ಬಿಂದುಮಾಲಿನಿ ಸಿಕ್ಕರು…

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.

ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು.

|ಕಳೆದ ಸಂಚಿಕೆಯಿಂದ|

ನಮ್ಮ ಸಿನೆಮಾದ ಸಂಗೀತ ನಿರ್ದೇಶಕರು ಬಿಂದು ಮಾಲಿನಿ ಸಿಕ್ಕಿದ್ದೇ ಆಕಸ್ಮಿಕ. ನಾತಿಚರಾಮಿಯ ಒಟ್ಟಾರೆ ಪ್ರಸ್ತುತಿಯನ್ನು ಮೆಟ್ರೋ ಸಿಟಿಯ ಚೌಕಟ್ಟಿನಲ್ಲಿ ಕಟ್ಟಬೇಕೆಂದು ನಿರ್ಧಾರವಾಗಿತ್ತು. ಅದಕ್ಕೆ ಪೂರಕವಾಗಿಯೇ ಗೌರಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹುಡುಗಿ, ಸುರೇಶನಿಗೆ, ಸಿವಿಲ್ ಇಂಜಿನಿಯರ್ ಕೆಲಸ. ಇದಕ್ಕೆ ಪೂರಕವಾಗಿ ಹಿನ್ನೆಲೆ ಸಂಗೀತವೂ ಇರಬೇಕು. ಅದು ಹೊಸತನದಿಂದ ಕೂಡಿರಬೇಕು ಎಂಬುದು ಪೂರ್ವ ನಿರ್ಧಾರಿತವಾಗಿತ್ತು. ಇದಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂದೆಲ್ಲಾ ಚರ್ಚಿಸುತ್ತಿರುವಾಗ ಶೃತಿ ಹರಿಹರನ್ ಅವರು ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕರನ್ನು ಸೂಚಿಸಿದರು. ಅವರ ಸಂಯೋಜನೆಗಳು ನನಗೂ ಇಷ್ಟವಾಗುತ್ತಿದ್ದ ಕಾರಣದಿಂದಾಗಿ, ಅವರನ್ನು ಭೇಟಿಯಾಗಿ ನಮ್ಮ ಕಥೆ ಎಲ್ಲಾ ವಿವರಿಸಿ, ನಮ್ಮ ಸಿನೆಮಾಗೆ ನಾಲ್ಕು ಅಥವಾ ಐದು ಹಾಡುಗಳು ಜೊತೆಗೆ ಮುಖ್ಯವಾಗಿ ಹಿನ್ನೆಲೆ ಸಂಗೀತವನ್ನು ವಿನ್ಯಾಸಗೊಳಿಸಬೇಕೆಂದು ಕೋರಿದೆವು.

ಅವರಿಗೆ ಕಥೆಯೂ ತುಂಬಾ ಮೆಚ್ಚುಗೆಯಾಯ್ತು. ಆದರೆ ಅವರ ಬಡ್ಜೆಟ್ ನಮಗೆ ಎಟುಕದ್ದಾಗಿತ್ತು. ನಾನು ಮೊದಲೇ ಪ್ರತಿ ವಿಭಾಗಕ್ಕೂ ಇಂತಿಷ್ಟು ಎಂದು ಮೊದಲೇ ನಿಗಧಿ ಮಾಡಿದ್ದೆ. ಅದನ್ನೇ ನಿರ್ಮಾಪಕರಿಗೂ ಕೊಟ್ಟಿದ್ದೆ. ಆದರೆ ಆ ಸಂಗೀತ ನಿರ್ದೇಶಕರು ನನ್ನ ಮಿತಿಯ ನಾಲ್ಕು ಪಟ್ಟು ಕೊಟ್ಟರೆ ಮಾತ್ರ ಮಾಡುವುದಾಗಿ ಹೇಳಿದರು. ನನಗೋ ಅದು ಅಷ್ಟು ಸಾಧ್ಯವೇ ಇರಲಿಲ್ಲಾ. ಕೊನೆಗೆ ವಿಧಿಯಿಲ್ಲದೇ ಅವರನ್ನು ಬಿಟ್ಟು ಬೇರೆಯವರನ್ನು ಹುಡುಕುವ ನಿರ್ಧಾರ ಮಾಡಿದೆ.

ನಮ್ಮಲ್ಲಿ ಹೊಸ ಸಂಗೀತ ನಿರ್ದೇಶಕರು ಸಾಕಷ್ಟು ಜನರಿದ್ದಾರೆ. ಆದರೆ ಅವರ ಹಿಂದಿನ ಸಿನೆಮಾ, ಕಿರುಚಿತ್ರಗಳನ್ನು ನೋಡಿದರೆ ನನಗೆ ಬೇಕಾದ sensitivity ಅವರ ಕೃತಿಗಳಲ್ಲಿ ಕಂಡು ಬರುತ್ತಿರಲಿಲ್ಲಾ. ಹುಡುಕಾಟವಂತೂ ಮುಂದುವರೆದಿತ್ತು.

ಆಗೊಂದು ದಿನ ಮತ್ತೆ ಶೃತಿ ಅವರೇ ಕರೆ ಮಾಡಿ, ಸರ್ ಒಬ್ರು ಮ್ಯೂಸಿಕ್ ಡೈರೆಕ್ಟರ್ ಇದ್ದಾರೆ. ತುಂಬಾ ಚೆನ್ನಾಗಿ ಕಂಪೋಸ್ ಮಾಡ್ತಾರೆ, ಒಮ್ಮೆ ಭೇಟಿ ಮಾಡ್ತೀರಾ ಅಂತ ಕೇಳಿದ್ರು. ಯಾರವರು ಅಂತಂದೆ. ಬಿಂದು ಮಾಲಿನಿ ಅಂತ ಅವರ ಹೆಸರು, ಈಗ ರಿಲೀಸ್ ಆಗಿರೋ ‘ಅರುವಿ’ ಸಿನೆಮಾಗೆ ಅವರೇ ಕಂಪೋಸ್ ಮಾಡಿರೋದು. ಜೊತೆಗೆ ತುಂಬಾ ಚೆನ್ನಾಗಿ ಹಾಡ್ತಾರೆ ಕೂಡ. ಟ್ರೈ ಮಾಡಿ ಸರ್ ಅಂತಂದ್ರು. ನನಗೋ ಜಸ್ಟ್ ಹುಟ್ಟಿದ ಆಸಕ್ತಿ ಕೂಡಲೇ ಠುಸ್ ಅಂತು. ಕಾರಣ ತಮಿಳು ಸಿನೆಮಾದ ಮ್ಯೂಸಿಕ್ ಡೈರೆಕ್ಟರ್ ನಮ್ಮ ಸಿನೆಮಾಗೆಲ್ಲಿ ಮಾಡ್ತಾರೆ. ಮಾಡಿದ್ರು ಸಿಕ್ಕಾಪಟ್ಟೆ ಬಡ್ಜೆಟ್ ಕೇಳ್ತಾರೆ. ನಮ್ ಹತ್ರ ಅಷ್ಟಿಲ್ಲವಲ್ಲಾ ಅಂತಾ ಬೇಸರದಿಂದಲೇ ಈ ವಿಷಯ ಅವರಿಗೆ ಹೇಳಿದೆ. ಅವರು ನಕ್ಕು, ಸರ್ ಅವರು ತಮಿಳಿನವರೇ ಆದ್ರು, ಈಗ ಅರ್ಧ ಕನ್ನಡಿಗರು, ಬೆಂಗಳೂರಲ್ಲೇ ಇರೋದು.

ವಾಸು ದೀಕ್ಷಿತ್ ಅವರ ಹೆಂಡತಿ, ಕನ್ನಡ ಚೆನ್ನಾಗಿ ಮಾತಾಡ್ತಾರೆ, ನಮ್ ವಿಜ್ಞೇಶ್ (ಶೃತಿ ಮ್ಯಾನೇಜರ್) ಮೊದಲು ಅವರ ಈವೆಂಟ್ಸ್ ಡೇಟ್ಸ್ ನೋಡ್ಕೊಳ್ತಾ ಇದ್ದದ್ದು, ಬಡ್ಜೆಟ್ ಕೂಡ ನಮ್ ಮಿತಿಗೆ ಒಪ್ಪಿದ್ರು ಒಪ್ತಾರೆ ಅಂತಂದ್ರು. ಯಾವಾಗ ಕನ್ನಡ ಬರುತ್ತೆ, ಬೆಂಗಳೂರಲ್ಲೇ ಇರೋದು ಅಂತ ಕಿವಿಗೆ ಬಿದ್ದ ತಕ್ಷಣ ಮತ್ತೆ ಖುಷಿ ಜಾಸ್ತಿ ಆಯ್ತು. ಸರಿ ಮೇಡಂ, ಅವರ ಸಿನೆಮಾ ಹಾಡುಗಳನ್ನು ಒಮ್ಮೆ ಕೇಳ್ತೀನಿ, ಕೇಳ್ಬಿಟ್ಟು ನಿಮಗೆ ಹೇಳ್ತೀನಿ ಅಂತ ಹೇಳಿ, ಯ್ಯೂಟ್ಯೂಬಲ್ಲಿ ಅರುವಿ ಸಿನೆಮಾದ ಹಾಡುಗಳನ್ನು ಜ್ಯೂಕ್ಬಾಕ್ಸ್ ಅಲ್ಲಿ ಪ್ಲೇ ಮಾಡ್ಕೊಂಡು ಕೂತೆ. ಆ ಹಾಡುಗಳು ಅದೆಷ್ಟು ಮಧುರ ಹಾಗೂ ಹೊಸತನದಿಂದ ಕೂಡಿದ್ವು, ಅದೆಷ್ಟು ನನ್ನ ಇಂಪ್ರೆಸ್ ಮಾಡ್ತು ಅಂದ್ರೆ, ಹೇಗಾದ್ರು ಮಾಡಿ ಇವರನ್ನ ಒಪ್ಪಿಸ್ಲೇ ಬೇಕು.

ನಮ್ ಬಡ್ಜೆಟ್ಟಿಗೆ ಇವರು ಒಪ್ಲಿಲ್ಲಾ ಅಂದ್ರೆ ಕಾಲಿಗೆ ಸೀದಾ ಡೈ ಹೊಡೆದಾದ್ರು ಒಪ್ಸೋಣ ಅಂತ ಮನಸ್ಸಲ್ಲೇ ಡಿಸೈಡ್ ಮಾಡಿ, ಶೃತಿ ಅವರಿಗೆ ಕಾಲ್ ಮಾಡಿ ನಂಬರ್ ತೆಗೆದುಕೊಂಡು ಕಾಲ್ ಮಾಡಿದೆ, ಅತ್ತ ಕಡೆಯಿಂದ ಧ್ವನಿ ಕೇಳಿದ ಕೂಡಲೇ ಏನೋ ಒಂತರಾ ಖುಷಿ, ಸ್ಪಷ್ಟವಾದ ಕನ್ನಡ (ಅವತ್ತಿಗೆ) ಅಲ್ಲದಿದ್ದರೂ, ಅವರ ಮಾತುಗಳಲ್ಲೇ ಒಂದು ಸಂಗೀತವಿತ್ತು.

ನನ್ನ ಪೂರ್ವಾಪರ ಎಲ್ಲಾ ಹೇಳಿ, ಕಾಲ್ ಮಾಡಿದ ಉದ್ಧೇಶವನ್ನು ಅವರಿಗೆ ತಿಳಿಸಿ ಭೇಟಿ ಮಾಡಲು ಸಮಯ ಕೇಳಿದೆ.  ಅವರು ಮರುದಿನ ಸಿಗುವುದಾಗಿ ಹೇಳಿದರು. ಅವರು ತಿಳಿಸಿದ ಸಮಯಕ್ಕೆ ಅವರ ಮನೆಗೆ ಹೋದೆ. ಮನಸೊಳಗೆ ಸ್ವಲ್ಪ ಅಳುಕಿತ್ತು, ತಮಿಳು ಸಿನೆಮಾ ಮಾಡಿದವರಿಗೆ ನಾನು ಕಥೆ ಹೇಳುವುದು ಇಷ್ಟ ಆಗುತ್ತೋ ಇಲ್ವೋ, ಏನು ಹೇಳ್ತಾರೋ ಅಂತೆಲ್ಲಾ ಡೌಟಲ್ಲೇ ಹೋದೆ. ಅವರಂತೂ ಈಗಾಗಲೇ ಹಲವಾರು ಬಾರಿ ಭೇಟಿ ಮಾಡಿದವರನ್ನು ಮಾತನಾಡಿಸುವಂತೆ ಮಾತಾಡುತ್ತಾ, ಮನೆಯ ಒಳಗೆ ಕರೆದುಕೊಂಡು ಹೋಗಿ ಕೂರಿಸಿ, ಟೀ ತಂದು ಕೊಟ್ಟರು.

ಟೀ ಕುಡಿಯುತ್ತಾ ವಿಷಯ ಪ್ರಸ್ತಾಪ ಮಾಡಿದೆ. ಮೊದಲಿಗೆ ನಾನು ಬಡ್ಜೆಟ್ ಮಿತಿಯನ್ನು ಹೇಳಿದೆ. ಯಾಕೆಂದರೆ, ಕಥೆ ಎಲ್ಲಾ ಹೇಳಿದ ಮೇಲೆ ಅವರು ನನ್ನ ಬಡ್ಜೆಟ್ ಕೇಳಿ ಆಗುವುದಿಲ್ಲಾ ಎಂದು ಹೇಳುವುದು ಬೇಡ. ಮೊದಲೇ ಅವರ ಮೈಂಡಲ್ಲಿ ಈ ಮಿತಿಯ ಬಗ್ಗೆ ಒಂದು ಸ್ಪಷ್ಟನೆ ಇದ್ದರೆ ಒಳ್ಳೆಯದು ಎಂದು ನನ್ನ ಭಾವನೆಯಾಗಿತ್ತು. ಅವರು ಬಡ್ಜೆಟ್ ಬಗ್ಗೆ ಆಮೇಲೆ ಮಾತಾಡೋಣ ಮೊದಲು ಕಥೆ ಹೇಳಿ ಎಂದು ತಣ್ಣಗೆ ಹೇಳಿದ್ರು. ಸರಿ ಎಂದು ಕಥೆ ಹೇಳಲು ಪ್ರಾರಂಭಿಸಿ, ಪೂರ್ತಿ ಕಥೆಯನ್ನು ಬಹುತೇಕ ವಿವರವಾಗಿಯೇ ಹೇಳಿದೆ. ಹೇಳಿದ ಮೇಲೆ ಅವರು ಎಷ್ಟು ಹಾಡುಗಳು ಹಾಗೂ ಎಲ್ಲಿ ಹಾಡು ಬರುತ್ತವೆ ಎಂದು ಕೇಳಿದರು.

ನಾನು ಕಥೆಯಲ್ಲಿ ನಿರ್ಧಿಷ್ಟವಾಗಿ ಇಂತಹ ಜಾಗದಲ್ಲಿ ಬರುತ್ತೆ, ಹಾಡುಗಳು ಕೇವಲ ಹಾಡುಗಳಾಗಿರುವುದಿಲ್ಲಾ, ಅವು ಆ ಭಾಗದ ಕತೆಯನ್ನು ಮುಂದುವರೆಸುತ್ತಾ ಕಥೆಯ ಆಶಯವನ್ನು, ನಾಯಕಿ, ನಾಯಕನ ಮನಸ್ಸಿನೊಳಗಿನ ಭಾವನೆಗಳನ್ನು ವ್ಯಕ್ತಪಡಿಸುವ ಹಾಡುಗಳಾಗಿರುತ್ತವೆ, ಎಂದೆಲ್ಲಾ ವಿವರಿಸಿ, ನನ್ನ ಮತ್ತೊಂದು ಕೋರಿಕೆ ಅವರಿಗೆ ತಿಳಿಸಿದೆ, ಮೊದಲ ಹಾಡನ್ನು ಹೊರತು ಪಡಿಸಿ, ಉಳಿದ ಹಾಡುಗಳನ್ನು ಫೈನಲ್ ಟ್ಯೂನ್ ನಂತೆ ಕಂಪೋಸ್ ಮಾಡುವುದು ಬೇಡ, ಆ ಮೂಡ್ ಹೇಳುವಂತಿರಲಿ, ಅದಕ್ಕೆ ಪೂರಕವಾಗಿ ಚಿತ್ರೀಕರಣ ಮಾಡಿಕೊಳ್ಳುತ್ತೇನೆ. ಆಮೇಲೆ ದೃಶ್ಯಗಳ ಸಂಯೋಜನೆ ನೋಡಿಕೊಂಡು ಸಾಹಿತ್ಯ ರಚಿಸೋಣ ಎಂದು ಹೇಳಿದೆ. ಅದಕ್ಕವರು ಒಪ್ಪಿದರು. ಮತ್ತೆ ಬಡ್ಜೆಟ್ಟಿನ ವಿಷಯ ಪ್ರಸ್ತಾಪಿಸಿದೆ. ನಿಮ್ಮ ಬಡ್ಜೆಟ್ಟಿನಲ್ಲಿ ನಾವಿಬ್ಬರೂ ಕೆಲಸ ಮಾಡುವುದು ಕಷ್ಟ (ವೇದಾಂತ್ ಭರದ್ವಾಜ್ ಹಾಗೂ ಬಿಂದುಮಾಲಿನಿ ಇಬ್ಬರೂ ಸೇರಿ ಅರುವಿಗೆ ಸಂಗೀತ ಸಂಯೋಜಿಸಿರುವುದು) ಈ ಕಥೆ ನನಗೆ ಇಷ್ಟವಾಗಿದೆ, ನಿಮಗೆ ಅಭ್ಯಂತರವಿಲ್ಲವೆಂದರೆ ಈ ಸಿನೆಮಾಗೆ ನಾನೊಬ್ಬಳೇ ಕೆಲಸ ಮಾಡುತ್ತೇನೆ.

ಈ ಹಿಂದೆ ಒಂದು ಕನ್ನಡ ಸಿನೆಮಾಗು ನಾನೊಬ್ಬಳೇ ಕೆಲಸ ಮಾಡಿದ್ದೆ ಎಂದು ಹೇಳಿದರು. ಈಗಾಗಲೇ ಕನ್ನಡ ಸಿನೆಮಾ ಮಾಡಿದ್ದೀರಾ? ಯಾವುದು? ನನ್ನ ಪ್ರಶ್ನೆ. ಅನನ್ಯ ಕಾಸರವಳ್ಳಿ ಅವರ ‘ಹರಿ ಕಥಾ ಪ್ರಸಂಗ’ ನನಗೋ ಸರ್ಪ್ರೈಸ್ ಆಗಿತ್ತು. ಆ ಸಿನೆಮಾದ ಹಿನ್ನೆಲೆ ಸಂಗೀತ ನನಗೆ ತುಂಬ ಇಷ್ಟವಾಗಿತ್ತು. ಅದೂ ಇವರ ಕೆಲಸ ಅಂತ ತಿಳಿದಾಗ, ಓಕೆ ನಾನು ಬಂದಿರುವ ಅಡ್ರೆಸ್ ಸರಿಯಾಗಿದೆ ಎಂದು ನಂಬಿಕೆ ಬಂತು. ಆಗ ಹಿನ್ನೆಲೆ ಸಂಗೀತದ ಬಗ್ಗೆ ಚರ್ಚೆ ಬಂತು, ನನ್ನ ಬೇಡಿಕೆಗಳನ್ನೆಲ್ಲಾ ತಿಳಿಸಿ, ಕೊನೆಯಲ್ಲಿ ಮುಖ್ಯವಾದದ್ದನ್ನು ಅವರಿಗೆ ಹೇಳಿದೆ.

ಯಾವುದೇ ಕಾರಣಕ್ಕು ನನಗೆ ಹಿನ್ನೆಲೆ ಸಂಗೀತ ಕೇಳಿಸಬಾರದು ಅಂತಂದೆ. ಹಿಂದೊಮ್ಮೆ ಇದೇ ಮಾತನ್ನ ನಿರ್ಮಾಪಕರೊಬ್ಬರ ಬಳಿ ಹೇಳಿದ್ದೆ, ಅದಕ್ಕವರು, ಮೊದಲು ಹೋಗಿ ಸಿನೆಮಾ ಬಗ್ಗೆ, ಸಿನೆಮಾ ಮಾಡೋದರ ಬಗ್ಗೆ ಕಲಿತುಕೊಂಡು, ತಿಳಿದುಕೊಂಡು ಬಾ ಎಂದು ಕಳಿಸಿದ್ದರು. ಇವರೇನು ಹೇಳ್ತಾರೋ ಎಂದು ಅವರ ಮುಖವನ್ನೇ ನೋಡ್ತಿದ್ದೆ. ಬಿಂದು ಮೇಡಂ ಹತ್ತು ಸೆಕೆಂಡ್ ತಡೆದು, ಸರಿ ಆಯ್ತು, ಅಂತಂದ್ರು. ನನಗೆ ಇನ್ನೂ ಖುಷಿ. ನನ್ನ ಬೇಡಿಕೆ ಏನೆಂಬುದನ್ನು ಅವರು ಸರಿಯಾಗಿ ಗ್ರಹಿಸಿದ್ದಾರೆ ಎನ್ನುವುದೇ ನನಗೆ ಹೆಚ್ಚು ಖುಷಿ ಕೊಟ್ಟಿದ್ದು.

ನನ್ನ ಪ್ರಕಾರ ಒಂದೊಳ್ಳೆಯ ಸಿನೆಮಾ ಎಂದರೆ, ನಟರ ನಟಿಸುತ್ತಿದ್ದಾರೆ ಎಂದು ಅನಿಸಬಾರದು, ಕ್ಯಾಮೆರಾ ಆಂಗೆಲ್, ಫ್ರೇಮ್ ಗಮನಕ್ಕೆ ಬರಬಾರದು, ಎಡಿಟಿಂಗ್ ಕಟ್ ಗೊತ್ತಾಗಬಾರದು, ಸಂಗೀತ ಕೇಳಿಸಬಾರದು, ಆದರೆ ಇವೆಲ್ಲವೂ ಪರಿಪಕ್ವವಾಗಿ ಕೆಲಸ ಮಾಡಿ ಕಥೆಯೊಂದನ್ನು ತೆರೆಯ ಮೇಲೆ ಕಟ್ಟಿಕೊಡಬೇಕು.

ಮೊದಲ ವೀಕ್ಷಣೆಯಲ್ಲಿ ಪ್ರೇಕ್ಷಕ ಸಿನೆಮಾ ಆರಂಭದಿಂದ ಅಂತ್ಯದ ವರೆಗೂ ಕಥೆಯಲ್ಲೇ ಪ್ರಯಾಣ ಮಾಡಬೇಕು, ಸಿನೆಮಾ ಮುಗಿದು ಅವನಿಗೆ ಸಿನೆಮಾ ಇಷ್ಟ ಆದರೆ, ಯಾಕೆ ಇಷ್ಟ ಆಯ್ತು ಅಂತ ಕಾರಣ ಹುಡುಕಿದಾಗ ಈ ವಿವರಗಳೆಲ್ಲಾ ಗಮನಕ್ಕೆ ಬರಬೇಕು. ಅದು ಒಳ್ಳೆಯ ಸಿನೆಮಾ ಎಂದು ನನ್ನ ಅಭಿಪ್ರಾಯ. ಇಂದಿಗೂ ಟೈಟಾನಿಕ್ ಸಿನೆಮಾವನ್ನು ಎಷ್ಟು ಬಾರಿ ತಾಂತ್ರಿಕವಾಗಿ ಗಮನಿಸಲು ಪ್ರಯತ್ನಪಟ್ಟರೂ ಸಿನೆಮಾ ಆರಂಭವಾದ ಹತ್ತು ನಿಮಿಷದಲ್ಲಿ ನಾನು ಕಥೆಯಲ್ಲಿ ಮುಳುಗಿ ಹೋಗಿರುತ್ತೇನೆ. ಅದು ಒಳ್ಳೆಯ ಸಿನೆಮಾದ ಶಕ್ತಿ.

ಬಿಂದು ಮಾಲಿನಿ ಮೇಡಂ ನನ್ನ ಭಾವನೆಗಳನ್ನು ಅಷ್ಟು ಬೇಗ ಅರ್ಥ ಮಾಡಿಕೊಂಡಿದ್ದು, ನನಗೆ ಅರ್ಧ ಗೆಲುವು ಸಿಕ್ಕಂತಾಯಿತು. ಅವರೊಂದು ಪ್ರಶ್ನೆ ಕೇಳಿದರು, ಈ ಸಿನೆಮಾದ ಹಾಡುಗಳು ಹೀಗೆ ಬರಬೇಕು ಎಂದು ಏನಾದರು ರೆಫರೆನ್ಸ್ ಇಟ್ಕೊಂಡಿದೀರಾ ಅಂತ. ನಾನು ರೆಫರೆನ್ಸ್ ಇದೆ ಮೇಡಂ, ಆದರೆ ನಿಮಗೆ ಕೇಳಿಸೋದಿಲ್ಲಾ, ಕೇಳಿಸಿ ಆ ಹಾಡಿನ ಪ್ರಭಾವ ನಮ್ಮ ಸಿನೆಮಾದಲ್ಲಿ ಆಗುವುದು ಬೇಡ ಎಂದು ವಿನಂತಿಸಿಕೊಂಡೆ.

ಅದಕ್ಕವರು ನಗುತ್ತಾ, ಆತರದ ಪ್ರಭಾವ ಏನೂ ಆಗೋದಿಲ್ಲಾ, ನನಗೆ ನಿಮ್ಮ ಅಭಿರುಚಿಯ ಬಗ್ಗೆ ಒಂದು ಕ್ಲಾರಿಟಿಗಾಗಿ ಕೇಳಿದ್ದಷ್ಟೇ ಅಂತಂದ್ರು. ನಾನು ನನ್ನ ಮೆಚ್ಚಿನ ಮಲಯಾಳಂ ಸಿನೆಮಾದ ಒಂದು ಹಾಡನ್ನು ಕೇಳಿಸಿದೆ. ಅವರು ಒಳ್ಳೆಯ ಹಾಡು, ಆದರೆ ಸ್ವಲ್ಪ ಭಾವನೆಗಳನ್ನು ಒತ್ತಿ ಹೇಳಿದ್ದಾರೆ. ನಿಮಗೂ ಹೀಗೆ ಬೇಕಾ, ಹೀಗೆ ಬಂದರೆ ಅದು ಸ್ವಲ್ಪ ನಾಟಕೀಯತೆ ಆಗ್ಬಿಡುತ್ತೆ.

ಭಾವ ಸಹಜವಾಗಿರುವಂತೆ ಮಾಡೋಣ ಅಂತಂದ್ರು. ನನಗೆ ಮನಸ್ಸಲ್ಲಿ ‘ಇಷ್ಟೆಲ್ಲಾ ಚರ್ಚೆ ಮಾಡಿದ್ದಾರೆ ಅಂತಂದ್ರೆ, ಪ್ರಾಜೆಕ್ಟ್ ಇವರಿಗೆ ಒಪ್ಪಿಗೆ ಆದಂತಾಯ್ತು, ಎಂಬ ಕ್ಲಾರಿಟಿ ಸಿಕ್ರೂ ಯಾವುದಕ್ಕೂ ಒಮ್ಮೆ ಕೇಳಿಬಿಡೋದು ಉತ್ತಮ ಎಂದು ಅವರಲ್ಲಿ ಕೇಳಿದೆ, ಸೋ ಮೇಡಂ ನೀವು ಸಿನೆಮಾಗೆ ಕೆಲಸ ಮಾಡೋದು ಕನ್ಫರ್ಮ್ ಅಲ್ವಾ? ಅವರು ನನ್ ಕಡೆ ನೋಡಿ, ಎದ್ದು, ಸೀದಾ ಒಳಗೆ ಹೋದ್ರು, ನನಗೆ ಮತ್ತೆ ಚಿಂತೆ, ಇದೇನಪ್ಪಾ ಎಲ್ಲಾ ಸರಿ ಇತ್ತಲ್ಲಾ, ಕೊನೆಯಲ್ಲಿ ಇದೇನಾಯ್ತು ಅಂತ. ಅವರು ಒಳಗೆ ಹೋಗಿ, ತಮ್ಮ ಫೋನ್ ತೆಗೆದುಕೊಂಡು ಬಂದು ಅದರಿಂದ ಒಂದು ರಾಗವನ್ನು ಪ್ಲೇ ಮಾಡಿ, ಕಣ್ಮುಚ್ಚಿಕೊಂಡು ‘ಯಾವ ಜನ್ಮದ ಮೈತ್ರಿ ’ ಹಾಡನ್ನು ಅವರದೇ ಶೈಲಿಯಲ್ಲಿ ಹಾಡಲು ಆರಂಭಿಸಿದರು.

ಆ ಹಾಡನ್ನು ನಾನು ರೆಕಾರ್ಡಿಂಗ್ ಮಾಡಿಕೊಂಡೆ. ಅವರ ಹಾಡು ಅದೆಷ್ಟು, ಭಾವಪೂರ್ಣವಾಗಿತ್ತೆಂದರೆ, ಹಾಡು ಕೇಳುತ್ತಾ ನನ್ನ ನಾನೇ ಮರೆತು ಹೋದೆ ಆಕ್ಷಣದಲ್ಲಿ, ಅಷ್ಟು ಅದ್ಭುತವಾದ ಕಂಠ ಅವರದು, ಅಷ್ಟೇ ತನ್ಮಯತೆ, ಗಾನ ಗಂಧರ್ವಿ ಅವರು. ಹಾಡು ಮುಗಿದ ಮೇಲೆ ಸರಿ ಅಗ್ರಿಮೆಂಟ್ ಪೇಪರ್ಸ್ ರೆಡಿ ಮಾಡ್ಕೊಳ್ಳಿ ಸೈನ್ ಹಾಕ್ತೀನಿ ಅಂತಂದ್ರು. ನಾನು ಮೊದಲೇ ಹಾಡಿನ ನಶೆಯಲ್ಲಿದ್ದೆ. ಅವರು ಒಪ್ಪಿಗೆಯನ್ನು ಹಾಡಿನ ಮೂಲಕವೇ ಕೊಟ್ಟಿದ್ದರು. ಅವರಿಗೆ ಥ್ಯಾಂಕ್ಸ್ ಹೇಳಿ, ಎರಡು ಮೂರು ದಿನದಲ್ಲಿ, ಪೇಪರ್ಸ್ ರೆಡಿ ಮಾಡ್ಕೊಂಡು ಬರ್ತೀನಿ ಅಂತ ಹೇಳಿ, ಅವರು ಹಾಡಿದ ಹಾಡನ್ನು ಮೊಬೈಲ್ ಅಲ್ಲಿ ಪ್ಲೇಮಾಡ್ಕೊಂಡು, ಮತ್ತೆ ಮತ್ತೆ ಕೇಳುತ್ತಾ ಮನೆಗೆ ಹೊರಟೆ.

‍ಲೇಖಕರು ಮಂಸೋರೆ

February 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This