ಬೇಂದ್ರೆ ಎಂಬ ‘ಜೋಗಿ’

ಬೇಂದ್ರೆ ಸದಾ ಕಾಡುವ ಒಂದು ಹಾಡು. ಬೇಂದ್ರೆ ಓದಿದಷ್ಟೂ ಅರ್ಥ ಬಿಚ್ಚಿಡುತ್ತಾ ಹೋಗುವ ಕವಿ. ಒಂದೊಂದು ಬಾರಿಯೂ ಒಂದೊಂದು ಅರ್ಥ. ಬೇಂದ್ರೆ ಕವಿತೆ ನಮ್ಮ ತೆಕ್ಕೆಗೆ ಸಿಕ್ಕಿದೆ ಎಂದರೆ ನಮ್ಮನ್ನು ನಾವೇ ಮೊಸಗೊಳಿಸಲು ಸಜ್ಜಾಗಿದ್ದೇವೆ ಎಂದು ಅರ್ಥ. ಇಂತಹ ಕಾರಣಕ್ಕಾಗಿಯೇ ಬೇಂದ್ರೆ ಕವಿತೆಗಳನ್ನು ಹಲವು ದಿಕ್ಕಿನಿಂದ ಕಡೆಯುವ ಪ್ರಯತ್ನ ನಡೆಯುತ್ತಿದೆ. ‘ಸಲ್ಲಾಪ’ ಅಂತಹ ವಿಭಿನ್ನ ಪ್ರಯತ್ನಗಳಲ್ಲಿ ಒಂದು. ಧಾರವಾಡದ ಸುನಾಥ್ ಬೇಂದ್ರೆ ಕವನಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಷ್ಟೇ ಅಲ್ಲ ಆ ಕವಿತೆಗಳ ಆಳಕ್ಕಿಳಿದು ನೋಡುವ ಪ್ರಯತ್ನ ಮಾಡಿದ್ದಾರೆ. ಪಟ್ಟಾಂಗ ಬ್ಲಾಗ್ ನ ಜಗಲಿ ಭಾಗವತರಿಂದಾಗಿ ಕುತೂಹಲದಿಂದ ಸಲ್ಲಾಪಕ್ಕೆ ಭೇಟಿ ಕೊಟ್ಟು ಮೂಕರಾಗಿದ್ದೇವೆ. ಒಬ್ಬ ಕವಿಗಾಗಿ, ಒಬ್ಬ ಕವಿಯ ಕವನಗಳ ಅರ್ಥ ಗ್ರಹಿಸುವುದಕ್ಕಾಗಿ ಇರುವ ಗಂಭೀರ ಬ್ಲಾಗ್ ಇದು. ಎಲ್ಲರೂ ಭೇಟಿ ಕೊಡಲೇಬೇಕಾದ ಬ್ಲಾಗ್.

ಬೇಂದ್ರೆಯವರ ಇನ್ನಿಲ್ಲದಂತೆ ಕಾಡುವ ‘ಜೋಗಿ’ ಕವನವನ್ನು ನಿಮಗಾಗಿ ನೀಡುತ್ತಾ ಇದಕ್ಕೆ ಸುನಾಥ್ ಬರೆದಿರುವ ವಿಮರ್ಶೆಗಾಗಿ ಅವರ ಬ್ಲಾಗ್ ಗೆ ಭೇಟಿ ನೀಡಿ ಎಂದು ಆಹ್ವಾನಿಸುತ್ತಿದ್ದೇವೆ.

ಊರ ತುದಿಯ ಆ ಮೂರ ಬಟ್ಟೆ ಮುಗಿದಲ್ಲಿ ಕೊಳ್ಳವೆಲ್ಲಿ
ಹಳ್ಳ ಅಲ್ಲಿ ಹರಿದಲ್ಲಿ, ತುಡುಗು-ದನ ತೊಂಡು ಮೇಯುವಲ್ಲಿ
ದಿಕ್ಕು ತಪ್ಪತಾರ ತಪ್ಪಿ ಹೊಕ್ಕರs ಕಕ್ಕಾವಿಕ್ಕಿಯಾಗಿ
ಇರುಳು ಅಂತನs ಹಗಲs ಗೂಗತಾವ ಅಲ್ಲಿ ಜೋಡಗೂಗಿ.

ಅದನ ದಾಟಿ ಆ ಮಸಣವಾಟಿ, ಎಡಕಾಗಿ ಅದರ ಆಚಿ
ಕಾಮ ತನ್ನ ಹಚ್ಚಂಗಿ ಹಾಸಿಧಾಂಗೆಲ್ಲಿ ನೀರ ಪಾಚಿ
ಹೊಚ್ಚಿ ಹೊಂಡವನು ಮೆಚ್ಚ ಮಾಡತಾವೊ ಕಂಡ ಕಣ್ಣುಗಳಿಗೆ.
ಪಾಚಿ ಸರಿಸಿದಾಗ ಕಪ್ಪು ನೀರು ಕರಿತಾವ ಒಳಗ ಬಳಿಗೆ.

ಅದರ ಮುಂದ ಗವಿಗುಡ್ಡ ಅಡ್ಡ ಬರತsದ ನಮ್ಮ ಬಲಕ
ಅತ್ತತ್ತ ಹರುಹಿ ಹತ್ತೊತ್ತಿ ಬಂದ ಕಾಳಮ್ಮಗಿರುವ ಹೊಲಕ
ಆ ಹೊಲದ ನಟ್ಟ ನಡುವಿರುವ ಹುಣಸಿಮರ ಏರಿ ನೋಡಿದಾಗ
ಹತ್ತ ಗಿಡದ ಗುಂಪೊಂದು ಕಾಣತದ ಸಣ್ಣ ಏರಿ ಮ್ಯಾಗ.

ಅಲ್ಲಿ ತೊಗಲಬಾವಲೀ ಚೀರತಾವ ಭರತಿ ಹಗಲಿನೊಳಗ
ಹಿಂಡು ಪಾರಿವಾಳ ಹೊಕ್ಕ ಹೊರಡತಾವ ಮತ್ತ ಒಳಗ ಹೊರಗ
ಅಲ್ಲಿ ಹಬ್ಬಿ ಹರುಹ್ಯsದ ಬೇವಿಗೇ ಸುತ್ತ ಅಮೃತಬಳ್ಳಿ
ಹಾಲ ಸುರವತಾವ ಆಲ ಅಲ್ಲಿ ಅಲ್ಲಾಡತಾವ ಅಳ್ಳಿ.

ಅತ್ತಿ ಗಿಡಕ ಹತ್ಯಾವ ಹಲಸಿನ್ಹಂಗ ಬುಡುಕು ಕೆಂಪು ಹಣ್ಣು
ಜೇನು ತುಂಬಿ ತೊಟಗುಟ್ಟತಾವ ಅದ ಬಯಸತಾವ ಕಣ್ಣು
ಈ ತೋಪಿನ್ಯಾಗ ಬೆಳೆದsದ ಹ್ಯಾಂಗೋ ಮೂಲ್ಯಾಗ ತಪ್ಪಿ ಮಾವು
ಅದರಡಿಗೆ ಹುತ್ತ ಅದರಾಗ ಐತೆ ಒಂದೇಳ ಹೆಡೆಯ ಹಾವು.

ಆ ಮಾವಿನೊಳಗ ಈ ಸುಗ್ಗಿಯೊಳಗ ಬಂದsದ ಕೋಗಿಲೊಂದು
ತನ್ನ ಜೋಡಿ ಕರೆಧಾಂಗ ಕರಿತsದ ನನ್ನ ಬಾರs ಅಂದು
ಕೂಗೇ ಕೂಗತದ ಕೂಗೇ ಕೂಗತsದ ಗಿರಣಿ ಕರೆಯೊ ಹಾಂಗ
ತೆರಪು ಇಲ್ಲ ಒಂದಳತಿ ಕೂಗತsದ ಬ್ಯಾಸರಿಲ್ಲಧಾಂಗ.

ತಿಳಿಯದಾವದೋ ಕಂಪು ಎಳೀತsದ ತುಂಬಿ ಹುಚ್ಚು ಆಗಿ
ಎಚ್ಚರಿಲ್ಲದs ಎತ್ತೊ ತಿರಗತಾವ ದಿಕ್ಕು ತೋರದಾಗಿ
ಬಂತು ಸುಗ್ಗಿ ಬಂದsದ ಸುಗ್ಗಿ ಬರತsದ ಸುಗ್ಗಿ ಎಂದು
ಕುಹೂ ಅನ್ನತದ ಕುಹೂ ಅನ್ನತದ ಕುಹುಕ್ಕುಹೂ ಅಂದು.

ತಾರ ಪಂಚಮದಾಗ ಕೋಗಿಲಾ ಕೂಗತsದೊ ಜೋಗಿ
ಯಾವ ಬಣ್ಣ ಅದಕಾವ ಕಣ್ಣು ನಾ ನೋಡಲೇನು ಹೋಗಿ?
ತೋಟವೆಲ್ಲ ಹೂವಾಗಿ ನಿಂತು ತೊಂಗೆಲ್ಲ ಗೊಂಚಲಾಗಿ
ಪಾಡು ಆಗತಾವ, ಹಣ್ಣು ಆಗತಾವ ಅದರ ಲಯಕೆ ತೂಗಿ.

ಮುಂಜಾವತೊಟ್ಟು ಇರು ಹಂಗು ಬಿಟ್ಟು ಬರಿ ಹಾಂಗ ತೂಗತsದೋ
ತಲಿ ಕಾವಿನೊಳಗ ಇಮ್ಮಾವಿನೊಳಗ ಬಿಸಿಗಾಲ ನೂಗತsದೋ
ಕೊಳಲ ನುಡಿಸಿಧಾಂಗ ಕುಹೂಹುಹೂಹೂ ಉಲಿತsದೊ ಜೋಗಿ
ಬೇರೆ ಕೆಲಸದಾಗ ಮನಸು ತೊಡಗದೊ ನೋಡಲೇನು ಹೋಗಿ?

ಬಂದೆ ಜೋಗಿ ಬಾ, ಬಾರೊ ಜೋಗಿ ಬಾ, ಏನು ಹೊತ್ತು ಬಂದಿ
ನೀನೆ ಹೇಳಿದಾ ನಾಮ ಜಪಿಸುವಾಗ ಬಂತೊ ಸುಗ್ಗಿ ಸಂಧಿ.
ತಲೆಯ ಯಾವುದೊ ನಾಡಿಯೊಳಗ ಸುರುವಾತು ಸುಗ್ಗಿ ಸೊಲ್ಲು
ಮುಂದೆ ಕೇಳಿದರ ಅದs ತುಂಬಿತೋ ಮೂಲೆ ಮೂಲೆಯಲ್ಲು.

ಗುಡಿಗೆ ನಾನು ಹೊರಟಾಗ ಕರೀತದ ಕುಹುಕ್ಕುಹೂ ಎಂದು
ಮನದ ಜಪದ ನಡುನಡುವೆ ನಡೀsತsದ ಓಂ ಕುಹೂ ಎಂದು
ಕನಸಿನೊಳಗ ನಾ ಸ್ವರಾ ಕೇಳಿ ಮಾಮರಾ ಆಗತೇನೊ
ಅಂತ ಭ್ರಮಾ ಆಗ್ಯsದ ಮನಕ ನೀ ಬಂದೆ ಜೋಗಿ ಏನೋ!

ಯಾವ ಸ್ವರಾ ಇದು ಯಾವ ಕೋಗಿಲಾ ಯಾವ ಮರವೊ ಏನೋ
ಯಾಕ ಹಿಂಗ ಅಸರಂತ ಕೂಗತದ ಏನು ಇದಕೆ ಬ್ಯಾನ್ಯೊ
ಸುತ್ತು ಗುಡ್ಡ ನುಗ್ಗಾಗಿ ಹೋದವೋ ಓಗೊಟ್ಟು ಇದಕs
ಬಿಸಿಲು ಕುಣಿದು ಬೆವತsದ ಈಗ ಬಂದsದ ಮಳಿಯ ಹದಕs.

‍ಲೇಖಕರು avadhi

May 7, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳು

ಅವಳು

ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ...

ನಂಬಿಕೆ

ನಂಬಿಕೆ

ಗೀತಾ ಜಿ ಹೆಗಡೆ ಕಲ್ಮನೆ ಹಿಂದಿಂದೇ ಬರುವ ಒಂಟಿ ನೆರಳೊಂದುಕೇಳುತ್ತಿದೆ ಅವನೆಲ್ಲಿ ಬೇಗ ಹೇಳುಗುಟ್ಟೊಂದು ಅರ್ಜೆಂಟಾಗಿ ಹೇಳಬೇಕಿದೆನನಗೂ ಈಗ...

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: