ಬಾಳೇ ಒಂದು ಗಿಡವಾದರೆ ಪ್ರೀತಿಯದರ ಗೊನೆ!

ಬಿ ಎಂ ಬಷೀರ್ ಕನ್ನಡ ಕಂಡ ಪ್ರಜ್ಞಾವಂತ ಪತ್ರಿಕೋದ್ಯಮಿ. ಮೆಲು ಮಾತಿನ, ಗಟ್ಟಿ ನಿರ್ಧಾರಗಳ ಈತ ‘ಜನವಾಹಿನಿ’ಯಲ್ಲಿದ್ದು, ಈಗ ವಾರ್ತಾ ಭಾರತಿಯನ್ನು ಮುನ್ನಡೆಸುತ್ತಿದ್ದಾರೆ. ‘ಬಾಳೆಗಿಡ ಗೊನೆ ಹಾಕಿತು’ ಲೋಹಿಯಾ ಪ್ರಕಾಶನದ ಪ್ರಕಟಣೆ. ತನ್ನ ಮೊದಲ ಕಥಾ ಸಂಕಲನಕ್ಕೆ ಚದುರಂಗ ಪ್ರಶಸ್ತಿ ಪಡೆದ ಹೆಮ್ಮೆ ಬಷೀರ್ ಅವರದ್ದು. ಬಷೀರ್ ಪತ್ರಿಕೋದ್ಯಮದ ಗಿರನಿಯಲ್ಲಿದ್ದೂ ಸೂಕ್ಷ್ಮ ಸಂವೇದನೆಯನ್ನು ಉಳಿಸಿಕೊಂಡವರು. ಕಡಲತಡಿಯ ಹೊಸ ತಲೆಮಾರಿನ ವಿಮರ್ಶಕ ನರೇಂದ್ರ ಪೈ ಅವರು ಬಷೀರ್ ಕಥಾ ಸಂಕಲನವನ್ನು ನೋಡಿರುವ ಬಗೆ ಇಲ್ಲಿದೆ.
ಇದೊಂದು ಪುಟ್ಟ ಪುಸ್ತಕ. ಐವತ್ತು ಅರವತ್ತು ಪುಟಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದವೆಲ್ಲ ಪುಟ್ಟ ಪುಟ್ಟ ಕಥೆಗಳೇ. ಈ ಪುಸ್ತಕ ಕೂಡ ಸಾಹಿತ್ಯದ ವಲಯದಲ್ಲಿ ಪ್ರಚಲಿತವಿರುವ ಸದ್ದುಗದ್ದಲ ಎಬ್ಬಿಸಿದಂತಿಲ್ಲ. ಅದೇ ರೀತಿ ತಣ್ಣಗೇ ಮನಸ್ಸನ್ನು ಆವರಿಸುವ ಇಲ್ಲಿನ ಏಳು ಕಥೆಗಳು ನಮ್ಮನ್ನು ನಿಜಕ್ಕೂ ಚಕಿತಗೊಳಿಸುತ್ತವೆ. ಇಲ್ಲಿನ ಕತೆಗಳ ಹಂದರ, ಆಪ್ತ ನಿರೂಪಣೆ, ಜಾಣತನವನ್ನು ಮರೆಮಾಚದ ತಾಂತ್ರಿಕ ಕಲೆಗಾರಿಕೆ, ಸಹಜವಾಗಿ ಒಂದು ವಾತಾವರಣವನ್ನು ತನ್ನ ಕತೆಯ ಸುತ್ತ ನಿರ್ಮಿಸಿಕೊಳ್ಳುವ ಸರಳ ಶೈಲಿ, ಎಲ್ಲವನ್ನೂ ಮೀರಿಸುವ ಮಾನವೀಯ ಕಳಕಳಿಯ ತುಡಿತ ಯಾರನ್ನೂ ಸೆಳೆಯುವಂತಿವೆ. ಈ ಪುಸ್ತಕದ ಹೆಸರೇ ಮುದ್ದಾಗಿದೆ, ಬಾಳೆಗಿಡ ಗೊನೆಹಾಕಿತು! ಕತೆಗಾರ ಬಿ.ಎಂ.ಬಶೀರ್.
ಈ ಸಂಕಲನದ ಮೊದಲ ಕತೆ ಮಸೀದಿಯ ಅಂಗಳ ಬಹುಷಃ ಕತೆಯಾಗುವ ಅಥವಾ ಕಾದಂಬರಿಯಾಗುವ ಒಂದು ಸುಪ್ತ ಉದ್ದೇಶ ಇಟ್ಟುಕೊಂಡೇ ಹೊರಟ ಕಥಾನಕದಂತಿಲ್ಲ. ಬಾಲ್ಯದ ನೆನಪುಗಳ, ಸ್ಮೃತಿಗಳ ಮೆಲುಕಾಟದಂತೆ ತೊಡಗುವ ಈ ಎಲ್ಲ ವಿವರಗಳು ಕ್ರಮೇಣ ಹಲವು ಕತೆಗಳ ಒಡಲಾಗುತ್ತ, ಬೆಳೆಯುತ್ತ ಹೋಗುತ್ತದೆ. ಮಗುವಿನ ಕಣ್ಣುಗಳಿಂದ ಹಿರಿಯರ ಬದುಕಿನ ದುರಂತಗಳನ್ನು ಮುಗ್ಧವಾಗಿ ಕಟ್ಟಿಕೊಡುವ ಕತೆಗಳು ಕನ್ನಡಕ್ಕೆ ಹೊಸತೇನಲ್ಲ. ಆದರೆ ಇಲ್ಲಿ ಅಂಥ ಯೋಜಿತ ಉದ್ದೇಶ, ಕ್ರಿಯೆ ಎರಡೂ ಇಲ್ಲ. ಕತೆಯ ಕೊನೆಗೆ (ಕೊನೆಯೆಂಬುದು ಇದೆಯೆ, ಇಂಥ ಕತೆಗಳಿಗೆ?) ಈ ವಿವರಗಳಿಗೆಲ್ಲ ಒಂದು ಆಕಾರ ನೀಡಲು ಬಶೀರ್ ಪ್ರಯತ್ನಿಸಿದಂತಿದೆ. ಈ ಪ್ರಯತ್ನ ಕೂಡ ಅತ್ಯಂತ ಸಹಜವಾಗಿ, ಅಪ್ರಯತ್ನ ಎಂಬಂತಿರುವುದು ವಿಶೇಷ. ತಮ್ಮ ಪ್ರೀತಿಯ ಆಟದ ಅಂಗಳವಾಗಿದ್ದ, ಮದರಸಾದ ಕಠಿಣ ಕಲಿಕೆಯ ಶಿಸ್ತಿನಿಂದ ಆಚೆ ಒಂದಿಷ್ಟು ಸ್ವಾತಂತ್ರ್ಯದ ಆಕಾಶವನ್ನು ಒದಗಿಸುತ್ತಿದ್ದ ಮೈದಾನವಾಗಿದ್ದ, ಪ್ರೀತಿಯ ನೇರಳೆ ಮರದ ನೆರಳ ತಾವಾಗಿದ್ದ ಜಾಗ ಕ್ರಮೇಣ ಕಬರಸ್ಥಾನವಾಗುವುದನ್ನು, ಅದಕ್ಕಾಗಿ ಸವಿ-ಒಗರು ನೆನಹುಗಳ ಹಲವಾರು ಕಲರವಗಳನ್ನು ಹೊತ್ತ ನೇರಳೆ ಮರವನ್ನೂ ಕಡಿಯಬೇಕಾಗಿ ಬರುವುದನ್ನು, ಒಂದಲ್ಲಾ ಒಂದು ಕಾಲಕ್ಕೆ ಚಟುವಟಿಕೆಯ ಬುಗ್ಗೆಗಳಂತೆ ಅಲ್ಲೇ ಓಡಾಡಿಕೊಂಡಿದ್ದ ಪುಟ್ಟ ಮಕ್ಕಳೇ ಅಲ್ಲಿ ಹೆಣವಾಗಿ ಮಲಗುವುದನ್ನು, ಅದನ್ನು ಉಳಿದವರು ಕಾಣಬೇಕಾಗುವುದನ್ನು ಹಂತ ಹಂತವಾಗಿ ಚಿತ್ರಿಸುತ್ತ ಮಸೀದಿಯ ಅಂಗಳ ಸವಿನೆನಪುಗಳ ಪೊರೆ ಕಳಚಿಕೊಂಡು ವಿಷಾದದ ಕಹಿ ನೆನಪುಗಳ ಮೈತೋರುತ್ತದೆ.
ಉಮ್ಮಾ ಕತೆ ಅತ್ಯಂತ ಕೌಶಲದ, ಕತೆಗಾರರ ಪ್ರಾಮಾಣಿಕ ಪೋಷಣೆ ಪಡೆದ ಒಂದು ಉತ್ತಮ ಕತೆ. ವಸ್ತುವಿನ ಮಟ್ಟಿಗೆ ಅಂಥ ವಿಶೇಷ ಇಲ್ಲಿದೆ ಎನ್ನಲಾಗದಾದರೂ ಇದೇ ಬಗೆಯ ವಸ್ತು ಕನ್ನಡದ ಅನೇಕ ಕಥೆಗಾರರಲ್ಲಿ ಹೇಗೆಲ್ಲ ಅಭಿವ್ಯಕ್ತಿ ಪಡೆದಿದೆ ಎನ್ನುವುದನ್ನು ಗಮನಿಸುವಾಗ ವಿಶೇಷ ಮಹತ್ವ ಪಡೆಯುತ್ತದೆ. ಹೆತ್ತ ಮಗನ ಸಾವಿನ ನಂತರ ಮಗನ ಮಡದಿಯ ವಿಷಯದಲ್ಲಿ ಮಾವನಾದವ ನಡೆದುಕೊಳ್ಳುವ ಬಗೆಯನ್ನು ಕುರಿತೇ ನಮ್ಮಲ್ಲಿ ಹಲವು ಕತೆಗಳು ಬಂದಿವೆ. ಮಗನಿಗಿಂತ ಕಿರಿಯಳಾದ ಎರಡನೆಯ ಹೆಂಡತಿಯನ್ನು ಮನೆತುಂಬಿಸಿಕೊಂಡ ತಂದೆ ಅಥವಾ ಬೆಳೆದ ಮಗನ ಎದುರೇ ಇನ್ನೊಬ್ಬಳನ್ನು ಇಟ್ಟುಕೊಂಡು ಊರೆಲ್ಲ ಗುಲ್ಲು ಮಾಡಿಕೊಂಡ ತಂದೆಯ ಕತೆ – ತಂದೆ ಮಗನ ಸಂಬಂಧವನ್ನು ಒರೆಗೆ ಹಚ್ಚುವುದನ್ನು ಕಂಡಿದ್ದೇವೆ. ಇದೇ ರೀತಿ ತಾಯಿ ಮಗಳ ಅಥವಾ ತಂದೆ ಮಗಳ ನಡುವಿನ ಒಳತೋಟಿಗಳನ್ನು ಮೀಟುವ ಕತೆಗಳೂ ಕನ್ನಡದಲ್ಲಿವೆ. ಇಲ್ಲಿ ಅಪ್ಪ ಎರಡನೆ ಮದುವೆ ಮಾಡಿಕೊಂಡು ಮನೆತುಂಬಿಸಿಕೊಳ್ಳುವ ಹುಡುಗಿ, ಚಿಕ್ಕಮ್ಮ ಎನಿಸಿಕೊಳ್ಳಲು ತಯಾರಾದ ಹುಡುಗಿ, ಮಗನ ಪತ್ನಿಯಾಗಲು ಯೋಗ್ಯಳಾದ ಒಬ್ಬಳು ಕನ್ಯೆ. ಇದು ತೀರಿಕೊಂಡ ತನ್ನ ಪ್ರೀತಿಯ ಉಮ್ಮಾಳ ನೆನಪಿನಲ್ಲಿ ಇನ್ನೂ ಹೊಯ್ದಾಡುತ್ತಿರುವ ಯುವಕನಲ್ಲಿ ಉಂಟು ಮಾಡುವ ತಲ್ಲಣಗಳು, ಅಪ್ಪ ಮಗನ ಸಂಬಂಧದಲ್ಲಿ ಕಾಣಿಸಿಕೊಳ್ಳುವ ಮೌನದ ಗೋಡೆಗಳು, ಅದರ ನಡುವಿನ ಬಿರುಕುಗಳು ಎಲ್ಲ ಕತೆಯಲ್ಲಿ ನವಿರಾಗಿ, ಅತ್ಯಂತ ಸಾವಧಾನವಾಗಿ ಮೂಡಿರುವುದು ಗಮನಾರ್ಹ.
ಬಾಳೆಗಿಡ ಗೊನೆಹಾಕಿತು ಕೊಂಚ ವಾಗ್ ವೈಭವಕ್ಕೆ ಅಗತ್ಯಕ್ಕಿಂತ ಹೆಚ್ಚೇ ಮನಸೋತಿದೆ ಅನಿಸಿದರೂ ಕತೆಯ ಉತ್ತರಾರ್ಧ ಅಗತ್ಯವಾದ ಬಿಗಿಯನ್ನು ಮೈಗೂಡಿಸಿಕೊಂಡು ಮನಸ್ಸಿಗಿಳಿಯುವ ಅಂತ್ಯದಿಂದ ಮನಗೆಲ್ಲುತ್ತದೆ. ಕೆ ಸದಾಶಿವರ ನಲ್ಲಿಯಲ್ಲಿ ನೀರು ಬಂದಿತು ಮಾದರಿ ನಮ್ಮ ಬಹುತೇಕ ಎಲ್ಲ ಯುವ ಕತೆಗಾರರನ್ನು ಸೆಳೆದಿರುವುದು ಕುತೂಹಲಕರ!
ಬಶೀರ್ ಇನ್ನಷ್ಟು ಕತೆಗಳನ್ನು ಬರೆಯಬೇಕಿತ್ತು ಅನಿಸುವಾಗಲೇ ಸುದ್ದಿಮನೆಯ ಕತೆಗಳ ನಡುವೆ ಅವರು ಕಳೆದೇ ಹೋದಂತಿದ್ದಾರೆ. ಅವರು ಮತ್ತೆ ಕತೆಗಳನ್ನು ಬರೆಯಬೇಕು, ಅವರ ಸಂಕಲನ ಬರಬೇಕು ಅನಿಸುವಂತೆ ಮಾಡುತ್ತದೆ ಈ ಬಾಳೇ ಗಿಡ.

‍ಲೇಖಕರು avadhi

April 9, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This