ಬದುಕಿನ ಕಸುವಿಗೆ ಭಿತ್ತಿಯಾಗುವ ಆತ್ಮಕಥನ

ಡಾ. ಗೀತಾ ವಸಂತ

ಉದಯ ಹಬ್ಬು ಅವರ ಆತ್ಮಕಥಾನಕ ‘ಬೊಪ್ಪ ನನ್ನನ್ನು ಕ್ಷಮಿಸು’ ಒಂದು ಸುದೀರ್ಘ ಸ್ವಗತದಂತೆ ತೆರೆದುಕೊಳ್ಳುತ್ತ ಹೋಗುತ್ತದೆ. ನಮ್ಮ ಬದುಕು ಎಂದಿಗೂ ನಮ್ಮದು ಮಾತ್ರ ಆಗಿರಲಾರದು. ಅದು ನಾವು ಬದುಕುವ ಪರಿಸರ, ಕಾಲ, ನಮ್ಮೆಲ್ಲ ಸಮಾಜೋ-ಆರ್ಥಿಕ ಸ್ಥಿತಿಗತಿಗಳೊಂದಿಗೆ ಹೆಣೆಯಲ್ಪಟ್ಟಿರುತ್ತದೆ. ನಮ್ಮದಲ್ಲದ ತಪ್ಪಿಗಾಗಿ ನಾವು ಪೆಟ್ಟು ತಿನ್ನಬೇಕಾಗುತ್ತದೆ, ನಮ್ಮ ಚೈತನ್ಯವನ್ನು ಕುಗ್ಗಿಸುವಂಥ ಸನ್ನಿವೇಶಗಳೊಂದಿಗೆ ಸೆಣಸಬೇಕಾಗುತ್ತದೆ. ಆದರೆ ಬದುಕು ನಿಲ್ಲುವುದಿಲ್ಲ. ಎಂಥ ಬಿರುಕಿನ ಎಡೆಯಿಂದಲೂ ಹೊಮ್ಮುವುದು ಅದಕ್ಕೆ ಗೊತ್ತು.

ಬೀಜದೊಳಗಿನ ವೃಕ್ಷದಂತೆ ಅದು ತನ್ನ ವಿಕಾಸವನ್ನು ತನ್ನೊಳಗೇ ಅಡಗಿಸಿಕೊಂಡಿರುತ್ತದೆ. ತಕ್ಕ ಮಣ್ಣಿನ ತೇವಕ್ಕಾಗಿ ಜೀವಹಿಡಿದು ಕಾಯುತ್ತದೆ. ಇದು ಈಗ ಸುಮಾರು ಅರವತ್ತೆಪ್ಪತ್ತು ವರ್ಷ ಹಿಂದಿನ ಹವ್ಯಕ ಸಮುದಾಯದ ಬದುಕಿನಲ್ಲಿ ಕಣ್ಣೊಡೆದ ಕಥನ. ಪಶ್ಚಿಮ ಘಟ್ಟಗಳ ಹೊಟ್ಟೆಯಲ್ಲಿ ತಣ್ಣಗೆ ಮಲಗಿದ ಉತ್ತರಕನ್ನಡ, ದಟ್ಟಕಾನನದ ನಡುವೆ ಕಣಿವೆಗಳೆಡೆಯಲ್ಲಿ ಅಡಿಕೆ, ತೆಂಗು, ಕಾಳುಮೆಣಸು, ಯಾಲಕ್ಕಿ ಬೆಳೆಯುವ ಕೃಷಿಕರಾದ ಹವ್ಯಕರು, ಭರತನಹಳ್ಳಿ ಸೀಮೆಯ ಸಾಂಸ್ಕೃತಿಕ ಸಮೃದ್ಧ ಬದುಕು ಈ ಕಥನದ ಮೂಲಕ ತೆರೆದುಕೊಳ್ಳುತ್ತಾ ಹೋಗುತ್ತದೆ.

ಹಾಗೆಯೇ ಮುಂದುವರಿದು ಕರಾವಳಿಯ ಉಸುಕು ನೆಲ, ಗೇರುತೋಟಗಳ ಕಂಪು, ಶಾಲಾಕಾಲೇಜುಗಳ ಮೂಲಕ ಆಧುನಿಕತೆಗೆ ತೆರೆದುಕೊಂಡ ಬದುಕಿನ ಚಿತ್ರವನ್ನೂ ನೀಡುತ್ತದೆ. ತುಸು ಕಪ್ಪಗಿದ್ದ ಕಾರಣಕ್ಕೆ ತನ್ನ ಬೊಪ್ಪ (ಅಪ್ಪ)ನಿಂದ ಮಶೀಪೋರಾ ಎಂದು ಕರೆಸಿಕೊಳ್ಳುತ್ತಿದ್ದ ಕುತೂಹಲವೇ ಮೂರ್ತಿವೆತ್ತಂತಿದ್ದ ಬಾಲಕನ ಪ್ರಜ್ಞೆಯಲ್ಲಿ ಬೆಳೆಯುವ ಈ ಕಥನ ಅವನು ಬೆಳೆಯುತ್ತ ಹೋದಂತೆ ತನ್ನ ಪಾತ್ರವನ್ನು ವಿಸ್ತರಿಸಿಕೊಳ್ಳುತ್ತ ಹೋಗುತ್ತದೆ. ಆ ಭಾಗದ ಚರಿತ್ರೆ, ಸಂಸ್ಕೃತಿಗಳ ಕಥನವಾಗಿಯೂ ಮುಖ್ಯವಾಗುತ್ತದೆ. ಅಜ್ಞಾತನೊಬ್ಬನ ಆತ್ಮಚರಿತ್ರೆಯಲ್ಲಿ ಆ ಕಾಲದ ನಿಟ್ಟುಸಿರು, ಆ ನೆಲದ ಗಂಧಗಾಳಿ ಹಾಗೂ ಅಲ್ಲಿ ಬದುಕಿ ಬಾಳಿದವರ ದರ್ಶನಗಳು ಇಣುಕಿ ಹಾಕಿರುತ್ತವೆ. ಅದು ನಮ್ಮ ಭಾವದ್ರವ್ಯದ ಭಾಗವಾಗಿ ತುಂಬಿಕೊಳ್ಳುತ್ತಾ ಹೋಗುತ್ತದೆ.

ಈ ಆತ್ಮಚರಿತ್ರೆಯನ್ನು ಸೂಕ್ಷ್ಮವಾಗಿ ನೋಡಿದರೆ ಕಾದಂಬರಿಯ ಹಾಗೆ ವಿಸ್ತರಿಸಿಕೊಂಡಿರುವುದು ಕಾಣಿಸುತ್ತದೆ. ಇಲ್ಲಿ ಬರುವ ಅನೇಕ ಪಾತ್ರಗಳು ತಮ್ಮೊಳಗಿನ ಗುಟ್ಟುಗಳನ್ನು, ಸಾಧ್ಯತೆಗಳನ್ನು ಪೂರ್ತಿ ಬಿಟ್ಟುಕೊಡುವುದಿಲ್ಲ. ಆ ಕಾರಣದಿಂದಲೇ ಅವರು ಬದುಕಿನ ಅನೂಹ್ಯತೆಯನ್ನೂ ಗಹನತೆಯನ್ನೂ ನಮಗೆ ಅರಿವಾಗುವಂತೆ ಮಾಡುತ್ತಾರೆ. ಲೇಖಕರು ಬೊಪ್ಪನೆಂದು ಕರೆಯುತ್ತಿದ್ದ ಹಬ್ಬು ಶಾನುಭೋಗರಿಂದಲೇ ಇದನ್ನು ನೋಡಬಹುದು.

ಅಂಕೋಲಾ ತಾಲೂಕಿನ ಅವರ್ಸಾದಿಂದ ಬಂದ ಅವರು ಯಲ್ಲಾಪುರ ತಾಲೂಕಿನ ಮಂಚಿಕೆರೆಯೆಂಬ ಅತ್ತ ಹಳ್ಳಿಯೂ ಅಲ್ಲದ ಇತ್ತ ಪಟ್ಟಣವೂ ಅಲ್ಲದ ಊರಿನ ಭಾಗವಾಗಿ ಹೋಗುತ್ತಾರೆ. ಅಲ್ಲೇ ಬೂದಿಯಾಗುತ್ತಾರೆ. ಅವರು ಗಾಂಧಿವಾದಿ, ಅಪ್ಪಟ ಪ್ರಾಮಾಣಿಕರು. ಎಲ್ಲ ಶಾನುಭೋಗರುಗಳಂತೆ ನಿವೃತ್ತಿಯಾಗುವಷ್ಟರಲ್ಲಿ ತುಂಡು ಜಮೀನನ್ನು ಮಾಡಿಕೊಳ್ಳುವ ಲೌಕಿಕ ಜಾಣ್ಮೆಯಿಲ್ಲದವರು. ಲೋಕಕ್ಕೆ ಇದು ಅವರ ಘನತೆಯಾಗಿ ಕಂಡದ್ದಕ್ಕಿಂತ ಅವ್ಯವಹಾರಿಕ ಗುಣವಾಗಿ ಕಂಡದ್ದೇ ಹೆಚ್ಚು.

ಗಾಂಧಿಯೆಂಬುವವ ಬಂದು ತಾವು ಕಟ್ಟಿಕೊಂಡು ಬಂದಿದ್ದ ಜಾತಿ ವ್ಯವಸ್ಥೆಯನ್ನೇ ಅಲುಗಾಡಿಸುವುದು ಸಹ್ಯವಾಗದ ಜನರ ಮಧ್ಯೆ ಇವರ ಜಾತ್ಯಾತೀತತೆ ಒಂದು ಸವಾಲು. ಇವರು ವಾಸಿಸುವ ಚಾಳಿನಂತಹ ಮನೆಯ ಅಕ್ಕಪಕ್ಕ ಇಬ್ರಾಹಿಂ ಸಾಯ್ಬರ ಅಂಗಡಿ, ದಾಮೋದರ ಶೆಟ್ಟರ ಅಂಗಡಿಗಳು. ಸದಾ ಸಾಮಾನು ಉದ್ರಿ ತರುವ, ಮನೆ ಬಾಡಿಗೆ ಕಟ್ಟಲಾಗದ ನಿತ್ಯ ಬಡತನ. ಸ್ವಂತ ಸೂರಿನ ಕನಸು ಕನಸಾಗೇ ಉಳಿದು, ಸಾಕಿದ ದನಕರುಗಳನ್ನೂ ಮಾರಿ ಅಸಹಾಯಕತೆಯನ್ನೇ ಹೊದ್ದುಕೊಂಡ ಈ ನಿವೃತ್ತ ಶಾನುಭೋಗರ ಐವರು ಮಕ್ಕಳಲ್ಲಿ ಒಬ್ಬರು ಈ ಲೇಖಕರು.

ಬೊಪ್ಪನೆಂದರೆ ಭಯಮಿಶ್ರಿತ ಗೌರವ. ಎಲ್ಲರಂತಲ್ಲದ ಅವನೆಂದರೆ ಒಗಟು. ಒಂದು ದಿನ ಸುಮ್ಮನೇ ಮೂರು ಕಿಲೋಮೀಟರ್ ದೂರದ ಕೆಳಗಿನ ಮಂಚಿಕೇರಿಗೆ ಕರೆದೊಯ್ದ ಬೊಪ್ಪ ಅಪರಿಚಿತ ಜಮೀನುದಾರರೊಬ್ಬರ ಮನೆಯಲ್ಲಿ ಈ ಮಗನನ್ನು ಬಿಟ್ಟು ಬಂದುಬಿಡುತ್ತಾನೆ. ಊರಿನ ಪಟೇಲರೂ ಪ್ರತಿಷ್ಠಿತರೂ ಆದ ಅವರ ಮನೆಯಲ್ಲಿ ಮಗ ತಿಂದುಂಡು ಚೆನ್ನಾಗಿ ಕಲಿಯಲಿ ಎಂಬುದು ಅವನ ದೂರದೃಷ್ಟಿ. ತಾಯಿಯನ್ನಗಲಿದ ಬೆಕ್ಕಿನ ಮರಿಯಂತಾಗಿ ಹೋದ ಬಾಲಕ ಅನಾಥ ಪ್ರಜ್ಞೆಯನ್ನು ಮೊಟ್ಟಮೊದಲು ಅನುಭವಿಸುತ್ತಾನೆ. ಮುಂದೆಲ್ಲ ಈ ತಬ್ಬಲಿತನ ಬೇರೆಬೇರೆ ರೂಪಗಳಲ್ಲಿ ಕಾಡುತ್ತಲೇ ಹೋಗುತ್ತದೆ.

ಈ ಕಥನದ ಆಕರ್ಷಕಣೆ ಇರುವುದೇ ಅದರ ಭಾವಸಾಂದ್ರತೆಯಲ್ಲಿ ಹಾಗೂ ಬಂದ ಬದುಕನ್ನು ನಿಸ್ಪ್ರಹವಾಗಿ ಸ್ವೀಕರಿಸುವ ಜೀವಪರತೆಯಲ್ಲಿ. ಲೇಖಕರು ಎಲ್ಲಿಯೂ ಯಾರನ್ನೂ ದೂರುವುದಿಲ್ಲ. ವ್ಯಗ್ರರಾಗುವುದಿಲ್ಲ, ಪೂರ್ವಗ್ರಹಗಳನ್ನು ಬೆಳೆಸಿಕೊಳ್ಳುವುದಿಲ್ಲ. ಇರುವನ್ನು ಇರುವಂತೆಯೇ ಒಪ್ಪಿಕೊಂಡು ಬದುಕಿನ ಚೆಲುವನ್ನೂ, ಘನತೆಯನ್ನೂ ಅನ್ವೇಷಿಸುವ ಗುಣದಿಂದಾಗಿ ಈ ಬರಹಕ್ಕೂ ಘನತೆಯೊದಗಿದೆ.

ಪಟೇಲರ ಮನೆಯ ಭವ್ಯತೆ, ಉದಾರತೆಗಳು ಬಾಲಕನನ್ನು ಪೊರೆಯುತ್ತವೆ. ಆ ಕಾಲದ ಹವ್ಯಕರ ಬದುಕಲ್ಲಿ ಇದು ಸಹಜವಾಗಿತ್ತು. ಶಾಲೆಗೆ ಹೋಗುವ ಮಕ್ಕಳನ್ನು ಮನೆಯಲ್ಲಿರಿಸಿಕೊಂಡು ತಾರತಮ್ಯವಿಲ್ಲದೇ ಪೊರೆಯುವ ಮಮತೆಯ ಜೀವನದೃಷ್ಟಿಯದು. ಅಲ್ಲಿ ತನ್ನದೇ ವಾರಿಗೆಯ ಪದ್ಮನಾಭ ಜೀವದ ಗೆಳೆಯನಾಗುತ್ತಾನೆ. ಅವನ ಅಪ್ಪಯ್ಯ ಆಯಿ ಇವನಿಗೂ ತಂದೆ ತಾಯಿಗಳಾಗುತ್ತಾರೆ. ತುಂಬು ಕುಟುಂಬದ ಅಲ್ಲಿನ ಬದುಕು, ಕೊಟ್ಟಿಗೆಯಲ್ಲಿನ ದನಕರುಗಳ ಸಾಂಗತ್ಯ, ಕೃಷಿ ಚಟುವಟಿಕೆಗಳ ವೈವಿಧ್ಯ, ಹಬ್ಬಹರಿದಿನಗಳ ಸಂಭ್ರಮಗಳು ಬಾಲಕನಿಗೆ ತಬ್ಬಲಿತನವನ್ನು ಮರೆಸುತ್ತ ಹೋಗುತ್ತವೆ.

ಇಲ್ಲಿ ಬರುವ ಪ್ರತಿ ವ್ಯಕ್ತಿಗಳಲ್ಲೂ ಪ್ರತ್ಯೇಕ ಜಗತ್ತನ್ನು ಕಾಣಿಸುತ್ತ ಹೋಗುವುದು ಈ ಬರಹದ ಶಕ್ತಿ. ಆ ಮನೆಯ ಇಬ್ಬರು ವಿಶಿಷ್ಟ ಜೀವಗಳು ನಮ್ಮನ್ನು ಬಹುಕಾಲ ಕಾಡುತ್ತಾರೆ. ಬಾಲ ವಿಧವೆಯಾಗಿ ಆ ಮನೆಯ ಚಾಲಕಶಕ್ತಿಯಾಗಿ ಬೆಳೆದ ಅತ್ತೆ ಎಂಬ ಹೆಣ್ಣು ಜೀವ ಹಾಗೂ ಮದುವೆಯಾಗದೇ ಉಳಿದು ತಾಯ್ತನವನ್ನೇ ಉಸಿರಾಡುವ ಹೆರಪ್ಪನೆಂಬ ಗಂಡು ಜೀವ ನಮ್ಮೆಲ್ಲ ಚಿಂತನೆಯ ಚೌಕಟ್ಟುಗಳಿಗೆ ಅತೀತರು. ಬದುಕಿನ ಎಲ್ಲ ಸಂಗತಿಗಳ ಕುರಿತು ಅತೀವ ಕುತೂಹಲಿಯಾದ ಬಾಲಕನ ಪ್ರಶ್ನೆಗಳಿಗೆ ಉತ್ತರ ನೀಡುತ್ತ ಅವನ ಭಾವಕೋಶವನ್ನು ಅವರು ಸದ್ದಿಲ್ಲದೇ ಅರಳಿಸುತ್ತಾರೆ. ವಿಧವಾ ವಿವಾಹದ ಚಳುವಳಿಯ ಅಲೆ ಹವ್ಯಕರ ಈ ಪುಟ್ಟ ಸಮುದಾಯವನ್ನು ಸೋಕಿದ್ದರೂ ಪಟೇಲರ ತಂಗಿಯಾದ ಈಕೆ ತನಗೆ ಸಂಸಾರದ ಗೊಡವೆ ಬೇಡವೆಂದು ನಿರಾಕರಿಸಿದವಳು. ಅಣ್ಣನ ಮಕ್ಕಳನ್ನೇ ತನ್ನ ಮಡಿಲಿಗೆಳೆದುಕೊಂಡವಳು.

ಜನಪದ ಹಾಡುಗಳು ಹಾಗೂ ಕತೆಗಳ ಕಣಜ ಆಕೆ. ಅಡಿಗೆಯ ಹದದಂತೆ ಬದುಕಿನ ಹದವನ್ನೂ ಬಲ್ಲವಳು ಅವಳು. ಹಾಗೆಯೇ ಹೆರಪ್ಪ. ಕೊಟ್ಟಿಗೆಯ ಕೆಲಸಗಳಲ್ಲಿ ಅವನ ತಾದಾತ್ಮ್ಯ ಯಾವ ಧ್ಯಾನಕ್ಕೂ ಕಡಿಮೆಯದಲ್ಲ. ಬಾಣಂತಿ ಹಸುವಿನ ಕಸ ಚೆಲ್ಲುವುದರಿಂದ ಹಿಡಿದು ನವಜಾತ ಶಿಶುವಿನ ಕಾಲಿನ ಗೊರಸು ಕತ್ತರಿಸಿ ನಡೆಯಲು ಅನುವು ಮಾಡಿಕೊಡುವವರೆಗೆ ಆತ ಅಪ್ಪಟ ಅಮ್ಮ. ಸದಾ ನೆಲದ ನಂಟಿನ ಅವನಿಗೆ “ಬ್ರಾಹ್ಮಣರು ನೆಲ ಊಳಬಾರದೆಂಬ” ಸಂಪ್ರದಾಯಗಳೆಲ್ಲ ಅಮಾನ್ಯ. “ಮಠದ ಗುರುಗಳು ಕೇಳಿದ್ರೆ ನಾಹೇಳ್ತೆ ಅವ್ರಿಗೆ” ಎಂಬುದು ಅವನ ಧೃಢ ನಿಲುವು. ಗೆದ್ದಲು ಹುಳುವಿನಂತೆ ಸದಾ ಕೆಲಸದಲ್ಲಿ ನಿರತನಾಗಿರುತ್ತಿದ್ದ ಹೆರಪ್ಪ ಬಾಲಕನ ಆತ್ಮ ಸಂಗಾತಕ್ಕೊದಗಿದ ಗುರುವಿನಂಥವನು.

ಈ ಆತ್ಮಕಥನಕ್ಕೆ ಇರುವ ಸಂಸ್ಕೃತಿ ಕಥನದ ಆಯಾಮವು ಬಹುಮುಖ್ಯವಾದುದು. ಹವ್ಯಕ ಬ್ರಾಹ್ಮಣ ಸಮುದಾಯದ ವಿಶೇಷ ಅಡಿಗೆಗಳಾದ ಹಲಸಿನ ಹಣ್ಣಿನ ಕಡುಬು, ಅತ್ರಾಸ, ಉಂಡ್ಲೆಕಾಳು, ಶಿರಾ, ತೆಳ್ಳೇವು, ತೊಡೆದೇವು, ಹಲಸಿನ ಬಾಳಕ, ತಂಬಳಿ, ಹಶಿ, ಅಪ್ಪೆಹುಳಿ ಮೊದಲಾದವುಗಳ ಘಮವನ್ನು ಈ ಬರಹ ಆಪ್ತವಾಗಿ ಸೆರೆಹಿಡಿದಿದೆ. ಚೌತಿ, ಮಾರನವಮಿ, ದೀಪಾವಳಿ, ಭೂಮಿಹುಣ್ಣಿವೆ, ನಾಗರಪಂಚಮಿಗಳನ್ನುಆಚರಿಸುವ ವಿಶಿಷ್ಟ ವಿವರಗಳು, ಮದುವೆ ಮುಂಜಿಗಳಂಥಹ ಸಮಾರಂಭಗಳಿಗಿರುತ್ತಿದ್ದ ಸಮುದಾಯಿಕ ಸ್ವರೂಪ, ಸಂದರ್ಭಾನುಸಾರವಾಗಿ ಕಳೆಗಟ್ಟುತ್ತಿದ್ದ ಹಾಡುಗಳ ಲೋಕ ಎಲ್ಲವೂ ಅಪರೂಪದ ದಾಖಲೆಗಳಾಗಿವೆ.

ಅಂದು ತಮ್ಮ ಶಾಲಾ ಸಹಪಾಠಿಯಾಗಿದ್ದ ಹಾಸಣಗಿ ಗಣಪತಿ ಭಟ್ಟರ ಮುಂಜಿಗೆ ಬಂದ ವಿವರ ಒಂದು ಅಧ್ಯಾಯದಲ್ಲಿ ದೀರ್ಘವಾಗಿ ಪ್ರಸ್ತಾಪಗೊಂಡಿದೆ. ಆ ಭಾಗದಲ್ಲಿ ಹವ್ಯಕರ ಕೇರಿ ಮನೆಗಳ ವಿನ್ಯಾಸ, ಆಚರಣೆಗಳ ಅನನ್ಯತೆ, ಊಟದ ಸೊಗಸು ಎಲ್ಲವನ್ನೂ ಲೇಖಕರು ಆಕರ್ಷಕವಾಗಿ ಚಿತ್ರಿಸಿದ್ದಾರೆ. ಹವ್ಯಕರು ಎಂದೂ ಕರ್ಮಠರಾಗದಂತೆ ಮಾಡಿರುವುದು ಬಹುಶಃ ಅವರ ನೆಲದ ನಂಟು. ಕೃಷಿಯೆ ಅವರ ಜೀವನಾಧಾರ. ಈ ಕೃಷಿ ಚಟುವಟಿಕೆಗಳಿಗಾಗಿ ಎಲ್ಲ ಜಾತಿ ವರ್ಗಗಳ ನಂಟು ಅವರಿಗೆ. ಪ್ರಗತಿಪರ ವಿಚಾರಗಳಿಗೆ ಬೇಗ ತೆರೆದುಕೊಳ್ಳುವ ಮುಕ್ತಮನಸು ಅವರದು.

“ಅಡಕೆ ನೂರಾಗಲಿ ಮೆಣಸು ತೂಕೇರಲಿ, ಹರುವಾಣಕೆ ಲಕ್ಸುಮಿ ಒಲಿಯಲಿ” ಎಂದು ಭೂಮಿಹುಣ್ಣಿಮೆಯಲಿ ಹಾಡುವ, “ಹೋಪಾಗ ಹೆಡಿಗೆಯಲಿ ಬಪ್ಪಾಗ ಬಂಡಿಯಲಿ ಧಾನ್ಯವೆ ನಿನ್ನ ಹೆಸರೇನು” ಎಂದು ಭತ್ತದ ಕದುರನ್ನು ಎದುರುಗೊಳ್ಳುವಾಗ ಹಾಡುವ ಹೆಂಗಳೆಯರು ಸಮೃದ್ಧಿಯನ್ನು ಹಾರೈಸುವರು. ಬದುಕಿನ ಸಂಭ್ರಮಗಳಿಗೆ ಮುಖಮಾಡುವ ಬಾಲಕನ ಈ ಮೂರ್ನಾಲ್ಕು ವರ್ಷದ ಬದುಕು ಕೃತಿಗೆ ದಟ್ಟ ಸಾಂಸ್ಕೃತಿಕ ಚಹರೆಯೊಂದನ್ನು ನೀಡಿದೆ.

ಈ ಕೃತಿಯ ಮತ್ತೊಂದು ವಿಶೇಷ ಒಳಗೊಳ್ಳುವಿಕೆ. ಹವ್ಯಕರ ಬದುಕು ಸುತ್ತಲಿನ, ಸಿದ್ದಿಗಳು ಹಾಲಕ್ಕಿಗಳು, ಸೇರೆಗಾರರು, ಮುಸ್ಲಿಮರು ಎಲ್ಲರೊಂದಿಗೆ ಬೆಸೆದುಕೊಂಡದ್ದು. ಮಂಚಿಕೇರಿ ಭಾಗದ ವಿಶೇಷತೆ ದಳಲ್ಲೊಂದು ಅಲ್ಲಿನ ಕಾಡುಗಳಲ್ಲಿ ವಾಸಿಸುವ ದಪ್ಪತುಟಿ, ಗುಂಗುರು ಕೂದಲು, ಚಪ್ಪಟೆ ಮೂಗಿನ ಸಿದ್ದಿಗಳು. ಪೋರ್ಚುಗೀಸರು ಅವರನ್ನು ಗುಲಾಮರನ್ನಾಗಿಸಿ ಗೋವಾಕ್ಕೆ ಕರೆತಂದಿದ್ದರು. ಕಳಲೆ, ವಾಟೆಹುಳಿ, ಜೇನು, ಅಪ್ಪೆಮಿಡಿ, ಬಿದಿರುಗಳ ಇಂತಹ ವಸ್ತುಗಳೊಂದಿಗೆ ಬರುವ ಇವರು ಹಣದೊಂದಿಗೆ ಹಳೆ ಅಂಗಿ ಧೋತ್ರ ಕಂಬಳಿಗಳನ್ನು ಕಾಡಿಬೇಡಿ ಪಡೆವವರು.

ಹವ್ಯಕರೊಂದಿಗೆ ಮಾನವೀಯ ನೆಲೆಯಲ್ಲಿ ಬೆಸೆದುಕೊಂಡ ಇವರು ಹುಸೇನಿ, ಜಾರ್ಜ, ರಾಮಾಸಿದ್ದಿ ಎಂಬೆಲ್ಲ ಹೆಸರು ಹೊತ್ತವರು. ಧರ್ಮಗಳ ಹಂಗಿಲ್ಲದೇ ನಂಬಿಕೆ, ಆಚರಣೆಗಳ ಆದಿಮ ಜಗತ್ತಿನಲ್ಲಿ ಒಂದೇ ಆದವರು. ಬಿದಿರಗೋಡೆಗಳ ಮನೆಕಟ್ಟಿಕೊಂಡು ಮರದ ಬೊಂಬೆಗಳನ್ನು ಹಿರಿಯರ ಆತ್ಮಗಳೆಂದು ಪೂಜಿಸುವವರು. ಮುಖಕ್ಕೆ ಕೆಂಪು ಬಿಳಿ ಪಟ್ಟಿ ಬಳಿದು ಸೊಂಟಕ್ಕೆ ಎಲೆಗಳನ್ನು ಸುತ್ತಿ, ಚರ್ಮವಾದ್ಯ ನುಡಿಸುತ್ತಾ ಕುಣಿಯುವವರು. ಸುಗ್ಗಿ ಕಾಲದಲ್ಲಿ, ಹೋಳಿಹುಣ್ಣಿಮೆ ಸಮಯದಲ್ಲಿ ಬರುವ ಹಾಲಕ್ಕಿಗಳದು ಇನ್ನೊಂದು ಹೊಸ ಜಗತ್ತು. ತಲೆಗೆ ಬಣ್ಣ ಬೇಗಡೆಗಳ ಹೂವಿನ ತುರಾಯಿ ಕಟ್ಟಿಕೊಂಡು ‘ಅಂಬೋ ಹೋ ಚೋ..’ ಎಂದು ಗುಮಟೆಪಾಂಗು ಬಾರಿಸುತ್ತ ಸುಗ್ಗಿ ಕುಣಿತದ ಸೊಗಸಿಗೆ ಕಾರಣರಾಗುತ್ತಿದ್ದರು.

ಸೊಗಸಿಗೆ ಸೋಲುವ ಬಾಲಕ ಕುಣಿಯಬೇಕೆಂದರೆ ಜಾತಿಯ ತಡೆ! “ಜಾತಿಅಂದರೇನು?” ಎಂಬ ಪ್ರಶ್ನೆ ಈ ಅಖಂಡ ಸಂಭ್ರಮದ ನಡುವೆ ನುಸುಳಿ ನೋಯಿಸಿದ್ದೂ ಇದೆ. ಆದರೆ ಮುಗ್ಧ ಮನಸ್ಸು ಈ ಬೇಲಿಗಳಾಚೆ ಸದಾ ಚಾಚಿ ಬೆಳೆದ ಕಥನದವಿದು. ನಿಲ್ಲದ ಬಾಲಕ ಮೀನು ಕತ್ತರಿಸುತ್ತ ಕುಳಿತ ತೊಳಚಿಯ ಬಳಿ ಹೋಗಿ ಈ ಹಾಡು ಕುಣಿತ ಅಲಂಕಾರಗಳ ಮಾಹಿತಿ ಪಡೆದೇ ಸಿದ್ಧ. ಅವಳು ಹಾಡಿದ ಅರ್ಜುನ ದ್ರೌಪದಿಯರು ಪಗಡೆಯಾಡಿದ ಕತೆಯಂತೂ ತುಂಬ ಭಿನ್ನ ಹಾಗೂ ವಿಶೇಷವಾದ ಸ್ಥಳೀಯ ಪಠ್ಯ. ಇಂಥ ಸಂಗ್ರಹಗಳು ಕೃತಿಯನ್ನು ಅಧ್ಯಯನ ಶೀಲಗೊಳಿಸಿವೆ.

ಸರ್ಕಾರಿ ಶಾಲೆಗಳ ಮೂಲಕ ಮೂಡಿದ ಡೆಮಾಕ್ರೆಟಿಕ್ ಮನೋಭಾವ ಈ ಕಥನಕ್ಕೊಂದು ಸಾಮಾಜಿಕ ಪರಿವರ್ತನ ಶೀಲತೆಯ ಆಯಾಮ ನೀಡಿದೆ. ಈ ವಿಕಾಸ ನಿಧಾನವಾಗಿ ಸಂಭವಿಸುವಂತಹುದು. ಧರ್ಮ ಹಾಗೂ ಜಾತ್ಯಾತೀತ ಮನೋಭಾವವನ್ನು ರೂಪಿಸುವಲ್ಲಿ ಪ್ರಿಯಾಗಿ ಬಾಯಿಯವರ ಪಾತ್ರ ದೊಡ್ಡದು. ಅವರ ತಾಯ್ತನದ ಗುಣ ಇಡೀ ಸಮಾಜವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಷ್ಟು ವ್ಯಾಪಕವಾದುದು. ಎಲ್ಲ ಜಾತಿಯವರನ್ನು ಬೆರೆಸಿ ಕುಳಿತುಕೊಳ್ಳುವಂತೆ ಮಾಡುತ್ತಿದ್ದ ಬಾಯಿಯವರು ಅಂದು ಶಾಲೆಗೆ ಬರುತ್ತಿದ್ದ ಸಮಗಾರರ ಪ್ರಭಾಕರ ಹಾಗೂ ಅಸಾದಿ ಹುಡುಗನ್ನು ನಾಯಕರನ್ನಾಗಿ ಮಾಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಬೆಳಗುವಂತೆ ಮಾಡುತ್ತಿದ್ದರು.

ಅಸ್ಪೃಶ್ಯ ನಿವಾರಣೆಗೆ ಗಾಂಧೀಜಿಕೊಟ್ಟ ಕರೆಯನ್ನು ಅವರು ಕಾರ್ಯರೂಪಕ್ಕೆ ತಂದಿದ್ದರು. ಸರಸ್ವತಿ ಪೂಜೆಗೆ ಮುಸ್ಲಿಂ ವಿದ್ಯಾರ್ಥಿಯನ್ನೂ ಒಳಗೊಳ್ಳುತ್ತ ವಿದ್ಯಾಧಿದೇವತೆ ಎಲ್ಲರ ದೇವರೂ ಹೌದೆಂದು ಮನವರಿಕೆ ಮಾಡಿಕೊಡುತ್ತಿದ್ದರು. ಆದರೆ ಮನೆಗೆ ಹೋದಕೂಡಲೇ ಬಟ್ಟೆ ಬಿಚ್ಚಿ ಸ್ನಾನ ಮಾಡಿಯೇ ಒಳಹೋಗಬೇಕಿತ್ತು. ಮನೆಯೊಳಗೆ ಅನ್ಯ ಜಾತಿಯವರಿಗೆ ಪ್ರವೇಶವಿರಲಿಲ್ಲ. ಭಿನ್ನವಾದ ಈ ಎರಡೂ ಜಗತ್ತುಗಳು ಢಿಕ್ಕಿ ಹೊಡೆದುಕೊಳ್ಳುತ್ತ ಬಾಲಕನನ್ನು ಕಸಿವಿಸಿಗೊಳಿಸುತ್ತಿದ್ದವು. ಆತ ತನ್ನದೇ ರೀತಿಯಲ್ಲಿ ಅದಕ್ಕೆ ಪ್ರತಿರೋಧವನ್ನೂ ಒಡ್ಡುತ್ತಿದ್ದ ಬಗ್ಗೆ ಬಾಲಕನಿಗೆ ಆತನ ಸಂಪ್ರದಾಯಸ್ಥ ತಾಯಿ ಕೊನೆಗೂ ಬದಲಾಗುತ್ತಾಳೆ. ಈ ಬದಲಾವಣೆಯ ಹಿಂದೆ ಗಾಂಧಿವಾದಿಯಾದ ಬೊಪ್ಪನ ಕೈವಾಡವಿರುತ್ತದೆ.

ಇನ್ನು ಮಂಚಿಕೇರಿಯೆಂಬ ಊರೇ ಮಿಶ್ರಸಂಸ್ಕೃತಿಯದು. ಎಲ್ಲ ಜಾತಿಯ ಹಿಂದೂಳಂತೆ ಅಲ್ಲಿ ಕ್ರಿಶ್ಚಿಯನ್ ಹಾಗೂ ಮುಸ್ಲಿಂರೂ ಇದ್ದಾರೆ. ಭಯ, ಸಂಶಯಗಳ ನೆರಳಿಂದ ಮುಕ್ತವಾಗಿದ್ದ ಕಾಲವದು. ಕಾರ್ತಿಕ ಮಾಸದಲ್ಲಿ ಭಜನೆ ಮೇಳದ ಧ್ವನಿ ಭಕ್ತಿಯ ಆವೇಶ ತುಂಬುತ್ತಿತ್ತು. ತಾಳ, ಮದ್ದಳೆ, ಹಾರ್ಮೊನಿಯಂಗಳೂ ಕಳೆಕಟ್ಟುತ್ತಿದ್ದವು. ವಿಠ್ಠಲ ವಿಠ್ಠಲ ಎಂದು ಮೈದುಂಬಿದಂತೆ ಕುಣಿಯುತ್ತಿದ್ದ ಬೊಪ್ಪ ಮಗನಿಗೆ ಅಚ್ಚರಿ ಮೂಡಿಸುತ್ತಿದ್ದ. 

ರಸ್ತೆಗಳು ರಂಗೋಲಿಗಳಿಂದ ಸಿಂಗಾರಗೊಳ್ಳುತ್ತಿದ್ದವು. ಅದೇ ಬೀದಿಯಲ್ಲಿ ಮೊಹರಂ ಕುಣಿತವೂ ಮೆರವಣಿಗೆಯೂ ಆಗುತ್ತಿತ್ತು. ಎಲ್ಲ ಸಮುದಾಯಗಳು ಅಲ್ಲಿ ಬೆರೆಯುತ್ತಿದ್ದವು. ಮಸೀದಿಯಿಂದ ಸಾಲಂಕೃತ ಪಲ್ಲಕ್ಕಿಗಳು ಹೊರಬರುತ್ತಿದ್ದವು. ಪೀರ್ ಕಟ್ಟುವುದು, ಅದನ್ನು ಕಟ್ಟಿಕೊಂಡವರು ಮೈದುಂಬಿ ಹೂಂಕರಿಸುವುದು, ಹಸನ ಹುಸೇನಿಯರಿಗೆ ದುಃಖದಿಂದ ಅಲ್ಬಿದಾ ಹೇಳುವುದು ಇವೆಲ್ಲ ಸುಂದರ ಅನುಭವಗಳಾಗಿ ಭಾವಕೋಶ ಸೇರಿದ್ದವು. ಬಿರುಕಿಲ್ಲದ ನೋಟದಲ್ಲಿ ಗ್ರಹಿಸುವುದು ಬಾಲ್ಯಕ್ಕೆ ಮಾತ್ರ ಸಾಧ್ಯವೇನೋ ಎಂಬ ಭಾವವನ್ನು ಈ ಕೃತಿ ಉದ್ದಕ್ಕೂ ಮೂಡಿಸುತ್ತ ಹೋಗುತ್ತದೆ.

ಹುಡುಗನೊಬ್ಬನ ಬಾಲ್ಯದ ಬೆರಗು ಕಂಗಳಲ್ಲಿ ಬದುಕು ತನ್ನ ಮೂಲರೂಪದಲ್ಲಿ ಕಾಣಿಸುತ್ತ ಹೋಗುತ್ತದೆ. ಮಡಿ ಮೈಲಿಗೆ, ನೈತಿಕ ಅನೈತಿಕ ಎಂಬ ತೀರ್ಮಾನಗಳಿಲ್ಲದೇ ಮನುಷ್ಯ ಪ್ರಪಂಚವನ್ನು ಅರ್ಥಮಾಡಿಕೊಳ್ಳುವ ಶುದ್ದ ಕುತೂಹಲವಿದು. ಗೆಳೆಯ ಪದ್ಮನಾಭನ ಮನೆಯವರನ್ನು ತನ್ನವರೆಂದೇ ಭಾವಿಸುವ ಬಾಲಕ ಮನೆಯ ಸುತ್ತಲಿನ ಪರಿಸರವನ್ನೂ ತನ್ನದಾಗಿಸಿಕೊಳ್ಳುತ್ತಾನೆ. ತೋಟ, ಗದ್ದೆ, ಆಲೆಮನೆ, ನೆಂಟರಮನೆ.. ಹೀಗೆ ಎಲ್ಲೆಡೆ ಅವನ ಕುತೂಹಲದ ಕಣ್ಣು ಬದುಕನ್ನು ಗ್ರಹಿಸುತ್ತ ವಿಕಾಸಗೊಳ್ಳುತ್ತದೆ. ಗಂಡು ಹೆಣ್ಣೆಂಬ ಭೇದವನ್ನರಿಯದೇ ಆಟಗಳಲ್ಲಿ ಮುಳುಗೇಳುವ ಹುಡುಗನಿಗೆ, ವಾರಿಗೆಯ ಪೋರಿ ವಿಶಾಲಿ ‘ಹೆಣ್ಣಾದ’ ಪ್ರಕ್ರಿಯೆ ಬೆರಗುಮೂಡಿಸುತ್ತದೆ. ಅವ ¼ ಕಾಲಿಂದ ರಕ್ತ ಸೋರುವುದನ್ನು ನೋಡಿ ಗಾಬರಿಯಾಗುವ ಬಾಲಕರು ಅದರ ಮೂಲವೆಲ್ಲಿ ಎಂದು ತಿಳಿಯದಾಗುತ್ತಾರೆ. ಇಂಬಳ ಕಚ್ಚಿರಬಹುದೇ? ಎಂದು ಹುಡುಕಾಡುತ್ತಾರೆ.

ಸ್ವತಃ ವಿಶಾಲಿಗೂ ಇದೇನೆಂಬ ಅರಿವಿಲ್ಲ. ಈ ಘಟನೆಯ ನಂತರ ಐದಾರು ದಿನ ಅವಳು ಆಟಕ್ಕೆ ಗೈರುಹಾಜರಾಗುತ್ತಾಳೆ. ಅವಳು ‘ದೊಡ್ಡವಳಾದಳು’  ಎಂದರೇನು ಎಂದು ಪ್ರಶ್ನೆ ಕಾಡುತ್ತಲೇ ಇರುತ್ತದೆ. ತಮ್ಮ ಜೊತೆಗೇ ಇದ್ದವಳು ಐದಾರುದಿನದಲ್ಲಿ ಏಕಾಏಕಿ ದೊಡ್ಡವಳಾದದ್ದು ಹೇಗೆಂಬುದು ಯಕ್ಷಪ್ರಶ್ನೆಯಂತಾಗುತ್ತದೆ. ಹೆಣ್ಣು ಗಂಡಿನ ಸಂಬಂಧಗಳ ವಿಚಿತ್ರ ಸಿಕ್ಕುಗಳು ಕೂಡ ಪ್ರಶ್ನೆಯಾಗುವ ಘಟನೆಗಳು ಕೃತಿಯಲ್ಲಿವೆ. ತೋಟದಲ್ಲಿ ಸೋಗೆ ಅಟ್ಟಲಿ ನೆಡೆಯಲ್ಲಿ ಸೇರೆಗಾರನೊಂದಿಗೆ ಕಾಣಿಸುವ ಸರೋಜಿನಿ ಈ ಬಗ್ಗೆ ಅಮ್ಮನಲ್ಲಿ ಹೇಳಬೇಡವೆಂದಿದ್ದು ಸ್ಮೃತಿಯಲ್ಲಿರುವಾಗಲೇ ಅವಳು ಸೇರೆಗಾರನೊಂದಿಗೆ ‘ಓಡಿಹೋದ’ ಘಟನೆ ನಡೆಯುತ್ತದೆ. ಕಾಣೆಯಾದ ಹೆಂಡತಿಯನ್ನು ಹುಡುಕುವ ಅವಳ ಗಂಡನ ಹತಾಶೆ ಹಾಗೂಗಂಡನ ಜೊತೆ ಇರಲಾರೆನೆಂಬ ಸರೋಜಿನಿಯ ನಿರ್ಧಾರಗಳು ವಿಷಮ ದಾಂಪತ್ಯದ ಒಳಸುಳಿಗಳನ್ನು ಬಿಚ್ಚುತ್ತ ಹೋಗುತ್ತವೆ.

ಮಕ್ಕಳಾಗಲಿಲ್ಲವೆಂಬುದನ್ನು ಬಿಟ್ಟರೆ ಅವಳಿಗೇನೂ ಕೊರತೆಯಿರಲಿಲ್ಲವೆಂಬುದು ಗಂಡನ ಅನಿಸಿಕೆಯಾದರೆ, ಲೈಂಗಿಕ ತೃಪ್ತಿಯಿಲ್ಲದ ದಾಂಪತ್ಯದ ಲಕ್ಷ್ಮಣರೇಖೆ ದಾಟುವುದು ಅವಳ ನಿರ್ಧಾರ. ಹವ್ಯಕ ಸಮಾಜದ ಮರ್ಯಾದೆಯ ಪ್ರಶ್ನೆಯಾದ ಈ ಘಟನೆಯನ್ನು ಮಠದ ಮುಂದೆ ಪಟೇಲರು ಕೊಂಡೊಯ್ಯುತ್ತಾರೆ. ಅವಳಿಗೆ ಬಹಿಷ್ಕಾರವೂ ಆಗುತ್ತದೆ. “ಕುಡಿದ ನೀರು ಕಟ್ಟೂಲಾಗ್ತಿಲ್ಲೆ, ಮಠಕ್ಕೆ ಹೋದ್ರೂ ಆಷ್ಟೇಯಾ” ಎಂದು ವಿವೇಕದ ಮಾತುಗಳನ್ನಾಡಿದ ವಿಧವೆ ಅತ್ತೆಯ ಮಾತನ್ನು ಮೆಲಕು ಹಾಕುವ ಬಾಲಕ ಈ ಓಡಿ ಹೋಗುವುದೆಂದರೇನು? ಎಂಬ ಪ್ರಶ್ನೆಯೊಂದಿಗೆ ಅವಳ ಮುಂದೆ ಹಾಜರಾಗುತ್ತಾನೆ.

“ಮಕ್ಕಳಿಗೆಂತಕ್ಕೆ ಬೆಕ್ಕಿನ ಪಳದ್ಯ?” ಎಂದು ಗದರಿದ ಆಕೆ ಕೊನೆಗೆ ನಿಧಾನವಾಗಿ ಹೆಣ್ಣುಗಂಡಿನ ಇಷ್ಟಾನಿಷ್ಟಗಳ ಲೋಕವನ್ನು ಸೂಚ್ಯವಾಗಿ ವಿವರಿಸುತ್ತಾಳೆ. ಆದರೂ ಸರೋಜಿನಿ ತನಗಿಷ್ಟವಾದವರ ಜೊತೆ ಹೋದರೆ ಪೋಲೀಸರಿಗೆ, ಮಠಕ್ಕೆ ಏನು ಕೆಲಸ? ಎಂಬ ಪ್ರಶ್ನೆ ಉಳಿದುಹೋಗುತ್ತದೆ. ಹೆಣ್ಣಿನ ದೇಹ ಮನಸ್ಸುಗಳ ಈ ಮೂಲಭೂತ ಪ್ರಶ್ನೆಯನ್ನು ಹಬ್ಬು ಅವರು ಈ ಘಟನೆಗಳ ಮೂಲಕ ಮುಂದಿರಿಸುತ್ತಾರೆ.

ಬಾಲ್ಯದ ಹುಡುಗಾಟ ಮುಗಿದಂತೆಲ್ಲ ಬದುಕು ಭಾರವಾಗುತ್ತ, ತಬ್ಬಲಿತನ ತಿವಿದು ಎಚ್ಚರಿಸುತ್ತ ನಡೆದ ನೋವಿನ ಎಳೆಗಳು ಈ ಕಥನದಲ್ಲಿ ಬಿಡಿಸಲಾಗದಂತೆ ಬೆಸೆದಿವೆ. ಬದುಕಿಗಂಟದ ಬಡತನ ನೆರಳಂತೆ ಹಿಂಬಾಲಿಸುತ್ತಲೇ ಹೋಯಿತು. ಅವಮಾನಗಳು ಎಡಬಿಡದೆ ಕಾಡುತ್ತ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿದವು. ಬದುಕು ಕುಲುಮೆಯಲ್ಲಿ ಆಕಾರಗೊಳ್ಳಬೇಕಾದರೆ ನೋವು ಅನಿವಾರ್ಯ. ಅಂಥ ಧಾರಣಶಕ್ತಿ ಉದಯ ಹಬ್ಬು ಅವರ ವ್ಯಕ್ತಿತ್ವ ಹಾಗೂ ಬರವಣಿಗೆ ಎರಡರಲ್ಲೂ ಕಾಣುತ್ತಾ ಹೋಗುತ್ತದೆ. ವಾತ್ಸಲ್ಯದ ಬೆಚ್ಚಗಿನ ಆವರಣಗಳು ಕಳಚುತ್ತಹೋದ ಕಳವಳದ ದನಿ ಇಲ್ಲೆಲ್ಲ ಅನುರಣಿಸಿದೆ.

ಹೆರಪ್ಪನ ಸಾವು, ಬೊಪ್ಪನ ಕಣ್ಮರೆ, ಬೊಪ್ಪನ ಸಾವು ಇವೆಲ್ಲ ವಾಸ್ತವದ ಬಿಸಿ ಮುಟ್ಟಿಸುತ್ತ ಹೋಗುತ್ತವೆ. ಗೂಡುಮುರಿದ ಹಕ್ಕಿಗಳಂತಾದ ಅಣ್ಣತಮ್ಮಂದಿರು ಅವರಿವರ ಮನೆಯಲ್ಲಿ ಕಾಲ ಹಾಕುವ ಸ್ಥಿತಿಯೂ ಎದುರಾಗುತ್ತದೆ. ಅನಿಶ್ಚಿತ ಭವಿಷ್ಯ ತೂಗುಯ್ಯಾಲೆಯಾಡುತ್ತದೆ. ಹಂಗಿನ ಕೂಳಿನಿಂದ ಪಾರಾಗಬೇಕೆಂಬ ಛಲ ನಿಚ್ಚಳವಾಗುತ್ತ ಹೋಗುತ್ತದೆ. ಬದುಕು ಅವರನ್ನು ಮಂಚಿಕೇರಿಯೆಂಬ ಅಬ್ಬೆಮಡಿಲ ತಂಪಿನಿಂದ ಘಟ್ಟದ ಕೆಳಗಿನ ಅಜ್ಜನ ಊರಿಗೆ ಕರೆದೊಯ್ಯುತ್ತದೆ. ಮಾವಂದಿರ ಸಹಕಾರದಲ್ಲಿ ಓದು ಮುಂದುವರೆದರೂ ತಮ್ಮ ಅತಂತ್ರ ಸ್ಥಿತಿಗಾಗಿ ಮನಸು ಮರುಗುತ್ತಲೇ ಇರುತ್ತದೆ. ಈ ಯಾತನೆಯ ಆಧ್ಯಾಯ ಸಾಧನೆಯೊಂದಿಗೆ ಕೊನೆಯಾಗುತ್ತದೆ. ಅವಮಾನವನ್ನೇ ಛಲವಾಗಿ ಪರಿವರ್ತಿಸಿಕೊಂಡ ಸಹೋದರರು ಓದು ಮುಗಿಸಿ ಗೌರವಾನ್ವಿತ ಹುದ್ದೆಗಳಲ್ಲಿ ನೆಲೆ ನಿಲ್ಲುತ್ತಾರೆ. ಒಬ್ಬರಿಗೊಬ್ಬರು ಒತ್ತಾಸೆಯಾಗುವ ಮೂಲಕ ಮತ್ತೆ ಭಗ್ನಗೊಂಡ ಬದುಕು ತಲೆಯೆತ್ತಿ ನಿಲ್ಲುತ್ತದೆ.

ಆತ್ಮ ನಿವೇದನೆಯಂಥ ಈ ಬರಹ ತನ್ನ ಪ್ರಾಮಾಣಿಕತೆ ಹಾಗೂ ಭರವಸೆಯ ನೋಟದಿಂದಾಗಿ ಇಷ್ಟವಾಗುತ್ತದೆ. ನೋವುಂಡ ಅನುಭವವನ್ನೂ ತಾಳ್ಮೆಯಿಂದ ಧರಿಸುವ ಈ ಮನೋಭೂಮಿಕೆಯಲ್ಲಿ ಕಹಿಯಿಲ್ಲ. ಪೂರ್ವಗ್ರಹಗಳಿಲ್ಲ. ತತ್ ಕ್ಷಣದ ತೀರ್ಮಾನಗಳಲ್ಲಿ ಈ ಬರಹ ವಿರಮಿಸುವುದಿಲ್ಲ. ಇಲ್ಲಿ ಯಾರೂ ಕೆಟ್ಟವರಲ್ಲ. ಸನ್ನಿವೇಶದ ಶಿಶುಗಳು ಅಷ್ಟೇ. ಮನುಷ್ಯನ ಪರಿವರ್ತನೆ ಹಾಗೂ ಆರ್ದೃತೆಗಳಲ್ಲಿ ಭರವಸೆಯಿರುವ ಉದಯ ಹಬ್ಬು ಅವರಲ್ಲಿ ತಾಯ್ತನದ ತುಯ್ತವೊಂದು ಕಾಣುವುದು ಸುಳ್ಳಲ್ಲ.

ಬದುಕಿನ ಸನ್ನಿವೇಶಗಳನ್ನು ಹಾಗೂ ಭಾವದ ಸುಳಿಗಳನ್ನು ಅಭೇದವಿನಿಸುವಂತೆ ಕಟ್ಟುವ ಸೂತ್ರವನ್ನು ಅವರು ಇನ್ನಷ್ಟು ಧ್ಯಾನಿಸಬೇಕಿತ್ತೇನೋ. ಚದುರಿದಂತೆ ಹರಡಿರುವ ದಟ್ಟ ವಿವರಗಳು ಈ ಸೂತ್ರದಾಚೆ ಜಿಗಿಯದಂಥ ಎಚ್ಚರ ಕೃತಿಯ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬಲ್ಲದು. ಮೊದಲೇ ಹೇಳಿದಂತೆ ಈ ಕೃತಿಯ ಸಾಂಸ್ಕೃತಿಕ ಲೋಕವು ತನ್ನ ಕಸುವಿನಿಂದಾಗಿ ನಮ್ಮನ್ನು ಹಿಡಿದಿಡುತ್ತದೆ. ಅಧ್ಯಯನದ ಆಕರವಾಗಿಯೂ ಸಲ್ಲುತ್ತದೆ. ಇಂದು ಸಿಡಿದು ಪ್ರತ್ಯೇಕಗೊಳ್ಳುತ್ತಿರುವ ನಮ್ಮ ಒಳಜಗತ್ತನ್ನು ಸಂಬಂಧಗಳ ಮೂಲಕ ಕಟ್ಟಲೆತ್ನಿಸುವ ಈ ಕಥನ ಬದುಕಿನ ಬಗೆಗೆ ನಿಸ್ಸಂಶಯವಾಗಿ ಆಶಾವಾದವನ್ನು ಮೂಡಿಸುತ್ತದೆ.

‍ಲೇಖಕರು Avadhi

December 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This