ಬೇಂದ್ರೆ ಯುಗಾದಿ

-ಎಚ್. ಆನಂದರಾಮ ಶಾಸ್ತ್ರೀ
ಚಿತ್ರ: ಬಾಲು ಮಂದರ್ತಿ
ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ.
ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ, ಬೇಂದ್ರೆಯವರ ಹಳೆಯ ಕವನ ‘ಯುಗಾದಿ’ ತರುವುದು ಹೊಸ ಹರುಷ.
ಯುಗಾದಿಯೊಡನೆ ಎಪ್ಪತ್ತೆಂಟು ವಸಂತಗಳ ಅವಿನಾಭಾವ ಸಂಬಂಧ ಹೊಂದಿದೆ ದ.ರಾ. ಬೇಂದ್ರೆಯವರ ಕವನ ‘ಯುಗಾದಿ’.
ಯುಗಾದಿಗೆ ‘ಯುಗಾದಿ’ಯೇ ಸಾಟಿ; ‘ಯುಗಾದಿ’ಗೆ ಯುಗಾದಿಯೇ ಸಾಟಿ.
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಎಂದು ಹರ್ಷಘೋಷದೊಂದಿಗೆ ಆರಂಭವಾಗುತ್ತದೆ ‘ಯುಗಾದಿ’ ಕವಿತೆ. ಯುಗಗಳು ಕಳೆದರೂ ಮರಳಿ ಬರುತ್ತಲೇ ಇರುವ ಯುಗಾದಿಯು ಪ್ರತಿ ವರ್ಷವೂ ಹೊಸ ವರ್ಷಕ್ಕಾಗಿ ಹೊಸೆದು ಹೊಸೆದು ತರುವ ಹೊಸತು ಹೊಸತಾದ ಹರ್ಷವನ್ನು ಕವಿಯಿಲ್ಲಿ ಸಾರುವಾಗ ಕವಿಯಲ್ಲದ ಕೇವಲ ಭವಿಯ ಮನಸ್ಸೂ ಹರ್ಷದಿಂದ ಹೊಂಗತೊಡಗುತ್ತದೆ.
ಹೊಂಗೆಹೂವ ತೊಂಗಲಲ್ಲಿ
ಭೃಂಗದ ಸಂಗೀತಕೇಲಿ
ಮತ್ತೆ ಕೇಳಬರುತಿದೆ.
ಬೇವಿನ ಕಹಿಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ
ಎಂಬ ಸಾಲುಗಳು ವಸಂತದಾಗಮನ, ತತ್ಫಲವಾಗಿ ಹೊಂಗೆಮರದ (ತಮಾಲವೃಕ್ಷದ) ಕುಚ್ಚಿನಲ್ಲಿ ಪ್ರತಿ ವರ್ಷದಂತೆ ಈ ಸಲವೂ ಕೇಳಿಬರುವ ಭೃಂಗದ ಸಂಗೀತಕೇಳಿ ಅಥರ್ಾತ್ ಮರದಲ್ಲಿ ಭ್ರಮರದ ನಾದವಿನೋದ (ಗುಂಗಿಯ ಗುಂಗಾಟದ ಮಾಟ), ಮಾನವಜೀವಿಯ ಬೇವಿನಂಥ ಕಹಿಬಾಳಿನಲ್ಲಿ ವಸಂತದ ಚಿಗುರುಹೂವಿನ ನಸುಸುಗಂಧ ತರುವ ಆಹ್ಲಾದ ಮತ್ತು ಅದರಿಂದಾಗಿ ಮನುಷ್ಯಜೀವಿಯಲ್ಲಿ ಮತ್ತೆ ಚಿಗುರುವ ಜೀವಕಳೆ ಇವುಗಳ ಉರವಣಿಯೆಬ್ಬಿಸಿ ಓದುಗನ ಮನದಲ್ಲಿ ಸಂಭ್ರಮದ ಮೆರವಣಿಗೆ ಮಾಡುತ್ತವೆ.
ಕಮ್ಮನೆ ಬಾಣಕ್ಕೆ ಸೋತು
ಜುಮ್ಮೆನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ
ಎಂದು ಬೇಂದ್ರೆಯವರು ವೃಕ್ಷದ ಜೀವಸೆಲೆಯನ್ನೂ ಪಕ್ಷಿಯ ಜೀವನೆಲೆಯನ್ನೂ ವಸಂತದ ಕೊಂಡಿಯಿಂದ ಬೆಸೆದು ಕಾವ್ಯರಸಿಕನ ಕಣ್ಣೆದುರಿಡುತ್ತಾರೆ. ಪರಿಸರದ ಸುಗಂಧಮಯ ವಾತಾವರಣಕ್ಕೆ ಮನಸೋತೋ ಎಂಬಂತೆ ಹೂಬಿಟ್ಟ ಮಾವಿನ ಮರವು ಹಣ್ಣನ್ನು ಹುಟ್ಟಿಸುವ ಕಾಮನೆಯಲ್ಲಿದ್ದಾಗ ‘ಸುಗ್ಗಿ ಸುಗ್ಗಿ’ ಎಂದು ಹಿಗ್ಗಿ ನುಗ್ಗಿಬರುವ ಫಲಾಕಾಂಕ್ಷಿ ಗಿಳಿಗಳ ಸಾಲುಗಳು ಗಗನದಲ್ಲೂ ಮರದಮೇಲೂ ಪೋಣಿಸಿದ ತೋರಣಗಳಂತೆ ತೋರುವುದನ್ನು ನೋಡಲು ಓಹ್, ಎಷ್ಟು ಚಂದ!
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?
ಇಲ್ಲಿ ಕವಿ ಅಂಬಿಕಾತನಯದತ್ತರ ಒಳಗಣ್ಣು ತೆರೆಯುತ್ತದೆ. ರವಿ ಕಾಣದ್ದನ್ನಿಲ್ಲಿ ಕವಿ ಕಾಣುತ್ತಾನೆ. ಕವಿಯ ಒಳಗಣ್ಣಿನ ಕಾಣ್ಕೆಯು ಕವಿತೆಯನ್ನು ಹೊಸ ಮಜಲು ತಲುಪಿಸುತ್ತದೆ. ಅದು ಹೀಗೆ.
ಗಿಡ-ಮರ, ಪ್ರಾಣಿ-ಪಕ್ಷಿ ಈ ಎಲ್ಲ ಜೀವಸಂಕುಲಕ್ಕೂ ಪ್ರತಿ ವರ್ಷವೂ ಹೊಸ ಜನ್ಮ(ದ ಅನುಭವ). ಬೋಳಾದ ವೃಕ್ಷ ಪ್ರತಿ ವಸಂತದಲ್ಲು ಚಿಗುರಿ ಹೂಬಿಡುತ್ತದೆ. ಗತದ ಚಿಂತೆಯಿಲ್ಲದ ಪ್ರಾಣಿ-ಪಕ್ಷಿಗಳು ಪ್ರತಿ ವಸಂತದಲ್ಲು ಸುಗ್ಗಿಯ ಹಿಗ್ಗಿನಲ್ಲಿ ಹೊಸ ಬಾಳು ಆರಂಭಿಸುತ್ತವೆ. ಆದರೆ ಮನುಷ್ಯನಿಗೆ ಮಾತ್ರ ಅದೇ ಜನ್ಮ, ಆ ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರೆಯ. ಮನುಷ್ಯರಾದ ನಮಗಷ್ಟೇ ಈ ವಂಚನೆ ಏಕೆ ಎಂಬ ಪ್ರಶ್ನೆಯನ್ನು ಒಡ್ಡುವ ಮೂಲಕ ಬೇಂದ್ರೆಯವರಿಲ್ಲಿ ಸೃಷ್ಟಿಯ ಆಂತರ್ಯವನ್ನೇ ಕೆದಕುತ್ತಾರೆ!
ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?
ನಿದ್ದೆಗೊಮ್ಮೆ ‘ನಿತ್ಯಮರಣ’ ಬಂದು, ನಿದ್ದೆಯಿಂದೆದ್ದಾಗ ನಿನ್ನೆಯ ನೆನಪಿಲ್ಲವಾಗುವಂಥ, ತತ್ಫಲವಾಗಿ ಪ್ರತಿ ಮುಂಜಾನೆಯೂ ಹೊಸ ಹುಟ್ಟಿನ ಅನುಭವ ಪಡೆವಂಥ, ಪ್ರತಿ ದಿನವೂ ಹೊಸ ಜೀವನದ ಸಂತಸ ಹೊಂದುವಂಥ ಸುಯೋಗವನ್ನು – ಪ್ರತಿ ವಸಂತದಲ್ಲು ಗಿಡ-ಮರ, ಪ್ರಾಣಿ-ಪಕ್ಷಿಗಳಿಗೆ ಕರುಣಿಸಿರುವಂತೆ – ಮಾನವರಾದ ನಮಗೇಕೆ ಕರುಣಿಸಿಲ್ಲ ಎಂದು ಕವಿಯಿಲ್ಲಿ, ಸೃಷ್ಟಿಕರ್ತ ಬ್ರಹ್ಮನ ಮಾನಸಪುತ್ರನೂ ಚಿರಂಜೀವಿಯೂ ಸದಾ ಕುಮಾರಾವಸ್ಥೆಯಲ್ಲೇ ಇರುವವನೂ ಸಕಲ ಲೋಕ ಸಂಚಾರಿಯೂ ಉತ್ತಮ ಸಾಹಸಿಯೂ ಆದ ಸನತ್ಕುಮಾರನನ್ನು ಪ್ರಶ್ನಿಸುತ್ತಾರೆ. ‘ನಿನಗೆ ಲೀಲೆ ರುಚಿಸದೋ?’ ಎಂದು ಆತನನ್ನು ಕೆಣಕುತ್ತಾರೆ ಕೂಡ.
(‘ಹೊಸ ವರುಷ
ಹೊಸತೇನು?
ಒಂದು ಅಂಕಿ.
ಅದೇ ಬದುಕು
ಅದೇ ಬೇಗೆ
ಅದೇ ಬೆಂಕಿ.’
-?-
‘ಹೊಸ ವರ್ಷ ನನಗೆ ಹೊಸತು ಎನಿಸುವುದಿಲ್ಲ.
ಏಕೆಂದರದು ಹಳೆ ನೋವನ್ನು ಮರೆಸುವುದಿಲ್ಲ.’
-?-
‘ಹೊಸ ವರ್ಷ ನನಗೆ ಏನೂ ಅಲ್ಲ.
ಕಾರಣ? ನನಗೆ ನಾನೇ ಎಲ್ಲ.’
ನನ್ನ ಕೆಲ ಕವನಗಳ ಈ ಸಾಲುಗಳಿಲ್ಲಿ ಉಲ್ಲೇಖಾರ್ಹವೆಂದುಕೊಳ್ಳುತ್ತೇನೆ.)
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!
ಎಂದು ಕವನದ ಕೊನೆಯಲ್ಲಿ ಹೇಳುವ ಮೂಲಕ ಬೇಂದ್ರೆಯವರು ಮನುಷ್ಯಜೀವನದ ಮಿತಿಯನ್ನು ಓದುಗನ ಅರಿವಿಗೆ ತರುವಲ್ಲಿ ಸಫಲರಾಗುತ್ತಾರೆ.
ಹೀಗೆ, ಯುಗಾದಿಯ ಹಿನ್ನೆಲೆಯಲ್ಲಿ ಸೃಷ್ಟಿಯ ಆಂತರ್ಯವನ್ನು ಅರಿಯಲೆತ್ನಿಸುವ ಮತ್ತು ಜೀವ-ಜೀವನದ ಸ್ವರೂಪಗಳನ್ನು ತೆರೆದಿಡುವ ‘ಯುಗಾದಿ’ ಕವಿತೆಯು ಪ್ರಾಸಬದ್ಧ-ಲಯಬದ್ಧ-ಛಂದೋಬದ್ಧವೂ ಆಗಿದ್ದು, ಪದಲಾಲಿತ್ಯ, ಗೇಯ ಗುಣ ಇವುಗಳನ್ನೂ ಹೊಂದಿ ಶೋಭಿಸುತ್ತಿರುವಾಗ ಪ್ರತಿ ಯುಗಾದಿಯಲ್ಲೂ ನಮ್ಮೆಲ್ಲರ ಮನದಲ್ಲೂ ಧ್ವನಿಸದಿದ್ದೀತೆ? ಪ್ರತಿ ವರ್ಷ ಜಗದ ಜೀವಜಾತಕೆ ನಮ್ಮ ಹೃದಯವನ್ನು ತೆರೆದು, ಸೃಷ್ಟಿನಿಯಮದ ಬಗ್ಗೆ ನಮ್ಮನ್ನು ಎಚ್ಚರಿಸಿ, ನಮ್ಮ ಮಸ್ತಿಷ್ಕಕ್ಕೆ ಅರಿವಿನ ಬೆಳಕನ್ನು ಬೀರಿ ನಮ್ಮನ್ನು ಮುದಗೊಳಿಸದಿದ್ದೀತೆ? ನಲವತ್ತೇಳು ವರ್ಷಗಳ ಹಿಂದೆಯೇ ‘ಕುಲವಧು’ ಚಲನಚಿತ್ರದ ಮೂಲಕ ಮನೆಮಾತಾದ ಈ ಹಾಡು ಪ್ರತಿ ಯುಗಾದಿಯಂದೂ ನಮ್ಮ ಮನೆಯ ರೇಡಿಯೊ, ಟಿವಿಗಳಲ್ಲಿ ಪ್ರಸಾರವಾಗದಿದ್ದೀತೆ?

‍ಲೇಖಕರು avadhi

March 16, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

 1. ಶ್ರೀವತ್ಸ ಜೋಶಿ

  ಮಾವು ತಳಿರು ನಗುತಲಿರಲು
  ಬೇವು ಚಿಗುರು ಜೊತೆಯಲಿರಲು
  ಜೀವಸಂಕುಲಕ್ಕೆ ಬಂತು ಹೊಸತು ಜೀವನ
  ಯಾವ ದೇವನಿತ್ತ ವರವು
  ಭಾವನೆಗಳನರಳಿಸಿಹುದು
  ನಾವು ಕೂಡ ಸಂಭ್ರಮಿಸುವ ಹಬ್ಬದೀ ದಿನ
  (ರಚನೆ: ಎನ್.ಲಕ್ಷ್ಮೀಶ; ಬೆಂಗಳೂರು)

  ಪ್ರತಿಕ್ರಿಯೆ
 2. ಮುರಳೀಧರ ಸಜ್ಜನ.

  ಕನ್ನಡದ ಕುಲಕ್ಕೊಬ್ಬ ದ.ರಾ.ಬೇಂದ್ರೆ
  ಕನ್ನಡಾಂಬೆಯ ವರಕವಿ ದ.ರಾ.ಬೇಂದ್ರೆ
  ಅಂಬಿಕೆಯ ದತ್ತ ರಾಮಚಂದ್ರ ಬೇಂದ್ರೆ
  ಧಾರವಾಡದ ಗಾರುಡಿಗ ಶಬ್ಧಬ್ರಹ್ಮ ಬೇಂದ್ರೆ
  ( ರಚನೆ: ಗುರೂಜಿ ಡಾ.ಶಿವ)
  ಯುಗದ ಆದಿ ಯುಗಾದಿ ವರುಷಕ್ಕೊಮ್ಮೆ ಬರಲು ಯುಗದ ಕವಿ ದ.ರಾ.ಬೇಂದ್ರೆರವರ ಹಾಡು ಸೃಷ್ಟಿಯ ಸವಿ ಸವಿಯಲು ಹುರಿದುಂಬಿಸುವುದು. ಮೈ ಪುಳಕವಾಗುವುದು.
  ….ಚೈತ್ರೋದಯ….
  ಚೈತ್ರೋದಯವಿದು
  ವಸಂತಋತುವಿಗೆ
  ಉಷಃಕಾಲವದು ಸನ್ನಿಹಿತ ||1||
  ನವಮನ್ವಂತರ ಕ್ಷಿತಿಜಕೆ
  ಮನಮನ್ವಂತರ ತರಿಸೆ
  ನವ ಉಲ್ಹಾಸದ ಕುಣಿತ ||2||
  ಬದುಕಿನ ಗೋಳಿನ ಹಗರಣವು
  ಕಾಣದೆ ಕೇಳದೇ ಓಡುತಿದೆ
  ಬಾಳಿಗೆ ಶ್ರೀಗುರು ಹೇಳುತಿದೆ ||3||
  ಹೊಸ ಜೀವನ ಹಾಡು
  ಹೊಸ ಕಥೆಯ ನೋಡು
  ಹೊಸತು ಹೊಸತು ಹೂತಿದೆ ||4||
  ವಸಂತರಾಜನು ಬರುತಿಹನು
  ಸಂತಸ ದಿನಕರ ತರುತಿಹನು
  ಸುಖಶಾಂತಿಯನು ಕರುಣಿಪನು ||5||
  ಶಾಂತಿ ಮಂತ್ರವದು ಕೇಳುವುದು
  ಕೂಡಿ ಬಾಳುವೆಯು ಸಾಗುವುದು
  ತೇಜಸ್ವಿ ಬಾಳು ಬೆಳಗುವುದು ||6||
  (ಡಾ.ಶಿವ ಅವರ “ಚೈತ್ರೋದಯ” ಕವನ ಸಂಕಲನದಿಂದ)

  ಪ್ರತಿಕ್ರಿಯೆ
 3. V.R.BHAT

  ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: