ಬೆಂಗಳೂರು ಒಂದು ಅಡ್ರೆಸ್ ಫ್ರೂಫ್ ಕೇಳುತ್ತೆ ನವೋಮಿ…

 ಕೂಲ್ ಟಾಕ್
ನವೋಮಿ
 

ಗ್ಯಾಸ್ ಕನೆಕ್ಶನ್ ನಿಮ್ಮ ಹೆಸರಲ್ಲಿದೆಯಾ?
ಇಲ್ಲ.
ಡ್ರೈವಿಂಗ್ ಲೈಸೆನ್ಸ್?
ಇಲ್ಲ.
ವೋಟರ್ ಐಡಿ?
ಇಲ್ಲ.
ರೇಶನ್ ಕಾರ್ಡ್?
ಇಲ್ಲ
ಅಯ್ಯೋ ಹೋಗಿ ಮತ್ತೆ ..ಇಂಥ ಸ್ಥಳದಲ್ಲಿ ನೀವು ಇದ್ದೀರಿ ಎನ್ನೋದಕ್ಕೆ ಯಾವ ಪ್ರೂಫ್ ಇಲ್ಲವಲ್ಲ ಮೇಡಂ. ಆತ ನನ್ನನ್ನು ಮೇಲಿನಿಂದ ಕೆಳಗಿನವರೆಗೆ ಒಮ್ಮೆ ನೋಡಿದ. ನಾನು ಸುಮ್ಮನೆ ನಿಂತೆ.
ಅದ್ಯಾಕೋ ಇತ್ತಿತ್ತಲಾಗಿ ನಂಗೆ ಮೊಬೈಲ್ ಕಂಡರೆ ವಾಕರಿಕೆ. ಮನೆಯಲ್ಲಿ ಕಾಲಿಗೊಂದು ಕೈಗೊಂದು ವಕ್ಕರಿಸುವ ಈ ಮೊಬೈಲ್ಗಳು, ನನಗೆ ಬೇಕಾದಾಗ ಕೆಲಸ ಮಾಡುತ್ತಿಲ್ಲ. ಒಂದೋ ಚಾರ್ಜ್ ಆಗಿರಲ್ಲ ಇಲ್ಲದಿದ್ದರೆ ಸ್ವಿಚ್ ಆಪ್. ಇತ್ತಿತ್ತಲಾಗಿ ನಮ್ಮನೆ ಆಳು ೧೮ ವರ್ಷದ ಹುಡುಗಿ ಅಕ್ಕಪಕ್ಕದ ಪಡ್ಡೆಹುಡುಗರನ್ನೆಲ್ಲಾ ಹೃದಯಕ್ಕೆ ಹಚ್ಚಿಕೊಳ್ಳಲು ಮುಂದಾಗಿರುವುದು ಬೆಲೆ ಏರಿಕೆಗಿಂತಲೂ ದೊಡ್ಡ ಸಮಸ್ಯೆ ಯಾಗಿ ಕಾಡತೊಡಗಿದೆ. ಟೆರೆಸ್ ಮೇಲೆ, ಪಕ್ಕದ ಖಾಲಿ ಸೈಟ್ನಲ್ಲಿ, ಹೀಗೆ ಎಲ್ಲೆಂದರಲ್ಲಿ ಮೊಬೈಲ್ ಕೈಗಿಟ್ಟುಕೊಂಡೇ ಓಡಾಡುವ ಇವಳಿಗೆ ‘ಲೇ ಎಲ್ಲಿದ್ದೀಯೇ’ ಅಂದ್ರೆ… ‘ಮನೆಯಲ್ಲೇ ಇದ್ದೀನಲ್ಲಾ ಅಕ್ಕಾ’ ಅಂತ ಯಾಮಾರಿಸುವುದು ರೂಢಿಯಾಗಿಬಿಟ್ಟಿದೆ.
ಈ ಕಾರಣಕ್ಕಾಗಿಯೇ ಏನೋ ಇತ್ತಿತ್ತಲಾಗಿ ಪಕ್ಕದ ಮನೆ ಹಳೆ  ಫೋನ್ ಸೆಟ್ ನನಗೆ ಅಪ್ಯಾಯಮಾನವಾಗಿ ಕಾಣುತ್ತಿದೆ. ದೊಡ್ಡ ದೊಡ್ಡ ಅಂಕಿಗಳುಳ್ಳ ಈ ಟೆಲಿಫೋನ್ ನೋಡೋಕು ಎಷ್ಟೊಂದು ಚೆಂದ. ಚಾರ್ಜ್ ಮಾಡೋ ಉಸಾಬರಿ ಇಲ್ಲ. ಅಲ್ಲೆಲ್ಲೋ ಇದ್ದುಕೊಂಡು ಇಲ್ಲೇ ಇದ್ದೀನಿ ಎಂದು ಕೆಲಸದವಲೂ ನನಗೆ ಸುಳ್ಳು ಹೇಳಲು ಆಗಲ್ಲ. ಎಲ್ಲಾ ರೀತಿಯಿಂದಲೂ ಅನುಕೂಲ. ಮೊಬೈಲ್ ಬಂದ ಹೊಸತರಲ್ಲಿ ಇದ್ದ ಒಂದು  ಲ್ಯಾಂಡ್ ಲೈನ್ ಮೂಲೆಗುಂಪಾಗಿ ಹಾಳಾಗಿ ಹೋಗಿದೆ. 

ಏನೇ ಆಗಲಿ. ಇಂಥಹ ಒಂದು ಲ್ಯಾಂಡ್ ಲೈನ್ ಗೆ ಅಪ್ಲೈ ಮಾಡೋಣ ಅಂತ ಟೆಲಿಫೋನ್ ಕಚೇರಿಗೆ ಧಾವಿಸಿದ್ದೆ. ಸಾಮಾನ್ಯವಾಗಿ ಇಂಥಹ ಯಾವುದಕ್ಕೂ ಕೈಹಾಕದೇ ನಾನಾಯ್ತು ನನ್ನ ಶಾಪಿಂಗ್ ಆಯ್ತು..ಅಂಥ ಇದ್ದವಳಿಗೆ ಟೆಲಿಫೋನ್ ಕ್ಲರ್ಕ್ ಆಡಿದ ಮಾತು ನೇರ ಹೃದಯ ನಾಟಿತ್ತು. ಅವಮಾನದಿಂದ ನನ್ನ ಮುಖ ಹೇಗಾಗಿರಬಹುದು ಎಂದು ನನಗೇ ನಾನೇ ಊಹಿಸಿಕೊಂಡೆ.ಅಲ್ಲಿ ಮತ್ತೊಂದು ಕ್ಷಣ ಇರಲು ಸಾಧ್ಯವಿಲ್ಲ ಎಂದುಕೊಂಡು ಅವನ ಕಡೆ ಒಮ್ಮೆ ಕೆಂಗಣ್ಣು ಬಿಟ್ಟು ಹೊರನಡೆದೆ.
ಮೇಡಂ ಹೊರಡೋದಾ?
ಕಾರ್ ಡ್ರೈವರ್ ಮಾದೇವನ ಪ್ರಶ್ನೆ.
ಇಯಪ್ಪಂಗೆ ಯಾವಾಗ್ಲೂ ಗಡಿಬಿಡಿ.ನಾನಾದರೂ ಡ್ರೈವಿಂಗ್ ಕಲಿತ್ನಾ.ಕಳೆದ ಮೂರು ವರ್ಷದಿಂದ ನಮ್ಮ ಮನೆಯಲ್ಲಿ ಕಾರು ಕಲಿಯುವಂತೆ ಹೇಳ್ತಾನೇ ಇದ್ದಾರೆ. ನಾನು ಕಲೀಬೇಕು ತಾನೇ?…ಬರೀ ಆಲಸ್ಯ. ಕಲಿತಿದ್ರೆ ಡ್ರೈವಿಂಗ್ ಲೈಸೆನ್ಸ್ ಆದರೂ ಇರ್ತಿತ್ತು. ಈ ಕ್ಲರ್ಕ್ ಬಾಯಿಗೆ ಬಂದ ಹಾಗೆ ಇಷ್ಟೊಂದು ಮಾತಾಡೋಕೆ ಅವಕಾಶ ಆಗ್ತಿರಲಿಲಿಲ್ಲ ಅಲ್ವಾ.
ಒಂದ್ನಿಮಿಷ ಮಾದೇವ. ಸ್ವಲ್ಪ ತಡಿ ಎಂದು ಹತ್ತಿರ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡೆ.
ನಿಜ. ನವೋಮಿ ನಿನ್ನದು ಅನ್ನೋದು ಏನಿದೆ?
ಯಾಕೆ ಏನಿಲ್ಲ. ಬೀರು ತುಂಬ ಬಟ್ಟೆ, ಕಣ್ಣಿಗೆ ರಾಚುವಷ್ಟು ಒಡವೆ, ಮೇಕ್ ಅಪ್ ಕಿಟ್… ಇವು ಸಾಕಾಗಲ್ವಾ?. ಚುಚ್ಚಿತು ಒಳಮನಸ್ಸು. ಮೂರ್ನಾಲ್ಕು ಮನೆಗಳಿವೆ. ಆದರೆ ಜಾಯಿಂಟ್ ಹೆಸರಿನಲ್ಲಿವೆಯಲ್ಲ. ಸರಿ ಅದಕ್ಕೆ ಯಾರು ಹೊಣೆ. ನವೋಮಿ ಮೂರನೇ ಕ್ರಾಸ್ ನಲ್ಲಿರೋ ಮನೇನ ನಿನ್ನ ಹೆಸರಿನಲ್ಲಿ ಮಾಡೋಣ. ಸ್ವಲ್ಪ ಫ್ರೀ ಮಾಡ್ಕೊಂಡು ಸಬ್ ರಿಜಿಸ್ಟಾರ್ ಕಛೇರಿಗೆ ಬರ್ತೀಯಾ. ನೋಡ್ತೀನಿ. ಆಫೀಸ್ ನಲ್ಲಿ ತುಂಬಾ ಕೆಲಸ ಅಂತ ಅಂದು ನೀನೇ ಹೇಳಿದ್ದು ನೆನಪಿಲ್ವಾ. ತಿವಿಯಿತು ಮತ್ತೊಮ್ಮೆ ಒಳಮನಸ್ಸು. ಅಂದು ಹೋಗಲಿಲ್ಲ. ಅಂತೂ ಕಾಟಾಚಾರಕ್ಕೆ ಹೋದ ನೀನು ಇಬ್ಬರ ಹೆಸರಿನಲ್ಲಿಯೇ ಇರಲಿ. ನನ್ನ ಹೆಸರಿನಲ್ಲಿ ಮನೆ ಇಟ್ಟುಕೊಂಡು ನಾನೇನು ಮಾಡಲಿ.ವೇದಾಂತಿಯಂತೆ ಹೇಳಿ ಆಫಿಸಿಗೆ ಹೊರಟಿದ್ದು ನೆನಪಿಲ್ವಾ . ಮತ್ತೊಮ್ಮೆ ಇಕ್ಕಿತು ನನ್ನ ಮುಖಕ್ಕೆ. ಈಗ ಬೇಜಾರು ಮಾಡ್ಕೊಂಡ್ರೇನು ಪ್ರಯೋಜನ.
ಅರೆ ನಂಗೇನಕ್ಕೆ ಬೇಜಾರು. ಇಲ್ಲಿ ಯಾವುದು ಸ್ವಂತದ್ದಲ್ಲ. ಹೋಗಬೇಕಾದಾಗ ಮಣ್ಣು ಕೂಡ ತಗೊಂಡು ಹೋಗಕ್ಕಾಗಲ್ಲ. ಅದೆಲ್ಲ ಸರಿ ನವೋಮಿ. ಆದ್ರೆ ಲ್ಯಾಂಡ್ ಲೈನ್ ಬುಕ್ ಮಾಡುವಾಗ ಸ್ವಂತದ್ದು ಎನ್ನುವ  ಒಂದು ಅಡ್ರೆಸ್ ಪ್ರೂಫ್ ಆದ್ರೂ ಬೇಕೆ. ಸ್ವಗತದಲ್ಲಿ ನಿಂತು ನನ್ನ ಹಂಗಿಸುತ್ತಿರುವ ನನ್ನೊಳಗಿನ ಹತಾಶೆಯನ್ನು ಹತ್ತಿಕ್ಕುವುದು ಹೇಗೆ .
ಸುಮ್ಮನೆ ಇಲ್ಲಿಂದ ಹೊರಟು ಬಿಡು. ಕಾರ್ ಹತ್ತಿದೆ. ಮನಸ್ಸು ಒಂದೇ ಒಂದು ಒಂದೇ ಒಂದು ಅಸ್ತಿತ್ವದ ಪ್ರೂಫ್ ಅನ್ನು ಹುಡುಕುತ್ತಲೇ ಇತ್ತು. ಆದರೂ ಅವನು ಹೇಳಿದ್ದು ನನ್ನ ಇಗೋ ಅದನ್ನು ಸವಾಲಾಗಿ ಸ್ವೀಕರಿಸಲೇ ಬೇಕು ಎಂದು ಪಟ್ಟು ಹಿಡಿತು.  ಏನೋ ಒಂದು ಇದ್ದೇ ಇರುತ್ತೆ. ಬೀರು ತಡಕಾಡಿದೆ.ಅಯ್ಯೋ ಹಾಳಾದ್ದು, ಲಿಪ್ ಸ್ಟಿಕ್, ಟೋನರ್, ಸ್ಕ್ರಬ್ಬರ್, ಮಾಸ್ಕ್ ಬಿಟ್ಟರೆ ಮತ್ತೇನು ಸಿಗ್ತಾ ಇಲ್ವಲ್ಲ.
ಬೆಳಿಗ್ಗೆ ಏಳುತ್ತಲೇ ಲಿಂಬೆ ನೀರು ತರುವ ಆಳು, ನನ್ನ ಡಯಟ್ ಗೆ ತಕ್ಕಂತೆ ತಿಂಡಿ ಊಟ ರೆಡಿ ಮಾಡುವ ಅತ್ತೆ, ಯಾವ ಕಡೆ ಬೇಕೆಂದರೂ ಆಕಡೆ ಕಾರು ತಿರುಗಿಸುವ ಅವರು, ಮಾತೆತ್ತಿದ್ದರೆ ಆಫೀಸ್, ಅದು ಬಿಟ್ಟರೆ ಶಾಪಿಂಗ್, ಪಾರ್ಲರ್ ನಲ್ಲಿ  ದಿನಕಳೆಯುವ ನನಗೆ ಮುಂಜಾನೆ ಸೂರ್ಯ ಪೂರ್ವದಲ್ಲಿ ಹುಟ್ಟುತ್ತಿರುವುದು ಮರೆತುಹೋಗಿದೆ. ಕಳೆದ ೧೦ ವರ್ಷದಲ್ಲಿ ನಾನೇನಾಗಿದ್ದೇನೆ. ನನ್ನ ಸ್ವಂತಿಕೆ ಸತ್ತು ಸ್ವರ್ಗ ಸೇರ್ತಾ ಅಥ್ವಾ ತ್ರಿಶುಂಕುವಿನಂತೆ ಅಲ್ಲೇಲಾದ್ರೂ ಮೇಲೆ ಸಿಕ್ಕೊಂಡು ನರಳ್ತಾ ಇದೆಯಾ. ಈಗಲಾದರೂ ಎಚ್ಚೆತ್ತುಕೋ ನವೋಮಿ. ನನ್ನಲ್ಲಿರೋ ಆ ನವೋಮಿ ಎಂದು ಸತ್ತುಹೋಗಿರಬಹುದು. ಬೆಂಗಳೂರಿಗೆ ಬಂದ ದಿನವಾ ಅಥ್ವಾ ಅವರನ್ನು ಕಟ್ಟಿಕೊಂಡ ದಿನವಾ.
ಈ ಊರನ್ನು, ನಿನ್ನ ಜನರನ್ನು ದೂಷಿಸಿ ಪ್ರಯೋಜನ ಏನು?
ಬಲಿ ತೆಗೆದುಕೊಳ್ಳಿ ಎಂದು ತಲೆಕೊಟ್ಟು ರೆಡಿಯಾಗಿ ನಿಂತವಳು ನೀನೇ-
 
ನಾನು ಚಿಕ್ಕವಳಿದ್ದಾಗ ವಾಲಗ ಊದುತ್ತ, ಕುಣಿಯುತ್ತಾ ಒಂದಿಷ್ಟು ಜನ ದಷ್ಟಪುಷ್ಟವಾಗಿರೋ ಎಮ್ಮೆಯನ್ನು ಮೆರೆಸುತ್ತಿದ್ದುದು ನೆನಪಾಯ್ತು. ಯಾಕೆ ಅಂತ ನಮ್ಮಪ್ಪಂಗೆ ಕೇಳಿದ್ದೆ.ಅದಕ್ಕೆ ಅವರು ಹೇಳಿದ್ದು. ಮುಂದಿನ ವರ್ಷ ಅದನ್ನು ದೇವರಿಗೆ ಬಲಿಕೊಡ್ತಾರೆ. ಅದಕ್ಕೆ ಒಂದು ವರ್ಷ ಚೆನ್ನಾಗಿ ಮೇವು ಹಾಕಿ ಸಾಕ್ತಾರೆ.
ಛೇ…ಛೇ…ನನ್ನ ಪರಿಸ್ಥಿತಿ ಇಷ್ಟೊಂದು ಕೆಟ್ಟದ್ದಾಗಿಲ್ಲ ಬಿಡು. ಕ್ಲರ್ಕ್ ಗೆ ಹಿಡಿಶಾಪ ಹಾಕುತ್ತ ಹುಡುಕಿದೆ. ಒಂದೆರಡು ಪಾಲಿಸಿಗಳು ಸಿಕ್ಕವು. ಇವು ಪ್ರಯೋಜನಕ್ಕೆ ಬರಲ್ಲ. ನನ್ನ ಅಸ್ತಿತ್ವ ಇದೆ ನಾನಿನ್ನು ಬದುಕಿದ್ದೀನಿ. ಅದು ಈ ಅದ್ರೆಸ್ನಲ್ಲೇ…ಏನಾದರೂ ಸಿಕ್ಕಬಾರದೇ ಅವನ ಮುಖಕ್ಕೆ ಬಿಸಾಕಿ ಬರಬೇಕು. ನನ್ನ ಕೈಗಳು ನಡುಗುತ್ತಿದ್ದವು. ಇನ್ನುಮುಂದೆ ಸೀರಿಯಸ್ ಆಗ್ತೀನಿ. ದೇವರೇ ಇದೊಂದು ಸಾರಿ ನನ್ನ ಕಾಪಾಡು. ಅರೆ ಇಸ್ಕಿ… ಇದೇನಿದು. ಪಾಸ್ ಪೋರ್ಟ್ ..ಇದರಲ್ಲಿ ಅಡ್ರೆಸ್ ಇದೆಯಲ್ಲಾ. ಇದಕ್ಕಿಂತ ಬೇರೆ ಪ್ರೂಫ್ ಬೇಕಾ….
ಮಾದೇವ ಹೊರಡು ಎಂದಿದ್ದೇ ತಡ ಆತ ಬಿಎಸ್ಎನ್ಎಲ್ ಕಛೇರಿಗೆ ನೆಗೆದುಬಿದ್ದಿದ್ದ.
ತಗಳ್ಳಿ ಅಡ್ರೆಸ್ ಪ್ರೂಫ್..
ಆತ ನಕ್ಕು ನನ್ನನ್ನೊಮ್ಮೆ ನೋಡಿದ.
ಮೊದಲೇ ಹೇಳಬಾರದಿತ್ತಾ ಮೇಡಂ. ಆದ್ರೂ ನೀವು ಪಾಸ್ ಪೋರ್ಟ್ ಇರೋದನ್ನೇ ಮರೆತುಬಿಟ್ಟಿದ್ರಿ ಬಿಡಿ.
ಮತ್ತೆ ಚುಚ್ಚಿದ. ಇನ್ನು ಮಾತನಾಡಿ ಪ್ರಯೋಜನ ಇಲ್ಲ. ಟೆಲಿಫೋನ್ ಬುಕ್ ಆಗಿತ್ತು.
ಹೊರ ಬಂದು ಅದೇ ಬೆಂಚಿನ ಮೇಲೆ ಕೂತೆ.
ಬೆಂಗಳೂರು ಎಲ್ಲರನ್ನು ಬರಮಾಡಿಕೊಳ್ಳುತ್ತೆ ನಿಜ. ಆದರೆ ಎಲ್ಲದಕ್ಕೂ ಒಂದು ಅಡ್ರೆಸ್ ಫ್ರೂಫ್ ಕೇಳುತ್ತೆ ನವೋಮಿ. ನಿನ್ನದು ಎನ್ನೋದು ಎಲ್ಲ ಇದೆ. ನಿಜ. ಆದರೆ ನಿನ್ನ ಅಸ್ತಿತ್ವವನ್ನು ಎತ್ತಿ ತೋರಿಸುವಂಥದ್ದೇನಾದರೂ ಇದ್ರೆ ಹೇಳು ನವೋಮಿ. ಸಾರಿ ಸಾರಿ ಹೇಳಿತು. ಮನಸ್ಸು..
ಮಾದೇವ ಮನೆಗೆ ಹೋಗು ನಾನು ಮತ್ತೆ ಬರ್ತೀನಿ ಎಂದೆ.
ಯಾಕೆ ಮೇಡಂ. ಗಾಬರಿಯಾದ
ಹೋಗಪ್ಪಾ….
ಕಾರ್ ಡ್ರೈವಿಂಗ್ ಕಲಿಬೇಕು. ರೇಷನ್ ಕಾರ್ಡು ಮಾಡಿಸ್ಬೇಕು..ಹಿಂಗೆ ಏನೇನೋ ಹುಳಗಳು ತಲೆ ಹೊಕ್ಕತೊಡಗಿವೆ. ಗ್ಯಾರಂಟಿ ಇಲ್ಲದ ನಾಳೆಗೆ ಸಜ್ಜಾಗುತ್ತಿದ್ದೇನೆ. ಯಾಕೋ ನಂಗೆ ಇದು ಸರಿ ಹೋಗುತ್ತಿಲ್ವಲ್ಲ….

‍ಲೇಖಕರು avadhi

June 10, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

4 ಪ್ರತಿಕ್ರಿಯೆಗಳು

 1. malathi S

  Bravo navomi!!! Well done. :-)and all the very best to you. for all your future ad’ventures’.

  ಪ್ರತಿಕ್ರಿಯೆ
 2. subramani

  ಬೇಜಾರು ಮಡ್ಕೊಬೇಡ ನವೋಮಿ.ಜಗತ್ತಿನಲ್ಲಿ ಯಾವುದಕ್ಕೂ ಅಸ್ತಿತ್ವ ಇಲ್ಲ.
  ಅಸ್ತಿತ್ವಕ್ಕಾಗಿ ಬರೀ ಹೋರಾಟ ಅಷ್ಟೆ.
  ಸುಬ್ರಮಣಿ

  ಪ್ರತಿಕ್ರಿಯೆ
 3. vasudha

  navomi
  nimma barakke salam
  ide samasye nanagoo kaaduttittu. sadaa dugudagolluttidde. aadare eega intaha samasyeyannoo ishtu niraalavaagi bareyabahudu endu nimminda gottayitu. thanks -vasudha bhupati

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: