ಬೆಳಗುವ ಸೂರ್ಯನ ಜೊತೆಗೆ ಪಯಣ

-ಜರ್ಮನಿಯಿಂದ ಬಿ ಎ ವಿವೇಕ ರೈ

ಜರ್ಮನಿಯಲ್ಲಿ ನಿಜವಾದ ಚಳಿಗಾಲ ಈ ಬಾರಿ ಬಹಳ ತಡವಾಗಿ ಈಗತಾನೇ ಆರಂಭವಾಗಿದೆ.ಕಳೆದ ಎರಡು ಚಳಿಗಾಲಗಳನ್ನು ಹಿಮಗಾಲಗಳನ್ನಾಗಿ ವ್ಯೂರ್ತ್ಸ್ ಬುರ್ಗ್ ನಲ್ಲಿ ಕಳೆದ ನನಗೆ ಎಲ್ಲೋ ಎರಡು ದಿನ ಮುಖ ತೋರಿಸಿ ಕಾಣದಂತೆ ಮಾಯವಾದ ಹಿಮದ ಆಸೆ ಹಿಮದಂತೆಯೇ ಕರಗಿ ಹೋಗಿದೆ.ಹಿಮದಲ್ಲಿ ಮುಳುಗಿ ‘ವೈಟ್ ಕ್ರಿಸ್ಮಸ್ ‘ ಆಚರಿಸುತ್ತಿದ್ದವರಿಗೆ ಆ ಸಂಭ್ರಮ ಈ ವರ್ಷ ಇರಲಿಲ್ಲ.ಕೇವಲ ಸೊನ್ನೆಯಿಂದ ಎಂಟು ಹತ್ತು ಡಿಗ್ರಿಯ ನಡುವೆ ತೊನೆದಾಡುತ್ತಿದ್ದ ಹವಾಮಾನ ಈ ವಾರ ಸರ್ರನೆ ಕೆಳಕ್ಕೆ ಜಾರುತ್ತಾ ,ನಿನ್ನೆ – ಬುಧವಾರ ಫೆಬ್ರವರಿ ಒಂದರಂದು ಮೈನಸ್ ಹತ್ತು ಡಿಗ್ರಿ ಗೆ ಇಳಿದಾಗ ಇಲ್ಲಿನ ಅನೇಕರಿಗೆ ಕೊನೆಗೂ ಸಮಾಧಾನವಾಯಿತು- ಕೊನೆಗೂ ಎರಡು ತಿಂಗಳು ತಡವಾಗಿಯಾದರೂ ನಿಜವಾದ ಚಳಿಗಾಲ ಬಂತಲ್ಲಾ ಎಂದು.ಚಳಿಗಾಲಕ್ಕಾಗಿ ಅವರು ಕೊಂಡುಕೊಂಡಿದ್ದ ,ಅಡಿಯಿಂದ ಮುಡಿಯವರೆಗಿನ ಸಮಸ್ತ ವೇಷಭೂಷಣಗಳನ್ನು ಧರಿಸಲು ಕೊನೆಗೂ ಒಂದು ಸದವಕಾಶ ದೊರೆಯಿತಲ್ಲಾ ಎನ್ನುವ ಸಂತೃಪ್ತಿ ಇಲ್ಲಿನವರಿಗೆ. ನಾನು ನಿನ್ನೆ ಬೆಳಗ್ಗೆ ಎದ್ದು ಸೂರ್ಯನು ಎಂದಿನಂತೆ ತಡವಾಗಿ ಏಳುವವರೆಗೆ ಕಾದು, ನನ್ನ ಅತಿಥಿ ಗೃಹದ ಒಂಬತ್ತನೆಯ ಮಹಡಿಯ ಕಿಟಿಕಿಯಿಂದ ಹೊರಗೆ ನೋಡಿದರೆ ಆಶ್ಚರ್ಯ -ಪ್ರಜ್ವಲವಾಗಿ ಫಳಫಳನೆ ಹೊಳೆಯುವ ಸೂರ್ಯ.ಮತ್ತೊಮ್ಮೆ ಇಂಟರ್ನೆಟ್ ನಲ್ಲಿ ಇಲ್ಲಿನ ಸದ್ಯದ ಹವಾಮಾನ ನೋಡಿದರೆ ಮೈನಸ್ ಹತ್ತು ಡಿಗ್ರಿ ತೋರಿಸುತ್ತಿದೆ.ಯಾರನ್ನು ನಂಬುವುದು ಎನ್ನುವ ಗೊಂದಲ ನನಗೆ.ನಮ್ಮ ಊರಲ್ಲಿ ಹೀಗೆ ಸೂರ್ಯ ಉರಿಯುತ್ತಿದ್ದರೆ ಮೂವತ್ತು ಡಿಗ್ರಿ ಎಂದು ಯಾವುದೇ ಬೇರೆ ಪ್ರಮಾಣವಿಲ್ಲದೆ ಹೇಳುತ್ತಿದ್ದೆ.ಆದರೆ ಇಲ್ಲಿ , ಯುರೋಪಿನಲ್ಲಿ ಎಲ್ಲೇ ಆದರೂ ಹವಾಮಾನದ ಬಗ್ಗೆ ಏನನ್ನೂ ಖಚಿತವಾಗಿ ಹೇಳುವಂತಿಲ್ಲ. ‘ಯೂರೋಪಿನ ಹವಾಮಾನವನ್ನು ಮತ್ತು ಭಾರತದ ರಾಜಕೀಯವನ್ನು ಹೀಗೆಯೇ ಆಗುತ್ತದೆ ಎಂದು ಭವಿಷ್ಯ ಹೇಳುವ ಹಾಗಿಲ್ಲ’ ಎನ್ನುವ ಹೇಳಿಕೆ /ಜೋಕ್ ಕೇಳಿದ್ದೆ.ಅವು ಎರಡೂ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತವೆ ಎನ್ನುವುದು ಈಗ ನಾವು ಕಾಣುತ್ತಿರುವ ,ಅನುಭವಿಸುತ್ತಿರುವ ಸತ್ಯಸ್ಯ ಸತ್ಯ. ನಿನ್ನೆ ದಿನ ಬೆಳಗ್ಗೆ ಎಂಟೂವರೆಗೆ ವಿಶ್ವವಿದ್ಯಾನಿಲಯಕ್ಕೆ ಹೋಗುವ ಮೊದಲು ನನ್ನ ವಾಸದ ಒಂಬತ್ತನೆಯ ಮಹಡಿಯ ಕಿಟಿಕಿಯಿಂದ ಬೆಳಗುವ ಸೂರ್ಯನ ಕೆಲವು ಚಿತ್ರಗಳನ್ನು ಸೆರೆಹಿಡಿದೆ.ಅಂತಹ ಒಂದು ಚಿತ್ರ ಮೇಲಿನ ಚಿತ್ರಸರಣಿಯಲ್ಲಿ ಮೊದಲನೆಯದು.ಮತ್ತೆ ಉಳಿದ ಎಲ್ಲ ಹದಿನೇಳು ಫೋಟೋಗಳು ನಿನ್ನೆ ಸಂಜೆ ನಾಲ್ಕರಿಂದ ಐದೂವರೆಯ ನಡುವೆ ಮಾಯಿನ್ ನದಿಯ ಸುತ್ತಮುತ್ತ ತೆಗೆದವು.ಮೊದಲನೆಯ ಸಾಲಿನ ಎರಡು ಮತ್ತು ಮೂರನೆಯ ಚಿತ್ರಗಳು ಆಗಲುತ್ತಿರುವ ಸೂರ್ಯನ ಬಿಂಬಗಳು.ಎರಡನೆಯ ಸಾಲಿನ ಮೂರು ಚಿತ್ರಗಳು ಸೂರ್ಯ ನಿರ್ಗಮನದ ಮರುಕ್ಷಣದವು. ಮಾಯಿನ್ ನದಿಯ ಭೋರ್ಗರೆತದ ಒಂದು ದೃಶ್ಯ ಕೂಡಾ ಇದೆ.ಮೂರನೆಯ ಸಾಲಿನ ಮೂರು ಚಿತ್ರಗಳು -ಮಾಯಿನ್ ನದಿಯ ನಡುವೆ ಇರುವ ಕಲ್ಲಿನ ದಂಡೆಯಲ್ಲಿ ಜುಳುಜುಳು ನೀರಿನ ನಡುವೆ ವಲಸೆ ಬಂದು ಕುಳಿತುಕೊಳ್ಳುವ ಹಕ್ಕಿಗಳ ಸಂಭ್ರಮದ್ದು. ಅವುಗಳಿಗೆ ಚಳಿಯ ಗೊಡವೆ ಇದ್ದಂತಿಲ್ಲ.ನಾಲ್ಕನೆಯ ಸಾಲಿನ ಮೂರು ಚಿತ್ರಗಳು- ಮಾಯಿನ್ ನದಿಯ ಇನ್ನೊಂದು ದಂಡೆಯಲ್ಲಿ ಇನ್ನೊಂದು ಗುಂಪಿನ ಹಕ್ಕಿಗಳ ಹಾರಾಟ ಮತ್ತು ತೇಲಾಟ.ಆದರೆ ಈ ಗುಂಪಿಗೆ ಸೇರದ ಮತ್ತೊಂದು ಜಾತಿಯ ಹಕ್ಕಿ ತನ್ನ ಪಾಡಿಗೆ ,ಚಳಿ ಗಿಳಿಗಳ ಹಂಗು ಇಲ್ಲದೆ ಕೊರೆವ ತಣ್ಣನೆಯ ನೀರಿನ ಸುಖವನ್ನು ಅನುಭವಿಸುತ್ತಿರುವ ಚಿತ್ರ ಆ ಸಾಲಿನ ಕೊನೆಯದು.ಐದನೆಯ ಸಾಲಿನ ಮೂರು ಚಿತ್ರಗಳು- ಅರ್ಧಚಂದ್ರನ ಶುಭ್ರ ನೋಟ.ನನಗೆ ಅನಿರೀಕ್ಷಿತವಾಗಿ ಕಂಡ ದೃಶ್ಯ ಅದು.ಸೂರ್ಯ ಕಣ್ಮರೆಯಾಗುತ್ತಿದ್ದಂತೆಯೇ ಅತಿ ಶುಭ್ರ ಆಕಾಶದಲ್ಲಿ ಕಾಣಿಸಿಕೊಂಡ ಬಾಲಚಂದ್ರನನ್ನು ಏಕಾಂಗಿಯಾಗಿ ಮತ್ತು ಮರದ ರೆಂಬೆ ಕೊಂಬೆಗಳ ಬಲೆಯ ಒಳಗೆ ಹಿಡಿದಿಟ್ಟ ಚಿತ್ರಗಳು ನನಗೆ ಹೆಚ್ಚು ತೃಪ್ತಿ ಕೊಟ್ಟವು.ಕೊನೆಯ ಸಾಲಿನ ಮೂರು ಫೋಟೋಗಳು ಸುಮಾರು ಐದೂವರೆ ಗಂಟೆಗೆ ನಮ್ಮಲ್ಲಿ ಕತ್ತಲು ಆವರಿಸುತ್ತಿದ್ದಂತೆ ,ಸೂರ್ಯ ಪಯಣದ ಮಂಗಳ ಗೀತದ ದಾಖಲೆಗಳು. ಮೈನಸ್ ಹತ್ತು ಡಿಗ್ರಿಯ ಹವೆ ಇಲ್ಲಿ ವಿಶೇಷವಾದುದು ಏನೂ ಅಲ್ಲ.ಇವತ್ತು ಮೈನಸ್ ಹದಿನಾಲ್ಕು ಎಂದು ಮುನ್ಸೂಚನೆ ಇದೆ.ಈ ವಾರ ಅದು ಮೈನಸ್ ಇಪ್ಪತ್ತವರೆಗೆ ಹೋಗಬಹುದು.ಆದರೆ ನನಗೆ ಸಮಸ್ಯೆ ಇರುವುದು ಚಳಿಯಲ್ಲಿ ಮಾಯಿನ್ ನದಿಯ ದಂಡೆಯಲ್ಲಿ ಓಡಾಡುವುದರ ಬಗ್ಗೆ ಅಲ್ಲ, ನನ್ನ ಕಷ್ಟವೆಂದರೆ ನನ್ನ ಕ್ಯಾಮರಾವನ್ನು ಹೊರತೆಗೆದು ಕೆಲವು ನಿಮಿಷಗಳವರೆಗೆ ಹೊರ ಚಳಿಗೆ ತೆರೆದುಕೊಳ್ಳುವುದರ ಬಗ್ಗೆ.ಹಿಮ ಮೈ ಮೇಲೆ ಸುರಿಯುತ್ತಿರುವಾಗಲೂ ನಾನು ಸಾಕಷ್ಟು ಫೋಟೋ ಇಲ್ಲಿ ತೆಗೆದಿದ್ದೇನೆ.ಆದರೆ ಆಗ ಉಷ್ಣತೆ ಸೊನ್ನೆಯ ಸುತ್ತಮುತ್ತ ಇರುತ್ತದೆ.ಒಂದು ಬಾರಿ ಮೈನಸ್ ಕೆಳಕ್ಕೆ ಇಳಿದರೆ ಅಲ್ಲಿ ಮತ್ತೆ ಹಿಮ ಇರುವುದಿಲ್ಲ.ಆದರೆ ಈಗಿನ ಇಂತಹ ‘ಪಾತಾಳಚಳಿ’ಯಲ್ಲಿ ಕೈಯ ಗ್ಲೌಸ್ ಗಳನ್ನೂ ಕಳಚದೆ ಕ್ಯಾಮರಾವನ್ನು ಸರಿಯಾಗಿ ಹಿಡಿದುಕೊಂಡು, ನಿಟ್ಟಿಸಿ ಕ್ಲಿಕ್ ಮಾಡಲು ಆಗುವುದಿಲ್ಲ.ತೆಳ್ಳನೆಯ ಗ್ಲೌಸ್ ಹಾಕಿಕೊಂಡರೆ ಚಳಿ ತಡೆಯಲು ಸಾಕಾಗುವುದಿಲ್ಲ.ದಪ್ಪನೆಯ ಗ್ಲೌಸ್ ಹಾಕಿಕೊಂಡರೆ ಅದನ್ನು ಕಳಚಿ ,ಕ್ಯಾಮರಾ ತೆಗೆದು ತೆರೆದು ಕಣ್ಣಾಡಿಸಿ ಕ್ಲಿಕ್ ಮಾಡುವ ಹೊತ್ತಿಗೆ ಬೆರಳುಗಳು ಮರಗಟ್ಟಿ ಹೋಗಿರುತ್ತವೆ.’ಅಗ್ನಿದಿವ್ಯ ‘ಎನ್ನುವ ಪದವನ್ನು ಸಾಕಷ್ಟು ಕೇಳಿದ್ದೆ ಮತ್ತು ಬಳಸಿದ್ದೆ.ಆದರೆ ಇದು ‘ಶೈತ್ಯದಿವ್ಯ’. ಇದು ಇಲ್ಲಿ ಒಂದೊಂದು ಕ್ಷಣದ ಪರೀಷಹ. ಹಾಗಾಗಿ ಇಲ್ಲಿನ ಈ ಚಿತ್ರಗಳ ಬಗೆಗೆ ನನಗೆ ಹೆಚ್ಚು ಪ್ರೀತಿ.ಜೊತೆಗೆ ಇಷ್ಟು ದೇದೀಪ್ಯಮಾನ ಸೂರ್ಯ ಮತ್ತೆ ಈ ಚಳಿಗಾಲದಲ್ಲಿ ಇಡೀ ದಿನ ಕಾಣಿಸಿಕೊಳ್ಳುವ ಕಾಲಜ್ಞಾನವನ್ನು ಯಾರೂ ಹೇಳಲಾರರು. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ. [gallery orderby="ID"]]]>

‍ಲೇಖಕರು G

February 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜರ್ಮನಿಯಲ್ಲಿ ಹೀಗೊಂದು ಕನ್ನಡ ಶಿಬಿರ

ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ಪ್ರೊ ಬಿ ಎ ವಿವೇಕ ರೈ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ...

ತುಳು ’ಸಿರಿ’ಯನ್ನು ದಾಖಲಿಸಿದ ಪ್ರೊ .ಲೌರಿ ಹಾಂಕೊ – ಪ್ರೊ ಬಿ ಎ ವಿವೇಕ ರೈ

ಪ್ರೊ ಬಿ ಎ ವಿವೇಕ್ ರೈ ಪ್ರೊ .ಲೌರಿ ಹಾಂಕೊ (1932 -2002 ) ಫಿನ್ ಲೆಂಡ್ ದೇಶದ ತುರ್ಕು ವಿಶ್ವವಿದ್ಯಾಲಯದಲ್ಲಿ ಜಾನಪದ ವಿಜ್ಞಾನ ಮತ್ತು...

2 ಪ್ರತಿಕ್ರಿಯೆಗಳು

  1. sujathathekkamoole

    sir, gouravapurvaka namaskaaragalu…
    taavu mangalurige banda mele mattomme tamma blog barahagalannu oduttiddene…jarmaniya koreva chaliya ‘shaitya divyada’ sundara chitragalannu tamma kanninalli kemeraada mulaka sere hidididdiri… tammolagiruva kalaatmaka manassige dhanyavaadagalu..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: