ವೆಂಕಿ
ನ್ಯೂಯಾರ್ಕ್ ಎಂಬ ನಗರಿಗೆ ಎಷ್ಟೊಂದು ವ್ಯಕ್ತಿತ್ವ. ನ್ಯೂಯಾರ್ಕ್ ಎಂಬುದು ಒಬ್ಬೊಬ್ಬರಿಗೂ ಒಂದೊಂದು ರೀತಿಯ ನಗರ. ಅವರವರ ಭಾವಕ್ಕೆ ಮೂಡಿ ನಿಲ್ಲುವ ಮಹಾನಗರಿ. ಎಲ್ಲವೂ ನೇರವಾಗಿ ನನ್ನ ಅನುಭವಕ್ಕೆ ಬಂದಿತು. ಕಾಣದ ರೀತಿಯಲ್ಲಿ ಬೆಸೆದುಕೊಂಡಿರುವ ಮಾನವ ಸಂಬಂಧಗಳಿಗೂ ಸಾಕ್ಷಿ ಒದಗಿಸಿತು.
ಆರು ವರ್ಷಗಳ ಹಿಂದೆ ಸೆಪ್ಟೆಂಬರ್ ೧೧, ನ್ಯೂಯಾರ್ಕ್ ಹಾಗೂ ನ್ಯೂಯಾರ್ಕಿಗರನ್ನು ಇನ್ನಿಲ್ಲದಂತೆ ತಲ್ಲಣಗೊಳಿಸಿತು. ಭಯೋತ್ಪಾದಕರ ನೇರ ಹೊಡೆತಕ್ಕೆ ಸಿಕ್ಕ, ಅವರಿಂದ ಕಾಣದಂತೆ ಜರ್ಜರಿತಗೊಂಡ ಎಷ್ಟೋ ಮಂದಿಗೆ ಅದು ಭಾರವಾದ ವಾರವಾಗಿತ್ತು. ಈ ಘಟನೆಯ ನಂತರದ ಬೆಳವಣಿಗೆಗಳು ಇಡೀ ಜಗತ್ತನ್ನೇ ಬದಲಿಸಿ ಹಾಕಿದೆ. ಕ್ರುದ್ಧಗೊಂಡ ಅಮೆರಿಕ, ಅಫ್ಘಾನಿಸ್ತಾನ ಹಾಗೂ ಇರಾಕಿನಲ್ಲಿ ಯುದ್ಧ ಸಾರಿತು. ಸಾವಿರಾರು ಜೀವಗಳು ಇಲ್ಲವಾದವು. ಜಗತ್ತಿನಾದ್ಯಂತ ತಲ್ಲಣ, ಭೌಗೋಳಿಕ ಭೂಕಂಪ ಉಂಟಾಯಿತು.
ಸೆಪ್ಟೆಂಬರ್ ೧೧ರಂದು ಈ ಕರಾಳ ದಿನದಂದು ಪ್ರಾಣ ತೆತ್ತವರಿಗೆ ಕಂಬನಿ ಮಿಡಿಯಲಾಯಿತು. ಮೊಂಬತ್ತಿಗಳು ಬೆಳಗಿದವು. ಸಂತಾಪ ಸಭೆ ನಡೆಯಿತು. ಈ ಕರಾಳ ದಿನದ ಮೊದಲ ವಾರ್ಷಿಕೋತ್ಸವದಂದು ನ್ಯೂಯಾರ್ಕಿಗೆ ನ್ಯೂಯಾರ್ಕೇ ಸ್ತಬ್ಧಗೊಂಡಿತ್ತು. ಅದಕ್ಕೆ ಹೋಲಿಸಿದರೆ ಕ್ರಮೇಣ ಚಟುವಟಿಕೆ ಕಡಿಮೆಯಾಗುತ್ತಿದೆ. ಆದರೆ ದುರಂತದ ತೀವ್ರತೆ ಮಾತ್ರ ನ್ಯೂಯಾರ್ಕಿಗರ ಮನದಲ್ಲಿ ಹಾಗೇ ಉಳಿದಿದೆ.
ನ್ಯೂಯಾರ್ಕಿಗರಿಗೆ ಕಾಲ ಸದಾ ಚಲಿಸುತ್ತಿರಬೇಕು ಎಂಬುದು ಗೊತ್ತು. ಹಾಗಾಗಿಯೇ ಸಪ್ಟೆಂಬರ್ ೧೧ರ ವಾರವೂ ನ್ಯೂಯಾರ್ಕ್ ಹಲವು ಚಟುವಟಿಕೆಗಳ ಆಗರವಾಗಿತ್ತು. ಆ ವಾರ ನ್ಯೂಯಾರ್ಕಿನಲ್ಲಿ ಫ್ಯಾಷನ್ ವೀಕ್. ಕಾಲ್ವಿನ್ ಕೀನ್, ಮಾರ್ಕ್ ಜೇಕಬ್ ರಂತಹ ಘಟಾನುಘಟಿ ವಿನ್ಯಾಸಕಾರರು ತಮ್ಮ ಇತ್ತೀಚಿನ ಡಿಸೈನುಗಳನ್ನು ರಂಗಕ್ಕೇರಿಸಿದರು. ಮಾಡೆಲ್ ಗಳು ಸ್ಟೈಲಿಷ್ ಉಡುಪು ಧರಿಸಿ, ಜಗತ್ತೇ ತಮ್ಮನ್ನು ಅನುಕರಿಸಲಿ ಎಂಬಂತೆ ಬಿನ್ನಾಣದ ನಡಿಗೆ ಹಾಕಿದರು. ಟೆನ್ನಿಸ್ ತಾರೆಯರು, ಹಾಲಿವುಡ್ ನಟನಟಿಯರು, ಪ್ರಖ್ಯಾತ ಮಾಡೆಲ್ ಗಳು ಈ ಪ್ರದರ್ಶನದಲ್ಲಿ ಹಿಂದೆ ಬೀಳಲಿಲ್ಲ. ಮುಂದಿನ ಒಂದು ವರ್ಷದುದ್ದಕ್ಕೂ ಮನೆಮಾತಾಗಲಿರುವ ಡಿಸೈನುಗಳನ್ನು ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಇನ್ನೊಂದೆಡೆ ಅಷ್ಟೇನೂ ಫೇಮಸ್ ಅಲ್ಲದ ವಿನ್ಯಾಸಕಾರರು ಈ ವಿನ್ಯಾಸಗಳನ್ನು ಕಾಪಿ ಮಾಡಿ ಕಡಿಮೆ ಬೆಲೆಯಲ್ಲಿ ಮಾರಾಟಕ್ಕಿಡುವಲ್ಲಿ ಬ್ಯುಸಿಯಾಗಿದ್ದರು. ಇದು ನ್ಯೂಯಾರ್ಕಿಗಷ್ಟೇ ಸೀಮಿತವಾಗಿರಲಿಲ್ಲ. ನ್ಯೂಯಾರ್ಕ್ ಫ್ಯಾಷನ್ ಲೋಕ ಹೊಸದನ್ನು ಕಾಣುತ್ತಿದ್ದಂತೆಯೇ ದೂರದ ಜೈಪುರ, ದೆಹಲಿ, ಹೈದ್ರಾಬಾದಿನ ಟೈಲರ್, ಡಿಸೈನರುಗಳು ಬ್ಯುಸಿಯಾಗಿ ಹೋದರು. ಇಮೇಲ್ ನಲ್ಲಿ ಕದ್ದು ಬಂದಿಳಿದ ವಿನ್ಯಾಸಗಳು ರಾತ್ರೋರಾತ್ರಿ ಪುನರ್ ಸೃಷ್ಟಿಯಾದವು. ಅಷ್ಟೇ ಅಲ್ಲ, ಅದೇ ನ್ಯೂಯಾರ್ಕಿಗೆ ಈ ಎಲ್ಲವನ್ನೂ ಸಾಗಿಹಾಕಲಾಯಿತು. ಸಂತೆಯಲ್ಲಿ ಗುಡ್ಡೆ ಬಾಳೆಹಣ್ಣು ಮಾರುವ ದರದಲ್ಲಿ ಮಾರಿಹಾಕಲು.
ನ್ಯೂಯಾರ್ಕಿನ ಇನ್ನೊಂದು ಮಗ್ಗುಲಲ್ಲೂ ಬದುಕು ತನ್ನದೇ ಆದ ರೀತಿಯಲ್ಲಿ ಅಣಿಗೊಳ್ಳುತ್ತಿತ್ತು. ನ್ಯೂಯಾರ್ಕಿನ ಅತಿ ದೊಡ್ಡ ಸಮೂಹವಾದ ಯಹೂದಿಗಳು ರೋಶ್ ಹಷಾನಾ ಎಂಬ ತಮ್ಮ ಹೊಸ ವರ್ಷವನ್ನು ಬರಮಾಡಿಕೊಂಡರು. ನ್ಯೂಯಾರ್ಕಿನ ರಸ್ತೆಗಳು ಯಹೂದಿಗಳ ಕುಟುಂಬದಿಂದ ಸಂಭ್ರಮವನ್ನು ಲೇಪಿಸಿಕೊಂಡವು. ಎಷ್ಟೋ ಶಾಲೆಗಳಿಗೆ ಎರಡೆರಡು ದಿನ ರಜೆ. ಮಕ್ಕಳ ಹಾರಾಟಕ್ಕೆ ಇನ್ನೂ ಎರಡು ರೆಕ್ಕೆ. ಈ ಮಧ್ಯೆಯೇ ಉಪವಾಸದ ತಿಂಗಳಲ್ಲಿ ಮುಸ್ಲಿಮರು ನೀಡುವವನನ್ನು ಪ್ರಾರ್ಥಿಸುತ್ತಿದ್ದರು.
ನ್ಯೂಯಾರ್ಕ್ ಎಷ್ಟು ವಿಚಿತ್ರ! ದಿನದ ಬದುಕಲ್ಲಿ ದ್ವೀಪಗಳಂತೆ ಬದುಕಲು ನಾವು ಎಷ್ಟೊಂದು ಕಾಣದ ಕೈಗಳಿಂದ ಬಂಧಿತರಾಗಿದ್ದೇವೆ!
ಚಿತ್ರಗಳು: ಜಿ ಎನ್ ಮೋಹನ್
ನಮಸ್ಕಾರ.
ನ್ಯೂಯಾರ್ಕ್-ನಾನು ನನ್ನ ಜೀವನದ ಸುಮಾರು ಹದಿನಾರು ವರ್ಷಗಳನ್ನು ಕಳೆದ ನಗರ. ನನ್ನ ಮಟ್ಟಿಗಂತೂ ಅದಕ್ಕಿಂತ ಉತ್ತಮ ನಗರ ಇನ್ನೊಂದಿಲ್ಲ. ನ್ಯೂಯಾರ್ಕ್ ಟೈಮ್ಸ್ಗಿಂತ ಉತ್ತಮ ಪತ್ರಿಕೆ ಮತ್ತೊಂದಿಲ್ಲ.
ಈಗ, ನಾನು, ನಾನು ಹುಟ್ಟಿದ ಬೆಂಗಳೂರಿಗೆ ವಾಪಸು ಬಂದಿದ್ದೇನೆ. ಮೂರು ತಿಂಗಳಿಗೆ ಒಮ್ಮೆಯೋ, ಆರು ತಿಂಗಳಿಗೆ ಒಮ್ಮೆಯೋ ನ್ಯೂಯಾರ್ಕಿಗೆ ಹೋಗುತ್ತಿರುತ್ತೇನೆ. ಪ್ರತಿ ಸಾರಿ ನ್ಯೂಯಾರ್ಕಿಗೆ ಹೋಗುವಾಗಲೂ, ‘ತವರು ಮನೆಗೆ’ ಹೋದಂತಹ ಸಂಭ್ರಮ.
ಇಂತಹ ನನ್ನ ಮೆಚ್ಚಿನ ನ್ಯೂಯಾರ್ಕಿನ ಬಗೆಗೆ ಬರೆಯುತ್ತಿದ್ದೀರಿ; ಇಷ್ಟವಾಯಿತು.
ವಂದನೆಗಳೊಂದಿಗೆ,
ಶೇಷಾದ್ರಿ