ಬಾಲ್ಡಿ ತಲೆಯ ಪ್ರಣೋಯ್ ಹೇಳಿದ ಮಾತು ತೀರಾ ನಿಜವೆನಿಸಿತು

-ಗೋಪಾಲಕೃಷ್ಣ ಕುಂಟಿನಿ ಕುಂಟಿನಿ ‘ನಮಗಿಂತ ಇವರೇ ವಾಸಿ’ – ಹಾಗೆಂದರು ಪ್ರಣೋಯ್. ಬಾಲ್ಡಿ ತಲೆಯ, ತೂಗಿದರೆ ನೂರಾಮೂವತ್ತು ಕಿಲೋ ಇರಬಹುದಾದ ಈ ಪ್ರಣೋಯ್ ಹೇಳಿದ ಮಾತು ತೀರಾ ನಿಜವೆನಿಸಿತು. ಇವರು ಲಾಲಬಹಾದ್ದೂರ್ ಶಾಸ್ತ್ರಿ ನೆನಪಿಗೆ ಸುಂದರ ಸ್ಮಾರಕ ಕಟ್ಟಿದ್ದಾರೆ, ಬನ ನಿರ್ಮಿಸಿದ್ದಾರೆ, ಮ್ಯೂಸಿಯಂ ಮಾಡಿದ್ದಾರೆ, ಶಾಲೆ ತೆರೆದಿದ್ದಾರೆ, ರಸ್ತೆಗೂ ಹೆಸರು ಮಡಗಿದ್ದಾರೆ. ಉಜ್ಬೇಕಿಗಳ ಔದಾರ್ಯವೇ ಅಂಥದ್ದು. ಅವರು ಒಂಥರಾ ಪೀಪಲ್ಸ್ ಫ್ರೆಂಡ್ಲೀ ಎಂದರು ಪ್ರಣೋಯ್. ಔಟ್‌ಲುಕ್ ಪತ್ರಿಕೆಯ ‘ವಿದೇಶಾಂಗ ವ್ಯವಹಾರ’ದ ಜವಾಬ್ದಾರಿ ಹೊತ್ತ ಪ್ರಣೋಯ್ ಸದಾ ಪರದೇಸಿ. ಜಗತ್ತಿಗೆ ಗಿರಕಿ ಹೊಡೆಯುತ್ತಲೇ ಇರುತ್ತಾರೆ. ಪ್ರತಿ ದೇಶದ ಜನ-ಮನಗಳನ್ನು ಅಳೆದು ತೂಗಿ, ತಮ್ಮ ತರ್ಕಕ್ಕೆ ಕಟ್ಟಿಕೊಡಬಲ್ಲ ಅನುಭವಸಾರ ಅವರಲ್ಲಿದೆ. ಎಸ್.ಎಂ.ಕೃಷ್ಣ ತಮ್ಮ ಜತೆ ಪ್ರಣೋಯ್ ಅವರನ್ನು ಕೂರಿಸಿಕೊಂಡು ಮಾತಿಗಿಳಿದರು ಎಂದರೆ ಗಂಟೆಗಳ ಮೇಲೆ ಗಂಟೆ ಸಾಗುತ್ತದೆ. ಹಾಗೇ ಮಾತನಾಡುತ್ತಾ, ಮಾತನಾಡುತ್ತಾ ನಾವು ಇಳಿದದ್ದು ತಾಷ್ಕೆಂಟ್ ಮಹಾನಗರದೊಳಗೆ. ಅದು ಉಜ್ಬೇಕಿಸ್ತಾಸನದ ರಾಜಧಾನಿ. ಇಂದಿಗೂ ತಾಷ್ಕೆಂಟ್ ಎಂದರೆ ರಷ್ಯಾ ಎಂದೇ ಜಗತ್ತು ಕರೆಯುತ್ತದೆ. ರಷ್ಯಾದ ಜೀವ ಜಾಲದಲ್ಲಿ ತಾಷ್ಕೆಂಟ್ ಇಂದಿಗೂ ಉಳಿದೇ ಇದೆ. ಸೋವಿಯತ್ ಒಕ್ಕೂಟದಲ್ಲಿ ತಾಷ್ಕೆಂಟ್ ಎರಡನೇ ರಾಜಧಾನಿ. ಉಜ್ಬೇಕಿಸ್ತಾನದ ರಾಜಧಾನಿಯಾದದ್ದು ಈ ತಾಷ್ಕೆಂಟ್ ೧೯೯೧ ರಲ್ಲಿ. ಸೋವಿಯತ್ ಗಣರಾಜ್ಯ ಸೀಳಿಕೊಂಡು ರೂಪುಗೊಂಡ ಉಜ್ಬೇಕಿಸ್ತಾನ್ ಸ್ವತಂತ್ರ ದೇಶವಾಗಿ ಇನ್ನೂ ಇಪ್ಪತ್ತು ವರ್ಷಗಳಾಗಿಲ್ಲ. ಅಷ್ಟರಲ್ಲೇ ಈ ದೇಶವನ್ನು ಬಲವತ್ತರವಾಗಿ ಕಟ್ಟಲಾಗಿದೆ, ಯಾರ ಹಂಗೂ ಇಲ್ಲದೇ. ಅದಕ್ಕೆ ಕಾರಣ ಬದಲಾದ ಕಾಲಘಟ್ಟ, ಹೊಸ ಚಿಂತನೆಗಳ ಯುವಜನಾಂಗ ಮತ್ತು ಇಸ್ಲಾಂ ಕರಿಮೋವ್ ಎಂಬ ಸರ್ವಾಕಾರಿ. ಈ ಉಜ್ಬೇಕಿಸ್ತಾನ ಡಬ್ಬಲ್ ಲ್ಯಾಂಡ್ ಲಾಕ್ಡ್ ದೇಶ ಎಂದು ಕರೆಯುತ್ತಾರೆ. ಅಂದರೆ ಸಮುದ್ರದ ಬಳಿ ಹೋಗಲು ಎರಡು ದೇಶಗಳ ಗಡಿ ದಾಟಲೇ ಬೇಕು. ಇಂಥ ಸನ್ನಿವೇಶ ಅಪರೂಪ. ಕೈಗೆಟಕುವ ದೂರದಲ್ಲಿ ಕ್ಯಾಸ್ಪಿಯನ್ ಸಮುದ್ರವಿದ್ದರೂ, ಅಲ್ಲಿಗೆ ಉಜ್ಬೇಕಿಸ್ತಾನ್ ಪ್ರಜೆಗಳು ಒಂಥರಾ ಡಬ್ಲೀ ಲ್ಯಾಂಡ್ ಲಾಕ್ ಆದ ಹಾಗಿದ್ದಾರೆ. ವಿಸ್ತೀರ್ಣದಲ್ಲಿ ಜಗತ್ತಿಗೆ ೫೬ ನೇ ಸ್ಥಾನ, ಜನಸಂಖ್ಯೆಗೆ ೪೨ನೇ ಮಾನ. ಕಜಕ್‌ಸ್ತಾನ, ತುರ್ಕ್‌ಮೆನಿಸ್ತಾನ್, ಕಿರ್‌ಗಿಸ್ತಾನ್, ಅಪಘಾನಿಸ್ತಾನ್‌ಗಳೆಲ್ಲಾ ಸುತ್ತಲೂ ಸುತ್ತುವರಿದಿದೆ. ಕೃಷಿ ಪ್ರದೇಶ ಅಂತ ಇರೋದು ನೂರಕ್ಕೆ ಹತ್ತು ಪಾಲು. ಉಳಿದದ್ದು ಮರು‘ಮಿ, ಬೆಟ್ಟಗಾಡು. ವರ್ಷಕ್ಕೆ ಹತ್ತಿಂಚು ಮಳೆ ಬಿದ್ದರೆ ಅದೇ ದೊಡ್ಡದು. ಹೆಚ್ಚೂ ಕಡಿಮೆ ೪.೫೦ ಲಕ್ಷ ಚದರ ಕಿ.ಮೀ. ವಿಸ್ತಾರದ ಈ ದೇಶದಲ್ಲಿ ಮೂರು ಕೋಟಿ ಜನಸಂಖ್ಯೆ. ಹೆಚ್ಚಿನವರು ಅಂದರೆ ಶೇಕಡಾ ೯೦ ರಷ್ಟು ಮಂದಿ ಮುಸ್ಲಿಮರು. ಅವರೆಲ್ಲಾ ಉಜ್ಬೇಕಿಗಳು ಅಥವಾ ರಷ್ಯನ್ನರು. ಸೋವಿಯತ್ ಗಣರಾಜ್ಯದ ಗ್ರಿಪ್ಪಿನಲ್ಲಿ ಶತ ಶತಮಾನಗಳ ಕಾಲ ಇದ್ದ ಕಾರಣವೇ ಇರಬೇಕು ಇಲ್ಲಿ ಬದುಕು ಮೊದಲು. ಉಳಿದದ್ದೆಲ್ಲಾ ನಂತರ. ಸುನ್ನಿ ಮುಸ್ಲಿಮರೇ ಬಹುಸಂಖ್ಯೆಯಲ್ಲಿದ್ದರೂ, ಕಟ್ಟರ್ ಇಸ್ಲಾಂ ಧರ್ಮದ ಯಾವ ಕುರುಹುಗಳೂ ಇಲ್ಲಿ ಕಾಣಿಸುವುದಿಲ್ಲ. ಅಲ್ಲಲ್ಲಿ ಒಂದೊಂದು ಮಸೀದಿಗಳಿವೆ. ಸರಕಾರವೇ ೧೯೯೧ ರ ಬಳಿಕ ಕಟ್ಟಿಸಿದ್ದು. ಅವುಗಳಿಗೆ ಮೌಲ್ಯಗಳನ್ನು ಸರಕಾರವೇ ನೇಮಕ ಮಾಡುತ್ತದೆ. ‘ನಾವು ಸ್ವತಂತ್ರರಾಗುವ ಮುನ್ನ ಮಸೀದಿ-ಮಿನಾರುಗಳೇ ಇರಲಿಲ್ಲವಂತೆ’ ಎಂದ ನಮ್ಮ ದುಭಾಷಿ ಮುಮೆನ್ ತೊರಾಯ್. ನಾವು ಹುಬ್ಬೇರಿಸಿದೆವು. ‘ಹೌದು, ಇರಲೇ ಇಲ್ಲ. ಇದ್ದ ಮಸೀದಿ, ಮದರಸಗಳೆಲ್ಲಾ ಗೋದಾಮುಗಳಾಗಿದ್ದವು. ಏಕೆಂದರೆ ೧೯೯೧ ರ ತನಕ ಇಲ್ಲಿ ‘ಧರ್ಮಾಚರಣೆ ನಿಷಿದ್ಧವಾಗಿತ್ತು. ಅದು ಶುರುವಾದದ್ದೇ ಆ ಮೇಲೆ, ಅಲ್ಪಸ್ವಲ್ಪ ಅಷ್ಟೇ’ ಎಂದ ಮುಮೆನ್. ‘ಇದೊಂದು ಪಕ್ಕಾ ಸೆಕ್ಯುಲರ್ ಕಂಟ್ರೀ ಕಣ್ರೀ. ಇಲ್ಲಿ ಧರ್ಮ ಎನ್ನೋದು ಖಾಸಗೀ. ಅದೇ ನಮ್ಮ ಅದೃಷ್ಟ’ ಎಂದ ಮುಮೆನ್ ಎರಡು ದಂ ಸಿಗರೇಟು ಹೊಗೆ ಬಿಟ್ಟ. ‘ನನ್ನ ಅಪ್ಪನ ಕಾಲದಲ್ಲಿ ರಮ್ಜಾನ್ ಉಪವಾಸ ಏನಾದರೂ ಮಾಡಿದ್ದು ಗೊತ್ತಾದರೇ ಅಷ್ಟೇ ಅಂತೆ. ಶಾಲೆ ಮಕ್ಕಳಿಗೆ ಆಗ ಸರಕಾರವೇ ಆ ದಿನಗಳಲ್ಲಿ ಬಲಾತ್ಕಾರ ಊಟ ಹಾಕುತ್ತಿತ್ತಂತೆ. ಉಪವಾಸ ಕುಳಿತ ಆಫೀಸರುಗಳು ಅಮಾನತಾಗುತ್ತಿದ್ದರಂತೆ…’ ಮುಮೆನ್ ಪ್ರವಚನ ನೀಡುವವನಂತೆ ನಮಗೆ ವಿವರಿಸುತ್ತಿದ್ದ. ತಾಷ್ಕೆಂಟ್‌ನ ಬೀದಿಗಳೆಲ್ಲಾ ಅಡ್ಡಾಡಿ ಬಂದಾಗ ಮುಮೆನ್ ಹೇಳಿದ್ದಕ್ಕೆ ಆಧಾರಗಳು ಕಾಣಿಸುತ್ತಿದ್ದವು. ಇಲ್ಲಿ ಎಲ್ಲವೂ ಬಿಂದಾಸ್, ಬಿಂದಾಸ್. ಧರ್ಮ ಟ್ರೂಲೀ ಪರ್ಸನಲ್. ಉಜ್ಬೇಕಿ ಹೆಣ್ಮಕ್ಕಳು ಪರ್ದಾ ಹಾಕುವುದಿಲ್ಲ. ಒಂದೇ ಒಂದು ಬುರ್ಖಾ ಕಾಣಿಸಲಿಲ್ಲ. ಬುರ್ಖಾ ಬಿಡಿ, ತಲೆ ಮೇಲೆ ಬಟ್ಟೆ ಹಾಕೋ ಪದ್ಧತಿಯೂ ಇಲ್ಲಿಲ್ಲ. ‘ಮಸೀದಿಗಳಲ್ಲಿ ಲೌಡ್ ಸ್ಪೀಕರ್ ನಿಷಿದ್ಧ’ ಎಂದ ಮುಮೆನ್. ಯಾಕೆ ಎಂದರೆ ಮತ್ತದೇ ಹೇಳಿದ, ‘ನಿಮ್ಮ ಪ್ರಾರ್ಥನೆ ನಿಮ್ಮದು ಮಾತ್ರಾ’ ———————————————————— ಉಜ್ಬೇಕಿ ಹುಡುಗಿಯರು ಬಲುಚೆಂದ. ಪುಟ್ಟ ಪುಟ್ಟ ಮಕ್ಕಳಿಂದ ತೊಡಗಿ ಮಧ ವಯಸ್ಕಮಹಿಳೆ ತನಕ ಒಬ್ಬೊಬ್ಬರದ್ದು ಒಂದೊಂದು ಚೆಂದ. ಅದನ್ನು ನೋಡುವುದೇ ಪರಮಾನಂದ. ಮಿಡಿ, ಫ್ರಾಕ್, ಜೀನ್ಸ್, ಟೀ ಶರ್ಟ್ ಸರ್ವತ್ರ ಸಾಧನಂ. ಸ್ಲೀವ್‌ಲೆಸ್ ಕಡ್ಡಾಯವೇನೋ ಎಂಬಷ್ಟು ವ್ಯಾಪಕ. ಯಾವ ಬಾರ್, ಹೋಟೇಲುಗಳಿಗೆ ಹೊಕ್ಕರೂ ಕಾಣಿಸೋದು ಓನ್ಲೀ ಗರ್ಲ್ಸ್. ಮಾಣಿಗಳ ಸ್ಥಾನದಲ್ಲಿ ಇರೋದು ಕೂಸುಗಳೇ. ರೂಂ ಬಾಯ್ಸ್ ಅಂತ ಒಬ್ಬರು ಸಿಗಲಾರರು ಮುಮೆನ್ ತೊರಾಯ್ ಉವಾಚ, ‘ನಮ್ಮದು ಆತಿಥ್ಯಕ್ಕೆ ಹೆಸರಾದ ದೇಶ. ಅದಕ್ಕೇ ಇಲ್ಲಿಗೆ ದಿನವೂ ಲಕ್ಷಾಂತರ ಪ್ರವಾಸಿಗಳು ಬರುತ್ತಾರೆ. ಟೂರಿಸಂ ನಮ್ಮ ಸಂಪತ್ತು. ನಿಮ್ಮ ಆತಿಥ್ಯಕ್ಕೆ ನಮ್ಮ ಹುಡುಗಿಯರು ಸದಾ ಮುಂದು’ ತಾಷ್ಕೆಂಟ್‌ನ ಪ್ರತಿ ಚಿನಾರಾ ಮರಗಳ ಕೆಳಗೆ ಪ್ರವಾಸಿಗರು, ರಸ್ತೆ ಮೇಲೆ ಓಡುವ ದೇವೂ ಮಾಟಿಜ್‌ಗಳಲ್ಲಿ ಯಾತ್ರಾರ್ಥಿಗಳು.. ಪಂಚತಾರಾ ಹೋಟೆಲುಗಳಲ್ಲಿ ೯೦ ಡಾಲರ್‌ಗೆ ಸರ್ವಾಂಗ ಸುಖ ಸಂಪನ್ನ ಕೊಠಡಿಗಳು ಲಭ್ಯ.ಊಟ, ವಸತಿ, ವಿಹಾರ ಎಲ್ಲವೂ ಡ್ಯಾಂ ಚೀಪ್. ಇದರದ್ದೇ ಮುಂದುವರಿದ ಭಾಗ ಉಜ್ಬೇಕಿಸ್ತಾನದ ಕಪ್ಪುಚುಕ್ಕೆ. ಸಲಿಂಗ ಕಾಮಕ್ಕೆ ಪೂರ್ಣ ನಿಷೇಧ ಹೇರಿದ ಈ ದೇಶದಲ್ಲಿ ವೇಶ್ಯಾವಾಟಿಕೆ ಭರಪೂರ. ಹುಟ್ಟಿನಿಂದಲೇ ಸುರಸುಂದರಾಂಗಿಯರಾಗಿರುವ ಹುಡುಗಿಯರು ನೋಡ್ತಾ ನೋಡ್ತಾ ಸ್ಪಾಗಳಲ್ಲಿ, ಹೋಟೇಲುಗಳಲ್ಲಿ, ಬಾರ್‌ಗಳಲ್ಲಿ, ಟೂರಿಸಂ ವರ್ತುಲಗಳಲ್ಲಿ ಕಳೆದು ಹೋಗುತ್ತಿದ್ದಾರೆ. ಸರಕಾರಕ್ಕೆ ಇದೆಲ್ಲಾ ಗೊತ್ತಿದೆ. ಆದರೆ ಗೊತ್ತೇ ಇಲ್ಲದ ಹಾಗೆ ಕುಳಿತಿದೆ. ಅಧ್ಯಕ್ಷ ಕರಿಮೋವ್‌ನ ಮಗಳು ಗುಲ್ನಾರಾ ಗಲ್ ದೇಶಗಳಲ್ಲಿ ಸೆಕ್ಸ್ ಇಂಡಸ್ಟ್ರಿ ಬೇರೆ ನಡೆಸುತ್ತಿರುವ ಆರೋಪ ಎದುರಿಸುತ್ತಿದ್ದಾಳೆ. ಉಜ್ಬೇಕಿ ಹುಡುಗಿಯರೆಂದರೆ ಅಮೇರಿಕಾ, ಯುರೋಪ್, ಗಲ್‌ಗಳ ಕಾಮುಕರಿಗೆ ಫುಲ್ ಮೀಲ್ಸ್. ‘ಇದಕ್ಕೆ ಕಾರಣ ಬಡತನವೂ ಇರಬಹುದಾ?-ಎಂದು ಮುಮೆನ್ ತೊರಾಯ್‌ಗೆ ಕೇಳಿದೆ. ಆತ ಒಂದು ದಂ ಹಾರಿಸಿ ನಕ್ಕ. ‘ಬಡತನ ನಿರುದ್ಯೋಗ ಮುಂತಾಗಿ ನಮ್ಮಲ್ಲಿ ಇದೆ ನಿಜ. ಆದರೆ ಅದೇ ಅಲ್ಲ. ಯಾರು ಹೇಳಿದರೂ ನಮ್ಮದು ಬಡದೇಶ ಅಂತ’? ಎಂದ. ಅವನು ನಮ್ಮನ್ನು ಒಂದು ರೌಂಡ್ ಹಾಕಿಸಿ ಕರೆತಂದಾಗ ಕಂಡದ್ದು ಈ ಉಜ್ಬೇಕಿಸ್ತಾನದ ರಸ್ತೆಗಳಲ್ಲಿ ಬಿಎಂಡಬ್ಲ್ಯು, ಬೆಂಟ್ಲಿ, ಬೆನ್ಜ್ ಕಾರುಗಳು ಇರುವೆ ಥರ ತುಂಬಿಕೊಂಡಿವೆ. ಯಾವ ಹೊಸ ಉಪಕರಣ ಹುಟ್ಟಿ ಬರಲಿ, ತಿಂಗಳಿಗೆ ಮೊದಲೇ ಉಜ್ಬೇಕ್ ಮಾರುಕಟ್ಟೆಗೆ ಅದು ಹಾಜರಾಗುತ್ತದೆ. ಇವರು ತಿನ್ನುವುದನ್ನು ನೋಡಿದರೆ ಸಾಕು. ಇವರದ್ದು ಮೂರು ಹೊತ್ತು ರಾಜ‘ಜನ. ಬೆಳಗ್ಗೆ ನಾಲ್ಕು ಗಂಟೆಗೆ ಮಾಂಸ ತುಂಡು ಬೆರೆಸಿದ ಪಿಲಾವ್ ತಿನ್ನಲು ಕೂತರೆ ರಾತ್ರಿ ವೋಡ್ಕಾ ಜತೆ ಸೋಮ್ಸ ಕಚ್ಚಿದಲ್ಲಿಗೆ ಮುಕ್ತಾಯ. ಕುರಿ, ದನ, ಕುದುರೆ ಮಾಂಸ ಇಲ್ಲದ ಊಟದ ಟೇಬಲೇ ಇಲ್ಲ. ತಂದೂರಿ ಓವೆನ್‌ಗಳಲ್ಲಿ ಚಪ್ಪಟೆ ಬ್ರೆಡ್ ಕಾಯಿಸಿ ತೆಗೆದದ್ದು ನೋನ್. ಹಾಲಿನಿಂದ ಮಾಡಿದ ಕತ್ಯಾಕ್, ಸುಜ್‌ಮಾ ಆಗಾಗ್ಗೇ ಗುಳುಂ. ಮುಳ್ಳುಸೌತೆ ಇಲ್ಲದೆ ಇವರ ಒಂದು ಊಟವೂ ಇಲ್ಲ. ಅಪಲ್, ಪಿಯರ‍್ಸ್, ಚೆರ್ರಿ, ಆಪ್ರಿಕೋಟ್ ಪ್ರತೀ ಹೊತ್ತು ಬೇಕು. ಚಹಕ್ಕೆ ರಾಜ ಮಾರ್ಯಾದೆ. ಚಾಯ್‌ಖಾನಾ ಎಂದರೆ ನಮ್ಮ ಟೀ ಶಾಪ್‌ಗಳು. ವೋಡ್ಕಾ, ವೈನ್, ಸ್ಕಾಚ್‌ನಲ್ಲಿ ಗಂಡು-ಹೆಣ್ಣೆಂಬ ಬೇ‘ವಿಲ್ಲದೆ ತೇಲಾಡುತ್ತಾರೆ. ಸರ್‌ಬಸ್ತ್ ಜನಪ್ರಿಯ ಬಿಯರ್. ಅದರದ್ದು ನಿತ್ಯ ಸ್ನಾನ. ————————————————————– ಇಸ್ಲಾಂ ಕರಿಮೋವ್ ಟೆರರಿಸ್ಟ್‌ಗಳ ಟೆರರಿಸ್ಟ್. ದೇಶಕ್ಕೆ ೧೫೦ ಕಿ.ಮೀ. ಉದ್ದದ ಅಫ್‌ಘಾನ್ ಬಾರ್ಡರ್ ಇದ್ದರೂ ಒಂದು ನರಪಿಳ್ಳೆ ಉಗ್ರಗಾಮಿ ಕೂಡಾ ಗಡಿ ದಾಟಲಾರ. ಐದು ವರ್ಷಗಳ ಹಿಂದೆ ಅಂದಿಜಾನ್ ನಗರದಲ್ಲಿ ಏನೋ ಕಿಚಾಯಿಸ್ತಾರೆ ಅಂತ ಡೌಟ್ ಬಂದು ೨೩ ಮಂದಿಯನ್ನು ಕರಿಮೋವ್ ಒಳಗಿಟ್ಟ. ಅವರು ಉಗ್ರಗಾಮಿಗಳು ಅಲ್ಲ ಅಂತ ಸಾವಿರಾರು ಮೂಲಭೂತವಾದಿಗಳು ರಸ್ತೆಗಿಳಿದರು. ಪ್ರತಿಭಟನೆ, ಹೋರಾಟ ಅಂತ ಶುರುವಾದದ್ದು ಯಾಕೋ ಇನ್ನೊಂದು ವಾಸನೆ ಹೊಡೀತಿದೆ ಅಂತ ಕರಿಮೋವ್‌ಗೆ ಗೊತ್ತಾಯಿತು. ಆಮೇಲೆ ಅಲ್ಲಿ ಹರಿದದ್ದು ಬರೇ ರಕ್ತ. ಮಿನಿಮಮ್ ಐನೂರು ಮಂದಿ ಮಟಾಷ್. ರಸ್ತೆ ಮೇಲೆ, ಆಸ್ಪತ್ರೆ ಒಳಗೆ ಬಿದ್ದ, ಇದ್ದ ಗಾಯಾಳುಗಳನ್ನೆಲ್ಲಾ ಮಿಲಿಟರಿ ಹುಡುಕಿ ಹುಡುಕಿ ಕೊಂದು ಹಾಕಿತು. ಹಾಗೇ ಮುಗಿಸಿದ ಮೇಲೆ ಮಿಲಿಟರಿಗೆ ಕರಿಮೋವ್ ವೋಡ್ಕಾ ಸಹಿತ ಬಾಡೂಟ ಹಾಕಿಸಿದ್ದನಂತೆ. ಅಂದಿನಿಂದ ಇಂದಿನ ತನಕ ಒಂದು ಸಿಂಗಲ್ ಇನ್ಸಿಡೆಂಟ್ ಕೂಡಾ ಆಗಿಲ್ಲ ಎಂದ ಮುಮೆನ್, ಅಮೇರಿಕಾ ಎದ್ದು ನಿಂತು ಸ್ಯಾಂಕ್ಷನ್ ಹಾಕ್ತೇನೆ ಅಂತ ಆವಾಜ್ ಹಾಕಿದರೆ ಇಲ್ಲಿ ಕರಿಮೋವ್ ಅವರಿಗೆ ಕೊಟ್ಟಿದ್ದ ಮಿಲಿಟರಿ ನೆಲೆಯನ್ನು ಎಕ್ಕುಟ್ಟು ಎಬ್ಬಿಸಿದ. ವಿದೇಶಿ ಟಿವಿ ಬಂದ್ ಮಾಡಿಸಿದ. ಈಗಲೂ ಪತ್ರಿಕೆಗಳ ಮೇಲೆ ಭರ್ತಿ ಸೆನ್ಸಾರ್‌ಶಿಪ್ ಇದೆ ಹೂಂ ಎಂದ ಮುಮೆನ್. ——————————————————– ಅದೆಲ್ಲಾ ನಿಮ್ಮ ಗ್ರಹಚಾರ, ನಮಗೆ ನಮ್ಮ ಶಾಸ್ತ್ರಿಯನ್ನು ತೋರಿಸು ಅಂತ ಅವನಿಗೆ ಹೇಳಿದೆವು. ಮುಮೆನ್ ತೊರಾಯ್ ನಮ್ಮನ್ನು ಕರೆದೋಯ್ದ. ತಾಷ್ಕೆಂಟ್‌ನ ಬನವೊಂದರಲ್ಲಿ ಮುಗುಳು ಮುಖದ ಶಾಸ್ತ್ರಿ ಕಾಣಿಸಿದರು. ಸ್ವಲ್ಪ ದೂರದಲ್ಲಿ ಅವರ ಹೆಸರಿನ ಶಾಲೆ. ಶಾಲೆಯೊಳಗೆ ೧೫೦೦ ಮಕ್ಕಳು. ಅವರಲ್ಲಿ ೮೦೦ ಮಂದಿ ಹಿಂದೀ ಭಾಷೆ ಕಲಿಯುತ್ತಿದ್ದರು. ಏಕೆ ಕಲಿಯುತ್ತಿದ್ದೀರಿ ಎಂದು ಕೇಳಿದರೆ, ಭಾರತದ ಮೇಲಿನ ಪ್ರೀತಿಗೆ’ ಎಂದಳು ಸ್ಕೂಲ್ ಮೇಡಂ. ಶಾಸ್ತ್ರಿ ಸಾಂಸ್ಕೃತಿಕ ಕೇಂದ್ರದೊಳಗೆ ಟಾಗೋರರ ಚಿತ್ರಗಳಿದ್ದವು. ಯೋಗ, ಕಥಕ್ಕಳಿ, ಹಿಂದಿ ಹಾಡುಗಳ ತರಗತಿಗಳಿದ್ದವು. ಒಂದು ಹದಿಹರೆಯದ ಹುಡುಗಿಗೆ ಕೇಳಿದೆ, ‘ಶಾಸ್ತ್ರಿ ಮೇಲೆ ನಿಮಗೇಕೆ ಈ ಪ್ರೀತಿ ?’ ಅವಳೆಂದಳು, ‘ಪ್ರೀತಿ ಮಾತ್ರ ಅಲ್ಲ, ಗೌರವ ಕೂಡಾ. ಏಕೆಂದರೆ ಅವರು ನಮ್ಮ ಮನೆಗೆ ಬಂದಾಗ ಸತ್ತು ಹೋದರಂತಲ್ಲಾ. ನಮ್ಮ ಅತಿಥಿಯನ್ನು ನಾವು ಹಾಗೇ ಕಳೆದುಕೊಳ್ಳಬಾರದಿತ್ತು. ಅದಕ್ಕೇ ನಾವು ಅತಿಥಿಯ ನೆನಪಿಗೆ ಅವರನ್ನು ಪ್ರೀತಿಸಲು ಶುರು ಮಾಡಿದೆವು….’ ‘ಸತತ ನಲ್ವತ್ತನಾಲ್ಕು ವರ್ಷಗಳಿಂದ…. ಎಂದು ಮುಮೆನ್ ತೊರಾಯ್ ಮಾತು ಮುಗಿಸಿದ]]>

‍ಲೇಖಕರು avadhi

July 1, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

7 ಪ್ರತಿಕ್ರಿಯೆಗಳು

 1. ಅಶೋಕವರ್ಧನ

  ರಾಜಾಜ್ಞೆಯನ್ನು ಪಾಲಿಸುವ ಯಕ್ಷಗಾನದ ದೂತ ನಗುನಗುತ್ತಾ ಮರಣವಾರ್ತೆಯನ್ನು ಬಿತ್ತರಿಸಿದಷ್ಟು ಚೆನ್ನಾಗಿ ದೇಶಪರಿಚಯ ಮಾಡಿಸಿದ್ದೀರಿ. ಹೋಗಿ ನೋಡಿಯೇ ಬಿಡಬೇಕೆಂಬ ಅದಮ್ಯ ಕುತೂಹಲಕ್ಕೆ ಅಲ್ಲಲ್ಲೇ ಅಷ್ಟೇ ಬಲವತ್ತರವಾದ ಭಯ (ಕರಿಮೋವು= black mango>ಕೊಳೆತ ಮಾವು?) ಹುಟ್ಟಿಸಿ (ಹಣ ಉಳಿಸಿದ್ದಕ್ಕೆ?) ಕೃತಜ್ಞತೆಗಳು.
  ಅಶೋಕವರ್ಧನ

  ಪ್ರತಿಕ್ರಿಯೆ
 2. Muralidhar bhat

  ಯಾರ್ ಯಾರು ಬರ್ತೀರಿ ಹೂಗಿ ನೂಡ್ಕ್೦ಡು ಬರೂಣ ಕಣ್ರೀ…

  ಪ್ರತಿಕ್ರಿಯೆ
 3. shailaja s bhat

  ನಿಮ್ಮ ಉಜ಼್ಬೆಕಿಸ್ತಾನದ ಪ್ರವಾಸದ ಕಥನ ಆಸಕ್ತಿಕರವಾಗಿತ್ತು. ಅಲ್ಲಿಗೆ ಹೋಗಿ ನೋಡೋಣ ಎಂದೆನ್ನಿಸಿತು.ಶಾಸ್ತ್ರಿ ಸಾಂಸ್ಕೃತಿಕ ಕೇಂದ್ರದ ವಿವರಗಳು ಕುತೂಹಲಕಾರಿಯಾಗಿದೆ.ಮುಂದೆಯೂ ಇಂತಾ ಬರಗಳು ಬರಲಿ.
  ಶೈಲಜ

  ಪ್ರತಿಕ್ರಿಯೆ
 4. raoavg

  ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಕುರಿತು ಇಣುಕು ನೋಟ ಒದಗಿಸುವ ಒಳ್ಳೆಯ ಪ್ರವಾಸಕಥನ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: