ಬಾಲ್ಯ ಕಾಲ ಎಂಬ ಸಖಿ

door_number1421.jpg 

“ಡೋರ್ ನಂ 142”

ಬಹುರೂಪಿ

“ಒಂದ್ನಿಮಿಷ ಇರು” ಅಂತ ಹೇಳಿದ ಅಪ್ಪ ದಿಢೀರ್ ಮಾಯಾ ಆದ್ರು. ಟ್ರೇನ್ ಆಗಲೇ ಶಿಳ್ಳೆ ಹಾಕ್ತಾ ನಿಂತಿತ್ತು. ಇನ್ನು ಯಾವ ಕ್ಷಣದಲ್ಲಿ ಬೇಕಾದರೂ ಹೊರಟುಬಿಡ್ತೀನಿ ಅನ್ನೋ ಥರಾ ರಾಗ ಎಳೀತಿತ್ತು. ಕಿಟಕಿಯಿಂದ ಆಚೆ ಎಲ್ಲಾ ಕಡೆ ಕಣ್ಣಾಡಿಸ್ದೆ. ಅಪ್ಪ ಕಾಣ್ತಿಲ್ಲ. ಟ್ರೇನ್ ಓಡಿಸೋರಿಗೆ ಏನು ಗೊತ್ತಾಗುತ್ತೆ? ನಾನು ಅಪ್ಪನ್ನ ಕಾಯ್ತಾ ಇದೀನಿ ಅಂತ. ಚುಕ್ ಚುಕ್ ಅಂತ ಸದ್ದು ಮಾಡ್ತಾ ಹೊರಟೇಬಿಡ್ತು. ಅಪ್ಪ ಕೈಬೀಸಿ ನನ್ನ ಕಳಿಸ್ದೇ ಇದ್ರೆ ನನಗೆ ಯಾಕೋ ಎಲ್ಲಾ ಸರಿ ಇದೆ ಅಂತಾ ಅನಿಸ್ತಾ ಇರ್ಲಿಲ್ಲ. ಕಣ್ಣಲ್ಲಿ ನೀರು ತುಂಬಿಕೊಳ್ತು. ಕಣ್ಣು ಒರೆಸಿಕೊಂಡು ನೋಡ್ತೀನಿ-ಸ್ಟೇಷನ್ ಮೂಲೇ ಗೇಟಿಂದ ಅಪ್ಪ ಓಡಿ ಬರ್ತಾ ಇದಾರೆ. ಅಷ್ಟು ವಯಸ್ಸಿನ ಅಪ್ಪ ಏನಾಗುತ್ತೆ ಅನ್ನೋದು ಯೋಚನೆ ಮಾಡ್ದೆ ಅವರಿವರನ್ನೆಲ್ಲಾ ತಳ್ಳಿಕೊಂಡು, ಢಿಕ್ಕಿ ಹೊಡೀತಾ ನನ್ನ ಕಡೆಗೆ ಕಿಟಕಿ ಒಳಗೆ ಏನೋ ಎಸೆದ್ರು, ಅಷ್ಟೊತ್ತಿಗೆ ಟ್ರೇನ್ ಸಹಾ ಸ್ಪೀಡ್ ಜಾಸ್ತಿ ಮಾಡ್ಕೊಂಡುಬಿಟ್ಟಿತು. ಏನಪ್ಪಾ ಅದು ಅಪ್ಪನಿಗೆ ಅಷ್ಟೊಂದು ಇಂಪಾರ್ಟೆಂಟ್ ಆಗಿದ್ದದ್ದು? ನಾನಂತೂ ಏನೂ ಕೇಳಿರ್ಲಿಲ್ಲ. ಓಡಿ ಹೋಗಿ ಇಷ್ಟೆಲ್ಲಾ ರಾಮಾಯಣ ಮಾಡಿಕೊಂಡು ತಂದ್ಕೊಡೋ ಅಂತದ್ದು ಏನು ಅಂತ ಅಪ್ಪ ಎಸೆದಿದ್ದ ಪ್ಯಾಕೆಟ್ ಕೈಗೆ ತಗೊಂಡೆ. ಬಿಚ್ಚಿ ನೋಡ್ದೆ – ನನ್ನ ಕಣ್ಣು ಒದ್ದೆಯಾಯ್ತು. ಅದು ಬರೀ ಟೂತ್ ಪೇಸ್ಟ್ ಅಲ್ಲ. ನಾನು ಹಲ್ಲು ಉಜ್ಜಲು ಆರಂಭಿಸಿದ ನೆನಪು ಹಾಗೂ ಇಡೀ ಬಾಲ್ಯವೂ ಆಗಿತ್ತು. ಈಗ ಮಾರ್ಕೆಟ್ ನಲ್ಲಿ ಒಂದು ದಂಡಿ ಟೂತ್ ಪೇಸ್ಟ್ ಗಳಿದೆ. ಆದರೆ ಅದು ಯಾವುದೂ ನನಗೆ ಏನೂ ಅಲ್ಲ. ಆದರೆ ಆ ಟೂತ್ ಪೇಸ್ಟ್ ಇದೆಯಲ್ಲ, ಅದು ಮಾತ್ರ ನನಗೆ ಬಾಲ್ಯಕ್ಕೆ ಕರೆದೊಯ್ಯುವ ದೋಣಿ.

-ನನ್ನ ಫ್ರೆಂಡ್ ಇದನ್ನ ಹೇಳ್ತಾ ಇದ್ದಾಗ ನನಗೂ ಹಾಗೇ ಆಯ್ತು. ಒಂದಷ್ಟು ಹೆಜ್ಜೆ ಹಿಂದಕ್ಕೆ ಹಾಕಿ ನನ್ನ ಬಾಲ್ಯದೊಳಗೆ ಇಳಿದು ಹೋದೆ. ನಂಜನಗೂಡು ಟೂತ್ ಪೌಡರ್ ಅಂದ್ರೆ ನನ್ನ ಮೈಯಲ್ಲೂ ಅದೇ ಮಿಂಚು. ಆ ಪಿಂಕ್ ಕಲರ್, ಸ್ವೀಟ್ ಸ್ವೀಟಾಗಿದ್ದ ರುಚಿ, ಆ ಕಾಗದದ ಪೊಟ್ಟಣ, ಅದ್ರ ಮೇಲೆ ಇದ್ದ ಯಾವುದೋ ಆಯುರ್ವೇದ ಪಂಡಿತನ ಚಿತ್ರ – ಎಲ್ಲಾ ನೆನಪಾಯ್ತು. ಈಗ ತಾನೆ ಆ ಟೂತ್ ಪೌಡರ್ ನಿಂದ ಹಲ್ಲು ಉಜ್ಜಿದ್ನೇನೋ ಅನ್ನೋ ಹಾಗೆ ನಿಂತ್ಕೊಂಡುಬಿಟ್ಟೆ “ಚೀತಾ ಫೈಟ್” ಬೆಂಕಿ ಪೊಟ್ಟಣ ನೋಡ್ದಾಗಲೂ ಹೀಗೇ ಆಗುತ್ತೆ. ಒಬ್ಬ ಗಟ್ಟಿಮುಟ್ಟಾಗಿರೋ ಯುವಕ ಕೈಯಲ್ಲಿ ಕುಡುಗೋಲು ಹಿಡ್ಕೊಂಡಿದ್ದಾನೆ. ಅವನ ಮೈ ಮೇಲೆ ಚಿರತೆ ಎಗರ್ತಾ ಇದೆ. ಇವ್ನು ಫೈಟ್ ಮಾಡ್ತಾ ಇದಾನೆ. ಈಗ ಎಷ್ಟೊಂದು ಥರಾ, ಅದ್ರಲ್ಲೂ ಥರಾ ಥರಾ ಬೆಂಕಿಪೊಟ್ಟಣ ಬಂದುಬಿಟ್ಟಿದೆ. ತಿಂಗಳಿಗೆಲ್ಲಾ ಆಗುತ್ತೆ ಅಂಥಾ ದೊಡ್ಡ ಡಬ್ಬ ಬಂದಿದೆ, ವ್ಯಾಕ್ಸ್ ಬೆಂಕಿ ಕಡ್ಡಿ ಇರೋ ಪೊಟ್ಟಣ ಬಂದಿದೆ. ಅವೆಲ್ಲಾ ಹೋಗಿ ಗ್ಯಾಸ್ ಲೈಟರ್ ಬಂದಿದೆ. ಆದ್ರೂ ನಂಗೆ ಆ, ಆ “ಚೀತಾಫೈಟ್” ನೆನಪಾಗುತ್ತೆ. ಮೊನ್ನೆ ಹಿಂಗೇ ಆಯ್ತು ಯಾರೋ ಪುಣ್ಯಾತ್ಮ ಎಲ್ಲಾ ಬೆಂಕಿಪೊಟ್ಟಣನೂ ಕಲೆಕ್ಟ್ ಮಾಡಿದಾನಂತೆ. ಅವನ ಬಗ್ಗೆ ಪೇಪರ್ ನಲ್ಲಿ ಬರೆದಿದ್ರು. ಅದರ ಜೊತೆ ನೋಡ್ತೀನಿ, ಈ “ಚೀತಾ ಫೈಟ್” ಬೆಂಕಿಪೊಟ್ಟಣದ ಫೋಟೋನೂ ಇದೆ. ನಾನು ನನ್ನ ವಯಸ್ಸನ್ನ ಕಳಚ್ಕೊಂಡು, ಇರೋ ಪ್ರಭಾವಳಿ ಕಿತ್ತು ಬಿಸಾಕಿ ಆ, ಆ ಲೋಕಕ್ಕೇ ಹೋಗಿಬಿಟ್ಟೆ.

ಯಾವುದಪ್ಪಾ ಅದು ಕವಿತೆ? ಜ್ಞಾಪಿಸ್ಕೊಳೋದಿಕ್ಕೆ ಟ್ರೈ ಮಾಡ್ತಾ ಇದೀನಿ. ಅದ್ರಲ್ಲಿ ರಾಮ ಒಂದು ಬಿಲ್ಲು ಮುರಿದು ಸೀತೆಗೆ ಹಾರಾ ಹಾಕಿ ಮದ್ವೆ ಆಯ್ತಾ ಅಂತ ಹೇಳಿ ಅವನ ಊರಿಗೆ ಕರಕೊಂಡು ಹೋಗೋಕೆ ರೆಡಿ ಆಗ್ತಾನೆ. ಆಗ ಅವರಪ್ಪ ಬಂದು ಅಳ್ತಾ ಇದ್ದ ಮಗಳ ಕೈಗೆ ಒಂದು ಪುಟಾಣಿ ವಸ್ತು ಇಡ್ತಾನೆ. ಅದೊಂದು ಡಬ್ಬಿ, ಸೀತೆ ಇದೇನಪ್ಪಾ ಅಂತ ತೆಗೆದು ನೋಡಿದ್ರೆ ಅದರಲ್ಲಿ ಏನಿದೆ-ಮಣ್ಣು. ಗಳಗಳಾ ಅಂತ ಅಳೋದಿಕ್ಕೆ ಶುರು ಮಾಡ್ತಾಳೆ. ದಶರಥ ಇದಕ್ಕಿಂತ ಇನ್ನೇನು ಬೆಸ್ಟ್ ಪ್ರೆಸೆಂಟೇಶನ್ ಕೊಡಬಹುದಾಗಿತ್ತು. ಅವನು ಸೀತೆಗೆ ತನ್ನ ಊರಿನ ಮಣ್ಣನ್ನೇ ಕೊಟ್ಬಿಟ್ಟಿದ್ದಾನೆ. ಮಣ್ಣು ಅಂದ್ರೆ ಅದೇನು ಮಣ್ಣಾ? ನೋ! ಅದು ತಾನು ಓಡಾಡಿದ ಕುಣಿದ, ಕುಪ್ಪಳಿಸಿದ ದೊಡ್ಡವಳಾದ, ಕಾಡಿದ, ಬೇಡಿದ ಎಲ್ಲಾ ನೆನಪುಗಳ ಮೊತ್ತ. ಅಪ್ಪ ಕೊಟ್ಟಿದ್ದು ಒಂದು ಹಿಡಿ ಮಣ್ಣಲ್ಲ. ಆತ ಒಂದು ಪುಟಾಣಿ ಡಬ್ಬಿನಲ್ಲಿ ಇಡೀ ಬಾಲ್ಯಾನೇ ತುಂಬಿಕೊಟ್ಟುಬಿಟ್ಟಿದ್ದಾನೆ.

srujan043.jpg

ವೈಕಂ ಮಹಮದ್ ಬಶೀರ್ “ಬಾಲ್ಯ ಕಾಲ ಸಖಿ” ಅಂತಾ ಕಾದಂಬರಿ ಬರ್ದಿದಾರೆ. ನನಗಂತೂ ಆಹ್! ಅನ್ಸುತ್ತೆ, ಅದು ನೆನಪಾದಾಗಲೆಲ್ಲಾ. ಹೌದಲ್ವಾ ಬಾಲ್ಯ ಕಾಲ ಸಖಿ ಅಂದ್ರೆ ಬಾಲ್ಯ ಕಾಲ ಸಖೀನೇ. ತೋಟ ದಾಟ್ಕೊಂಡು, ಏರಿ ಮೇಲೆ ನಡೀತಾ ಸ್ವಲ್ಪ ದೂರದಲ್ಲಿರೋ ಸ್ಕೂಲ್ ಗೆ ಹೋಗ್ಬೇಕಾಗಿತ್ತು. ಒಂದಿನಾ ಹೀಗೆ ದಡಬಡಾಯಿಸಿಕೊಂಡು ಹೋಗ್ತಾ ಇರೋವಾಗ ಆ ಹಾವು ಅದೇಗೆ ಸರಸರಾಂತ ಬಂದ್ಬಿಡ್ತು! ಈಗ್ಲೂ ಅವತ್ತು ಹೆದರಿದ್ನಲ್ಲ ಅದೇ ಥರಾ ಹೆದರ್ತೀನಿ. ರೋಡ್ ಸೈಡಲ್ಲಿ ಒಂದು ದೊಡ್ಡ ಹುಣಸೆಮರ ಇತ್ತು. ಅದರ ಕೊಂಬೆಗೆ ಹಗ್ಗಾ ಕಟ್ಟಿ, ನೋವಾಗ್ದಿರ್ಲಿ ಅಂತ ಬೆಡ್ ಶೀಟ್ ಹಾಕಿ, ರೋಡ್ ನೇ ಮುಲಾಜು ಮಾಡ್ದೀರಾ ತೂಗಾಡ್ತಿದ್ವಲ್ವಾ ಎಷ್ಟೆಲ್ಲಾ ನೆನಪಿಗೆ ಬರುತ್ತೆ. ಕಬ್ಬಿನ ಗಾಡಿ ಹೋಗ್ತಿದ್ರೆ ಅದರ ಹಿಂದೆ ಓಡ್ತಿದ್ವಿ, ಟ್ರೇನ್ ಬರೋ ಟೈಮ್ ಗೆ ಕರೆಕ್ಟಾಗಿ ರೈಲ್ವೇ ಲೈನ್ ಹತ್ರಾ ನಿಂತ್ ಕೋತಾ ಇದ್ವಿ, ಎಂಜಿನ್ ಕಾಣಿಸ್ತಿದ್ದ ಹಾಗೇ ಗ್ರೀಸ್, ಗ್ರೀಸ್ ಅಂತಾ ಕೂಗ್ತಾ ಇದ್ವಿ. ಟ್ರೇನ್ ಡ್ರೈವರ್ ನಾಲ್ಕೈದು ಪ್ಯಾಕೆಟ್ ಗ್ರೀಸ್ ನಮ್ಮ ಕಡೇಗೆ ಎಸೀತಾ ಇದ್ರು. ಅವನ್ನ ಏನು ಮಾಡ್ತಿದ್ವಿ? ಗ್ರೀಸ್ ತಗೊಂಡು ಏನು ಮಾಡೋಕೆ ಆಗುತ್ತೆ. ಆದ್ರೂ ನಾವು ಕೂಗ್ತಿದ್ವಿ, ಅವ್ರು ಕೊಡ್ತಿದ್ರು. ಇವಾಗಲೂ ಅಷ್ಟೆ ನನ್ನ ಕಾರೋ, ಸ್ಕೂಟರ್ರೋ ಗ್ಯಾರೇಜ್ ಒಳಗೆ ಸೇರ್ಕೊಂಡ್ರೆ ನನ್ನ ಕಣ್ಣು ಅಲ್ಲಿ ಗೋಡೇಗೆ ಮೆತ್ತಿಕೊಂಡಿರೋ ಗ್ರೀಸ್ ನೇ ನೋಡ್ತಾ ಇರುತ್ತೆ. ನಾನು ಗ್ಯಾರೇಜ್ ನಲ್ಲಿ ಕೂತಿರೋಲ್ಲ. ರೈಲ್ವೆ ಲೈನ್ ಪಕ್ಕ ಚಡ್ಡಿ ಏರಿಸ್ಕೊಂಡು ನಿಂತಿರ್ತೀನಿ.

“ತೊತ್ತೋಚಾನ್” ಪುಸ್ತಕದಲ್ಲಿ ಇದ್ಲಲ್ಲಾ ಆ ತುಂಟ ಹುಡುಗಿ. ಅವಳೀಗ ಟಿವಿ ಆಂಕರ್. ಸಿಕ್ಕಾಪಟ್ಟೆ ಫೇಮಸ್. ೫೦ ವರ್ಷ ದಾಟಿದೆ. ಆದ್ರೂ ಅವಳು ಏನ್ಮಾಡ್ತಾಳೆ ಅಂದ್ರೆ ಆವಾಗ ಇವಾಗ ಕಾರಲ್ಲಿ ಹೋಗಿ ಅವಳ ಸ್ಕೂಲ್ ಇತ್ತಲ್ಲಾ ಅದರ ಸುತ್ತಾ ರೌಂಡ್ ಹಾಕ್ತಾಳೆ. ನನಗೆ ಇದು ಕಾಡುತ್ತೆ, ಅವಾಗ ಹಳ್ಳಿ ಇವಾಗ ಸಿಟಿ ಆಗೋಗಿರೋ ನಾನು ಓದಿದ ಪ್ಲೇಸ್ ಇದೆಯಲ್ಲಾ ಅದರ ಮುಂದೆ ಬಸ್ ನಲ್ಲಿ ಹಾದು ಹೋಗೋವಾಗ ನಾನು ಕಿಟಕಿ ಆಚೆ ಇಣುಕ್ತೀನಿ. ಆ ಬ್ಯಾಪ್ಟಿಸ್ಟ್ ಆಸ್ಪತ್ರೆ ಇದೆಯಾ, ಅದರ ಪಕ್ಕ ದೊಡ್ಡ ಮೈದಾನದಲ್ಲಿ ನನ್ನ ಸ್ಕೂಲ್ ಕಾಣುತ್ತಾ, ಅದರ ಪಕ್ಕ ಆ ಪೋಲೀಸ್ ಸ್ಟೇಷನ್ ಇದೆಯಾ, ಅದರ ಪಕ್ಕ ಊರೊಳಗೆ ಹೋಗ್ತಿತ್ತಲ್ಲಾ ಆ ರೋಡ್ ಇದೆಯಾ, ಅದರಲ್ಲಿ ಅದೇ ನನ್ನ ಕ್ಲಾಸ್ ಮೇಟ್ ಇದ್ಲಲ್ಲಾ ಅವಳ ಮನೆ ಇದೆಯಾ, ಅದರ ಪಕ್ಕ ಆ ರಂಗಮಂದಿರ ಇದೆಯಾ ಅದರ ಪಕ್ಕ ನಮ್ಮನೆ ಇದೆಯಾ, ಚೆಕ್ ಮಾಡ್ತಾನೇ ಇರ್ತೀನಿ. ಎಷ್ಟೊಂದು ವರ್ಷ ಆಗೋಗಿದೆ. ಭೂಮಿ ಸೂರ್ಯನ್ನ ಸುತ್ತ ಎಷ್ಟು ರೌಂಡ್ ಹೊಡೆದು ಸುಸ್ತಾಗಿದೆ. ಆದ್ರೆ ನನಗೆ ಮಾತ್ರ ಆ ಚೆಕ್ ಮಾಡೋ ಕೆಲಸ ಸುಸ್ತು ಅನಿಸಿಲ್ಲ.

ನನ್ನ ಮಗಳ ನಾಮಕರಣ ಇರ್ಬೇಕು. ನಮ್ಮ ಕಸಿನ್ ಒಂದು ಕೋತಿ ತಂದ್ಕೊಟ್ಟಿದ್ದ. ನನ್ನ ಕೊಲೀಗ್ಸ್ ಒಂದು ಕರಡಿ ತಂದ್ಕೊಟ್ಟಿದ್ರು. ಅವಳಿಗೋ ಈಗ ಕಾಲಿಗೆ ನವಿಲಿನ ನಾಟ್ಯ ಬಂದಿರೋ ವಯಸ್ಸು. ಆದ್ರೂ ಊರಿಂದ ಊರಿಗೆ ಹೋದ್ರೂ, ಶಾಲೆಯಿಂದ ಶಾಲೆ ಬದಲಾಯಿಸಿದ್ರೂ ಆ ಎರಡು ಗೊಂಬೆ ಮಾತ್ರ ಅವಳ ಜೊತೇನೇ ಟ್ರಾವಲ್ ಮಾಡ್ತಾ ಇದೆ. ಅವಳ ಜೊತೆ ಇರೋದು ಅವಳ ಗೊಂಬೆಗಳಲ್ಲ, ಅವಳ ಬಾಲ್ಯ.

ನನ್ನ ಹೆಂಡ್ತಿ ಸ್ಕೂಲ್ ಗೆ ಹೋಗೋ ದಿನಗಳು ಅವು. ಹೋಂವರ್ಕ್ ಮಾಡೋಕೆ ಅಂತ ಕೂತಿದ್ದಾಗ “ಅಂಜಾನಾ” ಅಂತ ಜೋರಾಗಿ ಕೂಗಿದ್ಲಂತೆ. ಫಟ್ ಅಂತ ಬಿತ್ತು ಒದೆ. ಯಾವಾಗ್ಲೋ ಅದನ್ನ ಮದುವೆ ಆದ್ಮೇಲೆ ನನಗೆ ಹೇಳಿದ್ಲು. ನಾನೂ ಅಷ್ಟೆ, ಅವಳನ್ನ ರೇಗಿಸೋಕೆ ಅಂತ ಅವಾಗಿವಾಗ “ಅಂಜಾನಾ” ಅಂತ ಕೂಗ್ತೀನಿ. ಆಗ ನೋಡ್ಬೇಕು ಅವಳ ಕಣ್ಣು ಅರಳೋ ರೀತಿ. ಅವಳು ಇಲ್ಲಿರೋದೇ ಇಲ್ಲ. ಸುಂಯ್ ಅಂತ ಆ ಊರು, ಆ ಮನೆ, ಆ ದಿನಕ್ಕೆ ಜಾರಿಕೊಂಡುಬಿಟ್ಟಿರ್ತಾಳೆ.

ಮೊನ್ನೆ ಹಿಂಗೇ ಆಯ್ತು “ಓ ನಲ್ಲನೆ ಸವಿ ಮಾತೊಂದಾ, ನುಡಿವೆಯಾ…. ನಾ ಏನನು ನುಡಿಯಲಿ ನಲ್ಲೆ, ಅರಿತೆಯಾ…?” ಅನ್ನೋ ಹಾಡು ರೇಡಿಯೋದಿಂದ ದುಮುಕ್ತಾ ಇತ್ತು. ನಾನು ಆಫೀಸಿನ ನೂರೆಂಟು ಮೀಟಿಂಗ್ ಗಳ ಟೆನ್ಶನ್ ನಲ್ಲಿದ್ದೆ. ಆದ್ರೆ ಒಂದೇ ಕ್ಷಣದಲ್ಲಿ ಇದ್ದ ಲೋಕಾನೆಲ್ಲಾ ಬಿಟ್ಟು ನಾಲ್ಕನೇ ಕ್ಲಾಸ್ ಗೌರ್ನಮೆಂಟ್ ಸ್ಕೂಲ್ ಗೆ ಜಾರಿಕೊಂಡುಬಿಟ್ಟೆ. ಯಾರಾದ್ರೂ ಹಾಡೇಳಿ ಅಂದಿದ್ರು ಮೇಷ್ಟ್ರು. ಪಾಪ ಯಾವುದೋ ಜಾನಪದ ಗೀತೆ ಹಾಡ್ತಾನೆ ಅನ್ಕೊಂಡಿದ್ದರೇನೋ? ಯಾವತ್ತೂ ಹಾಡದಿರೋ ನಾನು ಎದ್ದು ನಿಂತು ಈ ಹಾಡು ಶುರುಮಾಡಿಬಿಟ್ಟೆ. ಇಡೀ ಕ್ಲಾಸು ಗೊಳ್ ಅಂದು ಬಿಟ್ಟಿತ್ತು. ಆವಾಗ ಎಷ್ಟು ಅವಮಾನ ಆಗಿತ್ತು. ಆದ್ರೆ ಇವಾಗ….

ಮೊನ್ನೆ ಫ್ಲೈಟ್ ನಲ್ಲಿ ಬರ್ತಿದ್ನಾ ಅವಾಗ ಆ ಸುಂದ್ರಿ ಬಂದು ನನ್ನ ಮುಂದೆ ಚಾಕಲೇಟ್ ರಾಶಿ ಹಿಡಿದ್ಲು. ವಿಚಿತ್ರವಾಗಿ ಕಾಣಿಸ್ತಿತ್ತಲ್ಲ, ಆ ಚಾಕೊಲೇಟು ಅದನ್ನು ಹಿಡಿತುಂಬಾ ತಗೊಂಡು ಜೋಬಿಗೆ ಸೇರಿಸಿದೆ. ಮನೆಗೆ ಬಂದಾಗ ಅಮ್ಮನಿಗೆ ಅಕ್ಕಂದಿರಿಗೆ, ತಂಗೀಗೆ, ಅವ್ರಿಗೆ, ಇವ್ರಿಗೆ, ಎಲ್ಲಾರ್ಗೂ ಕೊಟ್ಟೆ. ಅವರು ಬಿಡಿಸಿ ಬಾಯಿಗಾಕಿಕೊಂಡ್ರು. ಹಾಕ್ಕೊಂಡ್ರು ಅಷ್ಟೆ… ಒಂದು ಕ್ಷಣದಲ್ಲಿ ಎಲ್ಲಾರೂ ಅವರ ಬಾಲ್ಯದ ಬಾಗಿಲು ಬಡೀತಾ ಇದ್ರು. ಮುಖದಲ್ಲಿ ಮುಗುಳ್ನಗೆ ಯಾಕೆಂದ್ರೆ ಅದು ಹುಣಸೇ ಹಣ್ಣಿನ ಚಾಕಲೇಟು. ಎಲ್ಲಾರೂ ಮನೆಯಿಂದ ಕದ್ದಿದ್ದ ಉಪ್ಪು ಮೆಣಸಿನಕಾಯಿ, ರೋಡ್ ಸೈಡಲ್ಲಿ ಉದುರಿದ್ದ ಹುಣಸೆಹಣ್ಣು ಎಲ್ಲಾ ಸೇರಿಸಿ ಜಜ್ಜಿ ಬಾಯಿಗಾಕಿಕೊಂಡಿದ್ರು, ಮಿನಿಮಮ್ ಅಂದ್ರೂ ೪೦ ವರ್ಷ ಹಿಂದೆ ಜಾರಿ ಹೋಗಿದ್ರು. ಅದಕ್ಕೇ ಅಲ್ವಾ “ಬಾಲ್ಯ ಕಾಲ ಸಖಿ” ಅನ್ನೋದು?

‍ಲೇಖಕರು avadhi

March 31, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

೧ ಪ್ರತಿಕ್ರಿಯೆ

 1. ಶೆಟ್ಟರು

  ಬಹುರೂಪಿ,

  ಉಸಿರು ಬಿಗಿಯಾಗಿ ಹಿಡಿದು ಒದೊವಷ್ಟು ನಾನು ನನ್ನ ಬಾಲ್ಯಕ್ಕೆ ತಿರುಗಿದ್ದೆ.

  ಒಂದು ಒಳ್ಳೆ ಸವಿ ನೆನಪಿಗೆ ಕರ್ಕೊಂಡು ಹೋಗಿದ್ರಿ, ತ್ಯಾಂಕ್ಸ.

  ಪ್ರೀತಿಯಿರಲಿ

  ಶೆಟ್ಟರು, ಮುಂಬಯಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: