ಬಾಲ್ಕನಿಯ ಹಾಡು

ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳುಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ 

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ಎಷ್ಟೋ ದಿನ ಖಾಲಿಯಿದ್ದ ಆ ಬಾಲ್ಕನಿಗೆ ಅವಳು ಬಂದ ಮೇಲೆ‌ ಮೆರಗು ಬಂತು. ಈ ಹಿಂದಿನವರು ಮನೆಯೊಳಗಿನ ಅನಗತ್ಯ ಸರಕುಗಳನ್ನೆಲ್ಲ ಬಾಲ್ಕನಿಯಲ್ಲಿ ರಾಶಿ ಹಾಕಿ ಬಿಡುತ್ತಿದ್ದರು. ಹಾಗಾಗಿಯೇ ಏನೋ ಎದುರು ಮನೆಯಿಂದ ಆ ಬಾಲ್ಕನಿ ತುಂಬಾ ಸಲೀಸಾಗಿ ಕಾಣಿಸುತ್ತಿದ್ದರೂ ಅದನ್ನು ಅವನೇನೂ ನೋಡಲು ಹೋಗುತ್ತಿರಲಿಲ್ಲ. ಇನ್ನೊಬ್ಬರ ಮನೆಯ ವಸ್ತುಗಳನ್ನು ಎಷ್ಟು ನೋಡಿದರೇನು? ಅವು ನಮ್ಮವಾಗಲಾರವಲ್ಲವೆ?  

ಹಾಗೆಂದುಕೊಂಡೇ ಇದ್ದ ಅವನು. ಆದರೆ ಈ ‘ಅವಳು’ ಬಂದಮೇಲೆ ಬಾಲ್ಕನಿ ಬದಲಾಯಿತು.‌ ಬಾಲ್ಕನಿ ತುಂಬಾ ಎಂಥೆಂಥವೋ ಗಿಡಗಳನ್ನು ತಂದಿಟ್ಟಳು. ಅವುಗಳನ್ನು ಬೆಳೆಸಿದಳು ಎನ್ನುವುದಕ್ಕಿಂತ ಸಾಕಿದಳು ಎನ್ನಬಹದು. ಅದುವರೆಗೆ ಸ್ಟೋರ್ ರೂಮ್ ರೀತಿಯಲ್ಲಿ ಕಾಣುತ್ತಿದ್ದ ಬಾಲ್ಕನಿಯ ರಮ್ಯತೆ ಈಗ ಹೆಚ್ಚಿತು.‌

ಇಂಥ ರಮ್ಯತೆಗೆ ನಿಜವಾದ ಅರ್ಥ ಬಂದಿದ್ದು ಮಾತ್ರ ಅವಳು ಗಿಡಗಳ ಜೊತೆ ಅಲ್ಲಿ ಗಿಟಾರನ್ನು ಬೆರೆಸಿದಾಗ.‌ ಪ್ರತಿ‌ ಸಂಜೆ ಸೂರ್ಯಾಸ್ತಕ್ಕೂ ಮುನ್ನ ಗಿಟಾರು ನುಡಿಸುತ್ತಾ ಆಕೆ ಬಾಲ್ಕನಿಯಲ್ಲಿ ಕೂರುತ್ತಿದ್ದಳು. ಕೆಲವೊಮ್ಮೆ ಮುಂಜಾನೆಯೋ, ಸುಡು ಮಧ್ಯಾಹ್ನದಲ್ಲೋ ಗಿಟಾರು ಹಿಡಿದು ಮನಸಿಗೆ ಮುದ ನೀಡುವ ಹಾಡನ್ನು ಗಿಟಾರಿನೊಂದಿಗೆ ಬೆರೆಸುತ್ತಿದ್ದಳು. ನೆರೆ ಹೊರೆಯವರು ಒಂದೆರೆಡು ದಿನ ಈ ಬಗ್ಗೆ ಉತ್ಸುಕರಾದಂತೆ ಕಂಡರಷ್ಟೆ. ಆಮೇಲೇನು ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.‌

ಆದರೆ ಆ ಅವನಿಗೆ ಮಾತ್ರ ಎದುರು ಮನೆಯ ಬಾಲ್ಕನಿಗೆ ಒದಗಿದ ಈ ರಮ್ಯತೆಯ ಲಾಭ ಪಡೆಯುವ ಅಭಿರುಚಿ ಮತ್ತು ಅವಕಾಶ ಎರಡೂ ಇತ್ತು. 

ಅವಳು ಬಾಲ್ಕನಿಯಲ್ಲಿ ಗಿಟಾರಿನೊಂದಿಗೆ ಹಾಡುತ್ತಾ ಕುಳಿತರೆ, ಅವನು ತನ್ನ ಮನೆಯ ಕೋಣೆಯ ಕಿಟಕಿಯಿಂದ ಅವಳನ್ನೇ ನೋಡುತ್ತಾ, ಸಂಗೀತಕ್ಕೆ ತಲೆದೂಗುತ್ತಾ ಕೂರುತ್ತಿದ್ದನು. ಸುಮಾರು ತಿಂಗಳಗಳ‌ ಕಾಲ ಅವಳಿಗೆ ಈ ಕಿಟಕಿಯ ಬಗ್ಗೆ ಏನೂ ತಿಳಿದಿರಲಿಲ್ಲ.‌ 

‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ’ ಎಂಬಂತೆ ಅವಳು ಹಾಡಿಕೊಂಡಿದ್ದಳಷ್ಟೆ. ಆದರೆ ಒಂದು‌ ದಿನ ಅವಳು ಹಾಡುವಾಗ ಅವನೂ ಕೂಡ ಮನೆಯ ಬಾಲ್ಕನಿಗೆ ಬಂದು ಆ ಸಂಗೀತದ ಸವಿಯುಂಡ.‌ ಅವಳಿಗೆ ತುಂಬಾ ಖುಷಿಯಾಯಿತು. ಮರು ದಿನದಿಂದ ಆಕೆ ಬಾಲ್ಕನಿಗೆ ಬರುವುದರಲ್ಲಿ ನಿಯಮಿತತೆ ಬಂತು. ಯಾವ್ಯಾವುದೋ ಸಮಯಕ್ಕೆ ಹಾಡದೆ, ಸೂರ್ಯನಿಗೆ ಬೀಳ್ಕೊಡುವ ಸಮಯಕ್ಕೆ ಸರಿಯಾಗಿ ಶುರು ಮಾಡಿ ಚಂದ್ರನನ್ನು ಸ್ವಾಗತಿಸುವವರೆಗೂ ಹಾಡುವುದನ್ನು ರೂಢಿ ಮಾಡಿಕೊಂಡಳು. ಜೊತೆಗೆ, ತಾನು ನಾಳೆ ಯಾವ ಹಾಡು ಹಾಡುತ್ತೇನೆ ಎಂದು ಕೂಡ ಆಕೆ ಹಾಳೆಯೊಂದರಲ್ಲಿ ಬರೆದು ಬಾಲ್ಕನಿಯಲ್ಲಿ ಎದುರು ಮನೆಗೆ ಕಾಣುವಂತೆ ನೇತು ಹಾಕುತ್ತಿದ್ದಳು. ಅವನಿಗೂ ಇದು ರೂಢಿಯಾಗಿ ಹೋಯ್ತು. 

ಯಾವತ್ತಾದರೂ ಒಂದು ದಿನ ಅವನೂ ಒಂದು ಹಾಳೆಯಲ್ಲಿ ಆಕೆ ಅವನಿಗಾಗಿ ಯಾವ ಹಾಡು ಹಾಡಬೇಕೆಂದು ಬರೆಯುತ್ತಾನೇನೋ ಎಂದು ಅವಳು ಆಸೆಯಿಂದ ಕಾದಳು. ಅವನು ಹಾಗೆ ಮಾಡಲೇ ಇಲ್ಲ.‌ ಆಕೆಯ ಎಲ್ಲಾ ಹಾಡುಗಳನ್ನು ಅವನು ಅಷ್ಟೇ ಆಸ್ಥೆಯಿಂದ, ಹುಮ್ಮಸ್ಸಿನಿಂದ ಕೇಳುತ್ತಿದ್ದನು ಮತ್ತು ನಾಳೆ ಯಾವ ಹಾಡು ಹಾಡುತ್ತಾಳೋ‌ ಎಂಬ ಕಾತರದಿಂದಿರುತ್ತಿದ್ದನು. ಗಿಟಾರು ನುಡಿಸುತ್ತ ಆಕೆ‌ ಹಾಡುವಾಗ ಅವಳ ಮುಖದಲ್ಲಿ ಮೂಡುತ್ತಿದ್ದ ತನ್ಮಯತೆ ಅವನನ್ನು ರೋಮಾಂಚನಗೊಳಿಸುತ್ತಿತ್ತು. ಎಲ್ಲಿ ಅದು ಮಾಯವಾಗಿ ಬಿಡುತ್ತದೋ ಎಂಬ ಕಾರಣಕ್ಕೆ, ತನಗೆ ಬೇಕಾದ ಯಾವ ಹಾಡನ್ನೂ ಆತ ಕೇಳಿರಲಿಲ್ಲವೇನೋ! 

ಅವಳು ಹಾಡುವ ಎಲ್ಲಾ ಹಾಡುಗಳೂ ಅವನಿಗೆ ಇಷ್ಟವೇ ಆಗುತ್ತಿದ್ದವು. 

*               *             * 

ಒಂದು ದಿನ ಅವಳು ಬಾಲ್ಕನಿಗೆ ಬಂದು ಹಾಡುವಾಗ ಅವನು ಕಿಟಕಿಯಲ್ಲಿಯಾಗಲೀ, ಎದುರು ಮನೆಯ ಬಾಲ್ಕನಿಯಲ್ಲಾಗಲೀ ಕಾಣಿಸಲಿಲ್ಲ. ಇವಳು ಹಾಡಿದಳು. ಗಿಟಾರು ನುಡಿಸಿದಳು. ಸರಿಯಾಗಿ ಹತ್ತು ದಿನ ಅವನು ಕಾಣಿಸಲಿಲ್ಲ. ಇವಳೇನು ಹಾಡುವುದು ನಿಲ್ಲಿಸಲಿಲ್ಲ. ಆದರೆ ಆ ಹತ್ತು ದಿನಗಳನ್ನು ನಿಖರವಾಗಿ ನೆನಪಿಟ್ಟಿದ್ದಳು. ಹನ್ನೊಂದನೇ ದಿನ ಅವನು ಎಂದಿನಂತೆ ಪ್ರತ್ಯಕ್ಷನಾದ. ಅವಳಿಗೋ ಅದೊಂದು ಅವ್ಯಕ್ತ ಆನಂದ.

ಆಕೆ ಮತ್ತೆ ಗಿಟಾರು ನುಡಿಸಿದಳು, ಹಾಡಿದಳು. ಅವನು ಮೊದಲಿನಂತೆಯೇ ಅವಳನ್ನು ಮಂತ್ರಮುಗ್ದನಾಗಿ ನೋಡುತ್ತಾ ಕುಳಿತಿರುತ್ತಿದ್ದನು. ಅವಳು ಬಾಲ್ಕನಿಗೆ ಬರುವುದನ್ನೇ ಕಾಯುತ್ತ ಕುಳಿತವನಂತೆ ಅವನು, ಅವನು ಕಾಯುತ್ತಾನೆ ಎಂಬುದಕ್ಕಾಗಿಯೇ ತಾನು ಹಾಡಲೇಬೇಕು ಎಂಬಂತೆ ಅವಳು. ಒಂದು ವೇಳೆ ಅವಳೇನಾದರೂ ಬೇರೆ ಊರಿಗೆ ಹೋಗುವ ಸಂದರ್ಭ ಬಂದಿದ್ದರೆ ಆಗವಳು ಬಾಲ್ಕನಿಯಲ್ಲಿ ‘ಈ ದಿನ ಹಾಡಿಗೆ ರಜ’ ಎಂದು ಬರೆದು ಹಾಕಿರುತ್ತಿದ್ದಳು. ಅದರ ಬದಲು ‘ನಾಳೆ ಹಾಡಿಗೆ ರಜ’ ಎಂದು ಬರೆದು ಹಾಕಿದರೆ ಪಾಪ ಅವನಿಗೆ ಗೊಂದಲವಿರುವುದಿಲ್ಲ ಎಂದುಕೊಳ್ಳುತ್ತಿದ್ದಳಾದರೂ ಹಾಗೆ ತಾನು ಇಲ್ಲದ ದಿನ ಯಾವುದು ಎಂದು ಅವನಿಗೆ ಮೊದಲೇ ತಿಳಿದರೆ ಅವನು ಆ ದಿನ ಬಂದು ಬಾಲ್ಕನಿಗಾಗಿ ಕಾಯುವುದಿಲ್ಲವಲ್ಲ ಎಂಬ ಯೋಚನೆ ಅವಳಿಗೆ ನೋವು ತರುತ್ತಿತ್ತು. ನಿಜ ಹೇಳಬೇಕೆಂದರೆ ಈ ದಿನ ಹಾಡಿಗೆ ರಜ ಎನ್ನುವ ಬೋರ್ಡ್ ಕೂಡ ಅವಳು ತೂಗಿ ಹಾಕಿದ್ದೂ ತೀರ ಒಂದೆರೆಡು ಬಾರಿ ಮಾತ್ರ. ಅದೂ ಅವಳಿಗೆ ಇಷ್ಟವಿರಲಿಲ್ಲ.

ಕೆಲವು ತಿಂಗಳಲ್ಲಿ ಅವಳ ಅಪ್ಪನಿಗೆ ಬೇರೊಂದು ಊರಿಗೆ ಟ್ರಾನ್ಸ್ ಫರ್ ಆದದ್ದರಿಂದಾಗಿ ಅವಳು ಆ ಮನೆಯನ್ನು ತೊರೆದು ಹೊರಡಬೇಕಾದ ಅನಿವಾರ್ಯ ಬಂತು. ಬಾಲ್ಕನಿಯಲ್ಲಿ ಬೆಳೆಸಿದ ಗಿಡಗಳನ್ನು ಬಿಟ್ಟು ಹೋಗುವುದು ಅವಳಿಗೆ ಸಹ್ಯವಾಗಲಿಲ್ಲ. ಗಿಟಾರು ಮತ್ತು ತನ್ನ ಹಾಡುಗಳೇನೋ ಅವಳೊಂದಿಗೆ ಹೊರಟು ನಿಂತವು. ಆದರೆ ಆ ಗಿಡಗಳು ಅಲ್ಲೇ ಉಳಿದವು. ಹೋಗುವ ದಿನ ಬಾಲ್ಕನಿಯಲ್ಲಿ ಆಕೆ ಬರೆದು ಹಾಕಿದ್ದು ಬೋರ್ಡಿನಲ್ಲಿ ಹೀಗೆ ಬರೆದಿತ್ತು , “ಇಷ್ಟು ದಿನ ನನ್ನ ಹಾಡು ಕೇಳಿಸಿಕೊಂಡು ಮನಸಾರೆ ಖುಷಿ ಪಟ್ಟಿದ್ದಕ್ಕೆ ಧನ್ಯವಾದ. ನಾನು ಬೆಳೆಸಿರುವ ಗಿಡಗಳ ಬಗ್ಗೆ ಗಮನವಿರಲಿ.”

ಅದನ್ನು ಓದಿದ ಅವನಿಗೆ ಏನೋ ಕಳೆದುಕೊಳ್ಳಲಿರುವ ಬೇಸರ ಆವರಿಸಿತು. ಅವಳು ಇನ್ನು ಬಾಲ್ಕನಿಯಲ್ಲಿ ಹಾಡಲಾರಳು ಎಂಬ ಸತ್ಯ ಅವನಿಗೆ ಅಪಥ್ಯವಾಯಿತು. ಅವಳು ಮನೆಯಿಂದ ಹೊರಡುವ ದಿನ ಯಾವ ಹಾಡನ್ನೂ ಹಾಡಲಿಲ್ಲ. ಅವನು ಹಾಡಿಗಾಗಿ ಕಿಟಕಿಯ ಬಳಿ ಕಾಯುತ್ತಾ ಕೂತಿದ್ದ. ಬಾಲ್ಕನಿಗೆ ಬಂದಿರಲಿಲ್ಲ. 

ಮನೆ ಖಾಲಿ ಮಾಡುವಾಗ ಅವಳ ಅಪ್ಪ, ‘ಬಾಲ್ಕನಿಯಲ್ಲಿರುವ ಗಿಡಗಳನ್ನು ತಗೋ ಮಗಳೆ’ ಎಂದರು. ಅದಕ್ಕವಳು, ‘ನಾವು ಬರೀ ನಮಗಾಗಿಯೇ ಗಿಡಗಳನ್ನು ಬೆಳೆಸಬಾರದು ಅಪ್ಪ. ಅವು ಇಲ್ಲೇ ಇರಲಿ’ ಎಂದಳು. ಅಪ್ಪ ಸುಮ್ಮನಾದರು. 

*                *               *

ಆ ಮನೆಗೆ ಬಂದ ಬಾಡಿಗೆದಾರರು ಅವರ ಬಳಿ ಇದ್ದ ಸರಕುಗಳು ಹೆಚ್ಚಿದ್ದ ಕಾರಣ ಬಾಲ್ಕನಿಯನ್ನು ಸಂಪೂರ್ಣ ಖಾಲಿ ಮಾಡಿಸಿ ಅದರ ತುಂಬಾ ಅಗತ್ಯ ಮತ್ತು ಅನಗತ್ಯ ವಸ್ತುಗಳನ್ನು ಜೋಡಿಸಿಟ್ಟರು. ಆ ಗಿಡಗಳೇನು ನಾಶವಾಗಲಿಲ್ಲ. ಅವರು ಬಾಲ್ಕನಿ ತೆರೆವುಗೊಳಿಸುವಾಗ ಎದುರು ಮನೆಯ ಅವನು ಅವುಗಳನ್ನು ತಾನು ಬೆಳೆಸುವುದಾಗಿ ಕೇಳಿ ಪಡೆದ. ಆ ಗಿಡಗಳಿಗೆ ಹೊಸ ಬಾಲ್ಕನಿ ಸಿಕ್ಕಿತು. 

ಹಾಗೆಯೇ ಅವಳಿಗೂ ಮುಂದೆ ಸಿಕ್ಕಿದ್ದು ಬಾಲ್ಕನಿಯಿರುವ ಬಾಡಿಗೆ ಮನೆ ಆಗಿರಲಿಲ್ಲ. ತಾನು ಹಳೆ ಮನೆಯ ಬಾಲ್ಕನಿಯನ್ನು ತುಂಬಾ ಮಿಸ್ ಮಾಡಿಕೊಳ್ಳುವುದಾಗಿ ಅಮ್ಮನ ಹತ್ತಿರ ಆಗಾಗ ಹೇಳುತ್ತಿದ್ದಳು. ತನ್ನ ಹಾಡನ್ನು ತನ್ಮಯನಾಗಿ ಆಲಿಸುತ್ತಿದ್ದ, ಆನಂದಿಸುತ್ತಿದ್ದ ಆ ಹುಡುಗನೊಬ್ಬ ಸಂಪೂರ್ಣ ಕಿವುಡನಾಗಿದ್ದ ಎಂಬ ಸಂಗತಿಯನ್ನು ಅವಳಿಗೆ ಯಾರೂ ಹೇಳಲಿಲ್ಲ … 

She missed his ‘hearing’ 
He missed his ‘hearing’ too 
Let them miss! 

December 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’ಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’ಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಸುಧಾ ಆಡುಕಳ ಅವರ ಪ್ರಬಂಧ ಸಂಕಲನ 'ಬಕುಲದ ಬಾಗಿಲಿನಿಂದ' ೨೦೧೯ನೇ ಸಾಲಿನ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪ್ರಾಪ್ತವಾಗಿದೆ. ಕರ್ನಾಟಕ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: