ಬಶೀರ್ ಮತ್ತು ಹನೇಹಳ್ಳಿಯ ಬ್ರಹ್ಮ

ಚಿತ್ತಾಲರ ಜೊತೆ ಸಂಜೆ…

ಬಿ.ಎ೦. ಬಶೀರ್

ಗುಜರಿ ಅ೦ಗಡಿ   ಯಾವುದೋ ಪತ್ತೇದಾರಿ ಕಾದಂಬರಿ ಇರಬೇಕು ಎಂದು ಅಣ್ಣನ ಕಪಾಟಿನಿಂದ ಎಗರಿಸಿ ಆ ಪುಸ್ತಕವನ್ನು ಕದ್ದು ಮುಚ್ಚಿ ಓದತೊಡಗಿದೆ. ಯಶವಂತ ಚಿತ್ತಾಲರು ಬರೆದ ‘ಶಿಕಾರಿ’ ಕಾದಂಬರಿಯದು. ಪುಟ ತೆರೆದ ಕೂಡಲೇ ‘‘ಕಳೆದು ಹೋಗಿರುವ ನನ್ನ ತಂಗಿಯ ಹುಡುಕಾಟವೇ ಮುಂದಿನ ಗುರಿ-ನಾಗಪ್ಪ’’ ಎಂಬ ಸಾಲು ನನ್ನನ್ನು ತಪ್ಪು ದಾರಿಗೆಳೆಯಿತು. ಅಣ್ಣನಿಗೆ ಕದ್ದು ಮುಚ್ಚಿ ಪುಟಪುಟಗಳನ್ನು ಓದುತ್ತಿದ್ದರೂ ಒಂದು ಸಾಲೂ ತಲೆಗೆ ಹೋಗುತ್ತಿಲ್ಲ. ಅಲ್ಲಲ್ಲಿ ಏನೋ ಇದೆ ಅಂತನ್ನಿಸಿದರೂ ಅದೇನು ಎನ್ನುವುದು ಗೊತ್ತಾಗುತ್ತಿರಲಿಲ್ಲ. ಹಾಗೂ ಹೀಗೂ ಪುಸ್ತಕವನ್ನು ಓದಿ ಮುಗಿಸಿದೆನಾದರೂ ‘ಅದೆಂಥದು’ ಎನ್ನುವುದು ನನಗೆ ಗೊತ್ತಾಗಿರಲಿಲ್ಲ ಹೀಗಿರುವಾಗ ಶಾಲೆಯ ಲೈಬ್ರರಿಯಲ್ಲಿ ಯಾವುದೋ ಪತ್ತೇದಾರಿ ಪುಸ್ತಕ ಹುಡುಕುವಾಗ ಇದೇ ಶಿಕಾರಿ ಕೈಗೆ ಸಿಕ್ಕಿತು. ನಾಲಗೆ ಸುಟ್ಟ ಬೆಕ್ಕಿನಂತೆ ಆ ಪುಸ್ತಕವನ್ನು ಕೈಗೆತ್ತಿ ಆತಂಕದಿಂದ ನೋಡುತ್ತಿರುವಾಗ, ನನ್ನ ಹಿಂದಿನಿಂದ ಕನ್ನಡ ಪಂಡಿತರಾದ ವಿ. ಆರ್. ಹೆಗ್ಡೆ ಬಂದಿದ್ದರು. ‘‘ಗುಡ್ ಓದು ಓದು…ಕೇಂದ್ರ ಸಾಹಿತ್ಯ ಅಕಾಡೆಮಿ ಸಿಕ್ಕಿದ ಪುಸ್ತಕ ಅದು. ತುಂಬಾ ಒಳ್ಳೆಯ ಕಾದಂಬರಿ’’ ಎಂದು ಬೆನ್ನು ತಟ್ಟಿದರು. ಬರೇ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡದ್ದಕ್ಕೇ ಮೇಷ್ಟ್ರು ನನ್ನ ಬೆನ್ನು ತಟ್ಟಿದ್ದರು. ಅಂತೂ ಮೇಷ್ಟ್ರ ಮುಂದೆ ಒಳ್ಳೆಯವನಾಗಲೂ ಮತ್ತೊಮ್ಮೆ ಆ ಪುಸ್ತಕವನ್ನು ಮನೆಗೆ ಕೊಂಡೊಯ್ದೆ. ಎರಡು ದಿನ ಇಟ್ಟು ಹಾಗೇ ಮರಳಿಸಿದೆ. ಇದಾಗಿ ಮೂರು ಅಥವಾ ನಾಲ್ಕು ವರ್ಷಗಳ ಬಳಿಕ ನಾನಾಗಿಯೇ ಈ ಪುಸ್ತಕವನ್ನು ಹುಡುಕಿಕೊಂಡು ಹೋದೆ. ಆಗ ನಾನು ದ್ವಿತೀಯ ಬಿ. ಎ. ಇರಬೇಕು. ಆಕಸ್ಮಿಕವಾಗಿ ನನಗೆ ಸಿಕ್ಕಿದ ಯಶವಂತ ಚಿತ್ತಾಲರ ‘ಕತೆಯಾದಳು ಹುಡುಗಿ’ ಕತೆ ಓದಿದ ಬಳಿಕ ಶಿಕಾರಿ ಮೆಲ್ಲಗೆ ನನ್ನಾಳದಲ್ಲಿ ಕದಲ ತೊಡಗಿತು. ಮನೆಗೆ ಕೊಂಡೊಯ್ದು ಓದ ತೊಡಗಿದೆ. ಈ ಕೃತಿಯನ್ನು ಬಿಡಿಸಿ ಓದತೊಡಗಿದಂತೆ, ನನ್ನದೇ ಆತ್ಮದ ಪುಟಗಳನ್ನು ಬಿಡಿಸುವಂತೆ ಕಂಪಿಸುತ್ತಾ ಓದುತ್ತಿದ್ದೆ. ಇದಾದ ಬಳಿಕ ಅವರ ಪುಟ್ಟ ಕಾದಂಬರಿ ಛೇದ ನನ್ನ ಕೈಗೆ ಸಿಕ್ಕಿತು. ಅದೇನೋ ಗೊತ್ತಿಲ್ಲ, ಇಂದಿಗೂ ನನಗೆ ಚಿತ್ತಾಲರ ಕೃತಿಗಳಲ್ಲಿ ಅತ್ಯಂತ ಇಷ್ಟವಾದ ಕಾದಂಬರಿ ಛೇದ. ಸಂಬಂಧಗಳನ್ನು ಕೆಲವೊಮ್ಮೆ ನಾವು ಅನಗತ್ಯ, ಭಯೋ, ಸಂಶಯಗಳಿಂದ ಹೇಗೆ ಕೊಂದು ಹಾಕುತ್ತೇವೆ ಎನ್ನುವುದು ಛೇದ ಹೃದಯ ಛೇದಿಸುವಂತೆ ಮುಂದಿಡುತ್ತದೆ. ತಾನು ಭಯಪಡುವ, ದ್ವೇಷಿಸುವ, ಕಿಡಿಕಾರುವ ವ್ಯಕ್ತಿ ಈ ಜಗತ್ತಿನಲ್ಲಿ ಅಸ್ತಿತ್ವದಲ್ಲೇ ಇಲ್ಲ ಎನ್ನುವುದು ವೃದ್ಧ ಪೊಚಖಾನವಾಲನಿಗೆ ತಿಳಿಯುವ ಹೊತ್ತಿನಲ್ಲಿ ಎಲ್ಲವೂ ಮುಗಿದಿರುತ್ತದೆ. ಎಂದೂ ಸರಿಪಡಿಸಲಾಗದ ಒಡೆದ ಮನಸ್ಸಷ್ಟೇ ಅಲ್ಲಿ ಉಳಿದಿರುತ್ತದೆ. ಛೇದ ನನ್ನನ್ನೂ ಇಂದಿಗೂ ಕಾಡುತ್ತಿರುವ ಕಾದಂಬರಿ. ದೂರದ ಮುಂಬೈಗೆ ಎಂ.ಎ ಮಾಡುವ ನೆಪದಲ್ಲಿ ಹೊರಟಾಗಲೂ ಆಳದಲ್ಲಿ ಚಿತ್ತಾಲರ ಪಾತ್ರಗಳು ನನಗೆ ಧೈರ್ಯ ತುಂಬಿದ್ದವು. ಅಲ್ಲಿ ನನಗಾಗಿಯೇ ಕೆಲವು ಮನುಷ್ಯರು ಕಾಯುತ್ತಿದ್ದಾರೆ ಎಂಬ ನಂಬಿಕೆಯನ್ನು ನನಗೆ ಕೊಟ್ಟದ್ದೇ ಚಿತ್ತಾಲರ ಪಾತ್ರಗಳು. ನಾನು ಬಸ್ಸು ಹತ್ತಿದ್ದೆ. ನನ್ನ ನಂಬಿಕೆ ಸುಳ್ಳಾಗಲಿಲ್ಲ. ಮುಂದೊಂದು ದಿನ, ಆ ಗೆಳೆಯರ ಜೊತೆಗೆ ಚಿತ್ತಾಲರ ಮನೆಗೆ ಹೋದೆ. ಅವರ ಕಾದಂಬರಿಯಲ್ಲಿ ಬರುವ ಸೋಫಾದಲ್ಲಿ ಕುಳಿದೆ. ಬಾಲ್ಕನಿಯಲ್ಲಿ ನಿಂತು ಕಡಲನ್ನು ನೋಡಿದೆ. ನಾಗಪ್ಪನನ್ನು ಅವರ ಧ್ವನಿಯ ಮೂಲಕವೇ ಆಲಿಸಿದೆ. ಅವರ ಮನೆಯಿಂದ ನನ್ನ ಕೋಣೆ ಸೇರಿದ್ದೆ, ಆ ಅನುಭವವನ್ನು ಪುಟ್ಟ ಕವಿತೆಯನ್ನಾಗಿಸಿದೆ. ಮುಂಬಯಿ ಬಿಡುವ ಹೊತ್ತಿನಲ್ಲಿ ಚಿತ್ತಾಲರೇ ನನ್ನ ಮೊತ್ತ ಮೊದಲ ಕವನ ಸಂಕಲನ ‘ಪ್ರವಾದಿಯ ಕನಸು ಬಿಡುಗಡೆ’ ಮಾಡಿದರು. ಚಿತ್ತಾಲರ ಮುಂದೆಯೇ ನಾನು, ಚಿತ್ತಾಲರ ಕುರಿತ ನನ್ನ ಅನಿಸಿಕೆಗಳನ್ನು ಹಂಚಿಕೊಂಡೆ. ಚಿತ್ತಾಲರ ಕುರಿತ ಕವಿತೆಯನ್ನು ಆ ಸಂಕಲನದಲ್ಲಿ ಸೇರಿಸಲು ಧೈರ್ಯ ಸಾಲಲಿಲ್ಲ. ಆ ಕವಿತೆ ಇಲ್ಲಿ ನಿಮ್ಮ ಮುಂದಿದೆ. ಚಿತ್ತಾಲರ ಜೊತೆ ಸಂಜೆ… ….ಕೇಳಿದರು ಎಲ್ಲಿಂದ ಬಂದೆ? ನಿಮ್ಮೆದೆಯಿಂದ ಎಂದೆ ದಿನವಿಡೀ ದುಡಿದು ಬಳಲಿದ ಶಹರದಂತೆ ಒರಗಿದರು ಆ ಸೋಫಾದಲ್ಲಿ ಕೇಳಿದೆ ಇಲ್ಲಿ ಯಾವ ಒಳದಾರಿಯಲ್ಲಿ ನಡೆದರೆ ಹನೇಹಳ್ಳಿ? ಅಲ್ಲಲ್ಲಿ ಬಿತ್ತಿ ಬೆಳೆಸಿದ ವೌನ- ದ ಗಿಡದಲ್ಲಿ ಮಾತು ಚಿಗುರುವ ಹೊತ್ತು ಅಸಂಖ್ಯ ಬೋಗಿಗಳನ್ನು ಹೊತ್ತ ಗಾಡಿಯೊಂದು ದೀಪದ ಸನ್ನೆಗಾಗಿ ಕಾಯುತ್ತಿತ್ತು! ತೆರೆದ ಬಾಲ್ಕನಿಯಾಚನೆ ಶಹರವನ್ನು ಆಳುವ ಕಡಲು ಬೀಸುವ ಗಾಳಿಗೆ ಪಟಪಟನೆ ಬಡಿದುಕೊಳ್ಳುವ ಅದರ ರಕ್ತವರ್ಣದ ಸೆರಗು ತೆಕ್ಕೆಯಲ್ಲಿ ಅಧರಕ್ಕೆ ಅಧರ ಒತ್ತೆ ಇಟ್ಟವರು! ಇಬ್ಬರೆಂದರೆ ಬರೇ ಇಬ್ಬರು ನಾನು ಮತ್ತು ಅವರು ಹಾಯಿ ದೋಣಿಯಂತೆ ತೇಲುತ್ತಿರುವ ಕತೆಯ ಸಾಲೊಂದನ್ನು ಏರಿ ಕುಳಿತಿದ್ದೇವೆ… ಮೊರೆವ ಎದೆಯೊಳಗೆ ಭೋರ್ಗರೆವ ಅಕ್ಷರದ ಕಡಲು ಕತೆಗಾರ ನನ್ನ ಪಕ್ಕದಲ್ಲೇ ಅಂಬಿಗನಂತೆ ಹುಟ್ಟು ಹಾಕುತ್ತಿರುವಾಗ ನನಗೇಕೆ ಮುಳುಗುವ ಚಿಂತೆ…? ]]>

‍ಲೇಖಕರು G

February 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೇಮ ಎನ್ನುವ ವಿಸ್ಮಯ

ಬಿ ಎಂ ಬಶೀರ್ ಗುಜರಿ ಅಂಗಡಿ ಈ ಜಗತ್ತಿನ ಅತ್ಯಂತ ವಿಸ್ಮಯ ಯಾವುದು? ಎಂಬ ಪ್ರಶ್ನೆಗೆ ನಿಸ್ಸಂಶಯವಾಗಿ ಉತ್ತರಿಸಬಹುದು, ಅದು ಪ್ರೇಮ. ದೇವರ ಎಲ್ಲಾ...

ನನಗಿವತ್ತೂ ಚಂದ್ರದರ್ಶನವಾಗಿಲ್ಲ….

ದರ್ಶನ! ಬಿ ಎಂ ಬಶೀರ್ ಇಫ್ತಾರಿನ ಹೆಸರಲ್ಲಿ ಚೆಲ್ಲಿ ಹೋದ ಮೃಷ್ಟಾನ್ನದ ಅಗುಳುಗಳು ಇನ್ನೂ ಮೋರಿಯಲ್ಲಿ ತೇಲುತ್ತಿವೆ ಹಬ್ಬಕ್ಕೆಂದು ಕೊಂಡ...

6 ಪ್ರತಿಕ್ರಿಯೆಗಳು

 1. Jayalaxmi Patil

  ಬಶೀರ್,
  ಆಪ್ತ ಈ ಲೇಖನ.
  ನಾನೂ ಸಹ ಚಿತ್ತಾಲರ ಮನೆಯಲ್ಲಿ ಅವರ ಹಾಲಿನ ಬಾಲ್ಕನಿಗೆ ಹತ್ತಿರವಾಗಿರುವ, ಅವರು ಕಾದಂಬರಿ ಬರೆವ ಸೋಫಾದ ಮೇಲೆ ಕುಳಿತಿದ್ದೆ ಅನ್ನುವುದಕ್ಕಿಂತ ಚಿತ್ತಾಲರೇ ಕರೆದು ಕೂರಿಸಿದ್ದರು (ಅದು ಚಿತ್ತಾಲರು ಕುಳಿತು ಬರೆವ ಸೋಫಾ ಎಂದು ಓದಿ ಗೊತ್ತಿದ್ದರಿಂದ ಅಲ್ಲಿ ಕುಳಿತುಕೊಳ್ಳುವ ಧೈರ್ಯವಿರಲಿಲ್ಲ ನನ್ನಲ್ಲಿ). ಒಂದು ಗಂಟೆ ಕಾಲ ಮಾತಾಡಿ ಆದ ಆದ ಮೇಲೆ ಎದ್ದು ಹೊರಟಾಗ ಚಿತ್ತಾಲರು ನನಗೆ ಹೇಳಿದ್ದು, “ನಾ ಕಾದಂಬರಿ ಬರೆಯುವ ಸೋಫಾದ ಮೇಲೆ ಕುಳಿತಿದ್ದಿರಿ ಆದ್ದರಿಂದ ನಿಮ್ಮ ಬರವಣಿಗೆಯಲ್ಲಿ ಗಟ್ಟಿತನ ಬಿಟ್ಟು ಹೋಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ”….. ಅಂದಿನಿಂದ ಇಂದಿನವರೆಗೂ ಬರೆಯಲು ಕುಳಿತಾಗೊಮ್ಮೆ ಪ್ರತಿ ಪ್ರತೀ ಸಲ ಚಿತ್ತಾಲರ ಮಾತು ನೆನಪಾಗಿ ಸಣ್ಣಗೆ ಎಚ್ಚರಿಕೆಯ ಗಂಟೆ ಬಾರಿಸಿದಂತಾಗಿ, ಬರೆದದ್ದನ್ನು ಹತ್ತು ಬಾರಿ ಓದಿಕೊಳ್ಳುವಂತಾಗುತ್ತದೆ!! ಎಷ್ಟೋ ದಿನಗಳ ಕಾಲ ಅವರ ಈ ಮಾತಿಗೆ ಹೆದರಿ ಬರೆಯುವುದಕ್ಕೇ ಹೆದರಿಕೆಯಾಗುತ್ತಿತ್ತು… 🙂

  ಪ್ರತಿಕ್ರಿಯೆ
 2. Giridhar Karkala

  Wav Bashir…nimma muddaada photo nodi thumba khushiyaaitu.Aaga
  Mumbainalliddaga narapethalananthiddavaru…mangalurige bandidde thada..hegiddavaru hegaagibittrappa! Nimma kaavyada haage mai kai thumbikondu chanda kaanistiri.Keep it up..UP..UPPPPPPPPPPPP.

  ಪ್ರತಿಕ್ರಿಯೆ
 3. Giridhar Karkala

  Bashir… Chitthalara sandarshana chennagide.. Mumbainalliddaga Naanu kooda Kaikini jothege,Jokatte jothege aneka baari chttalara manege hogiddene. avara maneli avara munde kuthkollode ondu kaavya odida haage…..omme phonenalli avaru nange 15 nimisha chennagi
  baididdu innoo manasinalli jogula haadidante kelistide…..
  Chittalara jothegina odanaatavannu matthe nenapisidiri..Thanks.

  ಪ್ರತಿಕ್ರಿಯೆ
 4. ಬಸವ ರಾಜು ಎಲ್.

  ಅಧ್ಭುತ!
  ಚಿತ್ತಾಲರ ನೆನಪು ಮತ್ತು ಈ ನಿಮ್ಮ ಕವನ!!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: