ಬದುಕಿನ ಪಾಸ್ ಪೋರ್ಟ್ ಕಳೆದು ಹೋದಾಗ….

ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋಛೇಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ಬೇಬಿಯಂತಹ ಲಕ್ಷಾಂತರ ಮುಗ್ಧ, ಅಸಹಾಯಕ ಹೆಣ್ಣುಗಳ ಮತ್ತು ಮಕ್ಕಳ ಬದುಕುಗಳು ಸರಕಾಗಿ ಬಿಡುತ್ತವೆ. ಜಾಗತೀಕರಣದಲ್ಲಿ ಬಂಡವಾಳ ಮತ್ತು ವಸ್ತುಗಳಿಗೆ ಪರವಾನಗಿ ಇದ್ದು, ಅವು ಸುಲಲಿತವಾಗಿ ಹರಿದಾಡಬಹುದಾಗಿದೆ. ಆದರೆ “ಸೇವೆ” ಅಂದರೆ ಮನುಷ್ಯರು ವಲಸೆ ಹೋಗಲು ಇನ್ನೂ ಪರವಾನಗಿಯಿಲ್ಲ. ಇದು ಟ್ರಾಫಿಕಿಂಗ್ ದಲ್ಲಾಳಿಗಳಿಗೆ ಇನ್ನೂ ಅನುಕೂಲವೇ ಆಗಿದೆ. ಹೇಗೋ ಈ ಜಾಲ ಹೆಣ್ಣುಗಳನ್ನು ಮತ್ತು ಮಕ್ಕಳನ್ನು ಸಾಗಾಟ ಮಾಡಿಬಿಡುತ್ತಾರೆ.

ಅಂತರರಾಷ್ಟ್ರೀಯ ಟ್ರಾಫಿಕಿಂಗ್ ಜಾಲವು, ಅಂತರರಾಷ್ಟ್ರೀಯ ಸಾಂಸ್ಕೃತಿಕ ಹಬ್ಬಗಳು, ಅಂತರರಾಷ್ಟ್ರೀಯ ಕ್ರೀಡಾ ಉತ್ಸವಗಳು, ವಿಶ್ವ ಮಟ್ಟದ ಸಮಾವೇಶಗಳು….. ಮುಂತಾದ ಸಂದರ್ಭಗಳಲ್ಲಿ ಸುಲಭವಾಗಿ ಇವರನ್ನು ಲಾಭದಾಯಕ ಸರಕಾಗಿಸಿ ಕೊಳ್ಳುತ್ತಾರೆ.  ನಂತರ ಅಂತಹ ಅಸಹಾಯಕರನ್ನು ಯಾವುದೇ ದಾಖಲೆಗಳಿಲ್ಲದೆ ಅನಧಿಕೃತರನ್ನಾಗಿಸಿ, ಕಾನೂನುಬಾಹಿರವಾಗಿ, ಅಭದ್ರತೆಯ ನೆರಳಲ್ಲಿ ಇಟ್ಟು ನಿರಂತರ ಲಾಭ ಗಳಿಸುತ್ತಾರೆ. ಇದೇ ನಿಟ್ಟಿನಲ್ಲಿ ಅದೆಷ್ಟು ಹೆಣ್ಣುಗಳು,  ಮಕ್ಕಳು ಸಾಗಾಟವಾಗಬಹುದು….  ಅದರಲ್ಲೂ ಹಿಂದುಳಿದ ಮತ್ತು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಟ್ರಾಫಿಕಿಂಗ್ ಆಗಬಹುದಾದ ಅಮಾನವೀಯ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ವಿರುದ್ಧ ಗಂಭೀರವಾದ, ಬದ್ಧತೆಯುಳ್ಳ ಕಠಿಣ ಕ್ರಮಗಳ ಅಗತ್ಯವಿದೆ.

ಹೇ ಬೇಬಿ ಬಾ ಕೂತ್ಕೋ…. ನಾನಿದ್ದ ವೇಶ್ಯಾಗೃಹದ  ಘರ್ವಾಲಿ ಕರೆದಳು. ನಿನ್ನ ಅದೃಷ್ಟ ಖುಲಾಯಿಸಿದೆ. ಥೈಲ್ಯಾಂಡ್ ದೇಶದ ಮೇಡಂ ಒಬ್ಬಳು ಇಲ್ಲಿಂದ ಹತ್ತು ಹುಡುಗಿಯರನ್ನು ಕಳಿಸಿಕೊಡು, ಒಂದು ದೊಡ್ಡ ಸಾಂಸ್ಕೃತಿಕ ಉತ್ಸವ ಇದೆ, ಒಂದು ತಿಂಗಳು ಮಾತ್ರ, ನಂತರ ನಿಮ್ಮ ಹುಡುಗಿಯರನ್ನು ಕರೆದುಕೊಂಡು ಹೋಗಬಹುದು ಅಂತ ಹೇಳಿದಳಂತೆ. ಹಾಗಂತ ವಿನ್ಸೆಂಟ್ ಬಂದು ನಿನ್ನ ಮನೆಯಿಂದ ಒಬ್ಬಳನ್ನು ಕಳಿಸು ಅಂತ ಹೇಳಿ ಹೋದ. 

ಅದ್ಯಾಕೋ ನನಗೆ ನಿನ್ನ ಬಗ್ಗೆ ಪ್ರೀತಿ ಜಾಸ್ತೀನೇ…. ಅದಕ್ಕೆ ನಿನ್ನನ್ನೇ ಕಳಿಸೋಣ ಅಂದ್ಕೊಂಡಿದ್ದೀನಿ, ಏನಂತೀಯಾ?  ಆ ಮನುಷ್ಯ ಇವತ್ತು ಸಂಜೆ ಬರ್ತಾನೆ ನಾವು ಯಾವುದಕ್ಕೂ ತೀರ್ಮಾನ ಹೇಳಬೇಕು. ಒಂದು ತಿಂಗಳಷ್ಟೇ. ಇನ್ನೊಂದು ಗೊತ್ತಾ, ಅಲ್ಲಿ ನೀನು ದುಡಿದಿದ್ದು ನಿಂದೆ, ಆ ಮನೆ ಮೇಡಂ ಅವಳ ದುಡ್ಡನ್ನು ಅವಳು ತೊಗೊಂಡ್ಬಿಟ್ಟಿರ್ತಾಳೆ. ಪ್ರತಿ ಗಿರಾಕಿಗೂ ನಿನಗೆ ಅಲ್ಲೇ ದುಡ್ಡು ಸಿಕ್ಕಿ ಬಿಡುತ್ತೆ. ನಿನ್ನ ಉಳಿದ ಎಲ್ಲಾ ಖರ್ಚು ಅವಳೇ ನೋಡ್ಕೊಂತಾಳೆ. ನೀನು ಬುದ್ಧಿವಂತಿಕೆಯಿಂದ ದುಡ್ಡು ಜೋಪಾನ ಮಾಡ್ಕೊಂಡು ಬಂದು ಇಲ್ಲಿ ಆರಾಮಾಗೆ ಬದುಕಬಹುದು. ಅಲ್ಲಿ ಗಿರಾಕಿಗಳು  ಬೇರೆ ಬೇರೆ ದೇಶಗಳಿಂದ ಬರ್ತಾರೆ. ದೊಡ್ಡ ದೊಡ್ಡ ಶ್ರೀಮಂತರು, ವ್ಯಾಪಾರಿಗಳು, ಆಫೀಸರ್ ಗಳು, ಸೆಲೆಬ್ರಿಟಿಗಳೆಲ್ಲ ಬರ್ತಾರೆ.  ಅವರೆಲ್ಲ ಕೊಡೋ ಟಿಪ್ಸ್ ಸಾಕು ನಿನಗೆ.  ಚೆನ್ನಾಗಿ ದುಡ್ಡು ಮಾಡ್ಕೊಂಡು ಬಂದ್ಬಿಡು, ವಾಪಾಸ್ ಬಂದಮೇಲೆ  ಬೇಕೆಂದರೆ ಇಲ್ಲೇ ಇರಬಹುದು ಅಥವಾ ಒಂದು ಮನೆ ಮಾಡಿಕೊಂಡು ಆರಾಮಾಗಿ ಬದುಕಬಹುದು. ಯಾರಿಗೆ ಸಿಗುತ್ತೆ ಈ ಚಾನ್ಸು ಅಂತ ನನ್ನನ್ನು ಒಪ್ಪಿಸೋಕೆ ಪ್ರಯತ್ನ ಮಾಡ್ತಾನೇ ಇದ್ದಳು. 

ನಾನು ಯೋಚನೆ ಮಾಡಿದೆ ಇದೊಂದು ಅವಕಾಶ ನನ್ನ ಜೀವನದಲ್ಲಿ ಬಂದಿದೆ,  ಯಾಕೋ ಏನೋ ಇವಳು ನನ್ನನ್ನು ಕಳಿಸ್ತಾ ಇದ್ದಾಳೆ, ಬಹುಶಃ ಚಿಕ್ಕ ವಯಸ್ಸು, ದಷ್ಟಪುಷ್ಟವಾಗಿದ್ದೀನಿ ಅಂತ ಇರಬಹುದು. ಆದರೆ  ನಾನು ಒಬ್ಬಳೇ ಹೇಗೆ ಹೋಗೋದು, ಇನ್ನು ಯಾರನ್ನಾದರೂ ಈ ಮನೆಯಿಂದಲೇ ಕಳಿಸಿಕೊಡು ಅಂತ ಕೇಳಿದೆ. ನೋಡೋಣ ಅವನು ಒಪ್ಪಬೇಕಲ್ಲ, ನಮ್ಮ ಕಡೆಯಿಂದ ಒಬ್ಬರು ಅಂತ ಹೇಳಿದ್ದಾನೆ. ಯಾಕೆ ಯೋಚನೆ ಮಾಡ್ತೀಯ, ವಿನ್ಸೆಂಟ್ ಜೊತೆ ತಾನೇ ಹೋಗೋದು, ಅವನು ಎಷ್ಟು ಒಳ್ಳೆಯವನು, ಎಷ್ಟು ವರ್ಷಗಳಿಂದ ನಾನು ಅವನನ್ನು ನೋಡೀದ್ದೀನಿ. ನಿನ್ನನ್ನು ಜೋಪಾನ ಮಾಡ್ತಾನೆ ಬಿಡು, ಅಂತ ನನ್ನ ಆತಂಕಾನ ಹಗುರ ಮಾಡಿದ್ಲು.

ನಾನೂ ಹೇಳಿದೆ, ನನ್ನ ಮನೆಯ ಇನ್ನಿಬ್ಬರು ಹುಡ್ಗೀರನ್ನ  ಕರ್ಕೊಂಡು ಹೋಗು ಅಂತ, ಅದಕ್ಕೆ ಅವನು, ಇನ್ನೊಂದು ದೇಶಕ್ಕೆ ಕರ್ಕೊಂಡು ಹೋಗೋದು, ನಾನೂ ಅಲ್ಲೇ ಇದ್ದು ವಾಪಸ್ಸು ಕರ್ಕೊಂಡು ಬರ್ಬೇಕು,  ಎಲ್ಲ ಎಷ್ಟು ಖರ್ಚು ಬರುತ್ತೆ, ನೀನೇ  ಕೊಡ್ತೀಯ ಅಂತಾನೆ. ನಾನು ಎಲ್ಲಿಂದ ತರಲಿ ಅಂತ ಏನೋ ಒಂದು ಸಬೂಬು ಹೇಳಿದ್ಲು. ಇಲ್ಲಿ ಯಾರಿಗೂ ಸುಳಿವು ಕೊಡಬೇಡ, ಎಲ್ಲಾ ನನ್ನ ಕಳಿಸು, ನನ್ನ ಕಳಿಸು ಅಂತ ಗೋಳು ಹುಯ್ಕೊಂತಾರೆ ಅಂತ ಹೇಳಿದ್ಲು. ಸರಿ ನಾನು ಗೌಪ್ಯವಾಗಿ ಹೊರೊಡೋ ಸಿದ್ಧತೆ ಮಾಡ್ಕೊಂಡೆ. 

ನನ್ನ ಮನಸೊಳಗೆ ಎಲ್ಲಾ ಯೋಚನೆಗಳು ಸುಳಿದಾಡಿದ್ವು. ಎಲ್ಲಿ ಆದರೇನು, ಬೆತ್ತಲಾಗೋದೇ ತಾನೇ, ಇಲ್ಲಿ ಕೊಳೆಯೋದಕ್ಕಿಂತ, ಅವಳು ಹೇಳಿದಂಗೆ ನನ್ನ ಈ ಬದುಕಿಗೆ ಮುಕ್ತಿ ಸಿಗಬಹುದೇನೋ ಅಂತ ನಿರ್ಧರಿಸಿಬಿಟ್ಟೆ. ಆದರೆ ಅದ್ಯಾವುದೋ ದೇಶ, ಕಾಣದ ಜನ, ಗೊತ್ತಿಲ್ಲದ ಭಾಷೆ ಹೇಗೆ ಹೋಗೋದು ಅಂತ ಖಿನ್ನಳಾದೆ. 

ಅದಕ್ಕೆ ಅವಳು  ಹೇಳಿದ್ದು, ಅಲ್ಲಿರುವ ಮೇಡಂ ನಮ್ಮ ಹಿಂದಿಯವಳೇ, ಹೀಗೆ ಹೋದವಳು, ಚೆನ್ನಾಗಿ ದುಡ್ಡು ಮಾಡಿ ಅಲ್ಲೇ ದೊಡ್ಡ ವೇಶ್ಯಾಗೃಹ ನಡೆಸುತ್ತಿದ್ದಾಳೆ. ಅದಕ್ಕೆ ಅವಳಿಗೆ ನಮ್ಮ ದೇಶದ ಹುಡುಗೀರೆ ಇಷ್ಟ. ನೀನೇನು ಯೋಚನೆ ಮಾಡಬೇಡ. ಅವಳಿಗೆ ನಮ್ಮ ಭಾಷೆ ಗೊತ್ತು, ನಮ್ಮ ದೇಶ ಗೊತ್ತು. ಇಷ್ಟಕ್ಕೂ ಒಂದು ತಿಂಗಳಿದ್ದು ಬಂದುಬಿಡು ಅಷ್ಟೇ ಅಂದ್ಲು. ನೀನಾದ್ರೆ ಗಂಭೀರವಾದ ಹುಡುಗಿ, ಅದಕ್ಕೆ ನಾನು ನಿನ್ನನ್ನು ಕಳಿಸುತ್ತಿರುವುದು. ಸಂಜೆ ಅವನು ಬರುತ್ತಾನೆ, ರೆಡಿಯಾಗಿರು ಅಂದಳು. ಹೆಚ್ಚು ಸಮಯವಿಲ್ಲ. ಅವನ ಜೊತೆ ಹೋಗು, ಅವನು ಎಲ್ಲಾ ವ್ಯವಸ್ಥೆ ಮಾಡ್ತಾನೆ. 

ಸರಿ ನಾನು ತಯಾರಿ ನಡೆಸಿಕೊಂಡೆ. ಯಾರಿಗೂ ಹೇಳಲಿಲ್ಲ. ನನ್ನತ್ರ ಇದ್ದ ಟಿಪ್ಸ್ ದುಡ್ಡನ್ನೆಲ್ಲ ಬ್ಯಾಗಲ್ಲಿ ಇಟ್ಟುಕೊಂಡೆ. ಹೆಚ್ಚು ಹೆಚ್ಚು ದುಡಿದು ವಾಪಸ್ ಬಂದು ಈ ಹೈರಾಣಾದ ದಂಧೆಯಿಂದ ಮುಕ್ತಳಾಗಿ ಸ್ವತಂತ್ರವಾಗಿ ಬದುಕು ನಡೆಸುವ  ಕನಸು ನನ್ನನ್ನು ಉತ್ಸಾಹದಿಂದ ಹೊರಡೋಕೆ ಮನಸ್ಸು ಒಪ್ಪಿತ್ತು.

ನನ್ನ ದುಡ್ಡನ್ನೆಲ್ಲ ಲೆಕ್ಕ ಮಾಡಿ ಕೊಡು ನನಗೂ ಖರ್ಚಿಗೆ ಆಗುತ್ತೆ ಅಂತ ಕೇಳಿದೆ. ಅದಕ್ಕೆ ಅವಳು,  ಅಯ್ಯೋ ದುಡ್ಡು ಎಲ್ಲೋಗುತ್ತೆ ನೀನು ಬಂದ ಮೇಲೆ ಅದನ್ನೂ ಸೇರಿಸ್ಕೊಂಡು ಏನಾದ್ರೂ ಬದುಕಿನ ದಾರಿ ಮಾಡ್ಕೊಳ್ಳಿವಂತೆ. ಒಂದು ಗೂಡು ಮಾಡ್ಕೊಂಡ್ರೂ ನಾಲ್ಕು ಹುಡ್ಗೀರ್ನ ಇಟ್ಕೊಂಡು ವ್ಯಾಪಾರ ಮಾಡ್ಬಹುದು, ಅದಕ್ಕೆಲ್ಲ ನಾನು ಸಹಾಯ ಮಾಡ್ತೀನಿ ಅಂದ್ಲು. ಈಗ ಹೋಗ್ತಿರೋದೇ  ದುಡ್ಡಿನ ಕಣಜದೊಳಗೆ…. ಸ್ವಲ್ಪ ಖರ್ಚಿಗೆ ಬೇಕಾದರೆ ಇಟ್ಕೋ ಅಂತ ಒಂದಿಷ್ಟು ಪುಡಿಗಾಸು ಕೊಟ್ಟಳು. ಇಷ್ಟು ದಿನ ಇವಳು ನನ್ನಿಂದ ಮಾಡ್ಕೊಂಡ ಲಾಭದ ಒಂದಂಶವನ್ನೂ ಕೊಡಲಿಲ್ವಲ್ಲ ಅಂತ ಮನಸ್ಸು ಚೀತ್ಕರಿಸಿತ್ತು. ಆದರೂ ಮುಂದೆ ವಾಪಾಸ್ ಬಂದಾಗ ಇವಳ ಸಹಾಯ ಬೇಕಾಗುತ್ತೆ ಅಂತ ಸುಮ್ಮನಾದೆ.  

ಸಾಯಂಕಾಲ ವಿನ್ಸೆಂಟ್ ಬಂದ. ಅವಳ ಜೊತೆ ಮಾತಾಡಿ ಅವನ ವ್ಯವಹಾರ ಮುಗಿಸಿಕೊಂಡ.  ಇನ್ನು ಹೊರಡು ಬೇಬಿ ಅಂತ ಹೇಳಿ ನನಗೆ ಹೇಳಿದ. ಕಾರಲ್ಲಿ ಕೂರಿಸಿಕೊಂಡ. ಅವನ ಜೊತೆ ಅಷ್ಟು ಸಲಿಗೆ ಮನೆಯ ಎಲ್ಲಾ ಹುಡುಗಿಯರಿಗೂ ಇತ್ತು. ಮನೆಯವಳು ಕೈ ಬೀಸುತ್ತಲೇ ಇದ್ದಳು, ನಾನು ಹೊರಟ ಕಾರು ಮರೆಯಾಗುವವರೆಗೂ.

ವಿನ್ಸೆಂಟ್ ಒಂದು ಮನೆಗೆ ಕರೆದುಕೊಂಡು ಬಂದ. ನಾವು ಹೋಗ್ಲಿಕ್ಕೆ ಇನ್ನೂ ನಾಲ್ಕೈದು ದಿವಸ ಆಗಬಹುದು. ಅದಕ್ಕೆ ಬೇಕಾದ ಎಲ್ಲಾ ರೆಕಾರ್ಡ್ಸ್ ಮಾಡಬೇಕಾಗುತ್ತೆ ನೀನು ಆರಾಮಾಗಿ ಈ ಮನೆಯಲ್ಲಿ ಇರು ಅಂತ ಹೇಳಿದ. ನಾಲ್ಕೈದು ದಿನ ಕಳೆಯಿತು, ಅದೇಗೆ ಪಾಸ್ಪೋರ್ಟ್, ವೀಸಾ ಮಾಡಿದನೋ ಗೊತ್ತಿಲ್ಲ.  ನನ್ನಂತೂ  ಚೆನ್ನಾಗಿ ನೋಡಿಕೊಂಡ. ಹೊತ್ತೊತ್ತಿಗೆ ಊಟ ತಿಂಡಿ ತರುತ್ತಿದ್ದ. ಎಷ್ಟೋ ವರ್ಷಗಳಿಂದ ದಣಿದಿದ್ದ ನಾನು ಚೆನ್ನಾಗಿ ನಿದ್ದೆ ಮಾಡಿದೆ. ಹಗಲು ರಾತ್ರಿ ಎನ್ನದೆ ಕನಸುಗಳು ನನ್ನನ್ನ ಮುತ್ತಿಕೊಳ್ಳುತ್ತಿದ್ದವು.

ಆ ದಿನ ಬಂದೇ ಬಿಡ್ತು. ಮನಸ್ಸು ಬಿಡುಗಡೆಯ ಉತ್ಸುಕದಲ್ಲಿತ್ತು.  ಹಾಗೆ ಒಳಗೊಳಗೆ ದುಗುಡವೂ ಇತ್ತು. ವಿಮಾನ ನಿಲ್ದಾಣದಲ್ಲಿ ಕಲ್ಚರಲ್ ಫೆಸ್ಟ್ ಅಂತ ವಿನ್ಸೆಂಟ್ ಮಾತಾಡಿದ್ದು ಕೇಳಿಸ್ತು. ಏನಾದರೂ ಹೇಳಲಿ ಅಂದುಕೊಂಡು ಸುಮ್ಮನಿದ್ದೆ.  ಅದು ಯಾವ ದೇಶ?  ವಿನ್ಸೆಂಟ್ ಅಂದೆ.  ಅದಕ್ಕೆ ಅವನು, ಥೈಲ್ಯಾಂಡ್, ಈ ದಂಧೆ ಮಾಡುವವರ ಸ್ವರ್ಗ, ಅದೆಷ್ಟು ಹುಡುಗಿಯರು, ಅದೆಷ್ಟು ಗಿರಾಕಿಗಳು, ಅದೆಷ್ಟು ದುಡ್ಡು, ಯಾವ್ಯವುದೋ ದೇಶದ ಹುಡ್ಗೀರು ಇರ್ತಾರೆ… ಅಬ್ಬಬ್ಬಾ ನೀನೇ ನೋಡಿವಂತೆ, ಅಂತ ಹೇಳಿದ. 

ಮೊದಲನೇ ವಿಮಾನ ಪ್ರಯಾಣ, ತಲೆ ಧಿಂ ಅನ್ನುತ್ತಿತ್ತು. ಆಕಾಶದ ತುಂಬೆಲ್ಲಾ ಹತ್ತಿಯ ರಾಶಿ ರಾಶಿಯ ಬೆಟ್ಟಗಳೇ ಇವೆಯೇನೋ ಅಂತ ಆಶ್ಚರ್ಯ ಆಯ್ತು. ವಿನ್ಸೆಂಟ್ ಮಾಮೂಲಿ ಅನ್ನೋಹಂಗೆ ನಿದ್ರೆ ಮಾಡ್ತಿದ್ದ. 

ಅಂದೊಂದು ಏರ್ಪೋರ್ಟ್ನಲ್ಲಿ ಇಳಿದು ಮತ್ತೆ ಒಂದು ಟ್ಯಾಕ್ಸಿ ಮಾಡಿ ಕರ್ಕೊಂಡು ಹೋದ.  ಒಂದು ದೊಡ್ಡ ಬಂಗಲೆ, ಅದರ ಮುಂಬಾಗಿಲಿನ ಅಲಂಕಾರ ಅದ್ಭುತವಾಗಿತ್ತು. ಬರುವ ಹಾದಿಯ ತುಂಬಾ ಕಣ್ಣಾಯಿಸುವಷ್ಟು  ಹುಡುಗಿಯರ ದಂಡು!!!!!

ವಿನ್ಸೆಂಟ್ ಆ ಮನೆಯ ಮೇಡಂಗೆ ನನ್ನ ಪರಿಚಯ ಮಾಡಿಸಿದ. ಅವಳು ನಗುನಗುತ್ತಲೇ ನನ್ನನ್ನು ಹಿಂದಿಯಲ್ಲಿ ಮಾತಾಡಿಸಿ ತಲೆ ನೇವರಿಸಿದ್ಲು. ಹುಡುಗಿ ಬಹಳ ಚೆನ್ನಾಗಿದ್ದಾಳೆ ಅಂತ ಮೆಚ್ಚುಗೆ ಸೂಸಿದ್ಲು. ವಿನ್ಸೆಂಟ್ ಖುಷಿಯಾದ. 

ನಾನು ಒಳಗೆ ಹೋಗಲು ಸೂಚಿಸಿದಳು. ನಾನು ಹೋಗೋಕೆ ಮುಂಚೆ ವಿನ್ಸೆಂಟ್ ಕಡೆ ನೋಡಿದೆ.  ಅವನು ನಾನು ಇಲ್ಲೇ ಇರ್ತೀನಿ, ಆಗಾಗ್ಗೆ ಬರ್ತಾ ಇರ್ತೀನಿ, ಯೋಚನೆ ಮಾಡ್ಬೇಡ ಚೆನ್ನಾಗಿರು. ಅಂತ ಹೇಳಿ ಒಳಗೆ ಕಳಿಸಿದ. 

ಸರಿ ಅಲ್ಲಿಯ ವಾತಾವರಣ, ಅಲ್ಲಿ ಇದ್ದ ಹುಡುಗಿಯರ ವೇಷಭೂಷಣ ಎಲ್ಲವೂ ಅರ್ಥ ಆಗಲಿಕ್ಕೆ ಒಂದೆರಡು ದಿನಗಳು ಬೇಕಾಯ್ತು. ಬಹಳ ಬೇಗನೆ ನಾನು ಕೂಡ ಹೊಂದಿ ಕೊಂಡುಬಿಟ್ಟೆ . ಈ ಮಧ್ಯೆ  ಒಂದು ಬಾರಿ ವಿನ್ಸೆಂಟ್ ಬಂದುಹೋದ. ನಾನು ಒಂದು ತಿಂಗಳು ಬಿಟ್ಟು ಬರ್ತೀನಿ, ಆಗ ನೀನು ಜೊತೆಗೆ ಬರುವಿಯಂತೆ, ಇವರು ಹೇಳಿದಂಗೆ ಕೇಳಿಕೊಂಡು ಇರು ಅಂತ ಹೇಳಿಹೋದ. 

ನಾನು ಎಲ್ಲ ಕನಸುಗಳನ್ನು ಹರವಿಕೊಂಡೆ. ನನಗೊಂದು ಉಜ್ವಲ ಭವಿಷ್ಯವನ್ನು ಚಿತ್ರಿಸಿಕೊಂಡು, ನಾನು ಸಂಪಾದಿಸಬಹುದಾದ ಹಣದ ಬಗ್ಗೆಯೂ ಕನಸುಗಳನ್ನು ಬಚ್ಚಿಟ್ಟುಕೊಂಡೆ. ನಾನು ಹೋದ ಒಂದೆರಡು ವಾರ ಆ ಕನಸು ನನಸಾಗುವ ಭರವಸೆಯೂ ಸಿಕ್ಕಿತ್ತು.  ಅವಳು ಹೇಳಿದಾಗೆ ಇಲ್ಲಿ ದೊಡ್ಡ ದುಡ್ಡಿನ ರಾಶಿ ಏನು ನನ್ನ ಮುಂದೆ ಬೀಳದಿದ್ದರೂ ಕೆಲವು ಗಿರಾಕಿಗಳು ಕೊಟ್ಟು ಹೋಗುತ್ತಿದ್ದ ಟಿಪ್ಸ್ ಚೆನ್ನಾಗಿಯೇ ಇರುತ್ತಿತ್ತು. 

ಒಂದು ತಿಂಗಳು ಕಳೆಯಿತು. ಇನ್ನೇನು ವಿನ್ಸೆಂಟ್ ಬರ್ತಾನೆ ಇದರಿಂದ ನನ್ನ ಹಣವನ್ನು ಕೇಳಿ ಪಡೆದು ನನ್ನ ದೇಶಕ್ಕೆ ವಾಪಸ್ಸು ಹೋಗಬೇಕು ಅಂತ ಯೋಚಿಸ್ತಿದ್ದೆ. ಆದರೆ ತಿಂಗಳು ಕಳೆದು ಹತ್ತನ್ನೆರಡು ದಿನಗಳು ಆಯ್ತು, ವಿನ್ಸೆಂಟ್ ಬರಲೇ ಇಲ್ಲ. ಆಗ ನನಗೆ ದುಗುಡ ಹೆಚ್ಚಾಯಿತು. ಆತಂಕಗೊಂಡೆ. ಹೋಗಿ ಮೇಡಮ್ ಕೇಳಿದೆ, ನಾನು ನನ್ನ ದೇಶಕ್ಕೆ ವಾಪಸ್ ಹೋಗಬೇಕು ವಿನ್ಸೆಂಟ್ ಯಾವಾಗ  ಬರ್ತಾನೆ ಅಂತ. ನಾನು ಬಂದ ದಿನ ಅಷ್ಟೊಂದು ಅಕ್ಕರೆಯಿಂದ ಮಾತನಾಡಿಸಿದ ಹೆಂಗಸು ಮುಖತಿರುಗಿಸಿ ಯಾರೂ ಬರೋಲ್ಲ ಬೇಬಿ, ನೀನು ಎಲ್ಲೂ ಹೋಗೋಕ್ಕಾಗಲ್ಲ, ನಿನ್ನ ಜೊತೆ ಬಂದಿದ್ದ ಆ ಗಂಡಸು ನಿನ್ನನ್ನು ನನಗೆ ಮಾರಿ ಹೋಗಿದ್ದಾನೆ. ನೀನು ವರ್ಷಾನುಗಟ್ಟಲೆ ದುಡಿದರೂ ಅವನಿಗೆ ನಾನು ಕೊಟ್ಟಿರೋ ದುಡ್ಡು ವಾಪಸ್ ಬರೋಲ್ಲ… ಮುಖ ಸಿಂಡರಿಸಿಕೊಂಡು ಹೇಳಿದ್ಲು. 

ನನಗೆ ನಿಂತ ಭೂಮಿಯೇ  ಕುಸಿದಂತಾಯಿತು. ಹಾಗಾದ್ರೆ ಆ ವಿನ್ಸೆಂಟ್ ನಿನಗೆ ಪರಿಚಯವಿಲ್ವಾ ಅಂತ ಕೇಳಿದೆ. ಅವನೊಬ್ಬ ದಳ್ಳಾಳಿ,  ಅವನಂಥೋರು ಎಷ್ಟು ಜನ ಬರ್ತಾರೆ, ಹೋಗ್ತಾರೆ ನಾನ್ಯಾಕೆ ಅವನನ್ನ ಪರಿಚಯ ಮಾಡ್ಕೊಳ್ಳಲಿ, ವ್ಯವಹಾರ ಅಷ್ಟೆ, ಮುಗಿದ ಮರುಕ್ಷಣಾನೇ ನಮ್ಮ ಪರಿಚಯವೂ ಮುಗಿದು ಹೋಗುತ್ತೆ, ಅಂದಳು. ಆಯ್ತು, ನಾನು ನನ್ನ ದೇಶಕ್ಕೆ ವಾಪಸ್ ಹೋಗ್ತೀನಿ ಅಂದೆ. ಹೇಗೆ ಹೋಗ್ತೀಯಾ, ನಿನ್ನ ಹತ್ರ ಪಾಸ್ಪೋರ್ಟ್, ವೀಸಾ ಯಾವುದೂ ಇಲ್ಲ. ಎಲ್ಲವನ್ನೂ ಅವನು ತಗೊಂಡ್ ಹೋಗಿದ್ದಾನೆ. ನೀನು ಆಚೆ ಹೋದರೆ ನಿನ್ನತ್ರ ಯಾವ ದಾಖಲೆಯೂ ಇಲ್ಲ ಅಂತ ಪೊಲೀಸರು ಹಿಡಿದು ಒಳಗೆ ಹಾಕ್ತಾರೆ. ನೀನು ಸಾಯೋವರೆಗೂ ಜೈಲಲ್ಲಿ ಇರಬೇಕಾಗುತ್ತೆ, ಸುಮ್ಮನೆ ಹೋಗು ಅಂತ ಗದರಿಸಿದಳು. 

ಆಗಲೇ ನನಗೆ ಈ ದಂಧೆಯ ಕರಾಳ ಮುಖಗಳು ಪರಿಚಯವಾದ್ವು. ಒಮ್ಮೆ ನನ್ನ ಬದುಕಲ್ಲಿ ಇಂತಹ  ಕೂಪದೊಳಗೆ ಸೇರಿಹೋಗಿದ್ದ ಅನುಭವ ಇದ್ದರೂ ಈ ಜನರನ್ನು ಮತ್ತೆ ನಂಬಿ ಬಿಟ್ನಲ್ಲ ಅಂತ ಮನಸ್ಸು ರೋದಿಸಿತು. ಇಲ್ಲಿ ಹಣ ಮಾತ್ರ ಮುಖ್ಯ ಆಗುತ್ತೆ. ಯಾವ ಮನುಷ್ಯನು ಇಲ್ಲ….ಯಾವ ಮನುಷ್ಯತ್ವವು ಇಲ್ಲ. 

ನಾನು ಆ ದೇಶದಲ್ಲಿ ಅನಾಥೆಯಾದೆ.  ವೀಸಾ ಪಾಸ್ ಪೋರ್ಟ್ ಇರಲಿ,  ನಾನು ಇಂಥಾ ದೇಶದವಳು ಅಂತ ಹೇಳಲಿಕ್ಕೂ ಯಾವುದೇ ಗುರುತು ಕೂಡ ಇಲ್ಲದಂತಾಗಿತ್ತು. ಯಾರಿಗಾದರೂ ಹೇಳಿ ನ್ಯಾಯ ಕೇಳೋಣವೆಂದರೆ, ನಾನು ಕೂಡ ಕಾನೂನುಬಾಹಿರ ಅಂತ ಆ ಘರ್ವಾಲಿ ಸದಾ ನನ್ನನ್ನು ಹೆದರಿಸ್ತಾನೇ ಇದ್ದಳು. 

ಇದ್ದಷ್ಟು ದಿನ ನಾನು ಅನುಭವಿಸಿದ ಅವಮಾನ, ಅನಾಥ ಪ್ರಜ್ಞೆ, ಕೀಳರಿಮೆ, ಜೀವಕ್ಕೆ ರಕ್ಷಣೆಯಿಲ್ಲದೆ ಅನುಭವಿಸಿದ ಆ ನೋವಿನ ದಿನಗಳು ರಕ್ತವನ್ನು ಹೆಪ್ಪುಗಟ್ಟಿಸುವಷ್ಟಿದ್ದವು. ಸುಮಾರು ಎಂಟು ವರ್ಷಗಳ ಸುದೀರ್ಘವಾದ ಅಂತಹ ಅನಾಥ ಬದುಕನ್ನ ಆ ದೇಶದಲ್ಲಿ ಬದುಕಿದೆ.  ಅದೇಕೆ ಬದುಕಿದ್ದೆನೋ ನನಗೇ ಗೊತ್ತಿಲ್ಲ. ಎಂದೂ ಸಾಯಬೇಕು ಅಂತ ಅನ್ನಿಸಲೇ ಇಲ್ಲ. ಸಾವಿಗೂ ಮಿಗಿಲಾದ ನೋವನ್ನು, ಹತಾಶೆಯನ್ನು,  ನಿರಾಸೆಯನ್ನೂ ಅನುಭವಿಸಿ ಬಿಟ್ಟೆ. ದಿನಗಳು ದೂಡುತ್ತಿದ್ದವು. ನನ್ನ ಆರೋಗ್ಯ ನಿಧಾನವಾಗಿ ಹದಗೆಡುತ್ತಿತ್ತು. ಮಾನಸಿಕವಾಗಿ ಎಂದೋ ಸತ್ತು ಹೋಗಿದ್ದೆ. ಘರ್ವಾಲಿಯ ಮೂದಲಿಕೆ ಹೆಚ್ಚಾಗುತ್ತಾ ಬಂತು. ಅವಳು ನಿರೀಕ್ಷಿಸಿದ್ದ ಚಿನ್ನದ ಮೊಟ್ಟೆಯಿಡುವ ಕೋಳಿ ನಾನಾಗಲಿಲ್ಲ ಅಂತ ಉದ್ವೇಗಗೊಳ್ಳುತ್ತಿದ್ದಳು. 

ನಾನು ಹೆಚ್.ಐ.ವಿ.ಸೋಂಕಿತಳಾಗಿದ್ದೆ. ನನ್ನ ಆರಾಮದ ಬದುಕಿನ ಕನಸಿಗೆ ಒಂದು ತಿಂಗಳ ದುಡಿಮೆಯ ಆಸೆಗೆ ಬಲಿಯಾಗಿ ಬಂದವಳಿಗೆ ಆ ರೋಗ…. ಮತ್ತೆ ಕನಸೇ ಕಾಣಲಾರದ ಬದುಕನ್ನು ಹೇರಿಬಿಟ್ಟಿತ್ತು. ಕನಸುಗಳು ದು:ಸ್ವಪ್ನವಾದವು. ಸೋಂಕು ಉಲ್ಬಣಿಸುತ್ತಿತ್ತು. ದಾಖಲೆಯಿಲ್ಲದ ನಾನು ಅಲ್ಲಿ ಸತ್ತು ಹೋದರೆ….. ಘರ್ವಾಲಿಗೆ ಆತಂಕವಾಯ್ತು. ಇನ್ನೆಂದಿಗೂ ನೀನು ಈ ದೇಶ ಬಿಟ್ಟು ಹೋಗಲಾಗದು ಎನ್ನುತ್ತಿದ್ದವಳು ನನ್ನನ್ನು ನನ್ನ ದೇಶಕ್ಕೆ ರವಾನಿಸಲು ವ್ಯವಸ್ಥೆ ಮಾಡೋ ಧಾವಂತದಲ್ಲಿದ್ದಳು. 

ಇದೆಂಥಾ ಅಮಾನವೀಯ ದಂಧೆ !! ಇಲ್ಲಿ ಪ್ರತಿಯೊಬ್ಬರೂ, ಪ್ರತಿ ಬಾರಿಯೂ ಮಾರುತ್ತಲೇ ಹೋಗುತ್ತಾರೆ, ಕೊಳ್ಳುವವರು ಮುಗಿಬಿದ್ದು ಕೊಳ್ಳುತ್ತಲೇ ಹೋಗುತ್ತಾರೆ. ಮನುಷ್ಯರೆಂಬ ಯಾವ ಇರಾದೆಯೂ ಇವರಿಗಿರೋಲ್ಲ…..!!

ಅದೊಂದು ದಿನ ನನಗೂ ನನ್ನ ದೇಶಕ್ಕೆ ವಾಪಸಾಗುವ ದಿನ ಬಂದೇ ಬಿಡ್ತು. ಹೇಗೋ ಹೊರದಬ್ಬುವ ಅವಸರದಲ್ಲಿ ಅವಳಿದ್ದಳು. ಎಲ್ಲಾ ವ್ಯವಸ್ಥೆ ಮಾಡಿದ್ದೇನೆ. ಅವಳು ನಿನ್ನನ್ನು ಕರ್ಕೊಂಡು ಹೋಗ್ತಾಳೆ. ಎಲ್ಲಾ ಅವಳೇ ನೋಡ್ಕೊಳ್ತಾಳೆ. ಎಲ್ಲವನ್ನೂ ಇಲ್ಲೇ ಮರೆತು ಮೂಗಿಯಾಗಿ ಹೋಗ್ಬೇಕು. ಎಲ್ಲಾದ್ರೂ ಒಂದು ಶಬ್ದ ಬಾಯಿಬಿಟ್ಟೀಯಾ ಅಂದಳು. ನನ್ನ ದುಡ್ಡು ? ಅಂದೆ. ನಿನಗೆ ಮಾಡಿರುವ ಖರ್ಚಿಗೆ ನೀನೇ ಕೊಡಬೇಕು ನನಗೆ ಅಂದಳು.  ಅದೇನು ಕರಾಮತ್ತು ಮಾಡಿದ್ದಳೋ ನಾನು ತಲೆಕೆಡಿಸಿಕೊಳ್ಳಲಿಲ್ಲ. ಮಾತಾಡಲು ನನಗೆ ಉಸಿರೂ ಇರಲಿಲ್ಲ. ಶಬ್ಧಗಳು ಗಂಟಲಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದವು. 

ದು:ಸ್ವಪ್ನಗಳ ಮೂಟೆ ಹೊತ್ತು ಹುಟ್ಟ ಬಟ್ಟೆಯಲ್ಲಿ ತಟ್ಟಾಡುತ್ತಾ  ತತ್ತರಿಸಿ ಬಿದ್ದಾಗ ಈ ದೇಶದಲ್ಲಿದ್ದೆ. ಕಣ್ಣು ಕತ್ತಲಿಟ್ಟಿತ್ತು. ಹೋಗುವ ದಾರಿ ಮುಚ್ಚಿತ್ತು. ನಿಂತ ನೆಲ ಅಪರಿಚಿತವಾಗಿತ್ತು. ದೇಶದ ಗಡಿಗಳಿಗೆ ವ್ಯತ್ಯಾಸವೇ ಇರಲಿಲ್ಲ. ಅಲ್ಲೇ ಕುಸಿದು ಕುಂತವಳಿಗೆ ದಾರಿ ಹೋಕರು ಕಾಸು ಎಸೆದಿದ್ದರು…….

‍ಲೇಖಕರು ಲೀಲಾ ಸಂಪಿಗೆ

December 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿರುವ ನನ್ನ...

೧ ಪ್ರತಿಕ್ರಿಯೆ

  1. T S SHRAVANA KUMARI

    ಒಂದೊಂದೂ ಕರುಳಿರಿಯುವಂತಹ ಪ್ರಸಂಗಗಳೇ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: