ಬಾಲ್ಯದ ನೆನಪು ಕಾಡ್ತಲೇ ಇದೆ

-ಚೇತನಾ ತೀರ್ಥಹಳ್ಳಿ

ಮೊನ್ನೆ ಅಮ್ಮ ಬಂದು ಹೋದಾಗಿಂದ ಮತ್ತೆ ಮತ್ತೆ ಬಾಲ್ಯದ ನೆನಪು ಕಾಡ್ತಲೇ ಇದೆ. ಅದಕ್ಕೆ ಅವಳು ನನ್ನ ಅಂದಿನ ದಿನಗಳೊಟ್ಟಿಗೆ ಹೆಣೆದುಕೊಂಡಿರುವ ಜಾನುವಾರ ಜಾತ್ರೆ ಬಯಲಿನ ಬಗ್ಗೆ ಹೇಳಿದ್ದೇ ಕಾರಣ.

ಜಾನುವಾರು ಜಾತ್ರೆ ಬಯಲು…

ಇದು ತೀರ್ಥಹಳ್ಳಿ ಹೊರವಲಯದ ಬಾಳೆಬಯಲಿನ ಒಂದು ಪ್ರಮುಖ ತಾಣ. ತುಂಗೆ ಈ ಬಯಲಿನ ಪಕ್ಕ ಹರಿದೇ ತೀರ್ಥಳ್ಳಿ ತಲುಪೋದು. ಈ ಬಯಲಿನಲ್ಲಿ ಹಿಂದೆಲ್ಲ ವರ್ಷಕ್ಕೊಮ್ಮೆ ಎತ್ತುಗಳ ಮೇಳ ನಡೀತಿತ್ತು. ಹಿಂದೆ ಅಂದರೆ, ನನಗೆ ನೆನಪಿರೋ  ಹಾಗೆ ನಾನು ಹೈಸ್ಕೂಲು ಮುಗಿಸುವವರೆಗೂ (ಹದಿಮೂರು- ಹದಿನಾಲ್ಕು ವರ್ಷದ ಹಿಂದೆ) ಜಾತ್ರೆ ನಡೀತಿತ್ತು. ಅದು ಶುರುವಾಗಿದ್ದು ಯಾವಾಗ, ನಿಂತಿದ್ದು ಯಾಕೆ- ಇದೊಂದೂ ನನಗೆ ಗೊತ್ತಿಲ್ಲ. ಹಾ! ನಿಂತಿದ್ದು ಯಾಕೆ ಅನ್ನೋದನ್ನ ಊಹಿಸೋದು ಕಷ್ಟವಲ್ಲ, ಶುರುವಾಗಿದ್ದು ಹೇಗೆ ಅಂತ ಹೇಳಬಹುದಾದವರ್ಯಾರೂ ಈಗ ಅಲ್ಲಿ ಉಳಿದಿಲ್ಲ!

ಈ ಬಯಲಿಗೆ ಸಾಕಷ್ಟು ದೀರ್ಘ ಇತಿಹಾಸವಿದೆ. ಅದು ಜಾತ್ರೆ ಬಯಲಾಗುವ ಮುಂಚೆ ಶಿವಪ್ಪನಾಯಕನ ಕಾಲದೊಂದು ಅಗ್ರಹಾರವಾಗಿತ್ತು. ತುಂಗೆ ಒಮ್ಮೆ ಉಕ್ಕಿ ಹರಿದಾಗ ಇಡಿಯ ಅಗ್ರಹಾರ ಕೊಚ್ಚಿಕೊಂಡು ಹೋಗಿ ಬರಿ ಬಯಲುಳಿದಿತ್ತು. ಅದೆಲ್ಲ ಶತಮಾನದ ಹಿಂದಿನ ಕಥೆ. ನಾವು ಚಿಕ್ಕವರಿರುವಾಗ ಹಲಸಿನ ಮರದ ಬುಡದಲ್ಲಿದ್ದ ಒಂದು ಹಳೆಯ ಒರಳು ಕಲ್ಲನ್ನು ಅದು ಇತಿಹಾಸದ ಒಂದು ಭಾಗವೆಂದು ಮತ್ತೆ ಮತ್ತೆ ಮುಟ್ಟಿ ರೋಮಾಂಚಿತರಾಗಿ ನೋಡುತ್ತಿದ್ದೆವು!

ಜಾತ್ರೆ ಬಯಲೆಂದರೆ, ಅದರ ತುದಿಯಲ್ಲೊಂದು ವೆಂಕಟರಮಣನ ಗುಡಿ. ಶುರುವಲ್ಲೊಂದು ನಾಗರ ಕಟ್ಟೆ. ಎರಡೂ ಕಡೆ ನದಿಗೆ ಕರೆದೊಯ್ಯುವ ಮೆಟ್ಟಿಲುಗಳು. ಒಂದು ಕಡೆ ಅಗಾಲದ್ದು, ಮತ್ತೊಂದು ಕಡೆ ಕಡಿದಾದ ಚಿಕ್ಕಚಿಕ್ಕದು. ಗುಡಿಯ ಪಕ್ಕ ಒಂದು ಮೇ ಫ್ಲವರ್ ಮರ. ಅದೇ, ನಮ್ಮ ಸಾಹಸಕ್ಕೆ ಸವಾಲಾಗಿ ನಿಂತಿದ್ದ ಮರ! ನಾನು, ವಿದ್ಯಾ ಸರಸರನೆ ಮರ ಏರುತ್ತಿದ್ದರೆ, ಅಪ್ಪಿ ಮಂಗನ ಹಾಗೆ ಪಿಳಿಪಿಳಿ ನೋಡ್ತ ನಿಂತು ಬಿಡುತ್ತಿದ್ದನಲ್ಲ, ಆಮೇಲೆ ತನಗೆ ಏರಲು ಬಾರದ ಸಂಕಟಕ್ಕೆ ಅಮ್ಮನ ಹತ್ರ ಚಾಡಿ ಹೇಳ್ತಿದ್ದನಲ್ಲ, ಅದಕ್ಕೆಲ್ಲ ಕಾರಣವಾಗಿದ್ದ ಮರ…

ಮನೆಯಿಂದ ಹುಣಿಸೆ ಹಣ್ಣು ಉಪ್ಪು ಕದ್ದು ನಾವಿಬ್ಬರು ಅಡುಗೆ ಆಟ ಆಡ್ತಿದ್ದಿದ್ದು ಆ ಮರದ ಬುಡದಲ್ಲೇ. ಆ ಇಡಿಯ ಬಯಲಲ್ಲಿ ಅದೆಷ್ಟು ಜೀವಂತಿಕೆ! ಕ್ರಿಕೆಟ್ ಆಡುವ ಧಾಂಡಿಗ ಹುಡುಗರೊಂದು ಕಡೆ, ಸೈಕಲ್ಲು ಕಲಿಯುತ್ತಿದ್ದ ‘ಮೂತಿ ಮುರುಕಿ’ ಸಹೋದರಿಯರೊಂದು ಕಡೆ (ಅವರು ಯಾರಂತ ಇಡಿಯ ಬಾಳೆಬಯಲಿಗರಿಗೆ ಗೊತ್ತು! ಅವರು ಈ ಬ್ಲಾಗನ್ನು ಓದೋದಿಲ್ಲ ಅನ್ನೋ ಧೈರ್ಯದ ಮೇಲೆ ಬರೀತಿದ್ದೇನೆ!), ಮೆಟ್ಟಿಲಿಳಿಯುವ ಜಾಗದಲ್ಲಿ ಸ್ವಲ್ಪ ಆಚೆಯ ಬಿದಿರು ಮಟ್ಟಿಯಲ್ಲಿ ಈಗ ಮದುವೆಯಾಗಿ ತಮ್ಮ ತಮ್ಮ ಗಂಡ- ಹೆಂಡತಿಯೊಟ್ಟಿಗೆ ಸುಖವಾಗಿರುವ ಅವರಿಬ್ಬರು, ಇವರೆಲ್ಲರ ಮಧ್ಯ ಉದ್ದನೆ ಚಳ್ಳೆದುರಿ ಹಗ್ಗ ಗಂಟುಕಟ್ಟಿ ‘ಕೊಲ್ಲೂರ್-ಬೆಂಗ್ಳೂರ್’ ಬಸ್ಸಾಟ ಆಡ್ತಿದ್ದ ನಾವು!

ಜಾತ್ರೆ ಬಯಲಿಂದ ಹೊರಹೋಗಿ ಹತ್ತು ಹೆಜ್ಜೆ ನಡೆದರೆ ಅಲ್ಲೊಂದು ವೀರಗಲ್ಲು. ಸ್ಕೂಲಲ್ಲಿ ಪಾಠ ಮಾಡಿದ ದಿನ ಸಂಜೆ ಮನೆಗೆ ಬರುವ ಹಾದಿಯಲ್ಲಿ ಅದರೆದುರು ನಿಂತು ನಾವು ಸಮಾಲೋಚನೆ ನಡೆಸಿದ್ದೇ ನಡೆಸಿದ್ದು. ಅದಾದಮೇಲೆ ಜಾತ್ರೆ ಬಯಲಿನಲ್ಲಿ ‘ಬ್ಲೂಷೆಡ್’ ನಾಗ ಒರಗಿ ಕೂರ್ತಿದ್ದ ಕರಿ ಕಲ್ಲಿಗೂ ಅದಕ್ಕೂ ಏನಾದರೂ ಸಾಮ್ಯವಿದೆಯಾ ನೋಡಲಿಕ್ಕೆ ಹೋದವರು ಮುಸ್ಸಂಜೆ ಕಳೆದರೂ ಅಲ್ಲೇ ಹೊಳೆಬುಡದಲ್ಲಿ ನಿಂತು ಅಮ್ಮನ ಹತ್ರ ಬಯ್ಸಿಕೊಂಡಿದ್ದೆವು. ಅಮ್ಮ “ಇವತ್ತು ಅಮಾವಾಸ್ಯೆ ಮುಂಡೇವಾ” ಅಂತ ಮಣಮಣ ಮಾಡಿ ಪೊರಕೆ ಕಡ್ಡಿ ನಿವಾಳಿಸಿ ಒಲೆಗೆ ಹಾಕಿದ್ದಳು.

ನಾವು ಚಿಕ್ಕವರಿದ್ದಾಗ ತುಂಗೆಗೆ ಹಾರಿ ಅಥವಾ ಈಜಲು ಹೋಗಿ ಪ್ರಾಣ ಕಳಕೊಂಡಿದ್ದವರ ಲಿಸ್ಟು ಸಣ್ಣದಿತ್ತು. ಯಾವಾಗಲೂ ಒಂದಲ್ಲ ಒಂದು ಮಕ್ಕಳ ಗುಂಪಿಂದ ಕಳಕಳಿಯಾಗಿದ್ದ ಜಾತ್ರೆ ಬಯಲಿನ ಕಾರಣದಿಂದ ಹೊಳೆಯಲ್ಲಿ ಯಾರಾದರೂ ಸತ್ತಿದ್ದಾರೆ ಅನ್ನುವ ವಿಷಯ ಮರೆತೇ ಹೋಗುತ್ತಿತ್ತು. ಜೊತೆಗೆ, ಹೊಳೆಬದಿಯ ಮರಗಳಿಗೆ ನೇಣು ಹಾಕಿಕೊಂಡವರ ಸಂಖ್ಯೆ ಸಾಕಷ್ಟಿದ್ದರೂ ಅವೆಲ್ಲ ನಮ್ಮ ಸಾಹಸಗಳೆದುರು ನಗಣ್ಯವೆನಿಸಿಬಿಡುತ್ತಿತ್ತು. ಹಾಗಂತಲೇ ನಾನು ಮೈನೆರೆದ ಮೇಲೆ ಅಮ್ಮ ‘ರಣ ಹಿಡಿಯುತ್ತೆ ನೋಡು’ ಅಂತ ಗದರಿಸಿದರೂ ಕೇರ್ ಮಾಡದೆ ಮಟಮಟ ಮಧ್ಯಾಹ್ನವೆಲ್ಲ ಮಾವಿನಕಾಯಿ ಆಯಲು ಹೋಗುತ್ತಿದ್ದೆ . ಅಮ್ಮನಿಗೆ ಗೊತ್ತಾಗದಹಾಗೆ ಕದ್ದು ಮುಚ್ಚಿ ಹೊಳೆಯಲ್ಲಿ ಈಜಾಡಿ ಬಟ್ಟೆ ಒಣಗಿಸಿಕೊಂಡು ಮರಳುತ್ತಿದ್ದೆ! ಓ… ಅದೆಲ್ಲ ಎಷ್ಟು ಗಮ್ಮತ್ತು ಗೊತ್ತೇನು?

ಜಾತ್ರೆ ಬಯಲಿನ ವಿಷಯ ಹೇಳುತ್ತ ಒಂದು ಗಮ್ಮತ್ತು ಹೇಳಲೇಬೇಕು. ಅದೊಂದು ಮೋಹಿನಿಗೆ ಸಂಬಂಧಪಟ್ಟಿದ್ದು!
ನನ್ನಪ್ಪ ಸರ್ಕಾರಿ ನೌಕರರಾಗಿದ್ದರು. ಎಲೆಕ್ಷನ್ ಡ್ಯೂಟಿಗೆ ಹಾಕಿದ್ದರು ಅವರನ್ನ. ಮನೆಗೆ ವಾಪಸು ಬರ್ತ ರಾತ್ರಿ ಒಂದು  ಗಂಟೆಯಾಗಿತ್ತು. ಪೇಟೆಯಿಂದ ನಮ್ಮ ಮನೆಗೆ ಹೋಗೋದಕ್ಕೆ ಎರದು ದಾರಿ. ಒಂದು ಜಾತ್ರೆ ಬಯಲು ಬಳಸಿ, ಮತ್ತೊಂದು- ಸೀದಾ ಟಾರ್ ರೋಡಿಂದ ಬಂದು ಚಿಕ್ಕದೊಂದು ಏರು ಹತ್ತಿ ಬರುವಂಥದು.
ಅಪ್ಪ ಮಾಮೂಲಿನಂತೆ ಜಾತ್ರೆ ಬಯಲಿಂದ ಬರ್ತಿದ್ದರಂತೆ. ಆಗ ಇದ್ದಕ್ಕಿದ್ದ ಹಾಗೇ ‘ಬಂದ್ಯಾ, ಬಾ…! ಬಾ…!’ ಅಂತ ಹೆಣ್ಣು ದನಿಯೊಂದು ನಕ್ಕಿತಂತೆ!! ಅದಾಗಲೇ ಒಂದು ದೆವ್ವದ ಜತೆ ವ್ಯವಹರಿಸಿ ಗೊತ್ತಿದ್ದ ಅಪ್ಪ, ಹಿಂದೆ ತಿರುಗಿ ನೋಡಬಾರದು ಅನ್ನೋ ಸೂತ್ರ ನೆನಪಿಸಿಕೊಂಡು, ಕೈಯಲ್ಲಿ ಜನಿವಾರ ಗಟ್ಟಿಯಾಗಿ ಹಿಡಿದು ‘ಗಾಯತ್ರಿ ಮಂತ್ರ’ ಹೇಳಿಕೊಂಡು ದಾಪುಗಾಲು ಹಾಕುತ್ತ ಬಂದರಂತೆ!
ಮನೆ ಸೇರಿದ ಅಪ್ಪ ಈ ರೋಚಕ ಕಥೆಯನ್ನ ಮನೆಗೆ ಬಂದವರಿಗೆಲ್ಲ ಹೇಳಿ ಬೆಚ್ಚಿಬೀಳಿಸುತ್ತಿದ್ದರು. ಹಗಲು ಹೊತ್ತು ಬಯಲಿಗೆ ಆಡಲು ಹೋಗ್ತಿದ್ದ ನಾವೂ ಆ ದೆವ್ವ ಎಲ್ಲಿಂದ ಕರೆದಿರಬಹುದು ಅಂತ ಬಹಳ ಕಾಲದವರೆಗೆ ಹುಡುಕಿ ಸೋಲುತ್ತಿದ್ದೆವು.
ಹಾ! ಇದನ್ನ ಹೇಳುತ್ತ ಹೇಳುತ್ತ, ನಮ್ಮೂರಿನ ದೆವ್ವದ ಕಥೆಗಳನ್ನ ಹೇಳುವ ಉಮ್ಮೇದಿ ಬಂದಿದೆ. ನಿಮಗೆ ಬೇಡವಾದರೂ ಮುಂದೊಮ್ಮೆ ಆ ಬಗ್ಗೆ ಬರೆಯುತ್ತೇನೆ, ಪ್ಲೀಸ್… )

ಹೀಗೆಲ್ಲ ರುಚಿರುಚಿಯಾಗಿದ್ದ ಜಾತ್ರೆ ಬಯಲು ಊರ ರಾಜಕೀಯಕ್ಕೆ ಸಿಕ್ಕಿ ತನ್ನೆಲ್ಲ ಆಕರ್ಷಣೆ ಕಳಕೊಳ್ಳುತ್ತ ಬಂತು. ವೆಂಕಟರಮಣನ ಗುಡಿ ಸುತ್ತ ಸಭಾಭವನ ಕಟ್ಟಲಿಕ್ಕೆ ಹಾಕಿದ್ದ ಇಟ್ಟಿಗೆ- ನಾಟಾಗಳೆಲ್ಲ ಯಾರ್ಯಾರದೋ ಮನೆಯ ಗೋಡೆ- ಮಾಡಿಗೆ ಬಳಕೆಯಾಯ್ತು. ಈಜಲು ಹೋದ ಪರಊರ ಹುಡುಗರು ವರ್ಷಕ್ಕೊಬ್ಬರಂತೆ ಸಾಯುತ್ತ ಜನ ಅತ್ತ ಹೋಗಲು ಹಿಂದೇಟು ಹಾಕತೊಡಗಿದರು. ಒಂದಷ್ಟು ಹೆಣ್ಣುಗಳು ಅಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ತು, ಹೆಂಗಸರು ಬಟ್ಟೆ ಒಗಿಯಲಿಕ್ಕೆ ಹೋಗೋದನ್ನ ಹೆಚ್ಚೂಕಡಿಮೆ ನಿಲ್ಲಿಸೇಬಿಟ್ಟರು!

ಈಗ, ಮನೆಯೊಳಗೇ ಕಾರ್ಟೂನು ನೋಡುತ್ತ ಕೂರುವ ಮಕ್ಕಳು ಅಲ್ಲಿ ಅಡುಗೆ ಆಟ ಆಡಲಿಕ್ಕೆ ಹೋಗೋಲ್ಲ. ಮರ ಹತ್ತುವ, ಮಾವಿನ ಕಾಯಿ ಉದುರಿಸುವ ಸಾಹಸಗಳಂತೂ ಕನಸಿಗೂ ದೂರದ ಮಾತು!
ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ವೆಂಕಟರಮಣನಿಗೆ ಭರ್ಜರಿ ಪೂಜೆ. ಆಗೊಂದಷ್ಟು ದಿನ ಅಲ್ಲಿ ಗೆಲುವು, ಗಲಗಲ.
ಅದು ಬಿಟ್ಟರೆ ಆ ಇಡಿಯ ಬಯಲಿಗೆ ಸೂತಕದ ಕಳೆ. ಬಹುಶಃ ಒಂಟೊಂಟಿ ಇರಲು ಬೇಸರವಾಗಿ ಅಲ್ಲಿದ್ದ ಬ್ರಹ್ಮ ಪಿಶಾಚಿ, ರಣಗಳೂ, ಭೂತ ದೆವ್ವಗಳೂ, ಕಡೆಗೆ ಖುದ್ದು ವೆಂಕಟರಮಣನೂ ಓಡಿಹೋಗಿಬಿಟ್ಟಿರಬೇಕು! ಹಾಗೆ ಶೂನ್ಯಶೂನ್ಯ.

ಮೊನ್ನೆ ಸಾರ್ತಿ ಊರಿಗೆ ಹೋದಾಗ ಆಸೆ ಬಿದ್ದು ಜಾತ್ರೆ ಬಯಲಿಗೆ ಹೋದೆ. ನಿರಾಸೆಯಾಯ್ತು. ನನ್ನ ಬಾಲ್ಯಕ್ಕೆ ರಂಗುತುಂಬಿದ್ದ ಆ ವಿಶಾಲ ನೆಲ, ಮಕ್ಕಳ ಹೆಜ್ಜೆ ಎದೆಗೊತ್ತದೆ ನರಳುತ್ತ ಬಿದ್ದುಕೊಂಡಿತ್ತು.
ಹ್ಹ್! ಅಲ್ಲಿ, ಬಯಲಿನದೊಂದು ಮೂಲೆಗೆ ಬೇಲಿ ಹಾಕಿದ್ದರು. ಇದ್ದ ಬದ್ದ ಮರಗಿಡ ಕಡಿದು, ಹುಲ್ಲು ನೆಟ್ಟು ‘ಪಾರ್ಕು’ ಮಾಡಿದ್ದರು!
ಅದುಕೂಡ ಹಾಳುಬಿದ್ದು ಸ್ಮಶಾನದಂತೆ ಮಲಗಿತ್ತು.

ಮೊನ್ನೆ ಅಮ್ಮ ಜಾನುವಾರು ಜಾತ್ರೆ ಬಯಲಿನ ಮಾತು ತೆಗೆದಿದ್ದು ಅದೇ ಪಾರ್ಕಿನ ವಿಷಯಕ್ಕೇ. ಅದೇನೋ ಮತ್ತೆ ರಾಜಕೀಯಕ್ಕೆ ಸಿಕ್ಕಿದೆಯಂತೆ. ಯಾರ್ಯಾರೋ ಅದರ ದುಡ್ಡು ನುಂಗಿದರಂತೆ… ಹೀಗೇ, ಏನೋ ಒಂದಷ್ಟು ವರದಿ ಹೇಳಿದಳು. ನಿಟ್ಟುಸಿರುಬಿಟ್ಟ ನನಗೆ, ‘ಜೀವನದಲ್ಲಿ ಎಂತೆಂತದೋ ಬದಲಾಗತ್ತೆ, ಜಾತ್ರೆ ಬಯಲಿಂದೇನು ದೊಡ್ಡ ಸುದ್ದಿಯಾ?’ ಅಂತ ವೇದಾಂತ ಹೇಳುತ್ತ ನನ್ನ ವಿಷಯ ತೆಗೆದಳು.

ಪಾಪ ಅಮ್ಮ. ಈ ಐವತ್ತು ವರ್ಷಗಳಲ್ಲಿ ಎಂಥೆಂಥದೋ ಬದಲಾವಣೆಗಳನ್ನ ಅರಗಿಸಿಕೊಂಡು ಬಂದಿದಾಳೆ. ಅವಳ ಕಣ್ಣೆದುರೇ ತೀರ್ಥಹಳ್ಳಿ ಮೊದಲಿನ ಕುರುಹೇ ಉಳಿಯದ ಹಾಗೆ ಬದಲಾಗಿ ನಿಂತಿದೆ. ಹೀಗಿರುವಾಗ ಅವಳಪಾಲಿಗೆ ಜಾನುವಾರು ಜಾತ್ರೆ ಬಯಲು ಒಂದು ದೊಡ್ಡ ವಿಷಯವಲ್ಲ.
ಆದರೆ, ಬರಿ ಹತ್ತು ಹನ್ನೆರಡು ವರ್ಷಗಳಲ್ಲಿ ಇಂಥದೊಂದು ಸಂಗತಿ ಕಂಡ ನನ್ನ ಪಾಲಿಗೆ…?

‍ಲೇಖಕರು avadhi

May 8, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

2 ಪ್ರತಿಕ್ರಿಯೆಗಳು

  1. Godlabeelu Parameshwara

    Ee baraha odutta nannoorige hogi banda haagaayithu. nimmooronde alla. nannoorina katheyoo ade aagide.baraha hidisithu.

    Godlabeelu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: