
ರೇಣುಕಾ ಕೋಡಗುಂಟಿ
ದೇಶ ಭಕ್ತರಾಗಲು
ಬಲು ಸುಲಭದ ಕಾಲವಿದು
ಹೊತ್ತಿಗೆಗಳನೆಲ್ಲ
ಗೆದ್ದಲು ಮೆಯ್ಯಲು ಬಿಟ್ಟು
ಫ್ರೀಯಾಗಿ ಸಿಗುವ
ವೈ ಫೈ ನ ಜಾಲವ ಹಿಡಿದು
ಹುತ್ತದೊಳಗೆ ಕೈಯನು ಹಾಕಿ
ಬೆರಳ ಸವೆಸುತ್ತಾ
ಕುಳಿತುಬಿಡಿ
ದೇಶ ಭಕ್ತರಾಗಲು
ಬಲು ಸುಲಭದ ಕಾಲವಿದು
ಮಂದಿರ ಮಸೀದಿಗಳು
ಎದುರುಬದುರಾದಲ್ಲಿ
ಮಚ್ಚು ಮಸೆದು
ಮತ್ತಿನ ಅಮಲಿನಲ್ಲಿ
ನೆತ್ತರದ ಸುಖವುಂಡು
ಕೆಂಪು ತಿಲಕವಿಟ್ಟುಬಿಡಿ

ದೇಶ ಭಕ್ತರಾಗಲು
ಬಲು ಸುಲಭದ ಕಾಲವಿದು
ಅಮಾಯಕರ ಮೇಲೆ
ಹಲ್ಲೆಯಾಗಲಿ, ಲೂಟಿಯಾಗಲಿ
ಅತ್ಯಾಚಾರವೇ ಆಗಲಿ
ಸರದಿ ಸಾಲಿನಲ್ಲಿ ನಿಂತು
ನೆರಳು ಸರದಾಡದಂತೆ
ಇದ್ದುಬಿಡಿ
ದೇಶ ಭಕ್ತರಾಗಲು
ಬಲು ಸುಲಭದ ಕಾಲವಿದು
ಹಗಲು ದರೋಡೆಕೋರರ
ಆಗರದಲ್ಲಿ ಹೆಗ್ಗಣಗಳು
ಸತ್ತು ನಾರುತ್ತಿದ್ದರೂ ಸರಿ
ಸ್ವಚ್ಛತೆಯ ಹೆಸರಿನಲ್ಲಿ
ಬಚ್ಚಲ ನೀರ ಹರಿಸಿದವರಿಗೆ
ಬಯಲಲ್ಲಿ ಶೌಚಕ್ಕೆ ಕುಳಿತವರಿಗೆ
ಮಣ್ಣಿನ ತೊಟ್ಟಿಲ ಕಟ್ಟಿಬಿಡಿ

ದೇಶ ಭಕ್ತರಾಗಲು
ಬಲು ಸುಲಭದ ಕಾಲವಿದು
ಬತ್ತಿದ ನೆಲದಲ್ಲಿ
ಬಿತ್ತಿ ಬೆಳೆವವರು
ಬಸಿರ ಹೊರೆಯಲಾಗದೆ
ಅಸುನೀಗಿದರೂ ಸರಿ
ಶೋರೂಮಿನ ಶೂಗಳ
ತೆರಿಗೆ ತಗ್ಗಲು
ದಾಂದಲೆ ಮಾಡಿ ದಳ್ಳುರಿ ಹೂಡಿ
ದೇಶ ಭಕ್ತರಾಗಲು
ಬಲು ಸುಲಭದ ಕಾಲವಿದು
ಪವಿತ್ರವಾದ ಹಸುವಿನ ಸಗಣಿಯನ್ನು
ಶಿರದಲ್ಲಿ ಧರಿಸಿಕೊಂಡು ಭಾಷಣ ಬಿಗಿದು
ಬರುವ ನಾಳೆಗಳಿಗೆ ಹೆಣದ ಮೇಲಿನ
ಬಟ್ಟೆಯ ತೊಡಿಸಿ
ನೀಗದ ದಾಹಕ್ಕೆ ದೇಶವನ್ನೆ ಮಾರಿಬಿಡಿ
ದೇಶ ಭಕ್ತರಾಗಲು
ಬಲು ಸುಲಭದ ಕಾಲವಿದು
0 ಪ್ರತಿಕ್ರಿಯೆಗಳು