ಬಯಲು ಸೀಮೆಯ ʼಒಕ್ಕಲ ಒನಪುʼ

ಮಧುಸೂದನ ವೈ ಎನ್

ಈ ಪುಸ್ತಕ ಕೈಗೆ ಸಿಕ್ಕಿ ಒಂದೋ ಎರಡೋ ತಿಂಗಳಾಗಿರಬಹುದು. ಎರಡು ಹಗಲು ಎರಡು ಇನ್ನಿಂಗ್ಸ್‌ ಗಳಲ್ಲಿ ಖತಂ! ಓದಿದ ಎಷ್ಟೋ ಪುಸ್ತಕಗಳು ಇಷ್ಟವಾದರೂ ಕೆಲವೇ ಕೆಲವು ಪುಸ್ತಕಗಳ ಬಗ್ಗೆ ಬರೆಯಬೇಕೆಂಬ ತುರಿಕೆಯಾಗುತ್ತದೆ. ನನ್ನ ಬಾಲ್ಯ ಕಟ್ಟಿಕೊಂಡಿದ್ದು ಸಿರಾ ಮತ್ತು ಮಧುಗಿರಿಯ ನಡುವೆ ಬರುವ ಮೂರ್ನಾಲ್ಕು ಊರುಗಳಲ್ಲಿ. “ಒಕ್ಕಲ ಒನಪು”ವಿನಲ್ಲಿ ಬರುವ ಬರಹಗಳು ಮಧುಗಿರಿಯಾಚೆಯ ಬ್ಯಾಲ್ಯ ಎಂಬ ಊರಿನ ಸುತ್ತಮುತ್ತಲಿನ ಅನುಭವಗಳು. ಆ ಊರಿಗೆ ನಾ ಒಮ್ಮೆಯೂ ಕಾಲಿಕ್ಕಿಲ್ಲ. ಆದರೆ ಇಲ್ಲಿ ಬರುವ ಪ್ರತಿಯೊಂದು ಪದ ಸಾಲು ಪ್ರಸಂಗಗಳು ನನ್ನವೇ ಆಗಿವೆ, ಆ ಊರಿನ ಕಿಸಬಾಯಿ ದಾಸಯ್ಯ ನಮ್ಮೂರಿಗೂ ಪರಿಚಿತ ! ಸ್ಮೃತಿಯಿಂದ ಮಾಸಿ ಹೋಗಿದ್ದ ಎಷ್ಟೊಂದು ಸಂಗತಿಗಳು, ಬಾಯಿ ತಪ್ಪಿದ್ದ ಶಬ್ಧ ಭಂಡಾರ, ಅಲ್ಲಿನ ಗಾಳಿ ನೀರು, ಬಿಸಿಲಿನ ವಾಸನೆ! ಎಷ್ಟೊಂದು ಭಾವುಕನಾಗಿರುವೆ ಎಂದರೆ ಈ ಬರಹಗನ್ನಡ ಥೂ ಯಾತಕ್ಕೂ ಸಾಲದು ಅನಿಸ್ತಿದೆ.

ಇದೆಲ್ಲ ಸರಿ, ಪುಸ್ತಕ ಬಹುಮುಖ್ಯವಾದ ಇನ್ನೊಂದನ್ನು ಸಾಧಿಸಿದೆ ಎಂದು ಹೇಳಲು ಇಲ್ಲಿ ಬಂದೆ. ಒಂದು ಕಡೆ ನಗರ ಪ್ರದೇಶದ ನಯ ನಾಜೂಕು, ಇನ್ನೊಂದು ಕಡೆ ಮಲೆಗಾಡಿನ ಸಾಂಸ್ಕೃತಿಕ ಶ್ರೀಮಂತಿಕೆ.. ಕನಿಷ್ಠ ತೆಂಗು ಪ್ರದೇಶದಷ್ಟು ಆರ್ಥಿಕ ಬಲವೂ ಇಲ್ಲದ ಬಯಲು ಸೀಮೆಯ ಜನತೆ ಬಹಳ ಕೀಳರಿಮೆಯಿಂದ ನರಳುತ್ತಿರುತ್ತಾರೆ. ಹಾಗೆ ನಡೆಸಿಕೊಂಡಿರುತ್ತಾರೆ ಸುತ್ತಲಿನವರು. “ಒಕ್ಕಲ ಒನಪು” ಆ ಕೀಳರಿಮೆಯನ್ನು ಒಂದೇಟಿಗೆ ಒಡೆಯುತ್ತದೆ ಎಂದು ಭಾವಿಸುತ್ತೇನೆ.

ಕರವಾಳಿ ಮೂಲಕ ಪ್ರವೇಶ ಮಾಡುವ ಮಾರುತಗಳು ಮಲೆನಾಡಿಗೆ ಯಥೇಚ್ಚ ಅರೆಮಲೆನಾಡಿಗೆ ಸಾಕಾಗುವಷ್ಟು ತೆಂಗು ಪ್ರದೇಶಕ್ಕೆ ಅಲ್ಪ ಸ್ವಲ್ಪ ನೀರು ನೆರಳನ್ನು ಉಣಿಸಿ ಕಡೆಗೆ ಬಯಲುಸೀಮೆಗೆ ಮಿಗಿಸುವುದು ಇಲಿ ಉಚ್ಚೆಯಷ್ಟು ನೀರು ಪುಟಗೋಸಿಯಾಗಲ ನೆರಳು. ಬಯಲು ಸೀಮೆಯವನಾದ ನನಗೆ ಯಾವಾಗಲೂ ಈ ಬಗ್ಗೆ ಅಸಮಧಾನವಿದೆ. ನಮ್ಮಲ್ಲಿನ ಒರಟು ತನಕ್ಕೂ ಇದೇ ಕಾರಣ ಎಂದು ಎಷ್ಟೋ ಸಲ ಅನ್ನಿಸಿದ್ದಿದೆ. ನಮ್ಮ ಕಡೆಯವರ ಫೋಟೋಗಳನ್ನು ನೋಡಬೇಕು, ನಗುವುದು ಅಪರಾಧವೆಂಬಂತೆ ಮುಖ ಇಷ್ಟು ದಪ್ಪ ಗಂಟಿಕ್ಕಿಕೊಂಡಿರುತ್ತಾರೆ, ಹೆಣ್ಮಕ್ಕಳೂ ಸಹ. ಆಕ್ಚುವಲಿ ಫೋಟೋಗಳಿಗೆ ನಗುವುದು ತುಂಬ ತುಂಬ ಕೃತಕ. ಹೊರಗಿನವರ ಆರ್ಥಿಕ ದೌಲತ್ತು ಸಾಂಸ್ಕೃತಿಕ ಧಿಮಾಕನ್ನು ಎದುರಿಸಲು ನಮ್ಮ ಕಡೆಯವರು ತಮಗೆ ತಾವೆ ಒಂದು ಗೋಡೆ ನಿರ್ಮಿಸಿಕೊಂಡಿರುತ್ತಾರೆ. ನೆರಳಿನ ಭಾಗದ ಹೆಣ್ಣುಗಳನ್ನು ತಂದುಕೊಳ್ಳಲೇ ಬಾರದೆಂಬ ವಾಡಿಕೆಯಿದೆ . “ತಿಕೆಲ್ಲ ಗಾಂಚಲಿ” ಹೊಡಿತಾರೆಂದು.

ಇರಲಿ, ಈ ಪುಸ್ತಕದಲ್ಲಿ ಲೇಖಕರು ಹಿರಿಯ ಸರ್ಕಾರಿ ಅಧಿಕಾರಿಗಳಾಗಿದ್ದು ಸುಶಿಕ್ಷಿತರಾಗಿದ್ದು ಯಾವುದೆ ಅಂಜು ಅಳುಕು ಇಲ್ಲದೆ ಮುಚ್ಚುಮರೆ ಇಲ್ಲದೆ ನಮ್ಮಲ್ಲಿನ ಎಲ್ಲವನ್ನೂ ಖುಲ್ಲಂ ಖುಲ್ಲಾ ತೆರೆದಿಟ್ಟಿದ್ದಾರೆ. ಶುರುವಾತಿನಲ್ಲೆ “ನಾನೊಬ್ಬ ಹಳ್ಳಿ ಗಮಾರ, ಗೊಣ್ಣೆ ಸುರುಕ” ಎಂದು ಹೇಳಿಕೊಳ್ಳುತ್ತಾರೆ. ಎಷ್ಟೊಂದು ಸಂಗತಿಗಳನ್ನು ಶಿಲಾಶ್ಲೀಲವೆಂಬ ಬೇಧ ತೋರದೆ ಇದೆಲ್ಲ ಜನಜೀವನಗಳಲ್ಲಿ ಸರ್ವೇ ಸಾಮಾನ್ಯವೆಂದು ಸಹಜವಾಗಿಸಿದ್ದಾರೆ. (ಶೋಬನಗಳನ್ನು ಗವಾಕ್ಷಿಗಳ ಮೂಲಕ ಇಣುಕುವ ಹುಡುಗಾಟ).

ಬಯಲುಸೀಮೆಯ ಕಷ್ಟಗಳನ್ನು ಹಗೂರ ಲಹರಿ ಧಾಟಿಯಲ್ಲಿ ಓದುಗರಿಗೆ ದಾಟಿಸಿದ್ದಾರೆ. ನಮ್ಮಲ್ಲಿ ಎಷ್ಟು ಕೀಳರಿಮೆ ಇರುತ್ತದೆಂದರೆ ಶಿಕ್ಷಿತರಾಗಿ ನಗರ ಸೇರಿದ ಮಂದಿ ತಮ್ಮ ಕಡೆಯವರನ್ನು ಸಮಾರಂಭಗಳಿಗೆ ಮುಕ್ತವಾಗಿ ಕರೆಯಲು ಹಿಂಜರಿಯುತ್ತಾರೆ, ತಮ್ಮ ಪೂರ್ವದ ನಡೆ ನುಡಿ ರೀತಿ ರಿವಾಜು ಹೊಸ ಸಂಬಂಧಗಳ ಎದುರು ತೆರೆದುಕೊಳ್ಳುತ್ತದೆಂಬ ಮುಜುಗರದಿಂದ. ಅಂಥದರಲ್ಲಿ ಈ ಲೇಖಕರು ಊರಿನ ಪ್ರತಿಯೊಬ್ಬ ಪ್ರತಿಯೊಬ್ಬಳನ್ನೂ ಹೆಸರು ಸಮೇತ ಪ್ರಸಂಗಗಳ ಸಮೇತ ನೆನೆದಿದ್ದಾರೆ.

ಇಷ್ಟೊಂದು ಜನ ಹೇಗೆ ನೆನಪಿನಲ್ಲಿರಲಿಕ್ಕೆ ಸಾಧ್ಯವೆಂದು ಅಚ್ಚರಿಯಾಗುತ್ತದೆ. ಇವರೆಲ್ಲ ಬೆಂಗಳೂರಿಗೆ ಬಂದಾಗ ತಾನು ನಗರ ತೋರಿಸುವ ಉಮೇದಿನಲ್ಲಿ ಇವರು ತನ್ನನ್ನು ಹೇಗೆಲ್ಲ ಮುಜುಗರಕ್ಕೀಡುಮಾಡಿದ್ದರು (ಲಾಲ್‌ ಬಾಗಿನಲ್ಲಿ ಎರಡಕ್ಕೆ ಕೂತು ಕೊಳದಲ್ಲಿ ತೊಳೆದುಕೊಳ್ಳುವ) ಎಂಬುದನ್ನು ಮುಗ್ಧತೆ ದೃಷ್ಟಿಯಿಂದ ಸ್ವೀಕರಿಸಿರುವುದನ್ನು ಹಂಚಿಕೊಂಡಿದ್ದಾರೆ.. ಮುದ್ದೆಯಂದರೆ ಮುಖ ಮುರಿಯುವವರ ನಡುವೆ ತಂಗಳಿಟ್ಟು ಮೊಸರೇ ನನಗೆ ಶ್ರೇಷ್ಠವೆಂದು ಮುಕ್ತವಾಗಿ ಹೇಳುತ್ತಾರೆ.

ಹಿಟ್ಟಿನ ತಪ್ಪಲೆಯ ತಳ ಕೆರೆದಾಗ ಒದಗುವ ಸೀಕು ಸೀಕಲಕ್ಕಿ ನಮ್ಮ ಪಾಲಿನ ಅಂಗಡಿ ತಿನಿಸಾಗಿದ್ದುದನ್ನು ನೆನಪಿಸುತ್ತಾರೆ. ಲೇಖಕರು ಪುಸ್ತಕದಲ್ಲಿ ಎರಡು ಮೂರು ಸಲ ಒತ್ತಿ ಒತ್ತಿ ಹೇಳುವುದು, ಬಯಲು ಸೀಮೆಯಲ್ಲಿ ಅನ್ನ ಬಟ್ಟೆಗೆ ನೇರ ಇದ್ದವನೇ ಸ್ಥಿತಿವಂತನೆಂದು. ಇದು ನಿಜಕ್ಕೂ ನನ್ನ ಅಂತರಾಳದ ಮಾತು!

ಹೇಳಿಕೊಳ್ಳಲು ಸಂಕೋಚವಾಗುವಂತಹ ಸಂಗತಿಗಳಿಗೆ ಕಲಾತ್ಮಕ ರೂಪಕೊಟ್ಟು ಬಯಲು ಸೀಮೆಯವರು ಹೀಗೂ ತಮ್ಮ ಆಸ್ಮಿತೆಯನ್ನು ಕಂಡುಕೊಳ್ಳಬಹುದು ಎಂದು ʼಒಕ್ಕಲ ಒನಪುʼ ಸಮರ್ಥವಾಗಿ ತೋರಿಸಿಕೊಟ್ಟಿದೆ ಎಂದು ವಿಶ್ವಾಸದಿಂದ ಹೇಳಬಲ್ಲೆ. ಊರೆಲ್ಲ ಸುತ್ತಿ ಅಂಗಳದಲ್ಲೇ ಇದ್ದ ಮುತ್ತನ್ನು ಕಂಡುಕೊಂಡ ಹಾಗೆ ಈ ಪುಸ್ತಕ ಓದುವುದಕ್ಕೆ ಇಷ್ಟು ವರುಷಗಳಾಯಿತು ಎಂಬ ಖೇದ ಖುಷಿಗಳೊಂದಿಗೆ, ಪುಸ್ತಕ ಕಳಿಸಿಕೊಟ್ಟ ಸ್ನೇಹಿತರಿಗೂ ಮತ್ತು ಲೇಖಕರಾದ ಶ್ರೀ ಕೇಶವ ರೆಡ್ಡಿ ಹಂದ್ರಾಳ ಸರ್‌ ಗೆ ನಮನಗಳು.

‍ಲೇಖಕರು Avadhi

February 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗಾಲಿಬನ ಮೇಲಿನ ಪ್ರೀತಿಗಾಗಿ..

ಗಾಲಿಬನ ಮೇಲಿನ ಪ್ರೀತಿಗಾಗಿ..

ವಿರಹ, ವಿಯೋಗ, ವಿದ್ರೋಹ, ಪ್ರೇಮ, ವ್ಯಾಮೋಹ, ವಿಷಣ್ಣತೆ, ತೀವ್ರ ತೊಳಲಾಟ, ಹೂ ಪುಳಕ, ಬದುಕಿನ ಚೆಲುವುಗಳನ್ನು ಗಜಲುಗಳ ಮೂಲಕ ಕಟ್ಟಿ ಕೊಟ್ಟ...

ಬಗೆ ಬಗೆಯ ಬಣ್ಣಗಳ ‘ನನ್ನೊಳಗಿನ ಕವಿತೆ’

ಬಗೆ ಬಗೆಯ ಬಣ್ಣಗಳ ‘ನನ್ನೊಳಗಿನ ಕವಿತೆ’

ಪ್ರಜ್ಞಾ ಮತ್ತಿಹಳ್ಳಿ ರೈನರ್ ಮಾರಿಯಾ ರಿಲ್ಕ್ ಎನ್ನುವ ಕವಿ ಹೇಳುತ್ತಾನೆ 'ಪ್ರೀತಿ ಎನ್ನುವುದು ವ್ಯಕ್ತಿಯು ಮಾಗುವುದಕ್ಕೆ, ಮತ್ತೊಬ್ಬ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This