ಬಿಳಿಮಲೆ ಪತ್ರ- ‘ಕಡಲ ತಡಿಯ ತಲ್ಲಣ’

 

dk_mangalore_fishing_small

ನಾನು ಹುಟ್ಟಿದ ಜಿಲ್ಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ.
ನನ್ನ ಜಿಲ್ಲೆಯ ಬಗ್ಗೆ ನನಗೆ ಅತೀವ ಮೋಹ.
ಬೋರ್ಗೆರೆವ ಕಡಲು, ಪಶ್ಚಿಮ ಘಟ್ಟ ಶ್ರೇಣಿ, ಝುಳು ಝುಳು ಹರಿಯುವ ನದಿ, ಹಚ್ಚ ಹಸಿರಿನ ವನಸಿರಿ, ಸದಾ ಕ್ರಿಯಾಶೀಲರಾಗಿರುವ ಜನ- ಪುರಾಣದಲ್ಲಿ ವರ್ಣಿತವಾಗಿರುವ ನಾಗಲೋಕವಿದು.

’ತುಳುನಾಡು’ ಎಂದು ಕರೆಯಲ್ಪಡುವ ಈ ಕರಾವಳಿ ಸಮೃದ್ದವಾದ ಕಲಾ ಪರಂಪರೆಯನ್ನು ಹೊಂದಿದೆ. ಇಲ್ಲಿ ನಾಗಾರಾಧನೆ, ಭೂತಾರಾಧನೆಯಂತ ಆರಾಧನ ಪದ್ದತಿಯಿದೆ. ಕಂಬಳ, ಚೆನ್ನೆಮಣೆ, ಕಾಯಿ ಕುಟ್ಟುವುದು, ಕೋಳಿ ಅಂಕದಂತ ಜಾನಪದ ಕ್ರೀಡೆಗಳಿವೆ. ಆಟಿಕಳಂಜ, ಚೆನ್ನುನಲಿಕೆಯಂತ ಜಾನಪದ ಕುಣಿತವಿದೆ. ಧರ್ಮ ಸಮನ್ವಯಕ್ಕೆ ಕಾರಣವಾದ ಅಲಿ, ಬಬ್ಬರ್ಯ ಭೂತವಿದೆ. ಸರ್ವಧರ್ಮದವರಿಂದಲೂ ಪೂಜಿಸಲ್ಪಡುವ ಅತ್ತೂರು ಚರ್ಚ್ ಇದೆ. ಜೈನ-ಶೈವ ಸಂಗಮದ ಧರ್ಮಸ್ಥಳವಿದೆ. ಉಳ್ಳಾಲದ ದರ್ಗವಿದೆ. ಬಪ್ಪಬ್ಯಾರಿಯಿಂದ ಕಟ್ಟಲಾಗಿದೆಯೆನ್ನುವ ಮುಲ್ಕಿಯ ಕಾರ್ನಾಡ್ ದುರ್ಗಪರಮೇಶ್ವರಿ ದೇವಸ್ಥಾನವಿದೆ.

ಹಾಗಿದ್ದರೂ ನನ್ನ ಜಿಲ್ಲೆಯಿಂದು ಕೋಮು ಗಲಭೆಗಳಿಂದ ತತ್ತರಿಸಿದೆ. ಮಾತೃಮೂಲ ಸಂಸ್ಕೃತಿ ಇನ್ನೂ ಜೀವಂತವಾಗಿರುವ ಈ ನಾಡಿನಲ್ಲಿ ಮಹಿಳೆಯರ ಮೇಲೆ ನಿರಂತರ ಹಲ್ಲೆಗಳಾಗುತ್ತಿದೆ. ಜನ ಭಯಭೀತರಾಗಿದ್ದಾರೆ. ದನಿಯೆತ್ತಿದವರ ಧ್ವನಿಯನ್ನು ಅಡಗಿಸಲಾಗುತ್ತಿದೆ.

ಏನಾದರೂ ಮಾಡಬೇಕಲ್ಲಾ……. ಎಂದಾಗ ಹುಟ್ಟಿಕೊಂಡದ್ದೇ ಈ ಆಲೋಚನೆ.

ನಾನು ಮತ್ತು ಬೆಂಗಳೂರಿನ ಉಷಾ ಕಟ್ಟೆಮನೆ ಸೇರಿ ‘ಕಡಲ ತಡಿಯ ತಲ್ಲಣ’ ಎಂಬ ಪುಸ್ತಕವನ್ನು ಸಂಪಾದಿಸುತ್ತಿದ್ದೇವೆ. ಸೃಷ್ಟಿ ಪ್ರಕಾಶನದ ನಾಗೇಶ್ ಅದನ್ನು ಪ್ರಕಟಿಸುತ್ತಿದ್ದಾರೆ ನಮ್ಮ ಗೆಳೆಯರ ಬಳಗ ಒತ್ತಾಸೆಯಾಗಿ ನಿಂತಿದೆ. ದೆಹಲಿಯಲ್ಲಿ ಮುಂಬಯಿಯಲ್ಲಿ ಮತ್ತು ಬೆಂಗಳೂರಲ್ಲಿ ಪುಸ್ತಕ ಬಿಡುಗಡೆಯಾಗಲಿದೆ.

ತುಳುನಾಡನ್ನು ಕೇಂದ್ರಿಕರಿಸಿರುವ ಈ ಪುಸ್ತಕದಲ್ಲಿ ಕಡಲ ಕಿನಾರೆಯ ಬಹಳಷ್ಟು ಲೇಖಕರ ಬರಹಗಳಿರುತ್ತವೆ. ಅವುಗಳು ಈಗ ತಾನೆ ಅಚ್ಚಿನ ಮನೆ ಪ್ರವೇಶಿಸುತ್ತಲಿದೆ. ಇನ್ನು ಕೆಲವೇ ದಿನಗಳಲ್ಲಿ ಅದು ನಿಮ್ಮ ಕೈ ಸೇರಲಿದೆ. ಅದಕ್ಕೆ ಮೊದಲು ನಿಮ್ಮನ್ನೊಂದು ಸಲಹೆ ಕೇಳೋಣ ಅನಿಸಿತು.’ಕಡಲ ತಡಿಯ ತಲ್ಲಣ’ ಕುರಿತಂತೆ ತಮ್ಮ ಸಲಹೆ ಸೂಚನೆಗಳಿಗೆ ಸ್ವಾಗತವಿದೆ. ನಾವು ಮುನ್ನಡೆಯುವಲ್ಲಿ ಅದು ಸಹಾಯಕವಾಗಬಹುದೆಂಬ ನಂಬಿಕೆ ನಮ್ಮದು.

ಉಷಾ ಕಟ್ಟೆಮನೆ ಮತ್ತು
ಪುರುಷೋತ್ತಮ ಬಿಳಿಮಲೆ

‍ಲೇಖಕರು avadhi

March 6, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

8 ಪ್ರತಿಕ್ರಿಯೆಗಳು

 1. ravikrishnareddy

  ಮಾನ್ಯರೆ,

  ಕರಾವಳಿಯ ವಾಸ್ತವ ನೋಡಿದರೆ, ಇಂತಹ ಸಾಂಘಿಕ ಕೆಲಸ ಎಂದೋ ಆಗಬೇಕಿತ್ತು, ಅದು ಪ್ರಜ್ಞಾವಂತರ ಜವಾಬ್ದಾರಿಯೂ ಆಗಿತ್ತು, ಎನ್ನಿಸುತ್ತದೆ.

  ಕರಾವಳಿಯ ಪ್ರಜ್ಞಾವಂತ ಚಿಂತಕ/ಲೇಖಕರಲ್ಲಿ ಬಹುತೇಕರು ಕಳೆದ ದಶಕದಿಂದ ಸಂಭವಿಸುತ್ತ ಬಂದ ಅನೇಕ ಘಟನೆಗಳಿಗೆ ಪ್ರತಿರೋಧ ತೋರದೆ ಇದ್ದದ್ದು, ಸಾಂಘಿಕವಾಗಿ ಕರಾವಳಿಯ ತಲ್ಲಣವನ್ನು ಎದುರುಗೊಳ್ಳಲು ಪ್ರಯತ್ನಿಸದೆ ಇದ್ದದ್ದೆ ಈಗಿನ ಪರಿಸ್ಥಿತಿಗೆ ಕಾರಣ ಎಂದು ನಾನು ಭಾವಿಸುತ್ತೇನೆ. ಕೆಲವೆ ಕೆಲವು ಜನ ಮಾತ್ರ ತಮ್ಮ ವೈಯಕ್ತಿಕ ನೆಲೆಯಲ್ಲಿ ಅಲ್ಲಿ ದೀಪವನ್ನು ಕಾಪಿಟ್ಟುಕೊಂಡಿದ್ದರು, ಹಾಗು ಅದಕ್ಕೆ ಬಹುತೇಕ ಒಳ್ಳೆಯವರ ನೈತಿಕ ಬೆಂಬಲವೂ ಇರಲಿಲ್ಲವೇನೊ ಎನ್ನುವ ಸಂದೇಹ ನನ್ನದು. ಯಾವಾಗ ವೈಚಾರಿಕ/ಪ್ರಗತಿಪರ/ಉದಾರವಾದಿ ಜನ ನಿಷ್ಕ್ರಿಯರಾಗುತ್ತಾರೊ ಆಗ ಎಲ್ಲಾ ತರಹದ ಪ್ರತಿಗಾಮಿಗಳೂ ನಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ನಾಯಕರಾಗುತ್ತಾರೆ. ಹೀಗಲ್ಲದೆ ಅದು ಕರಾವಳಿಯಲ್ಲಿ ಹೇಗೆ ಸಾಧ್ಯವಾಯಿತು? ನೀವು ಸಲಹೆಗೆ ಆಹ್ವಾನ ಕೊಟ್ಟಿರುವುದರಿಂದ ಬರೆಯುತ್ತಿದ್ದೇನೆ. ನಿಮಗೆ ನನ್ನ ಈ ಮಾತು ಯೋಗ್ಯವಾದದ್ದು ಅನ್ನಿಸಿದರೆ ದಯವಿಟ್ಟು ಇದನ್ನು ಪುಸ್ತಕ ಬಿಡುಗಡೆಯ ದಿನ (ಚರ್ಚೆ/ಸಂವಾದ ಇದ್ದಲ್ಲಿ) ಒಂದು ಪ್ರಶ್ನೆಯಾಗಿ ಸ್ವೀಕರಿಸಿ. ಈ ಪುಸ್ತಕ ಬಿಡುಗಡೆ ಸಭೆಗಳ ಮೂಲಕ ಕರಾವಳಿಯ ಪ್ರಜ್ಞಾವಂತ ಜನ ಮುಂದಕ್ಕೆ ಸಾಂಘಿಕವಾಗಿ ಇಡಬೇಕಾದ ಹೆಜ್ಜೆಯ ಬಗ್ಗೆ ಒಂದು ಕ್ರಿಯಾರೂಪಕ್ಕೆ ಬರಬಹುದಾದರೆ ಸಂತೋಷ.

  ಅಂದ ಹಾಗೆ, ‘ಈ ಪುಸ್ತಕದ ಮೂಲಕ ಈಗಲಾದರೂ ಸಾಂಘಿಕ ಪ್ರಯತ್ನಕ್ಕೆ ಮತ್ತು ಆ ಮೂಲಕ ಒಂದು ಚರ್ಚೆಗೆ ತಾವು ತೊಡಗಿಕೊಳ್ಳುತ್ತಿರುವುದು ಭವಿಷ್ಯದ ಬಗ್ಗೆ ಆಶಾವಾದ (ಕೂಡಲೆ ಅಲ್ಲದಿದ್ದರೂ) ಹುಟ್ಟಿಸುತ್ತದೆ,’ ಎಂದು ಹೇಳದೆ ಹೋದರೆ ಅದು ನನ್ನ ಖುಷಿಗೆ ಅಪಚಾರವಾಗುತ್ತದೆ.

  ನಮಸ್ಕಾರ,
  ರವಿ…
  http://www.ravikrishnareddy.com

  ಪ್ರತಿಕ್ರಿಯೆ
 2. ಸಂದೀಪ್ ಕಾಮತ್

  ‘ ಜೈ ತುಳುನಾಡು ’ (ಸಾಧು ಶೆಟ್ರ ಕಾಪಿ ರೈಟ್ ಇಲ್ಲ ಅಂದುಕೊಂಡಿದ್ದೀನಿ ).
  ತುಳುನಾಡಿನ ತಲ್ಲಣದ ಬಗ್ಗೆ ಪುಸ್ತಕ ಬರುತ್ತಿರೋದು ಪ್ರಶಂಸನೀಯ.

  ಆದ್ರೆ ತಲ್ಲಣದ ಬಗ್ಗೆ ಸ್ವಲ್ಪ ಕಡಿಮೆ ಮಾಹಿತಿ ಇದ್ರೆ ಒಳ್ಳೆಯದು.ತಲ್ಲಣದ ಮೂಲ ರಾಜಕೀಯ ಅನ್ನೋದು ಎಲ್ಲರಿಗೂ ಗೊತ್ತಿದೆ.ಹಾಗಾಗಿ ಜಾಸ್ತಿ ಜಾಸ್ತಿ ತಲ್ಲಣದ ಬಗ್ಗೆ ಬರೆಯೋದಕ್ಕೆ ಹೊರಟ್ರೆ ಅದೊಂದು ರಾಜಕೀಯದ ಬಗ್ಗೆ ಸಂವಾದ ಆಗಿ ಬಿಡುತ್ತೆ….
  ಹಾಗಾಗಿ ಕಡಲತಡಿಯ ಬಗ್ಗೆ ಜಾಸ್ತಿ ವಿಷಯ ಇರಲಿ ತಲ್ಲಣ ಸ್ವಲ್ಪವೇ ಇರಲಿ ಅನ್ನೋ ಆಸೆ!(ಈಗಾಗ್ಲೇ ಅಚ್ಚಿಗೆ ಹೋಗಿದೆಯಲ್ವ !!!)
  ತುಳುನಾಡು ಬಹಳಷ್ಟು ಪ್ರತಿಭಾವಂತರನ್ನು ಹುಟ್ಟು ಹಾಕಿದೆ.ಬಾಲಿವುಡ್ ನಿಂದ ಸ್ಯಾಂಡಲ್ವುಡ್ ,ಕೊಲಿವುಡ್ ,ಟಾಲಿವುಡ್ ಗಳಲ್ಲಿ…ಬ್ಯಾಂಕಿಂಗ್ ನಿಂದ ಹಿಡಿದು ಸಾಫ್ಟ್ವೇರ್ ನ ವರೆಗೆ….ಎಸ್ಸೆಲ್ ವರ್ಲ್ಡ್ ನಿಂದ ಹಿಡಿದು ಅಂಡರ್ ವರ್ಲ್ಡ್ ನ ವರೆಗೆ ಮಾಡಿದ ಎಲ್ಲ ಕೆಲಸಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ ತುಳುನಾಡಿನವರು…
  ರವಿಯವರು ಹೇಳಿದ ಹಾಗೆ ಪ್ರತಿಭಾವಂತರು ಪ್ರಜ್ಞಾವಂತರಾದರೆ ಎಲ್ಲವೂ ಸರಿ ಹೋಗುತ್ತೆ.

  ಪ್ರತಿಕ್ರಿಯೆ
 3. harishkera

  ಒಳ್ಳೆಯ ಪ್ರಯತ್ನ. ಎಂದೋ ಆಗಬೇಕಾಗಿತ್ತು. ಕರಾವಳಿಯ ಸೌಹಾರ್ದವನ್ನು ಕಾಪಾಡುವುದೇ ನಮ್ಮ ಆದ್ಯತೆಯಾಗಬೇಕು.
  -ಹರೀಶ್ ಕೇರ

  ಪ್ರತಿಕ್ರಿಯೆ
 4. ಸುಗಂಧ್

  ಬಿಳಿಮಲೆಯವರೇ, ನಿಮ್ಮ ಪ್ರಯತ್ನ ನಿಜಕ್ಕೂ ಜರೂರಾಗಿತ್ತು. ಆದರೆ, ನಾನು ಬಲ್ಲಂತೆ ಕರಾವಳಿಯಲ್ಲಿ ಪ್ರತಿಭಾವಂತರಿಗೆ, ಕ್ರಿಯಾಶೀಲರಿಗೆ ಕೊರತೆ ಇಲ್ಲ. ಅಲ್ಲಿನ ಪ್ರತಿಭೆಗಳ ವೈವಿಧ್ಯ ಕಡಲಿನಷ್ಟೇ ವೈವಿಧ್ಯ. ಆದರೆ, ನಾನು ಗಮನಿಸಿದಂತೆ ಬಹುತೇಕ ಕರಾವಳಿಯ ಜನಸಮುದಾಯದಲ್ಲಿ ಒಂದು ಅತಿಯಾದ ಻ಹಂ ಅಥವಾ ತಾವೇ ಶ್ರೇಷ್ಠರು ಎಂಬ ಭಾವನೆ ಸಾಮಾನ್ಯ. ಅಂತಹದ್ದೇ ಭಾವನೆಯ ಕಾರಣದಿಂದಾಗಿ ಅಲ್ಲಿ ಇವತ್ತು ತಮ್ಮ ಯೋಚನಾ ಲಹರಿಯೇ ಸರಿ, ಕೋಮು ವೈಷಮ್ಯ ಭಾವನೆಯೇ ರಾಷ್ಟ್ರ ಪ್ರೇಮ ೆಂಬ ಻ತಿವಿಶ್ವಾಸ ಮೂಡಿಬಿಟ್ಟಿದೆ. ಅಂತಹ ಸಮೂಹಸನ್ನಿಯಂತಹ ಸ್ಥಿತಿಯಲ್ಲಿ ಒಂದು ಪುಸ್ತಕ- ಲೇಖನದಿಂದ ತತಕ್ಷಣದ ಬದಲಾವಣೆ ನಿರೀಕ್ಷಿಸುವಂತಿಲ್ಲ. ಇವತ್ತು ನಿಮ್ಮ ಪುಸ್ತಕದಲ್ಲಿ ಕೂಡ ವಸ್ತುನಿಷ್ಠವಾಗಿ, ಸ್ವತಂತ್ರವಾಗಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದೇ ಆದರೆ, ಅದನ್ನು ಕೂಡ ಸರ್ಕಾರವೇ ಮುಂದೆ ನಿಂತು ಬ್ಯಾನ್ ಮಾಡಿದರೂ ಅಚ್ಚರಿಯಿಲ್ಲ. ಹೀಗಿರುವಾಗಲೂ, ನಾವು ಭರವಸೆ ಕಳೆದುಕೊಳ್ಳಬಾರದಲ್ಲವೆ? ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ. ರವಿಕೃಷ್ಣ ರೆಡ್ಡಿಯವರ ಮಾತನ್ನೂ ಕೂಡ ನಾವು ಗಂಭೀರವಾಗಿ ಯೋಚಿಸಬೇಕಿದೆ.

  ಪ್ರತಿಕ್ರಿಯೆ
 5. ಸಂದೀಪ್ ಕಾಮತ್

  ಸುಗಂಧ್ ರವರೇ ,
  There is a narrow line between inferiority complex and superiority complex.

  ಇದನ್ನು ಬ್ಯಾಲೆನ್ಸ್ ಮಾಡೋದು ಸ್ವಲ್ಪ ಕಷ್ಟ .ಸ್ವಲ್ಪ ಎಡವಟ್ಟಾದ್ರೂ ನಾನು ವೇಸ್ಟ್ ಅನ್ನೋ ಭಾವನೆ ಇಲ್ಲ ನಾನೇ ಗ್ರೇಟ್ ಅನ್ನೋ ಭಾವನೆ ಬಂದು ಬಿಡುತ್ತೆ.

  ಕೋಮು ವೈಶಮ್ಯ ಕ್ಕೆ ಕಾರಣ ರಾಜಕೀಯ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ ..ಅದಕ್ಕೂ ಕರಾವಳಿ ಜನರ ’ಅಹಂ’ ಗೂ ಸಂಬಂಧ ಇಲ್ಲ.

  ಪ್ರತಿಕ್ರಿಯೆ
 6. Purushotham Bilimale

  ಕರಾವಳಿಯ ಜನಪ್ರತಿನಿಧಿಗಳಾದ ಶ್ರೀ ವೀರಪ್ಪ ಮೊಇಲಿ, ಅಸ್ಕರ ಫೆರ್ನಂಡಿಸ್, ಜನಾರ್ಧನ ಪೂಜಾರಿ ಹಾಗು ಈಗ ಶ್ರೀ ಸದಾನಂದ ಗೌಡ ಇವರೆಲ್ಲ ತಮ್ಮ ಜಗಳ ಮರೆತು ಊರಿಗೆ ಕೆಲಸ ಮಾಡಿದ್ದರೆ, ನಮಗೆ ಈ ಗತಿ ಬರುತ್ತಿರಲಿಲ್ಲವೋ ಏನೋ?

  ಪ್ರತಿಕ್ರಿಯೆ
 7. murali

  purushothama sir nimage shubhavagali eeevaregu neevu barediruvudannu odidaga nimage salahe koduvudu
  moorkathana pusthaka kkagi katharisuthiddeve. va
  vandanegalu.preethiyinda.murali bangalore.

  ಪ್ರತಿಕ್ರಿಯೆ
 8. ಉಷಾಕಟ್ಟೆಮನೆ

  ’ಕಡಲ ತಡಿಯ ತಲ್ಲಣ’ದಲ್ಲಿ ಆಕ್ರೋಶವಿಲ್ಲ; ಹೇಳಿಕೆಗಳಿಲ್ಲ
  . ನಾವು ’ಹಾಗಿಲ್ಲ’ ಮತ್ತು”ಹೇಗಿದ್ದೆವು’ ಎಂಬುದನ್ನು ತೋರಿಸುವ ಪ್ರಯತ್ನವನ್ನಷ್ಟೆ ಮಾಡುತ್ತಿದ್ದೇವೆ.
  ಇದರಲ್ಲಿ ವರದಿಯಿದೆ, ಲೇಖನವಿದೆ. ಕಥೆಯಿದೆ, ಕವನವಿದೆ, ಅನುಭವಕಥನವಿದೆ,ಪತ್ರವಿದೆ, ಹಿರಿಯರ ಮುನ್ನುಡಿಯಿದೆ.
  ಮುಖ್ಯವಾಗಿ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಅವರಿಗೆಇದೊಂದು ಕೈಪಿಡಿಯಾಗಲೆಂಬ ಆಶಯ ನಮ್ಮದು.
  ಸ್ಯಾಂಪಲ್ ಬರಹಕ್ಕಾಗಿ ನಾಳೆ[ಮಾ.೮]ಯ ಕನ್ನಡಪ್ರಭ ಪುರವಣಿಯನ್ನು ನೋಡಿ.
  ನಾವು ಆಶಾವಾಧಿಗಳು. ಒಳ್ಳೆಯ ದಿನಗಳು ಖಂಡಿತಾ ಬರಲಿವೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: