`ಬಸು’ ಗೆದ್ದರು

-ಕೆ ನೀಲಾ
ಕೆ ನೀಲಾ ಹೋರಾಟಗಳ ಮೂಲಕ ಸಮಾಜದ ಕಣ್ಣೋಟ ಪಡೆದವರು. ಇಂತಹ ಅನುಭವಗಳ ಮೊತ್ತವೇ ‘ಬದುಕು ಬಂಧೀಖಾನೆ’. ಓದಲೇಬೇಕಾದ ಪುಸ್ತಕ. ಇತ್ತೀಚಿಗೆ ಪ್ರಕಟವಾದ ಅವರ ಅಂಕಣ ಬರಹಗಳ ಸಂಕಲನ ‘ನೆಲದ ಪಿಸುಮಾತು’ ಅವರ ಹೋರಾಟದ ಅನುಭವಗಳನ್ನು ಬಿಡಿಸಿಡುತ್ತದೆ.
ಜ್ಯೋತಿ ದಾ ಇಲ್ಲವಾದ ಈ ನೋವಿನಲ್ಲಿ ಆ ಪುಸ್ತಕದಿಂದ ಆಯ್ದ ಒಂದು ಬಾಗ ನಿಮಗಾಗಿ
ಚಿತ್ರ: ಫ್ರಂಟ್ ಲೈನ್
ಕನ್ನಡದ ಪಶ್ಚಿಮ ಬಂಗಾಳದಲ್ಲಿ ಇದ್ದಷ್ಟು ದಿನವೂ ನನಗೊಂದು ಪ್ರಶ್ನೆ ಕಾಡುತ್ತಲೇ ಇತ್ತು. ನಂದಿಗ್ರಾಮವನ್ನು ಹೊತ್ತಿಸಿ, ಎಡರಂಗ ಸರ್ಕಾರವನ್ನು ಮುಗಿಸಿ ಬಿಡುವ ಎಲ್ಲಾ ಕುತಂತ್ರಗಳನ್ನು ಹೆಣೆದ ಮಾಧ್ಯಮಗಳ ಮಾತನ್ನು ಪ.ಬಂಗಾಳದ ಬಹುಸಂಖ್ಯಾತ ಜನತೆ ಏಕ ಪಕ್ಷೀಯವಾಗಿ ನಂಬುತ್ತಿಲ್ಲ. ಬದಲಿಗೆ ಇಂಥ ಬಹಳಷ್ಟು ಆಟಗಳನ್ನು ನೋಡಿ ಪಳಗಿದವರಂತೆ ವರ್ತಿಸುವುದು ಹೇಗೆ ಸಾಧ್ಯ? ಎಡರಂಗವನ್ನು ವಿರೋಧಿಸುವ ಶಕ್ತಿಗೆ ಎದುರಾಗಿ ಜನಪರ ದನಿಗಳೂ ಇಮ್ಮಡಿ ಶಕ್ತಿಯಿಂದ ಸಜ್ಜಾಗುವ ಪರಿ ನನ್ನಲ್ಲಿ ಬೆರಗು ಮತ್ತು ಪ್ರಶ್ನೆ ಹುಟ್ಟು ಹಾಕಿತ್ತು.
ನನ್ನೆಲ್ಲ ಕುತೂಹಲಕ್ಕೆ ಪ್ರಶ್ನೆಗೆ ಉತ್ತರವಾಗಿ `ಸುರಭಿ ಬ್ಯಾನರ್ಜಿ’ ಬರೆದ `ಜ್ಯೋತಿಬಸು’ ಜೀವನ ಚರಿತ್ರೆಯ ಪುಟಗಳು ಬಿಚ್ಚಿಕೊಳ್ಳತೊಡಗಿದವು. ಆರ‍್. ಕೆ.  ಹುಡುಗಿ ಉರುಫ್ ರಾಹು ಅವರು ಕನ್ನಡಿಸಿದ ಕೈ ಬರಹದ ಪುಸ್ತಕದ ಮುಂದೆ ಒಂದರ್ಥದಲ್ಲಿ ತಪಸ್ಸಿನಂತೆಯೇ ಕೂತೆ. ಒಮ್ಮೆ ಇಡಿಯಾಗಿ ಓದಲು. ನನ್ನ ಪಾಲಿಗೆ ಅದು ಬರೀ ಓದಾಗಲಿಲ್ಲ. ಸ್ವ-ಅಂತರ್ ವಿಮರ್ಶೆಯ ಒಳತೋಟಿಯ ಚಿಂತನಾಮುಖಿವಾಗಿತ್ತು. ಕರ್ನಾಟಕದ ಜನಪದರ ಚಿತ್ರಣವೂ ಮೆದುಳ ಮಗ್ಗುಲಲಿ ಚಲಿಸುತ್ತಿತ್ತು. ಜ್ಯೋತಿ ಬಸು ದಣಿವರಿಯದ ಜಂಗಮ. ಮಾರ್ಕ್ಸ್ ವಾದದ ಬೆಳಕನ್ನು ಬಂಗಾಲದುದ್ದಕ್ಕೂ ಪಸರಿಸಿದ ಸಂಗಾತಿ.
ತುಂಬ ಚಿಕ್ಕಂದಿನಿಂದ ಜ್ಯೋತಿಬಸು ಕುರಿತು ಮಾಧ್ಯಮಗಳಲ್ಲಿ ಬಂದದ್ದೆಲ್ಲವನ್ನೂ ಸಂಗ್ರಹಿಸುವ ಹವ್ಯಾಸದ ಸುರಭಿ ಬ್ಯಾನರ್ಜಿ ಮುಂದೊಮ್ಮೆ ಅತ್ಯಂತ ಪ್ರೌಢತೆಯಿಂದ ಅವರ ಜೀವನ ಚರಿತ್ರೆ ಬರೆಯಲು ತೀರ್ಮಾನಿಸಿದರು. ಆದರೆ ಜ್ಯೋತಿ ಒಪ್ಪಲೇ ಇಲ್ಲ. ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಿರಲಿ, ಮಹಾನ್-ಮಹಾತ್ಮನಿರಲಿ ಅವನು ಸಾವಕಾಶವಾಗಿ ಮರೆವಿನ ಪ್ರಪಂಚಕ್ಕೆ ಜರುಗುವುದು ಅನಿವಾರ್ಯ. ಹಾಗಾಗಿ ಜೀವನ ಚರಿತ್ರೆಯಿಂದ ಏನು ಪ್ರಯೋಜನ? ಎಂಬುದು ಬಸು ಅವರ ಸಂತವಾಣಿ. ಆದರೆ ಪಟ್ಟು ಬಿಡದ ಸುರಭಿ ಕಡೆಗೂ ಗೆದ್ದರು….
ನಾನು ಒಂದೊಂದೇ ಪುಟ ತಿರುವತೊಡಗಿದೆ. ಮಾನವನ ನಡೆಯು ವರ್ಗ ಸಂಘರ್ಷದ ಚರಿತ್ರೆ ಹೊಂದಿದೆ. ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಚಳುವಳಿಯೂ ಎಷ್ಟೋ ಸಂಘರ್ಷಗಳ ಕೆಂಡ ಹಾದು ಬಂದಿದೆ. ಪ್ರತಿ ಬಾರಿಯೂ ಅಗ್ನಿ ಪರೀಕ್ಷೆಯ ದಿವ್ಯ ಎದುರಿಸಿದೆ. ಮಗ ಬ್ಯಾರಿಸ್ಟರ್ ಆಗಲೆಂದು ಬಸು ಅವರ ತಂದೆ ಡಾ: ನಿಶಿಕಾಂತ ಮಗನನ್ನು ಇಂಗ್ಲೆಂಡಿಗೆ ಕಳಿಸಿದರೆ, ವಾಪಾಸಾದದ್ದು ಮಾರ್ಕ್ಸ್ ವಾದಿ ಕಾಮ್ರೇಡ್ ಜ್ಯೋತಿಬಸು. ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ರಣಕಹಳೆ ಮೊಳಗಿಸಲು ಸನ್ನದ್ಧರಾಗಿ ಭಾರತಕ್ಕೆ ಕಾಲಿಟ್ಟ ಬಸು ಈ ಹೊತ್ತಿನವರೆಗೂ ದುಡಿವ ಜನತೆಯ ಸಿದ್ದಾಂತವನ್ನು ಅತ್ಯಂತ ವಿಧೇಯತೆ ಮತ್ತು ವಿನಯದಿಂದ ಜಾರಿ ಮಾಡುವ ಶಿಸ್ತಿನ ಸಿಪಾಯಿಯೇ ಹೌದು. ಸಾದಾ ಬಂಗಾಲಿ ಅಂಗಿ-ಧೋತರ ಧರಿಸಿ, ಜನರ ನಡುವೆ ನುಗ್ಗಿದ ಜ್ಯೋತಿ ಬಸು ಜನತೆಯ ಹೃದಯದಾಳಕ್ಕಿಳಿದು ಬಿಟ್ಟರು. ಸಣ್ಣ ವಾಕ್ಯಗಳ, ನೇರ ನುಡಿಯ ಮನ ಮೀಟುವ ಮಾರ್ಮಿಕ ಸತ್ಯಗಳ ಬಿಚ್ಚಿಡುತ್ತಾ ಒಮ್ಮೆ ಬಂಗಾಲಿ ಜನತೆಯ ಮನಗೆದ್ದ ಜ್ಯೋತಿಬಸು ಇಂದಿಗೂ ಜನನಾಯಕರೇ. ಅದ್ಭುತ ಸಂಘಟನಾ ಚಾತುರ್ಯ, ಜನರ ಸಮಸ್ಯೆಗಳನ್ನು ಅರಿಯುವ ತೀಕ್ಷ್ಣತೆ ಎಂಥದೇ ಸಂಕಟಗಳು ಎರಗಿದರೂ ವಿಚಲಿತರಾಗದೆ ಎದುರಿಸುವ ಪರಿ. ಬಂಗಾಲದ ಕಮ್ಯುನಿಸ್ಟ್ ಚಳುವಳಿಯು ಉತ್ತರೋತ್ತರವಾಗಿ ಬೆಳೆಯುವಲ್ಲಿ ಕಾರಣ ವಾಯಿತು. ವಿಮರ್ಶೆಯ ಒಳಗಣ್ಣು ತೆರೆದೇ ಕೆಲಸ ಮಾಡುವ ಜ್ಯೋತಿಗೆ ಸ್ವಂತ ಮತ್ತು ಪರರ ಮಿತಿಗಳೂ ಶಕ್ತಿಯೂ ಸ್ಪಷ್ಟವಾಗಿ ಅರ್ಥವಾಗುತ್ತಿತ್ತು.
1943ರಲ್ಲಿ ಬಂಗಾಲದಲ್ಲಿ ಕಾಣಿಸಿಕೊಂಡ ಭೀಕರ ಬರ ಜ್ಯೋತಿಯನ್ನು ತಲ್ಲಣ ಗೊಳಿಸಿದವು. ರಸ್ತೆಯುದ್ದಕ್ಕೂ ಪುರುಷ-ಮಹಿಳೆ-ಮಕ್ಕಳ ಸುಕ್ಕುಗಟ್ಟಿದ ಹೆಣಗಳ ರಾಶಿ, ಪಕ್ಷವು ಬರ ಪರಿಹಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿತು. ಜ್ಯೋತಿ ಬಂಗಾಳದ ನೆಲದುದ್ದಕ್ಕೂ ಓಡಾಡಿದರು. ಹಸಿವಿನ ಪ್ರಖರತೆ ಮನಸ್ಸು ತಟ್ಟಿ ಕಣ್ಣೀರು ತಂದರೆ, ಹಸಿವುಗನ್ನವನಿಕ್ಕಲಾರದೆ ಬರವನ್ನೂ ಇನ್ನೂ ಕ್ರೂರಗೊಳಿಸಿದ ಬಂಗಾಳದ ಸರ್ಕಾರದ ಬಗ್ಗೆ ರೋಷ ಹುಟ್ಟಿತು. ಭೀಕರ ಬರವು ಜ್ಯೋತಿಯನ್ನು ಮತ್ತಷ್ಟು ಗಟ್ಟಿಗೊಳಿಸಿ ಶ್ರಮಿಕರನ್ನು ಸಂಘಟಿಸುವತ್ತ ತನ್ಮಯಗೊಳಿಸಿತು.
1946ರ ಆರಂಭದಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆದು ಬಸು ಸ್ಪರ್ಧೆಗಿಳಿದರು ಮತ್ತು ಕಾಂಗ್ರೆಸ್ಸಿನ ಗೂಂಡಾಗಿರಿ, ಎಲ್ಲ ತೆರನ ಹೇಯ ಕುಟಿಲ ಕುತಂತ್ರಗಳನ್ನು ಪಕ್ಷವು ಸಮರ್ಥವಾಗಿ ಎದುರಿಸಿ `ಬಸು’ ಗೆದ್ದರು. ಇಂದಿರಾಗಾಂಧಿಯ ಸರ್ವಾಧಿಕಾರದ ಸಂದರ್ಭವಾದ ತುರ್ತು ಪರಿಸ್ಥಿತಿಯ ಕಾಲಾವಧಿಯಲ್ಲಿ ಅಂದರೆ 1972ರ ಚುನಾವಣೆಯಲ್ಲೊಂದು ಬಾರಿ ಜ್ಯೋತಿ ಸೋತಿದ್ದು ಬಿಟ್ಟರೆ ಮತ್ತೆಂದೂ ಸೋಲಲೇ ಇಲ್ಲ. “1972ರ ಚುನಾವಣೆಗಳು ಸಂಸದೀಯ ಪ್ರಜಾಸತ್ತೆಯ ಲಜ್ಜಾಹೀನ ಅಣಕದಂತಿದ್ದವು” ಎನ್ನುತ್ತಾರೆ ಬಸು.
ಪಕ್ಷವು ಹೆಜ್ಜೆ ಹೆಜ್ಜೆಗೂ ವರ್ಗ ವಿರೋಧಿಗಳಿಂದ ಸಾಮ್ರಾಜ್ಯಶಾಹಿಗಳಿಂದ ಅನೇಕ ಸಂಕಟಗಳನ್ನು ಎದುರಿಸಿತು. ಆಗೆಲ್ಲ ಜ್ಯೋತಿಬಸು ಮತ್ತು ಪಕ್ಷದ ಸಂಗಾತಿಗಳು ಅತ್ಯಂತ ದೃಢತೆಯಿಂದ ಎದುರಿಸಿದ್ದು, ಮಾತ್ರವಲ್ಲ, ಕಂಟಕಗಳ ಸಂದರ್ಭದಲ್ಲೆಲ್ಲ ಜನತೆಯ ಪ್ರಶ್ನೆಗಳನ್ನು ಕೈಗೆತ್ತಿಕೊಂಡು ತೀವ್ರತರ ಚಳುವಳಿಗೆ ಮುನ್ನುಗ್ಗಿರುವುದರಿಂದಲೇ ಅಡೆ-ತಡೆಗಳನ್ನು ಮೆಟ್ಟಿ ಮೀರಿ ಪಕ್ಷ ಬೆಳೆಯಲು ಸಾಧ್ಯವಾಯಿತು. ಬಂಗಾಲದ ಕಾಂಗ್ರೆಸ್ ಪಕ್ಷವಂತೂ ಸಿಪಿಐ(ಎಂ) ಅನ್ನು ಬಗ್ಗುಬಡಿಯಲು ನೀಚಾತಿ ನೀಚ ಮಟ್ಟಕ್ಕೆ ಇಳಿದಾಗೆಲ್ಲ ಅದಕ್ಕೆ ಎದುರೇಟಾಗಿ ಜ್ಯೋತಿ ಬಂಗಾಳದುದ್ದಕ್ಕೂ ಪಾದರಸದಂತೆ ಚಲಿಸಿ ಸತ್ಯವನ್ನು ಜನತೆಯ ಮುಂದೆ ಇಟ್ಟರು, ಅಷ್ಟೆ ಧೀಮಂತಿಕೆಯಿಂದ ಎದುರಿಸಿದರು.
ಜ್ಯೋತಿ ಬಸುಗಿರುವ ವಿಶಿಷ್ಟ ವ್ಯಕ್ತಿತ್ವವೇ ವಿರೋಧಿಗಳಿಗೂ ದಂಗು ಬಡಿಸಿದ್ದು, ಪಕ್ಷದ ಮೇಲೆ ನಿಷೇಧ ಹೇರಿದಾಗ, ಚೀನಾ ಭಾರತ ಗಡಿ ಪ್ರಶ್ನೆಯ ಸಂದರ್ಭದಲ್ಲಿ ಪಕ್ಷದ ಮೇಲೆ ಅಪಪ್ರಚಾರದ ಸುರಿಮಳೆ ಆದಾಗ 1964 ರಲ್ಲಿ ಪಕ್ಷ ಪರಿಷ್ಕರಣಾವಾದಿಗಳಿಂದ ಬೇರ್ಪಟ್ಟಾಗ, ತುರ್ತು ಪರಿಸ್ಥಿತಿಯ ಬಂಧನಗಳು ಎರಗಿದಾಗ, ಕೇಂದ್ರ ಸರ್ಕಾರ (ಕಾಂಗ್ರೆಸ್)ವು ಕುತಂತ್ರದಿಂದ ಸರ್ಕಾರ ಉರುಳಿಸಿದಾಗ, ಪ.ಬಂಗಾಳದೆಲ್ಲೆಡೆ ಮತಗಟ್ಟೆ ವಶ (ಬೂತ್ ಕ್ಯಾಪ್ಚರ್), ಗೂಂಡಾಗಿರಿ ಮಾಡಿ ಕಾಂಗೈ ಸಂಸದೀಯ ಮೌಲ್ಯವೇ ಗಾಳಿಗೆ ತೂರಿ ಸಿಪಿಐ(ಎಂ) ಗೆಲುವಿಗೆ ಧಕ್ಕೆ ಮಾಡಿದಾಗ, ಬಸು ಮೇಲೆ ಹಲ್ಲೆ ಮತ್ತು ಕೊಲೆ ಪ್ರಯತ್ನಗಳು ನಡೆದಾಗ ನಕ್ಸಲೈಟರು ಹೆಜ್ಜೆ-ಹೆಜ್ಜೆಗೂ ಅಡ್ಡಿ ಮಾಡಿದಾಗ, ಜಮೀನ್ದಾರರು ಹೆಡೆಯೆತ್ತಿ ಬುಸುಗುಟ್ಟಿದಾಗ, ಕೋಮುದಂಗೆ ಹಬ್ಬಿಸಲು ಪ್ರಯತ್ನಿಸಿದಾಗ ಪಕ್ಷವನ್ನು ಗಟ್ಟಿಗೊಳಿಸುತ್ತಲೇ ಮತ್ತೆ ಮತ್ತೆ ಜನರಿಗೆ ಪಕ್ಷದ ನಿಲುವು ಹಾಗೂ ವಿರೋಧಿಗಳ ಕುತಂತ್ರ ಬಯಲುಗೊಳಿಸಿದ ಕಾರಣವಾಗಿ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಆಂದೋಲನವು ನೂರ್ಮಡಿಯಾಗಿ ಬೆಳೆಯತೊಡಗಿತು.ಇದೆಲ್ಲಕ್ಕೂ ಮಿಗಿಲಾಗಿ ಮೆರಗು ವ್ಯಕ್ತಿತ್ವದ ಜ್ಯೋತಿ ಅವರ ನಿಷ್ಕಲ್ಮಷ ನಡವಳಿಕೆ, ಅಧಿಕಾರ ದಾಹವಿಲ್ಲದ ರಾಜಕಾರಣ ಸೇಡು ಸಂಸ್ಕೃತಿಯಿಲ್ಲದ ನಡೆ, ನಿಷ್ಠುರ ನಿಲುವು ಬಂಗಾಳದ ಜನತೆಯನ್ನು ಸೂಜಿಗಲ್ಲಿನಂತೆ ಸೆಳೆದವು. 1967ರ ಸಮಯ ಸಮ್ಮಿಶ್ರ ಸರ್ಕಾರದಲ್ಲಿ ಸಿಪಿಐ(ಎಂ)ಗೆ ಹೆಚ್ಚಿನ ಸ್ಥಾನ ಲಭಿಸಿದ್ದರೂ ಬಾಂಗ್ಲಾ ಕಾಂಗ್ರೆಸ್ಸಿನ ಅಜೊಯ್ ಮುಖರ್ಜಿ ಮುಖ್ಯಮಂತ್ರಿಯಾಗಿ ಬಸು ಉಪಮುಖ್ಯಮಂತ್ರಿಯಾದರು.  ಕಾಂಗ್ರೆಸ್ ಅನ್ನು ವಿರೋಧಿಸಿ ಜನತೆ ಕೊಟ್ಟ ಆದೇಶ ಮುಖ್ಯ. ಜನರ ವಿಶ್ವಾಸಕ್ಕೆ ದ್ರೋಹ ಮಾಡಬಾರದೆಂಬ ನಂಬಿಕೆ ಬಸು ಅವರದ್ದು, “ಅಧಿಕಾರವೆಂಬುದು ಜನತೆಯಿಂದಲೇ ಹೊರಹೊಮ್ಮುತ್ತದೆ ಮತ್ತು ಅಂತಿಮವಾಗಿ  ಜನತೆಯಲ್ಲಿಯೇ ಹರಳುಗಟ್ಟುತ್ತದೆ” ಎಂದು ಮಾರ್ಮಿಕವಾಗಿ ಹೇಳುತ್ತಾರೆ ಜ್ಯೋತಿದಾ. ಆದ್ದರಿಂದಲೇ 1977 ಜೂನ್ನಲ್ಲಿ ಜ್ಯೋತಿ ನೇತೃತ್ವದ ಸಿಪಿಐ(ಎಂ) ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜ್ಯೋತಿಬಸು ತನ್ನ ಸಹೋದ್ಯೋಗಿಗಳನ್ನು ಕರೆದು ಹೇಳುತ್ತಾರೆ; “ನಾವು ನಮ್ಮ ಕಾರ್ಯಕ್ರಮ ಜಾರಿಗೊಳಿಸಲಿರುವುದು ರೈಟರ್ಸ್ ಬಿಲ್ಡಿಂಗಿನಿಂದಲ್ಲ. ಬದಲಾಗಿ ಹೊಲ-ನೆಲಗಳಿಂದ, ಫ್ಯಾಕ್ಟರಿ, ಫಾರ್ಮಗಳಿಂದ. ಇದು ಜನತೆಯ ಅಧಿಕಾರ, ಜನತೆಗಾಗಿ ಜನತೆಯಿಂದ ಜಾರಿಯಾಗಬೇಕು’. ಹೌದು ಇದೇ ಜ್ಯೋತಿ ಯಶಸ್ಸಿನ ಗುಟ್ಟು. “ಕಾರ್ಮಿಕ ವರ್ಗ ಮತ್ತು ರೈತಾಪಿಗಳ ಸದೃಢ ಸಖ್ಯತೆಯಿಂದ ಮಾತ್ರವೇ ದೇಶದ ಸಾರ್ವಭೌಮತೆ ಉಳಿಸಲು ಸಾಧ್ಯ” ಎಂಬುದು ಅವರ ಅಚಲ ನಂಬಿಕೆ.
ಹೀಗೆ ಜನತೆಯನ್ನು ಮಾತ್ರ ನಂಬಿ ಅತ್ಯಂತ ಪಾರದರ್ಶಕವಾಗಿ, ಧೀಮಂತಿಕೆ ಯಿಂದ ಪಕ್ಷ ಕಟ್ಟಿ ಬೆಳೆಸಿದ ಸಂಗಾತಿಗಳ ಮಹಾಚೇತನ ಜ್ಯೋತಿಯನ್ನು ವಿರೋಧಿಸಲು ವರ್ಗ ವಿರೋಧಿಗಳಿಗೂ ಸಾಧ್ಯವಿರಲಿಲ್ಲ. ಆದರೆ ಬಂಗಾಲದ ಕಮ್ಯುನಿಸ್ಟ್ ಆಂದೋಲನವು ಒಳ-ಹೊರಗಿನ ಧಾಳಿಯನ್ನು ಮೆಟ್ಟಿ ಮೀರಿ ಬೆಳೆದ ವೀರ ಪರಂಪರೆ ಹೊಂದಿದೆ. ಆ ಪರಂಪರೆಯ ಜನತೆಯನ್ನು ಜನಪರ ರಾಜಕಾರಣದ ದಾರಿ ತುಳಿವಂತೆ ಮಾಡಿದೆ. ದುಡಿವ ವರ್ಗದ ಚಳುವಳಿ ಕಟ್ಟುತ್ತಲೇ ಕೋಮುವಾದವನ್ನು ಹಿಮ್ಮೆಟ್ಟಿಸಲಾಗಿದೆ.
ಸಾಮ್ರಾಜ್ಯಶಾಹಿ, ಕೋಮುವಾದ, ಭೂ ಮಾಲಕ ಶತೃಗಳನ್ನು ಗುರುತಿಸುವ ರಾಜಕಾರಣದ ಅರಿವು ಹೊಂದಿರುವ ಪ.ಬಂಗಾಳದ ಜನತೆ ನಂದಿಗ್ರಾಮದ ಘಟನೆಗಳನ್ನು ಅರ್ಥೈಸಿಸಿಕೊಳ್ಳುವ ಕ್ರಮದಿಂದ ಖಂಡಿತ. ಈಗ ಪ್ರಶ್ನೆ ಕಾಡುವುದಿಲ್ಲ. ಜನಪರ ರಾಜಕೀಯವನ್ನೇ ಉಸಿರಾಗಿಸಿಕೊಂಡ ಸಂಗಾತಿಗಳಿಗೆ ಪ.ಬಂಗಾಳದ ಜನತೆಗೆ, ಕವಿ ಹೃದಯದ ಸಂಗಾತಿ `ಬಸುದಾ’ ಗೆ ಲಾಲ್ ಸಲಾಂ

‍ಲೇಖಕರು avadhi

January 18, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

  1. tadagalale surendra

    aaginnu nanage 28 vayassu. kolkattaadalli namma(LIC) samghataneya akhila bharatha sammelana alli nadedittu.mukhyamantri jyoti basurinda udghatane. kutuhaladinda avarigaagi kaadevu. bahala hottu kaledevu. avaru banda sulivu kaanalilla. aamele gottaayitu, avareegaagale bandiddaare mattu olagadeye iddaare endu. olage nodidare haudu, avaru ellarolagobbaraagi vastu pradarshana noduvudaralli magnaraagiddaru. namage nambalu saadhyavaagalilla. aadare adu sathya. namma andaajiddaddu alli nooraaru polisaru irabekittalla. aanantara gottaayitu. adu bangaalada hosa parampare endu. polisara haavali illade avaru janasaamaanyarante odaadikondu namma jate bahala kaala iddu udghaatane maadi hodaru. namma mele avaru eshtu prabhaava beeridarendare, naavu ande teermaana maadidevu, seridare intha paksha serabeku endu. matte naavu hintirugi nodalilla. jyoti basu daihikavaagi namma jate illa nija, aadare avara prabhaava enduu kadameyaaguvudilla. avara kanasannu nanasu maaduvude naavu avarige sallisuva shradhdhaanjali!
    tadagalale surendra

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: