ಬುಖಾರೆಸ್ಟಿನ ಐಸ್ ಕ್ರೀಮ್ ಮುದುಕಿ

ಡಾ ಎಚ್ ಕೆ ರಂಗನಾಥ್ ರಂಗ ಕಲೆಗೆ ಕೊಟ್ಟ ಆಯಾಮ ಹಿರಿದು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದ ಇವರು ವಿಧ್ಯಾರ್ಥಿಗಳ ಮನ ಗೆದ್ದಿದ್ದರು.

ತಮ್ಮ ವಿದೇಶ ಪ್ರವಾಸದ ಅನುಭವಗಳನ್ನು ಒಳಗೊಂಡ ‘ಪರದೇಸಿಯಾದಾಗ…’ಕೃತಿ ಈಗ ಮರುಮುದ್ರಣಗೊಂಡಿದೆ. ವಸಂತ ಪ್ರಕಾಶನ ಹೊರತಂದಿರುವ ಈ ಕೃತಿಯ ಒಂದು ಸ್ವಾರಸ್ಯಕರ ಭಾಗ ನಿಮಗಾಗಿ ಇಲ್ಲಿದೆ-


paradesiyadga-rangnath2ಆಕ್ರಾದಿಂದ ರೋಮ್ ಮೂಲಕ ನೇರವಾಗಿ ರುಮೇನಿಯಾದ ರಾಜಧಾನಿ ಬುಖಾರೆಸ್ಟಿಗೆ ಹೋದೆ. ಅಲ್ಲಿ ಜಗತ್ತಿನ ಜನಸಾಂದ್ರತೆಯ ಆಗುಹೋಗುಗಳನ್ನು ಕುರಿತು ಸಂಯುಕ್ತ ರಾಷ್ಟ್ರ ಸಂಸ್ಥೆಯ ವತಿಯಿಂದ ಭಾರಿ ಸಮ್ಮೇಳನ-ಆ ವರ್ಷ ಆಗಸ್ಟ್ 21 ರಿಂದ. ಅದಕ್ಕೆ ಸಂಬಂಧಪಟ್ಟಂತೆ ಜಗತ್ತಿನ ಜಾನಪದ ಕಲಾಸಂಕಿರಣ. ಅದರಲ್ಲಿ ಭಾಗವಹಿಸುವ ಸಲುವಾಗಿ ನಮ್ಮ ಪಾರ್ಲಿಮೆಂಟ್ ಸದಸ್ಯ ಹಬೀಬ್ ತನ್ವೀರ್ ಮತ್ತು ಯುನೆಸ್ಕೋ ವತಿಯಿಂದ ನಾನು. ಜಗತ್ತಿನ ಆಗುಹೋಗುಗಳ ಬಗೆಗೆ ಪ್ರಚಾರ ಮಾಧ್ಯಮವಾಗಿ ಜಾನಪದ ಕಲೆಗಳ ಪಾತ್ರವನ್ನು ಕುರಿತು ವಿಶ್ಲೇಷಿಸುವ ಸಂಕಿರಣ ಅದು. ಏಷ್ಯಾದ ಪರ ನಡೆದ ಸಂಕಿರಣ ಸಭೆಗೆ ನಾನು ಅಧ್ಯಕ್ಷ. ಏಷಿಯಾದ ಬೇರೆ ಬೇರೆ ರಾಷ್ಟ್ರಗಳ ಜಾನಪದ ನೃತ್ಯ-ಗೀತ ನಾಟಕಗಳನ್ನು ಸಮಾವೇಶಗೊಳಿಸಿ, ಜನನಿಯಂತ್ರಣದ ವಿಷಯಗ ಬಗೆಗೆ ನಿರ್ಮಿಸಿದ ಕಾರ್ಯಕ್ರಮದ ಮೂವರು ನಿರ್ದೇಶಕರಲ್ಲಿ ಒಬ್ಬ.

ಬುಖಾರೆಸ್ಟ್, ನಾನು ನೋಡಿದ ರಾಜಧಾನಿಗಳಲ್ಲಿ ಅತ್ಯಂತ ಸುಂದರವಾದ ಪಟ್ಟಣ. ಅಲ್ಲಿನ ಹೆಚ್ಚಳಿಕೆಯೆಂದರೆ ಹೂ ಹಸಿರುಗಳ ಮೇಲೆ ಆ ಜನಕ್ಕಿರುವ ಅಗಾಧ ಪ್ರೇಮ. ರಸ್ತೆಯ ಇಕ್ಕೆಲಗಳಲ್ಲಿ ಉದ್ದಕ್ಕೂ ಹೂವಿನ ಹಾಸು, ವೃತ್ತಗಳಲ್ಲಿ ಬಣ್ಣ ಬಣ್ಣದ ಹೂವುಗಳ ಮಹೋತ್ಸವ. ಹೂವಿನಗಿಡ ಇಲ್ಲದ ಮನೆ, ಹೋಟೆಲು, ಮಂದಿರಗಳಿಲ್ಲ. ಏನೇ ಇದ್ದರೂ ಅಪಾರ್ಟ್ಮೆಂಟಿನ ಬಾಲ್ಕನಿಗಳಲ್ಲಿ ಕುಂಡಗಳನ್ನಿಟ್ಟಾದರೂ ಹೂವು ಬೆಳೆಸಲೇಬೇಕು. ತಾವು ಬೆಳೆಸಿದ ಹೂವುಗಳ ಬಗೆಗೆ ಮಾತನಾಡದ ದಿನ ಇಲ್ಲ.

ನಾನು ಉಳಿದಿದ್ದ ಡೋರೋಬಂಥ್ ಹೋಟೆಲಿಗೆ ಸೇರಿದ್ದ ಉಪಾಹಾರಗೃಹದಲ್ಲಿ ನನ್ನ ಎದುರು ಕುಳಿತಾಕೆ ಹೆಚ್ಚು ಕಡಿಮೆ ಒಂದು ತಾಸಿನವರೆಗೆ ನನಗೆ ಏನೇನೂ ಬೇಸರ ಬಾರದಂತೆ, ರುಮೇನಿಯಾದ ಹೂಗಳ ಬಗೆಗೆ ಹರಿಕಥೆ ಮಾಡಿದಳು. ಗುಲಾಬಿಯ ಬಗೆಗೆ ಆಕೆಯ ಜ್ಞಾನ ನಿಷ್ಕೃಷ್ಟವಾದುದು. ಭಾರತದ ಹೂದೋಟದಲ್ಲಿ ನೀಲಿ ಛಾಯೆಯ ಗುಲಾಬಿ ಇದೆ ಎಂದು ಹೇಳಿದಾಗ ಊಟ ಬಿಟ್ಟು ಎದ್ದುನಿಂತಳು. ನನಗೊಂದು ದಳ ಕಳುಹಿಸಿಕೊಡುತ್ತೀರಾ? ಎಂದು ಗೋಗರೆದಳು. ಪ್ರವಾಸ ಮುಗಿದು ಊರಿಗೆ ಬಂದ ಮೇಲೆ ಹುಡುಕಿ ನೀಲಿ ಛಾಯೆಯ ಗುಲಾಬಿಯನ್ನು ಏರ್ ಪಾರ್ಸೆಲ್ ಮೂಲಕ ಆಕೆಯ ವಿಳಾಸಕ್ಕೆ ರವಾನಿಸಿದೆ. ಆಕೆಗೆ ಮುಟ್ಟುವಷ್ಟರಲ್ಲಿ ಅದು ಒಣಗಿ ಹೋಗಿದ್ದಿರಬೇಕು. ಆದರೆ ತನ್ನ ಸಂತೋಷ ತೋಡಿಕೊಂಡು ಆಕೆ ಮಾರುದ್ದ ಮಾರುತ್ತರ ಬರೆದಳು. ಇಂದಿಗೂ ಬರೆಯುತ್ತಿದ್ದಾಳೆ.

eddiy_icecreamಬುಖಾರೆಸ್ಟಿನ  ನಿಲ್ದಾಣ ತಲುಪಿದಾಗ ಸ್ವತಃ ಲೂಯಿಸಾ, ಹೆಸರು ಕೇಳಿ ಓಡಿಬಂದು ತೆಕ್ಕೆ ಬಿದ್ದು, ಮಹಾಸಂಭ್ರಮದಿಂದ ಸ್ವಾಗತಿಸಿದಳು. ಬಿಡಾರಕ್ಕೆ ಕರೆದೊಯ್ದು ಅಲ್ಲಿಗೆ ಆಗಲೇ ಆಗಮಿಸಿದ್ದ ಬೇರೆ ಬೇರೆ ರಾಷ್ಟ್ರಗಳ ಪ್ರತಿನಿಧಿಗಳ ಪರಿಚಯ ಮಾಡಿಕೊಟ್ಟಳು. ಅಕೆಯ ಮಾತೇ ಒಂದು ಸೊಗಸು. ಮೈನಾ ಅಂದಿನಿಂದ ಏಳು ದಿನಗಳವರೆಗೆ ನನ್ನ ದುಭಾಷಿಯಾದಳು. ಬುಖಾರೆಸ್ಟಿನ ಕಾಲೇಜಿನಲ್ಲಿ ಕಲಿಯುತ್ತಿದ್ದ ಆಕೆಗೆ ತನ್ನ ಊರು ಎಂದರೆ ಇನ್ನಿಲ್ಲದ ಹೆಮ್ಮೆ. ಸಮ್ಮೇಳನದ ಕಾಲವನ್ನುಳಿದು ಉಳಿದೆಲ್ಲ ವೇಳೆ ಆಕೆ ನನ್ನನ್ನು ನಗರದ ಎಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ದು ಅವುಗಳನ್ನೆಲ್ಲ ತಾನೇ ಸೃಷ್ಟಿ ಮಾಡಿದಷ್ಟು ಹೆಮ್ಮೆಯಿಂದ ಕೇಳಿಸಿ, ನೋಡಿಸಿ ನೂರಾರು ಮಧುರ ಅನುಭವಗಳನ್ನು ಉಳಿಸಿದಳು-ಇಂದಿಗೂ ಮೈನಾ ಪತ್ರ ಬರೆಯುತ್ತಿದ್ದಾಳೆ. ಆಕೆ ಮುತ್ತಿಟ್ಟು ಕೊಟ್ಟ ರುಮೇನಿಯನ್ ಕೆಂಪು ಕರಡಿಯ ಪುಟ್ಟ ಆಟಿಕೆ ನಮ್ಮ ಷೋಕೇಸಿನಲ್ಲಿ ಕುಳಿತಿದೆ.

ರುಮೇನಿಯಾದ ಜನ ಬಣ್ಣ ಬಣ್ಣದ ಕುಸುರಿ ಕೆಲಸದ ಬಟ್ಟೆತೊಟ್ಟು ಮಾಡುವ ನೃತ್ಯ ಸಂಪ್ರದಾಯಗಳಿಂದ ಜಗತ್ತಿನ ಗಮನವನ್ನು ಸೆಳೆದುಕೊಂಡವರು ಜನ ಅತ್ಯಂತ ಸ್ಫುರದ್ರೂಪಿಗಳು. ಅವರ ನಗೆ, ಆತ್ಮೀಯತೆ, ಸ್ನೇಹಪರತೆ ಸೆರೆಹಿಡಿಯುವಂಥದು. ಸೌಂದರ್ಯದಲ್ಲಿ ನೃತ್ಯದಲ್ಲಿ ಹೆಸರುಗಳಿಸಿದಂತೆ ಆಟಪಾಠಗಳಲ್ಲಿ ಜಗತ್ತಿನ ಮಹಾನ್ ರಾಷ್ಟ್ರಗಳಿಗೆ ಸಮಸಾಟಿ ನಿಂತವರು ಆ ಜನದೊಡನೆ ಕಳೆದ ಎಂಟು ದಿನ ನಂದನದಲ್ಲಿ ಕಳೆದ ಹಬ್ಬವಾಯಿತು.

ಊರ ಮಧ್ಯದ ಯೂನಿವರ್ಸಿಟಿ ಥಿಯೇಟರಿನಲ್ಲಿ ನಮ್ಮ ಸಂಕಿರಣ ಎರಡನೆಯ ದಿನ ಮಧ್ಯಾಹ್ನ ಹಾಗೆಯೇ ಮೋಹಕವಾದ ಉದ್ಯಾನದಲ್ಲಿ ಅಲೆದಾಡಿ ಕನ್ನಡಿಯಂತೆ ಸ್ವಚ್ಛವಾದ ರಾಜರಸ್ತೆಯಗುಂಟ ಎಳೆ ಬಿಸಿಲಿನಲ್ಲಿ ಅಡ್ಡಾಡುತ್ತ, ಮೈಲುದೂರ ಹೋದೆ. ರಸ್ತೆಯ ಬದಿಗೆ ಇದ್ದ ಐಸ್ ಕ್ರೀಮ್ ಕಿಯೋಸ್ಕ್ ಕಂಡೆ. ಅದರ ಕಾರಬಾರ ನಡೆಸುತ್ತಿದ್ದವಳು ಅರವತ್ತು ದಾಟಿದ್ದ ಒಬ್ಬ ಮುದುಕಿ. ಆಕೆಗೆ ಇಂಗ್ಲೀಷ್ ಬಾರದು. ನಾಲ್ಕು ಪದಗಳನ್ನು ಬಿಟ್ಟರೆ ರುಮೇನಿಯನ್ ಭಾಷೆ ನನಗೆ ಏನೇನು ತಿಳಿಯದು. ಆಕೆಯ ಅಂಗಡಿಯಲ್ಲಿದ್ದ ನಾಲ್ಕಾರು ಬಗೆಯ ಐಸ್ ಕ್ರೀಂನಲ್ಲಿ ಯಾವುದು ನನಗೆ ಬೇಕು? ಎಷ್ಟು ಬೇಕು? ಅದಕ್ಕೆ ಎಷ್ಟು ದುಡ್ಡು(ಲೆಹ್) ಕೊಡಬೇಕು? ಇದನ್ನು ನಾವು ಸಂಜ್ಞಾಶಾಸ್ತ್ರವನ್ನವಲಂಬಿಸಿ ಅರ್ಧಗಂಟೆಯ ಕಾಲ ಚರ್ಚೆ ಮಾಡಿದೆವು. ಮುದುಕಿಯ ಕುಲುಕುಲು ನಗೆ ತುಂಬ ಮೋಹಕ. ಕಡೆಗೆ ಸನ್ನೆಯಲ್ಲಿಯೇ  ಎಲ್ಲವನ್ನೂ ನಿಷ್ಕರ್ಶಿಸಿ, ಮಧು ಮಧುರವಾಗಿದ್ದ ಐಸ್ ಕ್ರಿಮ್ ತಿಂದು, ದುಡ್ಡುಕೊಟ್ಟು ಹೊರಟಾಗ ನಾವು ಸ್ನೇಹಿತರಾಗಿ ಬಿಟ್ಟಿದ್ದೆವು.

ಅಂದಿನಿಂದ ಪ್ರತಿದಿನ ಮಧ್ಯಾಹ್ನ ಬಿಡುವಾದಾಗ ಹೋಗಿ ಆಕೆಯ ಅಂಗಡಿಯಲ್ಲಿ ಐಸ್ ಕ್ರೀಮ್ ತಿನ್ನುವ ಪರಿಪಾಠವಾಯಿತು. ಹೋದ ಕ್ಷಣದಿಂದ ಕಡೆಯ ಪಕ್ಷ ಹತ್ತಿಪ್ಪತ್ತು ನಿಮಿಷ ಸನ್ನೆಯಲ್ಲಿಯೇ ತಿದ್ದಿ, ನಮ್ಮ ಸಂಸಾರಗಳ ವಿಷಯವನ್ನು ಕೊಚ್ಚಿಕೊಂಡೆವು. ಆಕೆಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ, ಗಂಡ ಇಲ್ಲ. ಮನೆ ಮೂರು ಮೈಲು ದೂರ. ಜೀವನ ನಿರ್ವಹಣೆಗಾಗಿ ಸರಕಾರ ಈ ಅಂಗಡಿ ಕೊಟ್ಟಿದೆ. ಆಕೆಗೆ ನಿಶ್ಚಿತ ಸಂಬಳ. ವ್ಯಾಪಾರದ ಲಾಭ ನಷ್ಟ ಎಲ್ಲ ಸರಕಾರದ ಹೊಣೆ. ಸರಕಾರ ಕೊಟ್ಟಿರುವ ತನ್ನ ಪುಟ್ಟ ಮನೆಯಲ್ಲಿ ಹತ್ತಾರು ಜಾತಿಯ ಹೂಗಿಡ ಬೆಳೆಸಿದ್ದಾಳೆ.

ನಾನು ಊರು ಬಿಡುವುದರೊಳಗೆ ಆಕೆಯ ಮನೆಗೆ ಊಟಕ್ಕೆ ಹೋಗಲೇ ಬೇಕೆಂಬ ಬಲವಂತ. ನನ್ನ ಮಕ್ಕಳ ಹೆಸರು ಆಕೆಗೆ ತುಂಬ ಮೆಚ್ಚು, ನನ್ನ ಸಾವಿತ್ರಿಯನ್ನು ನೋಡಬೇಕೆಂಬ ಉತ್ಕಟೇಚ್ಛೆ, ತಾನಂತೂ ಭಾರತಕ್ಕೆ ಬರುವುದು ಕಠಿನ, ಅದರಿಂದ ಮತ್ತೊಂದು ಸಲ ನಾನು ಬುಖಾರೆಸ್ಟಿಗೆ ಬರಲೇ ಬೇಕು: ಸಾವಿತ್ರಿಯನ್ನು ಕರೆತರಲೇಬೇಕು.

ಆ ನಾಲ್ಕು ದಿನಗಳಲ್ಲಿ ಮುದುಕಿಯೊಂದಿಗೆ ನಾನು ಯಾವುದೋ ಜನ್ಮದ ಬಾಂಧವ್ಯದಲ್ಲಿ ಬೆರೆತುಹೋದೆ. ಒಬ್ಬರ ಹಿಗ್ಗು ಕುಗ್ಗು ಇನ್ನೊಬ್ಬರದೂ ಆಯಿತು.

ಆಗಸ್ಟ್ 27 ರಂದು ರುಮೇನಿಯಾದಲ್ಲಿ ರಾಷ್ಟ್ರೀಯ ದಿನ. ರಾಷ್ಟ್ರದ ನಾನಾ ಕಡೆಗಳಿಂದ ಅಂದು ರಾಜಧಾನಿಗೆ ಲಕ್ಷಕ್ಕೂ ಮೀರಿ ಜನ ಬರುತ್ತಾರೆ. ಆ ದಿನಕ್ಕಾಗಿ ಅವರು ಮಾಡುವ ಸಜ್ಜು ಅದ್ಭುತ ಎನಿಸಿತು. ಉಳಿದೆಲ್ಲ ದಿನಗಳಿಗಿಂತ ಅಂದು ಅಲ್ಲಿ ಆಹಾರ,ಪನಿಯ ಅಗ್ಗವಾಗುತ್ತದೆ. ಎಲ್ಲೆಲ್ಲಿಯೂ ಹೂವಿನ ಹೊಳೆ. ಜನತೆಯ ಸಂಭ್ರಮ ಹೇಳಿತೀರದು. ಆ ಮುಂಜಾನೆ ವಿಶೇಷ ಆಹ್ವಾನದ ಮೇಲೆ ರಾಷ್ಟ್ರಾಧ್ಯಕ್ಷರು ಸ್ವೀಕರಿಸಿದ ಜನತಾ ವಂದನೆ ಮೆರವಣಿಗೆಯ ಕಾರ್ಯಕ್ರಮ ನೋಡಲು ಅತ್ಯಂತ ಕೌಶಲದಿಂದ ಅಲಂಕರಿಸಿದ್ದ ಬ್ಯಾಂಡ್ ಸ್ಪ್ಯಾಂಡ್ ನಲ್ಲಿದ್ದೆ. ಆರಿಸಿದ ನೂರು ಧ್ವನಿಗಳು ತುಂಬುಕಂಠದಿಂದ ಹಾಡಿದ ರಾಷ್ಟ್ರೀಯ ಗೀತೆ ಕೇಳಿದೆ. ಬೆಡಗು ಬಣ್ಣ ಬಾವುಟಗಳ ಮೆರವಣಿಗೆ ನೋಡಿದೆ. ಹತ್ತು ಬಗೆಯ ಸಾಮೂಹಿಕ ನೃತ್ಯಗತಿಯನ್ನು ಕಂಡೆ. ಹಿಗ್ಗು ಬುಗ್ಗೆಯಾಯಿತು.

ಅಂದು ರಾಷ್ಟ್ರಕ್ಕೆ ರಜೆ. ಮನೆ ಮರೆತು, ಕಛೇರಿ ಎಲ್ಲ ಮರೆತು ಜನ ಸುಮ್ಮಾನದಲ್ಲಿ ಓಡಿಯಾಡುವ ದಿನ. ಸೊಗಸಾದ ಊಟಮಾಡಿ, ಯುನಿವರ್ಸಿಟಿ ಥಿಯೇಟರಿಗೆ ಬಂದು ಅಲ್ಲಿದ್ದ ನಾಲ್ಕಾರು ಮಂದಿ ಗೆಳೆಯ ಗೆಳತಿಯರೊಡನೆ ಹರಟೆ ಕೊಚ್ಚುವಲ್ಲಿ ಗಂಟೆ ಸಂಜೆಯ ಐದು ಆಯಿತು. ಮತ್ತೆ ಉದ್ಯಾನ ಕರೆಯಿತು. ಕನ್ನಡಿಯಂತೆ ಹೊಳೆಯುತ್ತಿದ್ದ ರಾಜರಸ್ತೆ ಆಹ್ವಾನಿಸಿತು. ಅನುದಿನದ ಐಸ್ ಕ್ರೀಮ್ ನೆನಪು ಎಳೆದುಕೊಂಡು ಹೋಯಿತು.

ಐಸ್ ಕ್ರೀಮ್ ಕಿಯೋಸ್ಕ್ ನಲ್ಲಿದ್ದ ಮುದುಕಿ ನನ್ನನ್ನು ಕಂಡೊಡನೆ ಊರಗಲ ಮುಖ ಮಾಡಿದಳು. ಆ ರಾಜರಸ್ತೆಯಲ್ಲಿ ಆಕೆಯ ಅಂಗಡಿ, ಅದೊಂದೇ ತೆರೆದಿದ್ದುದು. ಹಾಗೆ ನೋಡಿದರೆ, ರಸ್ತೆಯಲ್ಲಿ ಬೇರೊಂದು ನರಪಿಳ್ಳೆಯ ಸುಳಿವಿಲ್ಲ. ಅಲ್ಲಿನ ಗಾಢ ಮೌನಕ್ಕೆ, ಅದೆಲ್ಲಿಯೋ ದೂರದ ನೃತ್ಯ ವಾದ್ಯಗಳ ಅತಿ ತೆಳುವಾದ ಹಿನ್ನಲೆ ! ರಸ್ತೆಗೆಲ್ಲ ಮುದುಕಿ ಒಬ್ಬಳೇ !

ನೀನೇಕೆ ರಾಷ್ಟ್ರೀಯ ಉತ್ಸವಕ್ಕೆ ಹೋಗಲಿಲ್ಲ? ನಗರವೆಲ್ಲ ಅಲ್ಲಿ ಕುಣಿದಾಡುತ್ತಿದೆ. ನೀನೊಬ್ಬಾಕೆ ಮಾತ್ರ ಏಕೆ? ಇಲ್ಲಿ? ಹೀಗೆ? ಎಂದು ಕೇಳಿದೆ-

ಯಥಾ ಪ್ರಕಾರ, ಭಾವ,ಮುದ್ರೆ,ಅಭಿನಯ, ಸನ್ನೆಗಳಲ್ಲಿ.

ಆಕೆ ಉತ್ತರಿಸಿದಳು: ನಾನೂ ಮೊಮ್ಮಕ್ಕಳೊಂದಿಗೆ ಇಡೀ ಮುಂಜಾನೆ ಅಲ್ಲಿಯೇ ಕುಣಿದಾಡಿ ಬಂದೆ ! ಬೆಳಗಿನ ಉತ್ಸವ ಮುಗಿದು, ಊಟವಾದ ಮೇಲೆಯೇ ಇಲ್ಲಿಗೆ ಬಂದದ್ದು ! ಈಗಷ್ಟೆ ಎರಡು ತಾಸಾಯಿತು

ಊರಿಗೆಲ್ಲ ರಜೆ, ನಿನಗೆ ಮಾತ್ರ ಇಲ್ಲವೆ ? ಎಂದು ಕೇಳಿದೆ.

ನನಗೂ ರಜೆಯೇ ! ವರ್ಷದ ಉತ್ಸವ ತಾನೆ ಇದು. ಆದರೂ ಬಂದೆ ! ಅಂಗಡಿ ತೆರೆದು, ನಿನಗಾಗಿ ಈ ಎರಡು ತಾಸು ಕಾಯುತ್ತಿದ್ದೆ ಎಂದಳು-  ನನಗೆ ಗಾಬರಿಯಾಯಿತು !

ನಾನು ಆಕೆಯ ರಜೆಯನ್ನು ಹಾಳುಗೆಡಿಸಿದೆನೆ? ಛೆ ಛೆ ! ನನಗೇಕೆ ಕಾಯಬೇಕಾಗಿತ್ತು ?

ಆಕೆ ಮತ್ತೊಂದು ಪ್ರಶ್ನೆಯನ್ನೇರಿಸಿ ಉತ್ತರಿಸಿದಳು- ಅದೇ ಸನ್ನೆಯ ಭಾಷೆಯಲ್ಲಿ:

ನೆನ್ನೆ ನೀನು ಬಂದಾಗ, ಹೇಳುವುದನ್ನು ಮರೆತೆ-ಇಂದು ರಾಷ್ಟ್ರೀಯ ದಿ-ನನ್ನ ಐಸ್ ಕ್ರೀಮ್ ಅಂಗಡಿಯ ಬಾಗಿಲು ತೆರೆಯುವುದಿಲ್ಲ ಎಂದು ! ಅದರಿಂದ, ಎಂದಿನಂತೆ ಆಕಸ್ಮಾತ್ ನೀನು ಇಲ್ಲಿಗೆ ಬಂದೆಯಾದರೆ, ನಾನು ಅಂಗಡಿ ತೆರೆದಿಟ್ಟುಕೊಳ್ಳದಿದ್ದರೆ ಹೇಗೆ? ನೀನೇ ಹೇಳು- ಏನುತಾನೆ ತಿಳಿದುಕೊಳ್ಳಬಹುದು ನೀನು? ಎಂದಳು.

ಆಕೆಯ ಪ್ರಶ್ನೆಗೆ ಉತ್ತರಕೊಡಲು ಸಾಧ್ಯವೆನಿಸಲಿಲ್ಲ. ಬಗೆಯನ್ನು ಭಾಷೆ ತುಂಬಿತ್ತು.

‍ಲೇಖಕರು avadhi

January 23, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This