ಬನ್ನಂಜೆಯವರಿಗೆ ‘ಆಕ್ಷನ್.. ಕಟ್..’ ಹೇಳಿದೆ

‘ಅಭಿವ್ಯಕ್ತ’ ರಾಜಶೇಖರ

ನನ್ನ ವೃತ್ತಿ ಬದುಕಿನ ಮೊದಲ ಆಕ್ಷನ್.. ಕಟ್.. ಹೇಳಿದ್ದು ಪೂಜ್ಯರಾದ ಶ್ರೀ ಬನ್ನಂಜೆಯವರಿಗೆ..

ಅದು 2000 ನೇ ಇಸವಿಯ ಜನವರಿ ತಿಂಗಳು. ಹೈದರಾಬಾದ್ ರಾಮೋಜಿ ಫಿಲಂ ಸಿಟಿಯಲ್ಲಿ ಈಟಿವಿ ಕನ್ನಡ ಚಾನಲ್ ಆರಂಭಿಸಲು ಸಿದ್ಧತೆ ನಡೆದಿತ್ತು. ಆಗ ಮಂಗಳೂರಿನ ರಂಗಭೂಮಿಯಲ್ಲಿದ್ದ ನಾನು ನಾಟಕರಂಗಕ್ಕೆ ತಿಲಾಂಜಲಿಯಿತ್ತು, ಟಿವಿ ಬದುಕಿಗೆ ಹೆಜ್ಜೆಯಿಟ್ಟಿದ್ದೆ.. ಹಿರಿಯ ಗೆಳೆಯರಾದ ಸುರೇಂದ್ರನಾಥ್ (ಸೂರಿ) ನನ್ನನ್ನು ಕರೆಸಿಕೊಂಡಿದ್ದರು..

ಹೊಸ ವಾಹಿನಿ.. ಹೊಸ ಕಾರ್ಯಕ್ರಮಗಳ ತಯಾರಿ.. ಎಲ್ಲದಕ್ಕಿಂತ ಮೊದಲು‌ ಬೆಳಗಿನ ಭಕ್ತಿ ಕಾರ್ಯಕ್ರಮ ತಯಾರಾಗಬೇಕಲ್ಲ.. ಅದಕ್ಕೆ ಬನ್ನಂಜೆಯವರ ಪ್ರವಚನವೇ ಅತ್ಯಂತ ಸೂಕ್ತ ಎಂದು ಚಾನಲ್ ಮುಖ್ಯಸ್ಥರಾಗಿದ್ದ ಸೂರಿಗೆ ಅನ್ನಿಸಿತ್ತು. ಅದನ್ನು ಕಾರ್ಯರೂಪಕ್ಕೆ ತರುವ ಕೆಲಸ ಉಳಿದಿತ್ತು.

ಅಲ್ಲಿ ಎರಡು ಆಯ್ಕೆಗಳಿತ್ತು. ಒಂದೋ ಬನ್ನಂಜೆಯವರನ್ನು ಹೈದರಾಬಾದ್ ಸ್ಟುಡಿಯೋಗೆ ಕರೆಸೋದು ಅಥವಾ ಉಡುಪಿಗೆ ಹೋಗಿ ಚಿತ್ರೀಕರಣ ಮಾಡಿಕೊಂಡು ಬರೋದು.. ಸೂರಿಗೆ ಏನನ್ನಿಸಿತೋ ಗೊತ್ತಿಲ್ಲ.. ಚಿತ್ರೀಕರಣದ ತಲೆಬುಡ ಗೊತ್ತಿಲ್ಲದ ನನ್ನನ್ನು ಉಡುಪಿಗೆ ಕಳಿಸಲು ನಿರ್ಧಾರ ಮಾಡಿದರು..

ನನ್ನ ಜತೆ ಒಬ್ಬ ಕ್ಯಾಮೆರಾಮನ್ ಮತ್ತು ಕ್ಯಾಮೆರಾ ಅಸಿಸ್ಟೆಂಟ್. ಇಬ್ಬರಿಗೂ ತೆಲುಗು ಬಿಟ್ಟರೆ ಬೇರೆ ಭಾಷೆ ಬರಲ್ಲ. ನನಗೆ ತೆಲುಗು ಗೊತ್ತಿಲ್ಲ.. ಬಹುಶಃ ನಾನು ಮಂಗಳೂರಿನವ ಆಗಿದ್ದಕ್ಕೋ, ಅಥವಾ ಬನ್ನಂಜೆಯವರು ಮತ್ತು ನನ್ನದು ಒಂದೇ ಮಾತೃಭಾಷೆ ಆಗಿದ್ದಕ್ಕೋ, ಅಥವಾ ಹಿಡಿದ ಕೆಲಸ ಸಾಧಿಸುವ ನನ್ನ ಸ್ವಭಾವದ ಮೇಲಿನ ನಂಬಿಕೆಯಿಂದಲೋ.. ನನ್ನ ಹಿಂದೇಟುಗಳನ್ನು ಲೆಕ್ಕಿಸದೆ ಸೂರಿ ನಮ್ಮನ್ನು ಉಡುಪಿಗೆ ಕಳಿಸಿಯೇ ಬಿಟ್ಟರು..

ಎಲ್ಲವನ್ನೂ ನಾವೇ ತಯಾರಿ ಮಾಡಬೇಕಿತ್ತು. ಅಂಬಲಪಾಡಿಯ ಅವರ ಮನೆಯಲ್ಲೇ ಚಿತ್ರೀಕರಣ ಮಾಡುವುದೆಂದು ಮಾಡಿದ್ದು ಮೊದಲ ತೀರ್ಮಾನ.. ನಂತರ ಶ್ರೀಕೃಷ್ಣ ವಿಗ್ರಹ, ಅದಕ್ಕೆ ಅಲಂಕಾರ, ಬೆಳಕಿನ ವ್ಯವಸ್ಥೆ.. ನನಗಿದ್ದ ಆತಂಕ, ತಲ್ಲಣಗಳನ್ನು ಅರ್ಥ ಮಾಡಿಕೊಂಡವರಂತೆ ಎಲ್ಲದರಲ್ಲೂ ಬನ್ನಂಜೆಯವರು ಉತ್ಸಾಹದಿಂದ, ಬೆರಗಿನಿಂದ ಭಾಗವಹಿಸಿದರು..

ನಂತರ ಪ್ರವಚನದ ಚಿತ್ರೀಕರಣ ಆರಂಭವಾಯಿತು. ನಿರರ್ಗಳವಾಗಿ ಗಂಟೆಗಟ್ಟಲೆ ಮಾತಾಡುವ ವಿದ್ಯಾ ವಾಚಸ್ಪತಿಯವರಿಗೆ ಕೇವಲ ಐದೈದು ನಿಮಿಷಗಳ ತುಣುಕು ಪ್ರವಚನ ಮಾಡುವುದೆಂದು ಮಿತಿ ಹೇರಿದರೆ ಹೇಗಾದೀತು.. ಒಂದಷ್ಟು ಯೋಚನೆ ಮಾಡಿದರು.. ಹೇಗೆ ಪ್ರಾರಂಭಿಸಿ ಎಲ್ಲಿ ನಿಲ್ಲಿಸುವುದೆಂದು ಅವರೇ ನಿರ್ಧರಿಸಿಕೊಂಡರು.. ನನ್ನ ವೃತ್ತಿ ಬದುಕಿನ ಮೊದಲ ಆಕ್ಷನ್ ಹೇಳಿಬಿಟ್ಟಿದ್ದೆ.. ಅದೂ ಸಂಸ್ಕೃತದ ಮಹಾನ್ ಭಾಷಾಪಂಡಿತ, ಮೇಧಾವಿ, ವಿದ್ವತ್ಪೂರ್ಣ ಪ್ರವಚನಕಾರ ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಗೆ.. ಅದರ ಮಹತ್ವ ನನಗೆ ಆಗ ಗೊತ್ತಿರಲಿಲ್ಲ.. ಈಗ ನೆನಪಿಸಿಕೊಂಡರೆ ನಾನೊಬ್ಬ ಎಷ್ಟು ಭಾಗ್ಯಶಾಲಿ ಅನಿಸ್ತಾ ಇದೆ..

ನಂತರ ನಡೆದದ್ದು ಅದೊಂದು ಬೆರಗು.. ಮೂರು ದಿನಗಳಲ್ಲಿ ಮುನ್ನೂರು ದಿನಗಳ ಕಾಲ ಪ್ರಸಾರಕ್ಕೆ ಬೇಕಾಗುವಷ್ಟು ಸಾಮಗ್ರಿ ಸಿದ್ಧವಾಗಿತ್ತು.. ಕೆಲಸ ಮುಗಿಸಿ ಹೈದರಾಬಾದ್ ಗೆ ಹೊರಟೆ. ಆತ್ಮೀಯ ಬಂಧುವೊಬ್ಬನನ್ನು ಕಳಿಸಿಕೊಡುವಂತೆ ಆಶೀರ್ವದಿಸಿ ಕಳಿಸಿಕೊಟ್ಟರು.. ಈಟಿವಿಯ ಪ್ರಭಾತದ ಕಾರ್ಯಕ್ರಮಗಳು ಬನ್ನಂಜೆಯವರ ಮಾತುಗಳಿಂದಲೇ ಆರಂಭವಾದವು. ಹಲವು ವರ್ಷಗಳ ಕಾಲ ಪ್ರಸಾರವಾಗಿ ಅಪಾರವಾದ ಜನಮೆಚ್ಚುಗೆ ಪಡೆಯಿತು.. ಈಟಿವಿಯ ಕೀರ್ತಿಗೆ ಬನ್ನಂಜೆಯವರು ಕಲಶಪ್ರಾಯರಾದರು.

ಇದೀಗ, ನಮ್ಮ ನಾಡಿನ ಅಭಿಮಾನರಾದ ಶ್ರೀ ಬನ್ನಂಜೆಯವರು ಕೀರ್ತಿ ಶೇಷರಾಗಿದ್ದಾರೆ.. ಆ ದಿವ್ಯ ಚೇತನಕ್ಕೆ ನಮ್ಮ ಗೌರವದ ನಮನಗಳು.

‍ಲೇಖಕರು avadhi

December 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This