ಬಾಲಕೇಳಿ ವ್ಯಸನಿಗಳು

ಎ ಜೆ ಕ್ರೋನಿನ್ ರವರ ‘ಟು ಜೆಂಟಲ್ ಮನ್ ಆಫ್ ವೆರೋನಾ’ ಕಥೆಯ ಅನುವಾದ

ಕನ್ನಡಕ್ಕೆ: ರಾಜು ಎಂ ಎಸ್

ಆಲ್ಫ್ಸ್ ಪರ್ವತ ಸಾಲಿನ ಪಾದದಗುಂಟ ಬರುತ್ತಿದ್ದ ನಮ್ಮ ಕಾರನ್ನು, ವೆರೋನ ನಗರದ ಹೊರಭಾಗದ ರಸ್ತೆಯಲ್ಲಿ, ಇಬ್ಬರು ಎಳೆಯ ಹುಡುಗರು ಕೈ ಮಾಡಿ ನಿಲ್ಲಿಸಿದರು. ಅವರು, ಮಿರಮಿರನೆ ಮಿರುಗುತ್ತಿದ್ದ ಸ್ಕಾರ್ಲೆಟ್ ಬೆರ್ರಿ ಹಾಗೂ ವೈಲ್ಡ್ ಸ್ಟ್ರಾಬೆರ್ರಿಗಳನ್ನು ಮಾರುತ್ತಿದ್ದರು. ಕಡುಹಸಿರು ಎಲೆಗಳಿಂದ ಅಲಂಕರಿಸಲ್ಪಟ್ಟ ಅಂಚುಗಳ ಬೆತ್ತದ ಬುಟ್ಟಿಗಳೊಳಗೆ ಇದ್ದ ಈ ಹಣ್ಣುಗಳು ಬಾಯಲ್ಲಿ ನೀರೂರಿಸುವಂತಿದ್ದವು.

“ಕೊಳ್ಳಬೇಡ್ರಿ..!” ಕಕ್ಕುಲಾತಿಯಿಂದ ಎಚ್ಚರಿಸಿದ ನಮ್ಮ ಡ್ರೈವರ್ ಲ್ಯೂಗಿ.

“ವೆರೋನದಲ್ಲಿ ಇದ್ಕಿಂತಾ ಒಳ್ಳೇ ಹಣ್ಗಳು ಸಿಗ್ತವೆ, ಈ ಹುಡುಗ್ರನ್ನ ನೋಡ್ರಿ…” ತನ್ನ ಭುಜ ಹಾರಿಸುತ್ತಾ, ಅವರ ಬಟ್ಟೆಗಳ ಕೊಳಕುತನಕ್ಕೆ ನಕಾರ ಸೂಚಿಸಿದ.

ಅವರಲ್ಲೊಬ್ಬ ಹರಿದ ಜೆರ್ಸಿ ಹಾಗೂ ತುಂಡಾದ ಖಾಕಿ ಪ್ಯಾಂಟ್ ಹಾಕಿದ್ದ ; ಇನ್ನೊಬ್ಬನ ಸಣಕಲು ದೇಹದ ಮೇಲಿದ್ದದ್ದು, ಸಣ್ಣದಾಗುವಂತೆ ಫೋಲ್ಡ್ ಮಾಡಿದ್ದ, ಮಡಿಕೆಗಳಿದ್ದ ಆರ್ಮಿ- ಟ್ಯೂನಿಕ್ ಡ್ರೆಸ್. ಆದರೂ ಅವರಿಬ್ಬರ ಪುಟ್ಟ ನಿಲುವು, ಬಿಸಿಲಲ್ಲಿ ಸುಟ್ಟಂತಿದ್ದ ಕಂದು ಮುಖ, ಕೆದರಿದ ಕೂದಲು, ದಿಟ್ಟ ನೋಟಗಳನ್ನು ಗಮನಿಸುತ್ತಿದ್ದಂತೆಯೇ ಏನೋ ಒಂದು ವಿಚಿತ್ರ ಸೆಳೆತ ಅವರೆಡೆಗೆ ಮೂಡಿತು.

ನನ್ನ ಜೊತೆಗಿದ್ದವನೊಬ್ಬ ಆ ಹುಡುಗರೊಡನೆ ಮಾತನಾಡಿ, ಅವರಿಬ್ಬರೂ ಅಣ್ಣತಮ್ಮಂದಿರೆಂದು ಅರಿತುಕೊಂಡ. ದೊಡ್ಡವನು, ನಿಕೊಲಾ – ಹದಿಮೂರು ವರ್ಷದವ. ಕಾರಿನ ಡೋರ್ ಹ್ಯಾಂಡಲ್ ವರೆಗೂ ಬೇರಿಗೈಲಿ ಬಂದವ ಯಾಕೊಪೋ – ಹನ್ನೆರಡು ವರ್ಷದವ. ಅವರಲ್ಲಿ ಇದ್ದ ದೊಡ್ಡದೊಂದು ಹಣ್ಣಿನ ಬುಟ್ಟಿಯ ಕೊಂಡು, ವೆರೋನ ನಗರದೆಡೆಗೆ ಹೊರಟೆವು.

ವೆರೋನ ಎಂಬ ನಗರಿಗೆ  ಬಹುದೊಡ್ಡ ಇತಿಹಾಸವೇ ಇದೆ; ವೈಭವೋಪೇತವಾದ ಮಧ್ಯಕಾಲೀನ ಯುಗದಲ್ಲಿ ನಿರ್ಮಾಣವಾದ, ತಿಳಿಜೇನು ವರ್ಣದ ಸೌಧಗಳ ಹಾಗೂ ಬೀದಿಗಳ ನೀರವತೆ – ಇರುವ ಸುಂದರ, ಮನಮೋಹಕ ನಗರಿಯಿದು!

‘ರೋಮಿಯೋ- ಜ್ಯೂಲಿಯೆಟ್’ ಅಮರ ಪ್ರೇಮಿಗಳಾಗಿ ಮೆರೆದು ಮಣ್ಣಾದದ್ದಿಲ್ಲೇ! ಇಂತಹ ಇತಿಹಾಸವಿರುವ ಈ ಪ್ರವಾಸಿಗರ ತಾಣವು, ಇತ್ತೀಚೆಗೆ ನಡೆದ ಮಹಾಯುದ್ಧದಲ್ಲಿ ಆದ ಬಾಂಬ್ ಧಾಳಿಗೆ, ತನ್ನ ಸುಂದರ ಸೇತುವೆಗಳನ್ನು ಕಳೆದುಕೊಂಡಿದ್ದರೂ, ಅದರ ಪ್ರಫುಲ್ಲತೆ ಅಥವಾ ಚುಂಬಕತೆಯನ್ನು ಇನ್ನೂ ಕಳೆದುಕೊಂಡಿಲ್ಲ.

ಮರುದಿನ ಮುಂಜಾನೆ, ನಾವಿಳಿದುಕೊಂಡಿದ್ದ ಹೋಟೆಲ್ ನಿಂದ ಹೊರಟವರು, ಸ್ವಲ್ಪ ದೂರದವರೆಗೂ ಹೋಗುತ್ತಿರುವಾಗ ಅಲ್ಲೊಂದೆಡೆ ನಮ್ಮ ಕಾರನ್ನು ನಿಲ್ಲಿಸಿದಾಗ ಕಾಣಿಸಿದ್ದೆಂದರೆ: ಅಲ್ಲಿ ಜನಜಂಗುಳಿಯಿರುವ ರಸ್ತೆಯ ಚೌಕದಲ್ಲಿ, ಕಾರಂಜಿಕೊಳದ ಬಳಿ, ನೆನ್ನೆ ಮಧ್ಯಾಹ್ನ ಸಿಕ್ಕಿದ್ದ ಅವೇ ಪುಟಾಣಿ-ಗೆಳೆಯರು! ಶೂ ಪಾಲಿಷ್ ಬಾಕ್ಸ್ ಗಳೊಂದಿಗೆ ಬಾಗಿ ಕುಳಿತು, ಚಕಚಕನೆ ಪಾಲಿಷ್ ಮಾಡುವ ಕೆಲಸದಲ್ಲಿ ಮಗ್ನರಾಗಿದ್ದರು!

ಅಲ್ಲಿದ್ದ ಗಿರಾಕಿಗಳು ಕಡಿಮೆಯಾಗುವವರೆಗೂ ಕೆಲಕ್ಷಣ ಅವರನ್ನೇ ನೋಡುತ್ತಿದ್ದೆವು. ನಂತರ ಅವರ ಬಳಿಸಾರಿದಾಗ ಆಪ್ತ ನಗೆಯೊಂದಿಗೆ ವಂದಿಸಿದರೆಮಗೆ.

“ನಿವಿಬ್ರೂ ಹಣ್ಣು ಮಾರಿ ಜೀವ್ನ ಮಾಡ್ತಿದೀರಿ ಅಂದ್ಕೊಂಡ್ವಿ” ನಾನೆಂದೆ.

“ಇನ್ನೂ ಏನೇನೋ ಕೆಲ್ಸ ಮಾಡ್ತಿವಿ, ಸರ್ “ ನಿಕೊಲಾ ಬಿಗುಮಾನದಿಂದ ನುಲಿದ. ನಾವೇನಾದರೂ ಅವರಿಗೊಂದು ಕೆಲಸ ಆಫರ್  ಮಾಡುತ್ತೇವೇನೋ ಅಂದುಕೊಂಡು ಹೇಳಿದ “ಒಮ್ಮೊಮ್ಮೆ ಪ್ರವಾಸಿಗರಿಗೆ ಈ ನಗರ ತೋರ್ಸಿ… ಜೂಲಿಯೆಟ್ ಳ ಸಮಾಧಿ ಸ್ಥಳ … ಏನ್ ಕೇಳ್ತಾರೋ ಎಲ್ಲಾ ತೋರ್ಸಿ, ಗೈಡ್ ಕೆಲ್ಸ ಮಾಡ್ತೀವಿ” !

“ಸರಿ, ನಮ್ನೂ ಕರ್ಕೊಂಡ್ ಹೋಗ್ರಿ ಮತ್ತೆ!“ ನಗುತ್ತಾ ಹೇಳಿದೆ.

ಹೀಗೆ, ನಮಗವರು ನಗರ ಸುತ್ತಿಸುತ್ತಿರುವಾಗ, ಅವರ ಹಾವ ಭಾವಗಳನ್ನು ಗಮನಿಸುತ್ತಿದ್ದಂತೆಯೇ, ಅವರೆಡೆಗಿನ ನನ್ನ ಆಸಕ್ತಿ ಇನ್ನೂ ಜಾಸ್ತಿಯಾಯಿತು! ಅವರಲ್ಲಿ ಹುಡುಗುತನವಿತ್ತು, ಅವರು ಮಾಡುತ್ತಿದ್ದ ಕೆಲವು ಕೆಲಸಗಳಲ್ಲಿ ಇನ್ನೂ ನಿಪುಣತೆ ಕಡಿಮೆಯಿತ್ತು. ಯಾಕೊಪೋ ನ ತುಟಿಗಳು ಅಗತ್ಯವಾಗಿರಬೇಕಾದುದಕ್ಕಿಂತಲೂ ಪೇಲವ ಅನ್ನಿಸಿದರೂ, ಅವ ಮಾತ್ರ ಅಳಿಲಿನಂತೆ ಚುರುಕಾಗಿರುತ್ತಿದ್ದನು!  ಸೆಳೆದಿಟ್ಟುಕೊಳ್ಳುವಂತಹ, ಮೋಡಿ ಮಾಡುವ ಸದಾ ನಗುಮುಖ ನಿಕೊಲಾನದ್ದು! ಆದರೂ, ಈ ಎರಡು ಮುಗ್ಧ ಮುಖಗಳಲ್ಲಿ ಒಂದು ರೀತಿಯ, ವಯಸ್ಸಿಗೆ ಮೀರಿದ, ಸುಗುಣ ಗಾಂಭಿರ್ಯವನ್ನು, ಕಂಡ ಜನರು ಇವರನ್ನು ಗೌರವಿಸುತ್ತಿದ್ದುದು ಒಂದು ವಿಶೇಷವೇ ಅನ್ನಿಸಿತು…!!

ಒಂದು ವಾರ ಹೋಟೆಲಲ್ಲಿ  ಉಳಿದುಕೊಡಿದ್ದ ನಮಗೆ, ಸಾಕಷ್ಟು ಬಾರಿ, ನಮ್ಮ ಸಹಾಯಕ್ಕೆ ಬಂದವರೇ ಇವರು. ನಮಗೆ ಒಂದು ಪ್ಯಾಕ್ ಅಮೇರಿಕನ್ ಸಿಗರೇಟ್ ಬೇಕೆಂದರೂ, ಇವರೇ ಟ್ರೆಷರ್ ಹಂಟರ್ಸ್! ಒಪೆರಾದಲ್ಲಿ ಸೀಟ್ ಕಾಯ್ದಿರಿಸ ಬೇಕೆಂದಾಗ ಇವರದ್ದೇ ಹೆಲ್ಪ್!   ಹಾಗೇನೆ ಒಳ್ಳೆಯ ಇಟಾಲಿಯನ್ ಫುಡ್ ‘ಪಾಸ್ತಾ-ರವಿಯೋಲಿ’ ಸಿಗುವ ಚೆನ್ನಾದ ಒಂದು ರೆಸ್ಟೋರಂಟ್ ಹೆಸರು ತಿಳಿಯಬೇಕೆಂದರೂ ನಿಕೊಲಾ-ಯಾಕೊಪೋರಿಬ್ಬರೂ ಸಹಾಯ ಮಾಡುತ್ತಿದ್ದರು. ಇವರು ತಮ್ಮ ಚುರುಕಾದ, ನೈಪುಣ್ಯತೆಯ ಕೆಲಸಗಳೊಂದಿಗೆ ನಮ್ಮೆಲ್ಲಾ ಅವಶ್ಯಕತೆಗಳನ್ನು ಈಡೇರಿಸುತ್ತಿದ್ದರಿಂದ ನಮಗವರ ಮೇಲೆ ಒಂದು ರೀತಿಯ ನಂಬಿಕೆ, ವಿಶ್ವಾಸ ಮೂಡಿತು. ಮನಸ್ಸಿಗೆ ಹಿಡಿಸಿದ್ದೇನೆಂದರೆ – ಯಾರು ಕೇಳಿದರೂ “ಕೈಲಾಗದು”  ಎನ್ನದೇ, ಕೆಲಸ ಮಾಡಿಕೊಡುವ ಅವರ ಧೃಡ ನಿರ್ಧಾರ!

ಈ ಸುಡು ಬೇಸಗೆಯ, ಹಗಲು-ಸಂಜೆಗಳಲ್ಲಿ, ಬೆಟ್ಟ ಪ್ರದೇಶಗಳಿಂದ ಬೀಸಿಬರುವ ಮೂಳೆಕೊರೆವ, ತಣ್ಣನೆ ಸುಯ್ಯುವ, ವೇರೋನಿಯನ್ ವರುಣನಿಗೆ ಮೈಯ್ಯೊಡ್ಡಿಕೊಂಡು, ಈ ಇಬ್ಬರೂ ಶೂ ಪಾಲಿಶ್ ಮಾಡುತ್ತಲೋ, ಹಣ್ಣು ಮಾರುತ್ತಲೋ, ದಿನಪತ್ರಿಕೆಗಳನ್ನು ಮಾರುತ್ತಲೋ, ಪ್ರವಾಸಿಗಳಿಗೆ ನಗರ ಸುತ್ತಿಸುತ್ತಲೋ, ಬೇಕಿದ್ದು ಬೇಡದ್ದು ಎಲ್ಲಾ ಮಾಡುತ್ತಾ – ವೆರೋನಾದ ಹದಗೆಟ್ಟ ಆರ್ಥಿಕ ವ್ಯವಸ್ಥೆಯು ತೆರೆದಿಟ್ಟ – ಎಲ್ಲಾ ಬೀದಿಗಳಲ್ಲೂ ಕೆಲಸ ಹುಡುಕಿ ಹುಡುಕಿ ದುಡಿಮೆಯಿಂದ ಕಾಸು ಸಂಪಾದಿಸುತ್ತಿದ್ದರು!

ಒಂದು ರಾತ್ರಿ, ಕುಳಿರ್ಗಾಳಿ ಸುಯ್ಯಿಡುತ್ತಿದ್ದಂತಹ, ನಿರ್ಜನ ನಗರ ಚೌಕವನ್ನು ನಾವು ಹಾದುಬರುತ್ತಿದ್ದೆವು: ಲೈಟ್-ಬೋರ್ಡ್-ಕಮಾನಿನ ಕ್ಷೀಣ ಬೆಳಕಿನಲ್ಲಿ, ಫುಟ್ಪಾತ್ನ ಕಲ್ಲುಹಾಸಿನ ಮೇಲೆ, ಇವರಿಬ್ಬರೇ ದಣಿವಾರಿಸಿಕೊಳ್ಳುತ್ತಿದ್ದುದನ್ನು ಕಂಡು ದಂಗಾದೆವು! ಸುಸ್ತಾದ ಜೋಲುಮೋರೆ ಹೊತ್ತು, ನಿಕೊಲಾ ನೇರವಾಗಿ ಕುಳಿತಿದ್ದ! ಈತನ ಕಾಲ ಬಳಿ ಬಿಕರಿಯಾಗದ ದಿನಪತ್ರಿಕೆಗಳ ಒಂದು ಕಟ್ಟು ಬಿದ್ದಿತ್ತು. ಯಾಕೊಪೋ, ತನ್ನ ಅಣ್ಣನ ತೊಳನ್ನೇ ದಿಂಬನ್ನಾಗಿಸಿಕೊಂಡು ತಲೆಯೊಡ್ಡಿ ಮಲಗಿದ್ದ. ನಡುರಾತ್ರಿಯಾಗುತ್ತಲಿತ್ತು ಆಗ.

“ಇಷ್ಟ್ ಲೇಟಾದ್ರೂ, ಹೊರಗ್ಯಾಕಿದ್ದೀರಿ, ನಿಕೊಲಾ?”

ನಾನು ಮಾತಾಡುವುದರೊಳಗೇ, ಅವ ಏನೋ ಹೇಳಲು ಹೊರಟಿದ್ದವನು ಹಿಮ್ಮೆಟ್ಟಿ, ಒಂದು ಶಾಂತ, ಸ್ವತಂತ್ರ ನೋಟವನ್ನಷ್ಟೇ ಬೀರಿ ಸುಮ್ಮನಾದ.

“ ‘ಪಡುವಾ’ ಎನ್ನುವ ಊರಿಂದ ಬರುವ ಲಾಸ್ಟ್ ಬಸ್ ಗೆ ಕಾಯ್ತಿದ್ದೀವಿ. ಅದು ಬಂದ್ರೆ ನಮ್ಮೆಲ್ಲಾ ದಿನ ಪತ್ರಿಕೆಗಳು ಸೇಲಾಗ್ತವೆ”.

“ಇಷ್ಟ್ ಕಷ್ಟ ಬಿದ್ದು ಮಾರಾಟ ಮಾಡ್ಬೇಕಾ ? ತುಂಬಾನೇ ದಣ್ದಿರುವಂತೆ ಕಾಣ್ತಿದ್ದೀರಿ ನೀವು”.

ತಿರುಗಿ ಅವ ಹೇಳಿದ ನಿಚ್ಚಳ ವಿಧೇಯ ಧ್ವನಿ, ಹೇಗಿತ್ತೆಂದರೆ- ನನ್ನ ಎದೆಗುಂದಿಸುವಂತಿತ್ತು… ನಾ ಮುಂದೇನೂ ಸೊಲ್ಲೆತ್ತಿ ವಿಚಾರಿಸಲಾಗದಂತೆ:

“ಹಾಗಂತ, ನಾವೇನಾದ್ರೂ ದೂರು ಹೇಳಿದ್ವಾ ಸಾರ್ ನಿಮ್ಗೆ?”

ಆದರೆ, ಮರುಮುಂಜಾನೆ, ಕಾರಂಜಿ ಕಟ್ಟೆಯ ಬಳಿ ಶೂ ಪಾಲಿಷ್ ಮಾಡಿಸಿಕೊಳ್ಳಲು ಹೋದ ನಾನು, ಹೇಳಿದೆ, “ನಿಕೊಲಾ, ನೀನು ಮತ್ತು ನಿನ್ ತಮ್ಮ ಇಬ್ರು ದುಡಿಯೋ ರೀತಿ ನೋಡುದ್ರೆ, ಸ್ವಲ್ಪ ಚೆನ್ನಾಗೇ ಗಳ್ಸಿರ್ಬೇಕು. ಬಟ್ಟೆ ಕೊಳ್ಳೋಕೂ ಖರ್ಚ್ ಮಾಡಲ್ಲ ನೀವು. ಸಾಕಷ್ಟು ಕಡಿಮೆನೇ ಉಣ್ಣೋದು ನೀವು, ನಾ ನೋಡಿದೀನಿ – ಯಾವಾಗ್ಲೂ ಬ್ಲ್ಯಾಕ್ ಬ್ರೆಡ್ ಮತ್ತೆ ಅಂಜೂರ ಹಣ್ಣು ಅಷ್ಟೇ ನಿಮ್ ಊಟ. ಹೇಳು, ಏನ್ಮಾಡ್ತಿಯ ನೀವ್ ಗಳ್ಸಿದ್ ದುಡ್ಡನ್ನ ?”

ಬಿಸಿಲಲ್ಲಿ ಸುಟ್ಟಿದ್ದ ಅವನ ಮುಖ ಕಪ್ಪಿಟ್ಟಿತು, ಇದ ಕೇಳಿ… ಬಳಿಕ ಬಿಳುಚಿಕೊಳ್ಳಲಾರಂಭಿಸಿತು. ದೃಷ್ಠಿ ನೆಲದ ಮೇಲೆ ಬಿದ್ದಿತ್ತು.

“ಅಮೇರಿಕಾಗೆ ವಲಸೆ ಹೋಗುವಷ್ಟು ಹಣ ಉಳಿಸಿರಬೇಕು ನೀವು ಅಲ್ವೇ”. ಒತ್ತಿ ಹೇಳಿದೆ.

ಕಿರುಗಣ್ಣಿನಲ್ಲಿ ನೋಡುತ್ತಾ ಅವನು ಒತ್ತರಿಸಿ ಹೇಳಿದ. “ಸ್ಟೇಟ್ಸ್ ಗೆ ಹೋಗೋಕ್ಕೆ ತುಂಬಾ ಇಷ್ಟವೇನೋ ಇದೆ ನಮ್ಗೆ. ಆದ್ರೆ ಇತ್ತೀಚಿಗೆ ನಾವ್ ಹಾಕ್ಕೊಂಡಿರೋ ಪ್ಲಾನ್ ಗಳೇ ಬೇರೆ! ”

“ಏನವು ಪ್ಲಾನ್ ಗಳು…!?”

ತನ್ನ ಮನಸ್ಸಿನಲ್ಲಿ ಕಸಿವಿಸಿಯಿದ್ದರೂ, ಹೊರಗೆ ಮಾತ್ರ ಅವನು ಬೀರಿದ ಮುಗುಳ್ನಗೆಯು ನನ್ನನ್ನು ಮರುಳಾಗಿಸದೇ ಬಿಡಲಿಲ್ಲ.

“ಪ್ಲಾನ್ ಇದೆ. ಅಷ್ಟೇ, ಸರ್”! ಮೆಲುದನಿಯಲ್ಲಿ ಉತ್ತರಿಸಿದ.

ನಾ ಹೇಳಿದೆ, “ಅದ್ಸರಿ, ಸೋಮವಾರ ವೆರೋನ ಬಿಟ್ಟು ವಾಪಾಸ್ ಹೊರಡ್ತಾ ಇದೀವಿ. ನಾ ಹೋಗೋಕ್ ಮುಂಚೆ ನಿಮ್ಗೇನಾದ್ರೂ ಸಹಾಯ ಬೇಕಾದ್ರೆ ಕೇಳಿ?”.

ನಿಕೊಲಾ ತಲೆ ಅಡ್ಡ ಆಡಿಸಿದ. ಆದರೆ ಚಣಮಾತ್ರದಲ್ಲಿ ಯಾಕೊಪೋ ತನ್ನ ಹೊರಳೆಗಳನ್ನು, ಮುದ್ದು ಕುನ್ನಿಯ ಮೂಗಿನಂತೆ ಮುಸಿಮುಸಿ ಮಾಡುತ್ತಾ ಕಾತರದಿಂದ ಉಸುರಿದ. ಚಿಮ್ಮುವ ಉತ್ಸಾಹದಿಂದ ಹೇಳಿದ “ಸರ್, ಪ್ರತೀ ಭಾನುವಾರ ನಾವು ‘ಪೊಲೆಟಾ’ ಎನ್ನುವ ಹಳ್ಳಿಗೆ ಹೋಗ್ತೀವಿ, ಮೂವತ್ತು ಕಿಲೋಮೀಟರ್ ಆಚೆ. ಯಾವಾಗ್ಲೂ ಬಾಡಿಗೆ ಸೈಕಲ್ ನಲ್ಲಿ ಹೋಗ್ತಿದ್ವಿ. ನೀವಿಷ್ಟು ಕಾಳಜಿ ತೋರಿಸ್ತಿದ್ದರಂದ್ರೆ, ನಾಳೆ ನಿಮ್ ಕಾರಲ್ಲಿ ನಮ್ಮನ್ನಲ್ಲಿಗೆ ಕಳಿಸಿಕೊಡೋ ವ್ಯವಸ್ಥೆ ಮಾಡ್ಕೊಡಿ .”

ಆದ್ರೆ, ನಾನಾಗಲೇ ಡ್ರೈವರ್ ಲ್ಯೂಗಿ ಗೆ ಭಾನುವಾರ ಅಂತ ಹೇಳಿ ರಜೆ ಕೊಟ್ಟಿದ್ದೆ.

ಆದ್ರೂ ಹೇಳಿದೆ, “ನಾನೇ ಡ್ರೈವ್ ಮಾಡಿ ಕರ್ಕೊಂಡು ಹೋಗ್ತೀನಿ ನಿಮ್ಮನ್ನ”.

ಸ್ವಲ್ಪ ಹೊತ್ತು ಮೌನ ಆವರಿಸಿತು. ನಿಕೊಲಾ ಮುಜುಗರಪಟ್ಟುಕೊಂಡು, ತಮ್ಮನೆಡೆಗೆ ಕೆಂಗಣ್ಣಿನಿಂದ ತೀಕ್ಷ್ಣವಾಗಿ ನೋಡುತ್ತಿದ್ದ.

“ನಿಮ್ಗೆ ತೊಂದ್ರೆ ಕೊಡಬಾರ್ದು ಅನ್ಕೊಂಡ್ವಿ ಸರ್”.

“ತೊಂದ್ರೆ ಎಂತ ಇಲ್ಲ “.

ಅವ ಏನೋ ಸೊಲ್ಲೆತ್ತಲೊರಟವನು ನಂತರ ತುಟಿ ಕಚ್ಚಿ, ತಿರ್ಮಾನದ ದನಿಯಲ್ಲಿ “ನೀವಂದಂತೆಯೇ ಆಗ್ಲಿ ಸರ್”. ಎಂದ.

ಮರುದಿನ ಮಧ್ಯಾಹ್ನ ನಾವು ಕಾರಲ್ಲಿ ಪೊಲೆಟಾಗೆ ಹೊರಟೆವು. ಗಿರಿಶಿಖರಗಳ ನಡುವೆ, ಚೆಸ್ಟ್ ನಟ್ ಮರಗಳ ತೋಪುಗಳ ನಡುವೆ, ಮತ್ತು ಅಲ್ಲಲ್ಲಿ ಇಳಿಜಾರು ಬೆಟ್ಟಗಳ ಮೇಲೆ ಕಾಣುವ ಪೈನ್ ಮರಗಳ ನಡುವೆ, …. ಈ ಹಳ್ಳಿಯು ಕ್ಯಾನ್ವಾಸ್ ಮೇಲೆ ಬಿಡಿಸಿಟ್ಟಂತಹ ಒಂದು ಸುಂದರ ವರ್ಣಚಿತ್ರದಂತಿತ್ತು… ಅಲ್ಲಿ ಕೆಳಭಾಗದಲ್ಲಿ ಒಂದು ಗಾಢ ನೀಲ ಸರೋವರವೂ ಕಾಣುತ್ತಿತ್ತು.

ಏನೋ ಒಂದು ಸುಮಾರಾದ ಸಣ್ಣ ಮನೆಗೆ ಹೊರಟಿದ್ದೇವೆ ಎಂದುಕೊಂಡಿದ್ದೆ. ಆದರಿಲ್ಲಿ ಒಂದು ಕೆಂಪುಹೆಂಚಿನ ವಿಲ್ಲಾ ಎದುರು ಬಂದು ತಲುಪಿದೆವು. ಜಾಕೊಪೋ ತನ್ನ ಕೀಚಲು ದನಿಯನ್ನು ಗಲಗಲಿಸುತ್ತಾ, ನಮಗೆ ದಾರಿತೋರಿಸುತ್ತಾ, ನಮ್ಮ ಕಾರನ್ನು ಈ ವಿಲ್ಲಾ ಎದುರಿಗೆ ನಿಲ್ಲಿಸುವಂತೆ ಹೇಳಿದ. ಬೃಹದಾಕಾರದ ಕಲ್ಲುಗೋಡೆಗಳಿಂದ ಸುತ್ತುವರಿದ ವಿಲ್ಲಾವನ್ನು ನೋಡಿ, ನನ್ನ ಕಂಗಳನ್ನೇ ನಂಬಲಾರದಂತಿದ್ದ ನಾನು, ಉಸಿರೆಳೆದುಕೊಳ್ಳುವಷ್ಟರಲ್ಲೇ ಈ ಪ್ರಯಾಣಿಕರಿಬ್ಬರೂ ಪುಳುಕ್ಕನೆ ಕಾರಿನಿಂದ ಹೊರಜಿಗಿದೋಡಿದ್ದರು.

“ನಾವು ತುಂಬಾ ಸಮಯ ತೆಗೆದುಕೊಳ್ಳುವಂತಿಲ್ಲ ಸರ್. ಸುಮಾರು ಒಂದು ತಾಸು ಅಷ್ಟೇ. ಈ ಊರಿನ ಕೆಫೆಯಲ್ಲಿ ಏನಾದ್ರೂ ಕುಡೀತೀರಾ, ನೋಡಿ? ಆಮೇಲ್ ಸಿಗ್ತೀವಿ” ಎನ್ನುತ್ತಾ ಅವರು ಆ ಗೋಡೆಯ ಕಾರ್ನರ್ ನಿಂದಾಚೆ ಮಾಯವಾಗಿ ವಿಲ್ಲಾ ಹೊಕ್ಕರು. ಕೆಲ ಕ್ಷಣಗಳಾದ ಮೇಲೆ ಅವರನ್ನು ಹಿಂಬಾಲಿಸಿದೆ. ಕಬ್ಬಿಣದ ಗ್ರಿಲ್ ಗಳಿದ್ದ ಸೈಡ್ ಎಂಟ್ರೆನ್ಸ್ ಕಾಣಿಸಿತು. ನೋಡಿಯೇ ಬಿಡೋಣ ಎಂದು ವಿಲ್ಲಾದ ಕಾಲಿಂಗ್ ಬೆಲ್ ಒತ್ತಿದೆ.

ಗೌರವ ವರ್ಣದ, ಶಾಂತ ಮುಖಭಾವದ, ಸ್ಟೀಲ್ ಫ್ರೇಮ್ ಇರುವ ಕನ್ನಡಕವನ್ನು ಹಾಕಿದ್ದ ಒಬ್ಬ ಮಹಿಳೆ ಕದ ತೆರೆದಳು. ನುರಿತ ನರ್ಸ್ ಳಂತೆ   ಕಾಣುತ್ತಿದ್ದ, ಬಿಳಿ ಬಣ್ಣದ ಯೂನಿಫಾರ್ಮ್ ಹಾಕಿದ್ದ ಅವಳನ್ನು , ಪಿಳಿಪಿಳಿ ನೋಡುತ್ತಾ ಹೇಳಿದೆ.

“ಇಬ್ಬರು ಸಣ್ಣ ಹುಡುಗರೊಂದಿಗೆ ಬಂದಿದ್ದೆ”

“ಹಾ! ಹೌದು, ನಿಕೊಲಾ-ಯಾಕೊಪೋ! ” ಅವಳ ಮುಖ ಕೊಂಚ ಮೀನುಗಿತು. ನನ್ನನ್ನು ಒಳಗೆ ಬರಮಾಡಿಕೊಂಡಳು. “ಬನ್ನಿ ಮೇಲೆ ಹೋಗೋಣ” ಎನ್ನುತ್ತಾ ಕರೆದೊಯ್ದಳು.

ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿದ್ದ ಈ ವಿಲ್ಲಾದಲ್ಲಿನ ಹೊರ ಹಜಾರದಲ್ಲಿ ತಣ್ಣನೆಯ ಟೈಲ್ಸ್ ಕೂರಿಸಿದ್ದರು. ನಾವಿದನ್ನು ಹಾದು ಹೋಗುವಾಗ, ಸುಸಜ್ಜಿತವಾದ ವಾರ್ಡ್ ಗಳ ನಡುವಿನ ಕಾರಿಡಾರ್ ನ್ನು ಫಳಫಳ ಹೊಳೆಯುವಂತೆ ಪಾಲಿಶ್ ಮಾಡಿರುವುದನ್ನು ಗಮನಿಸಿದೆ. ಮೆಟ್ಟಿಲು ಹತ್ತಿ ಮೇಲೆ, ದಕ್ಷಿಣಕ್ಕಿರುವ ಬಾಲ್ಕನಿಗೆ ಹೋದೆವು. ಸುಂದರ ಉದ್ಯಾನವನ, ಮತ್ತು ಅದರಂಚಿನ ಸರೋವರವೊಂದರ ಮನಮೋಹಕ ದೃಶ್ಯವು ಈ ಬಾಲ್ಕನಿಯಿಂದ ಕಾಣುತ್ತಿತ್ತು. ಮುಂದೆ ಸಾಗುತ್ತಿರುವಾಗಲೇ, ಒಂದು ಕ್ಯೂಬಿಕಲ್ ನ ಹೊಸ್ತಿಲ ಬಳಿ ನಿಂತ ಈಕೆ, ತನ್ನ ತುಟಿಗಳ ಮೇಲೆ ಬೆರಳಿರಿಸಿ ಸದ್ದು ಮಾಡಬಾರದೆಂಬಂತೆ ನಿಂತಳು. ಅಲ್ಲಿ ಗಾಜಿನ ಪಾರ್ಟಿಶನ್ ಮುಖಾಂತರ ಒಳಗೆ ಕಣ್ಣು ಹಾಯಿಸಲು, ನಗುಮೊಗದಿಂದ ಸೂಚಿಸಿದಳು.

ಎಳೆಯ, ಸುಕೋಮಲ ಕಂಗಳ, ಸುಮಾರು ಇಪ್ಪತ್ತರ ಹರೆಯದ ಬಾಲೆಯೊಬ್ಬಳು, ತಲೆದಿಂಬುಗಳ ಮೇಲೆ ಓರೆಯಾಗಿ ಮಲಗಿದ್ದಾಳೆ; ದಿವಿನಾದ ಲೇಸ್ ಜಾಕೆಟ್ ಧರಿಸಿದ್ದಾಳೆ; ಇವಳ ಬದಿಗೆ ಕುಳಿತ ಹುಡುಗರಿಬ್ಬರ ಹರಟೆ ಕೇಳುತ್ತಿದ್ದಾಳೆ! ಇವಳ ಗಲ್ಲದ ಮೂಳೆಗಳು ಕಾಣಿಸುವಂತಾಗಿ ಸುಸ್ತು, ಆಯಾಸ, ಮುಖದಲ್ಲಿ ತುಂಬಿತ್ತು… ಜಡ್ಡುಗಟ್ಟಿದ್ದ ಆ ದೇಹವನ್ನು ಇಗ್ನೋರ್ ಮಾಡಿ ಯಾರಾದರೂ ಅವಳ ಮುಖಚಹರೆಯನ್ನು ಗಮನಿಸಿದರೆ, ಈ ಇಬ್ಬರೂ ಅವಳ ತಮ್ಮಂದಿರೆಂದು ಗ್ರಹಿಸಬಹುದಾಗಿತ್ತು. ಅವಳ ಪಕ್ಕದಲ್ಲಿ ಟೇಬಲ್ ಮೇಲೆ, ಬೆಟ್ಟದ ಹೂಗಳಿರುವ ಹೂದಾನಿ, ಜೊತೆಗೆ ಹಣ್ಣಿನ ಬುಟ್ಟಿ, ಮತ್ತೆ ಒಂದಷ್ಟು ಪುಸ್ತಕಗಳಿದ್ದವು.

“ಒಳಗೆ ಹೋಗೋಲ್ವಾ? ನಿಮ್ಮನ್ನು ನೋಡಿ ಲೂಸಿಯಾ ಖುಷಿಯಾಗ್ತಾಳೆ”, ನರ್ಸ್ ಪಿಸುಗುಟ್ಟಿದಳು.

ಆಗದು ಎಂದು ತಲೆಯಾಡಿಸುತ್ತಾ ನಾನು ಹಿಂತಿರುಗಿದೆ.

ನೆರೆದಿದ್ದ ಈ ಕುಟುಂಬದ ಸಂತಸ ಕೂಟದಲ್ಲಿ ನಾನು ಮೂಗು ತೂರಿಸೋ ವ್ಯಕ್ತಿಯಾಗಲಾರೆ ಎನಿಸಿತು. ಅಲ್ಲಿರಲಾರೆ ಎಂದೆನಿಸಿ, ಮೆಟ್ಟಿಲಿಳಿದು ಕೆಳ ಬಂದ ಮೇಲೆ, ಈ ಹುಡುಗರ ಬಗ್ಗೆ ನಿಮಗೆ ಗೊತ್ತಿರುವುದೆಲ್ಲವನ್ನೂ ಹೇಳಿ ಎಂದು ನರ್ಸ್ ಗೆ ದಂಬಾಲು ಬಿದ್ದೆ.

ಹೇಳಲು ಅವಳೂ ತುದಿಗಾಲಲ್ಲಿದ್ದಳು. “ಈ ಲೂಸಿಯಾಳನ್ನು ಬಿಟ್ಟರೆ ಇವರಿಬ್ಬರಿಗೂ ಈ ಜಗತ್ತಿನಲ್ಲಿ ಬೇರಾರೂ ಇಲ್ಲ!” ಎಂದಳು. “ವಿಧುರನಾಗಿದ್ದ ಇವರ ತಂದೆಯು, ಇಟಲಿಯ ಪ್ರಖ್ಯಾತ – ‘ಲಾ ಸ್ಕಾಲಾ’ ಒಪೆರಾ ಹೌಸ್ ನಲ್ಲಿ ಹೆಸರಾಂತ  ಹಾಡುಗಾರನಾಗಿದ್ದ. ಮಹಾಯುದ್ಧ ಶುರುವಾದ ತಕ್ಷಣವೇ ಅವನು ಸತ್ತ. ಅದಾದ ಸ್ವಲ್ಪ ದಿನಗಳಲ್ಲೇ ಇವರ ಮನೆಯು ಬಾಂಬ್ ಧಾಳಿಯಲ್ಲಿ ಧ್ವಂಸವಾದಾಗ, ಈ ಮೂವರೂ ಮಕ್ಕಳು ಬೀದಿಗೆ ಬಿದ್ದರು. ಇಲ್ಲಿಯವರೆಗೂ, ಒಂದು ಸ್ವಸ್ಥವಾದ,  ಸುಸಂಸ್ಕೃತ ಜೀವನ ನಡೆಸಿ ಮಾತ್ರ ಗೊತ್ತಿತ್ತು ಇವರಿಗೆ. ಲೂಸಿಯಾ ಕೂಡಾ ದೊಡ್ಡ ಹಾಡುಗಾರ್ತಿಯಾಗಲು ಎಲ್ಲಾ ತಾಲೀಮು ಪಡೆದಿದ್ದಳು. ತಣ್ಣಗೆ ಕೊರೆವ ವೆರೋನಿಯನ್ ಕುಳಿರ್ ಗಾಳಿಯಲ್ಲಿ, ನಿರ್ಗತಿಕರಾಗಿ ಅವರು ಭಯಂಕರ ಹಸಿವಿನಿಂದ ಬಳಲಿದ್ದರು.

ಬಾಂಬಿನಿಂದ ಧ್ವಂಸಗೊಂಡರೂ, ಅಲ್ಲಿ ಅಳಿದುಳಿದ, ತಮ್ಮ ಮನೆಯ ಅವಶೇಷಗಳನ್ನೇ ಬಳಸಿಕೊಂಡು, ತಾವೇ ತಮ್ಮ ಕೈಗಳಿಂದ ನಿರ್ಮಿಸಿದ್ದ, ಒಂದು ರೀತಿಯ ಶೆಡ್ ನಲ್ಲಿ ತಿಂಗಳುಗಟ್ಟಲೆ ಇದ್ದು ತಮ್ಮ ಜೀವ ಉಳಿಸಿಕೊಂಡಿದ್ದರು. ನಂತರ ಕರಾಳ ಮೂರೂ ವರ್ಷಗಳವರೆಗೆ, ‘ಜರ್ಮನ್ ಎಲೈಟ್ ಗಾರ್ಡ್’ ಸೈನ್ಯವು ವೆರೋನಾದಲ್ಲಿ ತನ್ನ ಹೆಡ್ ಕ್ವಾರ್ಟರ್ಸ್ ನ್ನು ನಿರ್ಮಿಸಿಕೊಂಡು, ಇಡೀ ನಗರವನ್ನೇ ನಿರ್ದಾಕ್ಷಿಣ್ಯವಾಗಿ ಆಳುತ್ತಾ  ಸರ್ವಾಧಿಕಾರಿ ಪ್ರಭುತ್ವ ಮೆರೆಯಿತು.

ತಮಗಿಷ್ಟವಿಲ್ಲದ ಜರ್ಮನ್ ಪ್ರಭುಗಳನ್ನು, ಈ ಮಕ್ಕಳು ದ್ವೇಷಿಸಲಾರಂಭಿಸಿದರು. ಅವರ ಆಳ್ವಿಕೆಯ ವಿರುದ್ಧ ಭೂಗತ ಚಳುವಳಿಗಳು ಶುರುವಿಟ್ಟುಕೊಂಡಾಗ, ಮೊದಲು ಸೇರಿಕೊಂಡವರಲ್ಲಿ ಈ ಮಕ್ಕಳೂ ಇದ್ದರು. ಈ ಯುದ್ಧ ಎಂದರೆ ‘ಹುಡುಗಾಟ’ವೇನಲ್ಲ. ಇಂಥಹ ಯುದ್ಧದಲ್ಲಿ ವೆರೋನದ ‘ಲಿಬರೇಷನ್ ಫೋರ್ಸ್’ ಗೆ ಇವರು ಅತ್ಯಮೂಲ್ಯವಾಗಿ ಬಳಕೆಯಾದರು, ಕಾರಣ – ಇವರ ತೀರಾ ಎಳೆಯ ಪ್ರಾಯ, ಹಾಗೂ ವೈರಿಗಳಿಂದ ಮರೆಮಾಚಿಕೊಂಡು ಓಡಾಡುವಷ್ಟರ ಸಣ್ಣ ಕಾಯ, ಜೊತೆಗೆ ಅಕ್ಕಪಕ್ಕದ ಗುಡ್ಡಗಾಡುಗಳ ಬಗೆಗಿನ ಇವರ ಸೂಕ್ಷ್ಮ ಜ್ಞಾನ. ಲಿಬರೇಷನ್ ಫೋರ್ಸ್ ನವರಿಗೆ ಗುಪ್ತ ಸಂದೇಶಗಳನ್ನು ಅವಿತಿಟ್ಟುಕೊಂಡು ರವಾನೆ ಮಾಡಲು ಹಾಗೂ ಅತ್ಯಂತ ಅಪಾಯಕಾರಿಗಳೂ ಕ್ರೂರಿಗಳೂ ಆಗಿದ್ದ ಜರ್ಮನ್ ಪಡೆಗಳ ಚಲನವಲನಗಳ ಮೇಲೆ ಮಾಹಿತಿ ಸಂಗ್ರಹಿಸಿ, ರವಾನಿಸುವುದಕ್ಕೆ ಇವರು ಬಳಕೆಯಾದರು.”

ಸಜ್ಜನಿಕೆ ಸೂಸುತ್ತಿದ್ದ ಈ ನರ್ಸ್ ಳ ಕಂಗಳಲ್ಲಿ ಪಸೆಯಾಡಿತು, ದುಃಖದ ಕಟ್ಟೆಯೊಡೆಯಿತು. ಆಳದ ವೇದನೆಯೊಂದಿಗೆ ಮುಂದುವರಿದು ಹೇಳಿದಳು.

“ಈ ಕಂದಮ್ಮಗಳು ಎಷ್ಟು ಜಾಣ್ಮೆವಹಿಸಿ ಕೆಲಸ ಮಾಡಿದರು ಗೊತ್ತೇ …! ತಮ್ಮ ಶೂಗಳಲ್ಲಡಗಿಸಿಕೊಂಡಿದ್ದ ಗುಪ್ತ ಪತ್ರಗಳನ್ನು ಅವರು ಆ ಕತ್ತಲ ರಾತ್ರಿಗಳಲ್ಲಿ, ಬೆಟ್ಟ-ಕಣಿವೆ ದಾರಿಗಳ ಮೂಲಕ ಹಾದು ಹೋಗಿ ತಲುಪಿಸುತ್ತಿದ್ದರು…. ಸಿಕ್ಕಿಬಿದ್ದಿದ್ದರೆ ಗುಂಡಿಗೆ ಬಲಿಯಾಗಬೇಕಿತ್ತು .”

“ಈ ಯುದ್ಧ- ಲಿಬರೇಶನ್- ಹೋರಾಟ, ಎಲ್ಲವೂ ಮುಗಿದ  ಮೇಲೆ, ನಮಗೆಲ್ಲರಿಗೂ ಶಾಂತಿ, ನೆಮ್ಮದಿ ಸಿಕ್ಕಿತು. ಆದರೆ ಕೊನೆಗೆ ಇವರು ತಮ್ಮ ಮನೆಯಿರುವ ಜಾಗಕ್ಕೆ ಹಿಂತಿರುಗಿ ಅಕ್ಕ ಲೂಸಿಯಾಳ ಬಳಿ ಬಂದು ನೋಡಿದರೆ, ಕಂಡದ್ದೇನು… ಅವಳು ‘ಬೆನ್ನುಹುರಿಯ ಟೀ.ಬಿ.’ ಯಿಂದ ನರಳುತ್ತಿದ್ದಳು! ಯುದ್ಧದ  ಘೋರ ಪರಿಣಾಮದಿಂದ ಅಂಟಿದ ಖಾಯಿಲೆಯಿದು!! ”

ಕ್ಷಣ ಸದ್ದಿಲ್ಲದೇ ನಿಂತು, ಉಸಿರೆಳೆದುಕೊಂಡಳು. “ ಇಷ್ಟಕ್ಕೂ, ಅವರು ಕೈಚೆಲ್ಲಿ  ಕುಂತರಾ?”

ನನ್ನ ಬಳಿ ಇದಕ್ಕುತ್ತರವಿರಲಿಲ್ಲ.

“ಲೂಸಿಯಾಳನ್ನು ನಮ್ಮಲ್ಲಿನ ಆಸ್ಪತ್ರೆಗೆ  ಕರೆತಂದ ಇವರು, ಅಡ್ಮಿಟ್ ಮಾಡಿಕೊಳ್ಳಿರೆಂದು ದುಂಬಾಲು ಬಿದ್ದರು. ಹನ್ನೆರಡು ತಿಂಗಳುಗಳಿಂದಲೂ ಇವಳಿಲ್ಲಿ ನಮ್ಮ ಪೇಷೆಂಟ್; ಈಗ ಸುಧಾರಿಸಿಕೊಂಡಿದ್ದಾಳೆ!  ನಮಗೆಲ್ಲರಿಗೂ ಇರುವ ಒಂದೇ ಆಶಾಭಾವವೆಂದರೆ, ಮುಂದೊಂದು ದಿನ ಇವಳು ಎದ್ದು ಓಡಾಡುತ್ತಾಳೆ, ಒಪೆರಾದಲ್ಲಿ ಹಾಡುತ್ತಾಳೆ, ಮೊದಲಿನಂತೆಯೇ…!!”.

“ಅಂದ ಹಾಗೆ, ಯುದ್ಧಾನಂತರದಲ್ಲಿ ಜನರ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ, ಎಲ್ಲವೂ ಬಲು ದುಬಾರಿ. ಆಹಾರದ ಕೊರತೆ ಇದೆ. ಫೀಸ್ ಅನ್ನು ತೆಗೆದುಕೊಳ್ಳುವುದಿಲ್ಲ ಎಂದುಕೊಂಡರೆ, ನಮ್ಮೀ ಆಸ್ಪತ್ರೆಯನ್ನು ನಡೆಸಲಿಕ್ಕಾಗದು ಅಲ್ವೇ. ಆದರೆ ಪ್ರತೀ ವಾರವೂ, ಲೂಸಿಯಾಳ ತಮ್ಮಂದಿರು ಎಲ್ಲಿಂದಲೋ ಹಣ ಹೊಂದಿಸಿ ತಂದು ಕಟ್ಟುತ್ತಿದ್ದಾರೆ. ವೆರೋನದಲ್ಲಿ ಕೆಲಸ ದಕ್ಕುವುದೇ ಕಷ್ಟ. ಎಲ್ಲದಕ್ಕೂ ಕೊರತೆಯಿದೆ. ಆರ್ಥಿಕ ಕುಸಿತ ಎಲ್ಲರನ್ನೂ ಹಣ್ಣು ಮಾಡಿದೆ. ಅದೇನೇ ಕಷ್ಟ ಇದ್ದರೂ, ಇವರಿಬ್ಬರೂ ಎಷ್ಟು ಚೆನ್ನಾಗಿ ನಿಭಾಯಿಸುತ್ತಿದ್ದಾರೆ ಎಂಬುದು ನನಗೆ ಮಾತ್ರ ಗೊತ್ತು. “

“ಹೌದು, ನಾ ಅರ್ಥ ಮಾಡಿಕೊಳ್ಳಬಲ್ಲೆ, ಇದಕ್ಕಿಂತ ಉತ್ತಮವಾಗೇನೂ ಇವರಿಗೆ ನಿಭಾಯಿಸಲಿಕ್ಕಾಗುತ್ತಿರಲಿಲ್ಲ! ” ಒಪ್ಪಿ ನುಡಿದೆ.

ಹುಡುಗರಿಬ್ಬರೂ ಹಿಂತಿರುಗಿ  ನನ್ನ ಬಳಿ ಬಂದು ಸೇರುವವರೆಗೂ ನಾನು  ಹೊರ ಅಂಗಣಕ್ಕೆ ಹೋಗಿ ಕಾಯುತ್ತಾ ನಿಂತೆ. ಬಂದ ನಂತರ, ನಗರದೆಡೆಗೆ ಕಾರಲ್ಲಿ ಹೊರಟೆವು. ತುಸು ಸಮಾಧಾನದ ಭಾವದೊಂದಿಗೆ, ಮಾತಿಲ್ಲದೇ ಅವರು ನನ್ನ ಪಕ್ಕದಲ್ಲಿ ಸ್ಥಾಪಿತರಾದರು. ನಾನು ಮಾತ್ರ ಒಂದೂ ಮಾತು ಆಡಲಿಲ್ಲ. ಅವರು ತಮ್ಮ ಈ ‘ಪೊಲೆಟಾ ಸೀಕ್ರೆಟ್’ ಅನ್ನು ನನ್ನೊಂದಿಗೆ ಹಂಚಿಕೊಳ್ಳದೇ ಜತನವಾಗಿ ತಮ್ಮೊಳಗೇ ಇಟ್ಟುಕೊಂಡಂತೆ ಕೂತಿದ್ದರು. ನನಗದು ಗೊತ್ತಿಲ್ಲ ಅಂದು ಅವರು ಭಾವಿಸಿಕೊಂಡಿರುವುದೇ ಅವರಿಗಿಷ್ಟ ಎಂಬುದು ಎನಗೆ ಮನದಟ್ಟಾಯಿತು.

ತಮ್ಮ ಜೀವನದೆಡೆಗಿರುವ ಒಂದು ಉಪಾಸನಾ ಭಾವವೇ ಒಂದು  ಬೃಹದ್ ‘ಮೌನ ಮಹಾಕಾವ್ಯ’ ವೆನ್ನಿಸುವಂತೆ ಇರುವ ಇವರ ನಿಲುವು  ನನ್ನ ಹೃದಯಕ್ಕೆ ನಾಟಿತು! ಯುದ್ಧವು, ತಾನು ಸೃಷ್ಟಿಸಿದ  ಭಯಾನಕತೆಗಳಿಂದ, ಇವರ ಚೈತನ್ಯ ಹನನವಾಗಿಲ್ಲ! ಹಾಗೇನೇ, ವಯಸ್ಸಿಗೆ ಮುಂಚೆಯೇ ಬಂದಿರುವ ಈ ಪ್ರೌಢತೆ ಮತ್ತು ಕುಟುಂಬದ ಜವಾಬ್ದಾರಿಯನ್ನು ಅವರ ಮೇಲೆ ಒಂದು ವೇಳೆ ಬಲವಂತದಿಂದ ಹೇರಿದ್ದರೆ, ಅವರು ಇಷ್ಟರಮಟ್ಟಿಗೆ ಅದನ್ನು ಗೌರವಿಸಿ, ಧೈರ್ಯದಿಂದ  ಸ್ವೀಕರಿಸುತ್ತಿದ್ದರೋ ಇಲ್ಲವೋ…!!  ಅವರ ನಿಸ್ವಾರ್ಥ ಕಾರ್ಯಗಳಿಂದ, ಮನುಷ್ಯ ಜೀವನಕ್ಕೇ ಒಂದು ಹೊಸಾ ಹಿರಿಮೆಯನ್ನು ಒದಗಿಸಿಕೊಟ್ಟಿದ್ದಾರೆ.  ಮನುಷ್ಯ ಸಮಾಜಕ್ಕೊಂದು ಮಹತ್ತರ ಆಶ್ವಾಸನೆಯನ್ನಿತ್ತಿದ್ದಾರೆ.

‍ಲೇಖಕರು Avadhi

December 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಅರೇ... ಹೋದ......

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: