’ ಬಳಸಲ್ಪಡುವ’ ಮಹಿಳೆಯರು – ಉಷಾ ಕಟ್ಟೆಮನೆ ಬರೀತಾರೆ

–  ಉಷಾ ಕಟ್ಟೆಮನೆ

  ಮೌನ ಕಣಿವೆ ಜೂನ್ ಮೊದಲವಾರದಲ್ಲಿ ಆರತಿರಾವ್ ಎಂಬ ಮಹಿಳೆ ಕನ್ನಡದ ಸುದ್ದಿವಾಹಿನಿಯೊಂದರ ಮುಂದೆ ಅರ್ಧ ಮುಖ ಮುಚ್ಚಿಕೊಂಡ ಅವಸ್ಥೆಯಲ್ಲಿ ಪ್ರತ್ಯಕ್ಷಳಾಗಿ, ನಿತ್ಯಾನಂದನೆಂಬ ಸ್ವಾಮೀಜಿಯೊಬ್ಬ ತನ್ನಿಚ್ಛಿಗೆ ವಿರುದ್ಧವಾಗಿ ಆರು ವರ್ಷಗಳ ಕಾಲ ಲೈಂಗಿಕ ಅತ್ಯಾಚಾರ ನಡೆಸಿದ್ದಾನೆಂದು ಸುದೀರ್ಘವಾಗಿ ಹೇಳಿಕೊಂಡಳು. ಮುಂದೆ ಅದು ಇಲ್ಲಿಯವರೆಗೆ ಸತತ ಒಂದು ತಿಂಗಳ ಕಾಲ ಸುದ್ದಿವಾಹಿನಿಗಳ ಬಕಾಸುರ ಹೊಟ್ಟೆಗೆ ಗ್ರಾಸವಾಗುತ್ತಲಿದೆ. ಆಕೆಯ ಆರೋಪಕ್ಕೆ ಸಿಕ್ಕುತ್ತಿದ್ದ ವ್ಯಾಪಕ ಪ್ರಚಾರ ನನಗೆ ಸೋಜಿಗವೆನಿಸಿ ಜೂನ್ ಏಳರಂದು ನನ್ನ ಪೇಸ್ ಬುಕ್ ಅಕೌಂಟ್ ನಲ್ಲಿ ನಾನೊಂದು ಸ್ಟೇಟಸ್ ಹಾಕಿದೆ; ಅಂದರೆ ಬರೆದೆ. ಅದು ಹೀಗಿತ್ತು; ‘ನನಗೊಂದು ಅನುಮಾನವಿದೆ; ಹಕ್ಕಿನಿಂದ ಗಂಡ, ಭಾವಬಂಧನದಿಂದ ಪ್ರೇಮಿ-ಇವರಿಬ್ಬರಿಂದಲ್ಲದೆ ಇನ್ಯಾರಿಂದಲಾದರೂ ಒಬ್ಬ ಪ್ರಬುದ್ಧ ಮಹಿಳೆಯನ್ನು ನಿರಂತರವಾಗಿ ಆರು ವರ್ಷಗಳ ಕಾಲ ಲೈಂಗಿಕ ಶೋಷಣೆಗೆ ಒಳಪಡಿಸಲು ಸಾಧ್ಯವೇ?’ ಇದನ್ನು ಓದಿದ ಐವತ್ತಮೂರು ಜನ ಓದುಗರು ಅಲ್ಲಿ ನನ್ನ ಹೇಳಿಕೆಯ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇಲ್ಲೊಂದು ಚಿಕ್ಕ ಟಿಪ್ಪಣಿಯನ್ನು ನಾನು ನಿಮಗೆ ನೀಡಬೇಕು- ಪೇಸ್ ಬುಕ್ ಎನ್ನುವುದು ಕಂಪ್ಯೂಟರ್ ಎಂಬ ಪೆಟ್ಟಿಗೆಯಲ್ಲಿರುವ ನನ್ನ ಒಂದು ಇಂಟರ್ ನೆಟ್ ಖಾತೆ. ನೀವು ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯಲ್ಲಿ ಹಣ ಹಾಕಿದ ಹಾಗೆ ನನ್ನ ಮನಸ್ಸಿನಲ್ಲಿ ಬಂದ ಭಾವನೆಗಳನ್ನು, ವಿಚಾರಗಳನ್ನು ನಾನೀ ಖಾತೆಗೆ ಹಾಕುತ್ತೇನೆ. ಅಲ್ಲಿ ನನ್ನ ಹಾಗೆ ಲಕ್ಷಾಂತರ ಖಾತೆದಾರಿರುತ್ತಾರೆ. ಅವರು ತಕ್ಷಣ ನಾನು ಬರೆದದ್ದನ್ನು ಓದಿ ಪ್ರತಿಕ್ರಿಯೆ ಹಾಕುತ್ತಾರೆ. ಅದು ನೇರಾನೇರ ಸಂಬಂಧ. ಆದರೆ ಈಗ ಇದನ್ನು ಓದುತ್ತಿರುವ ನಿಮ್ಮ ಪ್ರತಿಕ್ರಿಯೆಗಳು ಏನಿರಬಹುದೆಂದು ನನಗೆ ತಿಳಿಯುವುದಿಲ್ಲ. ನನ್ನ ಸ್ಟೇಟಸ್ ಗೆ ಬಂದ ಹೆಚ್ಚಿನ ಅಭಿಪ್ರಾಯಗಳು ಒಂದೇ ಆಗಿದ್ದವು. ಅದೇನೆಂದರೆ, ಮಹಿಳೆಯ ಸಹಕಾರವಿಲ್ಲದೆ ಅತ್ಯಾಚಾರ ಅಥವಾ ಲೈಂಗಿಕ ಶೋಷಣೆ ನಡೆಯಲು ಸಾಧ್ಯವಿಲ್ಲ ಎಂದಾಗಿತ್ತು. ಅದರಲ್ಲಿ ತುಂಬಾ ಜನರು ಒಪ್ಪಿಕೊಂಡ ಕಾಮೆಂಟ್ ಎಂದರೆ ರಾಘವೇಂದ್ರ ಜೋಷಿ ಎಂಬವರದ್ದು ಅವರು ಹೀಗೆ ಬರೆದಿದ್ದರು.”ಅದು ಹೇಗೆ ಹೇಳಲು ಸಾಧ್ಯ? ನಾವು ವರ್ತುಲದ ಹೊರಗಿರುವವರು. ಒಳಗಿರುವವರ ಬವಣೆ ನಮ್ಮ ಅರಿವಿಗೂ ನಿಲುಕದು. ಹೀಗಾಗಿ ’ಇದು ಸಾಧ್ಯ’ ಅಥವಾ ’ಸಾಧ್ಯವಿಲ್ಲ’ ಅಂತ ಹೇಳಲಾಗದು. ಅನುಭವಿಸಿದವರ ಕಷ್ಟವನ್ನು ಯಾವ ಪದಗಳೂ ಕಟ್ಟಿಕೊಡಲಾಗದು ಅಲ್ವಾ?’ ವೆಂಕಟೇಶ್ ಲಕ್ಷ್ಮಿ ಎಂಬವರ ಅನುಭವದ ಮಾತುಗಳು ಹೀಗಿದ್ದವು; ’ನನಗೆ ಅನುಭವ ಆಗಿದೆ. ನನ್ನ ಮದುವೆ ಆಗಿ ನಾಲ್ಕೂವರೆ ವರ್ಷ ಆಗಿದೆ. ಈ ಅನುಭವದಿಂದ ಹೇಳುತ್ತಿದ್ದೇನೆ, ಸಾಧ್ಯವಿಲ್ಲ.’ ಕೃಷ್ಣಮೂರ್ತಿ ಎನ್ನುವವರ ಸ್ವಾರಸ್ಯವಾಗಿ ಹೀಗೆ ಹೇಳುತ್ತಾರೆ; ’ ವರ್ಷಕ್ಕೊಂದು ಸಲ ಬಿಯರ್ ಕುಡಿದುಕೊಂಡು ಹೋದ್ರೆ ನನ್ನ ಹೆಂಡತಿ ಉಗಿದು ಉಪ್ಪಿನಕಾಯಿ ಹಾಕಿ, ದೇವರ ಮೇಲೆ ಪ್ರಮಾಣ ಮಾಡ್ಸಿ ಹಾಲಿನಲ್ಲಿ ಮಲಗಿಸ್ತಾಳೆ ಅಂತಾದ್ರಲ್ಲಿ….’ ’ಮಹಿಳೆ ಪ್ರಬುದ್ಧಳಾಗಿದ್ದಾಳೆ ದೀರ್ಘಕಾಲದ ಲೈಂಗಿಕ ಶೋಷಣೆ ಸಾಧ್ಯವಿಲ್ಲ’ ಎಂಬುದು ಬಸವರಾಜ್ ಸುಳಿಭಾವಿಯವರ ದೃಢ ನಿಲುವು. ಶ್ಯಾಮ್ ಶೆಟ್ಟಿ ಸಂಶಯ ವ್ಯಕ್ತ ಪಡಿಸುವುದು ಹೀಗೆ; ’ ಹಣ ಹರಿವಾಗ ಅದು ಶೋಷಣೆ ಆಗಿರದೆ ಕಾಮ ಆಗಿ, ಕಡೆಗೆ ಹಣ ಹರಿಯುವಿಕೆ ನಿಂತಾಗ ಅದು ಸೆಕ್ಷುವಲ್ ಹೆರೆಸ್ ಮೆಂಟ್ ಆಗುವ ಸಾಧ್ಯತೆ ಇದೆ.’ ಜಗದೀಶ್ ಪುಟ್ಟುಸ್ವಾಮಿ ಎನ್ನುವವರು ಶ್ಯಾಮ್ ಸೆಟ್ಟಿಯ ಅನುಮಾನವನ್ನು ಪುಷ್ಟಿಕರೀಸುತ್ತಾ ಹೇಳುವುದು ಹೀಗೆ, ’ಆ ಹುಡುಗಿ ಅಷ್ಟೊಂದು ಹೇಳಿಕೊಳ್ಳುತ್ತಾಳೆ ಅಂದ್ರೆ ಏನೋ ಷಡ್ಯಂತರ ಇದೆ.’ ಕೃಷ್ಣ ಭಟ್ ಈ ಪ್ರಕರಣಕ್ಕೊಂದು ಮನಶಾಸ್ತ್ರೀಯ ಆಯಾಮವನ್ನು ಕೊಡುವುದು ಹೀಗೆ; ’ಸಂಪೂರ್ಣ ಸಮರ್ಪಣೆ ಎಂಬ ಧೈವಿಕತೆಯ ಹೆಸರಿನ ಹೊಸ ಡಂಭಾಚಾರದ ಮೂಲಕ, ನಂಬಿಕೆಯ ಮೂಲಕ ಇದು ಖಂಡಿತವಾಗಿಯೂ ಸಾಧ್ಯವಿದೆ. ಕೆಲವು ಹೆಂಗಸರಿಗೆ ಕೆಲವು ವ್ಯಕ್ತಿ, ವ್ಯಕ್ತಿತ್ವಗಳ ಮೇಲೆ ಅಪಾರವಾದ ನಂಬಿಕೆ ಇರುತ್ತದೆ[ ಹುಟ್ಟಿಸುತ್ತಾರೆ] ಅಂಥವರಿಗೆ ಎಲ್ಲವನ್ನೂ ಸಮರ್ಪಿಸಿಕೊಳ್ಳಲು ಸಿದ್ಧರಿರುತ್ತಾರೆ. ಇದೊಂಥರಾ ಸೈಕಲಾಜಿಕಲ್ ಕೇಸ್. ಕೆಲವರು ನೊಂದು ಇನ್ನು ಕೆಲವರು ಅತ್ಯುತ್ಸಾಹದಿಂದ ಈ ಬಲೆಗೆ ಬೀಳುತ್ತಾರೆ.’ ನಾನು ಎತ್ತಿದ ಸಂಶಯವನ್ನು ಮತ್ತಷ್ಟು ಪುಷ್ಟೀಕರಿಸಿದ್ದು ಉಮೇಶ್ ದೇಸಾಯಿ ಎಂಬವರು ಹಾಕಿದ ಈ ಕಾಮೆಂಟ್; ’ಯಾವುದೇ ವ್ಯಕ್ತಿ ಅದು ಅಪ್ಪ/ ಗಂಡ/ಗೆಳೆಯ ಯಾರೇ ಆಗಿರಲಿ ಒಂದು ಹೆಣ್ಣನ್ನು ಆರು ವರ್ಷಗಳ ಕಾಲ ಹೀಗೆ ಶೋಷಿಸಲಾಗದು….ಅವಳ ಒಪ್ಪಿಗೆ ಇಲ್ಲದೆ…ಇದು ಮಾಡರ್ನ್ ಕಾಲ. ಆರತಿ ಪ್ರಭು ಆ ದೇವಮಾನವನನ್ನು ನಂಬಿದ್ದು…ಇಷ್ಟೆಲ್ಲಾ ದಿನ ಸಹಿಸಿಕೊಂಡಿದ್ದು ಈಗ ಮುಸುಕು ಧರಿಸಿ ಟೀವಿಯ ಮುಂದೆ ಪ್ರತ್ಯಕ್ಷವಾಗುವುದು..ಎಲ್ಲಾ ಗೋಜಲು…ಈ ಚಾನಲ್ ಅದರಲ್ಲೂ ವಿಭಟ್ಟರ ಚಾನಲ್ ಅನ್ನ್ ನಂಬಲಾಗದು..’ ಇಲ್ಲಿ ನನಗೆ ಪುರುಷರ ಅನುಭವ ಮತ್ತು ಯೋಚನೆ ಬೇಕಾದ ಕಾರಣ ಅವರ ಕಾಮೆಂಟ್ಗಳನ್ನಷ್ಟೆ ನಮೂದಿಸಲಾಗಿದೆ. ಲೈಂಗಿಕತೆಗೆ ಸಂಬಂಧಪಟ್ಟಂತೆ ವೈದ್ಯಶಾಸ್ತ್ರದಲ್ಲಿ ಎರಡು ಪದಗಳಿವೆ; ಒಂದು Vaginismus ಮತ್ತು Vaginal secretion. ಒಂದು ಹೆಣ್ಣು ಲೈಂಗಿಕ ಕ್ರಿಯೆಗೆ ಸಿದ್ದಳಾಗಬೇಕಾದರೆ ಆಕೆಯ ಜನನೇಂದ್ರಿಯದ ಸುತ್ತ ಇರುವ ಸ್ನಾಯುಗಳು ಸಡಿಲವಾಗಬೇಕು ಮತ್ತು ಜನನೇಂದಿಯ ತೇವಗೊಳ್ಳಬೇಕು. ಆದರೆ ಕೆಲವು ಮಹಿಳೆಯರಲ್ಲಿ ಇದು ಸಾಧ್ಯವಾಗುವುದಿಲ್ಲ.[ ಅದಕ್ಕೆ ಹಲವು ಕಾರಣಗಳಿರುತ್ತವೆ. ಮತ್ತು ಅದಕ್ಕೆ ಪರಿಹಾರವೂ ಇದೆ. ಅದಿಲ್ಲಿ ಬೇಡ.] ಇವೆರಡೂ ದೈಹಿಕವಾದ ರಾಸಾಯನಿಕ ಬದಲಾವಣೆಗಳಾಗದೆ ಮಿಲನ ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ ಇದರ ಅರಿಲ್ಲದೆ ಗಂಡಸು ಮುಂದುವರಿದರೆ ಅದು ಬಲವಂತದ ಕ್ರಿಯೆಯಾಗುತ್ತದೆ. ಮತ್ತು ಅದು ಬಾರಿ ಬಾರಿಗೂ ಆಗಲಿ ಸಾಧ್ಯವಿಲ್ಲ. ಅಂದರೆ ನಾನು ಹೇಳಬೇಕೆಂದಿದ್ದು ಇಷ್ಟೇ. ಸಂಗಾತಿಯ ಸಹಕಾರವಿಲ್ಲದೆ ಲೈಂಗಿಕ ಕ್ರಿಯೆ ಸಾಧ್ಯವಿಲ್ಲ. ಅಂದರೆ ಸಾಮೂಹಿಕ ಅತ್ಯಾಚಾರ ಹೊರತು ಪಡಿಸಿ ಒಬ್ಬ ಗಂಡಸಿನಿಂದ ಒಂದು ಹೆಣ್ಣಿನ ಮೇಲೆ ಹೇಳಿದ ಎರಡು ಸಂದರ್ಭಗಳನ್ನು ಹೊರತು ಪಡಿಸಿ [ಹಕ್ಕಿನಿಂದ ಗಂಡ, ಭಾವಬಂಧನದಿಂದ ಪ್ರೇಮಿ] ಲೈಂಗಿಕ ಅತ್ಯಾಚಾರವಾಗಲು ಸಾಧ್ಯವಿಲ್ಲ. ಯಾಕೆಂದರೆ ಆಕೆ ಈ ಕ್ರಿಯೆಯನ್ನು ತಡೆಯಲೇ ಬೇಕೆಂದು ಮಾನಸಿಕವಾಗಿ ಸಿದ್ಧಳಾಗಿದ್ದೇ ಹೌದಾದರೆ, ಅದಕ್ಕೆ ಬೇಕಾದ ದೈಹಿಕ ಸಾಮರ್ತ್ಯವೂ ಆಕೆಯಲ್ಲಿಯೇ ಇದೆ. ತನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡ ಆ ವಿವೇಚನಾರಹಿತ ಮನುಷ್ಯನ ಬಯಕೆಯ ಜ್ವರವನ್ನು ಇಳಿಸುವುದು ಹೇಗೆಂದು ಆ ಕ್ಷಣದಲ್ಲಿ ಆಕೆ ತೆಗೆದುಕೊಳ್ಳಬೇಕಾದ ನಿರ್ಧಾರವೇ ಹೊರತು ಅದಕ್ಕೆ ಪೂರ್ವ ಸಿದ್ಧತೆಯ ಅಗತ್ಯವಿಲ್ಲ. ಆದರೆ ಲೈಂಗಿಕ ಸುಖವನ್ನು ಬ್ರಹ್ಮಾನಂದಕ್ಕೆ ಹೋಲಿಸುತ್ತಾರೆ. ಹಾಗಾಗಿಯೇ ಒಂದು ಹಂತದಲ್ಲಿ ಪ್ರತಿಭಟಿಸುವ ಹೆಣ್ಣೂ ಕೂಡಾ ಆ ದಿವ್ಯ ಸುಖಕ್ಕೆ ಶರಣಾಗುತ್ತಾಳೆ ಎಂದು ಲೈಂಗಿಕ ತಜ್ನರು ಹೇಳುತ್ತಾರೆ. ಹಾಗಾಗಿಯೇ ಅತ್ಯಾಚಾರ ಪ್ರಕರಣಗಳ ವಿಚಾರಣೆ ಸಂದರ್ಭಗಳಲ್ಲಿ ನ್ಯಾಯಾಲಯಗಳು ಒಪ್ಪಿಗೆಯ ಸೆಕ್ಸ್ ಮತ್ತು ಅತ್ಯಾಚಾರಗಳ ನಡುವಿನ ಗೆರೆಯನ್ನು ಗುರುತಿಸುವಲ್ಲಿ ತಿಣುಕಾಡಬೇಕಾಗುತ್ತದೆ. ಆರತಿರಾವ್ ಪ್ರಕರಣದಲ್ಲಿ ನಿತ್ಯಾನಂದ ಆಕೆಯ ಗಂಡನಲ್ಲ. ಪ್ರೇಮಿಯಾಗಿರಬಹುದೇ ? ಅದನ್ನು ಆಕೆಯೇ ಹೇಳಬೇಕು. ಆಕೆ ತಾನು ಹಿಡನ್ ಕ್ಯಾಮರಾ ಇಟ್ಟು ಆತ ಇನ್ನೊಬ್ಬ ಮಹಿಳೆಯೊಂದಿಗಿರುವ ದೃಶ್ಯಗಳನ್ನು ಚಿತ್ರಿಕರಿಸಿಕೊಂಡಿದ್ದೆ ಎಂದು ಹೇಳಿಕೆ ನೀಡಿದಳಲ್ಲಾ, ಇಲ್ಲಿ ಸ್ತ್ರೀಸಹಜವಾದ ಸವತಿ ಮಾತ್ಸರ್ಯ ಕೆಲಸ ಮಾಡಿರಬಹುದೇ? ಯೋಚಿಸಬೇಕಾದ ವಿಷಯ. ಇದೆಲ್ಲವನ್ನೂ ಒತ್ತಟ್ಟಿಗಿಟ್ಟು, ಆರತಿರಾವ್ ಎಂಬ ವಿದ್ಯಾವಂತ ಮಹಿಳೆಯ ಒಂದು ತಿಂಗಳ ಪ್ರಹಸನವನ್ನು ನೋಡಿದಾಗ ನಾನು ಯೋಚಿಸಿದ್ದು;ರಾಜಾಕಾರಣದಲ್ಲಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ವ್ಯಕ್ತಿಯೊಬ್ಬರನ್ನು ಹಣೆಯಲು ಮಹಿಳೆಯರನ್ನು ಹೇಗೆಲ್ಲಾ ’ಬಳಸಿಕೊಳ್ಳು’ತ್ತಿದ್ದಾರೆ ಎಂಬುದನ್ನು…… ಸ್ತ್ರೀಯರನ್ನು ಸದಾ ತಾಯಿಯೆಂದು ಕರೆಯುತ್ತಾ ಅವಳನ್ನು ಭೂದೇವಿಯೊಡನೆ ಸಮೀಕರಿಸುತ್ತಾ, ಆ ಮೌಲ್ಯವನ್ನೇ ಮುಂದಿಟ್ಟುಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಲೆತ್ನಿಸುವ ಭಾರತೀಯ ಜನತಾ ಪಾರ್ಟಿ… ಪಕ್ಷ ವಿರೋಧಿಗಳ ಚಾರಿತ್ರ್ಯವಧೆಗೆ ಆಕೆಯನ್ನೇ ದಾಳವಾಗಿ ಉಪಯೋಗಿಸುತ್ತ್ತಿರುವ ಪರಿಗೆ ಹೇಸಿಗೆಯಾಗುತ್ತಿದೆ. ನಮ್ಮ ಕರ್ನಾಟಕದಲ್ಲಿ ನಡೆದ ಹಾಲಪ್ಪ ಪ್ರಕರಣವನ್ನೇ ನೋಡಿ. ಅಲ್ಲಿ ಲೈಂಗಿಕ ಅತ್ಯಾಚಾರ ನಡೆದಿತ್ತೇ ಇಲ್ಲವೇ ಎಂಬುದನ್ನು ಹ್ಯಾಗೆ ಹೇಳಲು ಸಾಧ್ಯ? ಆದರೆ ಹಾಲಪ್ಪನ ಚಾರಿತ್ರ್ಯ ವಧೆಯಾದದ್ದು ಸತ್ಯ. ಮತ್ತು ಅವರು ಸಚಿವ ಪದವಿ ಕಳೆದುಕೊಂಡದ್ದೂ ಸತ್ಯ. ಅದನ್ನು ’ರಾಸಲೀಲೆ’ ಎಂದು ವೈಭವಿಕರಿಸಿದ್ದು ಎಷ್ಟು ಸರಿ? ಕೃಷ್ಣ ಹಲವು ಗೋಪಿಕೆಯರೊಡನೆ ಕಣ್ಣುಮುಚ್ಚಾಲೆಯಾಡಿದರೆ ಅದು ರಾಸಲೀಲೆ. ಅಲ್ಲಿದ್ದುದು ಒಬ್ಬಳೇ ಮಹಿಳೆ!. ರಾಜಸ್ತಾನದಲ್ಲಿ ನಡೆದ ನರ್ಸ್ ಭಂವರಿ ದೇವಿ ಹತ್ಯೆ ಪ್ರಕರಣವನ್ನು ಗಮನಿಸಿ. ಈ ಪ್ರಕರಣದಲ್ಲಿ ಸಚಿವ ಮಹಿಪಾಲ್ ಮದೇರಣ ತನ್ನ ಸಚಿವ ಸ್ಥಾನವನ್ನು ಕಳೆದುಕೊಂಡರಲ್ಲದೆ ಸಿಬಿಐಯವರಿಂದ ಬಂಧನಕ್ಕೊಳಗಾದರು. ಇದಕ್ಕೆಲ್ಲಾ ಕಾರಣವಾಗಿದ್ದು ಸಚಿವರು ಆ ಮಹಿಳೆಯರೊಂದಿಗೆ ಇದ್ದರೆನ್ನಲಾದ ಅಶ್ಲೀಲ ಸೀಡಿ ಬಹಿರಂಗಗೊಂಡದ್ದು. ಮಹಂತೇಶ್ ಕೊಲೆಪ್ರಕರಣದಲ್ಲಿ ಆ ಸಾವಿನ ಗಂಭೀರತೆಯನ್ನು ಮರೆ ಮಾಚುವ ಪ್ರಯತ್ನದಲ್ಲಿ ಅವರಿಗೆ ವೇಶ್ಯೆಯರ ಸಂಪರ್ಕವಿತ್ತೆಂದು ಮಾಧ್ಯಮಗಳಲ್ಲಿ ಸತತ ಪ್ರಚಾರ ಮಾಡಲಾಗಿತ್ತು. ಪ್ರಾಮಾಣಿಕತೆಯನ್ನೇ ಉಸಿರಾಗಿಟ್ಟುಕೊಂಡ ಆಧಿಕಾರಿಯ ಕುಟುಂಬಕ್ಕೆ ಮತ್ತು ಅವರ ಆಪ್ತ ವರ್ಗಕ್ಕೆ ಈ ಚಾರಿತ್ರ್ಯ ವಧೆಯಿಂದ ಎಷ್ಟು ನೋವಾಗಿರಬೇಡ? ಮೊನ್ನೆ ಮೊನ್ನೆ ಬಿಜೆಪಿಯಿಂದ ಹೊರ ನಡೆದ ಅರೆಸ್ಸಸ್ ನಾಯಕ ಸಂಜಯ್ ಜೋಷಿಯ ಉದಾಹರಣೆಯನ್ನೇ ತೆಗೆದುಕೊಂಡರೆ ಅಲ್ಲಿ ಕೂಡಾ ಅವರ ಚಾರಿತ್ರ್ಯ ವಧೆಗೆ ಬಳಸಿಕೊಂಡದ್ದು ಅವರು ಮಹಿಳೆಯೊಬ್ಬರೊಂದಿಗೆ ಹೊಂದಿದ್ದರೆನ್ನಾಲಾದ ಅಶ್ಲೀಲ ಸೀಡಿ ಬಹಿರಂಗಗೊಂಡದ್ದು. ದಿನೇ ದಿನೇ ತನ್ನ ರಾಜಕೀಯ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಿದ್ದ ತನ್ನ ರಾಜಕೀಯ ಎದುರಾಳಿಯನ್ನು ಹಣೆಯಲು ಬಿಜೆಪಿಯಿಂದ ಭಾವಿ ಪ್ರಧಾನಿಯೆಂದು ಬಿಂಬಿತವಾಗುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಿಂಬಾಲಕರೇ ಈ ಷಡ್ಯಂತರ ರಚಿಸಿರಬಹುದೇ? ಅನುಮಾನಗಳಿವೆ. ಮೇಲಿನ ಎಲ್ಲಾ ಪ್ರಕರಣಗಳಲ್ಲಿ ಮಾಧ್ಯಮಗಳು ಸಾಕ್ಷಿಪ್ರಜೆಯಿಂದ ಕೆಲಸ ಮಾಡದೆ ಪೂರ್ವಾಗ್ರಹ ಪೀಡಿತರಾಗಿದ್ದ್ ಸತ್ಯ. ಮಹಿಳೆಯರನ್ನು ಯಾವುದೋ ಕಾರ್ಯಸಾಧನೆಗಾಗಿ, ನಿರ್ಧಿಷ್ಟ ಉದ್ದೇಶಗಳಿಗಾಗಿ ಬಳಸಲ್ಪಡುವುದು ಅನಾದಿಕಾಲದಿಂದಲೂ ನಡೆದು ಬಂದ ಪದ್ಧತಿ. ’ವಿಷಕನ್ಯೆ’ಯರ ಬಳಕೆಯನ್ನು ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಚಾಣಕ್ಯ ಬಹಳ ಪರಿಣಾಮಕಾರಿಯಾಗಿ ಬಳಸಿದ್ದ ಎಂದು ಇತಿಹಾಸ ಹೇಳುತ್ತದೆ. ನಿತ್ಯಾನಂದ ಅರತಿರಾವ್ ಅನ್ನು ಲೈಂಗಿಕವಾಗಿ ಬಳಸಿಕೊಂಡನೇ? ನಮಗೆ ಗೊತ್ತಿಲ್ಲ. ನಾವು ಘಟನೆಯ ಹೊರ ಆವರಣದಲ್ಲಿ ನಿಂತು ಹೀಗೆ ನಡೆದಿರಬಹುದೇನೋ ಎಂದು ತರ್ಕಿಸಬಹುದಷ್ಟೇ. ಆದರೆ.. ಕರ್ನಾಟಕದಲ್ಲಿ ನಿತ್ಯಾನಂದ ಪ್ರಕರಣ ಬಿಟ್ಟರೆ ಜನರನ್ನು ಕಾಡುವ ಇನ್ಯಾವ ಸಮಸ್ಯೆಗಳೂ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಲಂಬಿಸಲ್ಪಟ್ಟ, ಇನ್ನೂ ಲಂಬನವಾಗುತ್ತಲೇ ಇರುವ ಈ ಪ್ರಕರಣವನ್ನು ಗಮನಿಸಿದಾಗ ಇಲ್ಲಿಯೂ ಅರತಿರಾವ್ ಎಂಬ ಮಹಿಳೆ ’ಬಳಸಲ್ಪಡುತ್ತಿದ್ದಾಳೆ’ ಎಂಬ ಅನುಮಾನ ಜನಸಾಮಾನ್ಯರನ್ನು ಕಾಡದಿರದು. ನಿತ್ಯಾನಂದ ಆಶ್ರಮ ವಿವಾದ ಸತತವಾಗಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿರುವಾಗ ನನಗೆ ಆಪ್ತರಾದ ಪ್ರಸಿದ್ದ ಆಪ್ತ ಸಮಾಲೋಚಕರು ನನ್ನಲ್ಲಿ ಹೀಗೆ ಹೇಳಿಕೊಂಡಿದ್ದರು.”ನಾವು ಬೇರೆಯವರ ಸಮಸ್ಯೆಗಳನ್ನೆಲ್ಲಾ ಪರಿಹರಿಸಲು ಪ್ರಯತ್ನ ಪಡುತ್ತೇವೆ. ಆದರೆ ನಮ್ಮ ಮಾನಸಿಕ ತೊಳಲಾಟವನ್ನು ಯಾರಲ್ಲಿ ಹೇಳಿಕೊಳ್ಳೋಣ ಹೇಳಿ…? ಹಾಗಾಗಿ ನಾನು ನಿತ್ಯಾನಂದನ ಮೆಡಿಟೇಷನ್ ಕ್ಲಾಸ್ ಗಳನ್ನು ಅಟೆಂಡ್ ಮಾಡ್ತೇನೆ.” ಕೊನೆಯಾದಾಗಿ ಹೇಳುವುದಿಷ್ಟೇ; ಕೆಲವು ಅನುಭವಗಳು ವ್ಯಯಕ್ತಿಕವಾದುವು;ಅನುಭವಜನ್ಯವಾದುವು. ಅದನ್ನು ಸಾರ್ವತ್ರಿಕಗೊಳಿಸಲಾಗದು. ಒಂದು ವೇಳೆ ಅಂಥ ಸಂದರ್ಭ ಒದಗಿದರೆ ಅದು ಸಮಾಜದ ಮೇಲೆ, ಬೆಳೆಯುತ್ತಿರುವ ಮಕ್ಕಳು ಮತ್ತು ಯುವ ಜನಾಂಗದ ಮೇಲೆ ಯಾವ ರೀತಿಯ ಪರಿಣಾಮವನ್ನುಂಟುಮಾಡುತ್ತದೆ. ಎಂಬುದನ್ನು ಯೋಚಿಸಿ ಮುಂದುವರಿಯಬೇಕು. ಕೃಪೆ : ವಿಜಯವಾಣಿ     [ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ ]]]>

‍ಲೇಖಕರು G

July 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This