“ಬಿಚ್ಚಬೇಕಾದ ಕಟ್ಟಡಗಳು… ಆಲಿಸಬೇಕಾದ ದನಿಗಳು…”

door_number1423.jpg 

“ಡೋರ್ ನಂ 142”

ಬಹುರೂಪಿ

ತ ನನ್ನೆದುರು ಕುಳಿತಿದ್ದ. ಮುಖ ಬಾಡಿಹೋಗಿತ್ತು. ಚಿಂತೆಯ ಗೆರೆಗಳು ಮುಖವನ್ನು ಹೇಗೆಲ್ಲಾ ಕೊಚ್ಚಿಹಾಕಿಬಿಡಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದ. ಮಾತು ಆಡುವುದು ಇಷ್ಟು ಕಷ್ಟದ ಕೆಲಸ ಎಂದು ಅವನಿಗೆ ಅದುವರೆಗೆ ಗೊತ್ತಿರಲಿಲ್ಲ. ನಾನ್ಗೂ ಅಷ್ಟೆ, ಮಾತು ಆಡಿಸುವುದು ಎಂಬುದು ಬೆಟ್ಟಕ್ಕೆ ಬಂಡೆ ಹೊತ್ತಂತೆ ಎಂಬುದುಮೊದಲ ಬಾರಿಗೆ ಅರಿವಾಗಿತ್ತು. ಬಂಡೆಯನ್ನಾದರೂ ಮಾತಾಡಿಸಿಕೊಂಡು ಬರುತ್ತೇನೆ ಎನ್ನುವ ನಾನು ಸುಮ್ಮನೆ ಕುಳಿತಿದ್ದೆ.

ಆತ ಸುಂದರಾಂಗ. ಅವನ ಮುಖದಲ್ಲಿ ಸದಾ ಚಿಮ್ಮುತ್ತಿದ್ದ ಆ ಮುಗ್ಧ ನಗೆ, ಒಂದೇ ನೋಟಕ್ಕೆ ಇಷ್ಟವಾಗಿಬಿಡಬಲ್ಲ ಮೆದು ಮಾತು, ಸದಾ ನಗುವಿನ ಅಲೆಯ ಮಧ್ಯೆ ಇರುವ ಹುಡುಗ ಕೇವಲ ಎರಡು ವರ್ಷಗಳಲ್ಲಿ ಬದಲಾಗಿ ಹೋಗಿದ್ದ. ಅವನ ಇಡೀ ದೇಹವನ್ನಷ್ಟೆ ಅಲ್ಲದೆ ಮನಸ್ಸನ್ನೂ “ಚಿತ್” ಮಾಡಿಹಾಕಿದ್ದು ಅವನು ಹೇಳಿಕೊಳ್ಳಲಾಗದ ವಿಷಯಗಳು.

ಯಾಕೋ ಗೊತ್ತಿಲ್ಲ, ಹಗಲೂ ರಾತ್ರಿ ಸೆಕ್ಸ್ ಬೇಕು ಅನ್ನುತ್ತಾಳೆ. ಐದು ನಿಮಿಷ ಸಿಕ್ಕರೆ ಹಾಸಿಗೆ ಸಿದ್ಧ ಮಾಡುತ್ತಾಳೆ. ರಾತ್ರಿ ನಿದ್ದೆ ಅನ್ನುವುದು ಮರೆತು ವರ್ಷವಾಯಿತು. ಆಕೆ ಸೆಕ್ಸ್ ಮ್ಯಾನಿಯಾಕ್. ಆಕೆಗೆ ಗೊತ್ತಿರುವುದು ಒಂದೇ- ಬೇಕು, ಬೇಕು, ಇನ್ನೂ ಬೇಕು. ನಾನು ಮೆಷಿನ್ ಅಲ್ಲ. ಮನಸ್ಸು ಎಂಬುದು ಇಲ್ಲದೆ ಹಾಸಿಗೆಯಲ್ಲಿ ಹೊರಳಾಡುವುದಾದರೂ ಹೇಗೆ, ದಿನದ ೨೪ ಗಂಟೆಯೂ ಎಂದು ಕೇಳುತ್ತಿದ್ದ. ಆತನ ಮುಖದಲ್ಲಿದ್ದ ದುಗುಡ ಇನ್ನೇನು ಕಣ್ಣೀರಾಗಿ ಪರಿವರ್ತನೆ ಹೊಂದಲು ತಯಾರಿ ನಡೆಸಿತ್ತು.

ಬಹುಷಃ ಒಂದು ಐದು ವರ್ಷದ ಹಿಂದೆ ಇರಬೇಕು. ನನ್ನ ಗೆಳತಿಯೊಬ್ಬಳು ಅಂತರಂಗದ ಮಾತುಗಳನ್ನು ನನ್ನ ಮುಂದೆ ಬಿಚ್ಚಿಟ್ಟಿದ್ದಳು. ಇಲ್ಲ, ನನಗೆ ಹಾಸಿಗೆ ಅನ್ನೋದು ಕಂಡರೆ ಆಗಲ್ಲ. ಇನ್ನು ಮದುವೆ ಅಂತ ಹೇಗೆ ಆಗಲಿ? ಯಾರೋ ಮೈಮುಟ್ತಾರೆ. ನನ್ನ ಖಾಸಗಿ ಲೋಕವನ್ನ್ ಕೊಳ್ಳೆ ಹೊಡೀತಾರೆ ಅನ್ನೋದನ್ನ ಹೇಗಾದರೂ ಸಹಿಸಿಕೊಳ್ಳಲಿ? ಆಗಲ್ಲ ಅಂದಳು. ಮನೆಯಲ್ಲಿ ಮದುವೆಗಾಗಿ ಮಾಡ್ತಾ ಇದ್ದ ಎಲ್ಲಾ ಪ್ರಯತ್ನವನ್ನೂ ಉಹೂಂ ಎಂಬ ಒಂದೇ ಮಾತಲ್ಲಿ ಕೊಚ್ಚಿ ಹಾಕ್ತಿದ್ಲು.

rapist.jpg

ಈ ಇಬ್ಬರೇ ಅಲ್ಲ. ಯಾಕೋ ನಾನು ಕಂಡರೆ ಸಾಕು, ಇಂತಹ ನೂರಾರು ಕಥೆ ಹರಡಿಕೊಳ್ಳುವ ಗೆಳೆಯರಿದ್ದಾರೆ. ಈತ ನನ್ನ “ಅಂತರಂಗದ ಗೆಳೆಯ” ಎಂದು ನನ್ನ ಎರಡು ಪಟ್ಟು ವಯಸ್ಸಿನ ಆಕೆ ಹೇಳಿದಾಗ ಇಡೀ ನನ್ನ ಗೆಳೆಯರ ಸಮೂಹ ಬೆರಗಾಗಿತ್ತು. ನನಗೂ ಅಷ್ಟೆ. ಯಾಕೋ ಗೊತ್ತಿಲ್ಲ, ಯಾರ ಬಳಿ ಏನೂ ಹೇಳಿಕೊಳ್ಳಲು ಸಾಧ್ಯವಾಗದಿದ್ದರೂ ಎಲ್ಲರಿಗೂ ಚೆನ್ನಾಗಿ ಕಿವಿಯಾಗಲು ಗೊತ್ತು. ಅಥವಾ ನಾನುಂಡು ಬಂದ ನೆನಪುಗಳು ಅವರ ಕಥೆಗಳನ್ನು ಹಿಡಿದಿಡಲು ಸರಿಯಾದ ಪಾತ್ರೆಯನ್ನು ಒದಗಿಸುತ್ತಿದೆಯೇನೊ? ಕಥೆ ಕೇಳಿ ನಾನು ಎಷ್ಟು ಬದುಕು ಬದಲಿಸಿಕೊಂಡಿದ್ದೇನೆ ಗೊತ್ತಿಲ್ಲ. ಆದರೆ ಆ ನೂರೆಂಟು ಗುಟ್ಟುಗಳನ್ನು ಹೇಳಿಕೊಳ್ಳಲಾಗದೆ ಚಡಪಡಿಸುವವರಿಗೆ ಸದಾ ಒಂದಿಷ್ಟು ರಿಲೀಫ್ ನೀಡುವ ಕಿವಿಯಾಗಿದ್ದೇನೆ.

ಇದನ್ನೇ ಅಲ್ಲವ ಆ ವಿದ್ವಾಂಸರು ಹೇಳಿದ್ದು “ಬಿಚ್ಚಬೇಕಾದ ಕಟ್ಟಡಗಳು, ಆಲಿಸಬೇಕಾದ ದನಿಗಳು” ಅಂತ. ಅವರ ಆ ಲೇಖನದಲ್ಲಿ ಹೇಳಿದ್ರು- ಒಂದು ಮನೆ ನೋಡಿದರೆ, ಒಂದು ಕಸೂತಿ ಗಮನಿಸಿದರೆ ಅದು ಮನೆಯ ಅಷ್ಟೇ ಅಲ್ಲದೆ, ಅಲ್ಲಿರುವವರ ಮನಸ್ಸಿನ ಕಥೆಯನ್ನೂ ಹೇಳುತ್ತೆ ಅಂತ. ಅಂತಹ ಮನಸ್ಸಿನ ಕಟ್ಟಡಗಳಿಗೆ ಒಂದು ಕಿಟಕಿ ಇಡೋ ಕಾರ್ಪೆಂಟರ್ ಕೆಲಸ ನನಗೆ ಸದಾ ಇಷ್ಟ.

ಆ ಹುಡುಗನ್ನ ಸಮಾಧಾನ ಮಾಡ್ತಾ ಹೋದೆ. ಆತ ಕಣ್ಣೀರ್‍ಆಗಿ ಹೋದ. ನೂರೆಂಟು ಎಳೆಗಳನ್ನೆಲ್ಲಾ ಹಿಡಿದು ಸಾಗಿದ ನಂತರ ಆತ ಹೇಳ್ದ. ಡಾಕ್ಟರ್ ಹೇಳ್ತಾರೆ- ಇದು ಮಾನಸಿಕವಾದ ಖಾಯಿಲೆ. ಬಾಲ್ಯದಲ್ಲಿ ಈಕೆಯ ಮೇಲೆ ಸೆಕ್ಸುವಲ್ ಹೆರಾಸ್ ಮೆಂಟ್ ಆಗಿದೆ. ಇವಳನ್ನ ಲೈಂಗಿಕ ಲೋಕಕ್ಕೆ ಅಪಕ್ವ ವಯಸ್ಸಿನಲ್ಲಿ ಎಳೆದಿದ್ದಾರೆ. ಅದು ಈಗ ಒಂದು ಸಿಂಪ್ಟಮ್ ಆಗಿದೆ ಎಂದರು ಅಂತ.

ಆ ನನ್ನ ಇನ್ನೊಬ್ಬ ಗೆಳತಿಯನ್ನೂ ಸಮಾಧಾನ ಮಾಡ್ತಿದ್ದೆ. ದೇಹ ಅನ್ನೋದು ಸಂಭ್ರಮ, ಖಾಯಿಲೆಯಲ್ಲ ಅಂತ. ಆಗ ಅವಳೂ ಸಹ ಕಣ್ಣೀರ್‍ಆಗಿದ್ಲು. ಇನ್ನೂ ಮೂರನೆಯದೋ ನಾಲ್ಕನೆಯದೋ ಕ್ಲಾಸಿನಲ್ಲಿದ್ಲು. ಮನೇನಲ್ಲಿ ಸಂಭ್ರಮ.
 ಯಾವುದೋ ಕಾರ್ಯಕ್ರಮ. ಎಲ್ಲಾರೂ ಇರೋ ಜಾಗದಲ್ಲೇ ಅಡ್ಜಸ್ಟ್ ಮಾಡ್ಕೊಂಡು ಮಲಗಬೇಕಾಗಿತ್ತು. ಸರಿ ರಾತ್ರಿಯಲ್ಲಿ ಅಣ್ಣ ಅಂತಾ ಅನಿಸ್ಕೋತಾ ಇದ್ದ ಸಂಬಂಧಿ ಅವಳ ಮೇಲೆ ಆಕ್ರಮಣ ಮಾಡಿದ್ದ. ಲೈಂಗಿಕ ಆಕ್ರಮಣ. ಅವಳು ತತ್ತರಿಸಿ ಹೋಗಿದ್ಲು. ಅವಳ ಜನ್ಮಜನ್ಮಕ್ಕೂ ಸೆಕ್ಸ್ ಅನ್ನೋದು ಸಂಭ್ರಮದ ವಿಷಯ ಆಗೋಕೇ ಸಾಧ್ಯವಿರಲಿಲ್ಲ. ಇನ್ನು ಮದುವೆ ಅಂತಾ ಹೇಗೆ ಆಗ್ಲಿ ಅಂತಾ ಪ್ರಶ್ನೆ ಮಾಡ್ತಾ ಇದ್ಲು.

ಇಷ್ಟೇನಾ ಅಂದ್ರೆ ಅದು ಇಷ್ಟೇ ಅಲ್ಲ. ಇದು ಇವರಿಬ್ಬರ ಕಥೇನಾ ಅಂದ್ರೆ ಇಬ್ಬರ ಕಥೆ ಮಾತ್ರಾ ಇರಲಿಲ್ಲ. ಎಲ್ಲೋ ಓದಿದ್ದೆ. ಒಬ್ಬ ಹುಡುಗಿ “ಮೆಮೋರೀಸ್ ಆಫ್ ಫಿಯರ್” ಅನ್ನೋ ಡಾಕ್ಯುಮೆಂಟರಿ ನೋಡಿ ಹೇಳಿಕೊಂಡಿದ್ದ ಕಥೆ. ಸಿಂಪಲ್ ಅನ್ನಿಸಿಬಿಡುತ್ತೆ ಕೇಳೋಕ್ಕೆ. ಆದ್ರೆ ಉಳುಸಿದ ಗಾಯ ಮಾತ್ರ ಮುಲಾಮು ಸಿಗದೆ ಒದ್ದಾಡುತ್ತೆ. ಯಾವುದೋ ಸರ್ವಜನಿಕ ಸಮಾರಂಭ. ಗಣೇಶನ ಮೆರವಣಿಗೇನೋ ಏನೋ ಇರಬೇಕು. ಹೈಸ್ಕೂಲಿನಲ್ಲಿ ಓದ್ತಿದ್ದ ಹುಡುಗಿ ಈಕೆ. ಗುಂಪಿನಲ್ಲಿ ಒಂದು ಕೈ ಎಲ್ಲಿಂದಾನೋ ಬಂದು ಎಲ್ಲೆಲ್ಲೋ ಮುಟ್ಟಿ, ಏನು ಆಗ್ತಿದೆ ಅಂತಾ ಗೊತ್ತಾಗೋದ್ರಲ್ಲಿ ಮಾಯ ಆಗಿಬಿಡುತ್ತೆ. ಅವಳು ಆ ಭಯವನ್ನು ಹೊದ್ದುಕೊಳ್ಳಬೇಕು. ಇಡೀ ಬದುಕಿನ ತುಂಬಾ. ಇನ್ನು ಮದುವೆ, ಹಾಸಿಗೆ ಅಂದ್ರೆ ಆ ದೇಹ ಏನು ಮಾಡಬೇಕು?

ಇನ್ನೊಬ್ಬ ಗಳತಿ. ಆಕೆಗೆ ಉತ್ಕಟವಾದ ಆಸೆ. ಇದ್ದಷ್ಟು ದಿನದಲ್ಲಿ ಊರನ್ನೆಲ್ಲಾ ಕೊಳ್ಳೆ ಹೊಡೀಬೇಕು ಅಂತಾ. ಮಿಲನ ಮ್ಹೋತ್ಸವ ಸದಾ ಜಾರಿಯಲ್ಲಿರಬೇಕು ಅಂತಾ. ಸುಸ್ತಾಗಬೇಕು ಸದಾ ಅನ್ನೋ ಹಂಬಲ. ಆಫೀಸಾದ್ರೇನು? ಮನೆ ಅದ್ರೇನು? ಜನರಿಗೆ ಗೊತ್ತಾದ್ರೇನು? ನೋ- ಇದೆಲ್ಲಾ ಪ್ರಾಬ್ಲೆಮ್ಮೇ ಅಲ್ಲ. ಬೇಕಾಗಿರೋದು ಮಿಲನಕ್ಕೆ ಇನ್ನೊಂದು ದೇಹ ಅಷ್ಟೆ.

ಪಿಂಕಿ ವಿರಾನಿ ನೆನಪಿಗೆ ಬಂದಳು. “ಬಿಟರ್ ಚಾಕ್ಲೇಟ್” ಅನ್ನೋ ಪುಸ್ತಕ ಬರೆದಿದಾಳೆ. ಓದಿದರೆ ಯಾಕೆ ಲೋಕ ಈ ರೀತಿ ಇದೆ ಅನಿಸುತ್ತೆ. ಒಬ್ಬ ರೇಪಿಸ್ಟ್ ಎಲ್ಲಿಂದಾನೋ ಹುಟ್ಟಿ ಬರಲ್ಲ. ಆತ ಚಿಕ್ಕಪ್ಪ, ಅಪ್ಪ, ಗೆಳೆಯ, ಅಪ್ಪನ ಗೆಳೆಯ ಆಗಿರ್‍ತಾನೆ ಅಂತಾರೆ ಪಿಂಕಿ ವಿರಾನಿ. ಆಕೆ ಕೂಡ ಇಂಥ ಆಕ್ರಮಣದಿಂದ ಬೆಚ್ಚಿಬಿದ್ದಾಕೆ. ಆದ್ರೆ ಆಕೆ ಷಾಕ್ ಆಗಿ ಅಲ್ಲಿಗೇ ನಿಲ್ಲಲಿಲ್ಲ. ಈ ಥರಾ ಏನೆಲ್ಲಾ ಅಗ್ತಿದೆ ಅಂತಾ ಹುಡುಕ್ತಾ ಹೋದ್ಲು. ಆಗಲೇ ಗೊತ್ತಾಗಿದ್ದು, ರೇಪಿಸ್ಟ್ ಅನ್ನೋನು ನಮ್ಮ ಮನೆಯಲ್ಲೇ ಇರ್‍ತಾನೆ ಅಂತ.

ಫಸ್ಟ್ ಆಫ್ ಆಲ್ ಸೆಕ್ಸ್ ಅನ್ನೋದೆ ಎರಡು ದೇಹಗಳ್ ನಡುವಿನ ಭಾಷೆ. ಆ ಭಾಷೆ ಬೈಗುಳವಾಗಲೂಬಹುದು. ಇಲ್ಲ, ಸಂಭ್ರಮದ ಕಡಲಲ್ಲೂ ತೇಲಿಸಬಹುದು.

ಮಕ್ಕಳಿಗೆ ಏನು ಗೊತ್ತಾಗುತ್ತೆ? ಎಷ್ಟು ಮಕ್ಕಳನ್ನ ನೋಡಿದ್ದೀನಿ. ಇನ್ಫ್ಯಾಕ್ಚುಯೇಷನ್ನಿನಲ್ಲಿ ಬಿದ್ದು ಒದ್ದಾಡ್ತಾರೆ. ಯಾರೋ ಸೈಕಾಲಜಿಸ್ಟ್ ಹೇಳ್ತಾ ಇದ್ರು. ಅವರ ಭಾಷೇನಲ್ಲಿ ಇದಕ್ಕೆ ಎಳೆಗರುವಿನ ಪ್ರೀತಿ ಅಂತಾರಂತೆ. ದೇಹ ಅನ್ನೋದು ಹಲವು ಮಿಡಿತಗಳನ್ನ ಹೊಮ್ಮಿಸುತ್ತೆ. ಅದು ಪ್ರೀತೀನೋ, ಆಕ್ರಮಣಾನೋ ಅಂತಾ ದೇಹ ತುಂಬಾ ಯೋಚನೆ ಮಾಡ್ತಾ ಕೂರಲ್ಲ.

ನನ್ನ ಫ್ರೆಂಡ್ ಒಬ್ಬಳು ಇದ್ಲು. ಅವಳಿಗೆ ಋತುಮತಿ ಆಗೋದು ಅನ್ನೋದೇ ಏನೂ ಅಂತಾ ಗೊತ್ತಿರಲಿಲ್ವಂತೆ. ಮೊದಲ ಬಾರಿ ಕೆಂಪಾಗಿ ಹೋದಾಗ ಇದನ್ನ ಹೇಳಬೇಕೋ ಬೇಡವೋ ಅಂತಾ ಒದ್ದಾಡಿ ಹೋಗಿದಾಳೆ. ಋತುಮತಿಯಾಗಿ ಮೂರು ದಿನ ಆದ್ರೂ ಮನೇನಲ್ಲಿ ಬಾಯಿಬಿಟ್ಟಿರಲಿಲ್ಲ. ಆ ಹುಡುಗಿಯೇನು ಒಬ್ಬಂಟಿಯಲ್ಲ. ಆಕೆಗೆ ಮೂವರು ಅಕ್ಕಂದಿರು ಇದ್ದಾರೆ. ಆದ್ರೂ ಏನ್ಮಾಡೋದು. ಮನೇನಲ್ಲಿ ಇದು ಮಾತನಾಡೋ ವಿಷಯವಾಗಿ ಮಾಡಿಲ್ಲ.

“ಪ್ರತೀ ಗಳಿಗೆ ಸೆಕ್ಸ್ ಬೇಕು” ಅನ್ನೋರೂ ಅಷ್ಟೆ, “ಇಲ್ಲಾ, ಐ ಕಾಂಟ್, ನನ್ನ ಬಾಡಿ ಕೋಆಪರೇಟ್ ಮಾಡಲ್ಲ” ಅನ್ನೋರೂ ಅಷ್ಟೆ ಇಬ್ಬರೂ ನರಳ್ತಾ ಇದಾರೆ. ದೇಹ, ಮನಸ್ಸು ಎರಡೂ ಖಾಯಿಲೆಯಿಂದ. ಆದ್ರೆ ಅದಕ್ಕೆ ಒಬ್ಬ ಡಾಕ್ಟರ್ ಬೇಕು. ಸಾಂತ್ವನ ಹೇಳ್ಬೇಕು. ಮನಸ್ಸಿನಲ್ಲಿ ಭದ್ರವಾಗಿ ಊರಿ ನಿಂತಿರೋ ಕಲೆಯನ್ನ ತೆಗೀಬೇಕು ಅನ್ನೋದು ಯಾರಿಗೂ ಗೊತ್ತಾಗ್ತಿಲ್ಲ. ಇಡೀ ಬದುಕು ನರಕ ಆಗೋಗುತ್ತೆ. ಹಾಸಿಗೆ ಅನ್ನೋದು… ಹೇಗೆ ಹೇಳೋದಪ್ಪ? ನೋವಿನ ಗೂಡಾಗಿ ಹೋಗುತ್ತೆ.

ನಾನು ಯೋಚಿಸ್ತೀನಿ.          ನನ್ನ ಚಿಕ್ಕಪ್ಪ ಹೀಗೆ ಮಾಡ್ದ ಅಂತಾ ಹೇಳೋ ಅವಕಾಶ ಮಾಡಿಕೊಟ್ಟಿದೀವಾ? ಅಮ್ಮ ನಿನ್ನ ತಮ್ಮ ನನ್ನನ್ನ ಪೀಡಿಸ್ದಾ ಅಂತಾ ಹೇಳೋದಕ್ಕೆ ಬಿಟ್ಟಿದೀವಾ? ಇತ್ತೀಚೆಗೆ ಇನ್ನೂ ಎರಡನೇ ಕ್ಲಾಸಿಗೋಗೋ ಪುಟಾಣೀನ ಸ್ಕೂಲ್ ಬಸ್ಸಿನ ಕ್ಲೀನರ್ ಯಾರಿಗೂ ಗೊತ್ತಾಗದ ಹಾಗೆ ಕಿಸ್ ಮಾಡ್ತಿದ್ನಂತೆ. ಅವಳು ಗಾಬರಿ ಆಗಿದಾಳೆ. ಏನು ಎತ್ತ ಗೊತ್ತಾಗ್ತಿಲ್ಲ. ಇದು ಗೊತ್ತಾಗಿ ಇಡೀ ಮನೆ ಅಲ್ಲಡಿ ಹೋಗಿತ್ತು.

ಇದೆಲ್ಲಾ ಯಾಕೆ ಜ್ಞಾಪಕ ಬಂತು ಅಂದ್ರೆ ಇತ್ತೀಚೆಗೆ ಯಾವುದೋ ಫಂಕ್ಷನ್ನಿಗೆ ಹೋಗಿದ್ದೆ. ಯಥಾ ಪ್ರಕಾರ ಯರ್‍ಯಾರು ಎಲ್ಲೆಲ್ಲಿ ಮಲಗಬೇಕು ಅಂತಾ ಡಿಸೈಡ್ ಮಾಡಿದ್ರು. ಅವರು ಮಾಡಿದ ಡಿಸೀಷನ್ನುಗಳನ್ನು ನೋಡಿ ಇದೆಲ್ಲಾ ಜ್ಞಾಪಕಕ್ಕೆ ಬಂತು. ಎಷ್ಟು ಸಿಂಪಲ್ಲಾಗಿ ಎಷ್ಟು ದೊಡ್ಡ ಮಿಸ್ಟೇಕ್ ಮಾಡಿಬಿಡ್ತೀವಿ ಅಲ್ವಾ?

‍ಲೇಖಕರು avadhi

February 21, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

2 ಪ್ರತಿಕ್ರಿಯೆಗಳು

 1. Tina

  ನಿಜವಾಗ್ಲೂ! ನೀವು ಹೇಳಿರೋ ಮಾತುಗಳು ಬಹಳ ಸಮಂಜಸವಾಗಿವೆ. ಎಲ್ಲೀತನಕ ಲೈಂಗಿಕ ವಿಚಾರಗಳನ್ನ ಖುಲ್ಲಂಖುಲ್ಲಾ ಮಾತಾಡೋದು ‘taboo’ ಆಗಿರತ್ತೋ ಅಲ್ಲೀತನಕ ಎಷ್ಟೋ ಮಕ್ಕಳು ತಮ್ಮ ಲೈಂಗಿಕತೆಯ ಬಗ್ಗೆ ಹಲವಾರು ಫೋಬಿಯಾಗಳನ್ನ ಬೆಳೆಸಿಕೊಳ್ತ, ಹೇಳ್ಲಾರದೆ, ಮುಚ್ಚಿಡಕ್ಕೂ ಆಗದೆ ಒದ್ದಾಡುತ್ತಲೆ ಇರ್ತಾರೆ. ನಮ್ಮ ಮಕ್ಕಳಿಗೆ ನಾವು ಯಾಕೆ ತಿಳಿಹೇಳಬಾರದು? ಕೆಲವೊಂದು ಸಂದರ್ಭಗಳಲ್ಲಿ ಸ್ವಲ್ಪ ನಿಗಾವಹಿಸಿದರೆ, ಮಕ್ಕಳಿಗೆ ಇಂತಹ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು ಎಂದು ಹೇಳಿಕೊಟ್ಟರೆ ಸಾಕು. ಇದನ್ನೆಲ್ಲ ಸ್ಕೂಲುಗಳಲ್ಲಿ ಹೇಳಿಕೊಡಲಿಕ್ಕೆ ಆಗಲ್ಲ ಅಂತ ಬಹಳ ರಾಜಕೀಯ ನಡಿಯತ್ತೆ. ಆದರೆ ನಾವು ತಂದೆತಾಯಿಗಳು ಯಾಕೆ ಈಕಡೆ ಗಮನ ಹರಿಸಿ ಸರಿಯಾದ ಹೆಜ್ಜೆ ಇಡಬಾರದು?
  ಥ್ಯಾಂಕ್ಯೂ, ನೀವಾರೇ ಆಗಿರಲಿ.

  ಪ್ರತಿಕ್ರಿಯೆ
 2. bahuroopi

  ನಮ್ಮ ಮನೆಯಿಂದಲೇ ಲೈಂಗಿಕ ಅರಿವಿನ ಪಾಠ ಶುರುವಾಗಬೇಕು ಎನ್ನುವುದು ಖಂಡಿತಾ ಸರಿ. ಈ ಎಲ್ಲ ಕಥೆಗಳನ್ನು ಕೇಳಿದ್ದ ನಾವು ನನ್ನ ಅಕ್ಕನ ಮಗಳ ಹಾಗೂ ನನ್ನ ಮಗಳು ಋತುಮತಿಯಾಗುವ ಸಮಯ ಹತ್ತಿರ ಬಂದಾಗ ಮೊದಲೇ ಅವರಿಗೆ ದೈಹಿಕವಾಗಿ ಏನಾಗುತ್ತದೆ ಎಂಬುದನ್ನೂ ವಿವರಿಸಿ ಹೇಳಿದ್ದೆವು. ಇದು ನಿಜಕ್ಕೂ ನಮಗೂ ನಮ್ಮ ಮಕ್ಕಳಿಗೂ ಒಂದು ಪಾಠವಾಗಿತ್ತು.

  ನನ್ನ ಮಗಳು ರುತುಮತಿಯಾದಾಗ ನಾನು ನನ್ನ ಬಂಧು ಹಾಗೂ ಆಪ್ತ ಗೆಳೆಯರ ಬಳಗಕ್ಕೆ ‘ಶಿ ಎಂಟರ್ಡ್ ಟೀನ್ ವರ್ಲ್ಡ್’ ಅಂತ ಎಸ್ ಎಂ ಎಸ್ ಕಳಿಸಿದ್ದೆ. ಬಹುತೇಕ ಮಂದಿ ಅವಳಿಗೆ ಫೋನ್ ಮಾಡಿ ಅಭಿನಂದಿಸಿದ್ದರು. ಅಷ್ಟೇ ಅಲ್ಲ ಇನ್ನೂ ಹಲವು ವಿಷಯ ಮಾತಾಡಿಕೊಂಡಿದ್ದರು.

  ಯಾವಾಗಲೂ ಗುಪ್ತಾಂಗದ ವಿಷಯ ಬಂದಾಗ ನಾವೆಲ್ಲರೂ ‘ಶೇಮ್ ಶೇಮ್’ ಅನ್ನುತ್ತೇವಲ್ಲ. ಅದರ ಬಗ್ಗೆ ಎಷ್ಟು ಯೋಚಿಸಿದ್ದೇನೆ. ಯಾಕೆ ಅದು ಶೇಮ್ ಎನ್ನುವ ಭಾವನೆಯನ್ನು ಬಾಲ್ಯದಿಂದಲೇ ತುಂಬಿ ಬೆಳಸಬೇಕು. ಅದು ಶೇಮ್ ಹೇಗಾಗಲು ಸಾಧ್ಯ. ಅದು ಪ್ರದರ್ಶಿಸಲಾಗದ ಭಾಗ ಮಾತ್ರವೇ ಹೊರತು ಶೇಮ್ ಅಂತೂ ಖಂಡಿತಾ ಅಲ್ಲ.

  ಎಷ್ಟು ಹೆಣ್ಣು ಮಕ್ಕಳು ಋತು ಸಂಬಂಧಿ ನೋವಿನಿಂದ, ಸಮಸ್ಯೆಯಿಂದ ಬಳಲುತ್ತಾರೆ. ತಮಗೆ ಈ ಬದುಕು ಯಾಕೆ ಬೇಕಿತ್ತು ಎಂದು ಒದ್ದಾಡಿ ಹೋಗುತ್ತಾರೆ. ಆದರೆ ಆ ಬಗ್ಗೆ ಎಷ್ಟು ಮಂದಿಗೆ ಅರಿವಿದೆ. ಈ ಎಲ್ಲವೂ ಯಾಕೆ ಮಾತನಾಡುವ ವಿಷಯವಾಗಬಾರದು. ‘ಸುಮಕೆ ಸೌರಭ ಬಂದ ಗಳಿಗೆ’ ನೆನಪಿನಲ್ಲಿ ಸದಾ ಒಂದು ಸಂಭ್ರಮವಾಗಿ ಉಳಿಯಬೇಕು. ಬದಲಿಗೆ ದುಸ್ವಪ್ನವಾಗಿಬಿಡಬಾರದು.

  ಇದು ಹೇಳಲು ನೆಪ ಒದಗಿಸಿದ್ದಕ್ಕೆ ಥ್ಯಾಂಕ್ಸ್ ಟೀನಾ-
  -ಬಹುರೂಪಿ

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ TinaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: