ಬೆಳಕಿನ ಬಣ್ಣ ಹಿಡಿದಿಡುವ ವಿಭಿನ್ನ ಪ್ರಯತ್ನ

bookreview

ನಿರ್ದೇಶಕರಿಗೆ ಸವಾಲುಗಳನ್ನೊಡ್ಡುವ ಅಪರೂಪದ ನಾಟಕ

ಜಿ.ಎನ್. ರಂಗನಾಥ ರಾವ್

ಸಂಡೇ ಇಂಡಿಯನ್

ಬುದ್ಧ ನಮ್ಮ ಸಾಹಿತ್ಯದ ತವನಿಧಿ ಇದ್ದಂತೆ. ಬುದ್ಧನ ಬೋಧೆಗಳು ಅಪ್ಪಟ ಮನುಷ್ಯ ಕೇಂದ್ರಿತವಾದ್ದರಿಂದ ಇದು ಸಹಜವಾಗಿಯೇ ನಮ್ಮ ಕವಿ, ಕಲಾವಿದರಿಗೆ ಆಕರ್ಷಣೀಯವಾಗಿ ಕಂಡಿರಲಿಕ್ಕೆ ಸಾಕು. ನಮ್ಮ ಸಾಹಿತ್ಯದ ಎಲ್ಲಾ ಕಾಲಘಟ್ಟಗಳ ಸಂವೇದನೆಗಳನ್ನು ಬುದ್ಧ ಹಿಡಿದು ಅಲ್ಲಾಡಿಸಿರುವುದನ್ನು ಕಾಣುತ್ತೇವೆ. ಗೋವಿಂದ ಪೈ, ಶಿವರಾಮ ಕಾರಂತ, ಕುವೆಂಪು, ಮಾಸ್ತಿಯವರು ಬುದ್ಧನ ವ್ಯಕ್ತಿತ್ವ, ಅವನ ಬೋಧೆ ಮತ್ತು ಅವನ ಸುತ್ತಮುತ್ತಲ ಪ್ರಪಂಚವನ್ನು ಚಿತ್ರಿಸುವ ಅನೇಕ ಸೃಜನಶೀಲ ಕೃತಿಗಳನ್ನು ರಚಿಸಿದ್ದಾರೆ. ಇವುಗಳ ಪೈಕಿ ಮಾಸ್ತಿಯವರ ಸ್ತ್ರೀ ಕೇಂದ್ರಿತ ನಾಟಕ ‘ಯಶೋಧರಾ’. ಇದು ಯಶೋಧರೆಯ ದರ್ಶನದ ಮೂಲಕ ಬುದ್ಧನನ್ನು ಅಳೆಯುವ ಒಂದು ಕೃತಿಯಾಗಿ, ಲೌಕಿಕ-ಆಧ್ಯಾತ್ಮಿಕಗಳಲ್ಲಿ ಸ್ತ್ರೀಯ ಸ್ಥಾನಮಾನವನ್ನು ನಿಕಷಕ್ಕೊಡುವ ಜಿಜ್ಞಾಸೆಯಿಂದಾಗಿ ಹೆಚ್ಚು ಗಮನ ಸೆಳೆಯುತ್ತದೆ. ಮಾಸ್ತಿಯವರು ‘ಯಶೋಧರಾ’ ಬರೆದದ್ದು 1933ರಲ್ಲಿ. ಈಗ ಇಪ್ಪತ್ತೊಂದನೆಯ ಶತಮಾನದ ಸಂವೇದನೆಯ ಪ್ರತೀಕವೆಂಬಂತೆ ಕಾಣುವ ಯಶೋಧರೆ ಕೇಂದ್ರಿತ ಇನ್ನೊಂದು ನಾಟಕ ‘ಯಶೋಧರೆ ಮಲಗಿರಲಿಲ್ಲ’ ಪ್ರಕಟವಾಗಿದೆ. ಎಂ.ಎಸ್.ಮೂರ್ತಿ ಈ ನಾಟಕದ ಕರ್ತೃ. ಎಂ.ಎಸ್.ಮೂರ್ತಿ ಮೂಲತಃ ವರ್ಣಚಿತ್ರ ಕಲಾವಿದರು, ಶಿಲ್ಪಕಲೆಯೂ ಅವರಿಗೆ ಕರಗತವಾಗಿದೆ. ಈಚಿನ ದಿನಗಳಲ್ಲಿ ಮೂರ್ತಿಯವರು ಸಾಹಿತ್ಯ ರಚನೆಯಲ್ಲೂ ತೊಡಗಿದ್ದಾರೆ. ಅವರ ಮೊದಲ ಕೃತಿ ‘ದೇಸಿ ನಗು’- ಪ್ರಬಂಧ ಸಂಕಲನ. ‘ಯಶೋಧರೆ ಮಲಗಿರಲಿಲ್ಲ’ ನಾಟಕ, ಎರಡನೆಯ ಕೃತಿ.

‘ಯಶೋಧರೆ ಮಲಗಿರಲಿಲ್ಲ’ ಒಂದು ಕಿರುನಾಟಕ. ಹೆಚ್ಚು ದೃಶ್ಯ ವೈಭವವಿಲ್ಲ, ಹೆಚ್ಚು ಪಾತ್ರಗಳಿಲ್ಲ, ಹೆಚ್ಚು ಮಾತಿಲ್ಲ. ಕಲಾವಿದನೊಬ್ಬನ ಸಂಯಮ ಮತ್ತು ಪರಿಕಲ್ಪನೆ ಇಲ್ಲಿ ಎದ್ದುಕಾಣುವ ಗುಣ. ನಾಲ್ಕು ದೃಶ್ಯಗಳ, ನಾಲ್ಕು ಪಾತ್ರಗಳ ಈ ನಾಟಕದ ಕೇಂದ್ರ: ಯಶೋಧರಾ. ಸಿದ್ಧಾರ್ಥನ ಪತ್ನಿ, ರಾಹುಲನ ತಾಯಿ ‘ಯಶೋಧರಾ’ಳ ವ್ಯಕ್ತಿತ್ವ ಇಲ್ಲಿ ಸಂಪೂರ್ಣವಾಗಿ ವಿಕಸನಗೊಳ್ಳುವುದು ಸಿದ್ಧಾರ್ಥನ ಜ್ಞಾನೋದಯಕ್ಕೆ ಮೊದಲ ಮೆಟ್ಟಿಲಾಗಿ. “ಸಮುದಾಯದ ಎಲ್ಲರನ್ನೂ ನಿಷ್ಕಾರಣ ಪ್ರೀತಿಯಿಂದ ಸಂತೈಸುತ್ತಿರುವ…” ಮಹಿಳೆಯರನ್ನು ಒಂದು ಪಾತ್ರದಲ್ಲಿ ಹಿಡಿದಿರಿಸಿ ಒಂದು ಅರ್ಥಕ್ಕೆ ಸೀಮಿತಗೊಳಿಸಲಾಗದು ಎಂದು ನಂಬಿರುವ ಮೂರ್ತಿಯವರ ಪರಿಕಲ್ಪನೆಯ ಯಶೋಧರೆ ಈ ನಾಟಕದಲ್ಲಿ ಲೌಕಿಕವಾಗಿ ಅವಳಿಗೆ ಆರೋಪಿಸಲಾದ ಹೆಂಡತಿ-ತಾಯಿಯ ಪಾತ್ರಗಳನ್ನೂ ಮೀರಿ ಬೆಳೆಯುವ ವಿಶ್ವಮಾತೆ, ಅವಳು ಸೃಷ್ಟಿ. ಈ ಪಾತ್ರದಲ್ಲೆ ಯಶೋಧರೆ ತನ್ನ ಹೊಣೆಗಾರಿಕೆಯನ್ನೂ ಬದುಕಿನ ಸಾರ್ಥಕತೆಯನ್ನೂ ಕಂಡುಕೊಳ್ಳುತ್ತಾಳೆ. ಹೆಣ್ಣನ್ನು ಶೋಷಣೆ, ವಿಮೋಚನೆಗಳ ನೆಲೆಗಳಿಂದ ನೋಡುವ ಪಯಣದಲ್ಲಿ ಸಾಕಷ್ಟು ಏಳುಬೀಳುಗಳ ಪಯಣವನ್ನು ಹಾದು ಬಂದಿರುವ ಹಿನ್ನೆಲೆಯಲ್ಲಿ ಹೆಣ್ಣನ್ನು “ತಾಯಿಯ ಅಂತಃಕರಣದ ಪ್ರಶಾಂತ ಬೆಳಕಾಗಿ” ಬೆಳಕು ತೋರುವ ಪಾತ್ರದ ಪರಿಕಲ್ಪನೆ ಹೊಸ ಶತಮಾನದ ಸಂವೇದನೆಯ ಇಂಗಿತವಾಗಿ ತೋರುತ್ತದೆ. ಜಾಗತೀಕರಣದ ಸಂದರ್ಭದಲ್ಲಿ ಇದು ಇಂದಿನ ಅಗತ್ಯವಾಗಿ ತೋರುವ ಹೊಸ ಸಂವೇದನೆಯಾದರೂ ಹೆಣ್ಣು ಮೊದಲಿಗೆ ತಾಯಿ ಎಂಬುವುದು ನಮಗೆ ಆರ್ಶೇಯವಾದದ್ದೇ. ತನಗೆ ಧರ್ಮ-ಆಧ್ಯಾತ್ಮಗಳಲ್ಲೂ ಸ್ಥಾನಬೇಕೆಂದು ಕೇಳುವ ಮಾಸ್ತಿಯವರ ‘ಯಶೋಧರಾ’ ಆ ಕಾಲದ ಸಂವೇದನೆಗೆ ಆಧುನಿಕವೇ. ಅಲ್ಲಿ ಯಶೋಧರೆ ಲೌಕಿಕ-ಅಲೌಕಿಕಗಳೆರಡರಲ್ಲೂ ಸಮಪಾಲು ಪಡೆದು ಬಾಳಿನಲ್ಲಿ ಸ್ಥಾನವೊಂದನ್ನು ಕಂಡುಕೊಂಡು ಸಮಾಧಾನ ಪಡೆಯುತ್ತಾಳೆ. ಇದು ಫಲಿಸುವುದು ಯಶೋಧರೆಯ ಒಳತೋಟಿ, ಸೆಳೆತ, ಘರ್ಷಣೆ, ಬುದ್ಧನ ತರ್ಕ ಸರಣಿಗಳ ನಂತರ. ಮೂರ್ತಿಯವರ ಕಿರುನಾಟಕಕ್ಕೆ ಹಿಂದಿರುವ ಪರಂಪರೆಯೊಂದನ್ನು ತೋರಿಸಿ ಅದಕ್ಕಿಂತ ಹೇಗೆ ಭಿನ್ನ ಎಂಬುವುದನ್ನು ಕಂಡುಕೊಳ್ಳುವುದಕ್ಕಷ್ಟೇ ಈ ಹೋಲಿಕೆ. ಮೂರ್ತಿಯವರ ಕಿರುನಾಟಕದ ಹೆಸರೇ ಎಚ್ಚರದ ಸ್ಥಿತಿಯ ಸೂಚನೆಯಂತಿದ್ದು ಇಲ್ಲೂ ಮಾನಸಿಕ ತೊಳಲಾಟ, ಸಂಘರ್ಷಣೆಗಳಿವೆ. ಆದರೆ ಈ ಕುದಿತಗಳು ಪಾಕವಾಗುವ ಪರಿಯೇ ಬೇರೆ.

ಸಿದ್ಧಾರ್ಥನಿಂದ ಅಗಲುವ ನೋವು, ರಾಹುಲನ ಮೋಹ ಇತ್ಯಾದಿಗಳು ಮೂರ್ತಿಯವರ ‘ಯಶೋಧರೆ’ಯನ್ನು ಘಾಸಿಗೊಳಿಸುವುದಾದರೂ ಸುಶುಪ್ತಿಯಲ್ಲಿ ಎಲ್ಲೋ ಅವಳಿಗೆ ತನ್ನ ಸ್ಥಾನದ ಅರಿವಿದೆ. ಸಿದ್ಧಾರ್ಥನಿಲ್ಲದ ಬದುಕು ಇನ್ಯಾಕೆ? ಎನ್ನುವ ಪ್ರಾರಂಭಿಕ ತುಯ್ದಾಟಗಳ ನಂತರ ಸಿದ್ದಾರ್ಥನನ್ನು ನೇರವಾಗಿ ದಿಟ್ಟಿಸಿದಾಗ ಅವನ ಕಣ್ಣುಗಳಲ್ಲಿ ಕಂಡ ಬೆಳಕಲ್ಲಿ ಅವಳಿಗೆ ತನ್ನ ಸ್ಥಾನ ಸಷ್ಟವಾಗಿ ಪ್ರಕಟವಾಗುತ್ತದೆ. ಜನರನ್ನು ದುಃಖ ದಾರಿದ್ರ್ಯಗಳಿಂದ, ಆಸೆ ಮೋಹಗಳಿಂದ ಬಿಡುಗಡೆಗೊಳಿಸಲು ಸಿದ್ಧಾರ್ಥನನ್ನು ಬುದ್ಧನನ್ನಾಗಿಸುವ ತನ್ನ ಕರ್ತವ್ಯಪ್ರಜ್ಞೆಯ ಬೆಳಕಿನಲ್ಲಿ ಅವಳಿಗೆ ತನ್ನ ಸ್ಥಾನ ಏನೆಂಬುದು ಖಚಿತವಾಗುತ್ತದೆ. ಇಲ್ಲಿ ಅವಳು ಸಮಪಾಲು ಬೇಡುವುದಕ್ಕೂ ಮೊದಲು ಐಹಿಕ ಜಗತ್ತನ್ನು ಆಸೆ-ಮೋಹಗಳಿಂದ ಮೇಲಕ್ಕೆತ್ತುವ ಬೆಳಕಿನ ತಾಯಿ. “ನನ್ನೊಳಗಿನ ಯಶೋಧರೆ ನನ್ನ ಅಬ್ಬೆಯೇ” ಈ ಪರಿಣಾಮವನ್ನು ಮೂರ್ತಿಯವರು, ಸಿದ್ಧಾರ್ಥ ಕೊನೆಯದಾಗಿ ಅರಮನೆಯ ಶಯ್ಯಾಗಾರಕ್ಕೆ ಬಂದಾಗ, ಯಶೋಧರೆಯ ವ್ಯಕ್ತಿತ್ವದ ಎರಡು ಭಿನ್ನಾಂಶಗಳಂತೆ, ಎದ್ದಿರುವ-ನಿದ್ರಿಸುತ್ತಿರುವ ಎರಡು ಪಾತ್ರಗಳನ್ನು ಅಕ್ಕಪಕ್ಕ ಇರಿಸಿ ತೋರಿಸುವುದರ ಮೂಲಕ ಸಾಧಿಸುತ್ತಾರೆ. ಮಲಗಿದ ಯಶೋಧರಾ ಸಿದ್ಧಾರ್ಥನ ಪುತ್ರ ವ್ಯಾಮೋಹಕ್ಕೆ, ಯಥಾಸ್ಥಿತಿಗೆ ಸಾಕ್ಷಿಯಾದರೆ ಮಲಗಿರದ ಯಶೋಧರಾ ಪಲ್ಲಟಕ್ಕೆ, ಬಿಡುಗಡೆಗೆ, ಹೊಸ ಬೆಳಕಿನ ಮಾರ್ಗಕ್ಕೆ ಸೃಜನಶಕ್ತಿಯಾಗಿ ಪ್ರಕಟಗೊಳ್ಳುತ್ತಾಳೆ. ಇದು ಮೂರ್ತಿಯವರ ಸ್ತ್ರೀಸ್ಥಾನದ ಪರಿಕಲ್ಪನೆ. ತಾಯಿಯ ಪರಿಕಲ್ಪನೆ ಯಶೋಧರಾ ಮುಂದೆ ತಾಳುವ ನಿಲುವುಗಳಲ್ಲಿ, ಅಂದರೆ; ಸಿದ್ಧಾರ್ಥ ಬುದ್ಧನಾದ ನಂತರ ಕಿಸಾಗೋತಮಿಗೆ ಸೃಷ್ಟಿಯ ಸತ್ಯದರ್ಶನ ಮಾಡಿಸುವ ತಂತ್ರವನ್ನು ಅರ್ಥೈಸುವುದರಲ್ಲಿ, ಬುದ್ಧ ನಗರ ಪ್ರವೇಶಿಸಿದಾಗ ಅವನ ಆತಿಥ್ಯಕ್ಕೆ ರಾಹುಲನನ್ನು ಅಣಿಗೊಳಿಸುವುದರಲ್ಲಿ, “ಬುದ್ಧದೇವ ನಮ್ಮೊಳಗಿನ ಬೆಳಕಾಗಿಯೇ ಇದ್ದಾರೆ” ಎಂದು ಸಖಿಯನ್ನು ಸಾಂತ್ವನಗೊಳಿಸುವುದರಲ್ಲಿ ಪರಿಪುಷ್ಟಗೊಳ್ಳುತ್ತದೆ.

ಬೆಳಕಿಗೆ ಬಣ್ಣವುಂಟೇ? ಅದು ಬೆಳಕು. ಬೆಳಕಿನ ಹಲವಾರು ಛಾಯೆಗಳನ್ನು ಕೆಲವು ಪಾತ್ರಗಳ ‘ಬಣ್ಣ’ಗಳಲ್ಲಿ, ಕೆಲವೇ ಮಾತುಗಳಲ್ಲಿ ಪೈಂಟಿಸಿ ರಂಗಭೂಮಿಯ ಕ್ಯಾನ್ವಾಸಿಗೆ ತಂದಿರುವ ಮೂರ್ತಿಯವರ ಪ್ರಯತ್ನ, ಸಾಹಿತ್ಯ ವಿಮರ್ಶೆಗೆ ಹಲವಾರು ಅತೃಪ್ತಿಗಳನ್ನು ಮೂಡಿಸುವಂತೆಯೇ ನಿರ್ದೇಶಕರಿಗೆ ಸವಾಲುಗಳನ್ನೊಡ್ಡುವ ಕೃತಿಯಾಗಿ ಗಮನಾರ್ಹ.

‍ಲೇಖಕರು avadhi

September 25, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್ ಪ್ರಿಯ ಎಚ್ಚೆಸ್ವಿ,ನಿಮ್ಮ 'ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ...

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಆತ್ಮೀಯ ಸ್ನೇಹಿತರೇ, ನಾನು ಬರೆದಿರುವ ಸುದ್ದಿ ಬರಹ ಮತ್ತು ವರದಿಗಾರಿಕೆ ಎಂಬ ಪಸ್ತಕ ಈಗ ಬಿಡುಗಡೆಗೆ ಸಿದ್ದವಾಗಿದೆ....

ಪುಟ್ಟಾರಿ ಆನೆಯೊಂದಿಗೆ…

ಪುಟ್ಟಾರಿ ಆನೆಯೊಂದಿಗೆ…

ತಮ್ಮಣ್ಣಬೀಗಾರ ಪುಟ್ಟಾರಿ ಆನೆ ಪುಟ್ ಪುಟ್’ ಮಕ್ಕಳಿಗಾಗಿ ಕಾದಂಬರಿ. ಲೇಖಕರು: ಡಾ.ಆನಂದ ಪಾಟೀಲ ಮೊದಲ ಮುದ್ರಣ: 2020 ಪುಟಗಳು: 388 ಬೆಲೆ:...

3 ಪ್ರತಿಕ್ರಿಯೆಗಳು

 1. Asha S.

  The book has been reviewed very objectively
  and nicely presented. The review is
  encouraging for any reader to pick up the book
  to read. Good effort.

  ಪ್ರತಿಕ್ರಿಯೆ
 2. HVV

  ’ಯಶೋಧರೆ ಮಲಗಿರಲಿಲ್ಲ’ ಈ ಕೃತಿಯನ್ನು 2004ರ ವೇಳೆಯಲ್ಲೇ ನ್ಯಾಶನಲ್ ಕಾಲೇಜು ಬಸವನಗುಡಿ ಪ್ರಯೋಗಕ್ಕೆ ಅಳವಡಿಸಿತ್ತು. ಬೆಂಗಳೂರು ವಿಶ್ವವಿದ್ಯಾಲಯದ ’ಯೂಥ್ ಫೆಸ್ಟಿವಲ್’ ನಾಟಕ ಸ್ಪರ್ಧೆಯಲ್ಲಿ ಇದರ ಪ್ರಯೋಗಕ್ಕೆ ಪ್ರಥಮ ಬಹುಮಾನದ ಪುರಸ್ಕಾರ ದೊರೆತಿದೆ. ನ್ಯಾಶನಲ್ ಕಾಲೇಜಿನಲ್ಲೇ ನಡೆದ ಅಂತರ್ವರ್ಗೀಯ ಕನ್ನಡ ನಾಟಕ ಸ್ಪರ್ಧೆಯಲ್ಲಿ ಈ ನಾಟಕಪ್ರದರ್ಶನಕ್ಕೆ ಸರ್ವೋತ್ತಮ ನಾಟಕ ಪ್ರಯೋಗ ಪುರಸ್ಕಾರ ದೊರೆತಿದೆ. ಈ ಸಂಗತಿಯನ್ನು ಎಲ್ಲರೊಡನೆ ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತದೆ.
  ಡಾ.ಹೆಚ್.ವಿ.ವೇಣುಗೋಪಾಲ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: