ಬೀದಿಗೆ ಬಂದ ನವಿಲು

ರಂಜಿನಿ ಪ್ರಭು

ಬನದ ಎದೆಯೊಳಗಿಂದ ಬಂತು
ನವಿಲೊಂದು ಬೀದಿ ಬದಿಗೆ
ಸರಸತಿಯ ಸಿರಿನವಿಲು
ಶಿವಸುತನ ರಥ ನವಿಲು
ಚೆಲುವಿನಾ ಗಿರಿ ನವಿಲು
ನವ್ವಾಲೆ ಬಂತಪ್ಪಾ ಹಾಡುತ್ತಾ
ಗರಿ ಮರಿ ಹಾಕಿದೆಯಾ ನೋಡುತ್ತಾ
ಕಳೆದ ಬಾಲ್ಯದ ನೆನಪಾದ ನವಿಲು
ಗಿರಿಯ ಹರವಿನಲ್ಲಿ ಕುಣಿವ
ನವಿಲಿನ ಗರಿ ಅರಳುವ ಪರಿ
ಹಿಮಾಲಯದ ಕಣಿವೆಯಲ್ಲಿ ಹೂ ಅರಳಿದಂತೆ

ನವಿಲೆಂದರೆ ನವಿಲೇ
ನಾಡಹಕ್ಕಿ
ನಾಟ್ಯಮಯೂರಿ
ಹಾದಿಬೀದಿಗಳಲ್ಲಿ ಸಿಗದ
ಮೌನ ಧ್ಯಾನಸ್ಥ ನವಿಲು
ಗಗನದ ಮೇಘ ಸಂಚರಿಸಿದಾಗ
ಮನದೊಳಗೆ ಭಾವ ಉತ್ಕರ್ಷವಾಗಿ
ನಿಧನಿಧಾನ ಒಂದೊಂದೇ ಹೆಜ್ಜೆ ಹಾಕಿದರೆ
ಗರಿ ಬಿಚ್ಚಿದರೆ
ಆಗ ಹೊಸ ಕವಿತೆ ಹಾಡೀತು
ನವಚಿತ್ರ ಮೂಡೀತು

ಆಗ…..

ಬನದ ಗುಡ್ಡದ ತುಂಬಾ
ನೂರು ಬಗೆ ಹಣ್ಣು
ಹಚ್ಚ ಹಸುರಿನ ಮೆತ್ತೆ
ವಸಂತದ ಚಿಗುರು ಹೂವ ಗಂಧ
ವಿರಹದಾಷಾಢ ಕಳೆದರೆ
ತುಂಬು ಕೆಚ್ಚಲ ಕಪಿಲೆ ಬಾನಿನಲ್ಲಿ
ಗಿರಿಯ ಬನ ಅರಮನೆಯ ಜನ
ಪರ್ಣಕುಟಿಯ ವನ
ಕೋಮಲಾಂಗಿಯರ ಕೈಯ ಲಯಬದ್ಧ ತಾಳ
ಎಲ್ಲವೂ ಮೆಚ್ಚುಗೆ ಎಲ್ಲೆಡೆಯೂ ಮನ್ನಣೆ
ಕಂಡರೆ ಕೈಮುಗಿವ ಧನ್ಯತೆಯ ಭಾವ

ಈಗ….

ಎಲ್ಲಿ ಅರಿಕೇಸರಿ ಅತ್ತಿಮಬ್ಬೆ
ಬಿಜ್ಜಳ ಭೋಜರಾಜ ಕೃಷ್ಣದೇವ?
ರಮ್ಯ ನರ್ತನಕು ಇರಬಹುದು
ಖಾಲಿ ಸಭಾಂಗಣ
ಹಸಿರೇ ಇಲ್ಲ ಬನ ಇನ್ನೆಲ್ಲಿ
“ಹುಲುಮೊರಡಿಯೊಳು ಆಡೀತೇ ನವಿಲು?”
ಕೆಂಬೂತ ಗರಿ ಬಿಚ್ಚಿದರೂ ಸಾಕು ಈಗೀಗ
ನವಿಲೇ ಏಕೆ ಬೇಕು?……

ಬೀದಿ ಬದಿಗೆ ಬಂದಿದೆ ನವಿಲು
ಪಚ್ಚೆನೀಲಿಯ ಕೊರಳ ತುಂಬಾ
ತುಂಬಿದ ವಿಷಾದದ ದನಿ ಅಡಗಿಸಿ
ಗರಿಗಳ ಭಾ….ರ ಎಳೆದುಕೊಂಡು
ನೂರು ವಾಹನದ ರಸ್ತೆಧೂಳಿಗೆ ಬಂದು
ಕತ್ತೆತ್ತಿ ನೋಡುವ
ಶಿಖಿಯ ಕಣ್ಣಲ್ಲೇನೋ ಕಾಣುತಿದೆ
ದೈನ್ಯತೆ
ಒಳಗಣ್ಣಲ್ಲಿ ಏನಿದೆಯೋ
ಯಾವ ಕಾತರ ನಿರೀಕ್ಷೆ
ಏನು ಬೇಕಿದೆ ಅದಕೆ
ಮೆಚ್ಚುಗೆಯ ಕರತಾಡನವೋ
ಪ್ರೀತಿಯ ಮಾತುಗಳೋ
ತಲ್ಲಣಗಳಿಗೆಲ್ಲ ವಿರಾಮ ನೀಡುವ
ಒಂದು
ಭರವಸೆಯ
ರಾಮಸ್ಪರ್ಶವೋ….

‍ಲೇಖಕರು Avadhi

February 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮುಳುಗಿದ ಕಲ್ಲು ಮತ್ತು ಷೋ-ರೂಮಿನ ಬೈಕು

ಮುಳುಗಿದ ಕಲ್ಲು ಮತ್ತು ಷೋ-ರೂಮಿನ ಬೈಕು

ಅನಂತ ಕುಣಿಗಲ್ ರಸ್ತೆಯ ಆ ಬದಿಯಲ್ಲಿಒಂದು ನುಣುಪಾದ ಕಲ್ಲು ಬಿದ್ದಿತ್ತುಬಿಸಿಲ ಬೇಗೆಗೆ ಸುಡುತ್ತಿತ್ತು ದಿನ ಕಳೆದಂತೆ ಕಲ್ಲಿನ ಅರ್ಧ...

ನಾನು ಅತಿ ಕೆಟ್ಟ ಹೆಣ್ಣು..

ನಾನು ಅತಿ ಕೆಟ್ಟ ಹೆಣ್ಣು..

ಪ್ರೇಮಾ ಟಿ ಎಮ್ ಆರ್ ಹಾಂ ನಾನು ಅತಿ ಕೆಟ್ಟ ಹೆಣ್ಣುನೀವೇ ಹೇಳಿದ ಮೇಲೆ ಸುಳ್ಳಾಗುವದು ಹೇಗೆ?ಅದೆಷ್ಟು ಶಾಸನಗಳ ಬರೆದವರು ನಿಮ್ಮ ಗಿಳಿ...

ಭವಿಷ್ಯತ್ಕಾಲ

ಭವಿಷ್ಯತ್ಕಾಲ

ಸುನೀತಾ ಬೆಟ್ಕೇರೂರ ಬರುತ್ತಿದ್ದೇನೆ ನಾನುಬೇಡುವುದಿಲ್ಲಹೂವ ಬೆಳೆಸಿ ನಾನುಬರುವದಾರಿಗೆಂದು, ನೀವುಮುಳ್ಳನ್ಹರಡಿದರೂಮುನ್ನಡೆಯುತ್ತೇನೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This