‘ಬಾದಲ್ ಚಿತ್ರಕಾರನೂ, ಮೇಘ ಮಾಯ್ಕಾರನೂ…’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ರುಂಯ್ಯನೆ ಸಾಗುತ್ತಿದ್ದ ಆ ನ್ಯಾನೋ ಕಾರಿನಲ್ಲಿ ನಾನಂದು ಮುದುಡಿ ಕುಳಿತಿದ್ದೆ.

”ಅಲ್ಲಿ ಮುಂದೆ ಮೆಟ್ರೋ ಬರಲಿದೆ…”

”ಈ ಗಲ್ಲಿಯಲ್ಲಿ ಸಿಗುವ ಜಿಲೇಬಿಯ ಸ್ವಾದವೇ ಅದ್ಭುತ…”

”ದಿಲ್ಲಿ ಕಳೆದ ನಲವತ್ತು ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ…”

”ಹಹಹಾ, ಆ ಪ್ರೇಮಿಗಳನ್ನು ನೋಡಿ, ರಸ್ತೆಯಲ್ಲೇ ಕಿತ್ತಾಡುತ್ತಿವೆ…”

ಅವರು ಮಾತನಾಡುತ್ತಲೇ ಇದ್ದರು. ನಾನು ತಲೆಯಾಡಿಸುತ್ತಾ ಇದ್ದೆ. ಅಷ್ಟಕ್ಕೂ ನಾನಂದು ಕೂತಿದ್ದ ಕಾರನ್ನು ನೋಡುವುದೇ ಚಂದ. ಹಳದಿ ಬಣ್ಣದ ನ್ಯಾನೋ ಕಾರಿನ ಮೇಲೆಲ್ಲಾ ಕೆಂಪು ಚುಕ್ಕೆಗಳ ಚಾದರ. ದೂರದಿಂದ ನೋಡಿದರೆ ಥೇಟು ಶೋಕೇಸು ಆಟಿಕೆ.

ಅವರ ಕೈ ಸ್ಟೇರಿಂಗಿನ ಮೇಲೆ ಭದ್ರವಾಗಿತ್ತು. ನೋಟ ರಸ್ತೆಗಂಟಿಕೊಂಡಿತ್ತು. ಅಂದು ಭಾನುವಾರ ಬೇರೆ. ಹಳೇದಿಲ್ಲಿಯ ಕಮಲಾನಗರದ ಬೀದಿಗಳು ಅದೆಷ್ಟು ಇಕ್ಕಟ್ಟಾಗಿದ್ದವೆಂದರೆ ಕೊಂಚ ಮೈಮರೆತರೆ ಯಾರಿಗಾದರೂ ಢಿಕ್ಕಿ ಹೊಡೆಯುವುದು ಖಚಿತವೆಂಬಷ್ಟು. ”ಈ ರಸ್ತೆಯಲ್ಲಿ ಡ್ರೈವ್ ಮಾಡುವುದೇ ಒಂದು ಸಾಹಸವಲ್ವೇ”, ಅಂದೆ ನಾನು. ಹೌದು ಎನ್ನುವಂತೆ ಮುಗುಳ್ನಕ್ಕರು ಅವರು.

ಇದ್ಯಾರು ನನ್ನ ಹೊಸ ದಿಲ್ಲಿ ಗೈಡ್ ಎಂದು ಅಂದುಕೊಳ್ಳಬೇಡಿ. ಅಂದು ನನ್ನೊಂದಿಗಿದ್ದಿದ್ದು ಭಾರತದ ಪ್ರಖ್ಯಾತ ಚಿತ್ರಕಲಾವಿದರಲ್ಲೊಬ್ಬರಾದ ಬಾದಲ್ ಚಿತ್ರಕಾರ್. ”ಇವತ್ತು ನಿಮಗೊಂದು ಜಾಗ ತೋರಿಸುತ್ತೇನೆ, ಕಮಲದ ಹೂಗಳು ಅದೆಷ್ಟು ಸುಂದರವಾಗಿ ಅಲ್ಲಿ ಅರಳಿವೆ ನೋಡಿ”, ಎಂದವರೇ ನನ್ನನ್ನು ತಮ್ಮ ಕಾರಿನಲ್ಲಿ ಕೂರಿಸಿ ಹೊರಟೇಬಿಟ್ಟಿದ್ದರು ಬಾದಲ್. ಇದೊಳ್ಳೆ ಆಫ್ ದ ರೆಕಾರ್ಡ್ ಸಂದರ್ಶನವಾಯ್ತಲ್ಲಾ ಎಂದು ಬಯಸದೆ ಬಂದ ಭಾಗ್ಯಕ್ಕೆ ಮನದಲ್ಲೇ ಥ್ಯಾಂಕ್ಸ್ ಹೇಳಿ ನಾನೂ ಹುಮ್ಮಸ್ಸಿನಲ್ಲಿ ಹೊರಟಿದ್ದೆ.

ಇದೊಂದು ಮರೆಯಲಾಗದ ದಿನವಾಗಿ ಉಳಿಯಲಿದೆ ಎಂಬ ನಿರೀಕ್ಷೆಯು ನನಗಾದರೂ ಎಲ್ಲಿತ್ತು!

ಅಷ್ಟಕ್ಕೂ ಈ ಬಾದಲ್ ಚಿತ್ರಕಾರ್ ನನಗೆ ಸಿಕ್ಕಿದ್ದೇ ಒಂದು ಆಕಸ್ಮಿಕ!

ಅದು ಹಳೇದಿಲ್ಲಿಯ ಘಂಟಾಘರ್ ಪ್ರದೇಶ. ಹೆಸರಿಗೆ ತಕ್ಕಂತೆ ರಸ್ತೆಯ ಸರ್ಕಲ್ಲಿನಲ್ಲಿ ದೊಡ್ಡದೊಂದು ಗಡಿಯಾರ. ಸಾಮಾನ್ಯವಾಗಿ ‘ಕ್ಲಾಕ್ ಟವರ್’ ಎನ್ನುವ ಪದಬಳಕೆಯು ಹಿಂದಿ ಭಾಷೆಯಲ್ಲಿ ‘ಘಂಟಾಘರ್’ ಎಂದಾಗುತ್ತದೆ. ದಿಲ್ಲಿ ಮೆಟ್ರೋರೈಲು ಪ್ರಾಜೆಕ್ಟ್ ಕೆಲಸದ ನಿಮಿತ್ತ ಅಲೆದಾಡುತ್ತಿದ್ದ ನಾನು ಅಚಾನಕ್ಕಾಗಿ ಕೊಂಚ ವಿಭಿನ್ನವೆನ್ನಿಸುವಂತಹ ಗಲ್ಲಿಯೊಂದಕ್ಕೆ ಬಂದು ತಲುಪಿದ್ದೆ.

ಆ ಗಲ್ಲಿಯು ಪುಟ್ಟದಾಗಿದ್ದರೂ ವರ್ಣಮಯವಾಗಿತ್ತು. ಹಳೆಯ ಗೋಡೆಗಳು ಅಂದಗೆಟ್ಟಿದ್ದರೂ ಕೆತ್ತಿಟ್ಟ ಮೂರ್ತಿಗಳು ಅದ್ಯಾವುದೋ ಬಗೆಯ ವಿಶಿಷ್ಟ ಸೌಂದರ್ಯವನ್ನು ಆ ಗೋಡೆಗಳಿಗೆ ತರುತ್ತಿದ್ದವು. ಶಿಲ್ಪಿಯ ಕೈಚಳಕ ಸಿಗುವಂತಾದರೆ ಕಲ್ಲಿಗೂ ದೇವರಾಗುವ ಭಾಗ್ಯ.

ಅಷ್ಟರಲ್ಲಿ ಅಲ್ಲೊಂದು ಫಲಕವು ಕಾಣಸಿಕ್ಕಿತ್ತು ನೋಡಿ. ಕೊಂಚ ಹೆಚ್ಚೇ ಎತ್ತರದಲ್ಲಿ ನೇತುಹಾಕಿದ್ದ ಆ ಫಲಕದಲ್ಲಿ ಬರೆದಿದ್ದ ಪ್ರಕಾರ ಇಲ್ಲಿರುವ ಚಿತ್ರಕಲಾವಿದನೊಬ್ಬ ಎಪ್ಪತ್ತರ ದಶಕದಲ್ಲಿ ಮಹಾತ್ಮಾಗಾಂಧಿಯವರ ವರ್ಣಚಿತ್ರವನ್ನು ತನ್ನ ರಕ್ತದಿಂದಲೇ ಬಿಡಿಸಿದ್ದ. ಸಾಲದ್ದೆಂಬಂತೆ ಈ ಕಲಾಕೃತಿಯನ್ನು ದೆಹಲಿಯ ಪ್ರತಿಷ್ಠಿತ ಗಾಂಧಿ ವಸ್ತುಸಂಗ್ರಹಾಲಯದಲ್ಲಿ ಇಂದಿಗೂ ಕಾಣಬಹುದು ಎಂದಿತ್ತು.

ಮೊದಲಿನಿಂದಲೂ ಗಾಂಧಿಯೆಂದರೆ ನನಗೆ ಮುಗಿಯದ ಅಚ್ಚರಿ. ಮೀನಮೇಷ ಎಣಿಸದೆ ಒಳಹೊಕ್ಕೆ. ಬದುಕಿನ ಈ ಕ್ಷಣದ ಡಬ್ಬದೊಳಗೆ ಇನ್ಯಾವ ಅಚ್ಚರಿ ಇರಬಹುದಪ್ಪಾ ಎಂಬ ಹುಮ್ಮಸ್ಸಿನಲ್ಲಿ!

ಒಳಹೊಕ್ಕು ನೋಡಿದರೆ ಅಲ್ಲೊಬ್ಬರು ಸ್ಫುರದ್ರೂಪಿ ವೃದ್ಧ ತನ್ನಿಬ್ಬರು ಶಿಷ್ಯಂದಿರಿಗೆ ಚಿತ್ರಕಲಾ ಪಾಠವನ್ನು ಮಾಡುವುದರಲ್ಲಿ ತಲ್ಲೀನರಾಗಿದ್ದರು. ಆಚೆಯಿಂದ ನೋಡಿದರೆ ಕೊಂಚ ಎಮ್.ಎಫ್. ಹುಸೇನರಂತೆ ಕಾಣುವ, ಈಚೆಯಿಂದ ಕೊಂಚ ಆಚಾರ್ಯ ವಿನೋಬಾ ಭಾವೆಯವರಂತೆ ಕಾಣುವ ಲಕ್ಷಣವಾದ ಮುಖ.

ಮಿಂಚುವ ಬಣ್ಣಗಳ ಮಿರಿಮಿರಿ ಚುಕ್ಕೆಗಳನ್ನು ಹೊಂದಿದ್ದ ಈ ಕುರ್ತಾಧಾರಿ ವೃದ್ಧನನ್ನು ಕಂಡರೆ ಈತ ಜಾದೂಗಾರನೇನೋ ಅನ್ನುವಂತಿತ್ತು. ಅನಿರೀಕ್ಷಿತ ಅಡಚಣೆಗಾಗಿ ಕ್ಷಮೆ ಕೋರಿ ವಿಚಾರಿಸಿದ್ದಾಯಿತು. ಆ ಗಾಂಧಿ ಚಿತ್ರಕಾರ ನಾನೇ ಎಂದಾಗ ನಾನು ಕಣ್ಣರಳಿಸಿ ನಿಂತಿದ್ದೆ. ಅವರೇ ಬಾದಲ್ ಚಿತ್ರಕಾರ್.

ಅದೊಂದು ಪುಟ್ಟ ಹೌಸ್ ಕಮ್ ಸ್ಟುಡಿಯೋ. ಎಲ್ಲೆಲ್ಲೂ ಚಿತ್ರಗಳದ್ದೇ ಜಾತ್ರೆ. ಗೋಡೆಯ ಒಂದು ಬದಿಯಲ್ಲಿ ವಿವಿಧ ಬಗೆಯ ಚಿತ್ರಗಳಾದರೆ, ಇನ್ನೊಂದು ಬದಿಯಲ್ಲಿ ಅವರದ್ದೇ ಅಪರೂಪದ ಫೋಟೋಗಳು, ಪತ್ರಿಕಾವರದಿಗಳ ಕಟ್ಟಿಂಗ್ ಗಳು. ಅಬ್ದುಲ್ ಕಲಾಂ, ಶಂಕರ್ ದಯಾಳ್ ಶರ್ಮಾ, ಐ.ಕೆ. ಗುಜ್ರಾಲ್, ಕೆ. ಆರ್. ನಾರಾಯಣನ್, ಪ್ರತಿಭಾ ಪಾಟೀಲ್, ಬಿಸ್ಮಿಲ್ಲಾ ಖಾನ್… ಹೀಗೆ ಹಲವು ಗಣ್ಯಾತಿಗಣ್ಯರೊಂದಿಗಿದ್ದ ಅಪರೂಪದ ಫೋಟೋಗಳೇ ಬಾದಲ್ ಚಿತ್ರಕಾರರ ಸಾಧನೆಯ ಕಥೆಗಳನ್ನು ಅಲ್ಲಿ ಹೇಳುವಂತಿದ್ದವು.

ಒಂದಿಂಚು ಗೋಡೆಯೂ ಅಲ್ಲಿ ಬಣ್ಣಗಳಿಂದ, ಹಲವು ಕತೆಗಳನ್ನು ಹೇಳುತ್ತಿದ್ದ ಛಾಯಾಚಿತ್ರಗಳಿಂದ ಹೊರತಾಗಿರಲಿಲ್ಲ. ಬರೆದರೆ ಅವುಗಳದ್ದೇ ಒಂದು ಕತೆ. ಕ್ಯಾನ್ವಾಸಿನ ಮೇಲೆ ರಕ್ತದಲ್ಲಿ ಇಳಿಸುವಷ್ಟು ಗಾಂಧಿ ನಿಮ್ಮನ್ನು ಪ್ರಭಾವಿಸಿದ್ದರೇ ಎಂದು ಅವರಲ್ಲಿ ಕೇಳಿದ್ದೆ.

”ಗಾಂಧಿ ನನ್ನೊಳಗೇ ಇದ್ದಾರೆ ಎನ್ನುವಷ್ಟು ಅವರ ಪ್ರಭಾವಕ್ಕೊಳಗಾದವನು ನಾನು. ಸತ್ಯವೇ ನನ್ನ ಶಕ್ತಿ. ಇನ್ನು ಈ ಕಲಾಕೃತಿಯಂತೂ ನನಗೆ ದೊಡ್ಡ ಮಟ್ಟಿನ ಖ್ಯಾತಿಯನ್ನು ತಂದುಕೊಟ್ಟಿತ್ತು. ಪತ್ರಿಕೆಗಳು ನನ್ನನ್ನು ‘ಗಾಂಧೀವಾದಿ ಚಿತ್ರಕಲಾವಿದ’ ಎಂದು ಕರೆದವು. ನನಗೂ ಈ ಪತ್ರಕರ್ತರಿಗೂ ಹಳೆಯ ನಂಟು. ಗಾಂಧಿಯವರ ಬಗ್ಗೆ ಪುಸ್ತಕವೊಂದನ್ನು ಬರೆಯುತ್ತಿರುವ ವಿದೇಶಿ ಪತ್ರಕರ್ತರೊಬ್ಬರು ಇತ್ತೀಚೆಗೆ ಬಂದು ನನ್ನನ್ನು ಸಂದರ್ಶಿಸಿ ಹೋಗಿದ್ದರು. ಗಾಂಧಿ ನನ್ನ ಬದುಕಿನ ಅಂಗವೇ ಆಗಿಬಿಟ್ಟಿದ್ದಾರೆ ನೋಡಿ…”, ಎಂದು ಲವಲವಿಕೆಯಿಂದ ಮಾತನಾಡುತ್ತಲೇ ಇದ್ದರು ಬಾದಲ್ ಚಿತ್ರಕಾರ್.

ಸದ್ಯ ಎಂಭತ್ತರ ವಯಸ್ಸಿನ ಬಾದಲ್ ಚಿತ್ರಕಾರ್ ಮೊದಲಿನಿಂದಲೂ ಹೊಸತನದತ್ತ ವಾಲಿದವರಂತೆ. ಎಲ್ಲರೂ ಸಾಗುತ್ತಿದ್ದಾರೆ ಎಂದ ಮಾತ್ರಕ್ಕೆ ತಾನೂ ಕುರಿಯಂತೆ ಗುಂಪನ್ನು ಹಿಂಬಾಲಿಸುವ ಬಹುತೇಕರ ವರ್ಗಕ್ಕೆ ಅವರು ಸೇರಿದವರಲ್ಲ. ಒಂಭತ್ತನೇ ತರಗತಿಯ ನಂತರ ವಿದ್ಯಾಭ್ಯಾಸ ಅವರ ಕೈಹಿಡಿಯಲಿಲ್ಲ.

ನೆಟ್ಟಗೆ ಓದಿ ಯಾವುದಾದರೊಂದು ಕೆಲಸಕ್ಕೆ ಸೇರಿಕೋ ಮಗಾ ಎಂದಿದ್ದ ತಂದೆಗೆ, ನನ್ನ ಕೌಶಲ್ಯದಿಂದಲೇ ನಾನು ಬದುಕಬಲ್ಲೆ ಎಂದು ಮಗರಾಯ ಉತ್ತರಿಸಿದ್ದ. ಹೀಗೆ ಪುಟ್ಟ ಬಾದಲ್ ಪಠ್ಯಪುಸ್ತಕಗಳನ್ನು ಬದಿಗಿಟ್ಟು ಕುಂಚ ಹಿಡಿದಾಗಿತ್ತು. ತಾನು ಹುಟ್ಟಿದ್ದೇ ಚಿತ್ರಕಲಾವಿದನಾಗಲು ಎಂಬಂತೆ ಬಾದಲ್ ಸಿಕ್ಕಸಿಕ್ಕಲ್ಲೆಲ್ಲಾ ಚಿತ್ರಗಳನ್ನು ಬರೆದ. ಇತರರು ಎರಡು ವರ್ಷಗಳಲ್ಲಿ ಕಲಿಯುವಂಥದ್ದನ್ನು ಈ ಬಾಲಕ ಆರೇ ತಿಂಗಳಲ್ಲಿ ಕಲಿತುಬಿಟ್ಟ. ಕ್ರಮೇಣ ತನ್ನ ಕಲಿಕೆಯ ದಿಗಂತವನ್ನೂ ವಿಸ್ತರಿಸುತ್ತಲೇ ಹೋದ. ಸುಸ್ತು-ಆಲಸ್ಯಗಳು ಆತನ ಹತ್ತಿರಕ್ಕೂ ಸುಳಿಯುವಂತಿರಲಿಲ್ಲ.

ಎಳೆಯ ಬಾದಲ್ ನಲ್ಲಿ ಕಲಿಯುವ ಶ್ರದ್ಧೆ, ಪರಿಶ್ರಮ, ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಛಾತಿ… ಹೀಗೆ ಎಲ್ಲವೂ ಇತ್ತು. ಬಾದಲ್ ತನ್ನ ಯಶಸ್ಸಿನ ಹಾದಿಯನ್ನು ಸ್ವತಃ ತಾನೇ ನಿರ್ಮಿಸುತ್ತಿದ್ದರು. ಗಾಂಧಿಯ ಈ ಅಪೂರ್ವ ಕಲಾಕೃತಿಯೂ ಬಾದಲ್ ರವರ ವಿಶಿಷ್ಟ ಚಿಂತನೆಯ ಫಲವಾಗಿಯೇ ರೂಪುತಾಳಿತ್ತು.

ಬಾದಲ್ ರವರ ತಂದೆ ಸ್ವತಃ ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗಿಯಾಗಿದ್ದವರು. ಹೀಗಾಗಿ ಆ ತಲೆಮಾರಿನ ಬಹುತೇಕರಂತೆ ಗಾಂಧಿಯ ಪ್ರಭಾವದಿಂದ ಹೊರಗುಳಿಯುವುದು ಇವರಿಗೂ ಅಸಾಧ್ಯವಾಗಿತ್ತು. ಮುಂದೆ ಗಾಂಧಿಯವರ ಬಗ್ಗೆ ಸಾಕಷ್ಟು ಓದಿ ತಿಳಿದುಕೊಂಡ ಬಾದಲ್ ಆತನಲ್ಲೊಬ್ಬ ಸಂತನನ್ನು ಕಂಡರು. ಹೀಗೂ ಬದುಕಲು ಸಾಧ್ಯವೇ ಎಂದು ಅಚ್ಚರಿಪಟ್ಟುಕೊಂಡರು. ಪ್ರಯತ್ನಿಸಿ ನೋಡೋಣವೆಂದು ಉಪವಾಸದಂತಹ ಪ್ರಯೋಗಕ್ಕೆ ಸ್ವತಃ ಇಳಿದೂಬಿಟ್ಟರು. ಗಾಂಧಿಯ ತೀವ್ರತೆಯು ಅವರಲ್ಲಿ ಇಂದಿಗೂ ಬತ್ತಿಲ್ಲ ಎಂಬುದು ವಿಶೇಷ.

ಅದು 1977 ನೇ ಇಸವಿ. ನಾನೋರ್ವ ಚಿತ್ರಕಾರನೇನೋ ಹೌದು. ಆದರೆ ಜಗತ್ತು ನೆನಪಿಟ್ಟುಕೊಳ್ಳುವಂತೆ ಗಾಂಧಿಯನ್ನು ಸೃಷ್ಟಿಸುವುದು ಹೇಗೆ ಎಂಬ ಹೊಸ ಯೋಚನೆಯ ಬೀಜವೊಂದು ಆಗ ಅವರ ಮನದಲ್ಲಿ ಮೊಳಕೆಯೊಡೆಯುತ್ತಿತ್ತು. ”ಸಾಬ್… ನನಗೆ ಮಹಾತ್ಮಾಗಾಂಧಿಯವರ ರಕ್ತ ಬೇಕಿತ್ತಲ್ವಾ?”, ಎಂದು ತರುಣ ಬಾದಲ್ ಶ್ರೀ ರಣವೀರ್ ಪುರಿಯವರನ್ನು ಕೇಳಿದಾಗ ಅವರು ಅಕ್ಷರಶಃ ದಂಗಾಗಿದ್ದರು.

ಪುರಿಯವರು ಆ ದಿನಗಳಲ್ಲಿ ಗಾಂಧಿಸ್ಮೃತಿಯ ನಿರ್ದೇಶಕರಾಗಿದ್ದವರು. ಬಾದಲ್ ರವರ ಐಡಿಯಾ ವಿಶಿಷ್ಟವಾಗಿತ್ತೇನೋ ನಿಜ. ಆದರೆ ಕೊಡಲು ಗಾಂಧಿಯವರ ರಕ್ತ ಇರಲಿಲ್ಲವಲ್ಲಾ! ”ಗಾಂಧಿಯವರ ಎರಡನೇ ಪೀಳಿಗೆ, ಮೂರನೇ ಪೀಳಿಗೆ… ಹೀಗೆ ಯಾರ ರಕ್ತವಾದರೂ ಕಲಾಕೃತಿಗಾಗಿ ಸಿಗಬಹುದೇ?”, ಬಾದಲ್ ಮತ್ತೆ ಕೇಳಿದ್ದರು. ಪುರಿಯವರಿಂದ ಇಲ್ಲವೆಂಬ ಮತ್ತದೇ ಉತ್ತರ.

”ಆಗಲಿ. ನಾನು ನನ್ನದೇ ರಕ್ತವನ್ನು ತೆಗೆದು ಕ್ಯಾನ್ವಾಸಿನಲ್ಲಿ ಇಳಿಸಿದರೆ ಹೇಗೆ?”, ಬಾದಲ್ ಪಟ್ಟುಬಿಡಲು ತಯಾರಿದ್ದಂತೆ ಕಾಣಲಿಲ್ಲ. ಪುರಿಯವರನ್ನು ಹೇಗೋ ಒಪ್ಪಿಸಿಯಾಯಿತು. ಮುಂದಿನ ಕೆಲ ದಿನಗಳ ಕಾಲ ನಡೆದಿದ್ದು ಒಂದು ತಪಸ್ಸೇ ಹೌದು. ದೇಹವನ್ನೂ, ಮನಸ್ಸನ್ನೂ ಪರಿಶುದ್ಧವಾಗಿಡುವ ಪ್ರಯೋಗಗಳಲ್ಲಿ ತನ್ನನ್ನು ತಾನು ತೀವ್ರವಾಗಿ ತೊಡಗಿಸಿಕೊಂಡರು ಬಾದಲ್. ಪ್ರಾರ್ಥನೆ, ಉಪವಾಸಗಳು ಮತ್ತಷ್ಟು ತೀವ್ರವಾದವು. ಗಾಂಧಿಯ ಬಗೆಗಿನ ಓದು, ಚಿಂತನೆಗಳೂ ಹೆಚ್ಚಿದವು.

One fine day. ಆಸ್ಪತ್ರೆಗೆ ಹೋದ ಬಾದಲ್ ಚಿತ್ರಕಾರ್ ಒಂದಷ್ಟು ರಕ್ತವನ್ನು ತೆಗೆಸಿ ಕ್ಯಾನ್ವಾಸಿನ ಮುಂದೆ ಕೂತೇಬಿಟ್ಟರು. ಮಹಾತ್ಮ ಈಗ ಕ್ಯಾನ್ವಾಸ್ ಸಮತಲದ ಮೇಲೆ ಕೆಂಬಣ್ಣದಲ್ಲಿ ಮೂಡುತ್ತಿದ್ದ. ಒಂದು ಹಂತದಲ್ಲಿ ಸಂಗ್ರಹಿಸಿಟ್ಟ ರಕ್ತವು ಕಮ್ಮಿಯಾಗಿ ಕಲಾಕೃತಿಯು ಅಪೂರ್ಣವಾಗಿಯೇ ಉಳಿಯಲಿದೆ ಎಂದಾದಾಗ ತನ್ನ ಬೆರಳ ತುದಿಗಳಿಗೆ ಸೂಜಿಯನ್ನು ಚುಚ್ಚುತ್ತಾ ಮತ್ತಷ್ಟು ರಕ್ತವನ್ನು ತೆಗೆಯುತ್ತಿದ್ದರು ಬಾದಲ್. ಅಂತೂ ಬಾದಲ್ ಚಿತ್ರಕಾರ್ ಎಂಬ ಪ್ರತಿಭಾವಂತ ಯುವ ಚಿತ್ರಕಲಾವಿದನಿಗೆ ಅಂತಾರಾಷ್ಟ್ರೀಯ ಮಟ್ಟಿನಲ್ಲಿ ಖ್ಯಾತಿಯನ್ನು ತರಲಿದ್ದ ಕಲಾಕೃತಿಯೊಂದು ಕೊನೆಗೂ ಸಿದ್ಧವಾಗಿ ನಿಂತಿತ್ತು.

ಹಾಗೆಂದು ಈ ಕಲಾಕೃತಿಯು ಕೇವಲ ಖ್ಯಾತಿಯ ವಿಷಯಕ್ಕಷ್ಟೇ ಸೀಮಿತವಾಗುವುದಿಲ್ಲ. ಇಲ್ಲಿಯ ಬೆಳವಣಿಗೆಗಳ ಹಿಂದಿರುವ ಭಾವನಾತ್ಮಕ ನಂಟೂ ಕೂಡ ವಿಶಿಷ್ಟವಾದದ್ದು. ಎಪ್ಪತ್ತರ ದಶಕದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯು ಅದೆಷ್ಟೋ ಮಂದಿ ಸೃಜನಶೀಲರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಸಕಿಹಾಕಿತ್ತು.

ಈ ಅವಧಿಯಲ್ಲುಂಟಾದ ದಂಗೆಗಳಲ್ಲಿ ಬಾದಲ್ ರವರ ಅಂಗಡಿಯು ಧ್ವಂಸವಾಗಿ ಅವರ ಬಹುತೇಕ ಎಲ್ಲಾ ಅಮೂಲ್ಯ ಕಲಾಕೃತಿಗಳು ನಾಶವಾಗಿದ್ದವು. ಹಲವು ವರ್ಷಗಳ ಅವರ ಅಗಾಧ ಪರಿಶ್ರಮವು ಕಣ್ಣೆದುರಿಗೇ ಮಣ್ಣುಪಾಲಾಗಿತ್ತು. ತನ್ನ ರಾಜಕೀಯ ನಿಲುವುಗಳ ಬಗ್ಗೆ ಸದಾ ಸ್ಪಷ್ಟತೆಯನ್ನು ಹೊಂದಿದ್ದ ಅವರಿಗಾಗ ತಲೆಯ ಮೇಲಿನ ಸೂರಿಗೂ ಆಪತ್ತು.

ಆ ರಾತ್ರಿಯ ಕುಂಭದ್ರೋಣ ಮಳೆಯಲ್ಲಿ ತನ್ನ ಗಾಂಧಿ ಕಲಾಕೃತಿಯನ್ನು ಮಳೆಯಿಂದ ರಕ್ಷಿಸಲು, ತಾನೇ ಅಡ್ಡಗೋಡೆಯಾಗಿ ನಿಂತಿದ್ದರಂತೆ ಬಾದಲ್ ಚಿತ್ರಕಾರ್. ಬಾದಲ್ ಚಿತ್ರಕಾರ್ ನಿಜಕ್ಕೂ ಓರ್ವ ಪ್ರತಿಭಾವಂತ ಕಲಾವಿದ. ದೈತ್ಯ ಪ್ರತಿಭೆ, ಧೈರ್ಯ, ಕಠಿಣ ಪರಿಶ್ರಮ, ನಿರಂತರ ಕಲಿಕೆಯಂತಹ ಅಂಶಗಳನ್ನು ಸದಾ ಜೊತೆಯಲ್ಲಿಟ್ಟುಕೊಂಡಿದ್ದ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿತ್ತು. ಆದರೆ ಗಾಂಧಿಯೆಂಬ ಅಚ್ಚರಿ ಅವರ ಪಾಲಿಗೆ ಚಿಮ್ಮುಹಲಗೆಯಾಗಿದ್ದೂ ಕೂಡ ಅಷ್ಟೇ ಸತ್ಯ.

ಅದು ಅವರ ಬದುಕಿನ ಒಂದು ಮಹತ್ವದ ತಿರುವು. ಅಂದು ನನ್ನ ಮತ್ತು ಬಾದಲ್ ಚಿತ್ರಕಾರರ ನಡುವಿನ ಮುಕ್ತ ಮಾತುಕತೆಯಲ್ಲಿ ನಮಗೆ ಸೇತುವೆಯಾಗಿದ್ದು ಕೂಡ ಗಾಂಧಿಯೇ. ಈ ಬದುಕಿಗೆ ಇನ್ನೇನು ಬೇಕು ಹೇಳಿ!

ಗಾಂಧಿಯವರಷ್ಟೇ ನಿಮ್ಮನ್ನು ಇನ್ನಿಲ್ಲದಂತೆ ಕಾಡಿದ ವ್ಯಕ್ತಿಯ ಅಥವಾ ಘಟನೆಯೊಂದರ ಬಗ್ಗೆ ದಯವಿಟ್ಟು ಹೇಳಿ ಎಂದು ಅವರಲ್ಲಿ ವಿನಂತಿಸಿಕೊಂಡೆ. ಆಯ್ತು ಪ್ರಭೂ ಎಂದು ನಾಟಕೀಯವಾಗಿ ನಕ್ಕರು ಬಾದಲ್. ಅವರನ್ನು ಇನ್ನಿಲ್ಲದಂತೆ ಸತಾಯಿಸಿದ ಈ ಪುಟ್ಟ ಘಟನೆಯು ನನ್ನನ್ನೂ ಬಹುವಾಗಿ ಕಾಡಿದ್ದು ನಿಜವಾಗಿದ್ದರಿಂದ, ಅವರ ಮಾತುಗಳಲ್ಲೇ ಆ ಘಟನೆಯನ್ನಿಲ್ಲಿ ದಾಖಲಿಸುತ್ತಿದ್ದೇನೆ:

”ಅದು 1947 ರ ಸಮಯ. ನನಗಾಗ ಅಂದಾಜು ಏಳರ ಪ್ರಾಯ. ದೇಶಕ್ಕೆ ಸ್ವಾತಂತ್ರ್ಯವೇನೋ ಸಿಕ್ಕಿತ್ತು. ಆದರೆ ಭವ್ಯ ಭಾರತವು ಇಬ್ಭಾಗವಾಗಿತ್ತು. ಹಿಂದೂ-ಮುಸ್ಲಿಂ ದಂಗೆಗಳು ಭುಗಿಲೆದ್ದಿದ್ದವು. ಎತ್ತ ನೋಡಿದರೂ ಕೊಲ್ಲುವವರದ್ದೇ ಅಟ್ಟಹಾಸ.

ಆಗ ನಾನು ಹರಿಯಾಣಾದ ರಿವಾಡಿ ಪ್ರದೇಶದಲ್ಲಿದ್ದೆ. ಕೆಲ ಧಾಂಡಿಗರು ಬಂದು ನನ್ನ ಪುಟ್ಟ ತಲೆಗೆ ಬಟ್ಟೆಯನ್ನು ಸುತ್ತಿ ಮುಂಡಾಸಿನಂತೆ ಕಟ್ಟಿದರು. ನನ್ನ ಕೈಗೊಂದು ದೊಣ್ಣೆಯನ್ನು ಕೊಟ್ಟು ಎಷ್ಟು ಮುಸಲ್ಮಾನರನ್ನು ಹೊಡೆದು ಕೊಲ್ಲಬಲ್ಲೆ ಎಂದು ದಬಾಯಿಸಿ ಕೇಳಿದರು. ಐದು ಎಂದೆ. ಸುಮ್ಮನೆ ಬಾಯಿಗೆ ಬಂದಿದ್ದೊಂದು ಸಂಖ್ಯೆ. ಕೂಡಲೇ ಹೋಗೆಂದು ನನ್ನನ್ನು ಆ ಗುಂಪು ಹೊರಗಟ್ಟಿತ್ತು.

ನಾನು ಕೊಲ್ಲುವುದು ಹಾಗಿರಲಿ. ಹೊಡೆಯಲೂ ಇಲ್ಲ. ಹಿಂಸೆ ನನ್ನ ಜಾಯಮಾನವೇ ಆಗಿರಲಿಲ್ಲ. ಆದರೆ ಈ ಒಂದು ಘಟನೆ ಮಾತ್ರ ನನ್ನಲ್ಲಿ ಗಾಢವಾಗಿ ಉಳಿದುಕೊಂಡಿತು. ಜಾತಿಭೇದಗಳು ಬಹುಬೇಗ ನನ್ನೊಳಗಿನಿಂದಲೇ ಶಾಶ್ವತವಾಗಿ ನಶಿಸಿಹೋದವು. ಮಾನವೀಯತೆ ಎಲ್ಲಕ್ಕಿಂತಲೂ ಮಿಗಿಲಾಯಿತು. ಇಂದಿಗೂ ಜಾತಿ-ಧರ್ಮಗಳ ಹೆಸರಿನಲ್ಲಿ ದೊಂಬಿಗಳಾದಾಗ, ಬಾಲ್ಯದ ಆ ಘಟನೆಯು ನೆನಪಾಗಿ ನನಗೆ ಸಂಕಟವಾಗುತ್ತದೆ. ಇನ್ನೂ ಅದೇ ಓಬೀರಾಯನ ಕಾಲದ ಭ್ರಮೆಯಲ್ಲಿ ಒದ್ದಾಡುತ್ತಿದ್ದೀರಲ್ಲಾ ಮೂರ್ಖ ಶಿಖಾಮಣಿಗಳೇ ಎಂದು ಕೇಳುವ ಹಂಬಲವುಂಟಾಗುತ್ತದೆ…”

ಬಾದಲ್ ಚಿತ್ರಕಾರ್ ತಮ್ಮ ನೆನಪಿನ ಸುರುಳಿಗಳನ್ನು ಬಿಚ್ಚುತ್ತಲೇ ಇದ್ದರು. ನಾನು ಮೌನವಾಗಿ ಅವರ ಮಾತುಗಳಿಗೆ ಕಿವಿಯಾಗುತ್ತಿದ್ದೆ. ಗೋಡೆಯ ಮೇಲೆ ವರ್ಣಚಿತ್ರವಾಗಿದ್ದ ಬಾದಲ್ ರಚಿತ ಗಾಂಧಿ ನಗುತ್ತಿದ್ದ.

(ಮುಂದಿನ ಸಂಚಿಕೆಯಲ್ಲಿ…)

November 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಂಘರ್ಷ-ಸಂಭ್ರಮ

ಸಂಘರ್ಷ-ಸಂಭ್ರಮ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಎದೆಬಿಲ್ಲೆಯೂ ಮಾತುಕತೆಯೂ…

ಎದೆಬಿಲ್ಲೆಯೂ ಮಾತುಕತೆಯೂ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್...

‘ಲೇಖ’ಕಿ ‘ಲೋಕ’ದ ಅನಾವರಣ

‘ಲೇಖ’ಕಿ ‘ಲೋಕ’ದ ಅನಾವರಣ

ಗಿರಿಜಾ ಶಾಸ್ತ್ರಿ ಕರ್ನಾಟಕ ಲೇಖಕಿಯರ ಸಂಘವು ಕೆಲವು ವರ್ಷಗಳಿಂದ ಲೇಖಕಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ 'ಲೇಖಕಿಯರ ಆತ್ಮ ಕಥೆಗಳ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: