ಬೀಸುಗಾಳಿ, ಹೂಮಳೆ, ಮರೆಯಾದ ತುಂಟ ಹುಡುಗಿಯರು…

ಹೈವೇ 7

———-

ಅಭಿನವ ಬೋದಿಲೇರ್ ಎಂದು ಕರೆಯಲ್ಪಡುವ ಹೊಸ ತಲೆಮಾರಿನ ಕವಿ ವಿ.ಎಂ.ಮಂಜುನಾಥ್ ತಮ್ಮ ಹಸಿ ಹಾಗೂ ತೀಕ್ಷ್ಣ ಪ್ರತಿಮೆಗಳ ಮೂಲಕ ಕನ್ನಡ ಕಾವ್ಯಾಸಕ್ತರನ್ನು ಅಚ್ಚರಿಗೊಳಿಸಿದವರು. ಅವರು ಈಚೆಗೆ ಬರೆಯುತ್ತಿರುವ ಹೈವೆ-೭ ಎಂಬ ಆತ್ಮಕಥನದ ಕೆಲವು ವಿಶಿಷ್ಟ ಭಾಗಗಳು ಈ ವಾರದಿಂದ…

* * *

ಭಾಗ: ಒಂದು

hoovu.jpgದು ನನ್ನ ದೇಹ ವೃತ್ತಾಂತ
ಏಕೆಂದರೆ, ಅದು ತೀರಿ ಹೋಗುವಂತಹದ್ದು.

ನಿರ್ಭಾವುಕ ಜಂತುವಿನಂತೆ ಅದು
ಕೊಲ್ಲುವ, ಕೊಂದುಕೊಳ್ಳುವ, ಸನ್ನಡತೆಯ
ರಕ್ತಮಾಂಸದ, ಕೊಳಕು ಸ್ನಾಯುಗಳ,
ಗೆದ್ದಲು ಹುಳುಗಳನ್ನು ಕಂಗೆಡಿಸುವ
ಹೀಗೊಂದು ನೀಚ ಮರವಷ್ಟೇ.

ಡ ಗ್ರಾಮವೊಂದನ್ನು ನಿತ್ಯ ಕೊಲ್ಲುವ ಡೀಸೆಲ್ ಫ್ಯಾಕ್ಟರಿಯ ಆರು ರಾಕ್ಷಸ ಕೊಳವೆಗಳ ಬೆಂಕಿ ಜ್ವಾಲೆಗಳ ಕಪ್ಪು ಹೊಗೆ ನೀಲಾಕಾಶದಲ್ಲಿ ಸೋರಿ ಹೋಗುತ್ತ, ದೈತ್ಯನಂತೆ ವಿಧವಿಧವಾದ ಆಧುನಿಕ ಮಾನವನ ಎಲ್ಲ ಆಕೃತಿಗಳನ್ನು ಕೊರೆಯುತ್ತಿದ್ದಂತೆ ಅದರ ದೇಹದ ಮೇಲೆಲ್ಲ ಹಕ್ಕಿಗಳು ಹಾರಾಡತೊಡಗಿದವು. ರೈಲು ಸಾಗಿ ಹೋಗತೊಡಗಿದಾಗ ಸುಖ ಎನಿಸಿ, ಕಣ್ ರೆಪ್ಪೆ ಮುಚ್ಚಿ ತೆರೆದೆ. ಕೆರೆ ಬಯಲಿನಲ್ಲಿ ಕೆಂಪು ಮತ್ತು ನೀಲಿ ವರ್ಣದ ಹೂಗೊನೆಗಳು ಎದೆ ಮಟ್ಟ ಬೆಳೆದಿದ್ದು ತುಂಬಿಕೊಂಡವು. ಅದರ ಮಧ್ಯೆ ಕೆಂಪು ಸರೋವರದಂತೆ ಕಾಣುತ್ತಿದ್ದ ಹೊಂಡವೊಂದು ಕಾಣಿಸಿಕೊಂಡು ತಲೆ ಗಿರ್ರೆನ್ನುವಂತಾಯಿತು. ಇಲ್ಲೇ ರಾಷ್ಟ್ರೀಯ ಹೆದ್ದಾರಿ ೭ರಲ್ಲಿ ಬರುವ ರೋಮನ್ ಕ್ಯಾಥೋಲಿಕ್ ಚರ್ಚ್ ಮಗ್ಗುಲಿಗೆ ಖಾರದ ಪುಡಿಯಿಂದ ಔಷಧಿ ತಯಾರಿಸುವ ಸಿಂಬಿಯಾ ಕಾರ್ಖಾನೆ ಈಗ್ಗೆ ಮೂರು ವರ್ಷಗಳ ಹಿಂದೆ ಪ್ರಾರಂಭವಾಯಿತು. ಆ ಮುಂಚೆ ಹ್ಯಾಂಡ್ ಲೂಮ್ಸ್ ಫ್ಯಾಕ್ಟರಿ ಅಲ್ಲಿ ನಡೆಯುತ್ತಿದ್ದು, ಆಂಧ್ರ ಮತ್ತು ತಮಿಳುನಾಡಿನ ಬಹುತೇಕ ಮಂದಿ ನೇಕಾರರು ಅಲ್ಲಿ ದುಡಿಯುತ್ತಿದ್ದರು. ಸರಿಸುಮಾರು ಇಪ್ಪತ್ತು ವರ್ಷಗಳ ಕಾಲ ನಿರಂತರವಾಗಿ ನಡೆದುಕೊಂಡು ಹೋಗುತ್ತಿದ್ದ ಅದು ಮಾಲೀಕನ ಪ್ರಣಯ, ಹಾದರದಿಂದ ಅನೈತಿಕ ದಂಧೆ ಒಂದು ಕಸುಬಿನಂತೆ ಶುರುವಾಗಿ ಕಡೆಗೆ ಅಪಾರ ನಷ್ಟಕ್ಕೆ ಗುರಿಯಾಗಿ ಸಂಪೂರ್ಣವಾಗಿ ಸ್ಥಗಿತಗೊಂಡಿತು. ನಾವು ಆಗಷ್ಟೇ ರಸ್ತೆ ಅಗಲೀಕರಣದ ಸಲುವಾಗಿ ಭೂಸ್ವಾಧೀನಾಧಿಕಾರಿಗಳು ನಮ್ಮ ಮನೆಯನ್ನು ವಶಪಡಿಸಿಕೊಂಡಿದ್ದರಿಂದ ತಳ ಬಿಟ್ಟಿದ್ದೆವು. ಸಿಂಬಿಯಾದವರು ಔಷಧಿಗೆ ಪೂರಕವಾಗಿ ಸತ್ವರಹಿತವಾದ್ದನ್ನ ಬಳಸಿಕೊಂಡು ನಿರುಪಯುಕ್ತ ಖಾರದ ಪುಡಿಯನ್ನು ಇಲ್ಲಿನ ಕೆರೆಗೆ ತಂದು ಸುರಿಯುತ್ತಾರೆ. ಅದರ ಪರಿಣಾಮವಾಗಿ ಲಕ್ಷಾಂತರ ಏಡಿ ಮತ್ತು ಮೀನುಗಳು ಅದನ್ನು ಸೇವಿಸಿ ಸಾಯುತ್ತವೆ. ದನಕರುಗಳು ದಾಹ ತೀರಿಸಿಕೊಳ್ಳಲು ಇಲ್ಲಿನ ನೀರನ್ನು ಕುಡಿದು ರಕ್ತ ಕಾರಿಕೊಂಡು ಅಸ್ವಸ್ಥಗೊಂಡ ಎಷ್ಟೋ ಉದಾಹರಣೆಗಳನ್ನು ನಾನು ಇಲ್ಲಿ ಬಂದಾಗಿನಿಂದ ನೋಡಿದ್ದೇನೆ.

ನಮ್ಮೂರ ಪಕ್ಕದ ಆ ಸ್ಕೂಲು

ಒಂದು ಕಾಲಕ್ಕೆ ಈ ಗ್ರಾಮದ ಜನರ ಸ್ವತ್ತಾಗಿದ್ದ, ನಾವೆಲ್ಲರೂ ದನ ಮೇಯಿಸುತ್ತಿದ್ದ ಭೂಮಿಯಲ್ಲಿ ಪ್ರಬಲ ರಾಜಕಾರಣಿಗಳ ಪ್ರಭಾವದಿಂದ ಸ್ಥಾಪಿತಗೊಂಡ ಈ ಸಂಸ್ಥೆ ಇಂದು ಅದರ ಅಕ್ಕಪಕ್ಕ ಸಾಮಾನ್ಯ ಜನರನ್ನು ಸುಳಿಯದಂತೆ ನಿಗಾ ವಹಿಸಿದೆ. ಇಲ್ಲಿ ವಿದ್ಯಾರ್ಥಿಗಳು ಉಳಿಯಲು ಹಾಸ್ಟೆಲ್ ವ್ಯವಸ್ಥೆಯೂ ಇದೆ. ಪಕ್ಕದ ಹಳ್ಳಿಗಳಿಂದ ನೂರಾರು ಹೆಂಗಸರು ಇಲ್ಲಿ ಕೆಲಸಕ್ಕೆ ಬರುತ್ತಾರೆ. ಇಲ್ಲಿ ಓದುತ್ತಿರುವವರೆಲ್ಲರೂ ವಿದೇಶಿ ಮಕ್ಕಳು ಮತ್ತು ಈ ನಾಡಿನ ವಿಜ್ಞಾನಿಗಳ, ರಾಜಕಾರಣಿಗಳ, ಸರ್ಕಾರಿ ಅಧಿಕಾರಿಗಳ ಮಕ್ಕಳು ಮಾತ್ರ. ಒಬ್ಬ ಧನಿಕನ ಮಗನ, ಮಗಳ ಮೋಜಿಗೆ ಅಗತ್ಯವಿರುವ ಎಲ್ಲವನ್ನೂ ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಹನ್ನೆರಡನೆಯ ತರಗತಿಯವರೆಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಬಹುತೇಕ ಮಕ್ಕಳು ಸಿಗರೇಟು ಸೇದುತ್ತಾರೆ, ಮನಸೋ ಇಚ್ಛೆ ಮದ್ಯ ಹೀರುತ್ತಾರೆ. ನಾವು ಓದಲು ಐದು ಕಿಲೋಮೀಟರ್ ದೂರದ ಸ್ಕೂಲಿಗೆ ನಡೆದುಕೊಂಡು ಹೋಗುತ್ತಿದ್ದೆವು. ಇಲ್ಲಿ ಎಲ್ಲರೂ ದುಬಾರಿ ಬೆಲೆಯ ಕಾರುಗಳಲ್ಲಿ ಬರುತ್ತಾರೆ. ಇಲ್ಲಿನ ಹಸಿರು ಪ್ರದೇಶದಲ್ಲಿ ಈಗ ನ್ಯಾಪ್ ಕಿನ್ ಗಳು, ಬ್ರಾ, ಕಾಚಾಗಳು, ಫುಡ್ ವರ್ಲ್ಡ್ ನ ಮೂಟೆಗಳು ಚೆಲ್ಲಾಡುತ್ತಿವೆ. ಸರಿಯಾದ ರಸ್ತೆ ಇಲ್ಲದ ಕಾರಣ ಕೆರೆಯ ಮೂವತ್ತು ಅಡಿಯಷ್ಟು ಜಾಗವನ್ನು ಒತ್ತುವರಿ ಮಾಡಿಕೊಂಡಾಗ ಸ್ಥಳೀಯರ ವಿರೋಧ ಎದುರಿಸಲಾಗದೆ ಕೈ ಬಿಟ್ಟಿದ್ದಾರೆ. ಇಂದಲ್ಲ ನಾಳೆ ಅದು ಕೆರೆಯನ್ನು ನುಂಗಿ ಹಾಕಿ ತನ್ನ ಹಾಳು ಸಂಸ್ಕೃತಿಯನ್ನು ನುಂಗಿ ಹಾಕಿ ತನ್ನ ಹಾಳು ಸಂಸ್ಕೃತಿಯನ್ನು ಹೊಲದಂತೆ ಸಮೃದ್ಧಿಯಾಗಿ ಬೆಳೆಸುವುದು ಇದ್ದೇ ಇದೆ.

illustration_2.jpg

ಮೆಹಮೂದ್ ಮತ್ತು ಲಕ್ಕಿ ಆಲಿ

ಮಳೆ ಬೀಳುವಂತಿದೆ. ಸುಳಿಗಾಳಿ ಗಿರ್ರನೆ ತಿರುಗತೊಡಗಿದ್ದು ಅದರ ಜೊತೆಗೆ ಮಳೆಹನಿಗಳೂ ತೇಲಿ ಬರತೊಡಗಿದವು. ಮೆಹಮೂದ್ ಎಸ್ಟೇಟ್ ನ ತೆಂಗು, ನೀಲಗಿರಿ, ತೇಗದ ಮರಗಳು ಸುಂಟರಗಾಳಿಗೆ ನೆಲಕ್ಕೆ ಬಾಗುವಂತಿದ್ದು, ರೆಕ್ಕೆಗಳು ಮುರಿದುಕೊಂಡು ಬೀಳುತ್ತಿದ್ದವು. ಒಂದು ಕಾಲಕ್ಕೆ ಸುತ್ತಮುತ್ತಲಿನ ಅನೇಕ ಹಳ್ಳಿಗಳ ದಲಿತರಿಗೆ ಜೀವನಾಧಾರ ಆಗಿದ್ದ, ಪ್ರತಿದಿನ ಕುದುರೆ ರೇಸ್ ನಡೆಯುತ್ತಿದ್ದ ಮೆಹಮೂದ್ ಎಸ್ಟೇಟ್ ಈಗ ಭಣಗುಡುತ್ತಿದೆ. ನಗರದ ಭೂಗಳ್ಳನೊಬ್ಬ ಈಗ ಬಹುಪಾಲು ಜಮೀನನ್ನು ಅಕ್ರಮವಾಗಿ ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ. ಹಿಂದಿ ಚಿತ್ರರಂಗದ ಪ್ರಸಿದ್ಧ ಹಾಸ್ಯ ನಟರಲ್ಲೊಬ್ಬನಾದ ಮೆಹಮೂದ ತನ್ನ ಜೀವನದ ಮಹತ್ವದ ಗಳಿಗೆಗಳನ್ನು ಅತ್ಯಂತ ವರ್ಣರಂಜಿತವಾಗಿ ಬಾಂಬೆಯಲ್ಲಿ ಕಳೆದ. ವಿದೇಶಿ ಹೆಣ್ಣನ್ನು ಮದುವೆಯಾಗಿದ್ದ ಈತ ನೆಮ್ಮದಿಯ ಕ್ಷಣಗಳಿಗಾಗಿ ಸಂಸಾರ ಸಮೇತ ಇಲ್ಲಿ ಬಂದು ಹೋಗುತ್ತಿದ್ದ. ಕಾರಣಾಂತರಗಳಿಂದ ಅವರಿಬ್ಬರ ಬದುಕು ಒಡೆದು ಮೆಹದೂದನ ವಿದೇಶಿ ಹೆಂಡತಿ ತನ್ನ ತೌರಾದ ಇಟಲಿ ಸೇರಿಕೊಂಡಳು. ಪೋಲಿಯೊ ಪೀಡಿತ ಮಗ ಇಲ್ಲೇ ವಾಸಿಸುತ್ತಿದ್ದ. ಮತ್ತೊಬ್ಬ ಪಾಪ್ ಗಾಯಕ ಲಕ್ಕಿ ಅಲಿ ನ್ಯೂಜಿಲೆಂಡ್, ಕ್ಯೂಬಾದ ಗಲ್ಲಿಗಲ್ಲಿಗಳಲ್ಲಿ ತನ್ನ ಜೀವವೇ ಆಗಿಹೋಗಿದ್ದ ಗಿಟಾರ್ ತಬ್ಬಿಕೊಂಡು ಹಾಡುತ್ತಿದ್ದವನು, ಅಪ್ಪನ ವೃದ್ಧಾಪ್ಯ ಅರಿತು ಬಂದು ಸೇರುವಷ್ಟರಲ್ಲಿ ಮೆಹಮೂದ್ ತೀರಿಕೊಂಡ. ಆ ಸಮಯಕ್ಕಾಗಿ ಕಾದು ಕುಳಿತಿದ್ದ ಭೂಗಳ್ಳನೊಬ್ಬ ಸುಳ್ಳು ದಾಖಲೆ ಪತ್ರಗಳನ್ನು ತೋರಿಸಿ, ಗೂಂಡಾಗಳಿಂದ ಬೆದರಿಕೆ ಒಡ್ಡಿ ಎಸ್ಟೇಟ್ ನ ಹೃದಯಭಾಗವನ್ನು ಕಬಳಿಸಿ ಮುಳ್ಳು ತಂತಿ ನೆಡಿಸಿದ. ಅಪ್ಪನಿಗಿಂತ ಮುಂಚೆಯೇ ತೀರಿಹೋದ ಪೋಲಿಯೋ ಪೀಡಿತ ತಮ್ಮನ ಮತ್ತು ಅಪ್ಪನ ಸಮಾಧಿಯನ್ನು ಉಳಿಸಿಕೊಂಡ ಲಕ್ಕಿ ಅಲಿ ಅಲ್ಲೇ ಸ್ಟುಡಿಯೋ ನಿರ್ಮಿಸಿಕೊಂಡು, ತನ್ನ ಕಣ್ಣೆದುರಿಗೆ ಹಾದುಹೋಗುವ ಡೀಸೆಲ್ ಫ್ಯಾಕ್ಟರಿಯ ವ್ಯಾಗನ್ ಹಿಂದೆ ಓಡುವ ಅಸ್ಪೃಶ್ಯರ ಹುಡುಗಿಯರನ್ನು ದಿಟ್ಟಿಸುತ್ತಾ, ಹಾಡುತ್ತಾ ಬದುಕು ತೂಗಿಸುತ್ತಿದ್ದಾನೆ.

ಮಳೆ ನಿಂತಿರಬಹುದು. ಹಸುಳೆಯಂತೆ ಬಿಯರ್ ಸೀಸೆಯನ್ನು ತಬ್ಬಿಕೊಂಡು ಮಲಗಿದ್ದವನು, ಕಂಬಳಿ ಎಳೆದು ಹಾಕಿ ಕಿಟಕಿ ತಳ್ಳಿದೆ. ಫರಂಗಿ ಗಿಡದ ಎಲೆಗಳು ಮಳೆಯೇ ಬಿದ್ದಿಲ್ಲವೆಂಬಂತೆ ಶುಭ್ರವಾಗಿ ಮಿನುಗುತ್ತಿದ್ದವು. ಹೆಣ್ಣೊಂದು ಅದರ ಮೇಲೆ ನಗ್ನಳಾಗಿ ವಿಹರಿಸುತ್ತಿರುವಂತೆ ಕಲ್ಪಿಸಿಕೊಂಡೆ. ಸಂಪಗೆ ಗಿಡದ ಮೇಲಿನ ನಿಂತ ಹನಿಗಳು ಮಾತ್ರ ಉದುರುತ್ತಿದ್ದುವು.

ತೀರಿಕೊಂಡವರು ಕಾಡತೊಡಗಿದರು…

ನೀಲಗಿರಿ ತೋಪು ಬಳಸಿಕೊಂಡು ರಾಷ್ಟ್ರೀಯ ಹೆದ್ದಾರಿ ೭ರ ಕಡೆ ನಡೆಯತೊಡಗಿದೆ. ರೋಮನ್ ಕ್ಯಾಥೋಲಿಕ್ ಚರ್ಚ್, ಸಾಯುವಾಗಲೂ ಕುಡಿಯುತ್ತಲೇ, ಬಾಡು ಬಯಸುತ್ತಲೇ ಮಣ್ಣಾಗಿ ಹೋದ ಅಪ್ಪ, ಸಾಲು ಹುಣಸೆಮರಗಳು, ಗಿಣಿಗಳನ್ನು ತನ್ನ ಸುಟ್ಟ ಹೃದಯದಲ್ಲಿ ಬಚ್ಚಿಟ್ಟುಕೊಂಡು ಪೋಷಿಸುತ್ತಿದ್ದ, ಗಾಯಗೊಂಡ ರಾಕ್ಷಸನಂತೆ ಕಾಣುತ್ತಿದ್ದ ಒಂಟಿ ಮಾವಿನಮರ, ಬೀಸುಗಾಳಿ, ಹೂಮಳೆ, ಮರೆಯಾದ ತುಂಟ ಹುಡುಗಿಯರು, ಗೆಳೆಯರು, ಭೀಕರ ಅಪಘಾತಗಳು, ಕಲ್ಲುಗೋಡೆಗಳು, ಇಲ್ಲದ ಮನೆ, ಸತ್ತು ಹೋದ ಆತ್ಮೀಯರು, ರಸ್ತೆಗಳು, ಸ್ಕೂಲು ನನ್ನ ಒಳಗಿಳಿಯತೊಡಗಿದವು; ಎದೆ ಭಾರವಾದಂತಾಯಿತು.

(ಮುಂದುವರಿಯುವುದು)

‍ಲೇಖಕರು avadhi

December 26, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This