ಬಿಳಿಮಲೆ ಕಾಲಂ : ಕನ್ನಡ ಪಂಚಭೂತಗಳು

ಕನ್ನಡ ಪಂಚಭೂತಗಳು

– ಪುರುಷೋತ್ತಮ ಬಿಳಿಮಲೆ

ಕೃಪೆ : ವಿಜಯ ಕರ್ನಾಟಕ ಭೂಮಿ, ಆಕಾಶ, ಅಗ್ನಿ, ನೀರು ಮತ್ತು ಗಾಳಿಯನ್ನು ನಮ್ಮ ಹಿರಿಯರು ಹಿಂದಿನಿಂದಲೂ ಪಂಚಭೂತಗಳೆಂದು ಗುರುತಿಸುತ್ತಾ ಬಂದಿದ್ದಾರೆ. ಸಾಂಖ್ಯರು, ಚಾರ್ವಾಕರು, ನ್ಯಾಯಿಕರು ಮತ್ತು ವೈಶೇಷಿಕರು ಪಂಚಭೂತಗಳನ್ನು ಆಧರಿಸಿಯೇ ತಮ್ಮ ‘ದರ್ಶನ’ಗಳನ್ನು ಪ್ರಸ್ತುತಪಡಿಸಿದರು. ಪಂಚೇಂದ್ರಿಯಗಳಾದ ಕಣ್ಣು, ನಾಲಿಗೆ, ಕಿವಿ, ಮೂಗು, ಚರ್ಮಗಳಲ್ಲಿ ಯಾವುದಾದರೂ ಒಂದರ ಸಹಾಯದಿಂದ ತಿಳಿಯಲು ಸಾಧ್ಯವಿರುವುದನ್ನು ಮಾತ್ರ ಅವರೆಲ್ಲ ‘ಪಂಚಭೂತ’ಗಳಲ್ಲಿ ಸೇರಿಸಿದರು. ಆದರೆ ನಮ್ಮ ಜನಸಾಮಾನ್ಯರ ತಿಳುವಳಿಕೆಯ ಜಾನಪದದಲ್ಲಿ ಈ ಪಂಚಭೂತಗಳ ಅರಿವು ಹೇಗಿದೆ? ಎಂಬ ಪ್ರಶ್ನೆ ಹಾಕಿಕೊಂಡಾಗ ನಮಗೆ ಕೆಲವು ಕುತೂಹಲದ ಅಂಶಗಳು ತಿಳಿದು ಬರುತ್ತವೆ. ಕನ್ನಡ ಜಾನಪದವನ್ನು ಸೂಕ್ಷ್ಮವಾಗಿ ನೋಡಿದಾಗ, ಪಂಚಭೂತಗಳ ಪೂರ್ಣತತ್ವವನ್ನು ಪ್ರತಿಬಿಂಬಿಸುವ ರೂಪವೊಂದರ ಗೈರು ಹಾಜರಿಯೇ ಅಲ್ಲಿ ಎದ್ದು ಕಾಣುತ್ತದೆ. ಇಂಥ ಪ್ರತ್ಯೇಕ ತತ್ವ ಪ್ರಕಟಣೆಯ ಸಂಬಂಧದಲ್ಲಿ ಅವು ಪ್ರತ್ಯೇಕವಾಗಿಯೇ ಅನೇಕ ಬಗೆಯ ದೈವಗಳನ್ನು, ಪುರಾಣಗಳನ್ನು, ನಂಬಿಕೆಗಳನ್ನು ಆಚರಣೆಗಳನ್ನು ಸೃಷ್ಟಿಸಿಕೊಂಡಿವೆ. ಹೀಗಿರುವುದರಿಂದಾಗಿ ಜಾನಪದದ ಮಟ್ಟಿಗೆ ನಾವು ಪಂಚಭೂತಗಳನ್ನು ಬಿಡಿಬಿಡಿಯಾಗಿಯೇ ನೋಡುವುದು ಹೆಚ್ಚು ಔಚಿತ್ಯಪೂರ್ಣವಾಗಿದೆ. ಗುಣಸ್ವಭಾವಗಳ ದೃಷ್ಟಿಯಿಂದ ಆಕಾಶ ಮತ್ತು ಭೂಮಿಯನ್ನು ಪರಸ್ಪರ ವಿರೋಧವೂ ಪೂರಕವೂ ಆಗಿರುವ ವಿರೋಧದ್ವಂದ್ವ ಘಟಕವೆಂದು ಕರೆಯಬಹುದು. ಹಾಗೆಯೇ ಬೆಂಕಿ ಮತ್ತು ನೀರನ್ನೂ ಕೂಡಾ. ಇಲ್ಲಿಯೂ ‘ಗಾಳಿ’ ಪ್ರತ್ಯೇಕವಾಗಿ ಉಳಿಯುತ್ತದೆ. ಜನಪದ ಸಂಪ್ರದಾಯಗಳಲ್ಲಿ ಇಂಥ ವಿರೋಧ ದ್ವಂದ್ವ ಘಟಕಗಳ ಬಗೆಗೆ ಮಾಹಿತಿಗಳು ಲಭಿಸುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಲಭ್ಯ ಇರುವ ಅನೇಕ ಕನ್ನಡ ಜನಪದ ಕತೆಗಳ ಪ್ರಕಾರ ಭೂಮಿಗೆ ಆಕಾಶವು ತಾಗಿಕೊಂಡಂತೆ ಬಿದ್ದಿರುತ್ತದೆ. ಅದು ಕಸಗುಡಿಸುವ ಅಜ್ಜಿಯ ಬೆನ್ನಿಗೆ ತಾಗಿಕೊಂಡಿರುತ್ತದೆ. ಅದನ್ನು ಕಂಡು ಚಿಕ್ಕಮಕ್ಕಳು ತಮಾಷೆ ಮಾಡಿದಾಗ ಸಿಟ್ಟಿಗೆದ್ದ ಅಜ್ಜಿಯು ಕಸಪೊರಕೆಯಿಂದ ಆಕಾಶಕ್ಕೆ ಹೊಡೆಯುತ್ತಾಳೆ. ಆಗ ಆಕಾಶ ಸರ್ರನೆ ಮೇಲೆ ಓಡಿ ಹೋಗುತ್ತದೆ. ಅದು ತೀರ ದೂರ ಓಡುವುದನ್ನು ಕಂಡು ಮತ್ತೆ ಅಜ್ಜಿ ಅದಕ್ಕೆ ನಿಲ್ಲುವಂತೆ ಆಜ್ಞೆ ಮಾಡುತ್ತಾಳೆ. ಈ ಕಥೆಯನ್ನೇ ಸ್ವಲ್ಪ ಹೋಲುವ ಆದರೆ ಭಿನ್ನ ನಿರೂಪಣೆಯಿರುವ ಕತೆಗಳು ಕನ್ನಡ ಜನಪದ ಮಹಾಕಾವ್ಯಗಳಲ್ಲಿ ದೊರೆಯುತ್ತವೆ. ಕೊಡಗಿನ ‘ಫಣಿ ಎರವ’ ಎಂಬ ಹೆಸರಿನ ಬುಡಕಟ್ಟಿನ ಜನರಲ್ಲಿ ಪ್ರಚಲಿತದಲ್ಲಿರುವ ‘ಚತ್ತವಂಡಪಾಟ್’ ನಲ್ಲಿ ಬರುವ ಆಕಾಶ ಮತ್ತು ಭೂಮಿಯ ಸಂಬಂಧ ಬಹಳ ಅದ್ಭುತವಾದುದು. ಸಾಮಾನ್ಯವಾಗಿ ಈ ಬಗೆ ನಿರೂಪಣೆಗಳಲ್ಲಿ ಆಕಾಶವನ್ನು ಗಂಡಾಗಿಯೂ, ಭೂಮಿಯನ್ನು ಹೆಣ್ಣಾಗಿಯೇ ಕಲ್ಪಿಸಲಾಗಿದೆ. ಈ ಕಲ್ಪನೆಯು ಋಗ್ವೇದದಲ್ಲಿ ಪ್ರಕಟವಾಗಿರುವ ‘ದ್ಯಾವಾ ಪೃಥಿವೀ’ ಕಲ್ಪನೆಗಿಂತ ಬೇರೆಯದಲ್ಲ. ನಮ್ಮ ಕರ್ನಾಟಕದ ಕೃಷಿಕ ಸಮಾಜವೂ ಮೇಲಿರುವ ಆಕಾಶವನ್ನು ಗಂಡಾಗಿಯೂ, ತಳಭಾಗದಲ್ಲಿರುವ ಭೂಮಿಯನ್ನು ಹೆಣ್ಣಾಗಿಯೂ ಪರಿಭಾವಿಸಿಕೊಂಡಿದೆ. ‘ಭೂಮಿ’ ಎಂಬ ಹೆಣ್ಣು ಮುಟ್ಟಾದಳೆಂದು ಭಾವಿಸಿಕೊಂಡು ಆಕೆಗೆ ತಿಂಡಿ ಕೊಟ್ಟು, ಎಣ್ಣೆ ಕೊಟ್ಟು ಸ್ನಾನ ಮಾಡಿಸಿ, ಮೂರು ದಿನ ‘ಮೈಲಿಗೆ’ ಆಚರಿಸುವ ಸಂಪ್ರದಾಯವು ಕರಾವಳಿ ಕರ್ನಾಟಕದಲ್ಲಿ ‘ಕೆಡ್ಡಾಸ’ ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಕರ್ನಾಟಕದ ಇತರೆಡೆಗಳಲ್ಲಿಯೂ ಲೈಂಗಿಕ ಕ್ರಿಯೆ-ಸಂತಾನಾಭಿವೃದ್ಧಿಗೂ, ಕೃಷಿಗೂ ಗಾಢವಾದ ಸಂಬಂಧವನ್ನು ಕಲ್ಪಿಸಲಾಗಿದೆ. ಕೊಂತಿಪೂಜೆ, ಗೌರಿಪೂಜೆ, ಬಲೀಂದ್ರಪೂಜೆ ಮೊದಲಾದವು ಮೂಲತಃ ಕೃಷಿ ಭೂಮಿಯ ಆರಾಧನಾ ಕ್ರಮಗಳೇ ಆಗಿವೆ. . ಆದರೆ ಬಿರುಗಾಳಿ, ನೆರೆ, ಭೂಕಂಪಗಳಲ್ಲಿ ಆಕೆ ಮನುಕುಲವನ್ನು ನುಂಗಿ ನೊಣೆಯಬಲ್ಲಳು, ಈ ಅರ್ಥದಲ್ಲಿ ಭೂಮಿಯು ವಿನಾಶ ಮತ್ತು ಸಾವಿನ ಸಂಕೇತವೂ ಹೌದು. ನಮ್ಮ ಅನೇಕ ಮಹಾಕಾವ್ಯಗಳಲ್ಲಿ, ಜನಪದ ಕತೆಗಳಲ್ಲಿ ಭೂಮಿಯ ಇಂಥ ಭೀಭತ್ಸ ಮುಖದ ಚಿತ್ರವೂ ಇದೆ. ‘ಗುಳಿಗ’, ಭೂತಕ್ಕೆ ಸಂಬಂಧಿಸಿದ ಪಾಡ್ದನವೊಂದರಲ್ಲಿ ತಾಯಿಯ ಬಲದ ಮೊಲೆ ಒಡೆದು ಭೂಮಿಗೆ ಬೀಳುವ ಗುಳಿಗನು ಭೂಮಿಯ ಸ್ಪರ್ಶ ಆಗುತ್ತಲೇ ದೈತ್ಯಾಕಾರವಾಗಿ ಬೆಳದು, ತಾಯಿಯ ಎಡದ ಮೊಲೆಯನ್ನು ತಿನ್ನುವ ಭಯಾನಕ ಚಿತ್ರವಿದೆ. ಜನಪದರು ಭೂಮಿಯನ್ನು ಪೂಜಿಸುವ ಕೆಲಸದ ಹಿಂದೆ ಭೂಮಿಯ ಬಗೆಗೆ ಪ್ರೀತಿ ಮತ್ತು ಭಯ ಸಮವಾಗಿ ಪ್ರಕಟವಾಗುತ್ತಿದೆ. ಆಕಾಶ ಮತ್ತು ಭೂಮಿಯನ್ನು ಒಂದುಗೂಡಿಸುವ ಶಕ್ತಿ ಇರುವುದು ಮಳೆಗೆ. ಈ ಮಳೆ ಆಕಾಶದಿಂದ ಬಿದ್ದು ಭೂಮಿಯನ್ನು ಹಸನುಗೊಳಿಸುವುದರಿಂದ ಅದು ಫಲವಂತಿಕೆಯ ಸಂಕೇತವೂ ಹೌದು. ಜನಕಲ್ಪನೆಯಲ್ಲಿ ಭೂಮ್ಯಾಕಾಶಗಳನ್ನು ಆವರಿಸಿಕೊಂಡ ನೀರು ಮುಂದೆ ಕಡಲಾಗಿ, ನದಿಯಾಗಿ, ತೊರೆಯಾಗಿ, ಕೆರೆ ಭಾವಿಗಳಾಗಿ ಪುನರ್ ಸೃಷ್ಟಿಯಾದರೆ, ಭಯಾನಕವಾದಾಗ ನೀರು ದೆವ್ವಗಳನ್ನು ಸೃಜಿಸಿದೆ. ಜನಪದ ಸಂಪ್ರದಾಯಗಳಲ್ಲಿ ನೀರು ‘ಕೂಡಿಸುವ’ ಮತ್ತು ‘ಬೇರ್ಪಡಿಸುವ’ ಸಂಕೇತವಾಗಿಯೂ ಬಳಕೆಯಲ್ಲಿದೆ.   ನೀರಿಗೆ ತೀರ ವಿರೋಧವಾಗಿರುವ ಅಗ್ನಿಗೆ ಕರಗಿಸುವ, ಪರಿಷ್ಕರಿಸುವ ಮತ್ತು ಶುದ್ಧೀಕರಿಸುವ ಗುಣವನ್ನು ಜನಪದ ಸಂಪ್ರದಾಯಗಳಲ್ಲಿ ಆರೋಪಿಸಲಾಗದೆ. ಇಂದು ಅಗ್ನಿಪೂರ್ವಕಾಲದ ಆಚರಣೆಗಳು ಕ್ಷಚಿತ್ತಾಗಿ ನಮಗೆ ಲಭಿಸುತ್ತಿವೆ. ಕೊರಗತನಿಯನಂಥ ಕೆಲವು ವಿಶಿಷ್ಟ ದೈವಗಳು ಇಂದಿಗೂ ಅಗ್ನಿಯನ್ನು ನಿರಾಕರಿಸಿವೆ. ಉಳಿದಂತೆ ಅಗ್ನಿಯ ಅಸ್ತಿತ್ವವಿಲ್ಲದೆ ಮುಖ್ಯ ಕಾರ್ಯಕ್ರಮಗಳ್ಯಾವುವೂ ನಡೆಯದು. ಮದುವೆಗೆ ಅಗ್ನಿಯೇ ಸಾಕ್ಷಿಯಾದರೆ, ಸಾವಿನಲ್ಲಿ ಹೆಣದ ಮುಂದುಗಡೆಗೆ ಅಗ್ನಿಯೇ ಸಾಗಬೇಕು. ಜಾತಿ ಸಮಾಜವು ತನ್ನ ಜಾತಿಯ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಅಗ್ನಿಯನ್ನು ಬಳಸುತ್ತದೆ. ಹೀಗೆ ಅಗ್ನಿಯು ಕೂಡಾ ಹಿಂದೆ ವಿವರಿಸಿದ ಆಕಾಶ, ಭೂಮಿ, ನೀರಿನಂತೆ ಪರಸ್ಪರ ವಿರೋಧವಾದ ಗುಣಗಳನ್ನು ಮೈಗೂಡಿಸಿಕೊಂಡು ಜನಪದ ಸಂಪ್ರದಾಯಗಳಲ್ಲಿ ಗಮನಾರ್ಹ ಸ್ಥಾನ ಪಡೆದಿದೆ. ವಾಯುವಿಗೆ ವಿರೋಧವಾಗಿರುವ ಇನ್ನೊಂದು ದ್ರವ್ಯ ಅಥವಾ ಚೈತನ್ಯ ಜನಪದ ಕಲ್ಪನೆಯಲ್ಲಿ ಇದ್ದಂತಿಲ್ಲ. ಮಹಾನ್ ಶಕ್ತಿಶಾಲಿಯಾದ ವಾಯುವನ್ನು ರೋಗಗಳನ್ನು ಉಪಶಮನ ಮಾಡುವ ದೈವವಾಗಿ ವೈದಿಕ ಪರಂಪರೆ ಕಂಡಿದೆ. ಗಾಳಿಗೆ ಆಕಾರವೂ ಇಲ್ಲದ್ದರಿಂದ ಅದಕ್ಕೆ ಬಗೆ ಬಗೆಯ ಗುಡಿಗಳನ್ನಾಗಲೀ ಶಿಲ್ಪಗಳನ್ನಾಗಲೀ ಜನರು ಕಂಡರಿಸಿಲ್ಲ. ಬಹಳ ಜನಪ್ರಿಯವಾಗಿರುವ ‘ಗಾಳೆಮ್ಮ’ ಎಂಬ ಜನಪದ ದೈವವು ‘ಶಕ್ತಿ’ಯಾಗಿದ್ದು, ಅದು ಗಾಳಿಯನ್ನೇ ಪ್ರತಿನಿಧಿಸುತ್ತದೆಯೋ ಸ್ಪಷ್ಟವಿಲ್ಲ. ಒಂದು ವೇಳೆ ‘ಗಾಳೆಮ್ಮ’ ದೈವವು ‘ಗಾಳಿ’ ಯ ಮೂರ್ತರೂಪವೇ ಆಗಿರುವುದ ಹೌದಾದರೆ ವೈದಿಕ ಸಂಪ್ರದಾಯದಲ್ಲಿ ಗಂಡಾಗಿ ಪೂಜೆಗೊಳ್ಳುತ್ತಿದ್ದ ಆತ ಇಲ್ಲಿ ಸ್ತ್ರೀಯಾಗಿ ಆರಾಧಿಸಲ್ಪಡುತ್ತಿದ್ದಾಳೆ ಎಂದು ಹೇಳಬಹುದು.ಗಾಳಿ ದುರುಗವ್ವ, ಗಾಳಿಮರೆವ್ವ ಮೊದಲಾದ ಹೆಸರುಗಳಲ್ಲಿ ಆಯಾ ದೈವಗಳು ಗಾಳಿಯ ರೂಪದಲ್ಲಿ ಇರುವಂತಹ ಕಲ್ಪನೆಯಿದೆ. ರಣ, ಕಾಲೆ, ಪಿಶಾಚಿ ಮೊದಲಾದ ಕ್ಷುದ್ರ ಶಕ್ತಿಗಳು ಗಾಳಿಯ ರೂಪದಲ್ಲಿದ್ದುಕೊಂಡು ಸಮಯ ನೋಡಿ ಮಾನವನನ್ನು ಹಿಂಸಿಸುತ್ತವೆ ಎಂದು ಜನಪದರು ಭಾವಿಸುತ್ತಾರೆ. ಇಂಥ ಕಡೆ ‘ಗಾಳಿ’ಯ ನಿವಾರಣೆಗೆ ಮಂತ್ರಮಾಟಗಳ ಸಹಾಯಬೇಕಾಗುತ್ತದೆ. ಕೃಷಿಕ ಸಮಾಜವು ಗಾಳಿಯ ಚಲನೆಗೆ ಕೃಷಿಕೇಂದ್ರಿತ ಅರ್ಥಗಳನ್ನು ಕಟ್ಟಿಕೊಂಡಿದೆ. ‘ತೆಂಕಣಗಾಳಿ ಮಳೆ ತರುತ್ತದೆ’, ‘ಮೂಡಣಗಾಳಿ ಬೀಸಿದರೆ ಫಸಲು ಚೆನ್ನಾಗಿ ಬರುತ್ತದೆ’, ‘ಪಡುಗಾಳಿ ಬೀಸಿದರೆ ಹಣ್ಣುಗಳು ಯತೇಚ್ಛವಾಗಿ ಬೆಳೆಯುತ್ತವೆ, ಆಷಾಢದಲ್ಲಿ ಗಾಳಿ ಬೀಸಿದರೆ ಹೇಸಿಗೆ ಆಗುತ್ತದೆ, ಹಸಿವು ಹೆಚ್ಚುತ್ತದೆ’ ಎಂಬಂಥ ಗಾದೆ-ನಂಬಿಕೆಗಳು ಮೂಲತಃ ಕೃಷಿಗೆ ಸಂಬಂಧಿಸಿದವುಗಳಾಗಿವೆ. ಇವಲ್ಲದೆ ಹರಿಶ್ಚಂದ್ರ ಗಾಳಿ, ಕುಂಬಾರ ಗಾಳಿ, ಹನುಮನಗಾಳಿ, ಸುಂಟರಗಾಳಿ, ದೆವ್ವಗಾಳಿ, ಬಿರುಗಾಳಿ ಮೊದಲಾದ ಭಿನ್ನ ರೀತಿಯ ಗಾಳಿಸ್ವರೂಪವನ್ನು ಜನಪದರು ಗ್ರಹಿಸಿದ್ದಾರೆ. ಹೀಗೆ ಪಂಚಭೂತಗಳನ್ನು ಒಟ್ಟಾಗಿಯೇ ನೋಡಿದಾಗ ಅವೆಲ್ಲವನ್ನು ಏಕ ಸೂತ್ರದಲ್ಲಿ ಬಂಧಿಸುವ ತತ್ವ ಚಿಂತನೆಯೊಂದರ ಗೈರುಹಾಜರಿಯೇ ಕನ್ನಡ ಜನಪದ ಸಂಪ್ರದಾಯಗಳಲ್ಲಿ ಎದ್ದು ಕಾಣುತ್ತದೆ. ಈ ಕುರಿತು ಇನ್ನಷ್ಟು ಅಧ್ಯಯನ ನಡೆಯಬೇಕಾದ್ದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ.        ]]>

‍ಲೇಖಕರು G

August 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಬೇಕು

ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಬೇಕು

ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮ  ನಿರ್ದೇಶಕ ದೆಹಲಿ ತುಳು ಸಿರಿ ದ್ರಾವಿಡ ಭಾಷಾ ವರ್ಗದಲ್ಲಿ ತುಳುವಿಗೆ ವಿಶಿಷ್ಟವಾದ ಸ್ಥಾನವಿದೆ. 1856...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This