ಬರಹದ ಬಿಕ್ಕಟ್ಟು ಬರಹದ ಒಳಗಿದೆಯೋ, ಹೊರಗಿದೆಯೋ..?

ಬರಹದ ಬಿಕಟ್ಟು

ಎಚ್.ಎಸ್. ವೆಂಕಟೇಶಮೂರ್ತಿ

tallana

ಬರಹದ ಬಿಕ್ಕಟ್ಟು ಬರಹದ ಒಳಗಿದೆಯೋ, ಹೊರಗಿದೆಯೋ ಯೋಚಿಸುತ್ತಾ ಇದ್ದೀನಿ. ನಮ್ಮ ಆಯ್ಕೆಯ ಪ್ರಶ್ನೆಯೇ ಇಲ್ಲದೇ ನಾವೆಲ್ಲಾ ಒಂದು ದೇಶ ಕಾಲ ಪರಿಸರದಲ್ಲಿ ಹುಟ್ಟಿಬಿಟ್ಟಿದ್ದೇವೆ. ಚಳಿಗೆ ನಡುಗುವ, ಬಿಸಿಲಿಗೆ ತಪಿಸುವ, ಮಳೆಗೆ ತೋಯ್ದು ಶೀತ ನೆಗಡಿ ಉಲ್ಭಣಿಸುವ, ಅತ್ಯಂತ ಸಂಕೀರ್ಣವಾದ ಈ ದೇಹ ವ್ಯವಸ್ಥೆಯನ್ನು ಕಟ್ಟಿಕೊಂಡು, ಅದರ ಸೂಕ್ಷ್ಮ ಜಗತ್ತಿನ ಬಗ್ಗೆ ಏನೂ ಅರಿವಿಲ್ಲದೆ, ಆಹಾರ ನಿಹಾರಗಳನ್ನು ನಡೆಸುತ್ತಾ, ನಿದ್ರೆ ಎಚ್ಚರಗಳಲ್ಲಿ ತೂಗುತ್ತಾ, ಸಂತೋಷಕ್ಕೆ ಅರಳಿ, ನೋವಿಗೆ ಮುದುಡಿಕೊಳ್ಳುತ್ತಾ ಹೇಗೋ ಬದುಕು ಸಾಗಿಸುತ್ತಾ ಇದ್ದೇವೆ.

ಮನೆಯಲ್ಲೇ ಇರಲಿಕ್ಕಾಗದೆ ಅನಿವಾರ್ಯವಾಗಿ ಮನೆಯೊಳಗಿಂದ ಹೊರಗೆ ಬಂದಿದ್ದೇವೆ. ಮತ್ತೆ ಮುಳ್ಳು ತಿರುಗಿಸಿದಂತೆ ಆತಂಕದಿಂದ ಮನೆಯೊಳಗೆ ಹೊಕ್ಕು ನಿಟ್ಟುಸಿರು ಬಿಟ್ಟಿದ್ದೇವೆ. ಏಕಾಂತ, ಲೋಕಾಂತಗಳ ನಡುವೆ ನಮ್ಮ ಬುದ್ಧಿ ಭಾವ ಪ್ರಜ್ಞೆ ಊರ್ಜಿತವಾಗುತ್ತಾ ಸಂತೋಷಪಡುಬಹುದಾದ ಸಂದರ್ಭಗಳು ಅನೇಕ ಸಂಭವಿಸಿವೆ. ದುಃಖಿಸಬೇಕಾದವು ಅದಕ್ಕಿಂತ ಹೆಚ್ಚು. ಇದು ಖಾಸಗಿ ಮತ್ತು ಸಾರ್ವತ್ರಿಕ ಪ್ರಪಂಚಗಳೆರಡಕ್ಕೂ ಸಂಬಂಧಿಸಿದಂತೆ. ಸೂಕ್ಷ್ಮ ಮನಸ್ಸುಳ್ಳವರಿಗಂತೂ ಈ ಎರಡೂ ಜಗತ್ತುಗಳು ಸಮಪ್ರಮಾಣದಲ್ಲಿ ಅಲ್ಲಾಡಿಸುವ ಅನುಭವ ನೀಡುತ್ತಾ ಹೋಗುತ್ತವೆ.

ಬಹಳ ಮಂದಿ ಸುಖದ ಘಳಿಗೆಗಳನ್ನು ಸಾರ್ವಜನಿಕವಾಗಿ ಅನುಭವಿಸಲಿಕ್ಕೆ ತಯಾರಿರುತ್ತಾರೆ. ನೋವಿನ ಅನುಭವಗಳನ್ನಲ್ಲ. ಲೋಕವನ್ನು ಹಂಚಿಕೊಂಡು ಅಳುವುದು ಕಲಾವಿದರಿಗೆ (ಸಮಾಜ ಜೀವಿಗಳಿಗೆ ಎಂತೋ ಅಂತೇ) ಸ್ವಾಭಾವಿಕವಾದುದು. ಕೇವಲ ತಮ್ಮ ಮನೆ ಕುಟುಂಬ ಹೆಂಡತಿ ಮಕ್ಕಳ ಬಗ್ಗೆ ಮಾತ್ರ ಕೊರಗುತ್ತಾ ಕೂಡುವುದಾಗುವುದಿಲ್ಲ. ಅವರಿಗೆ. ಅವರು ದಾಟಲೇಬೇಕು. ಅನಿಕೇತನತ್ವ ಸಾಧಿಸಲೇಬೇಕು. ಸಾಧಿಸದೆ ಅವ ಕಲಾವಿದ ಆಗಲಾರ. ಹುಟ್ಟಿಗೆ ಒಂದು ಕೇಂದ್ರವಿದೆ. ಆದರೆ ಬೆಳವಣಿಗೆಗಲ್ಲ.

ಮೂಲದ ಮಣ್ಣಿನ ಸತ್ವಕ್ಕೆ ಬಾಯೂರಿಯೇ ಬಳ್ಳಿಯೂ ಚಪ್ಪರದಗಲಕ್ಕೂ ಹರಡಿಕೊಳ್ಳಬೇಕಾಗುತ್ತದೆ. ಹೀಗೆ ಕಲಾವಿದರು ಜಾತಿಯಲ್ಲಿದ್ದೂ ಜಾತಿಯನ್ನು ದಾಟುತ್ತಾರೆ. ಭಾಷೆಯ ಮಿತಿಯಲ್ಲಿದ್ದುಕೊಂಡೇ ಭಾಷೆಯ ಗಡಿರೇಖೆಗಳನ್ನು ದಾಟುತ್ತಾರೆ. ದೇಶಿಯಲ್ಲಿ ನೆಲೆಸಿಯೂ ಸಾರ್ವದೇಶಿಕರಾಗುತ್ತಾರೆ. ಪಂಪ ತನ್ನ ಕಾವ್ಯದಲ್ಲಿ ಇಂಥ ನಿಲುವೊಂದನ್ನು ಪ್ರಕಟಿಸಿದ್ದಾನೆ. ಕವಿರಾಜಮಾರ್ಗಕಾರನ ಪ್ರಾಂತೀಯತೆ ವಿಶ್ವವನ್ನು ಒಳಗೊಳ್ಳುವುದು ಹೀಗೆ. ಕುಮಾರವ್ಯಾಸ ಗದುಗಿನ ವೀರನಾರಾಯಣನ ಸನ್ನಿಧಿಗೆ ವಿಶ್ವಾತ್ಮಕತೆಯನ್ನು ಬಿಜಯಗೊಳಿಸಿದ್ದು ಹೀಗೆಯೇ.ಬೇಂದ್ರೆ ಕನ್ನಡದ ಕನ್ನಡಿಯಲ್ಲಿ ಜಗತ್ತಿನ ಪ್ರತಿಬಿಂಬ ಹಿಡಿಯಲಿಕ್ಕೆ ಹೊರಟಿದ್ದರ ಹಿನ್ನೆಲೆಯಲ್ಲಿ ಇರುವುದೂ ಇದೇ ಮನೀಷೆಯೇ.

ನಾನು ಅರವತ್ತೈದು ವರ್ಷಗಳ ಹಿಂದೆ ಅರೆ ಮಲೆನಾಡಿನ ಒಂದು ಸಣ್ಣ ಹಳ್ಳಿಯಲ್ಲಿ ಆಕಸ್ಮಿಕವಾಗಿ ಹುಟ್ಟಿದೆನಾಗಿ ಅಲ್ಲಿಯ ವಿಶಿಷ್ಟವಾದ ಕನ್ನಡ ಡೈಲೆಕ್ಟ್ ಒಂದು ನನ್ನ ತಾಯ್ಗನ್ನಡವಾಯಿತು. ಅಲ್ಲಿ ಮಲೆನಾಡಿನ ವಿಳಂಬಿತ ಲಯ, ನಯಗಾರಿಕೆ ಇರುವಂತೆ, ಒಮ್ಮೊಮ್ಮೆ ಬಯಲುಸಿಮೇಯ ಗದ್ಯಾತ್ಮಕ ಧಾಷ್ಟ್ರ್ಯ, ದಬ್ಬಾಳಿಕೆಗಳು ಲಗಾಯಿಸಿಕೊಳ್ಳುವುದ ಉಂಟು. ಶಿವಮೊಗ್ಗೆ ನಮಗೆ ಹತ್ತಿರ; ದಾವಣಗೆರೆ ದೂರವೇನಲ್ಲ. ಇತ್ತ ಕಲ್ಲು ಬಂಡೆಯೊಟ್ಟಿದ ಚಿನ್ಮೂಲಾದ್ರಿ ಪರ್ವತಶ್ರೇಣಿ, ಅತ್ತ ಜೋಳದ ಹಾಳಿನ ಕಾಡು, ಕುಕ್ಕೋಡಮ್ಮನ ಗುಡ್ಡ, ಸಹ್ಯಾದ್ರಿಯ ಹಸಿರು ಬೆಟ್ಟಗಳ ಸಾಲು ಸಾಲು.

ಎರಡನ್ನೂ ನೋಡುತ್ತಾ ಬೆಳೆದದ್ದು ನಾನು. ನಮ್ಮ ಹಳ್ಳಿಯಲ್ಲಿ ಇದ್ದುದು ಎರಡೇ ನಮ್ಮವರ ಮನೆ. ಹೀಗಾಗಿ ನಮ್ಮವರಾದದ್ದು ನಮ್ಮವರಲ್ಲದವರೇ. ಬೆಳ್ಳುಳ್ಳಿಯ ಘಾಟು ಮೂಗಿಗೆ ಕಣ್ಣಿಗೆ ನಾಲಗೆಗೆ ಹಿತವಾದದ್ದು ಹಾಗೆ. ನಮ್ಮ ಮತ್ತು ನಮ್ಮ ಪಕ್ಕದ ಮನೆಯವರು ಬೇರೆ ಬೇರೆ ಜಾತಿಯವರಾಗಿರಬಹುದು. ಆದರೆ ನಮ್ಮ ಭಾಷೆಯ ನಡುವೆ ಯಾವುದೇ ಫರಕಿರಲಿಲ್ಲ. ನಮ್ಮ ಮನೆಯಲ್ಲಿ ಈವತ್ತೂ ನಡೆಯುವುದು ಬಿಚ್ಚೋಲೆಯಂಥ ಅಸಡ್ಡಾಳ ಭಾಷೆಯೇ. ಮಸಿದೀಯಲ್ಲಿ ಚೀಟಿ ಕಟ್ಟಿಸಿಕೊಳ್ಳುತ್ತಾ, ಕೆಂಚಮ್ಮನ ಗುಡಿಯಲ್ಲಿ ತಾಯಿತ ತೂಗಿಕೊಳ್ಳುತ್ತಾ, ಈಶ್ವರನ ಗುಡಿಯ ಮುಂದೆ ಜೋಡಟ್ಟದಲ್ಲಿ ಗೊಂಬೆ ಮೇಳ ನೋಡುತ್ತಾ, ಕೆಳಗೇರಿಯಲ್ಲಿ ಹರಿದ ಹಳದಿ ನೀರ ದಾಟುತ್ತಾ ನಾನು ಬೆಳೆದದ್ದು. ಎಲ್ಲವನ್ನೂ ಒಳಗೊಳ್ಳುವುದು ಹೀಗೆ ನನಗೆ ಸಹಜವಾಯಿತು.

ನನಗೆ ಹೊರಗಿನದು ಎನ್ನುವುದು ಇರಲಿಲ್ಲ. ನನ್ನ ಹಳ್ಳಿಯ ಸಮಸ್ತ ಬಾಳಿನಲ್ಲಿ ಎದೆಯಲ್ಲಳುಕದಂತೆ ಬೆರೆತು ಬೆಳೆಯಲಿಕ್ಕೆ ಸಾಧ್ಯವಾದದ್ದು ನನ್ನ ಪುಣ್ಯ. ದೇವರ ದಯೆಯಿಂದ ಮಡಿಗಾರಿಕೆಯಲ್ಲಿ ನಾನು ಬೆಳೆಯಲಿಲ್ಲ. ಮೈ ಮನಸ್ಸು ನಿಜವಾಗಿಯೂ ಬೆಳೆಯುವುದು ಮೈಲಿಗೆಯಲ್ಲೇ. ಮುಟ್ಟಬೇಡ ಅನ್ನುವುದಕ್ಕಿಂತ ಮುಟ್ಟುವುದೇ ಬಾಲ್ಯದಲ್ಲಿ ನಮ್ಮ ಹಳ್ಳಿಯಲ್ಲಿ ರೋಚಕ ಆಟವಾಗಿತ್ತು. ಎಂಜಲು ಗುಬ್ಬಿ ಮಾಡಿಕೊಂಡು ನಾವು ಹಲವು ಜಾತಿಯ ಹುಡುಗರು ಒಂದೇ ಗಿಣಿಮೂತಿಕಾಯಿ ತಿನ್ನುತ್ತಾ ಇದ್ದೆವು. ಹೀಗೆ ಮಡಿ ಎಂಬ ಮಹಾ ವ್ಯಾಧಿಯಿಂದ ಪಾರಾಗಲಿಕ್ಕೆ ನಮ್ಮ ಹಳ್ಳಿ ನಮಗೆ ತಾಯ್ಬಲವಾಗಿ ನಿಂತಿತು.

ಒಳಗೆ ಮತ್ತು ಹೊರಗೆ ಆಗ ಬಿಕ್ಕಟ್ಟುಗಳಿರಲೇ ಇಲ್ಲ ಎನ್ನುವುದಿಲ್ಲ ನಾನು. ಆದರ ಆ ಬಿಕ್ಕಟ್ಟುಗಳು ಮುರಿದ ಮುರಿದು ನಾವು ಸಂತೋಷ ಪಡುತ್ತಿದ್ದೆವು. ಈರಜ್ಜಿಯ ಮಾಲ್ದಿ ನನಗೆ ಪ್ರಿಯವಾಗಿತ್ತು. ಚಪಾತಿ ಎಂಬುದನ್ನು ನಾನು ಕಂಡೆ ಇರಲಿಲ್ಲ. ರೊಟ್ಟಿ ಮುದ್ದೆಯೇ ನಮ್ಮ ಗಟ್ಟಿ ಊಟ. ಹಣ್ಣು ಮತ್ತು ಬ್ರೆಡ್ಡು ಕೇವಲ ನಮ್ಮ ಪಥ್ಯದ ಆಹಾರಗಳಾಗಿದ್ದವು. ಯಾರ ಮನೆಯಲ್ಲಾದರೂ ಹಣ್ಣು ಬ್ರೆಡ್ಡು ತಂದರೆ ಯಾರ ಮೈಗೋ ಪಾಪಾ ಹುಷಾರಿಲ್ಲ ಎಂದು ಹೇಳುತ್ತಿದ್ದ ಕಾಲವದು.

ಯಾವುದು ಸ್ವ ಯಾವುದು ಪರ ಎನ್ನುವುದು ಗೊಂದಲವಾಗುವಷ್ಟು ಹೊಕ್ಕಾಡುತ್ತಿದ್ದ ಪರಿಸರದಲ್ಲಿ ನಾನು ಬೆಳೆದದ್ದು. ಯಾರ ಮನೆಯ ಸಾವೂ ಊರಿನ ಸೂತಕವಾಗುತ್ತಿತ್ತು. ಯಾರ ಮನೆಯ ಮದುವೆಯೂ ಎಲ್ಲರ ಮನೆಯ ತಪ್ಪಲೆಯಲ್ಲಿ ಬೆಲ್ಲದ ನೀರು ಕುದಿಸುತ್ತಾ ಇತ್ತು. ಯಾರದೋ ಮನೆಯಲ್ಲಿ ಮದುವೆಯೆಂದರೆ ಬೆಳಗಾತ ಓಲಗ ಊದಿಸಿಕೊಳ್ಳುತ್ತಾ ಹತ್ತು ಮಂದಿ ಧಡ ಧಡ ಎಲ್ಲರ ಮನೆಗೂ ಧಾಳಿಯಿಕ್ಕುತ್ತಿದ್ದರು. ನಾವು ಖುಷಿಯಿಂದ ಓಡೋಡಿ ಬಂದು ಬಟ್ಟಲು ತಟ್ಟೆ ಮೊರ ಇಡುತ್ತ ಇದ್ದೆವು. ಅವರಲ್ಲೊಬ್ಬರು ಬಟ್ಟಲಿಗೆ ಎಣ್ಣೆ ಸುರಿಯುತ್ತಾ ಇದ್ದರು. ತಟ್ಟೆಗೆ ಬೆಲ್ಲದಚ್ಚು. ಮೊರಕ್ಕೆ ಅಕ್ಕಿ ಬೇಳೆ.

ಹೀಗೆ ಮನೆ ಮನೆಗೆ ಪಡಿ ಬರುತ್ತಾ ಇತ್ತು. ಗೌಡರ ಮನೆಯಲ್ಲಿ ಮದುವೆಯಾದರೆ ನಮ್ಮ ಮನೆಯಲ್ಲಿ ಪಾಯಸ ಕುದ್ದೇ ಕುದಿಯುತ್ತಾ ಇತ್ತು. ವರ್ಷಕ್ಕೊಮ್ಮೆ ಊರಲ್ಲಿ ಅಲಾಬಿ ಹಬ್ಬ ಮಾಡುತ್ತಾ ಇದ್ದರು. ಜಬ್ಬರ ಸಾಬರು ತಮ್ಮ ಮಂದಿಯನ್ನು ಮುಂದಿಟ್ಟುಕೊಂಡು ಮನೆಮನೆಗೂ ಸಕ್ಕರೆ ಬೀರಲಿಕ್ಕೆ ಬರುತ್ತ ಇದ್ದರು. ಇಸಮಲ್ಲಣ್ಣ ಆ ಗುಂಪಿನಲ್ಲಿ ಮುಂದಿರುತ್ತಿದ್ದ. ಅವನು ಬೊಂಕರುಗಾಲಲ್ಲಿ ಬರುವ ಚಂದವನ್ನು ನೀವು ನೋಡಿಯೇ ಖುಷಿಪಡಬೇಕು. ಇಸ್ಮಾಯಿಲ್ ಸಾಹೇಬ ಎನ್ನುವುದು ನಮ್ಮ ಹಳ್ಳಿಗರ ಬಾಯಲ್ಲಿ ಇಸಮಲ್ಲಣ್ಣ ಆಗಿದೆ ಎಂದರೆ ನೀವು ನಂಬಬೇಕು.

ಹೀಗೆ ಮತ್ತೆ ಭಾಷೆಯ ಮೂಲಕ ನಾವು ಹೊರಗಿನದನ್ನು ಒಳಗು ಮಾಡಿಕೊಳ್ಳುವುದು. ಮ್ಯಾಕ್ಸ್ ಮುಲ್ಲರ್ ಮೋಕ್ಷಮಲ್ಲಾರಿಭಟ್ಟ ಆಗಿದ್ದಕ್ಕಿಂತ ಇದು ಮಹತ್ವದ್ದು. ಯಾಕೆಂದರೆ ನಮ್ಮ ಹಳ್ಳಿಗರು ಅಬುದ್ಧಿಪೂರ್ವಕವಾಗಿಯೇ ತಮ್ಮ ಸ್ವಾಯತ್ತೀಕರಣದ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಕ್ಯಾಂಡಲ್ ಹೇಗೆ ಕಂದೀಲು ಆಗುತ್ತದೆ ನೋಡಿ. ಬಾಬ ಹಾಗೆ ಬಾಬಣ್ಣ ಆಗಿದ್ದಾನೆ ನೋಡಿ. ನಮ್ಮ ಕಡೆ ಬಾಬಣ್ಣ ಎಂಬ ಹೆಸರು ಹಿಂದುಗಳಿಗೆ ಬಹಳ ಪ್ರಿಯವಾದ ಹೆಸರು. ಮುಸ್ಲಿಮ್ ದೇವರು, ಗುರುಗಳು ನಮ್ಮ ಮನೆಯೊಳಕ್ಕೆ ಬಂದಿದ್ದಾರೆ. ಮಸೀದಿಗೆ ಹರಸಿಕೊಂಡವರು ಮಕ್ಕಳನ್ನು ಪಡೆದಾಗ ಹೀಗೆ ತಮ್ಮ ಮಗುವಿಗೆ ಮುಸ್ಲಿಮ್ ಹೆಸರು ಇಡುತ್ತಾರೆ. ನಮ್ಮ ಸಂಬಂಧಿಗಳಲ್ಲೇ ಹೀಗೆ ಒಬ್ಬ ಬಾಬಣ್ಣ ಇದ್ದಾರೆ.

ಈ ಹಾಳಾದ ಬಿಕ್ಕಟ್ಟು ಎಲ್ಲಿ ಶುರುವಾಯಿತು ಹಾಗಾದ್ರೆ ಎಂದು ಯೋಚಿಸುತ್ತಾ ಇದ್ದೀನಿ. ನಿತ್ಯ ಬಲಿಯೂಟ ಬಯಸುವ ಭೈರೇಶ್ವರ ನಮ್ಮ ಅಜ್ಜನ ಮನೆದೇವರು! ಅವರ ತಂದೆಯ ಹೆಸರು ಮಲ್ಲಪ್ಪ ಅಂತ. ಅವರ ಸೋದರ ಸೊಸೆ ಮೊನ್ನೆ ಮೊನ್ನೆ ತೀರಿಕೊಂಡ ಸಾಬಜ್ಜಿ. ಎಲ್ಲಿ ಶುರುವಾಯಿತು ಈ ಬಿಕ್ಕಟ್ಟು? ಹುಟ್ಟಿನಿಂದಲೂ ನೋಡಿಯೇ ಇರದ ಒಬ್ಬನನ್ನು ನಿಷ್ಕಾರಣ ದ್ವೇಷಿಸುವ ದುಷ್ಟ ಪ್ರಾರಬ್ಧ. ಒಬ್ಬರನ್ನೊಬ್ಬರು ಚುಚ್ಚಿ ಚುಚ್ಚಿ ಖುಷಿಪಡುವ ಸಂಕಟಾನಂದ ಸ್ವಭಾವ? ಈ ಸಾರ್ವತ್ರಿಕ ಬಿಕ್ಕಟ್ಟಿನಿಂದ ತುಂಬ ನೋಯುತ್ತಿದ್ದೇನೆ ನಾನು. ಊರ ಗೋಳು ಕಟ್ಟಿಕೊಂಡು ಕಾಸಿಂ ಸಾಬಿ ಬಡವಾದನಂತೆ. ಈ ಕಾಸಿಮಸಾಬ್ ನನ್ನ ಅಜ್ಞಾತ ಬಂಧುವಾಗಿದ್ದೇನೆ. ಡಿಸೋಜಮ್ಮ ಎಂಬುವರು ನಮ್ಮೂರಿನ ಆಸ್ಪತ್ರೆಗೆ ನಾನಿನ್ನೂ ಚಿಕ್ಕವನಾಗಿದ್ದಾಗ ಬಂದದ್ದು ನೆನಪಿದೆ ನನಗೆ. ಅವರ ಮಗ ಫಿಲಿಪ್ಪು ನಾನು ಗಳಸ್ಯ ಕಂಠಸ್ಯ ಗೆಳೆಯರಿದ್ದೆವು. ಈ ಫಿಲಿಪ್ಪು ನಮ್ಮೂರಿಗೆ ಕ್ರಿಕೆಟ್ಟು ತಂದ.

ನಮ್ಮ ಬೀದಿಯಲ್ಲೇ ಈ ಕ್ರೈಸ್ತೀಯ ಕುಟುಂಬ ಮನೆಯೊಂದನ್ನು ಬಾಡಿಗೆಗೆ ಹಿಡಿದಿತ್ತು. ಪ್ರತಿ ಭಾನುವಾರ ಸಂಜೆ ಅವರು ಮೇಣದಬತ್ತಿ ಹಚ್ಚಿಟ್ಟು, ಮೊಣಕಾಲು ಮಡಿಸಿ ಕೂತು ದೇವರ ಪ್ರಾರ್ಥನೆ ಮಾಡುತ್ತಾ ಇದ್ದರು. ಈ ಹೊಸಬಗೆಯ ಪ್ರಾರ್ಥನೆ ನಮ್ಮ ಕುತೂಹಲ ಕೆರಳಿಸಿತ್ತು. ನಾವು ಅವರ ಮನೆಯ ಜಗಲಿ ಹತ್ತಿ ಕಿಟಕಿಯಲ್ಲಿ ಇಣುಕಿ ನೋಡುತಾ ಇದ್ದೆವು. ಡಿಸೋಜಮ್ಮ ಒಳಗೆ ಬನ್ನಿ ಎಂಬಂತೆ ಕಣ್ಸನ್ನೆ ಮಾಡುತಾ ಇದ್ದರು. ನಾವು ಮೆಲ್ಲ ಮೆಲ್ಲಗೆ ಒಳಗೆ ಹೋಗಿ ಕುತೂಹಲದಿಂದ ಅವರ ದೇವರನ್ನು ನೋಡುತ್ತಾ ಪ್ರಾರ್ಥನೆಯನ್ನು ಕೇಳುತ್ತಾ ಕೂತುಕೊಳ್ಳುತ್ತಿದ್ದೆವು.

ಫಿಲಿಪ್ಪು ನೆನಪಿಗೆ ಬರುತ್ತಾ ಇದ್ದಾನೆ ಈಗ. ಮುದುಕನಾಗಿ ಅವನೂ ಎಲ್ಲೋ ನನ್ನಂತೆಯೇ ಗುಳಿಗೆ ನುಂಗುತ್ತಾ ಜೀವನ ಸಾಗಿಸುತ್ತಾ ಇದ್ದಾನು. ಅವನಿಗೂ ಮೊಮ್ಮಕ್ಕಳು ಆಗಿ ಅವು ಹೊರಕ್ಕೆ ಹೋದಾಗ ಶಹರದ ಯಾವುದೋ ಹೊಸ ಬಡಾವಣೆಯ ಮನೆಯೊಂದರಲ್ಲಿ ಶತಪಥ ಹಾಕುತ್ತಾ ಅವನೂ ನನ್ನಂತೆಯೇ ಆತಂಕ ಪಡುತ್ತಾ ಇರಬೇಕು. ಫಿಲಿಪ್ಪೇ ನಿನಗೆ ನನ್ನ ನೆನಪಿದೆಯೇನಯ್ಯಾ? ಹಸೀ ಹುಣಸೆಬೀಜ ನೀನು ನನಗಾಗಿ ಹುರಿದು ಕೊಟ್ಟಿದ್ದೆ. ನೆನಪಿದೆಯೇನಯ್ಯಾ ನಿನಗೆ? ಫಿಲಿಪ್ಪೂ ನಿನಗೆ ಬ್ಲಡ್ ಪ್ರೆಸ್ಸರ್ರು ಷುಗರ್ರು ಇಲ್ಲವಷ್ಟೇ? ಅಥವಾ ನೀನೂ ನನ್ನಂತೆಯೇ ದಿನಾ ದಿನಾ ಮಾತ್ರೆಗಳನ್ನ ನುಂಗುತ್ತಾ ಕೂತಿದೀಯೋ?

ಮೊನ್ನೆ ಮೊನ್ನೆ ನಿಮ್ಮ ಚಚರ್ುಗಳ ಮೇಲೆ ಯಾರೋ ಕಿಡಿಗೇಡಿಗಳು ಕಲ್ಲೆಸೆದು ರಾದ್ಧಾಂತ ಮಾಡಿದರಲ್ಲ. ನೀನಾವಾಗ ಸಿಕ್ಕಿದ್ದರೆ ನಿನ್ನ ಕಣ್ತಪ್ಪಿಸಿ ಓಡಿಹೋಗುತ್ತಾ ಇದ್ದೆ ನಾನು. ಅಷ್ಟು ನಾಚಿಕೆಯಾಗಿತ್ತು ನನಗೆ! ನಿನಗೂ ಹೀಗೆ ಆಗಾಗ ನಾಚಿಕೆ ಆಗುವುದುಂಟಾ ಮಾರಾಯ? ಕಳೆದ ತಿಂಗಳು ಅದ್ಯಾಯರ್ಾರೋ ನೆರೆದೇಶದಿಂದ ಬಂದು ಮುಂಬಯ್ಯಲ್ಲಿ ಯಾಯರ್ಾರಮ್ಮೋ ಕೊಂದು ತಾವೂ ಕೊನೆಗೆ ರಕ್ತಚೆಲ್ಲುತ್ತಾ ಎಡ್ಡಂಸೆಡ್ಡಂ ಕೈಕಾಲು ಚೆಲ್ಲಿ ಬಿದ್ದಿದ್ದರಲ್ಲ, ಆಗ ಈ ಮಟ್ಟಕ್ಕಿಳಿದನಲ್ಲ ಮನುಷ್ಯ ಅಂತ ನನಗೆ ಮುಖಮುಚ್ಚಿಕೊಳ್ಳುವಷ್ಟು ನಾಚಿಕೆಯಾಗಿತ್ತು. ನಿನಗೂ ಹಾಗೆ ನಾಚಿಕೆ ಆಗಿರಬೇಕು, ಯಾರಿಗೂ ಕಾಣದಂತೆ ನೀನೂ ನನ್ನಂತೇ ಗುಟ್ಟಾಗಿ ಕಣ್ಣೊರೆಸಿಕೊಂಡಿರಬೇಕು. ಹೌದು ತಾನೇ?

ಇಸಮಲ್ಲಣ್ಣ ಫೋನ್ ಮಾಡಿದ್ದ ನನಗೆ. ಬೀದಿಯಲ್ಲಿ ತಲೆಯೆತ್ತಿ ಓಡಾಡುತಾ ಇದ್ದೇ ನಾನು. ಯಂಟೇಶಣ್ಣಾ… ಈ ನನ್ನ ಮಕ್ಕಳು ನಾನು ತಲೆ ತೆಗ್ಗಿಸೋ ಹಂಗೆ ಮಾಡಿಬಿಟ್ಟರು ಕಣಪ್ಪಾ ಎಂದು ಅಳುದನಿಯಲ್ಲಿ ಅವ ಮಾತಾಡಿದ್ದು ನನ್ನ ಕಿವಿ ಕೊರೆಯುತ್ತಾ ಇದೆ.

ಎಲ್ಲಿಂದ ಬಂತು ಈ ಹಾಳಾದ ಬೇವಾಸರ್ಿ ಬಿಕ್ಕಟ್ಟು? ಯಾರನ್ನು ಕೇಳಲ್ಲಿ ನಾನು. ನಮ್ಮ ಕೆಂಚವ್ವನನ್ನಾದರು ಕುರುತಪ್ಪಣೆ ಕೇಳಬೇಕು. ನಮ್ಮ ರಾಜಕೀಯದ ಜನಕ್ಕೆ ಇದರ ಮೂಲ ಚೊಲವೆಲ್ಲಾ ಗೊತ್ತು ಅನ್ನುತ್ತಾರೆ. ಅವರು ಬಾಯೇ ಬಿಡಲೊಲ್ಲರು. ನಮ್ಮ ಲಿಂಗಪ್ಪ ತನ್ನ ಗುಡಿಯಲ್ಲಿ ಕಲ್ಲು ಗುಂಡಿನಂಗೆ ತಣ್ಣಗೆ ಕೂತಿದ್ದಾನೆ. ಅಲ್ಲಾ ಎಲ್ಲೂ ಕಾಣುತ್ತಿಲ್ಲ. ಏಸುಗುರುಗಳಂತೂ ಶಿಲುಬೆಯಿಂದ ಕಿತ್ತುಕೊಂಡು ಕೆಳಕ್ಕೆ ಬರುವ ಹಂಗೇ ಇಲ್ಲ ಪಾಪ! ತಾರು ಮಾರು ಮಾಡುತ್ತ ಗಡಿಬಿಡಿಯಿಂದ ಏನೇನೋ ಮಂತ್ರಗಿಂತ್ರ ಒಟಗುಟ್ಟುತ್ತಾ ದುಡು ದುಡು ಓಡಾಡುತ್ತೀರೋ ನಮ್ಮ ಜಾತೀವಾರು ಪೂಜಾರಿಗಳು ಲೌಡ್ ಸ್ಪೀಕರಿನ ಮೌತುಪೀಸು ಬಾಯಲ್ಲಿ ಸಿಕ್ಕಿಕೊಂಡಿರೋ ಕಾರಣವಾಗಿ ದೂಸರಾ ಮಾತಾಡುತ್ತಿಲ್ಲ ಮಹರಾಯ! ನಾನಾದರೂ ಏನು ಬರೆಯಲಿ? ಏನು ಮಾತಾಡಲಿ ಈಗ?

‍ಲೇಖಕರು avadhi

July 16, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

4 ಪ್ರತಿಕ್ರಿಯೆಗಳು

 1. ಶೆಟ್ಟರು (Shettaru)

  ವೆಂಕಟೇಶಮೂರ್ತಿಗಳೆ,

  ಇವತ್ತಿಗೂ ನನ್ನ ಆತ್ಮೀಯ ಗೆಳೆಯ ಇರ್ಫಾನ (ಎಲ್ಲರಿಗೂ ಇರಪಣ್ಣ, ಇರಪಾಕ್ಷಿ), ಅವರಪ್ಪ ಮುಕುಟಸಾಬ ನನಗೆ ಕಾಕಾ, ಅವರವ್ವ ನನ್ನ ಚಿಗವ್ವ.

  ನಮ್ಮವ್ವ ನಾನು ಮಗುವಾಗಿದ್ದಾಗ ಬರಿ ಅಳುತ್ತಿದ್ದೆ ಎಂದು ಅಲಾಬ ದೇವರಿಗೆ ಸಕ್ಕರೆ ಒದಿಸಿದ್ದಳು, ಇವತ್ತಿಗೂ ನಮ್ಮ ಮನೆಯ ಸುತ್ತಮುತ್ತಲಿನ ಮಕ್ಕಳು ಬಹಳ ಅಳಲಾರಂಭಿಸಿದರೆ ಅವುಗಳನ್ನು ಅಲಾಬ ದೇವರ ಗುಡಿಗೆ ಕರೆದುಕೊಂಡು ಹೋಗುತ್ತಾಳೆ.

  ನನಗೆ ನೌಕರಿ ಸಿಕ್ಕು ಸಂಬಳ ಬಂದಾಗ ನಮ್ಮ ದೇವರಿಗೆ ಶ್ಯಾವಿಗೆ ಪಾಯಸದ ಎಡೆ ಮಾಡಿದರೆ, ಅಲಾಬನಿಗೆ ಸಕ್ಕರೆ ಎಡೆ. ಇವತ್ತಿಗೂ ಝಂಡಾಗಲ್ಲಿಗೆ ಹೋದ್ರ “ಯಾಕ್ಬೆ ಯಕ್ಕಾ ಆರಾಮಾ, ಮಾಮಾ ಹೆಂಗದಾನ” ಅನ್ಕೋತನ ಹೋಗುದು.

  ಹುಸನ್ಯಾ ನಾನು ಕದ್ದು ಒಂದೇ ಸಿಗರೇಟು ಸೇದಿದ್ದು, ನನಗೆ ಚರ್ಚಿಗೆ ಕರಕೊಂಡು ಹೋಗಿ “ಕೇಕ್” ತಿನ್ನಿಸಿದ ಡೇವಿಡ್ ವಿಜ್ಯಾ….ಒಬ್ಬರಾ..ಇಬ್ಬರಾ…

  ಯಾಕೆ ಹಿಗಾಯ್ತು ಅನ್ನುವುದಕ್ಕಿಂತ, ನಾವೆಲ್ಲ ಯಾಕೆ ಹೀಗಾದೇವು ಅನ್ನುವುದು ನನಗೆ ತಿಳಿವಲ್ದು.

  -ಶೆಟ್ಟರು

  ಪ್ರತಿಕ್ರಿಯೆ
  • Berlinder

   ಪ್ರಿಯ ಶೆಟ್ಟರು,
   ನಿಮ್ಮಾಲೋಚನೆಗಳು ನನ್ನೊಳು
   ಶೃಷ್ಟಿಸಿದವು ಸಮಾನಾಂತರ ಭಾವನೆಗಳು.
   ಅವು ಬಹಳ ಹಳೆಯವು ಕಳೆದ ಕಾಲದೊಳು
   ಕನಸುಗಳಂತೆ ಉಳಿಯದೆ ಆಗಿದ್ದವು ಹಾಳು
   ಹಿಡಿದಂತೆ ಚಿತ್ರಪಟ ನಿಮ್ಮ ಲೇಖನ ಸ್ಪುಟ
   ಅದೊಂದು ವಿಚಿತ್ರ ಜೀವನದಾಟ
   – ವಿಜಯಶೀಲ

   ಪ್ರತಿಕ್ರಿಯೆ
 2. Berlinder

  ಮಾನ್ಯ ವೆಂಕಟೇಶಮೂರ್ತಿ
  ನಿಮ್ಮ ಪೂರ್ವ ನೆನಪುಗಳಿಗಾರತಿ.
  ಲೇಖನದಲಿ ವರ್ಣಿಸಿದ ಪೂರ್ವಾನುಭವಗಳು,
  ಕೆಲವು ನನ್ನವು ಅನಿಸಿದ ಹಳೆಯ ನೆನಪುಗಳು
  ಕೇವಲ ಗಳಿಗೆಗಳೆರಡು ಮನಸಿನಾಳದಲಿ
  ವಿವ್ವಲ ಮರುದರ್ಶನವಾಯಿತು ದುಗುಡದಲಿ
  ಹಾಗೆ ಹಳೆಬಾಳಿನ ಹಗಲಗನಸು ಕಂಡೆ
  ಹೇಗಿತ್ತು ಹೇಗುರುಳಿತು ಜೀವನದಾರದುಂಡೆ!!!
  – ವಿಜಯಶೀಲ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: