ಬಾಯಿಗೆ ಹೊಲಿಗೆ ಹಾಕಿತ್ತು ಇಂಗ್ಲೀಷು…

door_number142.jpg“ಡೋರ್ ನಂ 142”

ಬಹುರೂಪಿ

ನ್ನು ಹತ್ತು ನಿಮಿಷ ಇದೆ. ಹತ್ತೇ ನಿಮಿಷ. ಅಯ್ಯೋ ನಿಮಿಷಗಳು ಕರಗ್ತಾ ಇವೆ. ಇನ್ನೇನು ಹತ್ರ ಬಂದೇ ಬಿಡ್ತು.  ಇಲ್ಲಾ ನಾನು ಬಾಯೇ ಬಿಡಲ್ಲ. ಬಾಯಿ ಬಿಡದಿದ್ರೆ ಹೇಗಾಗುತ್ತೆ. ಬಾಯಿ ಬಿಡಲೇ ಬೇಕು. ಹಾಗಾದ್ರೆ ಇಲ್ಲಿಂದ ಓಡಿ ಹೋಗಿ ಬಿಡ್ಲಾ… ಅವರು ಬರ್ದೇನೇ ಇರಲ್ವಾ.. ಅವರು ಬರದೇ ಇರೋ ಹಾಗೆ ಮಾಡಿ ನನ್ನ ಕಾಪಾಡಪ್ಪಾ…

ಐದು, ಹತ್ತು ನಿಮಿಷ ಮಾತ್ರದ ಕಥೆಯಾಗಿರಲಿಲ್ಲ ಅದು. ನಾಳೆ ಯಾರೋ ವಿಐಪಿ ಬರ್ತಿದಾರೆ. ಇಂಥ ಕಡೆ ವಿಸಿಟ್ ಇದೆ ಅನ್ನೋ ಸುದ್ದಿ ನನ್ನ ಕಿವೀಗೆ ಬಿದ್ದಾಗ್ಲಿಂದ ಆರಂಭವಾಗ್ತಿದ್ದ ಆತಂಕ ಇದು. ಯಾಕೆ ಬರ್ತಾರೋ… ಬಂದು ಪ್ರಾಣ ತಿಂತಾರೋ… ಅನ್ನೋದೇ ನನ್ನ ದರಿದ್ರ ಮಂತ್ರವಾಗಿ ಹೋಗ್ತಿತ್ತು.

ಇಷ್ಟಕ್ಕೇ ನಿಲ್ತಿರಲಿಲ್ಲ. ಅವರು ಬಂದ್ರೇನಂತೆ, ನಾನೇ ಹೋಗದಿದ್ರೆ ಆಯ್ತು. ಹೋದ್ರೂನೂ ಬಾಯಿ ಬಿಡದೇ ಇದ್ರೆ ಆಯ್ತು… ಹೀಗೆ ಪ್ರತಿ ಕ್ಷಣವೂ ಮನಸ್ಸು ಅದಲು ಬದಲು ಆಗ್ತಾ ನನ್ನ ಜೀವ ಇಷ್ಟಿಷ್ಟೇ ಸವೆದು ಹೋಗ್ತಿತ್ತು. ಬರ್ತಿದ್ದವರೇನು ನನ್ನ ನೆಂಟರೂ ಅಲ್ಲ ಅಥವಾ ಸಾಲ ವಸೂಲಿ ಮಾಡೋರೂ ಅಲ್ಲ. ನನ್ನ ಮರ್ಯಾದೆ ತೆಗೆಯೋಕ್ಕೆ ಅಂತೇನೂ ಅವರು ಬರ್ತಿರಲಿಲ್ಲ. ಬಾಯಿಗೆ ಬಂದಾಗೆ ಬೀದೀಲಿ ನಿಂತು ಬೈಯೋರೂ ಅಲ್ಲ. ಬರ್ತಾ ಇದ್ದೋರು ಇಂಗ್ಲೀಷ್ ಮಾತನಾಡೋರು ಅಷ್ಟೆ. ಹೊರ ರಾಜ್ಯದಿಂದ, ಹೊರ ದೇಶದಿಂದ ಯಾರೋ ವಿಸಿಟರ್ಸ್ ಅಂದ್ರೆ ಸಾಕು ನನ್ಗೆ ಮೈಯೊಳಗೆ ಭೂತ ನುಗ್ತಿತ್ತು. ಇವರ ಜೊತೆ ಮಾತಾಡೋದು ಹೇಗಪ್ಪಾ.. ಅವರಿಗೆ ಕನ್ನಡ ಬರಲ್ವಲ್ಲಾ.. ಅಂತ ಎದೇಲಿ ಅವಲಕ್ಕಿ ಕುಟ್ಟೋದಕ್ಕೆ ಶುರುವಾಗ್ತಿತ್ತು.

alphabet2.jpg

ಅಂದ್ರೆ ಅವರ ಜೊತೆ ನಾನು ಇಂಗ್ಲೀಷ್ನಲ್ಲಿ ಮಾತಾಡ್ಬೇಕು. ಇಂಗ್ಲೀಷ್ನಲ್ಲಿ ಸಂಭಾಳಿಸಬೇಕು. ಇಂಗ್ಲೀಷ್ನಲ್ಲಿ ಪ್ರಶ್ನಿಸಬೇಕು.. ಹೇಗಪ್ಪಾ ಇದೆಲ್ಲಾ ಮಾಡೋದು. ಹೋಗ್ಲಿ ಸಾಯ್ಲಿ ಅತ್ಲಾಗೆ ಅಂತ ಬಿಟ್ಬಿಡೋಣ ಅಂದ್ರೆ, ನನ್ನ ಕಸುಬೇ ಪ್ರಶ್ನೆ ಹಾಕೋದು. ಪ್ರಶ್ನೆ ಹಾಕಿ ಕಂಡ ಕಂಡವರ ಪ್ರಾಣ ಹಿಂಡೋದು. ಮತ್ತೆ ಪ್ರಶ್ನೆ ಹಾಕಲ್ಲ ಅಂದ್ರೆ ನನ್ನ ಕೆಲಸ ಎಲ್ಲಿ ಆಗುತ್ತೆ?

ನಮ್ಮಪ್ಪನಿಗೆ ತುಂಬಾ ಆಸೆ ಇತ್ತು. ನಮ್ಮ ಹುಡುಗರು ನಮ್ಮ ಆಚಾರ ವಿಚಾರ ಎಲ್ಲಾ ಕಲೀಲಿ. ಉಳಿದಿದ್ದೆಲ್ಲಾ ಆಮೇಲೆ ಅಂತ. ನಮ್ಮಪ್ಪನಿಗೆ ಯಾಕೋ ಪ್ಯಾಂಟು, ಬಣ್ಣದ ಷರ್ಟು ಹುಡುಗರು ದಾರಿ ತಪ್ಪಲಿಕ್ಕೆ ಇರೋ ಲಕ್ಷಣ ಅಂತಾ ಅನ್ನಿಸ್ತಿತ್ತು. ಪುಂಡು ಪೋಕರಿಗಳ ಸಿಂಬಲ್ ಅದು ಅನ್ಕೊಂಡು ಬಿಟ್ಟಿದ್ರು. ಹಾಗಾಗಿ ನಮಗೆ ಚಡ್ಡೀನೆ ಗತಿ. ಹೈಸ್ಕೂಲ್ ಮೆಟ್ಟಿಲು ಹತ್ತಿದ್ರೂ ನಾವು ಚಡ್ಡೀಲೇ ಹೋಗ್ಬೇಕಿತ್ತು. ಎಲ್ಲಾ ಪ್ಯಾಂಟ್ ಗಳ ಮಧ್ಯೆ ನಮ್ಮದು ಮಾತ್ರ ಚಡ್ಡಿ. ಸಂತೇಲಿ ಸೀರೆ ಬಿಚ್ಕೊಂಡು ನಿಂತಿದ್ದೀವೇನೋ ಅನ್ನಿಸ್ತಿತ್ತು. ಅದೇ ಲಿಸ್ಟ್ ಗೆ ನಮ್ಮಪ್ಪ ಇಂಗ್ಲೀಷ್ ಕೂಡ ಸೇರಿಸಿಬಿಟ್ಟಿದ್ರು. ಇಂಗ್ಲೀಷ್ ಬೇಡ ಅಂತಲ್ಲ. ಅದು ಬೇಕಾದ ವಯಸ್ಸಿಗಷ್ಟೇ ಬೇಕು ಅಂತ. ಹಾಗಾಗೀನೇ ೭ನೇ ಕ್ಲಾಸ್ ವರೆಗೆ ಕನ್ನಡ ಮೀಡಿಯಂ. ಆಮೇಲೆ ಮಾತ್ರಾನೇ ಇಂಗ್ಲೀಷ್ ಅಂತಾ ಫರ್ಮಾನು ಹೊರಡಿಸಿಬಿಟ್ಟಿದ್ರು.

ಸರಿ, ೭ ಮುಗಿಸಿ ೮ನೇ ಕ್ಲಾಸಿಗೆ ಕಾಲಿಟ್ಟರೆ ನಾನೊಬ್ನೇ ದಡ್ಡ ನನ್ಮಗ ಅನ್ನೋ ಭಾವನೆ ಮೂಡಿಸೋ ಥರಾ ಸ್ಕೂಲ್ ಇರ್ತಿತ್ತು. ಎಲ್ಲಾ ಇಂಗ್ಲೀಷ್ ಮೀಡಿಯಂನಿಂದ ಬಂದವರು. ನಾನು, ಇಲ್ಲಾ ನನ್ನ ಅಪ್ಪನ ಥರಾನೇ ಇರೋ ಅಪ್ಪನ ಮಕ್ಕಳು ನಾಲ್ಕೈದು ಜನ ಕನ್ನಡ ಮೀಡಿಯಂನವರು. ಬಾಯಿ ಬಿಡೋಣ ಅಂದ್ರೆ ಅದು ಯಾವ ಥರಾ ಶಬ್ದಾ ಬರುತ್ತೋ. ಒಂದು ಶಬ್ದ ವಕ್ರಾ ಆಗಿ ಇನ್ನೇನಾದ್ರೂ ಆಗಿ ಬಿಡುತ್ತೇನೋ.. ಒಂದೊಂದೇ ಪದಾ ಜೋಡಿಸ್ತಾ ಮಾತಾಡುವಾಗ ಟೈಂ ಜಾಸ್ತಿ ಎಳೆದು ಬಿಡ್ತೀವೇನೋ ಅಂತೆಲ್ಲಾ ಅನಿಸಿ ತೀರಾ ತೀರಾ ಮುಜುಗರ ಆಗೋಗೋದು. ಇದೆಲ್ಲಾ ನಿಜಾ ಅನ್ನೋ ಹಾಗೆ ಕ್ಲಾಸ್ ಮೇಟ್ಸ್ ಎಲ್ಲಾ ಕಲ ಕಲಾ ಅಂತ ಇಂಗ್ಲೀಷ್ನಲ್ಲಿ ಮಾತಾಡ್ತಾ ಇರೋರು.

ನಾನು ಫಟಿಂಗಾನೇ. ಸಾಕಷ್ಟು ತರ್ಲೆ ಕೆಲ್ಸ ಮಾಡ್ತಿದ್ದೆ. ಬಾಯಿ ಬಿಟ್ರೆ ವಟ ವಟ. “ನಿನ್ನ ಯಾರು ಸುಧಾರಿಸ್ತಾರಪ್ಪಾ..” ಅಂತ ಅಮ್ಮಾನೇ ಬಯ್ಬೇಕು, ಹಂಗೆ. ಅಂತಾ ನಾನೇ ಇಲ್ಲಿ ಡಲ್ ಹೊಡೆದು ಹೋಗ್ತಿದ್ದೆ. ಬಾಯಿ ಬಿಟ್ರೆ ಗಂಟಲಲ್ಲಿರೋ ಡಯಾಫ್ರಮ್ ಕೆಲಸಾನೇ ಮಾಡ್ತಿರಲಿಲ್ಲ. ತುಸ್ ತುಸ್ ಅಂತಾ ಶಬ್ದಾ ಬರ್ತಿತ್ತು ಅಷ್ಟೆ.

ಅಂತಾದ್ರಲ್ಲೂ ಕ್ಲಾಸ್ ಲೀಡರ್ ಪೋಸ್ಟ್ಗೆ ನಾಮಿನೇಷನ್ ಹಾಕ್ಬಿಟ್ಟೆ. ಮೂರು ಜನ ಬೇರೆಯವರು. ಕ್ಲಾಸ್ ನಲ್ಲಿ ಓಟ್ ಕೊಡಿ ಅಂತ ಕ್ಯಾನ್ ವಾಸ್ ಮಾಡ್ಬೇಕಲ್ಲಾ. ದರಿದ್ರ ಯಾವನಿಗೆ ಬೇಕಾಗಿತ್ತಪ್ಪಾ ಈ ತರಲೆ ಸಹವಾಸ. ಯಾವ ದರಿದ್ರ ಗಳಿಗೆಯಲ್ಲಿ ಈ ನಿರ್ಧಾರ ತಗೊಂಡೆ.. ಅಂತ ನನ್ನನ್ನ ನಾನೇ ಎಷ್ಟು ಬೈಕೊಂಡಿದೇನೋ? ಕ್ಯಾನ್ವಾಸ್ ಮಾಡ್ಬೇಕು ಅಂದ್ರೆ ಇಂಗ್ಲೀಷ್ನಲ್ಲಿ ತಾನೇ. ಇಂಗ್ಲೀಷೂ ಬೇಡ ಮಣ್ಣಾಂಗಟ್ಟಿ ಕ್ಯಾನ್ವಾಸೂ ಬೇಡ ಅಂತ ಸುಮ್ನಾಗಿ ಹೋಗ್ಬಿಟ್ಟೆ. ಎಲೆಕ್ಷನ್ ದಿನ ಬಂತು. ಮೇಷ್ಟರು ಯಾರ್ಯಾರು ಸ್ಪರ್ಧಿಗಳು ಅಂತ ಹೆಸರು ಓದೋದಿಕ್ಕೆ ಶುರು ಮಾಡಿದ್ರು. ಇಡೀ ಕ್ಲಾಸ್ ಗೆ ಕ್ಲಾಸೇ ಬೆರಗಾಗಿ ಹೋಗಿತ್ತು. ಇವನ್ಯಾರಪ್ಪಾ ನಾಲ್ಕನೆಯವನು ಅಂತ. ಅಂತಾವರೆಗೂ ನಾನು ನಾಮಿನೇಷನ್ ಹಾಕಿದ್ದೀನಿ ಅನ್ನೋದೇ ಗೊತ್ತಿಲ್ಲ. ಬೇರೆಯವರು ಆಗ್ಲೇ ಪುಢಾರಿಗಳ ತರಾ ಆಶ್ವಾಸನೆ ಕೊಟ್ಟು ಪ್ರಚಾರ ಮಾಡ್ತಿದ್ರೆ ದರಿದ್ರ ಇಂಗ್ಲೀಷು ನನ್ನ ಬಾಯಿಗೆ ಹೊಲಿಗೆ ಹಾಕಿ ಕೂಡ್ಸಿತ್ತು.

ಒಂದಿನಾ, ಯಾಕೆ ಬೇಕಪ್ಪಾ ಈ ಸ್ಕೂಲ್ ಸಹವಾಸ. ಯಾವುದಾದ್ರೂ ಗೌರ್ಮೆಂಟ್ ಸ್ಕೂಲಲ್ಲಿ ಕನ್ನಡ ಓದಿಕೊಂಡು ಇದ್ದಿದ್ರೆ ಆಗ್ತಿರಲಿಲ್ವ ಅಂತಾ ಅನ್ಕೊಂಡು ಡಿಮ್ ಆಗಿದ್ದಾಗ ನನ್ನ ಅಕ್ಕ ಬಂದು, “ಯಾಕೋ ಇಂಗ್ಲೀಷ್ ಅಂತ ಯೋಚನೆ ಮಾಡ್ ಬಾರ್ದೂ.. ಆರಂಭದಲ್ಲಿ ಕಷ್ಟ.. ಆಮೇಲ್ನೋಡ್ತಿರು.. ನಿನ್ನ ಎಲ್ರೂ ಫಾಲೋ ಮಾಡ್ಬೇಕು ಹಾಗಾಗ್ತೀಯ” ಅಂದ್ಳು. ಸಿಕ್ಕಾಪಟ್ಟೆ ಧೈರ್ಯ ಬಂತು ಆ ಧೈರ್ಯ ಇದ್ದದ್ದು ಮಾರನೇ ದಿನ ಸ್ಕೂಲ್ ಗೆ ಹೋಗೋವರ್ಗೆ ಮಾತ್ರ. ಮತ್ತೆ ಇಂಗ್ಲೀಷ್ ನನ್ನ ಆತ್ಮವಿಶ್ವಾಸಕ್ಕೇ ತೂತು ಕೊರೀತು.

ಆದ್ರೂನೂ, ಏನಂತಿವಾಗ ನೋಡೇ ಬಿಡಾಣ ಅಂತ ಹಲ್ಲು ಕಚ್ಚಿ ಓದಿದೆ. ಹಗಲೂ ರಾತ್ರಿ ಓದಿದೆ. ಸ್ಪೆಲ್ಲಿಂಗ್ ಉರು ಹೊಡೆದೆ. ಆಮೇಲೆ ಧೈರ್ಯ ಬಂತಲ್ಲಾ.. ನಮ್ಮ ರೋಡ್ ಹುಡುಗಿ ಅವಳೂ ನನ್ನ ಥರಾನೇ ಕನ್ನಡ ಮುಗಿಸಿ ಇಂಗ್ಲೀಷ್ ಸ್ಕೂಲ್ ಹತ್ತಿದ್ಲು. ಅವಳ ಜೊತೆ ಬಟ್ಲರ್ ಇಂಗ್ಲೀಷ್ನಲ್ಲಿ ಸಿಕ್ಕಾಪಟ್ಟೆ ಕಾನ್ಫಿಡೆನ್ಸ್ ನಿಂದ ಮಾತಾಡ್ತಾ ಇದ್ದೆ. ಅವಾಗ ನನ್ನ ತಂಗಿ ಬಂದ್ಲು ನೋಡಪ್ಪಾ.. “ಲಂಡನ್ ನಿಂದ ಬಂದಿಳಿದವನೆ” ಅಂತಾ ಅಮ್ಮನಿಗೆ, ಅಣ್ಣಂದೀರ್ಗೆ, ಬೀದಿನಲ್ಲಿರೋರಿಗೆಲ್ಲಾ ಡಂಗೂರ ಹೊಡೆದ್ಲು. ನಾನು ಮಾತಾಡಕ್ಕೆ ಅಂತ ಅವತ್ತು ತೆಗೆದೆನಲ್ಲಾ ಬಾಯಿ ಅದು ತಕ್ಷಣ ಬಂದ್ ಆಗೋಯ್ತು.

ಬಂದ್ ಆಯ್ತು ಅಂದ್ರೆ ಬಾಯಿ ಮಾತ್ರ ಬಂದ್ ಆಯ್ತು.. ಆದ್ರೆ ಮನಸ್ಸು ಮಾತ್ರ ಇಂಗ್ಲೀಷ್ ಜೊತೆ ಗುದ್ದಾಡ್ತಾನೇ ಇತ್ತು. ದರಿದ್ರ ಇಂಗ್ಲೀಷಲ್ಲೋ ನೂರಾರು ವಿಚಿತ್ರ ರೂಲ್ಸ್. ಶೇಕ್ಸ್ ಪಿಯರ್ ಅನ್ಬೇಕಂದ್ರೆ ಸ್ಪೆಲ್ಲಿಂಗ್ ಬೇರೆ ಥರಾ ಅಂತೆ. ಹೀಗೆ ಜೀವ ಹಿಂಡೋದು. ನಾನಂತೂ, ಎಕ್ಸಾಂನಲ್ಲಿ ಮಾತಾಡೋದೇನೂ ಇಲ್ಲವಲ್ಲ, ಬರೀಬೇಕು ತಾನೇ ಅಂತ ಶೇಕ್ಸ್ ಪಿಯರ್ ನ “ಶೇಕ್ಸ್ ಪಿಯರೆ” ಅಂತ ಉರು ಹೊಡ್ಕೊಳ್ತಿದ್ದೆ. ಎಕ್ಸಾಂನಲ್ಲಿ ಗುಡ್ ಮಾರ್ಕ್ಸ್, ಆದ್ರೆ ಬಾಯಿ ಬಿಟ್ರೆ ಪಕ ಪಕಾ ಅಂತ ನಗೋರು.

ನಗ್ತಿದ್ರೋ ಇಲ್ವೋ.. ನನಗಂತೂ ಹಾಗನ್ನಿಸ್ತಿತ್ತು. ಇಂಗ್ಲೀಷ್ ಅನ್ನೋದು ಹೆಂಗೆ ನನ್ನ ಬೆನ್ನಿಂದೇನೇ ಬಿದ್ದು ಬಿಡ್ತು ಅಂದ್ರೆ, ಇವಾಗ್ಲೂ, ಇಷ್ಟು ವರ್ಷ ಇಂಗ್ಲೀಷಲ್ಲಿ ಸಂಸಾರ ಮಾಡಿ, ಈಗ ಇಂಗ್ಲೀಷ್ ಮಾತಾಡ್ಕಂಡೇ ಬದುಕಬೇಕು ಅನ್ನೋ ವಾತಾವರಣದಲ್ಲಿ ಬದುಕ್ತಿದ್ರೂ ನನ್ನ ಮನಸ್ಸು ಒಂದ್ನಿಮಿಷ ತಡಕಾಡುತ್ತೆ, ಗಾಬರಿಯಾಗುತ್ತೆ, ಕಣ್ ಕಣ್ ಬಿಡುತ್ತೆ. ಒದ್ದಾಡುತ್ತೆ. ಜೀವ ಹಿಡಕೊಂಡು ಬಾಯಿ ಬಿಡುತ್ತೆ. ಬಿಟ್ಟ ಮೇಲೆ ಎಲ್ಲಾರ ಮುಖ ನೋಡುತ್ತೆ. ಯಾರಾದ್ರೂ ನಗ್ತಿದಾರಾ ಅಂತಾ. ಆಮೇಲೆ ಹೆಂಗೋ ವ್ಯವಹಾರ ಮಾಡುತ್ತೆ.

ಮೊನ್ನೆ ಕ್ರಾಸ್ ವರ್ಡ್ ಗೆ ಹೋಗಿದ್ನಲ್ಲ, ಆವಾಗ ಪುಸ್ತಕದ ಮೇಲೆ ಕೈಯಾಡಿಸ್ತಿದ್ದೆ. “ಹೌ ಸೋಫಿಯಾ ಗರ್ಲ್ಸ್ ಲಾಸ್ಟ್ ದೇರ್ ಆಕ್ಸೆಂಟ್” ಅಂತ ಒಂದು ಪುಸ್ತಕ ಸಿಗ್ತು. ಅಯ್ಯೋ ಬೆಂಗಳೂರು ಚಾಮರಾಜಪೇಟೆ ಬುಲ್ ಟೆಂಪಲ್ ರೋಡ್ ನಿಯರ್ ಉಮಾ ಥಿಯೇಟರ್ ನಲ್ಲಿರೋ ಬೆಂಗಳೂರು ಹೈಸ್ಕೂಲ್, ಸೆಕೆಂಡ್ ಫ್ಲೋರ್, ಕಾರ್ನರ್ ರೂಂ, ಥರ್ಡ್ ಬೆಂಚ್, ಮಿಡ್ಲ್ ಪ್ಲೇಸ್ ನವನಾದ ನಾನೂ ಅಷ್ಟೆ, ಖಂಡಾಂತರ ದೂರಾ ಇರೋ ಆ ಲ್ಯಾಟಿನ್ ಅಮೇರಿಕಾದವರೂ ಅಷ್ಟೆ. ಇಂಗ್ಲೀಷ್ ಅಂದ್ರೆ ಹಿಂಗೇ ಜೀವ ಕೈಲಿ ಹಿಡ್ಕೊಂಡಿದೀವಿ ಅನ್ನಿಸ್ತು. ಒಂದಿಷ್ಟು ಸಮಾಧಾನ ಆಯ್ತು.

ಹಂಗೇ ಕೈಯಾಡಿಸ್ತಾ ನೆಕ್ಸ್ಟ್ ಷೆಲ್ಫ್ ಗೆ ಹೋದೆ. “ಹೌ ಟು ಪ್ರೊನೌನ್ಸ್ ಇಂಗ್ಲೀಷ್ ಇನ್ ಅಮೆರಿಕನ್ ಸ್ಟೈಲ್” ಅನ್ನೋ ಪುಸ್ತಕ ಸಿಗ್ತು. ಹಾಳೆ ತಿರುವಿದೆ. ಥೂತ್ ತ್ತೇರಿ… ಇಷ್ತು ದಿನಾ ನಾನು ಕಲ್ತಿರೋದು ಇಂಗ್ಲೆಂಡ್ ಇಂಗ್ಲೀಷ್ ಅಂತೆ, ಆದ್ರೆ ಈಗ ಎಲ್ಲಾ ಕಡೇ ಇರೋದು ಅಮೇರಿಕನ್ ಇಂಗ್ಲೀಷ್ ಅಂತಿತ್ತು. ಶೆಡ್ಯೂಲ್ ಅನ್ಬಾದ್ರು, ಸ್ಕೆಡ್ಯೂಲ್ ಅನ್ಬೇಕು.. ಹಿಂಗೇ ಏನೇನೋ. ಸಾಯಲಿ ಈ ಇಂಗ್ಲೀಷು ಅನ್ಕೊಂಡೆ.

ಮಾರನೆಯ ದಿನ ಪೇಪರ್ ಓದ್ತಾ ಇದ್ದೆ. ಯಾರೋ ಕಾಲ್ ಸೆಂಟರ್ ನಲ್ಲಿ ಕೆಲಸಾ ಮಾಡೋನಿಗೆ ನಿಂಗೆ ಅಮೆರಿಕಾದೋರ ಥರಾ ಇಂಗ್ಲೀಷ್ ಮಾತಾಡೋಕ್ಕೆ ಬರಲ್ಲಾ ಅಂದ್ರಂತೆ ಆ ಕಂಪನಿಯೋರು. ಅವನು ಕೇಸ್ ಗುದ್ದಿದ್ದ. ಕೇಸ್ ಗೆದ್ದಿದ್ದ. ನನಗನ್ನಿಸ್ತು, ಕೇಸಲ್ಲ, ಮುಖಕ್ಕೇ ಗುದ್ದಬೇಕಿತ್ತು ಅಂತ…

‍ಲೇಖಕರು avadhi

December 30, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: