ಬೂತಾಳಿ, ಕಡ್ಡಿಪುಡಿ, ಸಣ್ಣ..

ತಂದೇ ಇಲ್ದಾ ತಬ್ಲಿ ಮಕ್ಕಳು

ಹೆಚ್.ಆರ್. ಸುಜಾತಾ

ನಮ್ಮಮನೆ ಕೊಟ್ಟಿಗೆ ಕಸ ಹಾಕೋ ಲಕ್ಕಮ್ಮಂಗೆ ಮೂರು ಜನ ಮಕ್ಕಳು. ಬೂತಾಳಿ, ಕಡ್ಡಿಪುಡಿ, ಸಣ್ಣ.

ರಜಕ್ಕಂತ ಊರಿಗೆ ಹೋದಾಗ ನಾನು ಇವರನ್ನೇ ನೋಡ್ತಿದ್ದೆ. ಲಕ್ಕಿ ಕಸ ಹಾಕ್ಕೋವಾಗ ಗುಡ್ಸೋದು, ಮಂಕರಿನ ಎತ್ಕೊಂಡು ಹೋಗಿ ಕಸ ಸುರುದು ಬರೋದು, ಹೀಗೆ ಎಲ್ಲಾ ಕೆಲ್ಸಕ್ಕೆ ಕೈಹಾಕೊಂಡು, ಮೂರು ಮಕ್ಕಳು ದೇವಸ್ಥಾನ ಸುತ್ತೋಹಾಗೆ ಅವಳ ಸುತ್ತಾನೆ ಸುತ್ತೋರು. ಹಂಗೇಯ, ಊಟಕ್ಕೆ ಕುಂತಾಗಲು ತಣಿಗೆ ಸುತ್ತ ಕುಂತುಕೊಂಡು, ಅವರು ಊಟ ಮಾಡೋದ ನೋಡಕೆ, ಒಂದು ಚೆಂದವಾಗ್ಗಿರೋದು.

Nammuru-1ಕೋಳಿಮರಿಗಳಿಗೆ ಹ್ಯಾಟೆ ಕೆರದು ಕೆರದು ಗುಕ್ಕನ್ನು ತಳ್ಳಿ ತಳ್ಳಿ ತಿನ್ಸೋ ಹಂಗೇ ಲಕ್ಕಿನುವೆ, ಮುರುದು ಮುರುದು ಮುದ್ದೆನ, ಸಾರಲ್ಲಿ ಒಳ್ಸಿ ಒಳ್ಸಿ, ಸಣ್ಣನ್ನ ಕಡೆಗೆ ತಳ್ಳೋಳು. ಅದು ತಿನ್ಕೊಳೋದು. ಕಡ್ಡಿಪುಡಿ, ಬೂತಾಳಿ ತಾವೇ ಮುರಕೊಂಡು ಉಣ್ಣೋರು. ಆಮೇಲೆ ತಣಿಗೆಗೆ ತಂದು ಇಕ್ಕಿದ ಅನ್ನ, ಎಸರು, ಮಜ್ಜಿಗೆ ಉಂಡುಕೊಂಡು ಅವ್ವನ ಹಿಂದುಗುಟ್ಲೆ ಹೋಗವು. ಹಿತ್ಲು ದಾಟಿ ತದ್ಲು ಬಾಗಲು ಕಟ್ಟಿ ಕಣ್ಮರೆ ಆಗೋರು. ಅವರು ಹೋದತಟಿಗೆ ನಾನು ಹಿತ್ಲಲ್ಲಿ ಆಡೋ ಕೋಳಿ ಪಿಳ್ಳೆ ನೋಡ್ತಾ ಕೂರುವೆ. ನಮ್ಮ ಮನೆಗೆ ಅವರು ಸೇರಿದ್ದು ಹೆಂಗೆ? ಅವಳು ನಂಗೇ ಹೇಳಿದ್ದು.

ಈ ತಂದೇ ಇಲ್ದಾ ತಬ್ಲಿ ಮಕ್ಕಳು ಅವ್ವನ ಕುಟೆ ಬೆಳಿವಾಗಲೇ ನಮ್ಮ ನಾಡಿಗೆ ಬರ ಬಂದುಬುಡ್ತು. ಏನು ಮಾಡಾರು? ಮಾಡಿಮನೆ ಗೌಡನ ಮನೇಲೂ ಹಿಡ್ತ, ಹುಲ್ಲು ಮನೇಲೂ ಊಟಕ್ಕೇ ತತ್ವಾರ. ನನ್ನ ಅಜ್ಜಯ್ಯ ಹೇಳೋರುಂತೆ “ಹುಡ್ಲೇ, ಆ ಮಣ್ಣಹೊಲದಲ್ಲಿ ಹಲಸಿನಕಾಯಿ ಕೀಳಬೇಡಿ ಕಣ್ರೋ. ಹೊಟ್ಟೆಗೆ ಇಲ್ದವು ಕುಯ್ಕಂದು, ಬೇಯಿಸ್ಕೊಂದು ತಿಂತವೆ.” ಅಂತವ.

ಬೇಲಿ ಮೇಲಿನ ಸೊಪ್ಪು, ಗಡ್ಡಿಗಣಸು ಹುಡಕೊಂಡು, ಹೊಲಿಗೇರಿ ಹೆಂಗಸ್ರು ಮಕ್ಕಳು ಹೋಗೋರು. ಮಳಿಲ್ದೆ ನೆಲ ಅನ್ನೋದು ಬರಗೆಟ್ಟು ಕುಂತಿತ್ತು. ಗಾಳಿ ಬಂತು ಅಂದ್ರೆ ಸಾಕು, ಬಾಯಿಗೇ ಮಣ್ಣು ಹುಯ್ಯೋದು. ಅದ್ರ ಸುಳಿ ಹೊಡ್ಯಾ…. ಅಂಗೆ, ಒಂದಿನ ತಮ್ಗಳನ ಕಟ್ಕೊಂಡು ಲಕ್ಕಿ ಹಿರೆ ಹುಡುಗ ಭೂತಾಳೆ ಗೆಡ್ಡೆನ ಅಗಿತಾ ಕುಂತಿತ್ತು. ಮನಿಗೆ ತಂದು ಬೇಯಿಸ್ಕೊಂದು ತಿನ್ನಕೆ ಅಂತ.

ಗೌಡ್ರು ಕೆರೆ ಏರಿಮ್ಯಾಗೆ ಒಯ್ತಿತ್ರಂದೆ. ಭೂತಾಳೆ ಗೆಡ್ಡೆನ ಅಗಿಯೋದ ಕಂಡೋರೆ ಅಲ್ಲೇ ವಸಿಹೊತ್ತು ನಿತ್ಕಂಡ್ರಂತೆ. “ಮನೆತಕೆ ಬನ್ನಿರ್ಲಾ ಹುಡ್ಲೆ, ಕರಮರಿ ಹಿಡ್ಕೊಂಡು ಇರೋರಂತೆ. ನಮ್ಮ ಮನೆಯಾಗೆ ನಾವು ಉಣೋದ್ನೆ ಉಣೋರಂತೆ” ಅಂತವ ಹೊಟ್ಟುರ್ಕೊಂದು ಕರದ್ರಂತೆ. ನನ್ನ ಹುಡ್ಲು ಎಲ್ಡುವೆ ಅವುರ ಹಿಂದಗುಟ್ಲೆ ನಿಮ್ಮಮನೆ ತಕ್ಕೆ ಬಂದ್ವು. ನಾನುವೇ ಅವುರ್ನ ಹುಡ್ಕೊಂಡು ನಿಮ್ಮನೆಗೆ ಸಣ್ಣನ್ನ ಎತ್ಕೊಂಡು ಬಂದೋಳು ಕೊಟ್ಟಿಗೆ ಕೆಲಸ ಅವತ್ತಿಂದ ಹಿಡ್ಕೊಂಡೇ, ನಿಮ್ಮ ಮನೆ ಸೇರಕೊಂಡೆ.

ಹೀಗೆ ನಮ್ಮನೆ ಸೇರಿದ ಲಕ್ಕಿ , ಬರಾಬರಿ ಮೂವತ್ತು ವರ್ಷ ನಮ್ಮ ಮನೆ ಕೊಟ್ಟಿಗೆ ಕಸ ಹಾಕೋಂಡು, ಮನೆ ಸುತ್ತಾ ಸುಣ್ಣ ಬಣ್ಣ ಬಳುಕೊಂದು, ಅಕ್ಕಿ ರಾಗಿ ವನಿತಾಲೇ ನಮ್ಮ ಮನೆ ಒಂದು ಭಾಗ ಆಗೋದ್ಲು. ಅವ್ವನುಗೆ ಬಲಗೈಯಿ.

ಭೂತಾಳಿ ಗಡ್ಡೆನ ಅಗಿವಾಗ ನೋಡಿದ ನಮ್ಮ ಅಪ್ಪ ಮೊದಲನೆ ಹುಡುಗನಿಗೆ ಭೂತಾಳಿ ಅಂತ ಕರದ್ರು. ಈಗ್ಲೂ ಅವನ ಹೆಸರು ನನ್ನಗೆ ತಿಳಿದಿಲ್ಲ. ಅವ್ವನ ಕಂಕುಳ ಸಂದಿಲಿ ಈರಪ್ಪ, ಕಡ್ಡಿಪುಡಿ ವತ್ತರೀಸ್ಕೊಂದು ಯಾವಾಗಲೂ ಕೆನ್ನೆ ಊದಿಸ್ಕೊಂಡಿರೋದಿಕ್ಕೆ ಕಡ್ಡಿಪುಡಿ ಅಂದ್ರು. ಕೊನೇ ಮಗ ಸಣ್ಣ. ಎಚ್ಚಗಾರಿಕೆ ಅಂದ್ರೆ, ಮೂರು ಜನಾನು ಇಂಗೆ ಯಾವಾಗಲು ಅವ್ವನ ನೆಳ್ಳೆಲ್ಲೇ ಇರೋರು. ಮಕ್ಕಳು, ಮದಿವೆ, ಮನೆ, ಮೊಮಕ್ಕಳು ಅಂತ ನೆಲೆಯಾದ್ರು.

hands in linesಲಕ್ಕಿಗೆ ಕ್ಯಾನ್ಸರ್ ಆಯಿತು. ಅವ್ಳಿಗೆ ಮಕ್ಕಳು ಕೊಟ್ಟಿಗೆ ಕೆಲಸ ಬಿಡುಸುದ್ರು. ಅವಳನ್ನು ನೋಡಕೆ ಅಂತವ ಹಬ್ಬಕೆ ಬಂದಿದ್ದ ನಾವು, ಅಕ್ಕತಂಗೆರು ಅವಳ ಮನೆ ಹತ್ರಕ್ಕೆ ಓದ್ವಿ. ಅವಳ ಕವುಳೆಲ್ಲ ಬಾಯಾಗಿತ್ತು. ನೋಡಿದ್ ತಕ್ಷಣ ಜೀವ ಉಡ್ಗೋಯಿತು. ಕೆನ್ನೆಗೆ ಯಾವಾಗಲೂ ಒತ್ತರಿಸಿ ಕೊಂಡಿರ್ತಿದ್ದ ಹೋಗೆಸೊಪ್ಪಿನ ಗಂಟು ಮಾಯವಾಯಿತ್ತು. ಮರೆಮಾಡಿದ ಬಟ್ಟೆ ತೆಗುದ್ರೆ, ಅಲ್ಲಿ ಕವಳು ಅನ್ನೊ ಮೆಲು ಹೊದಿಕೆ ಇರದೆ, ನಾವು ಕಂಡಿರದ ಬೇರೇನೋ ಅನ್ಸೋದು.ನಾವೇಳಿದ್ದಕೆಲ್ಲ “ಊಕಣಿ” ಅಂತ ಹೂಂ ಕಂದ್ಲು.

ಕೊನೆಗೆ ಹೊರಟು ನಿಂತಾಗ “ನಿಮ್ಮ ಮನೆ ರೊಟ್ಟಿ ತಿನ್ಬೇಕೋ ಕಣ್ಣಿ” ಅಂದ್ಲು. ಅಂಗಂಥ ಅವರ ಮನೇಲೆ ಈಗ ಬಡತನ ಇರಲಿಲ್ಲ. ನಮ್ಮನು ನೋಡಿದ ಕರುಳ ಬಾಂಧವ್ಯ ಅಂಗೆ ಕೇಳಿತ್ತು. ಕಳಿಸಿದ್ವಿ. ಒಂದು ಸೀರೆ ಜೊತೆಗೆ. ಮಾರನೆ ದಿನ ನಾವು ತವರು ದಾಟಿ ನಮ್ಮ ನೆಲೆಗೆ ಬಂದ್ವಿ. ಅತ್ತಿಗೆ ಫೋನ್ ಮಾಡಿ ಹೇಳಿದ್ರು.

“ನಿಮ್ಮವ್ವ ರೊಟ್ಟಿ ತೊಗೊಂಡು ಹೋಗಿದ್ರು ಕಂನ್ರಿ. ಇವತ್ತು ಬೆಳಿಗ್ಗೆ ರೊಟ್ಟಿ ತಿನ್ನೋ ಒತ್ನಲ್ಲಿ. ಚೆನ್ನಾಗೆ ಮಾತಾಡಿದ್ಲಂತೆ. ರಂಗವ್ವರೆ ರಂಗವ್ವರೆ ಅನ್ಕೊಂಡು. ಈಗ ಸಾಯಂಕಾಲ 4 ಗಂಟೇಲಿ ಪ್ರಾಣ ಹೋಯತು ಅಂತ ಸಣ್ಣ ಬಂದು ಹೇಳಿಹೋದ. ನಿಮ್ಮಣ್ಣ ನಾವು ಎಲ್ಲಾ ಹೋಗಿ ಬಂದ್ವಿ. ಸಾವಿನ ದಿವಸದ್ದು ಖರ್ಚು ಕೊಟ್ಟು ಬಂದ್ವಿ. ಬ್ಯಾಡಾ ಬ್ಯಾಡಾ ಅಂದ್ವು. ನಿಮ್ಮ ಅಣ್ಣ ನಮ್ಮ ಮನೆ ಋಣ ಅಂತ ಕಯಿಗೆ ಇಟ್ಬಂದ್ರು. ನಾಳಿಕೆ ಮಣ್ಣು ಮಾಡ್ತಾರೆ ಅಂತೆ.ಅಂದ್ರು.

“ಮಕ್ಕಳೇನು ದುಡಿತರಲ್ಲ ಈಗ ಬಿಡಿ.”

“ಎಲ್ಲರು ಚೆನಗಿದಾರೆ ಕನ್ರಿ. ಅವಳ್ ಕಂಡ್ರು ಆಸೆಯಾಗಿದ್ರು. ಇನ್ನು ಭೂತಾಳಿ ಈಗ ಶಾಸ್ತ್ರ ಬೇರೆ ಹೇಳ್ತಾನೆ. ದುಡ್ಡು ಕಾಸು ಮಾಡ್ಕೊಂಡು ಚೆನಾಗಿದಾನೆ!”

“ಆಂ… ಏನ್ ಶಾಸ್ತ್ರ” ಎಂದೆ

“ಅದೇನೋ ದೇವರು ಬರುತ್ತೆ ಅಂತಾರೆ. ಕಣಗಾಲು, ಸಿಂಗಾಪುರ ಅಲ್ಲಿಂದೆಲ್ಲಾ ಬರ್ತಾರಂತೆ ಕನ್ರಿ ತಡೆ ವಡಸಕೆ.”

“ಹೌದಾ”

“ಹೂಂ,ನಮ್ಮೂರರು, ಮಕ್ಕಳಿಗೆ ಚೀಟ್ ಕಟ್ಸಾಕೆ, ಹುಟ್ಟಿದ್ ಮಕ್ಕಳ ಹೆಸ್ರು ಇಡ್ಸೋಕೆ ಒಯ್ತಾರೆ ಅಂತೀನಿ”

“ಹೌದಾ? ” ಅಂತ ಫೋನ್ ಇಟ್ಟೆ.

‍ಲೇಖಕರು admin

August 21, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This