ಬಾಬೂ ಜಗಜೀವನರಾಮ್ ನೆನಪು

ಗಾಳಿ ಬೆಳಕು

gali2.gif

 

 

ನಟರಾಜ್ ಹುಳಿಯಾರ್

ಧಿಕಾರದ ಕೇಂದ್ರದಲ್ಲಿರುವವರು ಹೇಗೆ ಮಾಧ್ಯಮಗಳನ್ನು, ಚರಿತ್ರೆ ಬರೆಯುವವರನ್ನು ತಂತಮ್ಮ ಹಿತಾಸಕ್ತಿಗಳನ್ನು ಕಾಯಲು ಬಳಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅದರಿಂದ ಆಗುವ ತೀವ್ರ ಹಾನಿ ಎಂಥದೆಂಬುದರ ಬಗ್ಗೆ ನಾವು ಅಷ್ಟು ಎಚ್ಚರ ವಹಿಸುವುದಿಲ್ಲ. ಹಿರಿಯ ನಾಯಕರಾಗಿದ್ದ ಬಾಬೂ ಜಗಜೀವನರಾಂ ಅವರ ಬಗ್ಗೆ ಎನ್.ಸಿ.ಮಹೇಶ್ ಮತ್ತು ಅಗ್ರಹಾರ ಕೃಷ್ಣಮೂರ್ತಿ ಸಂಪಾದಿಸಿರುವ “ವಿಮೋಚನೆಯ ಹರಿಕಾರ” ಎಂಬ ಪುಸ್ತಕದ ವಿವರಗಳನ್ನು ನೋಡಿದರೆ ಮೇಲಿನ ಮಾತು ಇನ್ನಷ್ಟು ಸ್ಪಷ್ಟವಾಗುತ್ತದೆ:

ಭಾರತದ ಕೃಷಿಕ್ರಾಂತಿಯ ಮೂಲಪುರುಷ ಜಗಜೀವನರಾಂ ಎಂದು ಈ ಪುಸ್ತಕದಲ್ಲಿ ಖ್ಯಾತ ವಿಜ್ಞಾನಿ ಸ್ವಾಮಿನಾಥನ್ ಬರೆಯುತ್ತಾರೆ. ಆದರೆ ಅದರ ಕ್ರೆಡಿಟ್ಟನ್ನು ನಮ್ಮ ಪತ್ರಿಕೆಗಳಾಗಲೀ ರಾಜಕೀಯ ವಿಶ್ಲೇಷಕರಾಗಲೀ ಬಾಬೂಜಿಯವರಿಗೆ ಕೊಡಲಿಲ್ಲ. ಬಾಂಗ್ಲಾ ವಿಮೋಚನೆಯ ಯುದ್ಧದ ಕಾಲದಲ್ಲಿ ಜಗಜೀವನರಾಂ ರಕ್ಷಣಾ ಸಚಿವರಾಗಿದ್ದರು. ಪಾಕಿಸ್ತಾನದ ೯೩೦೦೦ ಸೈನಿಕರೊಂದಿಗೆ ಅಲ್ಲಿನ ಸೇನಾನಾಯಕ ಶರಣಾಗತನಾಗುವಂಥ ಕಾರ್ಯತಂತ್ರ ರೂಪಿಸಿದ ಬಾಬೂಜಿ ಆದಷ್ಟೂ ಸಾವುನೋವುಗಳನ್ನು ಕಡಿಮೆ ಮಾಡಿ ಯುದ್ಧ ಗೆದ್ದರು. ಆದರೆ ಆ ಯುದ್ಧದಲ್ಲಿ “ದುರ್ಗಿ” “ಜಗನ್ಮಾತೆ” ಎಂಬ ಪಟ್ಟಗಳೆಲ್ಲ ಇಂದಿರಾಗಾಂಧಿಯವರಿಗೆ ಸಂದವು. ಕಾಂಗ್ರೆಸ್ ಇಬ್ಭಾಗವಾದಾಗ ಇಂದಿರಾಗಾಂಧಿ ನೇತೃತ್ವದ ಪಕ್ಷ ಉತ್ತರಭಾರತದ ಹಲವು ರಾಜ್ಯಗಳಲ್ಲಿ “ನಮ್ಮದು ಜಗಜೀವನರಾಂ ನೇತೃತ್ವದ ಕಾಂಗ್ರೆಸ್” ಎಂದು ಪ್ರಚಾರ ಮಾಡಿ ಕೂಡ ಗೆದ್ದಿತು.

ಅದಕ್ಕಿಂತ ಮೊದಲು, ನೆಹರೂ ಕಾಲದಲ್ಲಿ ಕಾರ್ಮಿಕ ಸಚಿವರಾಗಿದ್ದ ಬಾಬೂಜಿ ಭಾರತದ ಕಾರ್ಮಿಕರ ರಕ್ಷಣೆಗೆ ಭದ್ರ ತಳಹದಿಯಾಗುವಂಥ ಕಾನೂನುಗಳನ್ನು ಮಾಡಿದ್ದರು. ಸರ್ಕಾರಿ ಹಾಗೂ ಖಾಸಗಿ ಕಾರ್ಖಾನೆಗಳಲ್ಲಿ ಸಮಾನ ಸೇವಾನಿಯಮಗಳಿರಬೇಕೆಂದು ಖಚಿತ ಗುರಿಯಿಟ್ಟುಕೊಂಡಿದ್ದರು. ಯಾಕೆಂದರೆ, ಇಂಡಿಯಾದಲ್ಲಿ “ಖಾಸಗಿ” ಎಂದ ತಕ್ಷಣ ಪ್ರಬಲ ಜಾತಿಗಳೇ ಮೇಲುಗೈ ಪಡೆಯುವುದು ಬಾಬೂಜಿಗೆ ಗೊತ್ತಿತ್ತು. ೧೯೭೭ರಲ್ಲಿ ಜಗಜೀವನರಾಂ ಅವರು ಇಂದಿರಾಗಾಂಧಿಯವರ ಎಮರ್ಜೆನ್ಸಿಯನ್ನು ವಿರೋಧಿಸಿ “ಕಾಂಗ್ರೆಸ್ ಫಾರ್ ಡೆಮಾಕ್ರಸಿ” ಮಾಡಿದ್ದು ಜನತಾಪಕ್ಷ ಆಳ್ವಿಕೆಗೆ ಬರಲು ನೆರವಾಯಿತು. ಆದರೆ ನಿಜವಾದ ಪ್ರೈಂಮಿನಿಸ್ಟರ್ ಮೆಟೀರಿಯಲ್ ಆಗಿದ್ದ ಬಾಬೂಜಿಯವರನ್ನು ಲೋಕನಾಯಕ ಜಯಪ್ರಕಾಶ ನಾರಾಯಣರು ಕೂಡ ಪ್ರಧಾನಿ ಮಾಡಲಾಗಲಿಲ್ಲ. ಆನಂತರ ಸಮಾಜವಾದಿ ಚಂದ್ರಶೇಖರ್ ಹಾಗೂ ಬಾಬೂಜಿ ನಡುವೆ ಪ್ರಧಾನಿ ಪಟ್ಟ ಅಡ್ಡಾಡಿದಾಗ ಕೂಡ ಬಾಬೂಜಿ ಪ್ರಧಾನಿಯಾಗಲಿಲ್ಲ.

ಇವೆಲ್ಲ ಇಂಡಿಯಾದ ಜಾತಿ ಮನಸ್ಸು ಇಲ್ಲಿನ ರಾಜಕೀಯದ ಸೂಕ್ಷ್ಮಜೀವಿಗಳನ್ನೂ ಕೂಡ ಹೇಗೆ ನಿಯಂತ್ರಿಸುತ್ತಿರುತ್ತದೆ ಎಂಬುದನ್ನು ಸೂಚಿಸುತ್ತವೆ.

ಬಾಬೂ ಜಗಜೀವನರಾಂ ಇದ್ದಿದ್ದರೆ ಮೊನ್ನೆಯ ಏಪ್ರಿಲ್ ೫ಕ್ಕೆ ನೂರು ವರ್ಷ ತುಂಬುತ್ತಿತ್ತು. ಆ ಸಂದರ್ಭದಲ್ಲಿ ಬಾಬೂಜಿಯವರ ಬಗ್ಗೆ ಯೋಚಿಸುತ್ತಿದ್ದರೆ, ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಬಾಬೂಜಿಯವರ ನಡುವಣ ವ್ಯತ್ಯಾಸ ಹಾಗೂ ಹೋಲಿಕೆಗಳು ತಂತಾನೇ ಸುಳಿಯತೊಡಗುತ್ತವೆ. ಕಾಲೇಜು ಹುಡುಗನಾಗಿದ್ದಾಗಲೇ ರಾಂ ಗಾಂಧೀಜಿ ಸಖ್ಯಕ್ಕೆ ಬಂದರು. ಸ್ವಾತಂತ್ರ್ಯ ಚಳುವಳಿಯ ಭಾಗವಾದರು. ಅದೇ ಕಾಲಕ್ಕೆ ಅಂಬೇಡ್ಕರ್ ಸ್ವಾತಂತ್ರ್ಯದ ಕಲ್ಪನೆಯನ್ನು ವಿಸ್ತರಿಸುತ್ತಾ, ಅದರ ನಿಜವಾದ ಅರ್ಥವನ್ನು ದಲಿತರ ಪಾಲಿಗೆ ಸಾಕಾರಗೊಳಿಸಲೆತ್ನಿಸುತ್ತಿದ್ದರು. ಅಂಬೇಡ್ಕರ್ ಗಾಂಧೀಜಿಯನ್ನು ಮುಖಾಮುಖಿಯಾಗುತ್ತಾ ದಲಿತ ವಿಮೋಚನೆಯ ಹಾದಿ ರೂಪಿಸಿದರು. ಗಾಂಧೀಜಿಯ ಶಿಷ್ಯರಾದ ಬಾಬೂಜಿ ಸರ್ಕಾರ ಸೇರಿಕೊಂಡರು. ಜೊತೆಗೆ, ಅಂಬೇಡ್ಕರ್ ಅವರ ಜಾತಿವಿನಾಶದ ಚಿಂತನೆಯನ್ನೂ ಗಾಂಧೀಜಿಯ ಮನಃಪರಿವರ್ತನೆಯ ಮಾರ್ಗವನ್ನೂ ಬಾಬೂಜಿ ಬೆಸೆಯಲೆತ್ನಿಸಿದರು. ದಲಿತ ನಾಯಕತ್ವದ ಪ್ರತಿನಿಧಿಗಳಾಗಿ ಅಂಬೇಡ್ಕರ್ ಹಾಗೂ ಬಾಬೂಜಿಯವರನ್ನು ಹೋಲಿಸುತ್ತಾ, ಲೋಹಿಯಾ ಒಂದೆಡೆ, ಅಂಬೇಡ್ಕರ್ ಅವರದು ದಿಟ್ಟ ಸ್ವಾಭಿಮಾನದ ಮಾರ್ಗ ಹಾಗೂ ಜಗಜೀವನರಾಂ ಅವರದು ಸಲಾಮು ಹಾಕುವ ಮಾರ್ಗ ಎಂಬರ್ಥದ ಮಾತುಗಳನ್ನು ಬರೆದ ನೆನಪು. ಅದೇನೇ ಇರಲಿ, ಬಾಬೂಜಿ ನಿರಂತರವಾಗಿ ಸರ್ಕಾರದ ಒಳಗಿದ್ದೇ ದಲಿತಪರ ಕೆಲಸ ಮಾಡಿದ್ದನ್ನು ಮರೆಯಲಾಗದು. ಆದರೆ ಸರ್ಕಾರ ಬಾಯಿ ಕಟ್ಟಿಸುತ್ತದೆ. ಹಾಗೆಯೇ ಬಾಬೂಜಿಗೂ ಆಯಿತು. ಅದರ ನಡುವೆಯೂ, “ದಲಿತರಿಗೆ ಪ್ರತ್ಯೇಕ ಕೇರಿಗಳಿರಬಾರದು, ಜಾತಿಸೂಚಕ, ಜಾತಿವಾಚಕಗಳನ್ನು ಕೈಬಿಡಬೇಕು, ಅಂತರ್ಜಾತೀಯ ವಿವಾಹದಿಂದ ಮಾತ್ರ ಜಾತಿವಿನಾಶ ಸಾಧ್ಯ” ಇವೇ ಮುಂತಾದ ಅಂಶಗಳ ಬಗ್ಗೆ ಬಾಬೂಜಿ ಪಾರ್ಲಿಮೆಂಟಿನಲ್ಲಿ ಕೂಡ ದೃಢವಾಗಿದ್ದರು.

ಅಂಬೇಡ್ಕರ್ ಅವರು ಗಾಂಧೀಜಿಯ ಬಗ್ಗೆ ತಳೆದ ಭಿನ್ನಮತಗಳನ್ನೇ ಉಬ್ಬಿಸಿ, ಗಾಂಧೀ ದ್ವೇಷವನ್ನು ದಲಿತ ರಾಜಕಾರಣದ ಬಂಡವಾಳವಾಗಿಸಿಕೊಳ್ಳಲು ಯತ್ನಿಸುವವರೆಲ್ಲ ಬಾಬೂಜಿ ಯಾಕೆ ಕೊನೆಯತನಕ ಸೀಮಿತ ಅರ್ಥದಲ್ಲಾದರೂ ಗಾಂಧೀವಾದಿಯಾಗಿಯೇ ಉಳಿದರು ಎಂಬುದನ್ನು ಯೋಚಿಸಬೇಕು. ಯಾವಾಗ ಜಗಜೀವನರಾಂ ಅವರು ಕಾಂಗ್ರೆಸ್ ಬಿಟ್ಟರೋ ಆಗ, ದಲಿತರನ್ನು “ಗ್ಯಾರಂಟಿ ವೋಟ್ ಬ್ಯಾಂಕ್” ಮಾಡಿಕೊಂಡಿದ್ದ ಕಾಂಗ್ರೆಸ್ಸನ್ನು ಮೀರಿ ದಲಿತರು ಹೊಸ ಪಕ್ಷಗಳನ್ನು ಹುಡುಕಿಕೊಂಡರು, ಕಟ್ಟಿಕೊಂಡರು. ತೊಂಬತ್ತರ ದಶಕದಲ್ಲಿ ಕಾನ್ಷೀರಾಂ, ಮಾಯಾವತಿಯವರು ಎಮರ್ಜ್ ಆದ ಘಟ್ಟದ ಬೇರುಗಳು ಬಾಬೂಜಿ ರಾಜಕಾರಣದ ಕೊನೆಯ ಘಟ್ಟದಲ್ಲೂ ಇವೆ. ಯಾಕೆಂದರೆ ಇಂದಿರಾಗಾಂಧಿಯವರು ಸೋತಾಗ, ಜಗಜೀವನರಾಂ ಒಂದೂಮುಕ್ಕಾಲು ಲಕ್ಷ ಮತಗಳ ಅಂತರದಿಂದ ಗೆದ್ದರು. ಈ ಚುನಾವಣೆಯ ಪರಿಣಾಮ ಕುರಿತು ಚರ್ಚಿಸುತ್ತಾ ಕವಿ ಕೆ.ಬಿ.ಸಿದ್ದಯ್ಯ ಕೊಟ್ಟ ಒಳನೋಟ ಕುತೂಹಲಕರವಾಗಿದೆ: “ಆಗ ಜಗಜೀವನರಾಂ ಅವರ ಪಕ್ಷ ಮೂವತ್ತೊಂಬತ್ತು ಸ್ಥಾನಗಳಿಗೆ  ಸ್ಪರ್ಧಿಸಿ ಮೂವತ್ತೇಳು ಸ್ಥಾನಗಳಲ್ಲಿ ಗೆದ್ದಿತ್ತು. ಅದಕ್ಕಿಂತ ಇಪ್ಪತ್ತು ವರ್ಷಗಳ ಕೆಳಗೆ ಅಂಬೇಡ್ಕರ್ ಅವರ “ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ”ದಿಂದ ಮುಂಬಯಿ ಕಾರ್ಪೊರೇಷನ್ನಿಗೆ ಸ್ಪರ್ಧಿಸಿದ ಹದಿನೇಳು ಅಭ್ಯರ್ಥಿಗಳಲ್ಲಿ ೧೫ ಜನ ಗೆದ್ದಿದ್ದರು. ಈ ಎರಡೂ ಪ್ರಸಂಗಗಳು ಸಂಘಟನಾತ್ಮಕ ಶಕ್ತಿ ಇರುವ ನೊಂದ ಜನಾಂಗದ ನಾಯಕ ನಿಜಕ್ಕೂ ಯಶಸ್ವಿಯಾಗಬಲ್ಲ ಎಂಬುದನ್ನು ಸೂಚಿಸುತ್ತವೆ.”

ಬಾಬೂಜಿಯವರನ್ನು ಕುರಿತು ಬರೆಯುವಾಗ, ಕರ್ನಾಟಕದಲ್ಲಿ ಪ್ರಬಲ ಜಾತಿಗಳ ರಾಜಕಾರಣದ ಎದುರು ದಲಿತ ಐಕಾನ್ ಆಗುವಂಥ ನಾಯಕತ್ವ ಮೂಡಿ ಬರುವುದು ಯಾಕೆ ಕಷ್ಟವಾಯಿತು ಎಂಬ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ. ಬಿ.ಬಸವಲಿಂಗಪ್ಪನವರು ಒಂದು ಸರಳ ಮಟ್ಟದಲ್ಲಾದರೂ ಅಂಬೇಡ್ಕರ್ ತಾತ್ವಿಕತೆ ಹಾಗೂ ಜಗಜೀವನರಾಂ ಅವರ ಅಧಿಕಾರ ರಾಜಕಾರಣವನ್ನು ಬೆಸೆಯಲು ಯತ್ನಿಸಿದರು. ಕೆ.ಎಚ್.ರಂಗನಾಥ್ ಅವರಂಥವರು ಎಲ್ಲ ಬೌದ್ಧಿಕ ಹಾಗೂ ಆಡಳಿತಾತ್ಮಕ ದಕ್ಷತೆಯಿದ್ದರೂ ಕಾಂಗ್ರೆಸ್ ರಾಜಕಾರಣದಲ್ಲಿ ಕರಗಿಹೋದರು. ಇದೀಗ ಮಲ್ಲಿಕಾರ್ಜುನ ಖರ್ಗೆಯವರು ದೊಡ್ಡ ನಾಯಕರಾಗಿ ಎಮರ್ಜ್ ಆಗುತ್ತಿದ್ದಾರೆ ಎನ್ನುತ್ತಿರುವಾಗಲೇ, ನಾಲಗೆಯ ಬಲದಿಂದ ಮಾಧ್ಯಮಗಳ ಕಣ್ಮಣಿಯಾಗಿರುವ ಎಸ್.ಎಂ.ಕೃಷ್ಣ ಹೊಗೇನಕಲ್ ಸಮಸ್ಯೆ ಬಗೆಹರಿಸಿದ್ದು ತಾನೇ ಎಂಬಂತೆ ಕರ್ನಾಟಕ ರಾಜಕಾರಣದ ಕೇಂದ್ರ ರಂಗಕ್ಕೆ ಬರಲು ಹವಣಿಸುತ್ತಿದ್ದಾರೆ.

ಅದಿರಲಿ, ಇವತ್ತು ಬಾಬೂ ಜಗಜೀವನರಾಂ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಮಾರ್ಗಗಳು ಬೆರೆಯುವುದು ಕೇವಲ ದಲಿತ ರಾಜಕಾರಣಕ್ಕಲ್ಲ, ಒಟ್ಟು ಕರ್ನಾಟಕದ ಪ್ರಗತಿಪರ ರಾಜಕಾರಣಕ್ಕೇ ನಿರ್ಣಾಯಕ ಜೀವದ್ರವ್ಯವಾಗಿದೆ. ಎಡ-ಬಲಗಳೆಂದು ಬಿರುಕೊಡೆದಿರುವ ದಲಿತ ಶಕ್ತಿ ಒಗ್ಗೂಡಿ ಜಾತ್ಯತೀತ ಪಕ್ಷಗಳ ಹಿಂದೆ ನಿಂತರೆ ಅಥವಾ ಆ ಪಕ್ಷಗಳನ್ನು ಕಟ್ಟಿ, ಮುನ್ನಡೆಸಿದರೆ ಮಾತ್ರ ಕರ್ನಾಟಕದಲ್ಲಿ ಪ್ರಬಲ ಜಾತಿಗಳ ರಾಜಕಾರಣವನ್ನು ಹಿಮ್ಮೆಟ್ಟಿಸುವುದು ಸಾಧ್ಯವೆನಿಸುತ್ತದೆ.

‍ಲೇಖಕರು avadhi

April 20, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This