ಬಿಳಿಮಲೆ ಕಾಲಂ : ಕುಮಾರ ರಾಮ, ಹೋಲಿಕೆ ರಾಮ

ಕುಮ್ಮಟ ಜಾತ್ರೆಗೆ ಹೋಗಿ ಬನ್ನಿ – ಪುರುಷೋತ್ತಮ ಬಿಳಿಮಲೆ ಕೃಪೆ : ವಿಜಯ ಕರ್ನಾಟಕ ಕೊಪ್ಪಳದಿಂದ ಬೂದಿಗುಂಪೆ ಕ್ರಾಸ್ ದಾಟಿ ಗಂಗಾವತಿ ಕಡೆಗೆ ಸ್ವಲ್ಪ ದೂರ ಬಂದರೆ ಬಲ ಬದಿಗೆ ಅಥವಾ ಕಂಪ್ಲಿಯಿಂದ ಗಂಗಾವತಿ ತಲುಪಿ ಕೊಪ್ಪಳದ ಕಡೆಗೆ ಬಂದರೆ ಎಡಬದಿಗೆ ಕುಮ್ಮಟ ದೊರೆಯತ್ತದೆ. ಮಖ್ಯ ಮಾರ್ಗ ಬಿಟ್ಟು ದಾರಿಯಲ್ಲಿ ನಡೆಯುತ್ತಾ ಹೋದರೆ ಒಂದೆರಡು ಅಂಗಡಿಗಳು ಮತ್ತು ಇತಿಹಾಸದ ಭಾರದಿಂದ ನಲುಗಿವೆಯೋ ಎಂಬಂತಿರುವ ನಾಲ್ಕಾರು ಮುಖಗಳು ಕಣ್ಣಿಗೆ ಬೀಳುತ್ತವೆ. ಅಲ್ಲಿಂದ ಮುಂದೆ ಸಿಗುವ ವಿಶಾಲವಾದ ಕೆರೆಯ ಏರಿ ಮೇಲೆ ನಡೆದರೆ ದೂರದಿಂದ ಕಂಪಿಲ-ಕುಮಾರರಾಮರು ಬಾಳಿ ಬದಿಕಿದ ಕುಮ್ಮಟ ದುರ್ಗ ಕಣ್ಣಿಗೆ ಬೀಳುತ್ತದೆ. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಇದೊಂದು ರೋಮಾಂಚಕಾರಕ ಕ್ಷಣ. ಯಾಕೆಂದರೆ 1512ರಲ್ಲಿ ನಂಜುಂಡ ಕವಿ ಬರೆದ ‘ಕುಮಾರರಾಮ ಚರಿತೆ’, 1650ರಲ್ಲಿ ಪಾಂಚಾಳಗಂಗ ಬರೆದ ‘ಚೆನ್ನರಾಮನ ಸಾಂಗತ್ಯ’ ಮತ್ತು 1750ರಲ್ಲಿ ಮಹಲಿಂಗ ಸ್ವಾಮಿ ಬರೆದ ‘ಬಾಲರಾಮನ ಸಾಂಗತ್ಯ’ ಕೃತಿಗಳು ಕಣ್ಣೆದುರು ಒಟ್ಟಾಗಿ ಕಾಣಿಸುವ ಕ್ಷಣಗಳವು. ನಂಜುಂಡನ ಕಾವ್ಯವು ವಿದ್ವಜ್ಜನ ಪ್ರಿಯವಾಗಿದೆ. ಆತ ಕುಮಾರರಾಮನನ್ನು ಶ್ರೀರಾಮನೊಡನೆ ಮತ್ತು ಅರ್ಜುನನೊಡನೆ ಸಮೀಕರಿಸಿ, ಅವನನ್ನು ಭಾರತೀಯ ಸಂಸ್ಕೃತ ಪರಂಪರೆಗೆ ಜೋಡಿಸಿದರೆ, ಪಾಂಚಾಳಗಂಗನು ಕುಮಾರರಾಮನನ್ನು ಜಾನಪದ ಲೋಕಕ್ಕೆ ಅನುಸಂಧಾನಗೊಳಿಸಿದ್ದಾನೆ. ಮಹಲಿಂಗಸ್ವಾಮಿಯ ಕಾವ್ಯ ಭಕ್ತಿಯುಗದಲ್ಲಿ ಹುಟ್ಟಿಕೊಂಡ ಹರಿಕಥೆ ಪರಂಪರೆಗೆ ಹತ್ತಿರವಾಗಿದ್ದು ಬಹುಜನರನ್ನು ತಲುಪುವ ಇರಾದೆಯನ್ನು ಪ್ರಕಟಪಡಿಸುತ್ತದೆ. ಜೊತೆಗೆ ಬಿ.ಎಸ್. ಗದ್ದಗೀಮಠರು ಸಂಗ್ರಹಿಸಿದ ‘ಕುಮಾರರಾಮನ ದುಂದುಮೆ, ಕ.ರಾ. ಕೃಷ್ಣಸ್ವಾಮಿಯವರು ಸಂಪಾದಿಸಿದ ‘ಧೀರಕುಮಾರರಾಮ’, ಜೀ.ಶಂ ಪರಮಶಿವಯ್ಯನವರು ವಿವರಿಸಿದ ‘ಚೆನ್ನಿಗರಾಮ’, ಡಿ. ಲಿಂಗಯ್ಯನವರು ಮರುಸೃಷ್ಟಿಸಿದ ‘ಚೆನ್ನಿಗರಾಮ’, ಡಾ. ಕೆ.ಎಂ. ಮೈತ್ರಿಯವರು ಸಂಪಾದಿಸಿದ ‘ಕೃಷ್ಣಗೊಲ್ಲರ ಕಾವ್ಯ’ ಮತ್ತತರ ಕೃತಿಗಳು ನೆನಪಿಗೆ ಬಂದು, ಕುಮ್ಮಟ ದುರ್ಗವು ಮುಕ್ತಾಯವಿಲ್ಲದ ಬೃಹತ್ಲೋಕವನ್ನು ತೆರೆದಿಡುವಂತೆ ಭಾಸವಾಗುತ್ತದೆ.   ಹಾಗೆ ನೋಡಿದರೆ, ರಾಜಕೀಯವಾಗಿ ಕುಮಾರರಾಮನು ಕರ್ನಾಟಕದ ಮಹತ್ವದ ಅರಸನೇನೂ ಅಲ್ಲ. ಆತ ರಾಜ್ಯ ವಿಸ್ತರಣೆ ಮಾಡಿಲ್ಲ. ಶಾಶ್ವತವಾಗಿ ನೆನಪಿಟ್ಟುಕೊಳ್ಳಬಲ್ಲಂಥ ಬೃಹತ್ ದೇವಾಲಯಗಳನ್ನು ಕಟ್ಟಿಲ್ಲ. ಧಾರ್ಮಿಕ ಆಂದೋಲನವನ್ನು ಹುಟ್ಟುಹಾಕಿಲ್ಲ. ಹೀಗಿದ್ದರೂ ಕರ್ನಾಟಕದ ಜನಸಾಮಾನ್ಯರ ನಡುವೆ ಇಂದಿಗೂ ಜನಪ್ರಿಯನಾಗಿರುವವನೆಂದರೆ ಕುಮಾರರಾಮನೇ ಆಗಿದ್ದಾನೆ. ಅವನ ಹೆಸರಿನ ಜಾತ್ರೆಯೊಂದು ಕುಮ್ಮಟ ದುರ್ಗದಲ್ಲಿ ನಡೆಯುತ್ತಿದ್ದು, ಅದನ್ನು ಕನ್ನಡ ಸಂಸ್ಕೃತಿಯ ಬಗೆಗೆ ಆಸಕ್ತಿಯುಳ್ಳವರೆಲ್ಲ ಹೋಗಿ ನೋಡಬೇಕು. ಕುಮಾರರಾಮ ವಾಸಿಸಿದ್ದ ಎನ್ನಲಾದ ಕುಮ್ಮಟದುರ್ಗದಲ್ಲಿ ಕುಮಾರರಾಮನು ‘ರಾಮಸ್ವಾಮಿ’ಯಾಗಿ ಆರಾಧನೆಗೊಳ್ಳುತ್ತಿದ್ದಾನೆ. ಸಾಮಾನ್ಯವಾಗಿ ಸುಗ್ಗಿ ತಿಂಗಳಿನಲ್ಲಿ ( ಮಾರ್ಚ್) ಕುಮಾರರಾಮನ ಜಾತ್ರೆ ನಡೆಯುತ್ತದೆ. ಜಾತ್ರಗೆ ಹೋದರೆ, ಕುಮಾರ ರಾಮನ ಬಗ್ಗೆ ಉತ್ಸಾಹದಿಂದ ಮಾತಾಡುವ ಸಾವಿರಾರು ಜನರು ನಮಗೆ ಎದುರಾಗುತ್ತಾರೆ. ಅವರ ಪ್ರಕಾರ ಕುಮಾರರಾಮನ ತಲೆಯು ಸದ್ಯ ಇಂದರಗಿ ಎಂಬ ಪಕ್ಕದ ಊರಿನಲ್ಲದೆ. ಮರದಿಂದ ಮಾಡಲಾದ ಈ ತಲೆಯ ಜೊತೆಗೆ ಕುಮಾರರಾಮನಿಗಾಗಿ ತಲೆದಂಡ ನೀಡಿದ ಹೋಲಿಕೆ ರಾಮನ ತಲೆಯೂ ಇದೆ. ಈ ಎರಡು ತಲೆಗಳ ಜೊತೆಗೆ ಇತರ ನಾಲ್ಕು ತಲೆಗಳೂ ಇದ್ದು ಅಗಿ ಹುಣ್ಣಿಮೆ ಕಳೆದು ಆರನೇ ದಿವಸ ಅವುಗಳಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಮರುದಿನ ಆರೂ ತಲೆಗಳನ್ನು ಅರು ಜನ ಪೂಜಾರಿಗಳು ಕೈಯಲ್ಲಿ ಹಿಡಿದುಕೊಂಡು ನೇರವಾಗಿ ಮುಕ್ಕುಂಪಿ ಗ್ರಾಮಕ್ಕೆ ಬರುತ್ತಾರೆ. ಅಷ್ಟು ಹೊತ್ತಿಗೆ ಮಲ್ಲಾಪುರದಿಂದ ಐದು ತಲೆಗಳನ್ನು ಹಿಡಿದುಕೊಂಡು ಅಲ್ಲಿನ ಪೂಜಾರಿಗಳೂ ಬರುತ್ತಾರೆ. ಮುಕ್ಕುಂಪೆಯ ಹೊರವಲಯದಲ್ಲಿ ಆ ಹನ್ನೊಂದು ತಲೆಗಳಿಗೆ ಮೆರವಣಿಗೆ ಆಗುತ್ತದೆ.   ಕತ್ತಲಾಗುವ ಹೊತ್ತಿಗೆ ಊರಮ್ಮನ ಗುಡಿಯ ಜಗಲಿಯಲ್ಲಿ 11 ತಲೆಗಳನ್ನು ಸಾಲಾಗಿ ಜೋಡಿಸುತ್ತಾರೆ. ಮಧ್ಯ ಭಾಗದಲ್ಲಿ ಮುಖ್ಯವಾದ ಎರಡು ತಲೆಗಳನ್ನು ಇಡುತ್ತಾರೆ. ಇವು ಕಂಪಿಲ ಮತ್ತು ಕುಮಾರರಾಮನ ತಲೆಗಳಂತೆ. ಮರುದಿನ ಬೆಳಗ್ಗೆ ಪೂರ್ವಾಹ್ನ ಆರು ಗಂಟೆಗೆ 11 ಜನ ಪೂಜಾರಿಗಳೂ ಒಂದೊಂದು ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಮುಕ್ಕುಂಪೆಯಿಂದ ಹೊರಡುತ್ತಾರೆ. ಸುಮಾರು ಒಂದೂವರೆ ಗಂಟೆಯ ನಡಿಗೆ ಅನಂತರ ಎಲ್ಲರೂ ಕುಮ್ಮಟದುರ್ಗದಲ್ಲಿರುವ ಕುಮಾರರಾಮ ಗುಡಿಗೆ (ರಾಮಸ್ವಾಮಿ ಗುಡಿ) ತಲುಪುತ್ತಾರೆ. ಭಕ್ತರೆಲ್ಲ ಉದ್ಘೋಷ ಮಾಡುತ್ತಿರುವ ಹೊತ್ತಿಗೆ ಪೂಜಾರಿಗಳು ಗುಡಿಯೊಳಗೆ ಈ ತಲೆಗಳನ್ನು ಇರಿಸುತ್ತಾರೆ. ಎಳೆಯ ಮಕ್ಕಳಿಗೆ ಹೆಸರಿಡುವ, ಅವಕ್ಕೆ ಅನ್ನ ಪ್ರಾಶನ ಮಾಡುವ, ಮಕ್ಕಳ ಕೂದಲು ತೆಗೆಸುವ ಕಾರ್ಯಕ್ರಮಗಳೆಲ್ಲ ಒಂದಾದ ಮೇಲೊಂದರಂತೆ, ಕೆಲವೊಮ್ಮೆ ಒಟ್ಟೊಟ್ಟಾಗಿಯೇ ನಡೆಯುತ್ತಿರುತ್ತದೆ. ಮಧ್ಯಾಹ್ನದ ಹೊತ್ತಿಗೆ ಪೂಜಾರಿಗಳು ‘ರಾಮನ ದೊಣ’ಗೆ ನಡೆಯುತ್ತಾರೆ, ತೆಂಗಿನಕಾಯಿ ಒಡೆದು, ಆರತಿ ಎತ್ತಿ ಗಂಗಾಪೂಜೆ ಮಾಡುತ್ತಾರೆ. ಅಲ್ಲಿಂದ ರಾಮಸ್ವಾಮಿ ಗುಡಿಗೆ ಹಿಂದಿರುಗುವ ಪೂಜಾರಿಗಳು ಜಟ್ಟಂಗಿ ರಾಮೇಶ್ವರನ ಪೂಜೆ ಮಾಡುತ್ತಾರೆ . ಇದರ ಜೊತೆಗೆ ‘ರಾಮಣ್ಣ-ಹೊಲಿಕೆ ರಾಮಣ್ಣರ ಮದುವೆ’ ಎಂಬ ಪ್ರಕ್ರಿಯೆ ನಡೆಯುತ್ತದೆ. ಇಷ್ಟು ಹೊತ್ತಿಗೆ ದುರ್ಗದಲ್ಲಿ ಸಾವಿರಾರು ಭಕ್ತರು ಸೇರುತ್ತಾರೆ. ಗುಡಿಯೊಳಗೆ ಪೂಜೆ ಮುಗಿದ ಆನಂತರ ಪ್ರಸಾದ ವಿತರಣೆ ಆಗುತ್ತದೆ. ಅಪರಾಹ್ನ ಸುಮಾರು 3ಗಂಟೆಗೆ, ಪೂಜಾರಿಗಳು ಗುಡಿಯೊಳಗೆ ಇರುವ ಎಲ್ಲ ತಲೆಗಳನ್ನು ಕೈಯಲ್ಲಿ ಹಿಡಿದುಕೊಂಡು ಒಬ್ಬೊಬ್ಬರಾಗಿ ಗುಡಿಯಿಂದ ಹೊರಬರುತ್ತಾರೆ. ಮತ್ತೆ ರಾಮನ ದೊಣೆಗೆ ಮೆರವಣಿಗೆ ಹೋಗಿ ಅಲ್ಲಿಂದ ಅದರ ಹಿಂಬದಿಯ ಅರಮನೆಯ ಅವಶೇಷದ ಬಳಿ ಬಂದು ‘ನ್ಯಾಯದ ಕಟ್ಟೆ’ ಎಂದು ಕರೆಯಲಾಗುವ ಸ್ಥಳಕ್ಕೆ ಬಂದು ಒಂದು ನಿಮಿಷ ಅಲ್ಲಿ ನಿಂತು ಹತ್ತಿರದ ಜಗದೇವರ ಗುಡಿಗೆ ತೆರಳುತ್ತಾರೆ. ಈ ಗುಡಿಯನ್ನು ಕೆಲವರು ಚಾವಟ್ಟಪ್ಪನ ಗುಡಿ ಎಂದು ಕತೆಯುತ್ತಾರೆ. ತಲೆಗಳನ್ನು ಸೂಳೆಯರ ಕೇರಿಯಲ್ಲಿ ಇರಿಸಿ, ಮತ್ತೆ ಅವಕ್ಕೆ ಪೂಜೆ ನಡೆಯುತ್ತದೆ. ಆನಂತರ ಅರಸಿನದ ಓಕುಳಿ. ನಡೆಸುತ್ತಾರೆ. ಓಕುಳಿಯ ನಂತರ ಎಲ್ಲ ತಲೆಗಳನ್ನೂ ಮತ್ತೆ ಗುಡಿಗೆ ತರಲಾಗುತ್ತದೆ.

ಸಾಯಂಕಾಲ ನಾಲ್ಕು ಗಂಟೆ ಸುಮಾರಿಗೆ, 11 ಶಿರಗಳಲ್ಲಿ ಎರಡನ್ನು ಮಾತ್ರ ಪೂಜಾರಿಗಳು ಎತ್ತಿಕೊಳ್ಳುತ್ತಾರೆ. ಇದು ಕುಮಾರರಾಮನ ಮತ್ತು ಹೋಲಿಕೆ ರಾಮನ ತಲೆಗಳೆಂದು ಜನರು ಹೇಳುತ್ತಾರೆ. ಈ ತಲೆಗಳನ್ನು ಗುಡಿಯ ಎಡಭಾಗದಲ್ಲಿ ತಂದಿರಿಸಲಾಗುತ್ತದೆ. ಅವುಗಳಿಗೆ ಕುರಿ ಬಲಿ ನೀಡಿ, ಬಲಿಕೊಟ್ಟ ಕುರಿಗಳ ರಕ್ತವನ್ನು ಜೋಳದ ನುಚ್ಚಿನಲ್ಲಿ ಬೆರೆಸುತ್ತಾರೆ. ಇದನ್ನು “ನೀರಗೂಳ್” ಎಂದು ಕರೆಯುತ್ತಾರೆ. ನೀರ್ಗೂಳ್ನ್ನು ವಿಶಾಲವಾದ ಬಂಡೆಯ ಮೇಲೆ ರಾಶಿ ಮಾಡಿಡುತ್ತಾರೆ. ಅಲ್ಲಿಗೆ ಇತರ ತಲೆಗಳನ್ನು ತರುತ್ತಾರೆ. ಮುಂದೆ ನೀರ್ಗೂಳ್ನ್ನು ಮುಕ್ಕುಂಪಿ, ಇಂದರಗಿ, ಬಾದುರಬಂಡಿ, ಕೊಪ್ಪಳ, ಇಲಕಲ್, ಹಂಪನದುರ್ಗ, ರಾಮನದುರ್ಗ ಮತ್ತು ಮಲ್ಲಾಪುರದ ಊರುಗಳ ಮುಖ್ಯಸ್ಥರಿಗೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಹೀಗೆ ತೆಗೆದುಕೊಂಡು ಹೋಗುವ ನೀರಗೂಳ್ನ್ನು ಒಯ್ದವರು ತಮ್ಮ ಊರಿನ ಭೂಮಿಯಲ್ಲಿ ಸುರಿಯುತ್ತಾರೆ. ಹಾಗೆ ಸುರಿದರೆ ಭೂಮಿ ಫಸಲು ಚೆನ್ನಾಗಿ ಬರುತ್ತದೆ ಎಂದು ಜನರು ನಂಬುತ್ತಾರೆ. ಜಾತ್ರೆಯಲ್ಲಿ ಕೊನೆಯಲ್ಲಿ ‘ಅಕ್ಕಿ ಪಡಿ’ಗಳ ವಿತರಣೆ ನಡೆಯುತ್ತದೆ. ಕತ್ತಲಾಗುತ್ತಿದ್ದಂತೆ ಜನರು ನಿಧಾನವಾಗಿ ಕರಗುತ್ತಾರೆ. ಬೆಟ್ಟದ ಮೇಲ ತಡವಾಗಿ ಉದಯಿಸುವ ಚಂದಿರನ ನೋಡುತ್ತಾ ಕುಮ್ಮಟದ ಹಾಸು ಕಲ್ಲಿನ ಮೇಲೆ ನಿದ್ರಿಸಿದರೆ, ಬೆಳಗಾಗುವಾಗ ಮತ್ತೆ ಪಾಳುಬಿದ್ದ ಕುಮ್ಮಟದ ಒಡಲಲ್ಲಿದ್ದ ಅನುಭವ. ತಮಗೆ ಇಷ್ಟವಾದ ನಾಯಕನ ನೆನಪನ್ನು ಜನರು ತಮ್ಮದೇ ರೀತಿಯಲ್ಲಿ ಮುಂದುವರಿಸಿಕೊಂಡು ಬಂದ ಬಗೆಯಿದು. ಈ ಜನರಿಗೆ ಚರಿತ್ರೆ ಇಲ್ಲವೆಂದು ಯಾರೂ ತಿಳಿಯಬಾರದು. ಅವರು ಇತಿಹಾಸವನ್ನು ಬರೆದ ರೀತಿಯೇ ಬೇರೆ. ಅದನ್ನು ಓದುವ ಕಲೆ ನಮಗೆ ಸಿದ್ಧಿಸಬೇಕು.  ]]>

‍ಲೇಖಕರು G

August 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಬೇಕು

ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಬೇಕು

ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮ  ನಿರ್ದೇಶಕ ದೆಹಲಿ ತುಳು ಸಿರಿ ದ್ರಾವಿಡ ಭಾಷಾ ವರ್ಗದಲ್ಲಿ ತುಳುವಿಗೆ ವಿಶಿಷ್ಟವಾದ ಸ್ಥಾನವಿದೆ. 1856...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This