ಬುಕ್ ಟಾಕ್ : ಪಯಣ

ಸಮುದಾಯವೊಂದರ ಜೀವನದ ಏರಿಳಿತದ ಪಯಣ

– ಡಾ. ಮೋಹನ ಚಂದ್ರಗುತ್ತಿ

ಕೃಪೆ : ದ ಸ೦ಡೆ ಇ೦ಡಿಯನ್

  ವೃತ್ತಿಯಲ್ಲಿ ಪತ್ರಕರ್ತರಾಗಿರುವ ಶ್ರೀ ಲಕ್ಷ್ಮಣ ಕೊಡಸೆಯವರ ಪಯಣ ಕೃತಿಯು ಕನ್ನಡ ಕಾದಂಬರಿ ಜಗತ್ತಿನಲ್ಲಿ ಒಂದು ವಿಶಿಷ್ಟ ಪ್ರಯತ್ನವೆಂದೇ ಹೇಳಬೇಕು. ಮಲೆನಾಡಿನ ದಟ್ಟ ಮೂಲೆಯ ಹಳ್ಳಿಯಿಂದ ಶಿವಮೊಗ್ಗ ಪೇಟೆಗೆ ವ್ಯವಹಾರದ ಕಾರಣಕ್ಕಾಗಿ ಹೊರಟ ಅವಿಭಕ್ತ ಕುಟುಂಬದ ಯಜಮಾನನೊಬ್ಬನು ಆಧುನಿಕ ಜಗತ್ತಿನಲ್ಲಿ ಪಯಣಿಸಬೇಕಾದ ಅನಿವಾರ್ಯತೆಯನ್ನು ಮತ್ತು ಅದರ ಜೊತೆ ಕಾಲಿಕ ಒತ್ತಡವನ್ನು ಅನುಭವಿಸಿರುವ ಕಥಾನಕವಿದು. ಪಯಣಿಸುತ್ತಿರುವ ಸಂದರ್ಭದಲ್ಲಿ ಆಧುನಿಕ ಜಗತ್ತಿನ ಜೊತೆ ಸಂವಾದಿಸುತ್ತಲೇ ಹಳೆಯ ಸ್ಮೃತಿ ಜಗತ್ತಿನ ಜೊತೆಗೆ ಒಡನಾಟವನ್ನು ಬೆಳೆಸುವುದು ಕೂಡಾ ಪಯಣದ ಒಂದು ಭಾಗವೇ ಆಗಿದೆ. ಇಲ್ಲಿ ಪಯಣ ಎನ್ನುವುದು ಕೇವಲ ನಡಿಗೆಯ ಸಾಂಕೇತಿಕತೆಯನ್ನು ಸಾಧಿಸದೆ ಓದುಗರನ್ನು ಕೂಡ ತನ್ನ ಜೊತೆ ನಿರಂತರ ಓಟಕ್ಕೆ ಹಚ್ಚುತ್ತದೆ. ಶರಾವತಿಯ ಮುಳುಗಡೆಯಿಂದ ವಲಸೆ ಬಂದ ದೀವರು ಸಮುದಾಯದ ಸಾಮಾಜಿಕ ಬದುಕಿನ ಕ್ರಮವನ್ನು ಇಲ್ಲಿ ಚಿತ್ರಿಸುವ ಪ್ರಯತ್ನ ಸಾಗಿದೆ. ಆ ಹೊತ್ತಿಗಾಗಲೇ ನಡೆದು ಹೋಗಿರುವ ಕಾಗೋಡು ಚಳವಳಿಯೂ ಕೂಡಾ ಅವರ ಮೇಲೆ ಪ್ರಭಾವ ಬೀರಿದೆ. ಹಾಗಾಗಿಯೇ ಇಲ್ಲಿನ ಅವಿಭಕ್ತ ಕುಟುಂಬಗಳು ಒಂದು ಬಗೆಯ ಕಟ್ಟುನಿಟ್ಟಿನ ಚೌಕಟ್ಟಿನ ಒಳಗಡೆಯೇ ಬದುಕುತ್ತಿರುತ್ತವೆ. ಆ ಕುಟುಂಬಗಳ ಯಜಮಾನರೆಂದರೆ ಅವರು ಪ್ರಶ್ನಾತೀತ ನಾಯಕರು. ಅಂತಹ ಪ್ರತಿನಿಧಿಯಾಗಿ ಕರೇನಾಯ್ಕರಿದ್ದಾರೆ. ಅವರ ಜೊತೆಗೆ ಅವರ ಒಡನಾಡಿಯಾಗಿರುವ ಬಡೆನಾಯ್ಕರು ಕಾಲದೊಂದಿಗೆ ರಾಜಿ ಮಾಡಿಕೊಂಡು ಮಕ್ಕಳಿಗೆ ಆಸ್ತಿ ಹಂಚಿಕೊಟ್ಟು ನಿರಾಳವಾಗಿದ್ದಾರೆ. ಈ ಎರಡು ಪಾತ್ರಗಳ ವೈರುಧ್ಯದ ನೆಲೆಯೂ ಇಲ್ಲಿದೆ. ಅಡಿಕೆಯ ದುಡ್ಡು ತರಲು ಶಿವಮೊಗ್ಗದ ಸೊಸಾಯಿಟಿಗೆ ಹೊರಟ ಕರೆನಾಯ್ಕರು ತಮ್ಮ ಬಸ್ಸಿನ ಪಯಣದ ಉದ್ದಕ್ಕೂ ಕಂಡ ಪಾತ್ರಗಳ ಜೊತೆ ನೇರವಾಗಿ ಅಥವಾ ಸ್ಮೃತಿ ಜಗತ್ತಿನ ಒಳಗಡೆಯೇ ಚರ್ಚೆ ಮಾಡುತ್ತಾ ದಾರಿ ಸಾಗುವ ಈ ಪರಿ ಸಮುದಾಯವೊಂದು ಕಾಲಕ್ಕೆ ತೆರದುಕೊಳ್ಳುತ್ತಿರುವ ಸ್ಥಿತ್ಯಂತರಗಳ ಪಯಣವನ್ನು ದಾಖಲಿಸುತ್ತದೆ. ಹೊಸ ಓದಿನ ಕಾರಣಕ್ಕೆ ತಮ್ಮ ಸಾಂಪ್ರದಾಯಿಕ ವ್ಯವಸಾಯವನ್ನು ಬದಲಾಯಿಸಿಕೊಂಡು ಹಣ ಸಂಪಾದನೆಗೆ ತವಕಿಸುತ್ತಿರುವ ಯುವ ಸಮುದಾಯ, ಇದ್ದುದ್ದರಲ್ಲಿಯೇ ತೃಪ್ತಿ ಪಡೋಣವೆಂದು ಬಯಸುವ ಹಿರಿಯ ಜೀವಗಳ ಮುಖಾಮುಖಿಯಾಗಿಯೂ ಕಾಣುವ ಈ ಕಾದಂಬರಿ ಎರಡು ಕಾಲಘಟ್ಟಗಳ ಸಂಘರ್ಷವನ್ನು ಕೂಡಾ ತೋರಿಸುತ್ತದೆ. ಆದರೆ ಈ ಸಂಘರ್ಷ ತೀರಾ ತಾರ್ಕಿಕ ಹಂತಕ್ಕೇನೂ ಹೋಗದೆ ಒಳಾವರಣದಲ್ಲಿಯೇ ಸುತ್ತುತ್ತದೆ. ಮುಖ್ಯವಾಗಿ ಆಧುನಿಕ ಜಗತ್ತಿನ ಮನುಷ್ಯ ಕುಲ ತನ್ನ ಹಿಂದಿನ ಅನುಭವಗಳ ನೆನಪುಗಳನ್ನು ಈ ಕಾಲಘಟ್ಟದಲ್ಲಿ ಕಳೆದುಕೊಳ್ಳುತ್ತಾ ಹೋಗುತ್ತಿದೆ ಎನ್ನುವ ಕೃತಿಕಾರರು ಕಾಲವನ್ನು ಇಲ್ಲಿ ಪ್ರಮುಖವಾಗಿ ಬಳಸಿಕೊಂಡಿದ್ದಾರೆ. ಒಂದು ನಿರ್ದಿಷ್ಟ ಕಥಾ ಹಂದರವಿಲ್ಲದೇ ಪಯಣದ ಜೊತೆ ಸೇರುವ ವ್ಯಕ್ತಿಗಳೇ ಕಥೆಗಳಾಗುವ ಮತ್ತು ಅವು ಒಂದು ಫಲಿತವನ್ನು ನೀಡಿ ಹೋಗುವ ತಂತ್ರವು ಗಮನಾರ್ಹವಾದುದು. ತಂದೆಗೆ ಗೊತ್ತಿಲ್ಲದೆ ಸೊಸಾಯಿಟಿಯಿಂದ ಹಣ ತೆಗೆದುಕೊಂಡು ಬರುವ ಅವರ ಮಗ ತಂದೆಯನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ ಮಾಡುವ ಈ ಪುಟ್ಟ ಬಂಡಾಯವು ಅವರನ್ನು ತಲ್ಲಣಗೊಳಿಸಿಬಿಟ್ಟಿದೆ. ’ಈ ಹುಡುಗರು ನಮ್ಮನ್ನು ಮೀರಿಸಿಬಿಟ್ಟಿದ್ದಾರೆ’ ಎನ್ನುವ ಮಾತು ಕಾದಂಬರಿಯ ಅಂತ್ಯಭಾಗದಲ್ಲಿ ಬರುತ್ತದೆ. ಈ ಮಾತು ಒಂದರ್ಥದಲ್ಲಿ ಆಧುನಿಕತೆ ತಂದ ಬಿಡುಗಡೆಯನ್ನು ಒಪ್ಪಲು ಸಾಧ್ಯವಾಗದೆ ಹೋದ ಅತೃಪ್ತ ಮನಸ್ಸು ಮತ್ತು ಮೀರಿಬಿಟ್ಟರಲ್ಲ ಎನ್ನುವ ಅಸಹನೆಯ ಮೆಚ್ಚುಗೆಯೂ ಇದೆ. ಆಧುನಿಕ ಶಿಕ್ಷಣದಿಂದ ಪರಂಪರೆಯ ನಂಬಿಕೆ ಹಾಗೂ ಮೌಲ್ಯಗಳು ಬದಲಾಗುವುದು. ಅದನ್ನು ಸಮಾಜ ಒಪ್ಪಿಕೊಳ್ಳಲು ಹರ ಸಾಹಸಪಡುವುದು ಇಲ್ಲಿ ಗಮನಾರ್ಹವಾದುದು. ಇದರ ಪ್ರತಿನಿಧಿಯಂತೆ ಕಾಣುವ ಹೋಟೆಲ್, ಪೊಲೀಸ್, ಗ್ರಾಮ ಪಂಚಾಯತ್ ರಾಜಕಾರಣ, ಅದರ ಗೊಂದಲಗಳು ಇಲ್ಲಿ ಕಾಣಿಸಿಕೊಳ್ಳುವದರೊಂದಿಗೆ ಪೇಟೆಯ ತಿಂಡಿ ಆಸೆಗೆ ಹೊರಳುವುದರ ಮೂಲಕ ಆಧುನಿಕತೆಯತ್ತ ಚಿತ್ತವಿಟ್ಟವರ ಚಿತ್ರಣವೂ ಇದೆ. ಇದು ಬದಲಾಗುವ ಸಮಾಜದ ಚಿತ್ರಣವೂ ಹೌದು. ಇಲ್ಲಿನ ಭೂಮಾಲಿಕರು ನಡೆಸುವ ಯಜಮಾನಿಕೆ, ಅವರ ದೌಲತ್ತನ್ನು ಕಾದಂಬರಿಕಾರರು ಸೂಕ್ಷ್ಮವಾಗಿ ಪ್ರಸ್ತಾವಿಸುತ್ತಾರಾದರೂ ಅದು ತೀವ್ರತೆ ಪಡೆದುಕೊಳ್ಳುತ್ತಿಲ್ಲ. ಬದಲಾಗಿ ಗೌಡರೇ ಕರೆನಾಯ್ಕರಿಗೆ ತಮ್ಮ ಪಕ್ಕದಲ್ಲಿ ಸೀಟು ಬಿಟ್ಟಕೊಡುವುದರ ಮೂಲಕ ಪ್ರಜಾಪ್ರಭುತ್ವದ ಸಾಧ್ಯತೆಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂಬ ನಿಲುವು ಕಾದಂಬರಿಕಾರರದು. ಪಯಣ ಉದ್ದೇಶ ರಹಿತವಾಗಿರದೆ ಸಮುದಾಯವೊಂದರ ಬದುಕಿನ ಕ್ರಮದ ಓಟದ ನಿರೂಪಣೆಯೂ ಆಗಿರುವುದರಿಂದ ಪಯಣ ನಮ್ಮ ಪಯಣವೂ ಆಗಿದೆ. ಯಾವುದನ್ನು ಹೇಳುವಾಗಲೂ ರೋಚಕತೆ ಅಥವಾ ಶಾಬ್ದಿಕ ಆಡಂಬರವಿಲ್ಲದೆ ತಣ್ಣಗಿನ ಭಾಷೆಯಲ್ಲಿ ಹೇಳುವ ಕಲೆಯನ್ನು ಕೊಡಸೆಯವರು ಸಿದ್ಧಿಸಿಕೊಂಡಿದ್ದಾರೆ. ಹಾಗಾಗಿ ಕಾದಂಬರಿ ಒಂದೆ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತದೆ. ಟಿಎಸ್‌ಐ ಕೃತಿಯ ಪುಟಗಳಿಂದ “… ’ನೋಡು ಭಾವ ಹುಡುಗರು ಜವಬ್ದಾರಿ ತಗೊಳ್ತಾರೆ ಅಂತಾದರೆ ಅದನ್ನು ಅವರಿಗೆ ವಹಿಸಿಬಿಡೋದು ಒಳ್ಳೇದು. ನಮ್ಮ ದೊಡ್ಡ ಹುಡುಗನಿಗೆ ಮದುವೆ ಮಾಡಿದೆ. ಅವನಿಗೂ ಮಕ್ಕಳಾದವು. ಬೇರೆ ಹೋಗುವ ಉಮೇದು ತೋರಿಸಿದ. ತಕ್ಷಣ ಕರೆದು ಆಸ್ತಿ ಕೊಟ್ಟು ಕಳಿಸಿದೆ. ಬೇರೆ ಹೋಗೋದಕ್ಕೆ ಮಕ್ಕಳು ಮನಸ್ಸು ಮಾಡಿದರೆ ಕಳಿಸಿಬಿಡೋದು ಒಳ್ಳೇದು ನೋಡು. ಇಲ್ಲದಿದ್ದರೆ ಇಂತಾದ್ದಕ್ಕೆಲ್ಲ ಅವಕಾಶ’ ಎಂದು ಸಮಾಧಾನಪಡಿಸಿದರು ಬಡೆನಾಯ್ಕರು” ]]>

‍ಲೇಖಕರು G

April 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ದಿವಾಕರ್ ಈಗ S Diwakar

ನರೇಂದ್ರ ಪೈ  ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ನವರು ಪ್ರಕಟಿಸಿರುವ ಎಸ್ ದಿವಾಕರ್ ಅವರ ಅನುವಾದಿತ ಇಂಗ್ಲೀಷ್ ಕತೆಗಳ ಸಂಕಲನ Hundreds of...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This