಿ ‘ಲೋಕ’ದ ಅನಾವರಣ

‘ಲೇಖ’ಕಿ ‘ಲೋಕ’ದ ಅನಾವರಣ

ಗಿರಿಜಾ ಶಾಸ್ತ್ರಿ ಕರ್ನಾಟಕ ಲೇಖಕಿಯರ ಸಂಘವು ಕೆಲವು ವರ್ಷಗಳಿಂದ ಲೇಖಕಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ 'ಲೇಖಕಿಯರ ಆತ್ಮ ಕಥೆಗಳ...

2 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಒಳ್ಳೆಯ ಬರಹ ಪ್ರಸಾದ್ ಸರ್.

    ಪ್ರತಿಕ್ರಿಯೆ
  2. Meena

    Howdu intha shramajeevigalu mamma Indiada incredible rayabharigalu. Navu Uttarakhand nallidda kelavarshagalu ee rikshawalagalu namma aaptkalada bandhugalagiddaru. Hoguva jaga yavudiddru prati nildanada lekkadalli 5 rupayi aste tegedukolluttiddaru. Adarallu Urige hosabaradare innu hechchu kalaji vahisuttiddaru. Sthaliyarondige Biharada hechchu mandi iruttiddru. Maneyinda 4 -5 km duravidda nanna kaaryastanavannu talupisalu tingalige 300 rupayiyante oppikondidda, cycle rikshada Chotu bhayya indigu nenapu. Cycle Rikshada prayanavanthu innillada khushiya anubhava, adarallu hosa jagagalannu aavishkarisuvaga koduva khushiye bere. Anthaha shramika sarathigaligu sarkardinda masika pinchani, kanista vetana siguvantagli embude nanna prarthane.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: